ಉತ್ತರ-ದಕ್ಷಿಣಗಳು ಎಂದಿಗೂ ವೈರಿಗಳಲ್ಲ; ಕೇಂದ್ರದ ‘ಮೋದಾನಿ’ ಯಾರಿಗೂ ಬಂಧುವಲ್ಲ!
ಭಾಗ- 1
ಕೇಂದ್ರದ ಮೋದಾನಿ ಸರಕಾರ (ಮೋದಿ+ಅದಾನಿ=ಮೋದಾನಿ) ರಾಜ್ಯಗಳ ತೆರಿಗೆ ಪಾಲನ್ನು ಕಸಿಯುತ್ತಿರುವುದನ್ನು ಮತ್ತು ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ ಮಾಡುತ್ತಿರುವ ತಾರತಮ್ಯವನ್ನು ವಿರೋಧಿಸಿ ಬುಧವಾರ ಕರ್ನಾಟಕ ಸರಕಾರ ದಿಲ್ಲಿಯಲ್ಲಿ ಪ್ರತಿಭಟಿಸಲಿದೆ. ಹಾಗೆಯೇ ನಾಡಿದ್ದು ಫೆಬ್ರವರಿ 9ನೇ ತಾರೀಕು ಕೇರಳ ಸರಕಾರವು ಕೂಡಾ ಇದೇ ಕಾರಣಗಳಿಗಾಗಿ ಕೇಂದ್ರದ ಮೋದಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಆದರೆ ಕರ್ನಾಟಕದ ಬಿಜೆಪಿ ಸಂಸದರು ಮತ್ತು ಶಾಸಕರು ಕೇಂದ್ರವು ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ಧ ಧ್ವನಿಗೂಡಿಸದೆ ಮೋದಿ ಕಾಲದಲ್ಲೇ ಕರ್ನಾಟಕಕ್ಕೆ ಅತಿ ಹೆಚ್ಚು ಸಂಪನ್ಮೂಲಗಳ ವರ್ಗಾವಣೆ ಆಗಿದೆ ಎಂದು ಸುಳ್ಳು ಅಂಕಿಅಂಶಗಳನ್ನು ನೀಡುತ್ತಾ ವಿತಂಡವಾದ ಮಾಡುತ್ತಿದ್ದಾರೆ.
ವಿಪರ್ಯಾಸವೆಂದರೆ, ಈ ಬಗ್ಗೆ ಮೊನ್ನೆ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿಯವರಿಗೆ ಕೊಟ್ಟ ಉತ್ತರದಲ್ಲಿ ಹಣಕಾಸು ಮಂತ್ರಿ ಇವೆಲ್ಲವೂ ಹಣಕಾಸು ಆಯೋಗದ ತೀರ್ಮಾನವೇ ವಿನಾ ತನ್ನದೇನೂ ಇಲ್ಲ ಎಂದು ಪರೋಕ್ಷವಾಗಿ ರಾಜ್ಯಗಳಿಗಾಗುತ್ತಿರುವ ಅನ್ಯಾಯವನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ.!
ಈಗಾಗಲೇ ಈ ಬಗ್ಗೆ ರಾಜ್ಯ ಸರಕಾರ ಮೋದಿ ಸರಕಾರ ಮಾಡುತ್ತಿರುವ ತಾರತಮ್ಯಗಳನ್ನು ವಿವರಿಸಿ ಜಾಹೀರಾತುಗಳನ್ನು ನೀಡಿದೆ. ಸಾಮಾಜಿಕ ಜಾಲತಾಣಗಳಂತೂ ಮೋದಿ ಅಧಿಕಾರಕ್ಕೆ ಬಂದ ಮೇಲೆ ಹಣಕಾಸು ವಿಕೇಂದ್ರೀಕರಣದ ಫೆಡರಲ್ ತತ್ವಕ್ಕೆ ಹೇಗೆ ಭಂಗವಾಗಿದೆ ಮತ್ತು ಹೇಗೆ ಮೋದಿ ಸರಕಾರ ಅಧಿಕ ತೆರಿಗೆ ಪಾವತಿ ಮಾಡುವ ಅಭಿವೃದ್ಧಿ ಹೊಂದಿದ ದಕ್ಷಿಣ ರಾಜ್ಯಗಳಿಂದ ಹೆಚ್ಚುವರಿ ತೆರಿಗೆಯನ್ನು ಸುಲಿದು, ಕೇಂದ್ರಕ್ಕೆ ಹೆಚ್ಚು ಕೊಡುಗೆ ನೀಡದ ಉತ್ತರ ರಾಜ್ಯಗಳಿಗೆ ವರ್ಗಾಯಿಸುತ್ತಿದೆ ಎಂಬ ವಿವರಗಳಿಂದ ತುಂಬಿಹೋಗಿದೆ. ಈ ವಾದಗಳಿಗೆ ಬಿಜೆಪಿ ತಜ್ಞರು ಒಂದೋ ಮುಖಾಮುಖಿಯಾಗುತ್ತಿಲ್ಲ ಅಥವಾ ಸುಳ್ಳುಗಳನ್ನು ಹೇಳುತ್ತಾ ಸಮರ್ಥಿಸಿಕೊಳ್ಳುತ್ತಿದ್ದಾರೆ. ಸಂಸದ ಪ್ರತಾಪ ಸಿಂಹನಂತಹವರಂತೂ ದಕ್ಷಿಣ ರಾಜ್ಯಗಳೇ ಉತ್ತರಕ್ಕೆ ಋಣಿಯಾಗಿರಬೇಕು ಎಂದು ವಾದ ಮಾಡುತ್ತಾ ತಮ್ಮ ಪರಮ ಮೋದಿ ನಿಷ್ಠೆಯನ್ನು ಪ್ರದರ್ಶಿಸುತ್ತಿದ್ದಾರೆ.
ವಾಸ್ತವವಾಗಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕ ಮತ್ತು ಇತರ ದಕ್ಷಿಣ ರಾಜ್ಯಗಳಿಗೆ ದಕ್ಕಬೇಕಿದ್ದ ತೆರಿಗೆ ಪಾಲನ್ನು ವಂಚನೆ ಮಾಡಿರುವುದು ಭಾರತ ಸರಕಾರದ ಬಜೆಟ್ ಡಾಕ್ಯುಮೆಂಟ್‌ಗಳು ಮತ್ತು ಹಣಕಾಸು ಆಯೋಗದ ಘೋಷಣೆಗಳೇ ಸ್ಪಷ್ಟವಾಗಿ ಸಾಬೀತು ಮಾಡುತ್ತವೆ.
ಆದರೆ ಈ ವಾಸ್ತವಕ್ಕೆ ಇನ್ನು ಕೆಲವು ಗಂಭೀರವಾದ ಮುಖಗಳಿವೆ:
1)ಇದು ಮೂಲಭೂತವಾಗಿ ಭಾರತದ ರಾಜ್ಯಗಳ ಫಿಸ್ಕಲ್ ಫೆಡರಲಿಸಂ- ಹಣಕಾಸು ಸ್ವಾಯತ್ತತೆಯ ವಿಷಯ. ಇದು ನೇರವಾಗಿ ಭಾರತ ಗಣರಾಜ್ಯವು ಎಷ್ಟು ಫೆಡರಲ್ ಆಗಿತ್ತು? ಮತ್ತು ಈಗ ಎಷ್ಟು ಫೆಡರಲ್ ಆಗಿ ಉಳಿದಿದೆ ಎಂಬ ಪ್ರಶ್ನೆಯನ್ನು ಎತ್ತುತ್ತದೆ. ಆ ಮೂಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕಂಡುಕೊಂಡರೆ ಮಾತ್ರ ಈ ಸಮಸ್ಯೆಗೆ ಮೂಲಭೂತ ಪರಿಹಾರ ಸಿಗುತ್ತದೆ.
ಭಾರತ ಸಂವಿಧಾನ ರೂಪುಗೊಳ್ಳುವ ಪ್ರಕ್ರಿಯೆ ಪ್ರಾರಂಭವಾದ ಸಂದರ್ಭದಲ್ಲಿ ಸಾಪೇಕ್ಷವಾಗಿ ಕೇಂದ್ರಕ್ಕಿಂತ ರಾಜ್ಯಗಳೇ ಹೆಚ್ಚು ಅಧಿಕಾರಗಳನ್ನುಳ್ಳ ಒಕ್ಕೂಟವನ್ನು ಗುರಿಯಾಗಿಟ್ಟುಕೊಳ್ಳಲಾಗಿತ್ತು. ಆದರೆ ದೇಶ ವಿಭಜನೆಯ ಹಿನ್ನೆಲೆಯಲ್ಲಿ ಬಲವಾದ ಕೇಂದ್ರ ಅಗತ್ಯವೆನ್ನುವ ಬಹುಸಂಖ್ಯಾತ ಮನಸ್ಕತೆಯ ಒತ್ತಡದಲ್ಲಿ ನಮ್ಮ ಸಂವಿಧಾನ ರಚಿತವಾಯಿತು. ಸಂವಿಧಾನ ಕೇಂದ್ರಕ್ಕೆ ರಾಜ್ಯಗಳಿಗಿಂತ ಮತ್ತು ಅಗತ್ಯಬಿದ್ದರೆ ರಾಷ್ಟ್ರೀಯ ಹಿತಾಸಕ್ತಿ ಮತ್ತು ತುರ್ತಿನ ಹೆಸರಿನಲ್ಲಿ ರಾಜ್ಯಗಳ ಸ್ವಾಯತ್ತತೆಯನ್ನು ಕಡೆಗಣಿಸುವ ಮತ್ತು ಸಂವಿಧಾನದಲ್ಲಿ ಉಲ್ಲೇಖಿತವಾಗದ ಎಲ್ಲಾ ಉಳಿಕೆ ಅಧಿಕಾರಗಳು ಕೇಂದ್ರಕ್ಕೇ ಕೊಡಮಾಡುವ ವಿಧಿಗಳನ್ನು ಹೊಂದಿದೆ. ಹೀಗಾಗಿ ಇಂದು ನಾವು ಕಾಣುತ್ತಿರುವ ಕೇಂದ್ರದ ಸರ್ವಾಧಿಕಾರ ಮತ್ತು ತಾರತಮ್ಯಗಳಿಗೆ ಬೇಕಾದ ಭೂಮಿಕೆ ಸಂವಿಧಾನದಲ್ಲೇ ಇದೆ.
2) 1991ರ ನಂತರ ಕಲ್ಯಾಣ ರಾಜ್ಯದ ಆಶಯಗಳಿಗೆ ತದ್ವಿರುದ್ಧವಾಗಿಯೂ ಮತ್ತು ಕಾರ್ಪೊರೇಟ್ ಬಂಡವಾಳಶಾಹಿಗಳ ಆಕ್ರಮಣಕಾರಿ ಲೂಟಿಗೆ ಪೂರಕವಾಗಿ ಜಾರಿಯಾದ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳು ತೆರಿಗೆ ಸಂಗ್ರಹದ ಉದ್ದೇಶ, ಹಂಚಿಕೆಯ ಮಾನದಂಡಗಳೆಲ್ಲಕ್ಕೂ ಕಾರ್ಪೊರೇಟ್ ಕರಸೇವೆ ಮಾಡಿತು. ಈ ಫೆಡರಲ್ ವಿರೋಧಿ ಕಾರ್ಪೊರೇಟೀಕರಣದ ಸೂತ್ರಧಾರಿ ಕಾಂಗ್ರೆಸ್ ಹಾಗೂ ಈ ಕಾರ್ಪೊರೇಟ್ ತಂತ್ರಕ್ಕೆ ಸಂಪೂರ್ಣ ಮದ್ದತ್ ನೀಡಿದ್ದು ಬಿಜೆಪಿ ಮತ್ತು ಇತರ ಪಕ್ಷಗಳು.
3) 1991ರ ನಂತರ ಆಕ್ರಮಣಕಾರಿ ಕಾರ್ಪೊರೇಟ್ ಬಂಡವಾಳಶಾಹಿಗಳ ಅಗತ್ಯಗಳಿಗೆ ತಕ್ಕಂತೆ ಸುಧಾರಣೆಯ ಹೆಸರಿನಲ್ಲಿ ಬಂಡವಾಳಶಾಹಿ ಪೂರಕ ಆರ್ಥಿಕ ಪುನರ್ ರಚನೆ ಹೆಚ್ಚಾದರೂ, 1991-2014ರ ನಡುವೆ ಅಧಿಕಾರದಲ್ಲಿದ್ದದ್ದು ಹಲವು ಪಕ್ಷಗಳ ಕಾಂಗ್ರೆಸ್ ನೇತೃತ್ವದ ಅಥವಾ ಬಿಜೆಪಿ ನೇತೃತ್ವದ ಮೈತ್ರಿಕೂಟಗಳ ಸರಕಾರಗಳೇ ಆಗಿದ್ದವು. ಹೀಗಾಗಿ ಆಳುವವರ್ಗದ ಈ ಪಕ್ಷಗಳು ಎಷ್ಟೇ ಬಯಸಿದ್ದರೂ ಸ್ವತಂತ್ರ ಶಾಸಕಬಲವಿಲ್ಲದೆ ಕಾರ್ಪೊರೇಟ್ ಶಕ್ತಿಗಳು ಬಯಸಿದ ಆಕ್ರಮಣಶೀಲ ತಿದ್ದುಪಡಿಗಳನ್ನು ತರಲಾಗಿರಲಿಲ್ಲ.
ಆದರೂ 1999-2004ರ ಅವಧಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ತೆರಿಗೆ ಸಂಗ್ರಹದ ವಿಚಾರದಲ್ಲಿ ಹಲವಾರು ತಿದ್ದುಪಡಿಗಳನ್ನು ತಂದಿತು. ಉದಾಹರಣೆಗೆ ರಾಜ್ಯಗಳ ಕೇಂದ್ರ ಸರಕಾರ ವಿಧಿಸುವ ಸೆಸ್ ಮತ್ತು ಸರ್ಚಾರ್ಜ್ ತೆರಿಗೆಗಳನ್ನು ರಾಜ್ಯಗಳ ಜೊತೆಗೆ ಹಂಚಿಕೊಳ್ಳುವ ಅಗತ್ಯವಿಲ್ಲವೆಂಬ 80ನೇ ಸಾಂವಿಧಾನಿಕ ತಿದ್ದುಪಡಿಯನ್ನು ಜಾರಿಗೆ ತಂದದ್ದು ಇದೇ ಅವಧಿಯಲ್ಲಿ. ಅದನ್ನು ಆಗ ಕಾಂಗ್ರೆಸ್ ಕೂಡ ಬೆಂಬಲಿಸಿತ್ತು!
ಹಾಗೆಯೇ ವಿದ್ಯುತ್ ಉತ್ಪಾದನೆ ಮತ್ತು ದರ ನಿಗದಿ ಮತ್ತು ಹಂಚಿಕೆಗಳಲ್ಲಿ ರಾಜ್ಯದ ಪಾತ್ರವನ್ನು ಮತ್ತು ಸರಕಾರದ ಪಾತ್ರವನ್ನು ಕಡಿತಗೊಳಿಸಿ, ಕೇಂದ್ರದ ಮತ್ತು ಖಾಸಗಿ ಕಾರ್ಪೊರೇಟ್‌ಗಳ ಪಾತ್ರವನ್ನು ಹೆಚ್ಚಿಸುವ ಇಂದಿನ ಮೋದಿ ಸರಕಾರದ ವಿದ್ಯುತ್ ಕಾಯ್ದೆಯ ಪ್ರಾರಂಭಿಕ ತಿದ್ದುಪಡಿಗಳನ್ನು ಮೊದಲು ಪರಿಚಯಿಸಿದ್ದು 2006ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವೇ.
ಜನಸಾಮಾನ್ಯರ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಅತ್ಯಂತ ಪ್ರತಿಗಾಮಿ ಜಿಎಸ್‌ಟಿ ವ್ಯವಸ್ಥೆಯನ್ನು ಮೊದಲು ಜಾರಿಗೆ ತರಲು ಪ್ರಯತ್ನಿಸಿದ್ದು ಕೂಡ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವೇ. ಆಗ ಬಿಜೆಪಿ ಅದನ್ನು ವಿರೋಧಿಸಿತ್ತು. ಆದರೆ 2016ರಲ್ಲಿ ಬಿಜೆಪಿ ಸರಕಾರ ಜಿಎಸ್‌ಟಿ ತಿದ್ದುಪಡಿಯ ಪ್ರಸ್ತಾಪ ಮಾಡಿದಾಗ ಕಾಂಗ್ರೆಸ್ ಇನ್ನಿತರ ವಿರೋಧ ಪಕ್ಷಗಳು ರಾಜ್ಯಗಳ ತೆರಿಗೆ ಸಂಗ್ರಹದಲ್ಲಿ ಆಗಬಹುದಾದ ಖೋತಾವನ್ನು ಐದು ವರ್ಷಗಳ ಕಾಲ ಕೇಂದ್ರ ಭರಿಸುತ್ತದೆ ಎಂಬ ಆಶ್ವಾಸನೆಯ ಮೇಲೆ ಸಂವಿಧಾನ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿದವು. ಈಗಲೂ ಕೂಡ ಜಿಎಸ್‌ಟಿ ಸಮಿತಿಯಲ್ಲಿ ಎಲ್ಲಾ ರಾಜ್ಯ ಸರಕಾರಗಳ ಹಣಕಾಸು ಮಂತ್ರಿಗಳಿರುತ್ತಾರೆ. ಆದ್ದರಿಂದಲೇ ಜಿಎಸ್‌ಟಿಯು ರಾಜ್ಯಗಳಿಗೆ ಮತ್ತು ಇಡೀ ದೇಶದ ಜನರಿಗೆ ಇಷ್ಟೆಲ್ಲಾ ಹೊರೆಯಾಗಿದ್ದರೂ ಜಿಎಸ್‌ಟಿ ಪದ್ಧತಿಯನ್ನು ರದ್ದುಗೊಳಿಸಬೇಕೆಂಬ ಆಗ್ರಹವನ್ನು ಮಾತ್ರ ಯಾವ ರಾಜ್ಯಗಳೂ, ಪಕ್ಷಗಳೂ ಮುಂದಿಡುತ್ತಿಲ್ಲ!
4) 1991ರಲ್ಲಿ ನವ ಉದಾರವಾದಿ ಆರ್ಥಿಕ ನೀತಿಗಳು ಜಾರಿಯಾದ ಮೇಲೆ ದೇಶದಲ್ಲಿ ಪ್ರಥಮ ಬಾರಿಗೆ ಸ್ವತಂತ್ರವಾಗಿ ಅಧಿಕಾರ ನಡೆಸುವಷ್ಟು ಸಂಸದ ಬಲ ಇದ್ದ ಬಿಜೆಪಿ ಪಕ್ಷ 2014ರಲ್ಲಿ ಅಧಿಕಾರಕ್ಕೆ ಬಂತು. 2019ರಲ್ಲಿ ಅದರ ಹಿಂದೂ ರಾಷ್ಟ್ರದ ಅಜೆಂಡಾಗೆ ಇನ್ನೂ ಹೆಚ್ಚಿನ ಬೆಂಬಲ ಸಿಕ್ಕಿತು. ಹೀಗಾಗಿ 1991ರಿಂದ ಮೈತ್ರಿ ಸರಕಾರದ ಒತ್ತಡಗಳಿಂದ ಜಾರಿ ಮಾಡಲಾಗದ ಎಲ್ಲಾ ಕಾರ್ಪೊರೇಟ್ ಪರವಾದ ನೀತಿಗಳನ್ನು ಕಳೆದ ಹತ್ತುವರ್ಷಗಳಲ್ಲಿ ಮೋದಿ ಸರಕಾರ ಅತ್ಯಂತ ಆಕ್ರಮಣಕರವಾಗಿ ಜಾರಿ ಮಾಡುತ್ತಿದೆ. ನೋಟು ನಿಷೇಧ, ಜಿಎಸ್‌ಟಿ ಜಾರಿ, ಕಾರ್ಪೊರೇಟ್ ತೆರಿಗೆ ಕಡಿತ, ಹಣಕಾಸು ಹಾಗೂ ರಾಜಕೀಯ ಫೆಡರಲ್ ವ್ಯವಸ್ಥೆಯನ್ನು ಒಳಗಿನಿಂದಲೇ ಟೊಳ್ಳುಗೊಳಿಸುತ್ತಾ ರಾಜಕೀಯ ಸರ್ವಾಧಿಕಾರ ಮತ್ತು ಆರ್ಥಿಕ ಹಾಗೂ ಹಣಕಾಸು ಕೇಂದ್ರೀಕರಣ ನೀತಿಗಳನ್ನು ನಿರಂತರವಾಗಿ ಜಾರಿಗೊಳಿಸುತ್ತಾ ಬಂದಿದೆ.
5) ಮೋದಿ ಸರಕಾರ ಅನುಸರಿಸುತ್ತಿರುವ ಈ ಫಿಸ್ಕಲ್ (ಹಣಕಾಸು ಸಂಪನ್ಮೂಲ) ಸರ್ವಾಧಿಕಾರ ನೀತಿಯ ಫಲಾನುಭವಿಗಳು ಉತ್ತರ ರಾಜ್ಯಗಳ ಬಡವರೂ ಅಲ್ಲ, ದಕ್ಷಿಣ ರಾಜ್ಯಗಳ ಬಡವರೂ ಅಲ್ಲ. ಅದರ ನೇರ ಫಲಾನುಭವಿಗಳು ಕಾರ್ಪೊರೇಟ್ ಉದ್ಯಮಪತಿಗಳು. ಹೀಗಾಗಿ ಇದು ಉತ್ತರದ ರಾಜ್ಯಗಳು ವರ್ಸಸ್ ದಕ್ಷಿಣ ರಾಜ್ಯಗಳು ಎಂಬ ವಿಷಯವಲ್ಲ.
ಕೇಂದ್ರದ ಹಣಕಾಸು ನಿರ್ವಹಣೆ ಮತ್ತು ಹಂಚಿಕೆಯಲ್ಲಿ ಮೇಲ್ನೋಟಕ್ಕೆ ಎದ್ದುಕಾಣುವಂತೆ ಜನಸಂಖ್ಯೆಯಲ್ಲಿ ಹೆಚ್ಚಿರುವ ಮತ್ತು ಅಭಿವೃದ್ಧಿಯಲ್ಲಿ ಹಿಂದಿರುವ ಉತ್ತರದ ರಾಜ್ಯಗಳಿಗೆ ಹೆಚ್ಚು ಸಂಪನ್ಮೂಲ ಹಂಚಿಕೆಯಾಗಿರುವುದು ನಿಜ.
ಮೇಲ್ನೋಟಕ್ಕೆ ದೇಶಾದ್ಯಂತ ಒಂದು ಸಮತೋಲನ ಅಭಿವೃದ್ಧಿಯ ಗುರಿ ಹೊಂದಿರುವ ಕಲ್ಯಾಣ ಸರಕಾರ ಹೆಚ್ಚು ಸಂಪನ್ಮೂಲ ಇರುವ ರಾಜ್ಯಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಲೇ ಕಡಿಮೆ ಅಭಿವೃದ್ಧಿ ಹೊಂದಿರುವ ಪ್ರದೇಶಗಳಿಗೆ ಸಂಪನ್ಮೂಲ ವರ್ಗಾಯಿಸುವ ತತ್ವ ತಪ್ಪೇನಲ್ಲ. ಅದು ಪ್ರಾದೇಶಿಕ ನ್ಯಾಯ. ಅದು ಸಾಮಾಜಿಕ ನ್ಯಾಯದ ಭಾಗ.
ಆದರೆ ಮೋದಿ ಸರಕಾರ ಮಾಡುತ್ತಿರುವುದು ಅದನ್ನಲ್ಲ.
ಪ್ರಾದೇಶಿಕ ನ್ಯಾಯ ಹೆಸರಿನಲ್ಲಿ ಸಂಪನ್ಮೂಲ ವರ್ಗಾವಣೆ ಮಾಡಿದರೂ ಅದು ‘ಬಂಡವಾಳ ವೆಚ್ಚ’ದ ರೂಪದಲ್ಲಿ ಕಾರ್ಪೊರೇಟ್ ಕಂಪೆನಿಗಳ ತಿಜೋರಿಯನ್ನು ಸೇರುತ್ತಿದೆಯೇ ವಿನಾ ಉತ್ತರದ ಜನತೆಯ ಅಭಿವೃದ್ಧಿಗೆ ವ್ಯಯವಾಗುತ್ತಿಲ್ಲ.
ಆದರೆ ಮೋದಿ ಸರಕಾರವು, ಈ ಹಣಕಾಸು ಸಂಪನ್ಮೂಲದ ಹಂಚಿಕೆಯಲ್ಲಿನ ತಾರತಮ್ಯದ ವಿಷಯವನ್ನು ಉತ್ತರದ ಬಡವರು ವರ್ಸಸ್ ದಕ್ಷಿಣದ ಬಡವರು ಎಂಬ ಪ್ರಶ್ನೆಯಾಗಿಸಲು ಪ್ರಯತ್ನಿಸುತ್ತಾ ಲಾಭಕೋರ ಕಾರ್ಪೊರೇಟ್ ಬಂಡವಾಳಶಾಹಿಗಳನ್ನು ರಕ್ಷಿಸುವ ಪ್ರಯತ್ನ ಪಡುತ್ತಿದೆ.
ಆದರೆ ವಾಸ್ತವದಲ್ಲಿ ನೋಡಿದರೆ ಸ್ವಾತಂತ್ರ್ಯ ಬಂದಾಗಿನಿಂದಲೂ ಹಾಗೂ ಮೋದಿಯ ಕಾಲದಲ್ಲೂ ಕೇಂದ್ರದಿಂದ ಹೆಚ್ಚುವರಿ ಬೆಂಬಲ ಪಡೆದುಕೊಳ್ಳುವ ಉತ್ತರ ಭಾರತದ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಡ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಬಹುಪಾಲು ಜನರ ಪರಿಸ್ಥಿತಿ ಎಂದಿನಂತೆ ದಾರುಣವಾಗಿದೆಯೇ ವಿನಾ ಉತ್ತಮಗೊಂಡಿಲ್ಲ. ಆದರೆ ಇದೇ ಅವಧಿಯಲ್ಲಿ ಪೊಗದಸ್ತಾಗಿ ಲಾಭ ಮಾಡಿಕೊಂಡವರು ಅಲ್ಲಿ ಖಾಸಗಿ ಸಹಭಾಗಿತ್ವ ಯೋಜನೆಗಳಲ್ಲಿದ್ದುಕೊಂಡು ಲೂಟಿ ಹೊಡೆದ ಕಾರ್ಪೊರೇಟ್ ಉದ್ದಿಮೆಪತಿಗಳು.
ಹೀಗಾಗಿ ಮೋದಿ ಸರಕಾರದ ಆಕ್ರಮಣಕಾರಿ ತೆರಿಗೆ ತಾರತಮ್ಯವನ್ನು ಉತ್ತರ ವರ್ಸಸ್ ದಕ್ಷಿಣ ಎಂದು ಅರ್ಥಮಾಡಿಕೊಂಡರೆ ಮೋದಿ ಟ್ರಾಪ್‌ಗೆ ಬಿದ್ದಂತಾಗುತ್ತದೆ.
ಇದು ಭಾರತದ ಬಡವರು ವರ್ಸಸ್ ಮೋದಾನಿ ಬಳಗದ ನಡುವಿನ ವೈರುಧ್ಯವೆಂದು ಭಾವಿಸಿದರೆ ಮಾತ್ರ ನೈಜ ಪರಿಹಾರ ಯೋಚಿಸಲು ಸಾಧ್ಯವಾಗುತ್ತದೆ.
6) ಉತ್ತರ ವರ್ಸಸ್ ದಕ್ಷಿಣ ಎಂಬ ಚಿಂತನೆ ರಾಜಕೀಯವಾಗಿ ಆತ್ಮಹತ್ಯಾತ್ಮಕವಾದ ಮತ್ತೊಂದು ವಿಶ್ಲೇಷಣೆಯೆಡೆಗೂ ದೂಡುತ್ತದೆ. ಅದರ ಬಗೆ ಎಚ್ಚರವಹಿಸದಿದ್ದರೆ ಕೇಂದ್ರದ ತಾರತಮ್ಯ ನೀತಿಯ ವಿರುದ್ಧದ ಸ್ವಾಭಿಮಾನಿ ಘೋಷಣೆಯಾಗಿ ರೂಪುಗೊಂಡಿರುವ ‘‘ನನ್ನ ತೆರಿಗೆ ನನ್ನ ಹಕ್ಕು’’ ಎಂಬ ಘೊಷಣೆಯಲ್ಲೂ ಕೆಲವು ಸಂಕುಚಿತ ಧೋರಣೆಗಳು ತೂರಿಕೊಳ್ಳುವ ಸಾಧ್ಯತೆಗಳಿವೆ.
ಉದಾಹರಣೆಗೆ ಜಿಎಸ್‌ಟಿಯಲ್ಲಿ ರಾಜ್ಯಗಳ ಪಾಲನ್ನು ಹಂಚುವಾಗ ಬಿಜೆಪಿ ಶಾಸಿತ ರಾಜ್ಯಗಳಿಗೆ ಸಮಯಕ್ಕೆ ಸರಿಯಾಗಿ, ಪೂರ್ತಿಯಾಗಿ ಮತ್ತು ಹೆಚ್ಚುವರಿಯಾಗಿ ಪಾವತಿ ಮಾಡುವ ಮೋದಿ ಸರಕಾರ ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳಿಗೆ ಕಾಲಕ್ಕೆ ಸರಿಯಾಗಿಯೂ ಪಾವತಿ ಮಾಡುವುದಿಲ್ಲ ಮತ್ತು ಪೂರ್ತಿ ಪ್ರಮಾಣವನ್ನು ಕೊಡುವುದಿಲ್ಲ. ಕಾರಣ ಸ್ಪಷ್ಟ. ಇಲ್ಲಿ ಕಾಣುವ ರಾಜಕೀಯ ತಾರತಮ್ಯದ ವಿರುದ್ಧ ಬಂಡೇಳಲು ವಿಶೇಷ ವಿಶ್ಲೇಷಣೆ ಅಗತ್ಯವಿಲ್ಲ.
ಆದರೆ ಈ ತಾರತಮ್ಯ ರಾಜಕೀಯ ತಾರತಮ್ಯ. ಉತ್ತರ-ದಕ್ಷಿಣ ತಾರತಮ್ಯವಲ್ಲ. ಏಕೆಂದರೆ ಉತ್ತರದ ಲೆಕ್ಕಕ್ಕೆ ಬರದ ಗುಜರಾತಿಗೆ ಉತ್ತರದ ರಾಜ್ಯಗಳಿಗಿಂತ ಹೆಚ್ಚಿಗೆ ಅನುದಾನ ಸಿಗುತ್ತದೆ.
ಆದರೆ ಅಸಲಿನಲ್ಲಿ ಮೋದಿ ಸರಕಾರದ ಕಾರ್ಪೊರೇಟ್ ಪರವಾದ ತಾರತಮ್ಯ ನೀತಿಯ ಫಲವಾಗಿರುವ ದಕ್ಷಿಣ ರಾಜ್ಯಗಳ ಬಗೆಗಿನ ತಾರತಮ್ಯವನ್ನು ವಿರೋಧಿಸುವ ಭರದಲ್ಲಿ ಕೆಲವು ಅತ್ಯುತ್ಸಾಹಿಗಳು ಕೆಲವು ಮೇಲರಿಮೆ ವಾದಗಳನ್ನು ಮುಂದಿಡುತ್ತಿದ್ದಾರೆ.
ಉದಾಹರಣೆಗೆ ‘‘ದೇಶಕ್ಕೆ ಹೆಚ್ಚು ಕೊಡುಗೆ ಕೊಡುವ ಕರ್ನಾಟಕ ರಾಜ್ಯವು ತೆರುವ ತೆರಿಗೆಯನ್ನು ಮೋದಿ ಸರಕಾರವು ದೇಶದ ಬೊಕ್ಕಸಕ್ಕೆ ಕೊಡುಗೆಯನ್ನೇ ನೀಡದ ಉತ್ತರ ರಾಜ್ಯಗಳಿಗೆ ವ್ಯಯಿಸುತ್ತಿದೆ’’ ಎಂಬ ಪ್ರಾದೇಶಿಕ ಮೇಲರಿಮೆ ವಾದವನ್ನು ಮಂಡಿಸುತ್ತಿದ್ದಾರೆ. ಅದರ ಮುಂದುವರಿಕೆಯ ಭಾಗವೇ ಡಿ.ಕೆ. ಸುರೇಶ್ ಅವರ ಪ್ರತ್ಯೇಕ ದೇಶದ ಅಯೋಜಿತ ಪ್ರಸ್ತಾಪ. ವೃತ್ತಿ ರಾಜಕಾರಣಿಯಾದ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರು ನೀಡಿರುವ ಈ ಗಂಭೀರವಲ್ಲದ ಹೇಳಿಕೆಯನ್ನು ಕೆಲವು ಪ್ರಗತಿಪರರು ಅತ್ಯಂತ ಗಂಭೀರವಾಗಿ ಪರಿಹಾರವೆಂದು ಪರಿಗಣಿಸಿಬಿಟ್ಟಿರುವುದು ಸೋಜಿಗ!
ಪ್ರತ್ಯೇಕ ದೇಶವೇ ಪರಿಹಾರ ಎಂದಾಗಿದ್ದರೆ ಅದು ಯೋಚಿಸಬಾರದ ನಿಷಿದ್ಧ ವಿಷಯವೇನಲ್ಲ.
ಆದರೆ ಇದು ಆರ್ಥಿಕವಾಗಿ ಸಮಂಜಸವಾದ ಹಾಗೂ ಸಾಮಾಜಿಕವಾಗಿ ನ್ಯಾಯಯುತವಾದ ತರ್ಕವೇ?
ಇಂದು ಕೇಂದ್ರದ ಸ್ವಂತ ರಾಜಸ್ವದಲ್ಲಿ ಪ್ರಧಾನವಾಗಿರುವ ಕಾರ್ಪೊರೇಟ್ ಆದಾಯ ತೆರಿಗೆ ಮತ್ತು ಮೇಲ್ಮಧ್ಯಮವರ್ಗದ ಆದಾಯ ತೆರಿಗೆಯ ಹೆಚ್ಚು ಪಾಲು ಮಹಾರಾಷ್ಟ್ರ, ಕರ್ನಾಟಕ, ಹಾಗೂ ತಮಿಳುನಾಡಿನಿಂದ ಸಂದಾಯವಾಗುತ್ತದೆ. ಉತ್ತರದ ರಾಜ್ಯಗಳಿಂದ ಕಡಿಮೆ. ಆದರೆ ಅದಕ್ಕೆ ಕಾರಣ ಆ ಕಂಪೆನಿಗಳು ಈ ರಾಜ್ಯದಲ್ಲಿ ನೋಂದಾಯಿತವಾಗಿರುವುದು ಒಂದು ಕಾರಣ.
ಆದರೆ ಅವರು ಕಟ್ಟುವ ಲಾಭದ ಮೇಲಿನ ಮತ್ತು ವಹಿವಾಟಿನ ಮೇಲಿನ ತೆರಿಗೆಯೂ ಕೇವಲ ಕರ್ನಾಟಕ ಮೂಲದ್ದು ಮಾತ್ರವಲ್ಲ, ಅವರ ಸರಕು ಮತ್ತು ಸೇವೆಗಳು ದೇಶಾದ್ಯಂತ ಮಾರಾಟವಾಗುತ್ತವೆ ಮತ್ತು ಬೇರೆ ದೇಶಗಳಿಗೂ ರಫ್ತುಗೊಳ್ಳುತ್ತವೆ. ಹೀಗಾಗಿ ಕೇಂದ್ರ ಸರಕಾರ ವಿಧಿಸುವ ತೆರಿಗೆಯು ಕರ್ನಾಟಕವನ್ನು ಒಳಗೊಂಡಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಮತ್ತು ದೇಶದ ಹೊರಗೆ ಅದು ಮಾಡಿದ ವಹಿವಾಟನ್ನು ಮತ್ತು ಅದರ ಮೇಲಿನ ಲಾಭವನ್ನು ಒಳಗೊಂಡಿರುತ್ತದೆ. ಆದ್ದರಿಂದ ಕರ್ನಾಟಕದಲ್ಲಿ ನೋಂದಾಯಿತವಾದ ಕಂಪೆನಿಗಳು ಪ್ರತಿವರ್ಷ ಲಕ್ಷ ಕೋಟಿ ರೂ.ಯಷ್ಟು ಕಾರ್ಪೊರೇಟ್ ಆದಾಯ ತೆರಿಗೆಯನ್ನು ಸಲ್ಲಿಸಿದರೂ ಅದರ ಮೇಲಿನ ಅಧಿಕಾರ ಕರ್ನಾಟಕಕ್ಕೆ ಸೀಮಿತವಾಗಿರುವುದಿಲ್ಲ.
ಹೀಗಾಗಿ ಆ ಕಂಪೆನಿ ಕಟ್ಟಿದ ಒಟ್ಟು ತೆರಿಗೆಯನ್ನು ಕರ್ನಾಟಕ ಮೂಲದ್ದು ಎಂದು ವಿಶ್ಲೇಷಿಸಲಾಗದು.