ರಾಜ್ಯಪ್ರಶಸ್ತಿ ಪುರಸ್ಕೃತೆ ಕೋಲ್ಚಾರು ಶಾಲೆಯ ಮಾದರಿ ಶಿಕ್ಷಕಿ: ಪಾಠ ಮಾತ್ರವಲ್ಲ, ಶಾಲಾ ವಾಹನ ಓಡಿಸಲೂ ಸೈ!
ಮಂಗಳೂರು: ರಾಜ್ಯ ಮಟ್ಟದ ಅತ್ಯುತ್ತಮ ಕನ್ನಡ ಶಾಲೆ ಪ್ರಶಸ್ತಿ ಪುರಸ್ಕೃತ ಸುಳ್ಯ ಆಲೆಟ್ಟಿ ಗ್ರಾಮದ ಕೋಲ್ಚಾರು ಸ.ಉ.ಹಿ. ಪ್ರಾ. ಶಾಲೆ ರಾಜ್ಯಕ್ಕೆ ಮಾದರಿಯಾಗಿರುವ ಹಲವು ವಿಶೇಷತೆಗಳನ್ನು ಹೊಂದಿರುವುದಲ್ಲದೇ, ಈ ಶಾಲೆಯ ಶಿಕ್ಷಕಿಯೂ ತನ್ನ ಆಲ್‌ರೌಂಡರ್ ಸೇವಾ ಮನೋಭಾವದ ಮೂಲಕ ಮಾದರಿಯಾಗಿ ಗುರುತಿಸಿಕೊಂಡಿದ್ದಾರೆ.
ಕೋಲ್ಚಾರು ಶಾಲೆಯ ಸಹಶಿಕ್ಷಕಿ ಜಲಜಾಕ್ಷಿ, ಮಕ್ಕಳಿಗೆ ತರಗತಿಯಲ್ಲಿ ಪಾಠ ಮಾಡುವುದು ಮಾತ್ರವಲ್ಲದೆ, ಹತ್ತಾರು ಕಿ.ಮೀ. ದೂರದಿಂದ ಮಕ್ಕಳನ್ನು ಕರೆತರುವ ಶಾಲಾ ವಾಹನದ ಚಾಲಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
‘ಮುಟ್ಟು ಗುಟ್ಟಲ್ಲ-ಅದೊಂದು ಸಹಜ ಪ್ರಕ್ರಿಯೆ’ ಎಂಬ ಜನಾಂದೋಲನದ ಮೂಲಕ ಸುಳ್ಯದಂತಹ ಗ್ರಾಮೀಣ ಪ್ರದೇಶದಲ್ಲಿ ‘ಮುಟ್ಟಿನ ಕಪ್’ ಮತ್ತು ‘ಮರುಬಳಕೆ ಪ್ಯಾಡ್’ ದಾನಿಗಳ ಸಹಾಯದಿಂದ ವಿತರಣೆ, ಡಾ.ವೀಣಾ ಎನ್. ಸ್ತ್ರೀ ಆರೋಗ್ಯ ತಜ್ಞೆ. ಇವರೊಂದಿಗೆ ವಿದ್ಯಾರ್ಥಿ ಮತ್ತು ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇದಕ್ಕಾಗಿ ‘ದಿ ಇಂಡಿಯಾ ಫೌಂಡೇಶನ್ ಫಾರ್ ದ ಆರ್ಟ್ಸ್’ ಬೆಂಗಳೂರು ಇಲ್ಲಿಯ ಗ್ರ್ಯಾಂಟಿಯೂ ಆಗಿರುವ ಶಾಲೆಯ ಕನ್ನಡ ಭಾಷಾ ಶಿಕ್ಷಕಿ ಜಲಜಾಕ್ಷಿ ಕೆ.ಡಿ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿದ ಮಕ್ಕಳ ಶಾಲಾ ವಾಹನದ ಚಾಲಕಿಯಾಗಿ ಮಕ್ಕಳನ್ನು ಶಾಲೆಗೆ ಕರೆ ತಂದು ಸಂಜೆ ಮನೆಗೆ ತಲುಪಿಸುತ್ತಾರೆ.
ಪ್ರಸಕ್ತ ಸಾಲಿನಲ್ಲಿ ಶಾಲಾ ಅಭಿವೃದ್ಧಿ ಸಮಿತಿ (ಎಸ್‌ಡಿಎಂಸಿ)ಯು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪುವುದಕ್ಕೆ ಪೂರಕವಾಗಿ ಮಾರುತಿ ಓಮ್ನಿ ವಾಹನವನ್ನು ಖರೀದಿಸಿತ್ತು. ಆ ವಾಹನದಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೆಲವೊಂದು ಮಾರ್ಪಾಡು ಮಾಡಲಾಯಿತು. ‘ಅಕ್ಷರ ವಾಹಿನಿ’ ಎಂದು ಹೆಸರಿಸಲಾಗಿರುವ ವಾಹನಕ್ಕೆ ಚಾಲಕ ನೇಮಕಕ್ಕೆ ಹಣಕಾಸಿನ ತೊಂದರೆಯ ಹಿನ್ನೆಲೆಯಲ್ಲಿ ಆ ಕೊರತೆಯನ್ನು ಶಿಕ್ಷಕಿ ಜಲಜಾಕ್ಷಿ ನೀಗಿಸಿದ್ದಾರೆ.
ಸುಳ್ಯದಿಂದ ಕೋಲ್ಚಾರಿಗೆ ಬೆಳಗ್ಗೆ ಒಂದೇ ಬಸ್ ಸಂಚಾರವಿರುವ ಕಾರಣ ವಿದ್ಯಾರ್ಥಿಗಳು ಬೆಳಗ್ಗೆ ಬಹು ಬೇಗ ಮನೆಯಿಂದ ಹೊರಡ ಬೇಕಾಗುತ್ತದೆ. ಸಂಜೆ ವೇಳೆ ಬಸ್ ಸಮಯಕ್ಕೆ ಸರಿಯಾಗಿ ಇಲ್ಲದ ಕಾರಣ ಮಕ್ಕಳು ಮನೆಗೆ ತಲುಪುವಾಗ ತಡವಾಗುತ್ತದೆ.
‘‘ನಾನು ಬೆಳಗ್ಗೆ 8:30ಕ್ಕೆ ಮನೆಯಿಂದ ಹೊರಟು, ಸುಳ್ಯದ ಇಬ್ಬರು ವಿದ್ಯಾರ್ಥಿ ಗಳೊಂದಿಗೆ ಐದು ಕಡೆಗಳಿಂದ ವಿದ್ಯಾರ್ಥಿಗಳನ್ನು ವಾಹನಕ್ಕೇರಿಸಿ 9 ಗಂಟೆಗೆ ಶಾಲೆಗೆ ತಲುಪುತ್ತೇನೆ. ಸಂಜೆ 5 ಗಂಟೆಯೊಳಗೆ ಮಕ್ಕಳು ವಾಹನದ ಮೂಲಕ ಮನೆಗೆ ತಲುಪುತ್ತಾರೆ. ಒಟ್ಟು 17 ಮಕ್ಕಳು ಸದ್ಯ ಶಾಲಾ ವಾಹನವನ್ನು ಬಳಸುತ್ತಾರೆ. ಮಕ್ಕಳ ಪೋಷಕರು ಕೂಡಾ ನಿಗದಿತ ಸ್ಥಳಗಳಲ್ಲಿ ಮಕ್ಕಳನ್ನು ವಾಹನಕ್ಕೆ ಹತ್ತಿಸಲು ಮತ್ತು ಇಳಿಸಲು ಸಹಕರಿಸುತ್ತಾರೆ’’ ಎಂದು ಜಲಜಾಕ್ಷಿ ಹೇಳುತ್ತಾರೆ.
‘‘ಶಾಲಾ ವಾಹನದ ವ್ಯವಸ್ಥೆಯನ್ನು ಮುಂದೆ ವಿಸ್ತರಿಸುವ ಮೂಲಕ ಇನ್ನಷ್ಟು ಮಕ್ಕಳಿಗೆ ಅವಕಾಶ ಕಲ್ಪಿಸಲು ಚಿಂತಿಸಲಾಗಿದೆ. ಬಂದಡ್ಕ ಮೊದಲಾದ ಪ್ರದೇಶಗಳಿಂದಲೂ ಸಾರಿಗೆ ಲಭ್ಯವಿದ್ದಲ್ಲಿ ಮಕ್ಕಳನ್ನು ಶಾಲೆಗೆ ದಾಖಲಿಸಲು ಪೋಷಕರು ಆಸಕ್ತಿ ತೋರಿಸಿದ್ದಾರೆ ’’ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಸುದರ್ಶನ ಪಾತಿಕಲ್ಲು.
ಜಲಜಾಕ್ಷಿಯವರು ‘ಮುಟ್ಟಿನ ಕಪ್’ ಜಾಗೃತಿಯ ಬಗ್ಗೆ ಆಂದೋಲವನ್ನು ಮುಂದುವರಿಸಿದ್ದು, ಮರುಬಳಕೆಯ ಪ್ಯಾಡ್ ಮತ್ತು ಕಪ್‌ಗಳ ವಿತರಣೆ ಕಾರ್ಯವನ್ನು ಮುಂದುವರಿಸಿದ್ದಾರೆ.
‘‘ಮುಟ್ಟಿನ ಕಪ್ ಬಳಕೆಯ ಬಗ್ಗೆ ನಾನು ನನ್ನ ಮಗಳಿಂದ ತಿಳಿದು ಕಳೆದ ನಾಲ್ಕು ವರ್ಷ ದಿಂದ ನಾನೂ ಅದನ್ನು ಬಳಸುತ್ತಿದ್ದು, ಅದು ಸುರಕ್ಷಿತ ಮಾತ್ರವಲ್ಲದೆ, ಪರಿಸರ ಸಹ್ಯವೂ ಆಗಿದೆ. ಈ ಬಗ್ಗೆ ಜಾಗೃತಿ ಮೂಡಿಸುತ್ತಾ ಬರುತ್ತಿದ್ದೇನೆ. ಈ ಆಂದೋಲನವನ್ನು ಆರಂಭಿಸಿದ ಬಳಿಕ ದಾನಿಗಳು, ಎನ್‌ಜಿಒಗಳ ಸಹಕಾರದಲ್ಲಿ ಸುಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶದ ಮಹಿಳೆಯರಿಗೆ 400ಕ್ಕೂ ಅಧಿಕ ‘ಮುಟ್ಟಿನ ಕಪ್’ಗಳು ಹಾಗೂ ವಿದ್ಯಾರ್ಥಿನಿಯರಿಗೆ 3,000ರಷ್ಟು ‘ಮರುಬಳಕೆಯ ಪ್ಯಾಡ್’ಗಳನ್ನು ವಿತರಿಸಲಾಗಿದೆ’ ಎಂದು ಜಲಜಾಕ್ಷಿ ಹೇಳುತ್ತಾರೆ.
ಶಾಲೆಗೆ ವಿವಿಧ ಸಂಘ ಸಂಸ್ಥೆಗಳ ಮೂಲಕ ಅನುದಾನ ಕ್ರೋಢೀಕರಿಸುವಲ್ಲಿಯೂ ಮುತುವರ್ಜಿ ವಹಿಸುವ ಜಲಜಾಕ್ಷಿಯವರು ತಮ್ಮ ವೇತನದಿಂದಲೇ ಸಾಕಷ್ಟು ಹಣವನ್ನು ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿಯೂ ಭಾಗವಹಿಸಿರುವ ಜಲಜಾಕ್ಷಿ ವಿವಿಧ ಸಂಘ ಸಂಸ್ಥೆಗಳ ಗೌರವ, ಸತ್ಕಾರಗಳಿಗೂ ಪಾತ್ರರಾಗಿದ್ದಾರೆ.
ಹಿಂದೆ ಮಕ್ಕಳನ್ನು ಬಾಡಿಗೆ ರಿಕ್ಷಾದಲ್ಲಿ ಕಳುಹಿಸುತ್ತಿದ್ದೆವು. ಅದಕ್ಕಾಗಿ ಇಬ್ಬರಿಗೆ ಸುಮಾರು 3000 ರೂ.ಗಳಷ್ಟು ಖರ್ಚಾಗುತ್ತಿತ್ತು. ಇದೀಗ ಶಿಕ್ಷಕಿ ಜಲಜಾಕ್ಷಿಯವರೊಂದಿಗೆ ಮಕ್ಕಳನ್ನು ಶಾಲಾ ವಾಹನದಲ್ಲಿ ಯಾವುದೇ ಭಯವಿಲ್ಲದೆ ಕಳುಹಿಸುತ್ತಿದ್ದೇವೆ. ತುಂಬಾ ಜಾಗ್ರತೆಯಿಂದ ಮಕ್ಕಳನ್ನು ಕರೆದೊಯ್ಯುತ್ತಾರೆ.
-ರಾಜೇಶ್, ಪೋಷಕ