ಮಲೆನಾಡಿನಲ್ಲಿ ದರೋಡೆ, ಕಳ್ಳತನ ತಡೆಗಟ್ಟಲು ಪೋಲಿಸ್ ಇಲಾಖೆ ಕಟ್ಟೆಚ್ಚರ ಅಗತ್ಯ

ಸಾಂದರ್ಭಿಕ ಚಿತ್ರ
2020 ಮಾರ್ಚ್ನಲ್ಲಿ ಕೊಪ್ಪ ತಾಲೂಕಿನ ಗುಡ್ಡೆತೋಟದ ವಿಜಯರಾಘವ ಅವರ ಒಂಟಿ ಮನೆಯಲ್ಲಿ ಭಾರೀ ದರೋಡೆ ನಡೆದು ಐದು ವರ್ಷ ತುಂಬುತ್ತಾ ಬಂತು. ದರೋಡೆಕೋರರು ಮನೆಯವರನ್ನು ಕಟ್ಟಿಹಾಕಿ ಲಕ್ಷಾಂತರ ಮೊತ್ತದ ನಗ, ನಗದು ದೋಚಿದ್ದರು. ಈ ಪ್ರಕರಣವನ್ನು ಪೋಲೀಸರು ಅತ್ಯಂತ ದಕ್ಷತೆಯಿಂದ ಬೇಧಿಸಿದರು.
ಆದರೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಮತ್ತು ಚಿನ್ನ, ನಗದು ಕಳೆದುಕೊಂಡ ರೈತ ಕುಟುಂಬಕ್ಕೆ ಸ್ವತ್ತು ಪೂರ್ಣ ಪ್ರಮಾಣದಲ್ಲಿ ವಾಪಸ್ ಕೊಡಿಸಲು ಸಾಧ್ಯವಾಗಲಿಲ್ಲ. ಅಪರಾಧಿಗಳು ಸಾಕ್ಷಿದಾರರನ್ನು ಬೆದರಿಸುವ ಮಟ್ಟಕ್ಕೆ ಹೋಗಿದ್ದರು. ಅಂತರ ರಾಜ್ಯ ದರೋಡೆಕೋರರ ಗುಂಪು ಈ ದರೋಡೆ ಮಾಡಿ ಯಾವುದೇ ಶಿಕ್ಷೆಗೆ ಒಳಗಾಗದೆ ಪಾರಾಗಿದೆ.
ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ, ದರೋಡೆಕೋರರು ಕೃತ್ಯ ಎಸಗಲು ಹತ್ತಾರು ಲಕ್ಷ ಖರ್ಚು ಮಾಡಿದ್ದರು. ಲಕ್ಷಾಂತರ ಹಣ ಕಳೆದುಕೊಂಡ ವಿಜಯರಾಘವ ಕುಟುಂಬ ಪೋಲಿಸ್ ಠಾಣೆ, ಕೋರ್ಟ್ ಅಲೆದು ಹತಾಶರಾದರು.
ಇಷ್ಟೆಲ್ಲಾ ʼಪ್ಲಾಶ್ ಬ್ಯಾಕ್ʼ ಏಕೆ ಹೇಳಿದೆ ಅಂದರೆ, ಮಲೆನಾಡಿನಲ್ಲಿ ಈಗ ಕಾಫಿ, ಅಡಿಕೆ ಫಸಲು ಕೈಗೆ ಬಂದು ಮಾರಾಟದ ಸಮಯ. ಸಾವಿರಾರು ಕೋಟಿ ಹಣ ವ್ಯಾಪಾರಿಗಳು, ರೈತರು, ಕಾಫಿ ಬೆಳೆಗಾರರ ಮಧ್ಯೆ ವಿನಿಮಯ ಆಗುವ ಸಮಯ. ವ್ಯಾಪಾರಿಗಳು ಈಗ ರೈತರ ಮನೆ ಬಾಗಿಲಿಗೆ ಬಂದು ಖರೀದಿಸುತ್ತಿದ್ದಾರೆ. ನಗದು ಮನೆ ಬಾಗಿಲಲ್ಲಿ ನೀಡುತ್ತಾರೆ. ಮಲೆನಾಡಿನ ಭಾಗದಲ್ಲಿ ಬಹುತೇಕ ರೈತರ ಮನೆಗಳು ಒಂಟಿ ಮನೆಗಳು.
ಗುಡ್ಡೆತೋಟದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ದರೋಡೆ ತಂಡ ಅತ್ಯಂತ ವ್ಯವಸ್ಥಿತವಾಗಿ ಹಲವು ತಿಂಗಳಿನಿಂದ ಮಾಹಿತಿ ಪಡೆದು ದರೋಡೆ ಮಾಡಿದೆ. ಪೋಲಿಸ್ ಇಲಾಖೆ ಮಲೆನಾಡಿನಲ್ಲಿ ದರೋಡೆಯಂತಹ ಅಹಿತಕರ ಘಟನೆ ತಡೆಗಟ್ಟಲು ದಿನದ 24 ಗಂಟೆಯೂ ಎಚ್ಚರ ವಹಿಸಬೇಕು.
ಪೋಲಿಸ್ ಇಲಾಖೆ ಸಾರ್ವಜನಿಕರ ಮೂಲಕ ಅಳವಡಿಸಿಕೊಂಡಿರುವ ಕೆಲವು ಸಿಸಿ ಕ್ಯಾಮರಾಗಳು ನಿಷ್ಕ್ರಿಯಗೊಂಡಿದೆ. ಕೆಲವು ಆಯಕಟ್ಡಿನ ಜಾಗದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಬೇಕು.
ಶೃಂಗೇರಿ ವಿಧಾನಸಭಾ ಕ್ಷೇತ್ರ ಪ್ರವೇಶಿಸುವ ಎಲ್ಲಾ ಮುಖ್ಯ ಮತ್ತು ಗ್ರಾಮೀಣ ಸಂಪರ್ಕ ರಸ್ತೆಗಳಲ್ಲಿ ಕಟ್ಟೆಚ್ಚರದಿಂದ ವಾಹನ ಚಲನವಲನ ಮತ್ತು ಅಪರಿಚಿತರ ಬಗ್ಗೆ ನಿಗಾ ಇಡಬೇಕು. ಪೋಲಿಸ್ ಇಲಾಖಾ ಅಧಿಕಾರಿಗಳು ಸ್ಥಳೀಯರು, ರೈತರು ಮತ್ತು ವ್ಯಾಪಾರಿಗಳ ಸಹಾಯ ಪಡೆದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಬೇಕು. ಕ್ರಿಮಿನಲ್ ಮತ್ತು ಅಪರಿಚಿತರ ಬಗ್ಗೆ ನೀಡುವ ದೂರು ಮತ್ತು ಮಾಹಿತಿಯನ್ನು ರಾಜಿ ಮಾಡದಂತೆ ಜಾಗೃತರಾಗಿರಬೇಕು. ನಕಲಿ ಪೋಲಿಸ್, ನಕಲಿ ಈಡಿ ಅಧಿಕಾರಿಗಳು ತಂಡ ಕೂಡ ಎಲ್ಲಾ ಕಡೆ ವಂಚನೆ ಮಾಡುತ್ತಿದೆ. ಈ ಬಗ್ಗೆ ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ನೀಡಬೇಕು.
ಜನದಟ್ಟಣೆಯ ನಗರಗಳಲ್ಲಿ ಹಾಡಹಗಲೇ ದರೋಡೆ ಆಗುತ್ತಿರುವ ಸಮಯದಲ್ಲಿ ಮಲೆನಾಡಿನ ಜನರ ಸುರಕ್ಷಿತೆ ಪೋಲಿಸ್ ಇಲಾಖೆ ಕೈಯಲ್ಲಿ ಇದೆ. ರೈತರು, ಕಾಫಿ ಬೆಳೆಗಾರರು ಎಚ್ಚರವಾಗಿದ್ದರೆ ಒಳಿತು. ಪೋಲಿಸ್ ಇಲಾಖೆಯೊಂದಿಗೆ ಅರಣ್ಯ ಇಲಾಖೆ ಕೂಡ ಕೈ ಜೋಡಿಸಿದರೆ ಮಲೆನಾಡು ಮತ್ತಷ್ಟು ಸುರಕ್ಷಿತವಾಗಲಿದೆ.