ಬಿಜೆಪಿಯ ಮನಸ್ಥಿತಿಗೆ ತಕ್ಕ ಹೊಸ ವಕ್ತಾರ ಪ್ರದೀಪ್ ಭಂಡಾರಿ
ಟಿವಿ ಆ್ಯಂಕರ್, ಡಿಜಿಟಲ್ ಪ್ಲಾಟ್ಫಾರ್ಮ್ ಜನ್ ಕಿ ಬಾತ್ ಸಂಸ್ಥಾಪಕ ಕೂಡ ಆಗಿರುವ ಪ್ರದೀಪ್ ಭಂಡಾರಿ, ಈಗ ಬಿಜೆಪಿಯ ಹೊಸ ರಾಷ್ಟ್ರೀಯ ವಕ್ತಾರ.
ಈ ವ್ಯಕ್ತಿ ಹೆಚ್ಚು ಸುದ್ದಿಗೆ ಬಂದದ್ದು ೨೦೨೦ರಲ್ಲಿ, ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತ ವಿವಾದಾತ್ಮಕ ವರದಿಗಳ ಕಾರಣದಿಂದ.
ಸುಶಾಂತ್ ಸಿಂಗ್ರದ್ದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ತಿಂಗಳುಗಟ್ಟಲೆ ಅಪಪ್ರಚಾರ ಅಭಿಯಾನ ನಡೆಸಿದ್ದರು. ಆ ಅಭಿಯಾನದಲ್ಲಿದ್ದ ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬ ಈ ಪ್ರದೀಪ್ ಭಂಡಾರಿ.
ಅದೇ ವರ್ಷ ಸೆಪ್ಟಂಬರ್ನಲ್ಲಿ ಕೆಲವು ಪತ್ರಕರ್ತರೊಂದಿಗೆ ಭಂಡಾರಿ ಜಗಳಕ್ಕಿಳಿದಿದ್ದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ವೀಡಿಯೊದಲ್ಲಿ ಭಂಡಾರಿಯನ್ನು ತಳ್ಳಿದ ವ್ಯಕ್ತಿ ಕಪಾಳಮೋಕ್ಷ ಮಾಡಲು ಯತ್ನಿಸಿದ್ದು ಕಂಡಿತ್ತು.ಮಧ್ಯಪ್ರವೇಶಕ್ಕೆ ಯತ್ನಿಸುತ್ತಿದ್ದ ಮುಂಬೈ ಪೊಲೀಸ್ ತಂಡದ ಎದುರು ಈ ಘಟನೆ ನಡೆದಿತ್ತು.
ವರದಿಗಳ ಪ್ರಕಾರ, ಘರ್ಷಣೆಗೆ ಕಾರಣ ಏನೆಂಬುದು ತಿಳಿದಿರಲಿಲ್ಲ. ಆದರೆ ಭಂಡಾರಿ ಇತರ ಪತ್ರಕರ್ತರ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಆರೋಪ ಕೇಳಿಬಂದಿತ್ತು. ನಂತರ, ತನ್ನ ಮೇಲೆ ದಾಳಿ ಮಾಡಿದ ಪತ್ರಕರ್ತರನ್ನು ಗೂಂಡಾಗಳು ಎಂದು ಭಂಡಾರಿ ಕರೆದದ್ದು ಸುದ್ದಿಯಾಗಿತ್ತು.
ಸುಶಾಂತ್ ಸಿಂಗ್ ಪ್ರಕರಣದಲ್ಲಿ ಈ ಪ್ರದೀಪ್ ಭಂಡಾರಿ ವರದಿಗಾರಿಕೆ ಹೆಸರಲ್ಲಿ ಮಾಡಿದ ಪ್ರಹಸನ ವ್ಯಾಪಕವಾಗಿ ಟ್ರೊಲ್ ಆಗಿತ್ತು.
ರಿಪಬ್ಲಿಕ್ ಟಿವಿಯಲ್ಲಿನ ಸಲಹಾ ಸಂಪಾದಕ ಹುದ್ದೆ ತೊರೆದ ನಂತರ ಭಂಡಾರಿ ಸೇರಿಕೊಂಡದ್ದು ಝೀ ನ್ಯೂಸ್, ಆನಂತರ ಇಂಡಿಯಾ ನ್ಯೂಸ್.
ಪ್ರದೀಪ್ ಭಂಡಾರಿಗೆ ಚುನಾವಣಾ ಸಮೀಕ್ಷೆ ನಡೆಸಿಯೂ ಅನುಭವ ಇದೆಯೆಂದು ಹೇಳಲಾಗುತ್ತದೆ. ‘ಜನ್ ಕಿ ಬಾತ್’ ಚುನಾವಣಾ ಸಮೀಕ್ಷೆ ನಡೆಸುವ ಸಂಸ್ಥೆಯೇ ಆಗಿದೆ. ಅನೇಕ ವಿಧಾನಸಭಾ ಚುನಾವಣೆಗಳಲ್ಲಿ ಮಾತ್ರವಲ್ಲದೆ, ಲೋಕಸಭೆ ಚುನಾವಣೆಗೆ ಸಮೀಕ್ಷೆ ನಡೆಸಿದ ಅನುಭವವೂ ಇದೆ ಎನ್ನಲಾಗಿದೆ.
ಮೋದಿ ಜೊತೆ ಭಂಡಾರಿ ನಂಟು ಬೆಳೆದದ್ದು ಅವರ ಬಗ್ಗೆ ಪುಸ್ತಕ ಬರೆದಿರುವ ಹಿನ್ನೆಲೆಯಲ್ಲಿ. ‘ಮೋದಿ ವಿಜಯಗಾಥ’ ಎಂಬುದು ಆ ಪುಸ್ತಕದ ಹೆಸರು.
ಟಿವಿ ವರದಿಗಾರಿಕೆಯಲ್ಲಿ ಭಂಡಾರಿಯ ಭಾಷೆ ಅಸಭ್ಯ ವಾಗಿರುವುದರ ಬಗ್ಗೆಯೂ ಗಂಭೀರ ತಕರಾರುಗಳಿವೆ. ಭಂಡಾರಿ ವರದಿಗಾರಿಕೆ ಪ್ರಚೋದನಕಾರಿ ಎಂದೂ ಉಲ್ಲೇಖಿಸಿರುವುದಿದೆ.
ಕಳೆದ ತಿಂಗಳು, ಡಿಜಿಟಲ್ ಹಿಂದೂ ಕಾನ್ ಕ್ಲೇವ್ ನಲ್ಲಿನ ಭಾಷಣದಲ್ಲಿ, ಹಿಂದೂ ವಿರೋಧಿ ಪಿತೂರಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ ಎಂದು ಹೇಳಿದ ಬಳಿಕವಂತೂ, ಈತ ತನ್ನ ಮನುಷ್ಯ ಎಂದು ಮೋದಿಗೂ ಬಿಜೆಪಿಗೂ ಅನ್ನಿಸಿರಬೇಕು. ಹಾಗಾಗಿ, ಭಂಡಾರಿಯನ್ನು ಬಿಜೆಪಿಯ ರಾಷ್ಟ್ರೀಯ ವಕ್ತಾರನೆಂದು ನಡ್ಡಾ ನೇಮಿಸಿದ್ದಾರೆ.
ಹಿಂದೂ ಕಾನ್ ಕ್ಲೇವ್ ಭಾಷಣದಲ್ಲಿ ಭಂಡಾರಿ ಹೇಳಿದ್ದು, ‘‘ದೇಶವನ್ನು ದುರ್ಬಲಗೊಳಿಸುವ ಹುನ್ನಾರ ನಡೆದಿದೆ. ಅದರ ಭಾಗವಾಗಿ, ಹಿಂದೂಗಳು ತಮ್ಮ ಹಿಂದುತ್ವ ಐಡೆಂಟಿಟಿ ಬಗ್ಗೆ ಮುಜುಗರಪಡುವಂಥ ಸನ್ನಿವೇಶ ನಿರ್ಮಾಣ ಮಾಡಲಾಗುತ್ತಿದೆ. ಜನಸಂಖ್ಯೆಯ ಸ್ವರೂಪವೇ ಬದಲಾಗಲಿದೆ.’’
ಹೀಗೆ ಇಂಥದೊಂದು ಭಾಷಣ ಮಾಡಿದ್ದ ಒಂದೇ ತಿಂಗಳಲ್ಲಿ ಭಂಡಾರಿ ಬಿಜೆಪಿ ಮನುಷ್ಯನಾಗಿರುವುದು, ಬಿಜೆಪಿಯ ಉದ್ದೇಶವೇನೆಂಬುದನ್ನೇ ಸೂಚಿಸುತ್ತಿದೆ.
ಇತ್ತೀಚೆಗೆ ಬಿಜೆಪಿಯ ವಕ್ತಾರರಾಗಿ ಮಿಂಚುತ್ತಿರುವವರಲ್ಲಿ ಸಾಮಾನ್ಯವಾಗಿ ಕಾಣುವ ಕೆಲವು ಗುಣಗಳಿವೆ. ಅವು ಬಹುಶಃ ಬಿಜೆಪಿ ವಕ್ತಾರರಾಗಲು ಇರುವ ಪ್ರಾಥಮಿಕ ಅರ್ಹತೆ ಕೂಡ ಆಗಿರಬಹುದು ಎಂಬ ಸಂಶಯವಿದೆ.
ಪ್ರಮುಖ ಟಿವಿ ಚಾನೆಲ್ಗಳಲ್ಲಿ ಬರುವ ಬಿಜೆಪಿ ರಾಷ್ಟ್ರೀಯ ವಕ್ತಾರರಲ್ಲಿ ಹೆಚ್ಚಿನವರು ಚರ್ಚೆಯ ಪ್ರಾಥಮಿಕ ನಿಯಮಗಳನ್ನೂ ಪಾಲಿಸುವುದಿಲ್ಲ.
ಚರ್ಚೆಯ ದಾರಿ ತಪ್ಪಿಸಲು, ಪ್ರಶ್ನೆಗೆ ಉತ್ತರ ಕೊಡದೇ ಇರಲು, ತಮ್ಮ ಎದುರಾಳಿ ಪಕ್ಷದ ವಕ್ತಾರರನ್ನು ಅವರು ಅದೆಷ್ಟು ಕೆಟ್ಟದಾಗಿ ಬೇಕಾದರೂ ಅವಹೇಳನ ಮಾಡುತ್ತಾರೆ. ಅವರು ತೀರಾ ಪ್ರಚೋದನಕಾರಿಯಾಗಿ ಮಾತಾಡುತ್ತಾರೆ, ಅದಕ್ಕೆ ಬೇಕಾದರೆ ಹಸಿ ಹಸಿ ಸುಳ್ಳು ಹೇಳುತ್ತಾರೆ. ಮುಸ್ಲಿಮ್ ದ್ವೇಷ ಎಂಬುದು ಅವರಲ್ಲಿ ಅಂತರ್ಗತವಾಗಿರುತ್ತದೆ. ತೀರಾ ಅಸಹಿಷ್ಣುಗಳಾಗಿರುತ್ತಾರೆ.
ಯಾವುದೋ ಪ್ರಶ್ನೆ ಕೇಳಿದರೆ ಇನ್ಯಾವುದೋ ಉತ್ತರ ಕೊಡುತ್ತಾರೆ. ಮತ್ತೆ ಅದನ್ನೇ ಮುಂದುವರಿಸಿಕೊಂಡು ಸಮರ್ಥಿಸಿಕೊಂಡು ಹೋಗುತ್ತಾರೆ.
ಬಹುತೇಕ ಪ್ರಮುಖ ಚಾನೆಲ್ಗಳ ಆ್ಯಂಕರ್ಗಳೂ ಬಿಜೆಪಿ ವಕ್ತಾರರೇ ಆಗಿ ಬಿಟ್ಟಿರುವುದರಿಂದ ಇವರನ್ನು ಯಾರೂ ತಡೆಯಲಾಗುತ್ತಿಲ್ಲ.
ಯಾರಾದರೂ ಆ್ಯಂಕರ್ ಅಪ್ಪಿತಪ್ಪಿ ತಡೆದರೆ, ಸರಿಯಾದ ಪ್ರಶ್ನೆ ಕೇಳಿದರೆ, ಆ ಆ್ಯಂಕರ್ನ ವಿರುದ್ಧ ಮುಗಿ ಬೀಳ್ತಾರೆ, ನಿನ್ನ ಸ್ಥಾನ ಇಷ್ಟೇ ಅಂತ ಮುಲಾಜಿಲ್ಲದೆ ಹೇಳಿ ಬಾಯಿ ಮುಚ್ಚಿಸುತ್ತಾರೆ.
ದ್ವೇಷ ಭಾಷಣ ಮಾಡಲು ಒಂದಿಷ್ಟೂ ಹಿಂಜರಿಯದೆ ಇರುವುದು ಬಿಜೆಪಿ ವಕ್ತಾರರಾಗಲು ಇರುವ ಪ್ರಾಥಮಿಕ ಅರ್ಹತೆ ಎಂಬುದು ಈಗಾಗಲೇ ಚಾಲ್ತಿಯಲ್ಲಿರುವ ಮಾತು.
ಬಿಜೆಪಿ, ಆರೆಸ್ಸೆಸ್ನ ಸಿದ್ಧಾಂತಕ್ಕೆ ಬದ್ಧರಾಗಿ, ಅದನ್ನು ಪ್ರಬಲವಾಗಿ ಸಮರ್ಥಿಸಿಕೊಳ್ಳುತ್ತಲೇ ಸಭ್ಯವಾಗಿ, ಆಕರ್ಷಕವಾಗಿ ಚರ್ಚೆ ಮಾಡುವ ಬಿಜೆಪಿ ವಕ್ತಾರರು ಒಂದು ಕಾಲದಲ್ಲಿ ಇದ್ದರು. ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ರವಿ ಶಂಕರ್ ಪ್ರಸಾದ್ ಅವರಂತಹ ವಕ್ತಾರರು ಚರ್ಚೆಗೆ ಕೂತರೆ ಎಲ್ಲರೂ ನೋಡುತ್ತಿದ್ದರು.
ಆದರೆ ಬಿಜೆಪಿಯಲ್ಲಿ ಆ ಕಾಲ ಮುಗಿದು ಮೋದಿ, ಅಮಿತ್ ಶಾ ಕಾಲದೊಂದಿಗೇ ಸಂಬಿತ್ ಪಾತ್ರ ಹಾಗೂ ಸ್ಮತಿ ಇರಾನಿ ಕಾಲ ಬಂತು. ಆಮೇಲೆ ಚರ್ಚೆಯ ಮಟ್ಟ ವನ್ನೂ ಪಾತಾಳದಲ್ಲೇ ಹುಡುಕುವ ಪರಿಸ್ಥಿತಿ.
ಟಿವಿಯಲ್ಲಿ ರಾಜಕೀಯ ಚರ್ಚೆಯನ್ನು ಸಂಪೂರ್ಣ ಹಳಿ ತಪ್ಪಿಸಿ, ಅದನ್ನು ದ್ವೇಷ ಭಾಷಣಕ್ಕೆ, ಅಪಪ್ರಚಾರಕ್ಕೆ ತಿರುಗಿಸಿದ ಕುಖ್ಯಾತಿ ಬಿಜೆಪಿಯ ಪ್ರಮುಖ ವಕ್ತಾರ ಸಂಬಿತ್ ಪಾತ್ರ ಹಾಗೂ ಟಿವಿ ಆ್ಯಂಕರ್ಗಳಿಗೆ ಸಲ್ಲುತ್ತದೆ.
ಡಿಬೇಟ್ ಹೆಸರಲ್ಲಿ ದ್ವೇಷ ಭಾಷಣ ಮಾಡುವುದನ್ನು ಇನ್ನೊಂದು ಹಂತಕ್ಕೆ ತಲುಪಿಸಿ, ಆಮೇಲೆ ಕೇಸು ಜಡಿಸಿಕೊಂಡು, ಅದರಿಂದಲೇ ಬದಿಗೆ ಸರಿದಿದ್ದು ನೂಪುರ್ ಶರ್ಮಾ. ಈಗ ಗೌರವ್ ಭಾಟಿಯಾ, ಗೌರವ್ ವಲ್ಲಭ್, ಅನಿಲ್ ಆ್ಯಂಟನಿ, ತೇಜಸ್ವಿ ಸೂರ್ಯ ಹೀಗೆ ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವವರ ಪಟ್ಟಿ ದೊಡ್ಡದಿದೆ.
ಬಿಜೆಪಿ ಸ್ಪೋಕ್ಸ್ ಪರ್ಸನ್ಸ್ಗಳಿಗೆ ‘ಟ್ರೊಲ್ ಪರ್ಸನ್ಸ್’ ಎಂದು ಅಡ್ಡ ಹೆಸರು ಬಂದಿರುವುದು ಸುಮ್ಮನೆಯಲ್ಲ.
ಅಲ್ಪಸಂಖ್ಯಾತರ ವಿರುದ್ಧದ ದ್ವೇಷ ಹರಡುವ ಮನಃಸ್ಥಿತಿಯವರಿಗಾಗಿ ಹುಡುಕುತ್ತಲೇ ಇರುವ ಬಿಜೆಪಿಗೆ ಈಗ ಅಂತಹ ಮತ್ತೊಬ್ಬ ವ್ಯಕ್ತಿ ಸಿಕ್ಕಂತಾಗಿದೆ.
ಈಗ, ಬಿಜೆಪಿ ನಿಜವಾಗಿಯೂ ಬಯಸುತ್ತಿರುವುದೇನು ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.