ವಿದ್ಯಾನಿಲಯದಲ್ಲಿ ವಿಷಗಾಳಿ, ಹೀಗೊಂದು ಚಾಳಿ
ಮಂಗಳೂರು ವಿಶ್ವವಿದ್ಯಾನಿಲಯ ಕರಾವಳಿಯ ಕನ್ನಡಿಗರ ಹೆಮ್ಮೆಯ ‘ಯುನಿವರ್ಸಿಟಿ ವಿತ್ ಎ ಡಿಫರೆನ್ಸ್’ ಆಗಿ ಬೆಳೆಯುತ್ತಲಿತ್ತು. ನ್ಯಾಕ್‌ನಿಂದ ‘ಉನ್ನತ’ ಶ್ರೇಣಿ ಪಡೆದು ಸಂಶೋಧನೆ, ಅಧ್ಯಯನ ಮತ್ತು ಇತರ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ದೇಶ ವಿದೇಶಗಳಲ್ಲಿ ಮನ್ನಣೆ ಗಳಿಸಿ ಭರವಸೆಯ ಭವಿಷ್ಯದೆಡೆಗೆ ದಾಪುಗಾಲಿಡುತ್ತಲಿತ್ತು. ಇಲ್ಲಿನ ಹಲವಾರು ಮಂದಿ ಹಿರಿಯ ಪ್ರಾಧ್ಯಾಪಕರು ರಾಜ್ಯದ ಮತ್ತು ದೇಶದ ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿಗಳಾಗಿ ವಿಶ್ವವಿದ್ಯಾನಿಲಯ ಅಭಿಮಾನ ಪಡಬಹುದಾದ ಸಾಧನೆ ಮಾಡಿದ್ದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಓದಿದವರು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿತ್ತು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಉನ್ನತ ಶಿಕ್ಷಣ ಸಂಸ್ಥೆಯೊಂದು ಕಾರ್ಯನಿರ್ವಹಿಸುವ ರೀತಿ ಹೀಗಾದರೆ ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಭವಿಷ್ಯವೇನು ಎನ್ನುವ ಬಗ್ಗೆ ಆತಂಕ ಉಂಟಾಗುತ್ತದೆ. ‘ಉತ್ತಮ’ ನ್ಯಾಕ್‌ಗ್ರೇಡ್ ಹೊಂದಿದ್ದ ವಿಶ್ವವಿದ್ಯಾನಿಲಯ ಕಳೆದ ಸಾಲಿನಲ್ಲಿ ಬಿ ಗ್ರೇಡ್‌ಗೆ ಜಾರಿದೆ. ನಾಡಿನ ಶಿಕ್ಷಣ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದಾಗ ಇದರ ಕುರಿತು ಅಂದಿನ ಹೆಮ್ಮೆಯ ತೌಳವ ಕುಲಪತಿಯವರು ಮೌಲ್ಯಾಂಕನದಲ್ಲಿ ಎಲ್ಲೋ ತಪ್ಪಾಗಿದೆ ಮೇಲ್ಮನವಿ ಸಲ್ಲಿಸಲಾಗಿದೆ ಎಲ್ಲಾ ಸರಿಯಾಗುತ್ತದೆ ಎಂದು ಸಬೂಬು ಹೇಳಿ ತಪ್ಪಿಸಿಕೊಂಡು ಕೊನೆಗೆ ನಿವೃತ್ತರೂ ಆದರು. ಮೌಲ್ಯಾಂಕನದಲ್ಲಿ ಕುಸಿತವಾಗಿರುವ ಕಾರಣ, ಸಂಶೋಧನೆ, ಇತರ ಶೈಕ್ಷಣಿಕ ಚಟುವಟಿಕೆಗಳಿಗೆ ದೊರಕಬಹುದಾದ ಅನುದಾನದಲ್ಲಿ ತೀವ್ರ ಕಡಿತ ಉಂಟಾಗಿ ವಿಶ್ವವಿದ್ಯಾನಿಲಯ ಸಂಪನ್ಮೂಲ ಕೊರತೆಯಿಂದ ತೊಂದರೆ ಗೀಡಾಗುವ ಪರಿಸ್ಥಿತಿ ಇದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಸಂಪನ್ಮೂಲದ ದೃಷ್ಟಿಯಿಂದ ಸದೃಢವಾಗಿದ್ದ ಸಂಸ್ಥೆ ಯಾವ ಕಾರಣದಿಂದ ದುರ್ಬಲವಾಗುತ್ತಿದೆ ಎಂದು ಆತ್ಮಾವಲೋಕನ ಮಾಡಬೇಕಿದೆ. ವಿವಿಧ ವಿಭಾಗಗಳಲ್ಲಿ ನಾಡು ಹೆಮ್ಮೆ ಪಡುವಂತಹ ಪ್ರಾಧ್ಯಾಪಕರು ನಿವೃತ್ತಿಯಾದ ನಂತರಅವರ ಸ್ಥಾನಗಳನ್ನು ತುಂಬ ಬಲ್ಲವರನ್ನು ಗುರುತಿಸಿ ಬೆಳೆಸಬೇಕಾದ ದೊಡ್ಡಜವಾಬ್ದಾರಿ ಸರಕಾರ, ಜನಪ್ರತಿನಿಧಿಗಳು, ಕುಲಪತಿಗಳು ಮತ್ತು ಈ ಸಮಾಜದ್ದು. ಈ ಬಗ್ಗೆ ಶಾಸಕರು, ಸಚಿವರು, ಏನು ಕ್ರಮಕೈಗೊಂಡಿದ್ದಾರೆ?. ಇಂತಹ ಸಾಲು, ಸಾಲು ಸವಾಲುಗಳು ನಮ್ಮ ಮುಂದಿವೆ. ನಮಗೆ ಅದ್ಯಾವುದೂ ದೊಡ್ಡ ಸಂಗತಿ ಅನಿಸುವುದೇ ಇಲ್ಲ.
ಬಹಳ ಹಿಂದಿನಿಂದಲೂ ಪುರುಷರ ಮತ್ತು ಮಹಿಳೆಯರ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಬಹಳ ಮುಗ್ಧರಾಗಿ ಭಕ್ತಿಯಿಂದ ಗಣೇಶೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದರು. ಅದಕ್ಕೆ ಬೇಕಾದ ಖರ್ಚು ವೆಚ್ಚಗಳನ್ನು ಆಸಕ್ತರಾದ ವಿದ್ಯಾರ್ಥಿಗಳು, ಅಧ್ಯಾಪಕರು ವಂತಿಗೆ ನೀಡುವ ಮೂಲಕ ನಡೆಸಲಾಗುತ್ತಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಾಗ ನನಗೆ ತಿಳಿದ ಮಟ್ಟಿಗೆ ಧರ್ಮ, ಜಾತಿ ಯಾವತ್ತೂ ಅಡ್ಡಿ ಬಂದದ್ದಿಲ್ಲ. ಸಮಸ್ಯೆಗಳನ್ನು ಹುಟ್ಟು ಹಾಕಿ ಪರಿಹರಿಸುವ ನಾಟಕವಾಡುವ ರಾಜಕೀಯ ವರಸೆಗಳ ಪ್ರದರ್ಶನವಾಗುತ್ತಿದೆ.
ಹೊರಗಿನ ರಾಜಕೀಯ ಬಿಸಿಗಾಳಿ ಕ್ಯಾಂಪಸ್‌ಗಳಿಗೂ ಬೀಸುತ್ತದೆ. ಆದರೆ ಸ್ನಾತಕೋತ್ತರ ಅಧ್ಯಯನ ಸಂಸ್ಥೆಯೊಂದರಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ‘ನಂಬಿಕೆ’ ಮತ್ತು ‘ರಾಜಕೀಯ’ದ ನಡುವಿನ ತೆಳುವಾದ ವ್ಯತ್ಯಾಸವನ್ನು ತಿಳಿದುಕೊಳ್ಳುವ ವಿವೇಕವಿದ್ದಾಗ ಯಾವ ಸಮಸ್ಯೆಯೂ ಇರುವುದಿಲ್ಲ. ಆದರೆ ವಿಶ್ವವಿದ್ಯಾನಿಲಯದ ಉನ್ನತ ಸ್ಥಾನಗಳಿಗೆ ಇಂದು ನಡೆಯುವ ನೇಮಕಾತಿಗಳು ವಿಶ್ವವಿದ್ಯಾನಿಲಯದ ಆಡಳಿತ ಮೇಲೆ, ಶೈಕ್ಷಣಿಕ ವಾತಾವರಣದ ಮೇಲೆ ಪರಿಣಾಮ ಬೀರುತ್ತಿರುವುದು ಕಣ್ಣ ಮುಂದಿನ ಸತ್ಯ. ಅದರಲ್ಲಿ ಕಳೆದ ಸರಕಾರದ ಅವಧಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯವರೇ ಹೇಳಿದಂತೆ ‘ಒತ್ತಡದಲ್ಲಿ’ ನ್ಯಾಯ ಪರವಾಗಿರಲು ಆಗಲಿಲ್ಲವಂತೆ. ಶಿಕ್ಷಣ ಸಂಸ್ಥೆಗಳಿಗೆ ಅದರರೇ ಆದ ನೀತಿ ನಿಯಮಗಳಿವೆ, ಕಾನೂನು ಕಟ್ಟಳೆಗಳಿವೆ ಆ ಪ್ರಕಾರ ಅವು ಕೆಲಸ ಮಾಡಬೇಕೇ ಹೊರತು , ಯಾರದೋಒತ್ತಡದ ಬಲದಿಂದಲ್ಲ. ಒತ್ತಡಕ್ಕೆ ಮಣಿದು ‘ದಾದಿ ಶಸ್ತ್ರಕ್ರಿಯೆ ಮಾಡಿ ವೈದ್ಯರು ದಾದಿಯಾದರೆ’ ಏನಾಗಬಹುದು ಎನ್ನುವುದನ್ನು ಒತ್ತಡ ತರುವ ಶಾಸಕರು, ಜನಪ್ರತಿನಿಧಿಗಳು ತಿಳಿದುಕೊಂಡರೆ ಯಾವುದೇ ಸಮಸ್ಯೆಇಲ್ಲ. ರಾಜಕೀಯಒತ್ತಡದಿಂದ ಶಿಕ್ಷಣ, ನ್ಯಾಯದಾನ, ಆರೋಗ್ಯ, ಆಭಿವೃದ್ಧಿ ನೀತಿ, ಧರ್ಮ ಸಿಕ್ಕಿ ಹಾಕಿಕೊಂಡಿರುವುದು ನಮ್ಮ ಇಂದಿನ ಬಹುಪಾಲು ಎಲ್ಲಾ ಸಮಸ್ಯೆಗಳಿಗೆ ಮೂಲ. ಇದನ್ನು ನಮ್ಮ ಜನಸಾಮಾನ್ಯರು ಅರ್ಥ ಮಾಡಿಕೊಂಡರೆ ಸಮಸ್ಯೆ ಇಲ್ಲ. ಆದರೆ ಅಧಿಕಾರದ ಚುಕ್ಕಾಣಿ ಹಿಡಿಯಲು ದೂರದೃಷ್ಟಿಯ ಕಷ್ಟದ ಹಾದಿ ತುಳಿಯುವ ಬದಲು, ಬಹಳ ಸುಲಭವಾಗಿಧರ್ಮದ ಅಮಲು ಬೆರೆಸಿ ಕೆಲಸ ಮಾಡಿದರೆ ಜನರ ಬುದ್ಧಿಗೆ ಮಂಕು ಬಡಿದಾಗ ಕೆಲಸ ಸಾಧಿಸುವ ರಾಜಕೀಯ ನಡೆಯನ್ನು ವಿರೋಧಿಸದಿದ್ದರೆ ನಾಳೆ ನಮ್ಮ ಮಕ್ಕಳ ಭವಿಷ್ಯ ಏನಾಗಬಹುದು? ಯೋಚಿಸಿ ಶೈಕ್ಷಣಿಕ, ಸಂಶೋಧನೆ, ವ್ಯಕ್ತಿತ್ವ ಬೆಳವಣಿಗೆಯ ಕುರಿತಂತೆ ನಮ್ಮನ್ನು ಆಳುವವರ ಕಾರ್ಯಕ್ರಮವೇನು? ಕೋವಿಡ್ ಮಹಾಮಾರಿಯ ಕಾರಣದಿಂದ ಈಗಾಗಲೇ ಶೈಕ್ಷಣಿಕ ವೇಳಾಪಟ್ಟಿ ಅಸ್ತವ್ಯಸ್ತಗೊಂಡಿದೆ. ಪರೀಕ್ಷೆ ಫಲಿತಾಂಶಗಳು ಹಳಿತಪ್ಪಿ ಇನ್ನೂ ಸರಿಯಾಗಿಲ್ಲ, ನಿವೃತ್ತರಾದವರ ಸ್ಥಾನ ತುಂಬುವ ಕೆಲಸಗಳಾಗದೆ ಆಡಳಿತ ವ್ಯವಸ್ಥೆ ಹದಗೆಡುತ್ತಿದೆ. ರಾಜಕೀಯ ಹಸ್ತಕ್ಷೇಪದಿಂದಾಗಿ ಆಡಳಿತ ಮಂಡಳಿಗಳಿಗೆ ನಾಮನಿರ್ದೇಶನಗೊಳ್ಳುವ ಜನ, ನಿಷ್ಠಾವಂತರ ಕಾನೂನು ಪಾಲಕರ ಮೇಲೆ ಮುಗಿ ಬೀಳುತ್ತಾ, ತಮ್ಮ ಮರ್ಜಿಗೆ, ಮುಲಾಜಿಗೆ ಒಳಗಾಗುವ ಭ್ರಷ್ಟರನ್ನು, ಸಂಬಳದೊಂದಿಗೆ ಹೆಚ್ಚುವರಿ ಹೊಣೆಯ ನೆಪದಲ್ಲಿ ಲಕ್ಷಗಟ್ಟಲೆದೋಚುವ, ಸರಿಯಾಗಿತಮಗೆ ನಿರ್ವಹಿಸಿದ ಜವಾಬ್ದಾರಿಯನ್ನು ಮರೆತು ಅಧಿಕಾರಸ್ಥರ ಮಾಹಿತಿದಾರರಾಗುವವರ ರಕ್ಷಣೆಗೆ ಟೊಂಕಕಟ್ಟಿ ನಿಂತ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ.
ವಿಜ್ಞಾನ, ತಂತ್ರಜ್ಞಾನ, ವ್ಯಾಪಾರದ ಕಾರಣದಿಂದ ಆಗುತ್ತಿರುವ ಬದಲಾವಣೆಯ ವೇಗಕ್ಕೆ ತಕ್ಕಂತೆ ತಾನು ಸಿದ್ಧವಾಗಿ ಮುಂದಿನ ತಲೆಮಾರನ್ನು ಸವಾಲು ಎದುರಿಸಲು ಸಿದ್ಧಗೊಳಿಸಬೇಕಾದ ವಿಶ್ವವಿದ್ಯಾನಿಲಯ, ಇದೆಲ್ಲವನ್ನು ಮರೆತು ಮುಂದಿನ ಚುನಾವಣೆಯನ್ನು ಮಾತ್ರ ನೊಡಬಲ್ಲ ರಾಜಕಾರಣದ ಒತ್ತಡಕ್ಕೆ ಸಿಕ್ಕಿ ನಲುಗುತ್ತಿರುವುದು ಈ ನಾಡಿನ ದುರಂತ ಅದರಲ್ಲೂ ವಿಶೇಷವಾಗಿ ಕರಾವಳಿ ಕರ್ನಾಟಕದಲ್ಲಿ.