ನಿವೃತ್ತಿ ಕಾಣದ ರಾಜಕೀಯ ನಾಯಕರು!
ದೇ
ಶದಲ್ಲಿ ಚುನಾವಣೆ ಇತ್ತೀಚೆಗಷ್ಟೇ ಮುಗಿದು 18ನೇ ಸಂಸತ್ತು ಮತ್ತು ಹೊಸ ಸರಕಾರ ಸಂಪನ್ನಗೊಂಡಿದೆ. ಚುನಾವಣಾ ಸಂದರ್ಭದಲ್ಲಿ ಸ್ಪರ್ಧೆಯಲ್ಲಿದ್ದ ಅಭ್ಯರ್ಥಿಗಳ ವೈಯಕ್ತಿಕ ವಿವರಗಳನ್ನು ಕೆಲವು ಪತ್ರಿಕೆಗಳು ಪ್ರಕಟಿಸಿದ್ದನ್ನು ಇಲ್ಲಿ ನೆನಪಿಸಿ ಕೊಳ್ಳಬಹುದು. ಈ ವೈಯಕ್ತಿಕ ವಿವರಗಳಲ್ಲಿ ಅಭ್ಯರ್ಥಿಗಳ ವಯಸ್ಸು ಗಮನ ಸೆಳೆಯುವಂತಿತ್ತು. ಈ ಬಾರಿ ಸಣ್ಣ ವಯಸ್ಸಿನವರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಎಂದಿನಂತೆ ಎಪ್ಪತ್ತೈದು- ಎಂಭತ್ತು ವರ್ಷ ದಾಟಿದವರೂ ಕಡಿಮೆಯೇನಿರಲಿಲ್ಲ. ಪ್ರಸಕ್ತ ಲೋಕಸಭೆಯ ಸದಸ್ಯರ ಸರಾಸರಿ ವಯಸ್ಸು 59ರಿಂದ 56ಕ್ಕೆ ಇಳಿದಿದ್ದು 55 ವರ್ಷವನ್ನು ಮೀರಿದವರ ಸಂಖ್ಯೆ ಶೇ. 52ರಷ್ಟಿದೆ ಎಂದು ಅಂಕಿ ಅಂಶವೊಂದು ತಿಳಿಸುತ್ತದೆ. ಲೋಕಸಭೆಗೆ ಸ್ಪರ್ಧಿಸಲು ಕನಿಷ್ಠ 25 ವರ್ಷ ಆಗಿರ ಬೇಕೆಂದು ಬಹುತೇಕರಿಗೆ ಗೊತ್ತಿದೆ. ಆದರೆ ಈ ಸದಸ್ಯರಿಗೆ ಸೇವೆ ಸಲ್ಲಿಸಲು ಗರಿಷ್ಠ ವಯಸ್ಸಿನ ಮಿತಿ ಇಲ್ಲವೇ? ಅಂದರೆ ನಿವೃತ್ತಿಯ ವಯಸ್ಸೆಂಬುದು ಇಲ್ಲವೇ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿರುವುದು ಸುಳ್ಳಲ್ಲ.
ನಮ್ಮಲ್ಲಿ ಸರಕಾರಿ ಹುದ್ದೆಯಲ್ಲಿರುವವರಿಗೆ ಅರವತ್ತಕ್ಕೆ ನಿವೃತ್ತಿ ವಯಸ್ಸನ್ನು ನಿಗದಿ ಪಡಿಸಲಾಗಿದೆ. ದೇಶದ ಉನ್ನತ ನ್ಯಾಯಾಲಯದ ನ್ಯಾಯಾಧೀಶರಿಗೆ ನಿವೃತ್ತಿಯ ವಯಸ್ಸು ಅರವತ್ತೈದು. ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿಯೂ ಹೆಚ್ಚು ಕಡಿಮೆ ಸರಕಾರಿ ಉದ್ಯೋಗಿಗಳಿಗೆ ಸಮನಾದ ನಿವೃತ್ತಿ ವಯಸ್ಸನ್ನೇ ಇಟ್ಟು ಕೊಳ್ಳಲಾಗಿದೆ. ಮನುಷ್ಯನ ಜೀವಿತಾವಧಿ ಹಾಗೂ ವಯಸ್ಸಿಗೆ ಅನುಗುಣವಾಗಿರುವ ಕಾರ್ಯಕ್ಷಮತೆ ಆಧರಿಸಿ ನಿವೃತ್ತಿ ವಯಸ್ಸೊಂದನ್ನು ಉದ್ಯೋಗಿಗಳ ಸೇವಾ ನಿಯಮಗಳಲ್ಲಿ ಅಳವಡಿಸಲಾಗಿದೆ ಎಂಬುದು ಸ್ಪಷ್ಟ. ಜೊತೆಗೆ ಯುವಜನರಿಗೆ ಕಲ್ಪಿಸ ಬೇಕಾದ ಅವಕಾಶದ ಅಂಶವನ್ನು ಪೂರಕವಾಗಿ ಪರಿಗಣಿಸಿರುವ ಸಾಧ್ಯತೆ ಕಂಡು ಬರುತ್ತದೆ.
ಹಾಗಾದರೆ ರಾಜಕಾರಣಿಗಳಿಗೆ ಯಾಕೆ ನಿವೃತ್ತಿ ವಯಸ್ಸೆಂಬುದೇ ಇಲ್ಲ? ರಾಜಕೀಯದಲ್ಲಿ ನಿವೃತ್ತಿ ವಯೋಮಾನವನ್ನು ನಿಗದಿ ಮಾಡದಿರುವುದಕ್ಕೆ ಕೆಲವೊಂದು ಕಾರಣಗಳಿರಬಹುದು. ಮುಖ್ಯವಾಗಿ ಇದು ಪ್ರವೃತ್ತಿಗೆ ಸಂಬಂಧ ಪಟ್ಟಂತಹ ವಿಚಾರ. ಹಿಂದೆ ಇಲ್ಲಿ ಸಮಾಜ ಸೇವೆ ಅಥವಾ ದೇಶ ಸೇವೆಯ ಆದರ್ಶಗಳಿದ್ದವು. ಇವತ್ತು ಸಮಾಜ ಸೇವೆ ಅಥವಾ ದೇಶ ಸೇವೆ ಎಂಬ ಮಾತು ಹಾಸ್ಯಾಸ್ಪದ. ಇರಲಿ, ಈ ಕಾಲದಲ್ಲಿ ರಾಜಕಾರಣಿಗಳೆಂದರೆ ಕೇವಲ ಜನ ಪ್ರತಿನಿಧಿಗಳು ಮಾತ್ರ ಎಂದು ಒಪ್ಪಲು ಸಾಧ್ಯ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಅಥವಾ ಅವರ ಬೇಡಿಕೆಗಳಿಗೆ ಧ್ವನಿಯಾಗುವುದು ನಾಯಕರ ಹೊಣೆಗಾರಿಕೆ. ಇವರಿಗೆ ನಿರ್ದಿಷ್ಟವಾದ ಕೆಲಸದ ವೇಳೆಯೆಂಬುದು ಇಲ್ಲ. ಅದನ್ನು ನಿಗದಿ ಪಡಿಸಲೂ ಸಾಧ್ಯವಿಲ್ಲ. ಪರಿಸ್ಥಿತಿ, ಅಗತ್ಯಕ್ಕೆ ಅನುಗುಣವಾಗಿ ಇವರು ಹೊಣೆಗಾರಿಕೆ ನಿಭಾಯಿಸಬೇಕಾಗುತ್ತದೆ. ಇವುಗಳ ನಡುವೆ ಇವರ ಸ್ಥಾನಮಾನ, ಹುದ್ದೆಗಳಿಗೆ ಒಂದು ನಿರ್ದಿಷ್ಟ ಸೇವಾ ಅವಧಿಯೆಂಬುದು ಇದ್ದರೂ ಅದಕ್ಕೆ ಯಾವುದೇ ಖಾತರಿಯನ್ನು ನೀಡಲು ಸಾಧ್ಯವಿಲ್ಲ. ಇವೆಲ್ಲ ಅಂಶಗಳನ್ನು ದೃಷ್ಟಿಯಲ್ಲಿಟ್ಟು ಕೊಂಡು ರಾಜಕಾರಣಿಗಳಿಗೆ ನಿವೃತ್ತಿ ವಯಸ್ಸನ್ನು ನಿಗದಿ ಪಡಿಸುವ ಅವಶ್ಯಕತೆ ಈವರೆಗೆ ಕಂಡು ಬಂದಿರಲಾರದು. ಜೊತೆಗೆ ಅನುಭವ, ವಯಸ್ಸಿನ ಪಕ್ವತೆ ಸಮಾಜಕ್ಕೆ ಉತ್ತಮ ಕೊಡುಗೆಯಾಗ ಬಹುದು ಎಂಬ ನಿರೀಕ್ಷೆಯೂ ಇದ್ದಿರ ಬಹುದು.
ಬಹುಶ: ಜಗತ್ತಿನ ಯಾವ ದೇಶಗಳಲ್ಲಿಯೂ ರಾಜಕಾರಣದಲ್ಲಿ ನಿವೃತ್ತಿ ಎಂಬ ಪರಿಕಲ್ಪನೆ ಇದ್ದಂತಿಲ್ಲ. ಅದೇನಿದ್ದರೂ ಸ್ವಯಂ ನಿವೃತ್ತಿ ಮಾತ್ರ. ಹಾಗಾದರೆ ರಾಜಕಾರಣದಲ್ಲಿ ನಿವೃತ್ತಿಗಾಗಿ ಒಂದು ವಯಸ್ಸನ್ನು ನಿಗದಿ ಪಡಿಸುವ ಅಗತ್ಯವಿಲ್ಲವೇ? ಅಮೆರಿಕದಂತಹ ದೇಶದಲ್ಲಿ ಜೋ ಬೈಡನ್, ಡೊನಾಲ್ಡ್ ಟ್ರಂಪ್‌ರಂಥವರು ಎಂಭತ್ತು ದಾಟಿದರೂ ನೆಟ್ಟಗೆ ಓಡಾಡುತ್ತ ಕ್ರಿಯಾಶೀಲರಾಗಿರ ಬಹುದು. ಆದರೆ ಭಾರತದಂತಹ ದೇಶದಲ್ಲಿ ಈ ಮಾದರಿ ಸರಿ ಹೋಗಲಾರದು. ಯಾಕೆಂದರೆ ದೇಶದ ವಿಸ್ತೀರ್ಣ, ಹವಾಗುಣ, ಸಂಚಾರ ಸೌಲಭ್ಯ, ದೈಹಿಕ ಕ್ಷಮತೆ ಇತ್ಯಾದಿ ಇಲ್ಲಿ ಸಂಪೂರ್ಣ ಭಿನ್ನವಾದುದು. ಜೊತೆಗೆ ಜೀವಿತಾವಧಿಯನ್ನು ಸಹ ಗಣನೆಗೆ ತೆಗೆದು ಕೊಳ್ಳಬೇಕಾಗಿದೆ. ನಮ್ಮಲ್ಲಿ ಹಿರಿಯ ವಯೋವೃದ್ಧ ರಾಜಕಾರಣಿಗಳು ಸಾರ್ವಜನಿಕ ಬದುಕಿನಲ್ಲಿ ಕಷ್ಟ ಪಟ್ಟು ಏಗುತ್ತಿರುತ್ತಾರೆ. ಕೆಲವರು ಮಾತನಾಡಲು ಸಹ ತಡವರಿಸುತ್ತಾರೆ. ಇನ್ನು ಕೆಲವರದ್ದು ಕೂರಲು, ಎದ್ದೇಳಲು ಸಹಾಯಕರು ಬೇಕಾಗುವಂತಹ ದೈನೇಸಿ ಸ್ಥಿತಿ. ವಯೋಸಹಜವಾದಂತಹ ಇಂತಹ ದೈಹಿಕ ಹಾಗೂ ಆರೋಗ್ಯ ಸಮಸ್ಯೆಗಳನ್ನು ಇಟ್ಟು ಕೊಂಡು ಸಾರ್ವಜನಿಕ ಹುದ್ದೆಗಳಿಗೆ ನ್ಯಾಯ ಒದಗಿಸಲು ಸಾಧ್ಯವೇ ?
ಪ್ರಸಕ್ತ ಕಾಲಘಟ್ಟದಲ್ಲಿ ಈ ನೀತಿಯನ್ನು ಪುನರಾವಲೋಕನ ಮಾಡುವಂತಹ ಅವಶ್ಯಕತೆ ಭಾರತದ ಮಟ್ಟಿಗಂತೂ ಖಂಡಿತವಾಗಿಯೂ ಇದೆ. ಪ್ರಸಿದ್ಧ ನಾಟಕಕಾರ ಜಾರ್ಜ್ ಬರ್ನಾಡ್ ಶಾ ರಾಜಕಾರಣಿಗಳ ಬಗ್ಗೆ ಹೇಳಿದ ಮಾತು ಇಂದಿಗೂ ಪ್ರಸ್ತುತ. ‘‘ಯಾವುದೇ ನೀತಿ, ಶೀಲಗಳಿಲ್ಲದವರ ಕೊನೆಯ ನಿಲ್ದಾಣವೇ ರಾಜಕೀಯ’’ಎಂದಿದ್ದಾನೆ ಅವನು. ದೇಶದ ಪ್ರಸಕ್ತ ರಾಜಕೀಯ ಪರಿಸ್ಥಿತಿಯನ್ನು ಬಲ್ಲ ನಮಗೆ ಇದು ಅಕ್ಷರಶಃ ನಿಜವೆಂದೆನಿಸುತ್ತದೆ. ಅಧಿಕಾರ, ಸ್ವಜನಪಕ್ಷಪಾತ, ಭ್ರಷ್ಟಾಚಾರ, ಅವ್ಯವಹಾರಗಳ ನಡುವೆಯೇ ಗಿರಕಿ ಹೊಡೆಯುವ ಇವತ್ತಿನ ದೇಶದ ರಾಜಕೀಯ ಜನರಿಗೆ ಭ್ರಮನಿರಸನ ಮೂಡಿಸಿದೆ. ಆದ್ದರಿಂದ ಹಿರಿಯ ಅನುಭವಿ ರಾಜಕಾರಣಿಗಳು ಅಧಿಕಾರದಲ್ಲಿದ್ದರೆ ಸಮಾಜಕ್ಕೆ ಹೆಚ್ಚು ಪ್ರಯೋಜನವಾದೀತು ಎಂಬುದರಲ್ಲಿ ಯಾವುದೇ ಹುರುಳಿಲ್ಲದಂತಾಗಿದೆ.
ಈ ವಿಷಯದಲ್ಲಿ ಜನರು ಸಹ ಅಸಹನೆ, ಅಸಮಾಧಾನ ಹೊಂದಿದ್ದಾರೆ. ಖಾಸಗಿಯಾಗಿ ಅವರು ವ್ಯಕ್ತ ಪಡಿಸುವ ಅಭಿಪ್ರಾಯಗಳೇ ಇದಕ್ಕೆ ಸಾಕ್ಷಿಯಾಗಿವೆ. ‘‘ಇವರಿಗೆ ಆರೋಗ್ಯನೂ ಸರಿಯಿಲ್ಲ, ಸರಿಯಾಗಿ ನಡೆದಾಡಲೂ ಆಗುತ್ತಿಲ್ಲ. ಆದರೂ ರಾಜಕೀಯ ಸ್ಥಾನಮಾನ, ಅಧಿಕಾರ ಅಂತ ಒದ್ದಾಡುತ್ತಿದ್ದಾರೆ, ಯಾಕೆ, ಇದೆಲ್ಲ ಬೇಕಾ?’’; ‘‘ಇವರನ್ನು ನೋಡುವಾಗ ಅಯ್ಯೊ ಅನಿಸುತ್ತದೆ. ಯಾಕೆ ಸುಮ್ಮನೆ ಮನೆಯಲ್ಲಿ ಇರುವುದಕ್ಕೆ ಆಗೋದಿಲ್ವ ?’’ ಇತ್ಯಾದಿ. ಮೊದಲೇ ರಾಜಕಾರಣಿಗಳೆಂದರೆ ಮೂಗು ಮುರಿಯುವ ಜನರು ಖಾಸಗಿಯಾಗಿ ಈ ರೀತಿ ಟೀಕಿಸುವುದರಲ್ಲಿ ಆಶ್ಚರ್ಯವಿಲ್ಲವೆಂದು ಅನಿಸುತ್ತದೆ. ಆದರೆ ಸಾರ್ವಜನಿಕ ವೇದಿಕೆಗಳಲ್ಲಿ ಈ ವಿಷಯದ ಕುರಿತು ಅಂತಹ ದೊಡ್ಡ ಮಟ್ಟದ ಚರ್ಚೆಗಳಾಗಿಲ್ಲ.
2014ರಲ್ಲಿ ಭಾರತೀಯ ಜನತಾ ಪಕ್ಷ ಎಪ್ಪತ್ತೈದು ದಾಟಿದವರನ್ನು ಅಧಿಕಾರದ ಸ್ಥಾನಮಾನದಿಂದ ದೂರವಿಡುವ ಪ್ರಯೋಗವನ್ನೇನೋ ಪಕ್ಷದೊಳಗೆ ನಡೆಸಿತು. ಈ ಮಿತಿಯನ್ನು ಮೀರಿದ ಹಿರಿಯ ಗಣ್ಯರಿಗೆ ‘ಮಾರ್ಗದರ್ಶಕ ಮಂಡಳಿ’ ರಚಿಸಿ ಸಲಹೆ, ಸೂಚನೆ ನೀಡುವ ಅವಕಾಶ ಕಲ್ಪಿಸಿತು. ಮಾರ್ಗದರ್ಶಕ ಮಂಡಳಿಯ ಸಭೆ ನಡೆಯಿತೋ ಇಲ್ಲವೋ ಗೊತ್ತಾಗಿಲ್ಲ, ಆದರೆ ಕೊನೆಗೆ ಅದು ತನಗೆ ತಾನೇ ವಿಧಿಸಿ ಕೊಂಡಂತಹ ವಯಸ್ಸಿನ ಮಿತಿ ನಿಯಮವನ್ನು ಸ್ವಯಂ ಮುರಿಯಿತು. ಈ ಬಾರಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮುಂದೆ ಪ್ರಧಾನಿ ಮೋದಿಯವರಿಗೆ ಎಪ್ಪತ್ತೈದು ದಾಟುತ್ತದಲ್ಲ ಎಂಬ ಸಂದೇಹ ವ್ಯಕ್ತವಾದಾಗ ಅಂತಹ ಯಾವುದೇ ನಿವೃತ್ತಿ ನಿಯಮವನ್ನು ನಾವು ರೂಪಿಸಿಲ್ಲ ಎಂಬ ಜಾಣತನದ ಉತ್ತರವನ್ನು ಅಮಿತ್ ಶಾ ನೀಡಿದ್ದಾರೆ. ಇದರಿಂದ ಲೋಕಸಭೆ ಸದಸ್ಯರಿಗೆ ಗರಿಷ್ಠ ವಯೋಮಿತಿ ನಿಗದಿ ಪಡಿಸುವ ಇಂಗಿತ ಆ ಪಕ್ಷದೊಳಗೇನೇ ಇಲ್ಲವೆಂದಾಯಿತು. ಇನ್ನು ಈ ಪರಿಕಲ್ಪನೆ ಕಾನೂನಾಗುವುದಂತೂ ದೂರದ ಮಾತು.
ವಿಷಯ ಏನೇ ಇರಲಿ, ಅಧಿಕಾರ ರಾಜಕಾರಣಕ್ಕೆ ನಿರ್ದಿಷ್ಟ ನಿವೃತ್ತಿ ವಯಸ್ಸು ಅಗತ್ಯವೆಂದು ಅನಿಸುತ್ತದೆ. ಹೊಸ ತಂತ್ರಜ್ಞಾನ ಮತ್ತು ನೂತನ ಅಭಿವೃದ್ಧಿ ಪರಿಕಲ್ಪನೆಗಳೊಂದಿಗೆ ದೇಶವನ್ನು ಮುನ್ನಡೆಸಲು ಯುವಜನರು ರಾಜಕೀಯ ಪ್ರವೇಶಿಸಿ ನಾಯಕತ್ವ ವಹಿಸಿ ಕೊಳ್ಳುವುದು ಇಂದಿನ ಅಗತ್ಯ. ಅದಕ್ಕಾಗಿ ಒಂದು ನಿರ್ದಿಷ್ಟ ವಯೋಮಾನದ ಹಿರಿಯರು ಹಿಂದೆ ಸರಿಯುವುದು ಅನಿವಾರ್ಯ. ಜಡಗೊಂಡ ಮಲಿನ ಮನಸ್ಸುಗಳ ಬದಲಾಗಿ ಹೊಸತನ ತುಂಬಿದ ನಿರ್ಮಲ ಮನಸ್ಸುಗಳ ಬಗ್ಗೆ ಹೆಚ್ಚು ಭರವಸೆ ಇಟ್ಟು ಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣ.
ರಾಜಕಿಯ ಅಧಿಕಾರಸ್ಥ ಹುದ್ದೆಗಳಾಗಿರುವ ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಸಚಿವ, ಲೋಕಸಭಾ ಸದಸ್ಯ/ವಿಧಾನಸಭಾ ಸದಸ್ಯ ಸ್ಥಾನಗಳಂತಹ ಕರ್ತವ್ಯ ನಿರ್ವಹಣೆಯನ್ನು ಸಮರ್ಥವಾಗಿ ನಿರ್ವಹಿಸಲು ಒಂದು ಮಟ್ಟದ ಆರೋಗ್ಯ ಬಹಳ ಮುಖ್ಯ. ಹಾಗೆಯೇ ದೈಹಿಕ ಕ್ಷಮತೆ ಕೂಡ. ಆದ್ದರಿಂದ ಅಧಿಕಾರ ರಾಜಕಾರಣಕ್ಕೆ ನಿರ್ದಿಷ್ಟ ನಿವೃತ್ತಿ ವಯಸ್ಸನ್ನು ನಿಗದಿ ಪಡಿಸಬಹುದು. ಇದನ್ನು ವ್ಯೆಜ್ಞಾನಿಕ ಮಾನದಂಡವನಿಟ್ಟು ಕೊಂಡು ನಿರ್ಧರಿಸ ಬಹುದು. ಇನ್ನು ಅಧಿಕಾರೇತರ ರಾಜಕೀಯಕ್ಕೆ ಯಾವುದೇ ವಯಸ್ಸಿನ ಮಿತಿ ಅಗತ್ಯವಿಲ್ಲವಾದ್ದರಿಂದ ಹಿರಿಯರೂ ವಯೋವೃದ್ಧರೂ ಆಗಿರುವವರು ಅಧಿಕಾರೇತರ ವೇದಿಕೆಯಲ್ಲಿದ್ದು ಕೊಂಡು ಸಕ್ರಿಯವಾಗಿರ ಬಹುದಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ತಮ್ಮ ನಾಯಕರಿಗೆ ನಿವೃತ್ತಿ ವಯೋಮಿತಿಯನ್ನು ನಿಗದಿ ಪಡಿಸಲು ಮುಂದಾಗುವುದನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಆದರೆ ಪ್ರಬಲ ಜನಾಭಿಪ್ರಾಯ ರೂಪಿಸಿ ಕೊಂಡು ಮುಂದುವರಿದರೆ ಅಥವಾ ನ್ಯಾಯಾಂಗಕ್ಕೆ ಈ ಬಗ್ಗೆ ಮನವರಿಕೆ ಮಾಡಿದರೆ ಈ ನಿಟ್ಟಿನಲ್ಲಿ ಭರವಸೆ ಇಡಬಹುದೇನೊ ಎಂದನಿಸುತ್ತದೆ.