ಶಿವಗಿರಿ ತೀರ್ಥಯಾತ್ರೆಯ ಉದ್ದೇಶ ಮತ್ತು ಗುರಿ
ಇಂದು ನಾರಾಯಣ ಗುರು ಜನ್ಮದಿನ
ಗೋವಿಂದನ್ ವೈದ್ಯರ್: ಶ್ರೀಪಾದರ ಸನ್ನಿಧಿಯಲ್ಲಿ ಒಂದು ವಿಚಾರವನ್ನು ಅರಿಕೆ ಮಾಡಿಕೊಂಡು ಅನುಮತಿ ಪಡೆಯಬೇಕೆಂದಿದ್ದೇವೆ.
ನಾರಾಯಣ ಗುರು: ಅದೇನೆಂದು ಹೇಳಬಹುದಲ್ಲವೇ?
ವೈದ್ಯರ್: ಅರಿಕೆ ಮಾಡಿಕೊಳ್ಳಬೇಕಾದ ವಿಚಾರಗಳನ್ನು ಪ್ರಶ್ನೆಗಳ ರೂಪದಲ್ಲಿ ಬರೆದು ತಂದಿದ್ದೇವೆ.
ಕಿಟ್ಟನ್ ರೈಟರ್: (ಓದುತ್ತಾರೆ) ಶಿವಗಿರಿ ತೀರ್ಥಯಾತ್ರೆ.
ಗುರು: ತೀರ್ಥಯಾತ್ರೆಯೇ.. ಶಿವಗಿರಿಗೆ ಒಳ್ಳೆಯ ವಿಚಾರ. ನಮ್ಮಲ್ಲಿರುವ ನಳದ ನೀರಿನಲ್ಲೇ ಸ್ನಾನ ಮಾಡಬಹುದು. ಶಾರದೆಗೆ ನಮಿಸಬಹುದು. ಒಳ್ಳೆಯ ಕೆಲಸ.
ರೈಟರ್: ಕೇರಳದ ಈಳವರಿಗೆ ಶಿವಗಿರಿಯನ್ನು ಪುಣ್ಯಕ್ಷೇತ್ರವಾಗಿಸಿ ಅದಕ್ಕೆ ತೀರ್ಥಯಾತ್ರೆ ನಡೆಸುವುದಕ್ಕೆ ಶ್ರೀಪಾದರು ಅಪ್ಪಣೆ ಕೊಡಿಸಬೇಕು.
ಗುರು: ವರ್ಕಲದ ಜನಾರ್ದನ ಕ್ಷೇತ್ರವೂ ಪುಣ್ಯಕ್ಷೇತ್ರವೇ ತಾನೇ. ಅದರ ಸಮೀಪವೇ ಇರುವ ಶಿವಗಿರಿಯೂ ಪುಣ್ಯಕ್ಷೇತ್ರವಾಗಬಹುದೇ?
ರೈಟರ್: ಹಿಂದೂಗಳ ಪುಣ್ಯಕ್ಷೇತ್ರಗಳಲ್ಲಿ ನಮಗೆ ಪ್ರವೇಶಾನುಮತಿಯಿಲ್ಲ. ಇಷ್ಟರ ಮೇಲೂ ಅಲ್ಲಿಗೆ ಹೋಗುವವರ ಮೇಲೆ ದೈಹಿಕ ದೌರ್ಜನ್ಯ ನಡೆಯುತ್ತಿದೆ. ಇದರಿಂದ ಅವಮಾನದ ಜೊತೆಗೆ ಹಣಕಾಸಿನ ನಷ್ಟವೂ ಆಗುತ್ತಿದೆ. ಶ್ರೀಪಾದರು ಅಪ್ಪಣೆ ಕೊಡಿಸಿದರೆ ಶಿವಗಿರಿಯೇ ಪುಣ್ಯಕ್ಷೇತ್ರವಾಗುತ್ತದೆ. ನಿಮ್ಮ ಅಪ್ಪಣೆಯೊಂದೇ ಸಾಕು!
ಗುರು: ನಾವು ಹೇಳಿದರೆ ಶಿವಗಿರಿ ಪುಣ್ಯಕ್ಷೇತ್ರವಾಗುವುದೆಂಬುದು ರೈಟರ್ ಮತ್ತು ವೈದ್ಯರ್ ನಂಬಿಕೆ.. ಅಲ್ಲವೇ?
ವೈದ್ಯರ್: ನಮಗದರಲ್ಲಿ ಸಂಪೂರ್ಣ ನಂಬಿಕೆ ಇದೆ.
ಗುರು: ಹಾಗಾದರೆ ನಾವು ಹೇಳಬಹುದು. ನೀವು ಅದನ್ನು ನಂಬಿ ಕಾರ್ಯಪ್ರವೃತ್ತರಾಗಬಹುದು. ಅಲ್ಲಿಗೆ ಒಟ್ಟು ಮೂರು ಮಂದಿ ಆದಂತಾಯಿತು. ಇಷ್ಟು ಸಾಕೇ?
ವೈದ್ಯರ್: ತಮ್ಮಿಂದ ಅಪ್ಪಣೆಯಾದರೆ ನಾವು ಇಪ್ಪತ್ತು ಲಕ್ಷ ಮಂದಿ (ಈಳವರ ಸಂಖ್ಯೆ). ಹಾಗೆಯೇ ನಮ್ಮಂತೆಯೇ ಶೋಷಿತರಾಗಿರುವ ಇತರರೂ ಶಿವಗಿರಿಯನ್ನು ಪುಣ್ಯಕ್ಷೇತ್ರವೆಂದು ನಂಬಿ ಒಪ್ಪುತ್ತೇವೆ.
ಗುರು: ಹಾಗಿದ್ದರೆ ನಾವಂತೂ ಅನುಮತಿ ನೀಡಿದ್ದೇವೆ.
ರೈಟರ್: ಯಾತ್ರಿಕರು ವರ್ಷದಲ್ಲೊಮ್ಮೆ ಶಿವಗಿರಿಗೆ ಬರಬೇಕೆಂದು ಬಯಸುತ್ತಾರೆ. ಅದು ಯಾವ ದಿನಾಂಕದಂದು, ಯಾವ ನಕ್ಷತ್ರದಂದು ನಡೆಯಬೇಕು ಎಂದು ತಾವೇ ಅಪ್ಪಣೆ ಕೊಡಿಸಬೇಕು.
ಗುರು: ತೀರ್ಥಯಾತ್ರೆಗೆ ಬರುವವರು ಯುರೋಪಿಯನ್ನರ ವರ್ಷಾರಂಭಕ್ಕೆ ಶಿವಗಿರಿ ತಲುಪಲಿ. ಅದೇ ಉತ್ತಮ. ಅದು ಒಳ್ಳೆಯ ಸಮಯವೂ ಹೌದು.
ರೈಟರ್: ಈ ತೀರ್ಥಯಾತ್ರೆಯ ಸಂಕಲ್ಪ ಮಾಡುವವರು ಯಾವುದಾದರೂ ವ್ರತವನ್ನಾಚರಿಸಬೇಕೇ?
ಗುರು: ಸುದೀರ್ಘ ವ್ರತ, ಕಠಿಣ ನಿಯಮಗಳನ್ನು ಪಾಲಿಸಲು ಎಲ್ಲರಿಗೂ ಸಾಧ್ಯವಿಲ್ಲ. ಬುದ್ಧ ಹೇಳಿದ ಪಂಚಶುದ್ಧಿಗಳೊಂದಿಗೆ ಹತ್ತು ದಿನಗಳ ಕಾಲ ವ್ರತನಿಷ್ಠರಾಗಿದ್ದರೆ ಸಾಕು.
ರೈಟರ್: ತೀರ್ಥಯಾತ್ರಿಗಳು ವಿಶಿಷ್ಟವಾದ ಉಡುಪುಗಳನ್ನೇನಾದರೂ ಧರಿಸಬೇಕೇ?
ಗುರು: ಬಿಳಿಯ ಬಟ್ಟೆ ಗೃಹಸ್ಥರದ್ದು. ಕಾಶಾಯ ವಸ್ತ್ರ ಸನ್ಯಾಸಿಗಳಿಗೆ ಮೀಸಲು. ಕಪ್ಪು ಬಟ್ಟೆ ಶಬರಿಮಲೆಗೆ ಹೋಗುವವರಿಗೆ. ಶಿವಗಿರಿಗೆ ತೀರ್ಥಯಾತ್ರೆಗೆ ಬರುವವರು ಹಳದಿ ಬಣ್ಣದ ಬಟ್ಟೆ ಧರಿಸಲಿ. ಶ್ರೀಕೃಷ್ಣನದ್ದೂ ಶ್ರೀಬುದ್ಧನದ್ದೂ ಆದ ಧೋತಿ.
ಗುಂಪಿನಲ್ಲಿದ್ದ ಒಬ್ಬರು: ಯಾತ್ರಿಕರು ರುದ್ರಾಕ್ಷಿ ಧರಿಸಬೇಕೇ?
ಗುರು: ಬೇಡ, ರುದ್ರಾಕ್ಷಿಯನ್ನು ಅರೆದು ತಣ್ಣೀರಿನ ಜೊತೆ ಕುಡಿಯುವುದು ಉತ್ತಮ ಎನಿಸುತ್ತದೆ. ರುದ್ರಾಕ್ಷಿಯಲ್ಲವೇ ಒಳ್ಳೆಯದಾಗದೇ ಇರದು! ಇನ್ನೂ ಏನಾದರೂ ಪ್ರಶ್ನೆಗಳಿವೆಯೇ?
ರೈಟರ್: ಇನ್ನೇನು ಇಲ್ಲ
ಗುರು: ಶ್ರೀಬುದ್ಧನ ಪಂಚಶುದ್ಧಿಗಳು ಯಾವುವು ಎಂದು ಗೊತ್ತೇ?
ವೈದ್ಯರ್: ಗೊತ್ತು, ದೇಹಶುದ್ಧಿ, ಆಹಾರಶುದ್ಧಿ, ಮನಃಶುದ್ಧಿ, ವಾಕ್ಶುದ್ಧಿ ಮತ್ತು ಕರ್ಮಶುದ್ಧಿ.
ಗುರು: ನಾನು ಹಳದಿ ವಸ್ತ್ರ ಎಂದು ಹೇಳಿದೆ. ಅದಕ್ಕಾಗಿ ಯಾರೂ ಹಳದಿ ರೇಷ್ಮೆಯನ್ನು ಖರೀದಿಸಲು ಹೋಗಬೇಡಿ. ಹೊಸ ಬಟ್ಟೆಯ ಅಗತ್ಯ ಕೂಡ ಇಲ್ಲ. ನೀವು ಬಳಸುತ್ತಿರುವ ಬಿಳಿಬಟ್ಟೆಯನ್ನೇ ಅರಿಶಿನದಲ್ಲಿ ಮುಳುಗಿಸಿ ಬಳಸಬಹುದು. ಇದರಿಂದ ಮತ್ತೆ ಆ ಬಟ್ಟೆಯನ್ನು ತೊಳೆದು ಬಿಳಿಯಾಗಿಸಲೂಬಹುದು. ತೀರ್ಥಯಾತ್ರೆಯ ಹೆಸರಲ್ಲಿ ದುಂದುವೆಚ್ಚ, ಆಡಂಬರವನ್ನು ಪ್ರದರ್ಶನಕ್ಕಿಟ್ಟು ಗದ್ದಲವೆಬ್ಬಿಸಿ ಆ ಪರಿಕಲ್ಪನೆಯನ್ನು ಮಲಿನಗೊಳಿಸಬೇಡಿ. ಅನಗತ್ಯವಾಗಿ ಒಂದು ಕಾಸನ್ನೂ ಖರ್ಚುಮಾಡಬೇಡಿ. ಈಳವರು ಹಣ ಸಂಪಾದಿಸುತ್ತಾರೆ. ಆದರೆ ಅದನ್ನು ನೀರಿನಂತೆ ಖರ್ಚು ಮಾಡಿ ಹಾಳುಗೆಡವುತ್ತಾರೆ. ಕೆಲವರಂತೂ ಒಂದಷ್ಟು ಸಾಲವನ್ನೂ ಮಾಡಿಕೊಳ್ಳುತ್ತಾರೆ. ಇದು ಮಾಡಕೂಡದು. ಉಳಿತಾಯ ಮಾಡಲು ಕಲಿಯಬೇಕು. ಶಿಕ್ಷಣ, ಹಣಕಾಸು ಮತ್ತು ಶುಚಿತ್ವದ ವಿಚಾರದಲ್ಲಿ ಸಮುದಾಯ ಬಹಳ ಹಿಂದುಳಿದಿದೆ. ಅದು ಬದಲಾಗಬೇಕು. ಅದನ್ನು ಬದಲಾಯಿಸಬೇಕು. ಇನ್ನೇನೂ ಪ್ರಶ್ನೆಗಳಿಲ್ಲ ತಾನೇ?
ವೈದ್ಯರ್: ಇನ್ನೇನೂ ಇಲ್ಲ ಗುರುಗಳೇ
ಗುರು: ಈ ತೀರ್ಥಯಾತ್ರೆಯ ಉದ್ದೇಶವೇನು? ಅಂಥದ್ದೇನೂ ಇಲ್ಲದೆಯೇ ಒಂದು ಯಾತ್ರೆಯೇ...?
ರೈಟರ್: ಉದ್ದೇಶವೇನೆಂದು ಆಗಲೇ ತಾವು ಅಪ್ಪಣೆ ಕೊಡಿಸಿದಿರಲ್ಲವೇ
ಗುರು: ಅದು ಉದ್ದೇಶವಲ್ಲ. ಯಾತ್ರೆಯನ್ನು ಹೇಗೆ ಕೈಗೊಳ್ಳಬೇಕು ಎಂಬ ವಿಧಿ-ವಿಧಾನ. ಇದೇ ಉದ್ದೇಶವಾಗಿದ್ದರೆ ಸಾಕೇ..? ವೈದ್ಯರ ಅಭಿಪ್ರಾಯವೇನು...? ತೀರ್ಥಯಾತ್ರೆಗೆ ಒಂದು ನಿರ್ದಿಷ್ಟ ಉದ್ದೇಶವಿರಬಾರದೇ...?
ವರ್ಷಕ್ಕೊಮ್ಮೆ ಒಂದಷ್ಟು ಮಂದಿ ಹಳದಿ ವಸ್ತ್ರವುಟ್ಟು ದೇಶದ ವಿವಿಧ ಭಾಗಗಳಿಂದ ಶಿವಗಿರಿಗೆ ಬಂದು ಸುತ್ತಾಡಿ, ಮಿಂದು, ತಿಂದುಂಡು, ಹಣ ಖರ್ಚು ಮಾಡಿಕೊಂಡು ಮನೆಗೆ ಮರಳುವುದರಿಂದ ಏನು ಸಾಧಿಸಿದಂತಾಗುತ್ತದೆ? ಇದರಿಂದ ಏನೂ ಉಪಯೋಗವಿಲ್ಲ. ಬರೀ ಖರ್ಚು ಮತ್ತು ಆಯಾಸ ಮಾತ್ರ. ಇದು ಕೂಡದು. ಯಾವ ಕೆಲಸವಾದರೂ ಸರಿಯೇ ಅದಕ್ಕೊಂದು ಉದ್ದೇಶವಿರಬೇಕು. ಶಿವಗಿರಿ ತೀರ್ಥಯಾತ್ರೆಗೂ ಉದ್ದೇಶವಿರಬೇಕು. ಅದರ ಮೂಲಕ ಸಾಧಿಸಬೇಕಾದ ಗುರಿಗಳೇನು ಎಂದು ನಿಮಗೆ ಗೊತ್ತಿರಬೇಕು.
ಮೊದಲನೆಯದ್ದು ಶಿಕ್ಷಣ, ಎರಡನೆಯದ್ದು ಶುಚಿತ್ವ, ಮೂರನೆಯದ್ದು ದೈವಭಕ್ತಿ, ನಾಲ್ಕನೆಯದ್ದು ಸಂಘಟನೆ, ಐದನೆಯದ್ದು ವ್ಯವಸಾಯ, ಆರನೆಯದ್ದು ವ್ಯಾಪಾರ, ಏಳನೆಯದ್ದು ಕರಕೌಶಲ ಮತ್ತು ಎಂಟನೆಯದ್ದು ತಂತ್ರಜ್ಞಾನದ ತರಬೇತಿ. ಇವೇ ಶಿವಗಿರಿ ತೀರ್ಥಯಾತ್ರೆಯ ಮೂಲಕ ನೀವು ಸಾಧಿಸಬೇಕಿರುವುದು. ಅರ್ಥವಾಯಿತೇ...?
ಈ ಎಲ್ಲಾ ವಿಷಯಗಳ ಬಗ್ಗೆಯೂ ಭಾಷಣಗಳು ಮತ್ತು ಪ್ರಾತ್ಯಕ್ಷಿಕೆಗಳಿರಬೇಕು. ಆಯಾ ವಿಷಯಗಳ ತಜ್ಞರನ್ನು ಶಿವಗಿರಿಗೆ ಆಹ್ವಾನಿಸಿ ಅವರ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಯಾತ್ರೆಗೆಂದು ಬಂದವರು ಈ ಕಾರ್ಯಕ್ರಮಗಳಲ್ಲಿ ಶಿಸ್ತು ಮತ್ತು ಶ್ರದ್ಧೆಯಿಂದ ಭಾಗವಹಿಸಿ ಅವುಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿ ಸಫಲರಾಗಬೇಕು. ಆಗ ಜನರ ಮತ್ತು ನಾಡಿನ ಅಭಿವೃದ್ಧಿಯಾಗುತ್ತದೆ. ಇದುವೇ ಶಿವಗಿರಿ ತೀರ್ಥಯಾತ್ರೆಯ ಉದ್ದೇಶ ಮತ್ತು ಗುರಿಯಾಗಿರುತ್ತದೆ!