ರಾಜಸ್ಥಾನ: ನಿಲ್ಲದ ಬಣ ಜಿದ್ದಾಜಿದ್ದಿ ಕಾಂಗ್ರೆಸ್‌ಗೆ ಮತ್ತೆ ಮುಳುವಾದೀತೇ?
ಸರಣಿ- 9
ಹಿಂದೂಗಳ ಹೆಚ್ಚಿನ ಪ್ರಾಬಲ್ಯವಿರುವ ರಾಜಸ್ಥಾನದ ಜನಸಂಖ್ಯೆ 6.85 ಕೋಟಿಗೂ ಅಧಿಕ. ಈ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.88ಕ್ಕೂ ಹೆಚ್ಚು ಪ್ರಮಾಣದಲ್ಲಿ ಹಿಂದೂಗಳೇ ಇದ್ದಾರೆ.
ಮುಸ್ಲಿಮರು ಜನಸಂಖ್ಯೆಯ ಶೇ.9.07 ರಷ್ಟಿದ್ದಾರೆ. ಉಳಿದಂತೆ ಸಿಖ್ಖರು, ಜೈನರು, ಕ್ರೈಸ್ತರು, ಬೌದ್ಧರು ಇಲ್ಲಿನ ಇತರ ಸಮುದಾಯಗಳಾಗಿವೆ.
ರಾಜಸ್ಥಾನದ ಒಟ್ಟು ಲೋಕಸಭಾ ಕ್ಷೇತ್ರಗಳು 25.
ಪ್ರಮುಖ ರಾಜಕೀಯ ಪಕ್ಷಗಳೆಂದರೆ, ಕಾಂಗ್ರೆಸ್, ಬಿಜೆಪಿ, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್‌ಎಲ್‌ಪಿ).
ಕಾಂಗ್ರೆಸ್ ಪಕ್ಷವು 1950ರ ದಶಕದಿಂದಲೂ ರಾಜಸ್ಥಾನದ ಲೋಕಸಭಾ ಚುನಾವಣೆಯಲ್ಲಿ ಪ್ರಾಬಲ್ಯ ಕಾಯ್ದುಕೊಂಡು ಬಂದಿತ್ತು. ಆನಂತರ ದೇಶದ ರಾಜಕಾರಣದಲ್ಲಾದ ಬದಲಾವಣೆಯಂತೆ 1977ರ ಚುನಾವಣೆಯಲ್ಲಿ ಜನತಾ ಪಕ್ಷ ಪ್ರಾಬಲ್ಯ ಸಾಧಿಸಿತು. ಅದಾದ ಬಳಿಕ 1980ರ ದಶಕದಿಂದ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆಯೇ ಇಲ್ಲಿ ಪೈಪೋಟಿ.
1989ರ ಚುನಾವಣೆಯಲ್ಲಿ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಲೋಕಸಭಾ ಸೀಟುಗಳನ್ನು ಗೆದ್ದ ಬಿಜೆಪಿ, ಆನಂತರ ಗಟ್ಟಿಯಾಗುತ್ತಲೇ ಬಂದಿದೆ. ಕಳೆದೆರಡು ಚುನಾವಣೆಗಳಲ್ಲೂ ಬಿಜೆಪಿಯೇ ಪ್ರಾಬಲ್ಯ ಸಾಧಿಸಿದೆ.
2009ರ ಚುನಾವಣೆಯಲ್ಲಿ ಪ್ರಾಬಲ್ಯ ಮೆರೆದಿದ್ದ ಕಾಂಗ್ರೆಸ್, 2014 ಮತ್ತು 2019ರ ಚುನಾವಣೆಯಲ್ಲಿ ಒಂದೂ ಲೋಕಸಭಾ ಸ್ಥಾನವನ್ನು ಗೆಲ್ಲಲಾಗಿಲ್ಲ. ಲೋಕಸಭೆ ಚುನಾವಣೆ ಎದುರಿಗಿರುವ ಹೊತ್ತಲ್ಲಿ ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಂಡದ್ದು ಕಾಂಗ್ರೆಸ್ ಗೆ ಮತ್ತು ಆ ಮೂಲಕ ‘ಇಂಡಿಯಾ’ ಒಕ್ಕೂಟಕ್ಕೆ ಒಂದು ದೊಡ್ಡ ಹಿನ್ನಡೆ ಎಂಬಂತೆ ಕಾಣಿಸುತ್ತಿದೆ.
ವಿಧಾನಸಭೆ ಚುನಾವಣೆಯನ್ನು ಲೋಕಸಭೆ ಚುನಾವಣೆಗೆ ಸೆಮಿ ಫೈನಲ್ ಎಂದು ಹೇಳುತ್ತ ಬರಲಾಗಿದೆಯಾದರೂ, ವಿಧಾನಸಭೆಯಲ್ಲಿ ಗೆದ್ದ ಪಕ್ಷವೇ ಲೋಕಸಭೆ ಚುನಾವಣೆಯಲ್ಲೂ ಪ್ರಾಬಲ್ಯ ಸಾಧಿಸುತ್ತದೆ ಎಂದು ಹೇಳಲಾಗದು.
2018ರಲ್ಲಿ ರಾಜಸ್ಥಾನ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಅದು ಪೂರ್ತಿಯಾಗಿ ವಿಫಲವಾಗಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಒಂದು ಕ್ಷೇತ್ರ ಹೊರತುಪಡಿಸಿ ಎಲ್ಲ ಕಡೆ ಗೆಲುವು ಸಾಧಿಸಿತ್ತು ಮತ್ತು ಆ ಒಂದು ಕ್ಷೇತ್ರವೂ ಕಾಂಗ್ರೆಸ್ ಪಾಲಾಗಲಿಲ್ಲ. ಆ ಒಂದು ಸೀಟನ್ನು ಆರ್‌ಎಲ್‌ಪಿ ಗೆದ್ದಿತ್ತು. ಹೀಗಾಗಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶ ಹೇಗಿರಬಹುದು ಎಂಬುದು ಕುತೂಹಲದ ಸಂಗತಿಯಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕಿರುವ ಗೆಲುವು, ಅದು ಪಕ್ಷವನ್ನು ಇನ್ನಷ್ಟು ಬಲಗೊಳಿಸಿಕೊಳ್ಳುವುದಕ್ಕೆ ನೆರವಾಗಬಹುದು.
ರಾಜಸ್ಥಾನದಲ್ಲಿ ಬ್ರಾಹ್ಮಣ, ಜಾಟ್ ಹಾಗೂ ರಜಪೂತರೇ ಬಹುಸಂಖ್ಯಾತರು. ರಾಜಸ್ಥಾನದ ಒಟ್ಟು ಜನಸಂಖ್ಯೆಯ ಪೈಕಿ ಬ್ರಾಹ್ಮಣ ಸಮುದಾಯದ ಸಂಖ್ಯಾಬಲ ಶೇ. 7ರಷ್ಟಿದೆ.
ಈಗ ಮತ್ತೆ ರಾಜ್ಯದಲ್ಲೂ ಅಧಿಕಾರ ಹಿಡಿದಿರುವ ಬಿಜೆಪಿ, ಮುಖ್ಯಮಂತ್ರಿ ಆಯ್ಕೆ ವೇಳೆಯಲ್ಲೂ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಹೆಜ್ಜೆ ಇಟ್ಟಿದೆ.
ಬ್ರಾಹ್ಮಣ ಸಮುದಾಯದ ಭಜನ್ ಲಾಲ್ ಶರ್ಮಾ ಅವರನ್ನು ಬಿಜೆಪಿ ಇಲ್ಲಿ ನೂತನ ಮುಖ್ಯಮಂತ್ರಿಯನ್ನಾಗಿ ಮಾಡಿದೆ.
ರಜಪೂತ ಸಮುದಾಯ ಹಾಗೂ ದಲಿತ ಸಮುದಾಯಗಳಿಗೆ ಉಪ ಮುಖ್ಯಮಂತ್ರಿ ಪಟ್ಟ ನೀಡಿದೆ.
ರಾಜಸ್ಥಾನದಲ್ಲಿ ಸಾಮಾನ್ಯ ವರ್ಗವನ್ನು ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿ, ಈ ಕ್ರಮ ರಾಜಸ್ಥಾನ ಮಾತ್ರವಲ್ಲದೆ, ಹರ್ಯಾಣ, ಛತ್ತೀಸ್‌ಗಡ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ಸೇರಿದಂತೆ ಹಲವೆಡೆ ಬಿಜೆಪಿಗೆ ಲಾಭ ತಂದುಕೊಡಲಿದೆ ಎಂಬ ಲೆಕ್ಕಾಚಾರಗಳಿವೆ.
ಹಿಂದುತ್ವವೇ ರಾಜಸ್ಥಾನದ ರಾಜಕಾರಣದಲ್ಲಿ ಪ್ರಮುಖ ಅಂಶವಾಗಿದೆ ಎಂಬುದಂತೂ ನಿಜ.
ಇಂಡಿಯಾ ಟಿವಿ ಮತ್ತು ಸಿಎನ್‌ಎಕ್ಸ್ ಸಮೀಕ್ಷೆ ಪ್ರಕಾರ, ರಾಜಸ್ಥಾನದಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಭಾರೀ ಗೆಲುವು ತನ್ನದಾಗಿಸಿಕೊಳ್ಳಲಿದೆ.
ಬಿಜೆಪಿ ಶೇ.49 ಮತಗಳನ್ನು ಪಡೆಯುವ ಸಾಧ್ಯತೆಯಿದ್ದು, ಕಾಂಗ್ರೆಸ್ ಶೇ.41 ಮತ್ತು ಇತರ ಪಕ್ಷಗಳು ಶೇ.11ರಷ್ಟು ಮತಗಳನ್ನು ಪಡೆಯಬಹುದು ಎಂದು ಸಮೀಕ್ಷೆ ಹೇಳಿದೆ.
ರಾಜಸ್ಥಾನದ ಒಟ್ಟು 25 ಸ್ಥಾನಗಳಲ್ಲಿ ಬಿಜೆಪಿ 23 ಸ್ಥಾನಗಳನ್ನು ಪಡೆಯಲಿದ್ದು, ಕಾಂಗ್ರೆಸ್ 2 ಸ್ಥಾನಗಳನ್ನು ಪಡೆಯಲಿದೆ ಎಂಬುದು ಸಮೀಕ್ಷೆಯ ಅಂದಾಜು.
ಇತ್ತೀಚಿನ ರಾಜಸ್ಥಾನ ವಿಧಾನಸಭಾ ಚುನಾವಣೆ ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸಿರುವ ಕೆಲ ವಿಶ್ಲೇಷಣೆಗಳು ಇನ್ನೊಂದು ಅಂಶದ ಬಗ್ಗೆ ಗಮನ ಸೆಳೆಯುತ್ತವೆ.
ಆ ಕೂತೂಹಲಕಾರಿ ಅಂಶವೇನೆಂದರೆ, ರಾಜ್ಯದ 25 ಲೋಕಸಭಾ ಕ್ಷೇತ್ರಗಳ ಪೈಕಿ 11ರಲ್ಲಿನ 200 ವಿಧಾನಸಭಾ ಕ್ಷೇತ್ರಗಳ ಪ್ರದೇಶಗಳಲ್ಲಿ ವಾಸ್ತವವಾಗಿ ಬಿಜೆಪಿಗಿಂತ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ ಎಂಬುದು.
ಮೊನ್ನೆಯ ವಿಧಾನಸಭೆ ಚುನಾವಣೆಯಲ್ಲಿ ಉಳಿದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರವೇ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು.
2014 ಮತ್ತು 2019ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಎಂಬುದನ್ನು ಗಮನಿಸಿದರೆ, ಈ 11 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 2023ರಲ್ಲಿ ಕಾಂಗ್ರೆಸ್ ಸಾಧಿಸಿದ ಮುನ್ನಡೆ 2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ‘ಇಂಡಿಯಾ’ ಒಕ್ಕೂಟಕ್ಕೆ ಮಹತ್ವದ್ದಾಗಲಿದೆ.
ವಿಧಾನಸಭಾ ಚುನಾವಣಾ ಫಲಿತಾಂಶಗಳ ಸಮೀಕ್ಷೆಯ ಪ್ರಕಾರ ಜೈಪುರ ಗ್ರಾಮಾಂತರ, ಅಲ್ವಾರ್, ಬಾರ್ಮರ್, ಗಂಗಾನಗರ, ಬನ್ಸ್ವಾರಾ, ಜುಂಜುನು, ಕರೌಲಿ-ಧೋಲ್ಪುರ್, ನಾಗೌರ್, ಟೋಂಕ್-ಸವಾಯಿ ಮಾಧೋಪುರ್, ಜಾಲೋರ್ ಮತ್ತು ಭರತ್‌ಪುರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಮುನ್ನಡೆ ಸಾಧಿಸಿದೆ.
ಜೈಪುರ ಗ್ರಾಮಾಂತರ ಮತ್ತು ಅಲ್ವಾರ್‌ನಲ್ಲಿ ಪಕ್ಷವು 1 ಲಕ್ಷಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿದ್ದರೆ, ಆರು ಕ್ಷೇತ್ರಗಳಲ್ಲಿ ಬಿಜೆಪಿಯೆದುರು 50,000ಕ್ಕಿಂತ ಕಡಿಮೆ ಮತಗಳ ಮುನ್ನಡೆ ಸಾಧಿಸಿದೆ. ಈ 11 ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದರೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಭಾವಶಾಲಿ ಫಲಿತಾಂಶಗಳನ್ನು ನೀಡಬಹುದು ಎಂಬುದು ವಿಶ್ಲೇಷಕರ ಅಭಿಪ್ರಾಯ.
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಶೇ. 39.3 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಶೇ. 39.8ರಷ್ಟು ಮತಗಳೊಂದಿಗೆ ಅಧಿಕಾರಕ್ಕೆ ಬಂದಿತ್ತು. ಆದರೆ 2019ರಲ್ಲಿ ಕಾಂಗ್ರೆಸ್ ಒಂದೇ ಒಂದು ಲೋಕಸಭಾ ಕ್ಷೇತ್ರವನ್ನೂ ಗೆಲ್ಲಲಾಗಲಿಲ್ಲ. ಯಾಕೆಂದರೆ ಆ ಚುನಾವಣೆಯಲ್ಲಿ ಬಿಜೆಪಿಯ ಶೇ.58.44ರಷ್ಟು ಭಾರೀ ಪ್ರಮಾಣದ ಮತಗಳಿಗೆ ವಿರುದ್ಧವಾಗಿ ಕಾಂಗ್ರೆಸ್ ಪಡೆದದ್ದು ಶೇ.34.44ರಷ್ಟು ಮತಗಳನ್ನು ಮಾತ್ರ. ಆ ಚುನಾವಣೆಯಲ್ಲಿ ಬಿಜೆಪಿಯ 21 ವಿಜೇತರು 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು.
ಈ ಹಿನ್ನೆಲೆಯಲ್ಲಿ, 11 ಲೋಕಸಭಾ ಕ್ಷೇತ್ರಗಳಲ್ಲಿನ ಈ ಸಲದ ಮುನ್ನಡೆ ಕಾಂಗ್ರೆಸ್ ಪಾಲಿಗೆ ಅನುಕೂಲಕರ ವಾತಾವರಣವನ್ನು ಲೋಕಸಭಾ ಚುನಾವಣೆಯಲ್ಲಿಯೂ ಒದಗಿಸಬಹುದೆಂಬುದು ಪರಿಣಿತರ ಅಭಿಪ್ರಾಯ.
ಆದರೆ ರಾಮ ಮಂದಿರ, ಹಿಂದುತ್ವ, ಮೋದಿ ವರ್ಚಸ್ಸು, ಬಿಜೆಪಿಯ ಪ್ರಚಾರ ಭರಾಟೆ ಹಾಗೂ ಸಂಘಟನಾ ಸಾಮರ್ಥ್ಯದ ಎದುರು ಈ ಮುನ್ನಡೆಯನ್ನು ಫಲಿತಾಂಶವಾಗಿ ಬದಲಾಯಿಸಿಕೊಳ್ಳುವುದು ಕಾಂಗ್ರೆಸ್‌ಗೆ ಅಷ್ಟು ಸುಲಭವಲ್ಲ.
ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ಬಣಗಳ ಜಿದ್ದಾಜಿದ್ದಿಯಲ್ಲಿ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ಥಾನವನ್ನು ಬಿಜೆಪಿಗೆ ಬಿಟ್ಟು ಕೊಟ್ಟಿದೆ. ಚುನಾವಣಾ ಸೋಲಿನ ಬಳಿಕ ಇಬ್ಬರ ನಡುವಿನ ಅಂತರ ಇನ್ನಷ್ಟು ಹೆಚ್ಚಾಗಿರುವ ಸುದ್ದಿಗಳಿವೆ. ಅದು ಕಾಂಗ್ರೆಸ್‌ಗಂತೂ ಶುಭ ಸುದ್ದಿ ಅಲ್ಲವೇ ಅಲ್ಲ.