ತಿಥಿ ಕಾರ್ಯದ ದಿನ ‘ತಂಗಿಯ ಮೃತದೇಹ ಸುಟ್ಟಿಲ್ಲ ಎಂದು ಕರೆ ಬಂತು’
ಕೋವಿಡ್ ಕರಾಳ ನೆನಪು
PC: PTI
ಬೆಂಗಳೂರು, ನ.27: ಕೋವಿಡ್-19 ಅನುಭವಿಸಿದವರ ಪಾಲಿಗೆ ಇಂದಿಗೂ ಒಂದು ಕರಾಳ ನೆನಪಾಗಿ ಉಳಿದಿದೆ. ಇದು ಒಂದು ರೋಗವಾಗಿ ಮಾತ್ರವಲ್ಲದೆ ಜನರಿಗೆ ಸಂಬಂಧಗಳ ಬೆಲೆ ಅರ್ಥ ಮಾಡಿಸಿದೆ ಎಂದು ತಮ್ಮ ತಂಗಿ ಅಮ್ಮುಲು ಅವರನ್ನು ಕಳೆದುಕೊಂಡ ಬೆಂಗಳೂರು ನಗರ ನಿವಾಸಿ ಪಾಂಡಿಯನ್ ಅವರು ಹೇಳುತ್ತಾರೆ.
ನೆಗಡಿಯೆಂದು ಆಸ್ಪತ್ರೆಗೆ ಕರೆದುಕೊಂಡು ಹೋದ ತಂಗಿಯನ್ನು ಆಸ್ಪತ್ರೆಯೊಂದರಲ್ಲಿ ತಪಾಸಣೆಯೂ ಮಾಡಲಿಲ್ಲ. ಹೀಗೆ ನಾಲ್ಕಾರು ಆಸ್ಪತ್ರೆಗಳನ್ನು ಬದಲಿಸಿದ್ದು, ಕೊನೆಗೆ ಆಸ್ಪತ್ರೆಯೊಂದರ ತಡವಾಗಿ ಬಂದು ನನ್ನ ತಂಗಿ ಮೃತಪಟ್ಟಿರುವುದಾಗಿ ಹೇಳಿದರು. ಮೃತದೇಹ ಪಡೆಯಲು ಹೋದರೆ ಕೊರೋನ ಪರೀಕ್ಷೆ ಮಾಡಿ ಮೂರು ದಿನಗಳ ನಂತರ ಕೊಡುತ್ತೇವೆ ಎಂದರು. ಆ ಸಮಯದಲ್ಲಿ ಬರುತ್ತಿದ್ದ ಸುದ್ದಿಗಳನ್ನು ಕೇಳಿ ಸರಕಾರದಿಂದಲೇ ಅಂತ್ಯಸಂಸ್ಕಾರ ಮಾಡುತ್ತಾರೆ ಎಂಬ ಮಾಹಿತಿ ಪಡೆದುಕೊಂಡು ಮತ್ತೇನೆಂದು ತಿಳಿಯದೆ ಅಂತ್ಯ ಸಂಸ್ಕಾರದ ನಂತರದ ತಿಥಿ ಕಾರ್ಯಕ್ಕೆ ಮುಂದಾದೆವು.
ತಿಥಿ ಕಾರ್ಯದ ದಿನ ಬಂದ ಆಸ್ಪತ್ರೆ ಕರೆ: ತಂಗಿಯ ಮೃತದೇಹದ ಅಂತ್ಯಸಂಸ್ಕಾರ ಮುಗಿದಿದೆ ಎಂದು ನಂಬಿ ತಿಥಿ ಕಾರ್ಯ ಮಾಡುತ್ತಿದ್ದೆವು. ಅದೇ ದಿನ ಆಸ್ಪತ್ರೆಯಿಂದ ಕರೆ ಮಾಡಿದ ಸಿಬ್ಬಂದಿ ಮೃತದೇಹ ತೆಗೆದುಕೊಂಡು ಹೋಗುವಂತೆ ತಿಳಿಸಿದರು. ಆ ಸಂದರ್ಭದಲ್ಲಿ ಸಹಾಯಕ್ಕೆ ಬಂದ ಕೌನ್ಸಿಲರ್ ಒಬ್ಬರು ಸರಕಾರದಿಂದಲೇ ಅಂತಿಮ ಸಂಸ್ಕಾರ ಮಾಡಿಸುತ್ತೇನೆ ಎಂದು ಹೇಳಿದರು. ಆದರೆ, ಮತ್ತೆರಡು ದಿನಗಳ ನಂತರ ಆಸ್ಪತ್ರೆಯಿಂದ ಮೃತದೇಹವನ್ನು ತೆಗೆದುಕೊಂಡು ಹೋಗುವಂತೆ ಮತ್ತೆ ಕರೆಗಳು ಬಂದವು. ಹಾಗಾಗಿ ನಾವೇ ಸ್ವತಃ ಮೃತದೇಹ ಪಡೆದು ಕೊನೆಗೆ ಮೃತದೇಹ ಸುಡಲು ಸ್ಥಳಾವಕಾಶ ಸಿಗದೆ ಅಂತಿಮವಾಗಿ ಹೊಸೂರು ಸ್ಮಶಾನದಲ್ಲಿ ಸುಟ್ಟೆವು ಎನ್ನುತ್ತಾರೆ ಪಾಂಡಿಯನ್.
ನೆರವಿಗೆ ಬಾರದ ಸರಕಾರ: ಕೊರೋನ ಕಾಲಘಟ್ಟದ ನಿಮ್ಮ ಸಂಕಷ್ಟದಲ್ಲಿ ಸರಕಾರದ ನೆರವು ಹೇಗಿತ್ತು ಎಂದು ಕೇಳಿದರೆ ‘ನಮಗೆ ಸರಕಾರದಿಂದ ಯಾವ ನೆರವು ಸಿಗಲಿಲ್ಲ. ಅಂತಿಮ ಸಂಸ್ಕಾರಕ್ಕೆ ತಂಗಿಯ ಮೃತದೇಹ ಪಡೆಯಲು ಹೋದರೆ ತುಂಬಾ ತೊಂದರೆ ಅನುಭವಿಸಬೇಕಾಯಿತು. ಈ ಪರಿಸ್ಥಿತಿಯ ಬಡತನದಲ್ಲಿರುವ ನಾವು ಮೃತದೇಹ ಸಂಸ್ಕಾರಕ್ಕೂ 40,000 ರೂ. ಖರ್ಚು ಮಾಡಬೇಕಾಯಿತು. ಆಸ್ಪತ್ರೆಯಿಂದ ಮೃತದೇಹ ಕೊಡುವುದಕ್ಕಾಗಿಯೇ ಹನ್ನೆರಡು ಸಾವಿರ ರೂ. ಕೇಳಿದರು ಅಷ್ಟು ಆಗುವುದಿಲ್ಲವೆಂದು ಎಂಟು ಸಾವಿರ ರೂ. ನೀಡಿದೆವು. ನಂತರ ಮೃತದೇಹ ಸಾಗಿಸುವುದಕ್ಕೆ ಅವರು ಹಾಕಿಕೊಳ್ಳುವ ಬಟ್ಟೆಗೂ ಹಣ ಕೊಟ್ಟೆವು. ಇಲ್ಲಿ ಸರಕಾರ ನಮಗೆ ಎಲ್ಲಿ ನೆರವಾಯಿತು? ನಾವು ಯಾರನ್ನು ಕೇಳಬೇಕಿತ್ತು? ಆಸ್ಪತ್ರೆಯವರು ಮೃತದೇಹ ಅಂತ್ಯಸಂಸ್ಕಾರ ಮಾಡದೆ ನಮಗೂ ಬೇಗ ಮೃತದೇಹ ಕೊಡದ ಅವರ ಆ ನಿರ್ಧಾರ ನಮಗಂತೂ ಅರ್ಥವಾಗಲಿಲ್ಲ. ಕೆಲವು ದಿನಗಳು ಮೃತದೇಹವನ್ನು ಅಲ್ಲೇ ಇಟ್ಟು ನಂತರ ಮೃತದೇಹದ ಅಂತಿಮ ಸಂಸ್ಕಾರವನ್ನು ನೀವೇ ಮಾಡಿ ಎಂದು ಹೇಳಿದ್ದು ಯಾಕೆ? ನನ್ನ ತಂಗಿ ಮೃತಪಟ್ಟಿರುವುದು ಕೊರೋನದಿಂದಲೇ ಎಂದು ಇದುವರೆಗೆ ಲಿಖಿತವಾಗಿ ಕೊಟ್ಟಿಲ್ಲ. ಆಸ್ಪತ್ರೆಯವರು ಕೇವಲ ಬಾಯಿ ಮಾತಲ್ಲೇ ಕೊರೋನ ಸಾವು ಎಂದಿದ್ದೇಕೆ’?ಎಂದು ಪಾಂಡಿಯನ್ ಪ್ರಶ್ನಿಸುತ್ತಾರೆ.
ನೆರೆಹೊರೆಯವರು ಮಾತನಾಡಿಸುತ್ತಿರಲಿಲ್ಲ
ತಂಗಿ ಮೃತಪಟ್ಟ ನಂತರದಲ್ಲಿ ಯಾವ ನೆರೆಹೊರೆಯುವರೂ ಹತ್ತಿರ ಕರೆದುಕೊಳ್ಳುತ್ತಿರಲಿಲ್ಲ. ಸರಿಯಾಗಿ ಮಾತನಾಡುತ್ತಲೂ ಇರಲಿಲ್ಲ. ದಿನ ಕಳೆದಂತೆ ಎಲ್ಲವೂ ಸರಿಯಾಯಿತು. ಆದರೆ ಕಷ್ಟ ಕಾಲದಲ್ಲಿ ಯಾರೂ ನೆರವಿಗೆ ಬರಲಿಲ್ಲ ಎಂದು ಪಾಂಡ್ಯನ್ ದುಃಖಿತರಾದರು.