ಕೋಮು ರಾಜಕಾರಣದ ಮತಿಗೇಡಿತನದಲ್ಲಿ ಮೈಮರೆತ ಜನರೂ... ಸುಳ್ಳು, ಭ್ರಷ್ಟತೆಯನ್ನೇ ಉಸಿರಾಗಿಸುವ ರಾಜಕಾರಣಿಗಳೂ....

2019ರಲ್ಲಿ ಅಮೆರಿಕದ ಹೂಸ್ಟನ್‌ನಲ್ಲಿ ಎನ್‌ಆರ್‌ಐಗಳನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಪ್ರಧಾನಿ, ‘‘ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ’’ ಎಂದಿದ್ದರು.
ಅವರ ಮಾತಿಗೆ ಎನ್‌ಆರ್‌ಐಗಳು ಜೋರಾಗಿ ಚಪ್ಪಾಳೆ ತಟ್ಟಿದ್ದರು.
ಅಧಿಕೃತ ಅಂಕಿಅಂಶಗಳು ಹೇಳುವಂತೆ 2023ರಲ್ಲಿ ಭಾರತದಲ್ಲಿ ಸುಮಾರು 2 ಲಕ್ಷ ಜನರು ದೇಶದ ಪೌರತ್ವ ತೊರೆದಿದ್ದಾರೆ.
ಇತ್ತೀಚೆಗೆ ನಮ್ಮ ದೇಶದ ಸುಮಾರು 300 ಜನರನ್ನು ಅಮೆರಿಕದಿಂದ ಭಾರತಕ್ಕೆ ಸಂಕೋಲೆಗಳಲ್ಲಿ ಕಟ್ಟಿ ಮರಳಿ ಕಳಿಸಲಾಯಿತು. ಅವರು ವಿದೇಶಕ್ಕೆ ಹೋಗಲು ತಮ್ಮ ಗಳಿಕೆಯನ್ನೆಲ್ಲಾ ಖರ್ಚು ಮಾಡಿದವರಾಗಿದ್ದರು. ಸಾಲ ಸೋಲ ಮಾಡಿ, ಹೇಗಾದರೂ ಅಲ್ಲಿಗೆ ತಲುಪಬೇಕೆಂದು ಧೈರ್ಯ ಮಾಡಿದವರಾಗಿದ್ದರು. ಆದರೆ ಅವರಿಂದು ಅಪರಾಧಿಗಳಾಗಿ ಮತ್ತೆ ಇಲ್ಲಿ ಬಂದು ನಿಂತಿದ್ಧಾರೆ.
ಸತ್ಯ ಹೇಳಿದರೆ ಜನರು ನಿಮ್ಮನ್ನು ಕೊಲ್ಲಲು ಬರುತ್ತಾರೆ ಮತ್ತು ಸುಳ್ಳನ್ನು ನಂಬುತ್ತಾರೆ ಎಂದು ಸಂತ ಕಬೀರ್ ಹೇಳಿದ್ದರು.
ಈ ಬಾರಿಯ ದೊಡ್ಡ ಸತ್ಯವೆಂದರೆ, ಡೊನಾಲ್ಡ್ ಟ್ರಂಪ್ ಗೆಲುವಿಗಾಗಿ ಭಾರತದಲ್ಲಿ ಹವನಗಳನ್ನು ನಡೆಸಲಾಯಿತು. ಆದರೆ ಅವರು ಅಲ್ಲಿ ಅಕ್ರಮವಾಗಿ ನೆಲೆಸಿದ್ದವರೆಂದು ಸುಮಾರು 300 ಜನರನ್ನು ಸಂಕೋಲೆಯಲ್ಲಿ ಬಂಧಿಸಿ ವಾಪಸ್ ಕಳಿಸಿದರು. ಇನ್ನೂ ಕಳಿಸುತ್ತಲೇ ಇದ್ದಾರೆ.
ಬಿಜೆಪಿಯ ದೊಡ್ಡ ರಾಜಕಾರಣಿಗಳು ಇದರ ಬಗ್ಗೆ ಮಾತಾಡುತ್ತಲೇ ಇಲ್ಲ.
ಆದರೆ ಕೇವಲ 5 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಕೊಲಂಬಿಯಾ, ತನ್ನ ನಾಗರಿಕರನ್ನು ಅಪರಾಧಿಗಳಂತೆ ನಡೆಸಿಕೊಳ್ಳುವುದನ್ನು ತೀವ್ರವಾಗಿ ವಿರೋಧಿಸಿತು ಮತ್ತು ಕೊಲಂಬಿಯಾದಲ್ಲಿ ಯುಎಸ್ ಮಿಲಿಟರಿ ವಿಮಾನಗಳನ್ನು ಇಳಿಯಲು ಬಿಡಲಿಲ್ಲ.
ನಂತರ, ಭಾರತದ ಉತ್ಪನ್ನಗಳಿಗೆ ತೆರಿಗೆ ದರಗಳನ್ನು ಹೆಚ್ಚಿಸುವುದಾಗಿ ಅಮೆರಿಕ ಹೇಳಿತು. ಅದನ್ನೂ ತುಟಿ ಪಿಟಿಕ್ಕೆನ್ನದೆ ಒಪ್ಪಿಕೊಳ್ಳಲಾಗಿದೆ.
ಬಜೆಟ್‌ನಲ್ಲಿ ತೆರಿಗೆ ವಿನಾಯಿತಿಯ ಆಕರ್ಷಣೆ ತೋರಿಸಲಾಗಿದೆ. ಆದರೆ, ಅಷ್ಟೇ ಮುಖ್ಯವೆಂದರೆ ಲಕ್ಷಾಂತರ ನಿರುದ್ಯೋಗಿ ಯುವಕರಿಗೆ ಉದ್ಯೋಗದ ತುರ್ತು ಅಗತ್ಯವಿದೆ. ಅದನ್ನೆಲ್ಲ ಮಾತಾಡುತ್ತಲೇ ಇಲ್ಲ.
ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ಡೆವಲಪ್ಮೆಂಟ್ ಮತ್ತು ಇಂಟರ್‌ನ್ಯಾಷನಲ್ ಲೇಬರ್ ಆರ್ಗನೈಸೇಶನ್
ಜಂಟಿಯಾಗಿ ಸಿದ್ಧಪಡಿಸಿದ ‘ಇಂಡಿಯಾ ಎಂಪ್ಲಾಯ್‌ಮೆಂಟ್ ರಿಪೋರ್ಟ್ 2024’ರ ಪ್ರಕಾರ, ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವ ಯುವಕರ ಶೇಕಡಾವಾರು ಪ್ರಮಾಣ 2022ರಲ್ಲಿ ಶೇ.37ಕ್ಕೆ ಇಳಿದಿದೆ.
ಇನ್ನೊಂದೆಡೆ, ನಾವು ಸಾಲದ ಹೊರೆಯಲ್ಲಿದ್ದೇವೆ.
ಸರಕಾರವೇ ನೀಡಿರುವ ದತ್ತಾಂಶದ ಪ್ರಕಾರ, 2024ರ ಮಾರ್ಚ್ 31ರವರೆಗೆ ನಮ್ಮ ದೇಶದ ಸಾಲ ಸುಮಾರು 172 ಲಕ್ಷ ಕೋಟಿ ರೂ.ಗಳಷ್ಟಿತ್ತು. 2025ರ ಮಾರ್ಚ್ 31ರ ವೇಳೆಗೆ ಅದು ರೂ. 185 ಲಕ್ಷ ಕೋಟಿಗಳನ್ನು ತಲುಪುವ ನಿರೀಕ್ಷೆಯಿದೆ.
ದೇಶದ ಪ್ರಸಕ್ತ ಸಾರ್ವಜನಿಕ ಸಾಲ ಒಟ್ಟು ಜಿಡಿಪಿಯ ಸುಮಾರು ಶೇ. 83ರಷ್ಟಿದೆ.
ಈ ಸಾಲದ ದರ ಶೇ. 83.6 ಆಗಿದ್ದು, 2027-28ರ ವೇಳೆಗೆ ಅದು ಶೇ. 83.6ರ ಆಸುಪಾಸಿನಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ. ಅಂತರ್‌ರಾಷ್ಟ್ರೀಯ ಹಣಕಾಸು ನಿಧಿಯ ಅಂದಾಜಿನ ಪ್ರಕಾರ ಈ ಅಂಕಿಅಂಶಗಳನ್ನು ಪ್ರಕಟಿಸಲಾಗಿದೆ.
ಭಾರತದ ಮಧ್ಯಮ ವರ್ಗ ಈಗ ಏರಿಕೆಯಾಗುವ ಬದಲು ಕುಸಿಯುತ್ತಿದೆ.
ವರದಿಗಳ ಪ್ರಕಾರ, 2019ಕ್ಕೆ ಹೋಲಿಸಿದರೆ 2024ರಲ್ಲಿ ಶ್ರೀಮಂತ ಕುಟುಂಬಗಳ ಸಂಖ್ಯೆ ಶೇ. 86ರಷ್ಟು ಹೆಚ್ಚಾಗಿದೆ. ಆದರೆ ಕೆಳ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳ ಸಂಖ್ಯೆ ಶೇ. 25ರಷ್ಟು ಕಡಿಮೆಯಾಗಿದೆ.
ಖಂಡಿತವಾಗಿಯೂ ಪ್ರಗತಿ ಆಗಿರುವುದು ಸಾಮಾನ್ಯ ಜನರದ್ದಲ್ಲ.
ಸಾಮಾನ್ಯ ತೆರಿಗೆದಾರರು ದೊಡ್ಡ ಕಾರ್ಪೊರೇಟ್‌ಗಳಿಗಿಂತ ಹೆಚ್ಚು ತೆರಿಗೆಯನ್ನು ಸರಕಾರಕ್ಕೆ ಕಟ್ಟುತ್ತಿದ್ದಾರೆ.
ನಮ್ಮ ದೇಶದಲ್ಲಿ ನಿರುದ್ಯೋಗ ದರ 2021ರಲ್ಲಿ ಶೇ. 6 ಇತ್ತು.
ಅದು 2024ರ ಜೂನ್‌ನಲ್ಲಿ ಶೇ.9.2ಕ್ಕೆ ಏರಿತು.
ವಲಸೆ ಅಂಕಿಅಂಶಗಳ ಬ್ಯೂರೋ ಪ್ರಕಾರ, 2023ರಲ್ಲಿ ಕೇವಲ 40,431 ವಿದೇಶಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಭಾರತಕ್ಕೆ ಬಂದಿದ್ದರು.
ಆದರೆ, 2023ರ ಅಕ್ಟೋಬರ್‌ವರೆಗೆ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 7.65 ಲಕ್ಷ ಮುಟ್ಟಿದೆ.
ಅಂಕಿಅಂಶಗಳ ಪ್ರಕಾರ ನಮ್ಮ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಎಲ್ಲವೂ ಸರಿಯಿಲ್ಲ.
ವಿದೇಶಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ನೋಡುತ್ತಿದ್ದರೆ, ದೇಶಕ್ಕೆ ಹೊರಗಿನಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆಯಿದೆ. ಭವಿಷ್ಯದಲ್ಲಿ ಏನಾಗಬಹುದು ಎಂಬುದರ ಬಗ್ಗೆ ಇದು ಕೊಡುವ ಚಿತ್ರಣ ಖಂಡಿತವಾಗಿಯೂ ಆಘಾತಕಾರಿಯಾಗಿದೆ.
ಜನರ ನಂಬಿಕೆಯ ಮೇಲೆ ಸವಾರಿ ಮಾಡಲಾಗುತ್ತದೆ.
ಮತ್ತದರ ಮೂಲಕ ನಿಜವಾದ ಅಂಕಿಅಂಶಗಳನ್ನೇ ಬದಿಗೆ ಸರಿಸುವ ರಾಜಕೀಯ ನಡೆಯುತ್ತದೆ.
ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯದ ಅಂಕಿಅಂಶಗಳನ್ನು ನಿರಾಕರಿಸುವ ಮೂಲಕ ರಾಜಕಾರಣಿಗಳು ಮತ್ತು ಅವರ ಸುತ್ತಲಿನ ಮಂದಿ ಸಾಮಾನ್ಯ ಜನರ ಆರೋಗ್ಯದೊಂದಿಗೆ ಆಟವಾಡುತ್ತಿದ್ದಾರೆ.
ಚುನಾವಣೆಯ ಸಮಯದಲ್ಲಿ ಸರಕಾರವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು.
ಈ ರಾಜಕೀಯ ನಿರ್ಧಾರಗಳು ದೇಶದ ಅಭಿವೃದ್ಧಿಯನ್ನು ನಿರ್ಧರಿಸುತ್ತವೆ.
180 ದೇಶಗಳಲ್ಲಿ ಭಾರತ ಭ್ರಷ್ಟಾಚಾರದ ವಿಷಯದಲ್ಲಿ 96ನೇ ಸ್ಥಾನದಲ್ಲಿದೆ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ವರದಿ ಹೇಳುತ್ತದೆ.
ಶೇ. 89 ಜನರು ಸರಕಾರಿ ಭ್ರಷ್ಟಾಚಾರ ದೊಡ್ಡ ಸಮಸ್ಯೆ ಎಂದು ಭಾವಿಸಿದ್ದಾರೆ.
ದೇಶದಲ್ಲಿ ಭ್ರಷ್ಟಾಚಾರ ಎಂಥದು ಎಂಬುದನ್ನು ಅಂಕಿ ಅಂಶಗಳು ಸ್ಪಷ್ಟವಾಗಿ ತೋರಿಸುತ್ತವೆ.
ಬೆಲೆಯೇರಿಕೆ, ಶಿಕ್ಷಣ, ಆರೋಗ್ಯ, ಉದ್ಯೋಗ, ಭ್ರಷ್ಟಾಚಾರ, ಮಹಿಳೆಯರ ಸುರಕ್ಷತೆ ಮುಂತಾದ
ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಬೇಕಾಗುತ್ತದೆ.
ಆದರೆ ಹಾಗಾಗಿದೆಯೇ? ಮತದಾರರು ತನ್ನ ರಾಜಕೀಯ ಹೊಣೆಗಾರಿಕೆಯನ್ನು ನಿಭಾಯಿಸಿದ್ದಾರೆಯೆ?
ಕಳೆದ ಹತ್ತು ವರ್ಷಗಳಿಂದಲೂ ಇದೇ ಸರಕಾರ ಇದೆ. ಒಬ್ಬನೇ ನಾಯಕನ ಆಳ್ವಿಕೆ ನಡೆಯುತ್ತಿದೆ.
ಅಷ್ಟಾಗಿಯೂ, ಜನರ ಬದುಕು ಉತ್ತಮವಾಯಿತೇ?, ಅಚ್ಛೇ ದಿನಗಳು ಬಂದವೇ? ಎಂದು ಕೇಳಿಕೊಂಡರೆ, ಇಲ್ಲ.
ಹತ್ತು ವರ್ಷಗಳ ಮೊದಲು ಎಲ್ಲಿ ಇದ್ದೇವೋ ಈಗಲೂ ಅಲ್ಲೇ ಇದ್ದೇವೆ. ಅಥವಾ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಿದೆ.
ನಮ್ಮ ಮುಂದಿರುವ ಸತ್ಯವನ್ನು ನಿರಾಕರಿಸುವ ರಾಜಕಾರಣಿಗಳು, ನಮ್ಮ ಸುತ್ತಲೂ ಭ್ರಮೆಯನ್ನು ಹರಡಿದ್ದಾರೆ.
ಆಶ್ಚರ್ಯಕರ ಸಂಗತಿಯೆಂದರೆ ನಾವು ಇದನ್ನು ನಮ್ಮ ಒಳಿತಿಗಾಗಿ ಅಲ್ಲ, ರಾಜಕಾರಣಿಗಳ ಒಳಿತಿಗಾಗಿ ಮಾಡುತ್ತಿದ್ದೇವೆ. ಭಾರತೀಯ ರಾಜಕೀಯದಲ್ಲಿ ನಾವು ಪರಸ್ಪರ ಶತ್ರುಗಳೆಂದು ಪರಿಗಣಿಸಿ ಮುಂದುವರಿದಿದ್ದೇವೆ.
‘‘ಇದು ಸರಿಯಲ್ಲ. ರಾಜಕೀಯ ವಿರೋಧಗಳಿವೆ, ಶತ್ರುಗಳಲ್ಲ’’ ಎಂದು ವಾಜಪೇಯಿ ಒಮ್ಮೆ ಹೇಳಿದ್ದರು.
ಇಂದು ಯಾವುದೇ ರಾಜಕೀಯ ಪೈಪೋಟಿ ಇಲ್ಲ ಮತ್ತು ರಾಜಕೀಯ ದ್ವೇಷವಿದೆ.
ಮತ್ತದು ಧರ್ಮದ ಹೆಸರಿನಲ್ಲಿದೆ. ರಾಜಕಾರಣಿಗಳು ಧರ್ಮ ಮತ್ತು ಭಾಷೆಯ ಹೆಸರಿನಲ್ಲಿ ರಾಜಕೀಯ ಮಾಡುವ ಬದಲು, ಸಾಮಾನ್ಯ ಜನರ ಹಕ್ಕುಗಳು ಮತ್ತು ಅವರ ಶ್ರೇಯೋಭಿವೃದ್ಧಿಗಾಗಿ ಹೋರಾಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲವೆ?
ಆದರೆ, ಹಾಗೆ ಯೋಚಿಸುವುದು ಕೇವಲ ಕನಸು ಎಂಬುದು ಸ್ಪಷ್ಟ.
ಶ್ರೀಮಂತರು ಹೊಟ್ಟೆ ತುಂಬಿಸಿಕೊಂಡಿರುವ, ಇನ್ನಷ್ಟು ಮತ್ತಷ್ಟು ಶ್ರೀಮಂತರಾಗುತ್ತಿರುವ ಸಮಯ ಇದು. ಆದರೆ ಬಡವರಿಗೆ, ತಮ್ಮ ಜೀವ ಉಳಿಸಿಕೊಳ್ಳುವುದು, ದಿನದೂಡುವುದೇ ದೊಡ್ಡ ಸಮಸ್ಯೆಯಾಗಿದೆ.
ಮೂರು ಹೊತ್ತು ಪೌಷ್ಟಿಕ ಆಹಾರ, ಶುದ್ಧ ಕುಡಿಯುವ ನೀರು, ತಲೆಯ ಮೇಲೊಂದು ಸೂರು, ಒಂದು ಉತ್ತಮ ಉದ್ಯೋಗ, ಹೆಣ್ಣು ಮಕ್ಕಳ ಸುರಕ್ಷತೆ - ಇವುಗಳು ಸಿಗುವುದೇ ಈಗ ದೊಡ್ಡ ಸವಾಲಾಗಿ ಬಿಟ್ಟಿದೆ
ಕೋಮುವಾದ ಹರಡುತ್ತ, ಆರ್ಥಿಕ ಸಮಸ್ಯೆಗಳ ಕಡೆಗೆ ಕಣ್ಣು ಮುಚ್ಚಿ, ಜನರು ತಮ್ಮನ್ನೇ ಅವಲಂಬಿಸಿರುವಂತೆ ಮಾಡಿರುವ ರಾಜಕಾರಣಿಗಳು ಎಂದಾದರೂ ಬಡವರ ಒಳಿತನ್ನು ಯೋಚಿಸಬಲ್ಲರೆ?
ಇನ್ನೂ ದುರಂತವೆಂದರೆ, ಬಡಜನರೇ ತಮ್ಮ ಸ್ಥಿತಿಯ ಬಗ್ಗೆ ಯೋಚಿಸಲಾರದಷ್ಟು ಈ ಕೋಮು ರಾಜಕಾರಣ ತುಂಬಿರುವ ಮತಿಗೇಡಿತನದಲ್ಲಿ ಮೈಮರೆತಿದ್ದಾರೆ. ಅವರೇನನ್ನೂ ಯೋಚಿಸದ ಸ್ಥಿತಿ ಮುಟ್ಟಿದ್ಧಾರೆ.
ರಾಜಕಾರಣಿಗಳು ಜನರೇ ನಮ್ಮ ಪ್ರಭುಗಳು ಎಂದು ಭಾಷಣ ಮಾಡುತ್ತಾರೆ, ಆದರೆ ವಾಸ್ತವದಲ್ಲಿ ರಾಜಕಾರಣಿಗಳೇ ಪ್ರಭುಗಳಾಗಿದ್ದಾರೆ, ಜನರು ಅವರ ಆಳುಗಳಾಗಿದ್ದಾರೆ.
ರಾಜಕಾರಣಿಯ ಸುಳ್ಳನ್ನು, ಅವರ ಭ್ರಷ್ಟತೆಯನ್ನು, ಅವರ ವಂಚನೆಯನ್ನು, ಅವರ ಸೋಗಲಾಡಿತನವನ್ನು ಕೇಳುವವರೇ ಇಲ್ಲವಾಗಿದೆ.
ಚುನಾವಣೆ ಹೊತ್ತಲ್ಲಿ ತಮಗೆ ರಾಜಕಾರಣಿಗಳು ನೀಡಿದ್ದ ಭರವಸೆಗಳನ್ನು ಯಾಕೆ ಈಡೇರಿಸಿಲ್ಲ ಎಂದು ಕೇಳುವುದನ್ನೇ ಜನ ಮರೆತುಬಿಟ್ಟಿದ್ದಾರೆ. ಬರೀ ಚಪ್ಪಾಳೆ ತಟ್ಟುವವರಾಗಿ, ಜಯಘೋಷ ಹಾಕುವವರಾಗಿ, ಭ್ರಷ್ಟ ರಾಜಕಾರಣಿಗಳೊಂದಿಗೆ ಸೆಲ್ಫಿಗಾಗಿ ಹಾತೊರೆಯುವವರಾಗಿ, ಅವರು ಹೇಳಿದ್ದನ್ನು ಕುರುಡಾಗಿ ಅನುಸರಿಸುವವರಾಗಿ ಬದಲಾಗಿದ್ದಾರೆ.
ಇದು ಪ್ರಜಾಪ್ರಭುತ್ವದ ಪಾಲಿಗೆ ಬಹಳ ದೊಡ್ಡ ದುರಂತ.