ಮಂಗಳೂರಿನ ರಾಜಕಾಲುವೆಗಳಲ್ಲಿ ಹರಿಯುತ್ತೆ ಪ್ಲಾಸ್ಟಿಕ್!
‘ಥ್ರ್ಯಾಶ್ ಬೂಮ್’ನಲ್ಲಿ ಜಲಮೂಲ ಸೇರುವ ತ್ಯಾಜ್ಯ ಸಂಗ್ರಹ
ಮಂಗಳೂರು : ಮಳೆ ನೀರು ಸುಗಮವಾಗಿ ಹರಿದು ನದಿ, ಸಮುದ್ರ ಸೇರಲು ಮಾಡಿರುವ ವ್ಯವಸ್ಥೆಯೇ ರಾಜಕಾಲುವೆಗಳು. ಆದರೆ ನಮ್ಮ ಬುದ್ಧಿವಂತರ ನಗರವಾದ ಮಂಗಳೂರಿನ ರಾಜಕಾಲುವೆಗಳಲ್ಲಿ ಪ್ಲಾಸ್ಟಿಕ್ ಕೂಡಾ ನೀರಿನಂತೆ ಹರಿಯುತ್ತದೆ. ಮಂಗಳೂರಿನ ರಾಜಕಾಲುವೆಗಳಲ್ಲಿ ಕಳೆದ 1 ವರ್ಷ 9 ತಿಂಗಳ ಅವಧಿಯಲ್ಲಿ ಈ ರೀತಿಯಾಗಿ ಹರಿದ ಕೇವಲ ಪ್ಲಾಸ್ಟಿಕ್ ತ್ಯಾಜ್ಯ 10.4 ಟನ್‌ಗೂ ಅಧಿಕ ಅಂದರೆ ಅಚ್ಚರಿ ಪಡಬೇಕಾಗಿಲ್ಲ.
ಕಳೆದ ಒಂದು ವಾರದಿಂದೀಚೆಗೆ ದ.ಕ. ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಮಳೆ ಸುರಿಯುತ್ತಿದೆ. ಕಳೆದ ರಾತ್ರಿಯಿಂದ ರವಿವಾರ ಮುಂಜಾನೆವರೆಗೂ ಮಂಗಳೂರು ನಗರ ಹಾಗೂ ಸುತ್ತಮುತ್ತಲೂ ನಿರಂತರ ಸುರಿದ ಮಳೆಗೆ ನಗರದ ಬಹುತೇಕ ರಾಜಕಾಲುವೆಗಳು ತುಂಬಿ ಹರಿದಿವೆ. ಅದರಲ್ಲೂ ಕೂಳೂರು, ಕೊಟ್ಟಾರ ಚೌಕಿಯ ಭಾಗದ ರಾಜಕಾಲುವೆಗಳಲ್ಲಿ ನೀರಿನ ಜೊತೆಗೆ ಭಾರೀ ಪ್ರಮಾಣದಲ್ಲಿ ತ್ಯಾಜ್ಯವೂ ಹರಿದಿದೆ. ಸರಕಾರೇತರ ಪ್ಲಾಸ್ಟಿಕ್ ಫ್ರಿಶ್ಚರ್ ಸಂಸ್ಥೆಯು ನಗರದ ಆರು ರಾಜಕಾಲುವೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕಾಗಿ ಹಾಕಿರುವ ‘ತ್ರ್ಯಾಶ್ ಬೂಮ್’ ಎಂಬ ಕಸ ಸಂಗ್ರಹದ ಬಲೆಯಲ್ಲಿ ನಿನ್ನೆಯ ರಾತ್ರಿಯಿಂದೀಚೆಗೆ ಸುರಿದ ಮಳೆಗೆ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯ ಕಂಡು ಬಂದಿದ್ದು, ಸಾಕಷ್ಟು ಜನಜಾಗೃತಿಯ ಹೊರತಾಗಿಯೂ ತ್ಯಾಜ್ಯ ಜಲಮೂಲಗಳನ್ನು ಸೇರುವುದು ಮಾತ್ರ ನಿಯಂತ್ರಣವಾಗಿಲ್ಲ.
ಥ್ರ್ಯಾಶ್ ಬ್ರೂಮ್‌ನಲ್ಲಿ 10.4 ಟನ್ ಪ್ಲಾಸ್ಟಿಕ್ ಸಂಗ್ರಹ
ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರ ಸೇರಿ ಜಲಚರಗಳಿಗೆ ಹಾನಿ ಮಾಡುವ ಜೊತೆಗೆ ಸಮುದ್ರ ನೀರನ್ನು ಕಲುಷಿತಗೊಳಿಸುವುದನ್ನು ತಡೆಗಟ್ಟುವ ಉದ್ದೇಶದಿಂದ ಉಡುಪಿ ಮೂಲದವರಾದ ಹರೀಶ್ ಶೆಣೈ ನೇತೃತ್ವದಲ್ಲಿ ಭಾರತದ ವಿವಿಧ ಕಡೆ ಕಾರ್ಯಾಚರಿಸುತ್ತಿರುವ ಪ್ಲಾಸ್ಟಿಕ್ ಫ್ರಿಶ್ಚರ್ ಸಂಸ್ಥೆ 2022ರ ಆಗಸ್ಟ್ 20ರಿಂದ ಮಂಗಳೂರಿನಲ್ಲಿಯೂ ರಾಜಕಾಲುವೆಗಳಲ್ಲಿ ಪ್ಲಾಸ್ಟಿಕ್ ಸಂಗ್ರಹ ಕಾರ್ಯ ನಡೆಸುತ್ತಿದೆ.
ಮಂಗಳೂರಿನ ಅಳಕೆ, ಜಪ್ಪು, ಪಾಂಡೇಶ್ವರ, ಕಡೆಕಾರು, ಮಾಲಾಡಿ ಮತ್ತು ಕೂಳೂರು ರಾಜಕಾಲುವೆಗಳಲ್ಲಿ ಸಂಸ್ಥೆಯಿಂದ ಪ್ಲಾಸ್ಟಿಕ್ ಸಂಗ್ರಹದ ಈ ಥ್ರ್ಯಾಶ್ ಬೂಮ್ (ಕಸದ ತೊಟ್ಟಿ)ಗಳನ್ನು ಅಳವಡಿಸಲಾಗಿದೆ. ಈವರೆಗೆ ಈ ತೊಟ್ಟಿಗಳಿಂದ ಒಟ್ಟು 10.4 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ. ಇದೇ ಅವಧಿಯಲ್ಲಿ ಸಂಸ್ಥೆಯ ನೇತೃತ್ವದಲ್ಲಿ ನಗರದ ವಿವಿಧ ಬೀಚ್‌ಗಳಲ್ಲಿ ನಡೆದ ತಾಜ್ಯ ಸಂಗ್ರಹಣಾ ಅಭಿಯಾನದ ವೇಳೆ 155 ಟನ್ ಪಾಸ್ಟಿಕ್ ಸಂಗ್ರಹಿಸಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಹರೀಶ್ ಶೆಣೈ ಮಾಹಿತಿ ನೀಡಿದ್ದಾರೆ.
ಪ್ಲಾಸ್ಟಿಕ್ ಜೊತೆ ಒಡೆದ ಗಾಜು, ಸಿರಿಂಜ್‌ಗಳೂ ಸಂಗ್ರಹ
ಪ್ಲಾಸ್ಟಿಕ್ ಫ್ರಿಶ್ಚರ್ ಸಂಸ್ಥೆಯ ವತಿಯಿಂದ ಸ್ಥಳೀಯ ಯುವಕರನ್ನೇ ಉಪಯೋಗಿಸಿಕೊಂಡು, ಪ್ಲಾಸ್ಟಿಕ್ ತ್ಯಾಜ್ಯವನ್ನೇ ಬಳಸಿಕೊಂಡು ರಚಿಸಲಾಗಿರುವ ಈ ಥ್ರ್ಯಾಶ್ ಬೂಮ್‌ಗಳಲ್ಲಿ ನಮ್ಮ ಜನರೇ ಅಲ್ಲಲ್ಲಿ ಎಸೆದ ಪ್ಲಾಸ್ಟಿಕ್ ತ್ಯಾಜ್ಯದ ಜತೆ ಬಿಯರ್ ಬಾಟಲಿಗಳು, ಒಡೆದ ಗಾಜಿನ ಚೂರುಗಳು, ಚಪ್ಪಲಿ, ಬಟ್ಟೆ ಬರೆ ಮಾತ್ರವಲ್ಲದೆ ಸಿರೆಂಜ್‌ಗಳೂ ಸಂಗ್ರಹವಾಗುತ್ತಿದೆ. ಇವೆಲ್ಲವೂ ನಮ್ಮ ಕಡಲು ಸೇರುವ ಅಪಾಯಕಾರಿ ವಸ್ತುಗಳು. ಮಂಗಳೂರು ನಗರದಿಂದ ತ್ಯಾಜ್ಯವು ನೇತ್ರಾವತಿ ಮತ್ತು ಫಲ್ಗುಣಿ ನದಿ ಹಾಗೂ ಸಮುದ್ರಕ್ಕೂ ಸೇರುತ್ತದೆ. ವರದಿ ಪ್ರಕಾರ ವಿಶ್ವದಲ್ಲಿ 1.8 ಮಿಲಿಯನ್ ಟನ್ ಸಮುದ್ರಕ್ಕೆ ಪ್ಲಾಸ್ಟಿಕ್ ತ್ಯಾಜ್ಯ ಸೇರುತ್ತದೆ ಎಂದು ಅಂದಾಜಿಸಲಾಗಿದೆ.
ನಮ್ಮ ಜೀವಜಲ, ನೀರು ಹರಿಯುವ ಕಾಲುವೆಗಳನ್ನು ಕಲುಷಿತಗೊಳಿಸುವುದು, ಅಪಾಯಕಾರಿಯಾಗಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಸಂಸ್ಥೆಯು ಮಂಗಳೂರು ಮಾತ್ರವಲ್ಲದೆ, ವಾರಣಾಸಿ, ಕಾನ್ಪುರ, ತಿರುವಂತಪುರದಲ್ಲಿಯೂ ಈ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಇಂಡೋನೇಶ್ಯದಲ್ಲಿ 2019ರಲ್ಲಿ ಪ್ಲಾಸ್ಟಿಕ್ ಫ್ರಿಶ್ಚರ್ ಸಂಸ್ಥೆಯು ಕಾರ್ಯಾರಂಭಿಸಿತ್ತು. ಬಳಿಕ 2021ರಲ್ಲಿ ಭಾರತಕ್ಕೆ ತನ್ನ ಕಾರ್ಯಬಾಹುಳ್ಯವನ್ನು ವಿಸ್ತರಿಸಿಕೊಂಡಿದೆ.
ಪ್ಲಾಸ್ಟಿಕ್ ಪಿಶ್ಚರ್ ಸಂಸ್ಥೆಯು ಸ್ಥಳೀಯ ತಂತ್ರಜ್ಞಾನವನ್ನು ಉಪಯೋಗಿಸಿ ಈ ಥ್ರ್ಯಾಶ್ ಬೂಮ್ ತಯಾರಿಸಲಾಗಿದ್ದು, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶವನ್ನೂ ಈ ಸಂಸ್ಥೆಯ ಮೂಲಕ ನೀಡಲಾಗುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಯ ಸಹಕಾರದಲ್ಲಿ ಮೆಟೀರಿಯಲ್ ರಿಕವರಿ ಫೆಸಿಲಿಟಿ (ಎಂಆರ್‌ಎಫ್) ವ್ಯವಸ್ಥೆಯನ್ನು ಬಜಾಲ್‌ನಲ್ಲಿ ಆರಂಭಿಸಿದ್ದು, ಇಲ್ಲಿ ಸಂಗ್ರಹವಾದ ತ್ಯಾಜ್ಯದ ವಿಂಗಡಣೆ ನಡೆಸಿ ಸಂಸ್ಕರಣೆ ಮಾಡಲಾಗುತ್ತದೆ. ಇದಲ್ಲದೆ, ಸಂಸ್ಥೆಯ ಮೂಲಕ ಶಾಲಾ ಕಾಲೇಜುಗಳಲ್ಲಿ ಈ ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರ, ನದಿ ಹಾಗೂ ಜಲ ಮೂಲಗಳಿಗೆ ಸೇರುವುದರಿಂದ ಆಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಯುನೈಟೆಡ್ ವೇ ಮುಂಬೈ ಸಂಸ್ಥೆಯ ಸಹಯೋಗದೊಂದಿಗೆ ನಡೆಸುತ್ತಿದೆ.
ಸಮುದ್ರ ಹಾಗೂ ಜಲಮೂಲಗಳಿಗೆ ಪ್ಲಾಸ್ಟಿಕ್ ಸೇರಿದಂತೆ ಅಪಾಯಕಾರಿ ತ್ಯಾಜ್ಯ ಸೇರಬಾರದೆಂಬ ಉದ್ದೇಶದಿಂದ ಪ್ಲಾಸ್ಟಿಕ್ ಫ್ರಿಶ್ಚರ್ ಸಂಸ್ಥೆಯ ಮೂಲಕ ಈ ಕಾರ್ಯ ನಡೆಯುತ್ತಿದೆ. ಮಂಗಳೂರಿನ ಆರು ರಾಜಕಾಲುವೆಗಳಲ್ಲಿ ಸಂಸ್ಥೆಯಿಂದ 2022ರ ಆಗಸ್ಟ್ 20ರಂದು ತ್ರ್ಯಾಶ್ ಬ್ರೂಮ್ ಅಳವಡಿಸಲಾಗಿದೆ. ಈವರೆಗೆ ಕೇವಲ ಪ್ಲಾಸ್ಟಿಕ್ ಮಾತ್ರವೇ 10.4 ಟನ್ ಸಂಗ್ರಹವಾಗಿದೆ. ಈ ತ್ರ್ಯಾಶ್ ಬೂಮ್‌ಗಳನ್ನು ಮೂರು ದಿನಗಳಿಗೊಮ್ಮೆ ಸಂಸ್ಥೆಯ ವತಿಯಿಂದ ಸ್ವಚ್ಛಗೊಳಿಸಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ.
- ಹರೀಶ್ ಶೆಣೈ, ನಿರ್ದೇಶಕರು, ಪ್ಲಾಸ್ಟಿಕ್ ಫ್ರಿಶ್ಚರ್
ರಾಜಕಾಲುವೆಗಳಲ್ಲಿ ಅಳವಡಿಸಲಾಗಿರುವ ಥ್ರ್ಯಾಶ್ ಬೂಮ್‌ನಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಪ್ರತ್ಯೇಕಿಸಿ, ಶೇ.100ರಷ್ಟು ಮರುಬಳಕೆಯ ತ್ಯಾಜ್ಯವನ್ನು ಸಂಸ್ಕರಣಾ ಘಟಕಕ್ಕೆ ನೀಡಲಾಗುತ್ತದೆ. ಉಳಿದ ತ್ಯಾಜ್ಯವನ್ನು ಸಿಮೆಂಟ್ ಘಟಕಕ್ಕೆ ಇಂಧನವಾಗಿ ಉಪಯೋಗಿಸಲು ನೀಡಲಾಗುತ್ತದೆ. ಪ್ಲಾಸ್ಟಿಕ್ ಜತೆಗೆ ಒಡೆದ ಗಾಜು, ಬಾಟಲಿಗಳು, ಸಿರೆಂಜ್‌ಗಳು, ಪ್ಯಾಂಪರ್ಸ್, ಪ್ಯಾಡ್‌ಗಳು, ಟ್ಯೂಬ್‌ಲೈಟ್‌ಗಳೂ ಥ್ರ್ಯಾಶ್ ಬೂಮ್‌ಗಳಲ್ಲಿ ಸಂಗ್ರಹವಾಗುತ್ತವೆ.
- ಅರ್ಜುನ್ ನಾಯಕ್, ಪ್ರಾಜೆಕ್ಟ್ ಪ್ರಮುಖರು, ಪ್ಲಾಸ್ಟಿಕ್ ಫಿಶ್ಚರ್