ಪ. ಬಂಗಾಳದ ಮತದಾರರ ಪಟ್ಟಿಯಲ್ಲಿ ತಿರುಚುವಿಕೆ ನಡೆಯುತ್ತಿದೆಯೇ?

ಪಶ್ಚಿಮ ಬಂಗಾಳ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ.ಆದರೆ ಅಲ್ಲಿ ರಾಜಕೀಯ ಈಗಾಗಲೇ ಬಿಸಿಯೇರುತ್ತಿದೆ.
ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಾಗಲೇ ಚುನಾವಣೆಯ ಅಬ್ಬರ ಶುರು ಮಾಡಿಯಾಗಿದೆ. ಸತತ ನಾಲ್ಕನೇ ಅವಧಿಗೆ ಅಧಿಕಾರ ಹಿಡಿಯುವ ನಿರೀಕ್ಷೆಯಲ್ಲಿ ಅವರಿದ್ದಾರೆ.
ಆದರೆ ಟಿಎಂಸಿ ನಾಯಕಿ ಒತ್ತಿ ಹೇಳಿದ ಇನ್ನೊಂದು ವಿಷಯವೆಂದರೆ, ಪಶ್ಚಿಮ ಬಂಗಾಳದಲ್ಲಿ ನಕಲಿ ಮತದಾರರಿದ್ದಾರೆ ಎಂಬುದು.
ಟಿಎಂಸಿ ಆರೋಪವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಆದರೆ ಟಿಎಂಸಿ ಅದಕ್ಕೀಗ ಅಂತಿಮ ಗಡುವು ನೀಡಿದೆ.
ಮಮತಾ ಬ್ಯಾನರ್ಜಿ ಗುರುವಾರ ಎರಡು ವಿಚಾರಗಳನ್ನು ಗುರಿಯಾಗಿಸಿ ಮಾತನಾಡಿದ್ದಾರೆ. ಮೊದಲನೆಯದು ಬಿಜೆಪಿ ಹಾಗೂ ಎರಡನೆಯದು ಚುನಾವಣಾ ಆಯೋಗ.
ಕೋಲ್ಕತಾದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಪಕ್ಷ 294 ವಿಧಾನಸಭಾ ಸ್ಥಾನಗಳಲ್ಲಿ ಕನಿಷ್ಠ ಮೂರನೇ ಎರಡರಷ್ಟನ್ನು ಗೆಲ್ಲುವುದಾಗಿ ಘೋಷಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದರ ಬಗ್ಗೆ ಅವರು ಪ್ರತಿಪಾದಿಸಿದರು. ಕಳೆದ ಬಾರಿಗಿಂತ ಹೆಚ್ಚಿನ ಗೆಲುವನ್ನು ಸಾಧಿಸಲು ತಮ್ಮ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಗಮನಹರಿಸಬೇಕು ಎಂದು ಹೇಳಿದರು.
ಅದೇ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರು ಭಾರತದ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಜ್ಞಾನೇಶ್ ಕುಮಾರ್ ಅವರನ್ನು ಹೊಸ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದ್ದನ್ನು ಟೀಕಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳ ಬಗ್ಗೆ ಅವರು ಬಹಿರಂಗಪಡಿಸಿದರು.
ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಹರ್ಯಾಣಗಳಿಂದ ಹೆಸರುಗಳನ್ನು ನೋಂದಾಯಿಸುವ ಮೂಲಕ ಬಂಗಾಳದಲ್ಲಿ ಎರಡು ಏಜೆನ್ಸಿಗಳು ಮತದಾರರ ಪಟ್ಟಿಯನ್ನು ತಿರುಚುವುದರಲ್ಲಿ ತೊಡಗಿವೆ ಎಂದು ಮಮತಾ ಆರೋಪಿಸಿದ್ದಾರೆ.
ತನ್ನ ಪರವಾಗಿ ನಕಲಿ ಮತದಾರರನ್ನು ಸೇರಿಸಿಕೊಳ್ಳಲು ಚುನಾವಣಾ ಆಯೋಗದೊಂದಿಗೆ ಸೇರಿ ಬಿಜೆಪಿ ಕುತಂತ್ರ ನಡೆಸುತ್ತಿದೆ ಎಂದು ಮಮತಾ ಆರೋಪಿಸಿದ್ದಾರೆ.
ಆದ್ಯತೆಯ ಮೇಲೆ ಈ ವಿಷಯವನ್ನು ಪರಿಶೀಲಿಸಲು ಪಕ್ಷದಲ್ಲಿ ಒಂದು ಸಮಿತಿಯನ್ನು ಕೂಡ ಮಮತಾ ಬ್ಯಾನರ್ಜಿ ರಚಿಸಿದ್ದಾರೆ.
ಚುನಾವಣಾ ಆಯೋಗ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಚುನಾವಣಾ ಆಯೋಗದ ಕಚೇರಿಯ ಹೊರಗೆ ಅನಿರ್ದಿಷ್ಟ ಪ್ರತಿಭಟನೆಗಳು ನಡೆಯಲಿವೆ ಎಂದು ಎಚ್ಚರಿಸಲಾಗಿದೆ.
ಟಿಎಂಸಿ ಆರೋಪಿಸಿದ ಪಟ್ಟಿಯಲ್ಲಿ ಪಶ್ಚಿಮ ಬಂಗಾಳ ಮತ್ತು ಹರ್ಯಾಣ, ಪಂಜಾಬ್ ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಇತರ ರಾಜ್ಯಗಳ ಮತದಾರರ ಪತ್ರಗಳಲ್ಲಿ ನಕಲಿ ಎಪಿಕ್ ಸಂಖ್ಯೆಗಳಿವೆ ಎಂದು ಹೇಳಲಾಗಿದೆ.
ಎಪಿಕ್ ಸಂಖ್ಯೆ ಚುನಾವಣಾ ಆಯೋಗದಿಂದ ನೀಡಲಾದ ಕಾರ್ಡ್ ಸಂಖ್ಯೆಯಾಗಿರುತ್ತದೆ. ಈ ಸಂಖ್ಯೆ ಮೂಲತಃ ಮತದಾರರು ಚುನಾವಣಾ ಆಯೋಗದಲ್ಲಿ ಅಧಿಕೃತವಾಗಿ ನೋಂದಾಯಿಸಿಕೊಂಡಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಈ ಸಂಖ್ಯೆ ಮತದಾರರಾಗಿ ನೋಂದಣಿ ಮಾಡಿಸಿಕೊಂಡಿರುವುದರ ಪುರಾವೆಯಾಗಿದೆ.
ಒಂದು ಸಂಖ್ಯೆ ಒಬ್ಬ ಮತದಾರರಿಗೆ ಮಾತ್ರ ಇರುತ್ತದೆ. ಆದರೆ ಟಿಎಂಸಿ ಬಹಿರಂಗಪಡಿಸಿರುವ ಪಟ್ಟಿ ಪಶ್ಚಿಮ ಬಂಗಾಳದಲ್ಲಿ ಹಲವು ಮತದಾರರ ಗುರುತಿನ ಚೀಟಿಗಳು ಒಂದೇ ಎಪಿಕ್ ಸಂಖ್ಯೆಯನ್ನು ಹೊಂದಿರುವುದರ ಬಗ್ಗೆ ಗಮನ ಸೆಳೆದಿದೆ.
ಆದರೆ, ಸಂಖ್ಯೆ ಒಂದೇ ಇದೆ ಎಂಬ ಕಾರಣಕ್ಕೆ ಅದನ್ನು ಹೊಂದಿರುವವರು ನಕಲಿ ಎನ್ನಲಾಗದು ಎಂದಿರುವ ಚುನಾವಣಾ ಆಯೋಗ ಈ ಬಗ್ಗೆ ಸ್ಪಷ್ಟೀಕರಣ ನೀಡಿದೆ.
ಮತದಾರರ ಗುರುತಿನ ಚೀಟಿಯ ಸಂಖ್ಯೆಗಳು ಒಂದೇ ಆಗಿದ್ದರೂ ಇತರ ವಿವರಗಳು ಬೇರೆ ಇರುತ್ತವೆ. ಎಪಿಕ್ ಸಂಖ್ಯೆ ಏನೇ ಇದ್ದರೂ, ಮತದಾರರು ತಮಗೆ ನಿಗದಿ ಮಾಡಲಾದ ಮತಗಟ್ಟೆಯಲ್ಲಿ ಮಾತ್ರ ಮತ ಚಲಾಯಿಸಬೇಕು ಎಂದು ಚುನಾವಣಾ ಆಯೋಗ ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಿದೆ.
ವಿಕೇಂದ್ರೀಕೃತ ಹಾಗೂ ಕಂಪ್ಯೂಟರ್ ಆಧರಿತವಲ್ಲದ ವ್ಯವಸ್ಥೆಯ ಕಾರಣದಿಂದಾಗಿ ಒಂದೇ ಬಗೆಯ ಎಪಿಕ್ ಸಂಖ್ಯೆಗಳು ಬೇರೆ ಬೇರೆ ರಾಜ್ಯಗಳ ಮತದಾರರಿಗೆ ದೊರೆತಿವೆ ಎಂದು ಅದು ಹೇಳಿದೆ.
ಆದರೂ, ಎಲ್ಲಾ ಮತದಾರರಿಗೆ ಯೂನಿಕ್ ಎಪಿಕ್ ಸಂಖ್ಯೆಗಳನ್ನು ನೀಡುವ ಮೂಲಕ ಈ ದೋಷವನ್ನು ಸರಿಪಡಿಸಲಾಗುವುದು ಎಂದು ಆಯೋಗ ಹೇಳಿದೆ.
ಟಿಎಂಸಿ ಸಂಸದ ಡೆರಿಕ್ ಒಬ್ರಿಯಾನ್ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಇದನ್ನು ಎಪಿಕ್ ಸ್ಕ್ಯಾಮ್ ಎಂದು ಕರೆದಿದ್ದಾರೆ. ಪಕ್ಷ ಈ ವಿಷಯದ ಬಗ್ಗೆ ಪತ್ರಿಕಾಗೋಷ್ಠಿ ನಡೆಸುವುದಾಗಿ ಘೋಷಿಸಿದ ನಂತರವೇ ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಿದೆ ಎಂದು ಒಬ್ರಿಯಾನ್ ಹೇಳಿದ್ದಾರೆ.
ಚುನಾವಣಾ ಆಯೋಗ ದೋಷವನ್ನು ಒಪ್ಪಿಕೊಂಡಿದೆ ಎಂದು ಹೇಳಿದ ಅವರು, ಚುನಾವಣಾ ಆಯೋಗಕ್ಕೆ 24 ಗಂಟೆಗಳ ಅಂತಿಮ ಗಡುವನ್ನು ಸಹ ನೀಡಿದ್ದಾರೆ.
ಈ ವಿಷಯದ ಬಗ್ಗೆ ಚುನಾವಣಾ ಆಯೋಗ ದೋಷವನ್ನು ಒಪ್ಪಿಕೊಳ್ಳುತ್ತಿದೆ. ಆದರೆ ತಪ್ಪನ್ನು ಒಪ್ಪಿಕೊಂಡಿಲ್ಲ. ಮುಂದಿನ 24 ಗಂಟೆಗಳಲ್ಲಿ ನೀವು ಇದನ್ನು ಮಾಡದಿದ್ದರೆ ಮತ್ತೊಂದು ದಾಖಲೆಯನ್ನು ಹಂಚಿಕೊಳ್ಳುತ್ತೇವೆ. ಇದು ಬೆದರಿಕೆಯಲ್ಲ ಎಂದಿದ್ದಾರೆ.
ಟಿಎಂಸಿ ನಾಯಕರು ಮುಂದಿನ ಕೆಲವು ದಿನಗಳಲ್ಲಿ ಎಲ್ಲಾ ಡೇಟಾವನ್ನು ಸಂಗ್ರಹಿಸುವುದಾಗಿ ಹೇಳುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿ ಯಾವುದೇ ವೈಪರೀತ್ಯಗಳಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಅವರ ಉದ್ದೇಶ.
ಮತದಾರರ ಪಟ್ಟಿಗಳಲ್ಲಿ ವೈಪರೀತ್ಯಗಳ ಕುರಿತ ಆರೋಪಗಳು ಹೊಸದಲ್ಲ. ಮತದಾರರ ಸಂಖ್ಯೆಯಲ್ಲಿ ಅಸಾಧಾರಣವಾಗಿ ಹೆಚ್ಚಳವನ್ನು ಸೂಚಿಸುವ ವರದಿಗಳಿವೆ.
ಚುನಾವಣೆಗೆ ಮುಂಚಿತವಾಗಿ ಹರ್ಯಾಣ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಸೇರಿಸಲಾದ ಮತದಾರರ ಸಂಖ್ಯೆಯಲ್ಲಿ ಅಸಾಮಾನ್ಯವಾಗಿ ಹೆಚ್ಚಳವನ್ನು ಸೂಚಿಸುವ ವರದಿಗಳಿವೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮಹಾರಾಷ್ಟ್ರ ಚುನಾವಣೆಯಲ್ಲಿ ಮತದಾರರ ಪಟ್ಟಿಯನ್ನು ತಿರುಚಿದ್ದುದರ ಬಗ್ಗೆ ಲೋಕಸಭೆಯಲ್ಲೇ ಆರೋಪಿಸಿದ್ದರು.
ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಒಕ್ಕೂಟ ಗೆದ್ದ ಬಳಿಕ, ವಿಧಾನಸಭೆ ಚುನಾವಣೆಯ ವೇಳೆ ಹಿಮಾಚಲ ಪ್ರದೇಶದ ಒಟ್ಟು ಮತದಾರರ ಸಂಖ್ಯೆಯಷ್ಟು ಹೊಸ ಮತದಾರರನ್ನು ಮಹಾರಾಷ್ಟ್ರದ ಮತದಾರರ ಪಟ್ಟಿಗೆ ಹೊಸದಾಗಿ ಸೇರಿಸಲಾಯಿತು ಎಂದು ರಾಹುಲ್ ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಜನಸಂಖ್ಯೆ ಸುಮಾರು 70 ಲಕ್ಷ. ಅಷ್ಟೇ ಸಂಖ್ಯೆಯ ಹೊಸ ಮತದಾರರು ಮಹಾರಾಷ್ಟ್ರದಲ್ಲಿ ಇದ್ದಕ್ಕಿದ್ದಂತೆ ಮತದಾರರ ಪಟ್ಟಿಗೆ ಸೇರ್ಪಡೆಯಾದರು. ಐದು ವರ್ಷಗಳಲ್ಲಿ ಸೇರ್ಪಡೆಯಾದ ಮತದಾರರಿಗಿಂತಲೂ ಹೆಚ್ಚು ಮತದಾರರು ಐದೇ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಹೊಸದಾಗಿ ಸೇರ್ಪಡೆಯಾಗಿದ್ದರು ಎಂದು ರಾಹುಲ್ ಹೇಳಿದ್ದಾರೆ. ಶಿರಡಿಯ ಒಂದು ಕಟ್ಟಡದಲ್ಲಿಯೇ 7 ಸಾವಿರ ಹೊಸ ಮತದಾರರು ಸೇರ್ಪಡೆಯಾದರು ಎಂದಿದ್ದಾರೆ ರಾಹುಲ್.
ದಿಲ್ಲಿಯಲ್ಲಿ ಕೇಜ್ರಿವಾಲ್ ಸ್ಪರ್ಧಿಸುವ ಹೊಸ ದಿಲ್ಲಿ ಕ್ಷೇತ್ರವೊಂದರಲ್ಲೇ ಮೂವತ್ತೇಳು ಸಾವಿರ ಮತದಾರರ ಹೆಸರು ಪಟ್ಟಿಯಿಂದ ಮಾಯವಾಗಿತ್ತು. ಹರ್ಯಾಣ ಹಾಗೂ ಉತ್ತರ ಪ್ರದೇಶಗಳಲ್ಲೂ ಮತದಾರರ ಪಟ್ಟಿಯನ್ನು ತಿರುಚಿದ ಆರೋಪಗಳು ಕೇಳಿ ಬಂದವು.
ಆದರೆ ಪ್ರತೀ ಬಾರಿ ಇಂತಹ ಆರೋಪ ಬಂದಾಗ ಚುನಾವಣಾ ಆಯೋಗ ಅದನ್ನು ನಿರಾಕರಿಸಿಬಿಡುತ್ತದೆ. ನಿಕಟಪೂರ್ವ ಮುಖ್ಯ ಚುನಾವಣಾ ಆಯುಕ್ತರು ಆರೋಪ ಬಂದಾಗಲೆಲ್ಲಾ ಶಾಯರಿ ಹೇಳಿ ಮುಂದೆ ಸಾಗುತ್ತಿದ್ದರು. ಯಾವ ಪ್ರಶ್ನೆಗೂ ಸರಿಯಾದ ಉತ್ತರವನ್ನೇ ಅವರು ಕೊಡುತ್ತಿರಲಿಲ್ಲ. ಅವರ ತಂಡದಲ್ಲಿ ಚುನಾವಣಾ ಆಯುಕ್ತರಾಗಿದ್ದ ಜ್ಞಾನೇಶ್ ಕುಮಾರ್ ಅವರು ಈಗ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾರೆ. ಪ್ರಧಾನಿ ಮೋದಿಯವರ ಆಪ್ತ ಅಧಿಕಾರಿ ಎಂದೇ ಗುರುತಿಸಲಾಗಿದ್ದ ಇವರು ಈ ಹಿಂದೆ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ, ರಾಮ ಮಂದಿರ ಟ್ರಸ್ಟ್ ಮತ್ತಿತರ ವಿಷಯಗಳಲ್ಲಿ ಸರಕಾರದ ಪರವಾಗಿ ನಿರ್ಣಾಯಕ ಕೆಲಸ ಮಾಡಿದವರು.
ಟಿಎಂಸಿ ಈಗ ಮತದಾರರ ಪಟ್ಟಿ ತಿರುಚುವಿಕೆ ವಿಷಯವನ್ನು ಸಂಸತ್ತಿನಲ್ಲಿ ಎತ್ತಲು ಮತ್ತು ಚುನಾವಣಾ ಸಂಸ್ಥೆಗೆ ಪುರಾವೆಗಳನ್ನು ಒದಗಿಸಲು ಯೋಜಿಸಿದೆ.
ಕಾಂಗ್ರೆಸ್ ಮತದಾರರ ಪಟ್ಟಿಯಲ್ಲಿ ತಿರುಚುವಿಕೆ ಆರೋಪ ಮಾಡಿ ಸುಮ್ಮನಾಯಿತು. ಆ ಬಗ್ಗೆ ಒಂದು ಸೂಕ್ತ ಕಾನೂನು ಹೋರಾಟ ಸಂಘಟಿಸಲಿಲ್ಲ, ವಿಷಯವನ್ನು ಅದರ ತಾರ್ಕಿಕ ಅಂತ್ಯಕ್ಕೆ ತಲುಪಿಸಲಿಲ್ಲ
ಎಐಸಿಸಿ ಮತದಾನ ಪ್ರಕ್ರಿಯೆಗಳ ಮೇಲೆ ನಿಗಾ ಇಡಲೆಂದೇ ಒಂದು ಸಮಿತಿ ಮಾಡಿದೆ ಎಂದು ಆಮೇಲೆ ಹೇಳಲಾಯಿತು, ಆದರೆ ಅದಕ್ಕಿಂತ ಹೆಚ್ಚು ಏನೂ ಆಗಲಿಲ್ಲ. ಆದರೆ ತೃಣಮೂಲ ಕಾಂಗ್ರೆಸ್ ಹಾಗಲ್ಲ, ಪಶ್ಚಿಮ ಬಂಗಾಳದಲ್ಲಿ ತೀವ್ರ ಹೋರಾಟ ನಡೆಸಿ ಅಧಿಕಾರವನ್ನು ಉಳಿಸಿಕೊಂಡ ಪಕ್ಷ ಅದು. ಬಿಜೆಪಿಯ ಎಲ್ಲ ರಾಜಕೀಯ ಆಟಗಳನ್ನು ಯಶಸ್ವಿಯಾಗಿ ಎದುರಿಸಿ ಮತ್ತೆ ಮತ್ತೆ ಚುನಾವಣೆ ಗೆದ್ದ ಪಕ್ಷ ಮಮತಾ ದೀದಿಯದ್ದು.
ಆಕೆಯ ಹಾಗೆ ಆಕೆಯ ಪಕ್ಷದ ನಾಯಕರೂ ಹಠಮಾರಿಗಳು. ಒಂದು ವಿಷಯ ಹಿಡಿದುಕೊಂಡರೆ ಅದನ್ನು ಕೊನೆ ಮುಟ್ಟಿಸಿಯೇ ಬಿಡುವ ಛಲ ಇರುವವರು. ಮತದಾರರ ಪಟ್ಟಿ ವಿಷಯದಲ್ಲಂತೂ ಎಡವುವ ಅವಕಾಶವೇ ಇಲ್ಲ ಎಂಬುದು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಬಹಳ ಚೆನ್ನಾಗಿ ಗೊತ್ತಿದೆ.
ಮತದಾರರ ಪಟ್ಟಿ ವಿಷಯದಲ್ಲಿ ತನಗಿರುವ ಸಂಶಯ ಸರಿಯಾಗಿ ನಿವಾರಣೆ ಆಗುವವರೆಗೆ ಟಿಎಂಸಿ ಚುನಾವಣಾ ಆಯೋಗದ ಬೆನ್ನು ಬಿಡುವ ಸಾಧ್ಯತೆ ಇಲ್ಲ. ಹಾಗಾಗಿ ಮುಂದಿನ ದಿನಗಳು ಮತ್ತು ವಾರಗಳಲ್ಲಿ ಈ ಕಥೆ ಹೇಗೆ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.