ಎಲ್ಲರಿಗಾಗಿ ನಮ್ಮ ನಾಳೆಗಳು
ನಮ್ಮ ರಾಚಯ್ಯ ಸಾಹೇಬರು ತೀರಿಕೊಂಡು 24 ವರ್ಷಗಳಾದವು ಅಂತ ಓದಿದೆ. ಪ್ರಬುದ್ಧ ರಾಜಕಾರಣಿ, ಸರಳ ಸಜ್ಜನಿಕೆಗೆ ಹೆಸರಾದವರು. ಇಂತಹವರನ್ನು ನೆನಪು ಮಾಡಿಕೊಳ್ಳುವುದೆಂದರೆ ಮನಸ್ಸಿಗೆ ಒಂದು ರೀತಿಯ ಹಿತ ಅನಿಸುತ್ತದೆ. ಈ ಹೊತ್ತಿನ ರಾಜಕಾರಣದ ಭಾಷೆಯನ್ನು ರಾಚಯ್ಯನಂತಹವರು ಕೇಳಿಸಿಕೊಂಡಿರುವುದಿಲ್ಲ ಮತ್ತು ಅವರು ಕೂಡ ಆಕಸ್ಮಿಕವಾಗಿ ಮಾತನಾಡಿರುವುದಿಲ್ಲ, ಅಂತಹ ಧೀಮಂತ ರಾಜಕಾರಣಿ ಬಿ.ರಾಚಯ್ಯ ಸಾಹೇಬರು. ಲಂಕೇಶ್ ಮೇಷ್ಟ್ರು ಯಾವುದಾದರೂ ಪುಸ್ತಕ ಓದಿದ್ದರೆ, ಅದನ್ನು ಉಳಿದವರೊಂದಿಗೆ ಹಂಚಿಕೊಳ್ಳುತ್ತಿದ್ದರು ಮತ್ತು ಆ ವಿಷಯವನ್ನೇ ಆ ವಾರದ ಟೀಕೆ-ಟಿಪ್ಪಣಿ ಅಥವಾ ಮರೆಯುವ ಮುನ್ನದಲ್ಲಿ ಬರೆಯುತ್ತಿದ್ದರು. ನನಗೂ ಕೆಲವು ವಿಚಾರಗಳನ್ನು ಹೇಳುತ್ತಿದ್ದರು. ಬಹುಶಃ ರಾಚಯ್ಯನವರ ಕುರಿತು ಯಾರಾದರೂ ಮಾತನಾಡಿರಲೇಬೇಕು ಇಲ್ಲ ಅವರೇ ಆ ಬಗ್ಗೆ ಪುಸ್ತಕ ಓದಿರಬೇಕು. ಮೇಷ್ಟ್ರಿಗೆ ಕೆಲವು ರಾಜಕಾರಣಿಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಗೌರವ. ಅವರುಗಳಲ್ಲಿ ಗೋಪಾಲ ಗೌಡ್ರು, ನಝೀರ್ ಸಾಬ್, ಕೆ.ಎಚ್. ರಂಗನಾಥ್ ಹಾಗೂ ರಾಚಯ್ಯನವರ ಬಗ್ಗೆಯೂ ಅಪಾರ ಗೌರವವಿತ್ತು. ‘ನಮ್ಮ ರಾಚಯ್ಯನವರು ತುಂಬಾ ಒಳ್ಳೆಯ ಮನುಷ್ಯ ಕಣಯ್ಯ’ ಎಂದರು.
‘ಹೌದು ಸರ್ ಅವರು ನಮ್ಮೋರು ಸರ್’ ಅಂದೆ.
‘ನಮ್ಮೋರು ಎನ್ನೋಕೆ ಎಷ್ಟು ಖುಷಿನೋ...’ ಅನ್ನುವ ಸಣ್ಣ ಅಸಹನೆ ತೋರಿದ್ದರು. ಅಕಸ್ಮಾತ್ ಹಾಗೆ ಹೇಳುವುದರಲ್ಲಿ ತಪ್ಪಿಲ್ಲ ಅನಿಸಿರಬಹುದು ಅವರಿಗೆ. ಇದೆಲ್ಲದಕ್ಕಿಂತ, ಯಾವುದೇ ಜಾತಿಯವರಾಗಿದ್ದರೂ ಒಳ್ಳೆಯ ಕೆಲಸ ಮಾಡಬೇಕು, ಪ್ರಾಮಾಣಿಕವಾಗಿರಬೇಕು ಎನ್ನುವುದು ಲಂಕೇಶರ ಅಭಿಮತವಾಗಿತ್ತು.
ಈ ಚುನಾವಣೆಗಳ ಸಂದರ್ಭದಲ್ಲಿ ಎಲ್ಲಾ ಸಮುದಾಯಗಳ ಮತಗಳನ್ನು ಕೇಳಲು ಹೋಗಬೇಕು. ರಾಚಯ್ಯನವರು ಕೂಡ ಚುನಾವಣೆ ಸಂದರ್ಭದಲ್ಲಿ ಉಳಿದ ಸಮುದಾಯಗಳ ಮತ ಕೇಳಲು ಮನೆ ಮನೆಗೆ ತೆರಳುವಾಗ ಉಳಿದ ಸಮುದಾಯಗಳ ಮನೆಗಳ ಜಗಲಿಯಲ್ಲಿ ನಿಂತು ಮತ ಕೇಳುತ್ತಿದ್ದರು. ಆ ಸಮುದಾಯದ ಗಂಡಸರು ಒತ್ತಾಯ ಮಾಡಿ ರಾಚಯ್ಯ ಅವರನ್ನು ಒಳಗೆ ಕರೆಯುತ್ತಿದ್ದರು. ಆದರೆ ರಾಚಯ್ಯನವರು ಮನೆ ಒಳಗೆ ಹೋಗುತ್ತಿರಲಿಲ್ಲವಂತೆ. ಅವರ ಹಿಂಬಾಲಕರು ಕಾರಣ ಕೇಳಿದರೆ ರಾಚಯ್ಯನವರು ಹೀಗೆ ಹೇಳಿದ್ದರಂತೆ. ‘ಗಂಡಸರು ನನ್ನ ಓಲೈಕೆ ಮಾಡುವುದಕ್ಕಾಗಿ ಒಳ ಕರೆಯುತ್ತಾರೆ, ಅಕಸ್ಮಾತ್ ನಾನು ಒಳ ಹೋದರೆ ಕುರ್ಚಿಯ ಮೇಲೆ ಕುಳಿತುಕೊಳ್ಳಬೇಕು. ಅಲ್ಲಿ ಮಾತನಾಡಿ ಹೊರಬಂದ ಮೇಲೆ ಆ ಮನೆಯ ಹೆಣ್ಣು ಮಕ್ಕಳಿಗೆ ಇಷ್ಟ ಇರಬಹುದು, ಇಲ್ಲದಿರಬಹುದು. ನಾನು ಕುಳಿತ ಕುರ್ಚಿಯನ್ನು ಒರೆಸುತ್ತಾರೆ. ಹಾಗೆ ಅಂಗಳವನ್ನು ಗಂಜಲ ಹಾಕಿ ಸಾರಿಸುತ್ತಾರೆ. ಹೀಗೆ ಏನೇನೋ ಇರುತ್ತವೆ. ಪಾಪ ಆ ಹೆಣ್ಣು ಮಕ್ಕಳಿಗೆ ಏಕೆ ತೊಂದರೆ ಕೊಡುವುದು. ನಮ್ಮನ್ನು ಒಪ್ಪಿಕೊಳ್ಳುವ ಮನಸ್ಥಿತಿ ಅವರ ಮನಸ್ಸಿಗೆ ಬಂದಿಲ್ಲ. ಆ ಕಾರಣಕ್ಕಾಗಿ ಜಗಲಿಯ ಮೇಲೆ ನಿಂತು ಓಟು ಕೇಳುತ್ತೇನೆ ಕಣಪ್ಪ’ ಅಂದರಂತೆ. ಹೀಗೆ ಯಾರನ್ನೂ ನೋಯಿಸದ ಮನಸ್ಸಿನವರು ರಾಚಯ್ಯನವರು ಎಂದು ಮೇಷ್ಟ್ರು ನನಗೆ ಹೇಳಿದ್ದರು. ಇವರಿಗೂ ಜಾತಿಯ ಅಸಮಾನತೆಯ ಕುರಿತು ಬೇಸರವಿತ್ತು. ಇದರ ಬಗ್ಗೆ ಅನೇಕ ಸಲ ಬರೆದಿದ್ದಾರೆ, ಮಾತನಾಡಿದ್ದಾರೆ. ಇವರ ಕಥೆಗಳಲ್ಲಿ, ಕವಿತೆಗಳಲ್ಲಿ, ನಾಟಕಗಳಲ್ಲಿ ನಾವೆಲ್ಲರೂ ಓದಿದ್ದೇವೆ. ‘ಮುಟ್ಟಿಸಿಕೊಂಡವನು’ ಎನ್ನುವ ಕಥೆ ಡಾ. ತಿಪ್ಪೇಸ್ವಾಮಿಯವರ ನಿಜ ಘಟನೆಯಾಗಿದ್ದು ಸಮಾಜದ ಕಣ್ಣು ತೆರೆಸುವಂತಿದೆ. ಆದರೆ ಈಗಲೂ ಈ ಕ್ಷಣಕ್ಕೂ ಜಾತಿಯ ಮನಸ್ಸು ಕಣ್ಣು ಮುಚ್ಚಿ ಕೂತಿದೆ.
ತಳಸಮುದಾಯದಿಂದ ಬಂದ ದೊಡ್ಡವರೆನಿಸಿಕೊಂಡವರು ಕೂಡ ಎಲ್ಲರಿಗೂ ಗೌರವ ಕೊಟ್ಟು ಮಾತನಾಡಿಸುತ್ತಾರೆ. ಭೀಮಾಸಾಹೇಬರಿಗೆ ಈ ದೇಶದ ಎಲ್ಲಾ ಮಹಿಳೆಯರ ಬಗ್ಗೆ ಅಪಾರ ಗೌರವವಿತ್ತು. ಅವರ ಬರವಣಿಗೆಯಲ್ಲಿ ಮತ್ತು ಭಾಷಣದಲ್ಲಿ ಇಂಡಿಯನ್ ವುಮೆನ್ ಅಂತ ಬಳಸುತ್ತಿದ್ದರು. ದುರಂತವೆಂದರೆ ಮಹಿಳೆಯರಿಗಾಗಿ ಶೇ.33 ಮೀಸಲಾತಿ ಕೇಳಿ ಪಾರ್ಲಿಮೆಂಟಿನಲ್ಲಿ ಈ ಮಸೂದೆಗೆ ಸೋಲಾದಾಗ ರಾಜೀನಾಮೆ ಕೊಟ್ಟು ಹೊರ ಬರುತ್ತಾರೆ. ಭಾರತದ
ರಾಜಕೀಯ ಇತಿಹಾಸದಲ್ಲಿ ಮಹಿಳೆಯರ ಒಳಿತಿಗಾಗಿ ಅತ್ಯುನ್ನತ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು ಹೊರಬಂದ ಉದಾರಣೆ ಇಲ್ಲ. ಆದರೆ ಏನೋ ! ಶ್ರೇಷ್ಠ ಜಾತಿ ಎನಿಸಿಕೊಂಡ ಮಹಿಳೆಯರು 33 ಶೇ. ಮೀಸಲಾತಿ ಕೇಳಿದ್ದಕ್ಕೆ ಭೀಮ ಸಾಹೇಬರ ಮನೆ ಹತ್ತಿರ ಅವರ ವಿರುದ್ಧ ಪ್ರತಿಭಟನೆ ಮಾಡಿದರು. ಆದರೆ ಈಹೊತ್ತು ಎಲ್ಲಾ ಸಮುದಾಯದ ಹೆಣ್ಣು ಮಕ್ಕಳು ಕಲಿಯುತ್ತಿದ್ದಾರೆ, ಕೆಲಸ ಮಾಡುತ್ತಿದ್ದಾರೆ, ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇವಕ್ಕೆಲ್ಲ ಮೂಲ ಕಾರಣ ಭೀಮ ಸಾಹೇಬರು ಎನ್ನುವುದನ್ನು ಮರೆತಿದ್ದಾರೆ. ಈ ಕುರಿತು ನಮ್ಮ ದೇವನೂರ ಮಹಾದೇವ ಅವರ ಒಂದು ಮಾತಿದೆ. ಈ ದೇಶದ ಪ್ರತಿಯೊಬ್ಬ ಮಹಿಳೆಯರು ದಿನನಿತ್ಯ ಬಾಬಾ ಸಾಹೇಬರಿಗೆ ಒಂದು ಹೂವನ್ನಿಡಬೇಕು. ಹೂವನ್ನು ಇಡದಿದ್ದರೆ ಹೋಗಲಿ, ಕೆಲವು ಸಮುದಾಯದ ಹೆಣ್ಣು ಮಕ್ಕಳು ಅವರ ಹೆಸರನ್ನು ಹೇಳುವುದಕ್ಕೆ ಮುಜುಗರ ಪಡುತ್ತಾರೆ. ಅವರ ಜ್ಞಾನ ಅಥವಾ ಅರಿವಿಗಾದರೂ ಅವರ ಬಗ್ಗೆ ತಿಳಿದುಕೊಂಡರೆ ಅವರು ಇನ್ನಷ್ಟು ಬಲಿಷ್ಠರಾಗುತ್ತಾರೆ ಎನ್ನುವುದು ನನ್ನ ಭಾವನೆ. ಆದರೆ ಈ ಹೊತ್ತಿನ ಗ್ರಾಮಭಾರತ ಮತ್ತು ಯಾವತ್ತಿನ ಭಾರತವು ದಲಿತ ಹೆಣ್ಣುಮಕ್ಕಳನ್ನು ಕೇವಲವಾಗಿ ನೋಡುವುದು ತಪ್ಪಿಲ್ಲ. ಅವರ ಮೇಲೆ ನಡೆಯುವ ಅತ್ಯಾಚಾರದಂತಹ ಕ್ರೂರ ಘಟನೆಗಳು, ಸಾವು ನೋವುಗಳನ್ನು ನೆನಸಿಕೊಂಡರೆ ದೇಹ ಕಲ್ಲಾಗಿ ಬಿಡುತ್ತದೆ. ಅಷ್ಟೊಂದು ಕ್ರೂರವಾಗಿ ದಲಿತ ಹೆಣ್ಣುಮಕ್ಕಳನ್ನು ಉಳಿದ ಸಮುದಾಯದ ಕ್ರೂರಿಗಳು ಅಗೌರವದಿಂದ ನಡೆಸಿಕೊಂಡಿದ್ದಾರೆ. ಇಂತಹ ಅನ್ಯಾಯಗಳ ಬಗ್ಗೆ ಅಂಕಿ ಅಂಶಗಳನ್ನು ಕೇಳುತ್ತಿದ್ದರೆ ಕಿವಿ ಮುಚ್ಚಿಕೊಳ್ಳಬಾರದೇ, ಕಣ್ಣು ಕುರುಡಾಗಬಾರದೇ ಅನ್ನಿಸುತ್ತದೆ. ಇವೆಲ್ಲವನ್ನು ಹೇಳುವುದಕ್ಕೆ ಕಾರಣವಿದೆ.
ಈ ಘಟನೆ ನಡೆದಿದ್ದು ಹಾಸನ ಜಿಲ್ಲೆಯ ಸಕಲೇಶಪುರದ ಮಲೆನಾಡಿನಲ್ಲಿರುವ ಹೊಂಗಡಹಳ್ಳ ಗ್ರಾಮ ಪಂಚಾಯತ್‌ನಲ್ಲಿ. ಆರು ಸದಸ್ಯರಿರುವ ಈ ಪಂಚಾಯತ್‌ನಲ್ಲಿ ಏಕೈಕ ದಲಿತ ಮಹಿಳೆಯೂ ಕೂಡ ಇದ್ದಾರೆ. ಕಳೆದ 75 ವರ್ಷಗಳಿಂದ ಈ ಗ್ರಾಮ ಪಂಚಾಯತ್‌ನಲ್ಲಿ ದಲಿತರು ಅಧ್ಯಕ್ಷರಾಗಿಯೇ ಇಲ್ಲ. ಜನಾಧಿಕಾರದ ಕಾನೂನಿನಂತೆ ಸರದಿ ಪ್ರಕಾರ ಎಲ್ಲಾ ಸಮುದಾಯದವರು ಅಧ್ಯಕ್ಷ , ಉಪಾಧ್ಯಕ್ಷರಾಗುತ್ತಾರೆ. ಹಾಗೆ ಸರದಿಯಂತೆ ಈ ಬಾರಿ ದಲಿತ ಹೆಣ್ಣುಮಗಳಿಗೆ ಅಧ್ಯಕ್ಷೆಯಾಗುವ ಅವಕಾಶ ಕೂಡಿ ಬಂದಿದೆ. ಆದರೆ ದಲಿತ ಹೆಣ್ಣುಮಗಳೊಬ್ಬರು ಅಧ್ಯಕ್ಷರಾಗುವುದನ್ನು ಉಳಿದ ಸಮುದಾಯದವರು ಸಹಿಸಿಕೊಂಡಿಲ.್ಲ ಚುನಾವಣಾ ಅಧಿಕಾರಿ ಅಧ್ಯಕ್ಷರಾಗುವ ಸಮಯ ಮತ್ತು ದಿನಾಂಕ ಗೊತ್ತು ಮಾಡಿದ್ದಾರೆ. ಆ ದಿನ ಸಮಯಕ್ಕೆ ಸರಿಯಾಗಿ ಅಧ್ಯಕ್ಷರಾಗುವ ವನಜಾಕ್ಷಿ ಅವರು ಕೂಡ ಬಂದಿದ್ದಾರೆ. ಆದರೆ ಉಳಿದ ಸಮುದಾಯದ ಸದಸ್ಯರು ಗೈರುಹಾಜರಾಗಿದ್ದರು. ಇದಕ್ಕೆ ಮುಖ್ಯ ಕಾರಣ ಆಕೆ ದಲಿತ ಎಂಬುದು. ಇದರಿಂದ ನೊಂದ ಹೆಣ್ಣುಮಗಳು ಉಳಿದ ಸಮುದಾಯದವರು ಅಧ್ಯಕ್ಷರಾಗುವಾಗ ನಾನು ದಿನದ ಕೂಲಿಯನ್ನೇ ಬಿಟ್ಟು ಬಂದು ಅವರಿಗೆ ಸಹಕರಿಸಿದ್ದೇನೆ ಮತ್ತು ಅವರು ಅಧ್ಯಕ್ಷರಾದಾಗ ನೋಡಿ ಸಂತೋಷಪಟ್ಟಿದ್ದೇನೆ. ಆದರೆ ನಾನು ಅಧ್ಯಕ್ಷರಾಗುವಾಗ ನನಗೇಕೆ ಅವಮಾನ ಮಾಡಿ ನೋಯಿಸಿದ್ದಾರೆ ಎಂದು ನೊಂದು ಕಣ್ಣೀರಿಟ್ಟಿದ್ದಾರೆ ಎನ್ನುವ ಸುದ್ದಿ ನಾಡಿನಲ್ಲೆಲ್ಲಾ ಬಿತ್ತರವಾಗಿ ಇದು ಸರಕಾರದ ಗಮನಕ್ಕೆ ಹೋಗಿದೆ.
ಇದು ಬರಿ ಹೊಂಗಡ ಹಳ್ಳದಲ್ಲಿ ನಡೆಯುವ ಘಟನೆಮಾತ್ರವಲ್ಲ, ಇಡೀ ದೇಶದ ಗ್ರಾಮ ಭಾರತದಲ್ಲಿ ನಡೆಯುತ್ತಿರುವ ಘಟನೆಗಳು. ಇದರಿಂದ ಈ ಸಮಾಜದ ಜಾತಿಯ ಮನಸ್ಸು ಎಷ್ಟು ಜಡ್ಡುಗಟ್ಟಿದೆ ಎನ್ನುವುದು ಎದ್ದು ಕಾಣುತ್ತದೆ. ಒಂದೆರಡು ದಿನಗಳ ನಂತರವಾದರೂ ವನಜಾಕ್ಷಿ ಅವರು ಅಧ್ಯಕ್ಷರಾಗಿದ್ದು ನನ್ನಂತಹ ಲಕ್ಷಾಂತರ ಜನರಿಗೆ ಖುಷಿಯಾದ ಸಂಗತಿಯಾಗಿತ್ತು. ಇಂತಹ ಘಟನೆಗಳು ಅಲ್ಲಲ್ಲಿ ಮಿನುಗು ದೀಪದಂತೆ ಕಂಡು ಬರುತ್ತದೆ. ಆದರೆ ಕಟ್ಟ ಕಡೆಯ ಸಮುದಾಯದ ಹೆಣ್ಣುಮಗಳೊಬ್ಬರು ಗ್ರಾಮ ಪಂಚಾಯತ್ ಅಧ್ಯಕ್ಷರಾಗುವ ಮೂಲಕ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವಾದರೂ. ಅಂಬೇಡ್ಕರ್ ಕಂಡ ಕನಸು ನನಸಾಗುತ್ತಿದೆ ಎನ್ನುವುದು ಸಮಾಧಾನದ ಸಂಗತಿಯಾಗಿದೆ.
ಮೊನ್ನೆ ಬೆಳಗಾವಿಯ ಮೇಯರ್ ಆಗಿ ಆಯ್ಕೆಯಾದ ಸವಿತಾ ಕಾಂಬಳೆ ಅವರ ಪುಟ್ಟ ಮನೆಯ ಮುಂದೆ ದೊಡ್ಡ ಕಾರು ನಿಂತದ್ದನ್ನು ನೋಡಿ ನನ್ನಂಥವರಿಗೆ ಸಂತೋಷ ಇಮ್ಮಡಿಯಾಯಿತು. ಎಲ್ಲಾ ಸ್ಥಾನಮಾನಗಳು ಯಾವುದೇ ಶ್ರೇಷ್ಠ ಜಾತಿ, ಧರ್ಮ-ದೇವರುಗಳು ಕೊಟ್ಟಿರುವುದಲ್ಲ. ಈ ಎಲ್ಲಾ ಅವಕಾಶಗಳು ನಮ್ಮ ಪವಿತ್ರ ಸಂವಿಧಾನದಿಂದಾಗಿ ಬಂದದ್ದು. ಆದ್ದರಿಂದ ನಾವುಗಳು ಸಂವಿಧಾನವನ್ನು ತಿಳಿದುಕೊಂಡರೆ ಸಂವಿಧಾನ ನಮಗೆ ಏನೆಲ್ಲಾ ಕೊಡುತ್ತದೆ ಎನ್ನುವುದು ತಿಳಿಯುತ್ತದೆ.
ಇದೆಲ್ಲವನ್ನು ನೆನೆಯುವಾಗ ಭೀಮಾ ಸಾಹೇಬರ ಮೇರು ವ್ಯಕ್ತಿತ್ವಕ್ಕೆ ಕಾರಣರಾದ ಪ್ರಮುಖ ಜೀವ ಅವರ ಪತ್ನಿ ತಾಯಿ ರಮಾಬಾಯಿ ಅವರನ್ನು ನೆನಪು ಮಾಡಿಕೊಳ್ಳಲೇಬೇಕು.
ಭೀಮಾಸಾಹೇಬರು ತನ್ನ ಸಮುದಾಯಕ್ಕೆ ಜೀವ ಸವೆಸಿದರೆ, ಭೀಮಾ ಸಾಹೇಬರಿಗಾಗಿ ಅವರ ಪತ್ನಿ ತಾಯಿ ರಮಾಬಾಯಿ ಜೀವ ಕೊಡುತ್ತಿದ್ದರು. ಭೀಮಾಸಾಹೇಬರು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ರಮಾಬಾಯಿಯವರಿಗೆ ಬರೆದ ಪತ್ರದ ಸಾಲು ಹೀಗಿದೆ. ‘‘ನೀನು ಇರದಿದ್ದರೆ ನಾನೊಂದು ಕೊರಡಾಗಿ ಹೋಗುತ್ತಿದ್ದೆ ರಮಾ’’ ಎನ್ನುವ ಸಾಲು ಭೀಮಾಸಾಹೇಬರಿಗೆ ರಮಾಬಾಯಿ ಎಷ್ಟು ಪೂರಕವಾಗಿದ್ದರು ಮತ್ತು ಜೀವವಾಗಿದ್ದರು ಎಂದು ತಿಳಿಯುತ್ತದೆ. ಹೆಣ್ಣು ವೈಯಕ್ತಿಕವಾಗಿರುವುದಿಲ್ಲ, ಆಕೆ ಒಂದು ಕುಟುಂಬ, ಒಂದು ಸಮುದಾಯ, ಒಂದು ಲೋಕ ಎಂದು ತಿಳಿಯದಿದ್ದರೆ ನಮ್ಮನ್ನು ನಾವು ಕಳೆದುಕೊಂಡಂತೆ.
ತಾಯಿ ರಮಾಬಾಯಿಯವರು ಮಾಡಿದ ಮೊಟ್ಟಮೊದಲ ಭಾಷಣ ಹೀಗಿದೆ ‘‘ಜಗತ್ತಿನ ಕ್ರಾಂತಿ ಮತ್ತು ಚಳವಳಿಗಳು ಯಾವ ಆಧಾರದ ಮೇಲೆ ನಡೆಯುತ್ತವೆ ಎಂದರೆ ತ್ಯಾಗದ ಆಧಾರದ ಮೇಲೆ ನಡೆಯುತ್ತವೆ. ತ್ಯಾಗವಿಲ್ಲದೆ ಯಾವ ಚಳವಳಿಯು ಸಫಲವಾಗುವುದಿಲ್ಲ .ಹಾಗೆ ಅರಿವು ಬಹಳ ಮುಖ್ಯವಾಗುತ್ತದೆ. ಅರಿವಿಲ್ಲದ ಯಾವ ಚಳವಳಿಗಳ ಹೆಜ್ಜೆಗಳು ಚಲಿಸುವುದಿಲ್ಲ’’. ಭೀಮಾ ಸಾಹೇಬರ ನೆರಳಿನಲ್ಲಿ ಉಸಿರಾಡಿದ ರಮಾಬಾಯಿ ಅವರ ಮಾತುಗಳು ಜಗತ್ತಿಗೆ ಮಾದರಿಯಾದಂತಹವು. ಈ ಮಾತುಗಳಿಗೆ ಮತ್ತು ಭೀಮಾಸಾಹೇಬರ ಒಳಗಿದ್ದು ಬದುಕಿದ್ದಕ್ಕೆ ಅವರಿಗೆ ನಾವು ಎಷ್ಟು ಕೃತಜ್ಞರಾಗಿದ್ದರೂ ಸಾಲದು. ಭೀಮಾಸಾಹೇಬರಿಗೆ ಸಲ್ಲಿಸುವ ಗೌರವದಲ್ಲಿ ಒಂದು ತೂಕ ಹೆಚ್ಚು ರಮಾಬಾಯಿ ಅವರಿಗೆ ಸಲ್ಲಿಸಬೇಕು. ಆಗ ಭೀಮಾಸಾಹೇಬರಿಗೆ ನಿಜ ಗೌರವ ಸಮರ್ಪಣೆಯಾದಂತಾಗುತ್ತದೆ.
ಇಂದಿನ ದಿನಗಳಲ್ಲಿ ಭೀಮಾಸಾಹೇಬರನ್ನು ಎಪ್ರಿಲ್ 14ರಂದು ಮತ್ತು ಡಿಸೆಂಬರ್ 6ರಂದು ಸಹಜವಾಗಿ ನೆನಪು ಮಾಡಿಕೊಳ್ಳುತ್ತೇವೆ. ಆದರೆ ಪ್ರತಿ ದಿನ ಪ್ರತೀಕ್ಷಣ ನಾವು ಅವರನ್ನು ನೆನಪುಮಾಡಿಕೊಳ್ಳುವುದು ಇಂದು ಅನಿವಾರ್ಯವಾಗಿದೆ. ಅವರು ಕೊಟ್ಟ ಸಂವಿಧಾನವನ್ನು ನಮ್ಮ ಉಸಿರಾಗಿಸಿಕೊಳ್ಳುವ ಅಗತ್ಯವಿದೆ. ಈ ಕಾರಣದಿಂದ ನವೆಂಬರ್ 26ರಂದು ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ದಿನದ ಅಂಗವಾಗಿ ನಮ್ಮ ಪವಿತ್ರ ಸಂವಿಧಾನದ ಪ್ರಸ್ತಾವನೆಯನ್ನು ವಿಧಾನಸೌಧದ ಮುಂದೆ ಸಾವಿರಾರು ಜನರು ನಿಂತು ಓದಿದ್ದರು. ಇದೇ ಕಾರ್ಯ ಆ ದಿನ ನಾಡಿನೆಲ್ಲೆಡೆ ಅನುರಣಿಸಿತು. ಈ ಪ್ರಸ್ತಾವನೆಯ ಓದು ಹೀಗೆ ಎಷ್ಟು ವ್ಯಾಪಕವಾಗಿ ಹರಡಿದೆ ಎಂದರೆ ನಮ್ಮ ಎಲ್ಲಾ ಶಾಲಾ ಕಾಲೇಜುಗಳು, ಸಭೆ ಸಮಾರಂಭಗಳು, ಜನಸಾಮಾನ್ಯರು ಕೂಡ ಸಂವಿಧಾನದ ಪ್ರಸ್ತಾವನೆಯನ್ನು ಎದೆಗಿಳಿಸಿಕೊಳ್ಳುತ್ತಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳ ಅಮೃತ ಮಹೋತ್ಸವದ ಸವಿಯನ್ನು ಪ್ರಸ್ತಾವನೆ ಓದು ಮತ್ತು ಸಂವಿಧಾನದ ಜಾಗೃತಿ ಅರಿವಿನ ಜಾಥಾ ಹಳ್ಳಿ-ಪಟ್ಟಣ, ನಗರ, ಸ್ಕೂಲ್, ಕಾಲೇಜುಗಳು ಎಲ್ಲಾ ಬೀದಿ ಬೀದಿಗಳಲ್ಲಿ ತುಂಬಿ ಹೋಗಿದೆ.
ದೇವನೂರ ಮಹಾದೇವ ಅವರ ಒಂದು ಮಾತು ನೆನಪಿಗೆ ಬರುತ್ತಿದೆ ‘‘ಎಲ್ಲಾ ಬೀದಿಗಳಿಂದಲೂ ಪುಟ್ಟ ಪುಟ್ಟ ಅಂಬೇಡ್ಕರ್ ಬರುತ್ತಿದ್ದಾರೆ’’. ಅಂತಹ ಮಾತನ್ನು ಈಗಿನ ಘನ ಸರಕಾರ ಸಂವಿಧಾನ ಜಾಗೃತ ಅಭಿಯಾನವನ್ನು ನಾಡಿನೆಲ್ಲೆಡೆ ದಿನಾಂಕ ಫೆಬ್ರವರಿ 24, 25, 2024ರ ಐಕ್ಯತಾ ಸಮಾವೇಶ ಹಮ್ಮಿಕೊಂಡಿದ್ದು ಬುದ್ಧ, ಬಸವ, ಭೀಮಾಸಾಹೇಬರ ಆಶಯಗಳು ಕನಸುಗಳನ್ನು ಶಾಶ್ವತವಾಗಿ ನೆಲೆಯೂರುವಂತೆ ಮಾಡಿದೆ. ಈ ಐತಿಹಾಸಿಕ ಸಮಾವೇಶವು ನಮ್ಮ ಜಗದ ಕವಿ ಕುವೆಂಪುರವರು ಹೇಳಿದ ಸರ್ವಜನಾಂಗದ ಶಾಂತಿಯ ತೋಟಕ್ಕೆ ಸಾಕ್ಷಿಯಾಗಿದೆ.
ಶುಭನುಡಿಗಳನ್ನು 100 ಸಲ ಹೇಳೋಣ. ಆಗ ನಮ್ಮ ಹೃದಯ ಮತ್ತು ಮನಸ್ಸು ಅದಕ್ಕೆ ಒಗ್ಗಿಕೊಳ್ಳುತ್ತಾ ಹೋಗುತ್ತದೆ. ಆಗ ತ್ವೇಷಮಯ ವಾತಾವರಣ ಕೂಡ ತಿಳಿಯಾಗುತ್ತದೆ. ‘‘ಒಳ್ಳೆಯ ಮನಸ್ಸಿನ ಪ್ರಾರ್ಥನೆ ಒಳ್ಳೆಯತನದ ಕ್ಷಣಗಳಿಗೆ ಸಾಕ್ಷಿಯಾಗುತ್ತದೆ’’ ಎನ್ನುವ ಬುದ್ಧ ಗುರುಗಳ ಮಾತನ್ನು ನೆನೆಯುತ್ತಾ ನಾಳೆಗಾಗಿ ಮತ್ತು ಒಳ್ಳೆಯ ನಾಳೆಗಳಿಗಾಗಿ ಮುನ್ನಡೆಯೋಣ.