ಸರಕಾರಿ ಸಂಸ್ಥೆ ಹಾಗೂ ಇಲಾಖೆಗಳ ವಿಶ್ವಾಸಾರ್ಹತೆಯ ಸಮಸ್ಯೆ ಹಾಗೂ ಸವಾಲುಗಳು
ಮತ್ತೊಮ್ಮೆ ವ್ಯವಸ್ಥೆಯ ಮೇಲೆ ಸಂಶಯದ ಕರಿನೆರಳು ಚಾಚಿದೆ! ಆದಾಯ ತೆರಿಗೆ ಇಲಾಖೆಯು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ಮತ್ತು ಅವರ ಕುಟುಂಬಕ್ಕೆ ಸೇರಿದ ರೂ.1,000 ಕೋಟಿ ಮೌಲ್ಯದ ಆಸ್ತಿಯನ್ನು ಮರಳಿಸಿದೆ ಎಂಬ ಸುದ್ದಿ ಜನರಲ್ಲಿ ಅಚ್ಚರಿ ಮೂಡಿಸಿದೆ. 2021ರಲ್ಲಿ ಅವರು ವಿರೋಧ ಪಕ್ಷದಲ್ಲಿದ್ದಾಗ ಮುಟ್ಟು ಗೋಲು ಹಾಕಿ ಕೊಂಡಿದ್ದ ಈ ಆಸ್ತಿಯನ್ನು ಈಗ ಸದರಿಯವರು ಆರೋಪ ಮುಕ್ತರಾದ ಹಿನ್ನೆಲೆಯಲ್ಲಿ ಹಿಂದಿರುಗಿಸಲಾಗಿದೆ ಎನ್ನಲಾಗಿದೆ. ಅಜಿತ್ ಪವಾರ್ ಅವರು ಎನ್‌ಸಿಪಿ ಪಕ್ಷವನ್ನು ಒಡೆದು ಬಿಜೆಪಿ ಯೊಂದಿಗೆ ಸಖ್ಯ ಬೆಳೆಸಿದ ಬಳಿಕ ಇಷ್ಟು ದೊಡ್ಡ ಆರೋಪದಿಂದ ಮುಕ್ತರಾಗಿ ಕ್ಲೀನ್ ಚಿಟ್ ಪಡೆದಿರುವುದು ಕೆಲವು ಪ್ರಶ್ನೆಗಳನ್ನು ಕೂಡ ಹುಟ್ಟು ಹಾಕಿದೆ. ಹಾಗಾದರೆ ಅಜಿತ್ ಪವಾರ್ ಮೇಲಿನ ಆರೋಪ ರಾಜಕೀಯ ಪ್ರೆರೀತವಾಗಿತ್ತೇ? ಅಥವಾ ಪ್ರಬಲ ರಾಜಕಾರಣಿಯೊಬ್ಬರ ಮೇಲೆ ಸೂಕ್ತ ಆಧಾರಗಳಿಲ್ಲದೆ ಇಷ್ಟು ದೊಡ್ಡ ಪ್ರಕರಣ ದಾಖಲಿಸುವಲ್ಲಿ ಆದಾಯ ತೆರಿಗೆ ಇಲಾಖೆ ಎಡವಿತೇ? ಇವೆರಡರಲ್ಲಿ ಒಂದು ನಿಜವಾಗಿರಲೇ ಬೇಕು. ಆದರೆ ಯಾವುದನ್ನು ನಿಜವೆಂದು ನಂಬಬಹುದು ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ.
ಕಳೆದ ಕೆಲವಾರು ವರ್ಷಗಳಿಂದ ದೇಶದಾದ್ಯಂತ ಸಿಬಿಐ, ಈ.ಡಿ. ಮತ್ತು ಆದಾಯ ತೆರಿಗೆ ಇಲಾಖೆಗಳ ದಾಳಿಗಳು ನಿರಂತರವಾಗಿ ಸುದ್ದಿ ಮಾಡುತ್ತಿವೆ. ಈ ದಾಳಿಗಳೆಲ್ಲ ಪ್ರತಿಪಕ್ಷ ನಾಯಕರನ್ನೇ ಗುರಿ ಮಾಡುತ್ತಿವೆ ಎಂಬ ಆರೋಪ ಬಲವಾಗಿದೆ. ಮೇಲ್ನೋಟಕ್ಕೆ ಇದು ನಿಜವೆಂಬಂತೆಯೂ ಕಂಡು ಬರುತ್ತದೆ. ಇದರೊಂದಿಗೆ ಈ ದಾಳಿಗಳಿಗೆ ಗುರಿಯಾದ ನಾಯಕರು ಬಿಜೆಪಿ ಆಥವಾ ಅದರ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡ ಬಳಿಕ ಪರಿಶುದ್ಧರಾಗಿ ಹೊರ ಬರುತ್ತಾರೆ ಎಂಬುದಕ್ಕೆ ಅಜಿತ್ ಪವಾರ್ ಪ್ರಕರಣದಂತಹ ಅನೇಕ ಉದಾಹರಣೆಗಳೂ ಸಿಗುತ್ತವೆ. ಇದಕ್ಕಾಗಿಯೇ ಕಳಂಕಿತ ರಾಜಕಾರಣಿಗಳನ್ನು ಪರಿಶುದ್ಧಗೊಳಿಸಲು ಬಿಜೆಪಿಯು ವಾಶಿಂಗ್ ಮೆಷಿನ್ ಇಟ್ಟುಕೊಂಡಿದೆ ಎಂದು ಪ್ರತಿಪಕ್ಷಗಳು ವ್ಯಂಗ್ಯ ಮಾಡುತ್ತಿವೆ. ಆದರೆ ಪ್ರಧಾನಿಯವರ ಸಹಿತ ಆಡಳಿತ ಪಕ್ಷದವರು ಇಂತಹ ಆರೋಪಗಳಲ್ಲಿ ಹುರುಳಿಲ್ಲ ಎಂದೇ ಪ್ರತಿಪಾದಿಸುತ್ತಿದ್ದಾರೆ. ನಾವು ಯಾರನ್ನು, ಯಾವುದನ್ನು ನಂಬುವುದು? ನಿರಂತರ ಅಧ್ಯಯನಶೀಲತೆ ಮತ್ತು ವಿವೇಕ ನಮ್ಮ ನೆರವಿಗೆ ಬರ ಬೇಕಷ್ಟೇ.
ಇಲ್ಲಿ ಮುಖ್ಯವಾಗುವುದು ಬಿಜೆಪಿ ಅಥವಾ ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳ ರಾಜಕೀಯ ಹಿತಾಸಕ್ತಿ ಅಥವಾ ಮೇಲಾಟವಲ್ಲ. ನಮಗೆ ಮಹತ್ವದ್ದೆನಿಸುವುದು ಒಂದು ಕಾಲದಲ್ಲಿ ಘನತೆ, ಗೌರವಗಳಿಗೆ ಹೆಸರಾಗಿದ್ದ ಸಿಬಿಐ, ಈ.ಡಿ., ಆದಾಯ ತೆರಿಗೆ ಇಲಾಖೆ ಮುಂತಾದುವುಗಳ ವಿಶ್ವಾಸಾರ್ಹತೆಯ ಪ್ರಶ್ನೆ. ಪಕ್ಷಗಳು ಅಧಿಕಾರಕ್ಕೆ ಬರುತ್ತವೆ ಹೋಗುತ್ತವೆ, ಆದರೆ ಸರಕಾರಿ ಇಲಾಖೆ ಅಥವಾ ಸಂಸ್ಥೆಗಳು ತಮ್ಮ ವಿಶ್ವಾಸಾರ್ಹತೆಯನ್ನು ಎಂದಿನಂತೆ ಉಳಿಸಿಕೊಂಡು ಸಾಗುವುದು ಅವಶ್ಯಕ. ಪ್ರಜಾತಾಂತ್ರಿಕ ವ್ಯವಸ್ಥೆ ಮತ್ತು ಜನರ ದೃಷ್ಟಿಯಲ್ಲಿ ಇಂತಹ ಇಲಾಖೆಗಳ ಕಾರ್ಯವೈಖರಿ ಪ್ರಶ್ನಾತೀತವಾಗಿರುವುದು ಮುಖ್ಯವಾಗುತ್ತದೆ. ಆದರೆ ಪ್ರಸಕ್ತ ಈ ಇಲಾಖೆಗಳು ಜನರ ದೃಷ್ಟಿಯಲ್ಲಿ ಮೊದಲಿನ ಸ್ಥಾನಮಾನವನ್ನು ಉಳಿಸಿ ಕೊಂಡಿಲ್ಲವೆನ್ನುವುದು ಕಣ್ಣೆದುರಿಗಿರುವ ಸತ್ಯ. ಹೀಗಾಗಲು ಕಾರಣವೇನು ಎನ್ನುವ ಕುರಿತು ಚಿಂತಿಸ ಬೇಕಾಗಿದೆ.
ಸರಕಾರಿ ಇಲಾಖೆಗಳನ್ನು ದುರ್ಬಳಕೆ ಮಾಡುವಂತಹ ಪರಿಸ್ಥಿತಿ ಒಮ್ಮಿಂದೊಮ್ಮೆಗೆ ನಿರ್ಮಾಣವಾದದ್ದೇನಲ್ಲ. ಹಿಂದೆ ಸುದೀರ್ಘ ಕಾಲ ಕೇಂದ್ರದಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಪಕ್ಷದ ಅಧಿಕಾರ ಕಾಲದಲ್ಲಿಯೇ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಲು ನಾಂದಿ ಹಾಕಿರುವುದನ್ನು ಮರೆಯಲಾಗದು. ಮುಖ್ಯವಾಗಿ ಸಿಬಿಐಯನ್ನು ವಾಪಕವಾಗಿ ದುರ್ಬಳಕೆ ಮಾಡಿಕೊಂಡಂತಹ ಆರೋಪ ಕಾಂಗ್ರೆಸ್ ಸರಕಾರದ ಮೇಲಿತ್ತು ಎಂಬುದನ್ನು ಮರೆಯಲಾಗದು. ಆಗ ವಿರೋಧ ಪಕ್ಷಗಳು ಸಿಬಿಐಯನ್ನು ‘ಕಾಂಗ್ರೆಸ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್’ ಎಂದು ವ್ಯಂಗ್ಯವಾಡುತಿದ್ದದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಆದರೆ ಪ್ರತಿಪಕ್ಷದ ಸ್ಥಾನದಲ್ಲಿದ್ದ ಬಿಜೆಪಿ ಅಧಿಕಾರಕ್ಕೇರಿದ ಬಳಿಕ ಸರಕಾರಿ ಸಂಸ್ಥೆಗಳ ದುರ್ಬಳಕೆಯ ಆರೋಪ ಇನ್ನಷ್ಟು ಬಲವಾಯಿತು. ಈಗ ಸಿಬಿಐಯೊಂದಿಗೆ ಈ.ಡಿ. ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಸಹ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿರುವಂತಹ ಆರೋಪ ವ್ಯಾಪಕವಾಗಿದೆ. ಹಿಂದೆ ಉದ್ಯಮಪತಿಗಳು, ಕಾಳಸಂತೆ ಕೋರರು, ಉನ್ನತ ಸರಕಾರಿ ಅಧಿಕಾರಿ ಮುಂತಾದವರ ಮೇಲೆ ಆದಾಯ ತೆರಿಗೆ ದಾಳಿಯಾಗುತ್ತಿದ್ದಂತಹ ಸುದ್ದಿಗಳು ಪತ್ರಿಕೆಗಳಲ್ಲಿ ವರದಿಯಾಗುತ್ತಿದವು. ಈ.ಡಿ. ದಾಳಿ, ವಿಚಾರಣೆಗಳೆಲ್ಲ ತೀರಾ ವಿರಳವೆಂದೇ ಹೇಳಬಹುದು. ಇರಲಿ, ಇದು ವ್ಯವಸ್ಥೆಯ ಸುಧಾರಣೆಯ ಭಾಗವಾಗಿ ನಡೆಯುವ ಕಾರ್ಯಾಚರಣೆಯಾಗಿದ್ದರೆ ಅದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಲೇ ಬೇಕು. ಜೊತೆಗೆ ಅದಕ್ಕೆ ಅಗತ್ಯ ಬೆಂಬಲವೂ ದೊರೆಯಬೇಕು. ಆದರೆ ಅಲ್ಲಿ ಪಕ್ಷಪಾತ, ದುರುದ್ದೇಶಗಳು ತಲೆ ಹಾಕಿದರೆ ವ್ಯವಸ್ಥೆ ಹದಗೆಡುವುದು ನಿಶ್ಚಿತ. ಆದಾಯ ತೆರಿಗೆ ಇಲಾಖೆ, ಈ.ಡಿ., ಸಿಬಿಐಗಳ ಹೆಚ್ಚಿರುವ ಕ್ರಿಯಾಶೀಲತೆ ಮತ್ತು ಸರಕಾರ ಈ ವಿಚಾರದಲ್ಲಿ ಪಕ್ಷಪಾತ ಮಾಡುತ್ತಿದೆ ಎನ್ನಲಾದ ಆರೋಪಕ್ಕೆ ಹೊಂದಾಣಿಕೆಯಾಗುತ್ತಿರುವುದು ಕಾಕತಾಳೀಯವೇ? ಈ ಬಗೆಯ ಆರೋಪವನ್ನು ಆಧಾರರಹಿತವೆಂದು ಸಾಬೀತು ಮಾಡುವಂತಹ ಹೊಣೆಗಾರಿಕೆ ಸರಕಾರದ ಮೇಲಿದೆ.
ರಾಜಕಾರಣಿಗಳಾರೂ ಇಂತಹ ಆರೋಪಗಳನ್ನು ಬಡ ಪೆಟ್ಟಿಗೆ ಬಗ್ಗುವವರಲ್ಲ. ರಾಜಕೀಯ ನೇತಾರರ ಸಮರ್ಥನೆಗಳಿಂದ ಜನರಲ್ಲಿ ಮೂಡಿರುವ ಗೊಂದಲ, ಸಂದೇಹಗಳೇನೂ ಸುಲಭದಲ್ಲಿ ಬಗೆ ಹರಿಯಲಾರದು. ದೇಶದ ಸರ್ವೋಚ್ಚ ನಾಯಾಲಯವೇ ಸಿಬಿಐಯನ್ನು ‘ಪಂಜರದ ಗಿಳಿ’ ಎಂದು ಗುರುತಿಸಿದೆ.
ಇದರಿಂದ ತನಿಖಾ ಸಂಸ್ಥೆಗಳಿಗೆ ತಟ್ಟಿರುವ ಕಳಂಕವನ್ನು ನಿರಾಯಾಸವಾಗಿ ತೊಡೆದು ಹಾಕುವಂತಿಲ್ಲ. ದೇಶದ ಉನ್ನತ ನ್ಯಾಯಾಲಯದ ಅಭಿಪ್ರಾಯ ಮತ್ತು ವ್ಯಾಪಕ ಟೀಕೆಗಳ ಹೊರತಾಗಿಯೂ ಅಧಿಕಾರದಲ್ಲಿರುವವರಿಗೆ ತಮ್ಮ ಕೆಟ್ಟ ನಡೆಗಳನ್ನು ತಿದ್ದಿ ಕೊಳ್ಳುವಂತಹ ಸೂಕ್ಷ್ಮತೆ, ಸಂವೇದನೆಗಳಿಲ್ಲದಿರುವುದು ಖೇದಕರ. ಇದೇ ರೀತಿ ಮುಂದುವರಿದರೆ ಜನ ಸಾಮಾನ್ಯರಿಗೆ ಅವ್ಯವಹಾರ, ಭ್ರಷ್ಟಾಚಾರಗಳನ್ನು ಮಟ್ಟ ಹಾಕುವಂತಹ ಇಲಾಖೆಗಳ ಮೇಲಿನ ವಿಶ್ವಾಸ, ಗೌರವ ಉಳಿಯಬಹುದೇ? ದಾಳಿ, ತನಿಖೆಗಳ ಭಯದಲ್ಲಿ ವಿರೋಧ ಪಕ್ಷಗಳ ನಾಯಕರು ತಮ್ಮ ಹೊಣೆಗಾರಿಕೆಯನ್ನು ಎಷ್ಟರ ಮಟ್ಟಿಗೆ ಸಮರ್ಥವಾಗಿ ನಿರ್ವಹಿಸಬಹುದು? ಒಂದು ವಾದಕ್ಕಾಗಿ ಅವರು ಪರಿಶುದ್ಧರಾಗಿದ್ದ ಪಕ್ಷದಲ್ಲಿ ಈ ದಾಳಿ, ತನಿಖೆಗಳಿಗೆ ಯಾಕೆ ಹೆದರಬೇಕೆಂದು ಕೇಳ ಬಹುದು. ಆದರೆ ಇಂದಿನ ಚುನಾವಣಾ ವ್ಯವಸ್ಥೆಯಲ್ಲಿ ಯಾವುದೇ ಸಣ್ಣ ಪುಟ್ಟ ತಪ್ಪುಗಳನ್ನು ಮಾಡದಂತಹ ಸಜ್ಜನ ವ್ಯಕ್ತಿ ಚುನಾವಣೆ ಗೆಲ್ಲಲು ಸಾಧ್ಯವೇ ಎಂಬ ಮರು ಪ್ರಶ್ನೆ ತಕ್ಷಣ ಹುಟ್ಟಿ ಕೊಳ್ಳುತ್ತದೆ. ಇದು ಇಂದು ಆಡಳಿತ ಪಕ್ಷದಲ್ಲಿದ್ದು ಕಾಲಾಂತರದಲ್ಲಿ ವಿರೋಧ ಪಕ್ಷದಲ್ಲಿ ಇರಬೇಕಾಗಿ ಬರಬಹುದಾದ ನಾಯಕರಿಗೂ ಅನ್ವಯವಾಗುವ ಪರಿಸ್ಥಿತಿ. ಮೇಲಾಗಿ ನಮ್ಮ ತನಿಖೆ, ವಿಚಾರಣೆಗಳೆಲ್ಲ ಸಂಕೀರ್ಣ ಹಾಗೂ ದೀರ್ಘಕಾಲೀನವಾಗಿರುವುದರಿಂದ ಆರೋಪಗಳ ಇತ್ಯರ್ಥವೆನ್ನುವುದು ಸರಳವಾದ ವಿಚಾರವಲ್ಲ.
ಹಾಗಾದರೆ ಈ ತನಿಖಾ ಸಂಸ್ಥೆಗಳ ಅಥವಾ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಈ ನಿಟ್ಟಿನಲ್ಲಿ ಅಸಹಾಯಕರಾಗಿದ್ದಾರೆಯೇ? ಅವರಿಗೆ ನ್ಯಾಯ ನಿಷ್ಠುರತೆ, ದಿಟ್ಟತನ ಪ್ರದರ್ಶಿಸಲು ಉಂಟಾಗಿರುವ ಅಡ್ಡಿಯಾದಾರೂ ಏನು? ಈ ನಿಟ್ಟಿನಲ್ಲಿ ಇಂತಹ ಪ್ರಶ್ನೆಗಳು ಉದ್ಭವವಾಗುವುದು ಸ್ವಾಭಾವಿಕ. ವಾಸ್ತವದಲ್ಲಿ ಸರಕಾರಿ ಇಲಾಖೆ ಅಥವಾ ಸಂಸ್ಥಾ ಮುಖ್ಯಸ್ಥರಿಗೆ ನಿಯಮಾನುಸಾರವಾದ ನಿಲುವು, ನಿರ್ಧಾರ ತಾಳುವಂತಹ ಎಲ್ಲ ಸ್ವಾತಂತ್ರ್ಯವೂ ಇದೆ. ಇಂತಹ ಸಂದರ್ಭಗಳಲ್ಲಿ ಮೇಲಿನ ಹಂತದಿಂದ ಒತ್ತಡ, ಬೆದರಿಕೆಗಳೂ ಬರಬಹುದು. ಇದನ್ನೆಲ್ಲ ಎದುರಿಸಿ ನಿಲ್ಲುವಂತಹ ಛಾತಿ ಮುಖ್ಯಸ್ಥರಿಗೆ ಇರಬೇಕಷ್ಟೇ. ಇಂತಹ ಪ್ರಾಮಾಣಿಕ ಅಧಿಕಾರಿಗಳನ್ನು ಹೆಚ್ಚೆಂದರೆ ವರ್ಗಾವಣೆ ಅಥವಾ ಹುದ್ದೆಯಿಂದ ಕೆಳಗಿಸುವಂತಹ ಕ್ರಮವನ್ನು ಸರಕಾರ ಕೈಗೊಳ್ಳಬಹುದಾಗಿದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ನ್ಯಾಯಪರತೆ, ದಿಟ್ಟತನವುಳ್ಳಂತಹ ಆಧಿಕಾರಗಳು ವಿರಳವಾಗಿರುವುದರಿಂದಲೇ ಈ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಲು ಸಾಧ್ಯವಿಲ್ಲ. ಮೇಲಾಗಿ ಸರಕಾರಗಳು ಈಗೀಗ ಈ ಹುದ್ದೆಗಳಿಗೆ ನೇಮಕ ಮಾಡುವ ಮೊದಲು ಅಧಿಕಾರಿಗಳ ಹಿನ್ನೆಲೆ, ರಾಜಕೀಯ ಒಲವು ಇತ್ಯಾದಿಗಳನ್ನು ತಿಳಿದು ಕೊಂಡೇ ಮುಂದುವರಿಯುವುದರಿಂದ ವಿವಾದಗಳು ಉಂಟಾಗುವುದಿಲ್ಲ. ಒಟ್ಟಿನಲ್ಲಿ ರಾಜಕೀಯ ನಾಯಕರು ಮತ್ತು ಉನ್ನತ ಅಧಿಕಾರಿಗಳ ಒಳ ರಾಜಕೀಯ, ಕೊಡು-ಕೊಳ್ಳುವಿಕೆಯಿಂದ ಸರಕಾರದ ಉನ್ನತ ಇಲಾಖೆಗಳು, ತನಿಖಾ ಸಂಸ್ಥೆಗಳು ನೈತಿಕತೆ, ವಿಶ್ವಾಸಾರ್ಹತೆಗಳನ್ನು ಕಳೆದು ಕೊಳ್ಳುತ್ತಲೇ ಸಾಗುತ್ತಿರುವುದಂತು ಸತ್ಯ. ದೇಶದಲ್ಲಿ ಸರಕಾರಗಳು ಬದಲಾಗಬಹುದು. ವ್ಯವಸ್ಥೆ ಮಾತ್ರ ಯಾವುದೇ ಸುಧಾರಣೆ ಕಾಣದೆ ಮುಂದುವರಿಯುವುದು ನಮ್ಮ ಹೆಚ್ಚುಗಾರಿಕೆ!