ರಾಜ್ಯದಲ್ಲಿ ಅಧಿಕಾರಿ ಕೇಂದ್ರಿತ ವಿಕೇಂದ್ರೀಕರಣ: ನನಸಾಗದ ರಾಜೀವ್ ಗಾಂಧಿ ಕನಸು
ಸಂವಿಧಾನದ 73 ಮತ್ತ 74ನೇ ತಿದ್ದುಪಡಿಗಳು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಅತ್ಯಂತ ಮಹತ್ತರವಾದ ಮೈಲುಗಲ್ಲುಗಳು. ಸ್ಥಳೀಯ ಸ್ವಯಂ ಸರಕಾರಗಳಾದ ಪಂಚಾಯತ್ ರಾಜ್ ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳನ್ನು ಸಂವಿಧಾನ ಬದ್ಧಗೊಳಿಸುವ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯವಾದ ಜನರ ಕೈಗೆ ಆಧಿಕಾರ ನೀಡುವಲ್ಲಿ ಇಟ್ಟ ದಿಟ್ಟ ಹೆಜ್ಜೆಗಳು.
ಈ ಸಂವಿಧಾನದ ತಿದ್ದುಪಡಿಗಳ ಮೂಲ ಕನಸುಗಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ. ಅವರು ಮೇಲಿನ ತಮ್ಮ ಆಶಯಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಸಂವಿಧಾನದ 64 ಮತ್ತು 65ನೇ ತಿದ್ದುಪಡಿಗಳಾಗಿ, ವಿಧೇಯಕಗಳನ್ನು ಸಂಸತ್ತಿನಲ್ಲಿ 1989ರಲ್ಲಿ ಮಂಡಿಸುವ ಸಂದರ್ಭದಲ್ಲಿ ತಿಳಿಸಿದ ವಿಧೇಯಕದ ಆಶಯಗಳ ಹಿನ್ನೆಲೆಯಲ್ಲಿ, ಮೂರು ದಶಕಗಳ ನಂತರದಲ್ಲಿನ ಕರ್ನಾಟಕದ ಸ್ಥಳೀಯ ಸರಕಾರಗಳ ಇಂದಿನ ಸ್ಥಿತಿಗತಿಗಳ ಅವಲೋಕನವನ್ನು ಈ ಲೇಖನದ ಮೂಲಕಮಾಡುವ ಪ್ರಯತ್ನ ಮಾಡಲಾಗಿದೆ.
ರಾಜಕೀಯ ಕಾರಣಗಳಿಂದಾಗಿ ತಾವು ಮಂಡಿಸಿದ ವಿಧೇಯಕಗಳಿಗೆ ರಾಜ್ಯ ಸಭೆಯಲ್ಲಿ ಸೋಲಾದ ಸಂದರ್ಭದಲ್ಲಿ ಅವರು ಕಣ್ಣೀರು ಹಾಕಿದ್ದು, ಅಧಿಕಾರ ವಿಕೇಂದ್ರಿಕರಣವನ್ನು ಸಂವಿಧಾನ ಬದ್ಧಗೊಳಿಸುವ ಮೂಲಕ ಜನರ ಕೈಗೆ ಅಧಿಕಾರ ನೀಡುವ ಅವರ ಪ್ರಾಮಾಣಿಕ ಬದ್ಧತೆಯನ್ನು ತೋರಿಸುತ್ತದೆ. ಮುಂದೆ 1992ರಲ್ಲಿ ಪಿ.ವಿ. ನರಸಿಂಹರಾವ್ ರವರು ಪ್ರಧಾನಿಯಾಗಿ, ರಾಜೀವ್ ಗಾಂಧಿಯವರ ಕನಸನ್ನು ನನಸು ಮಾಡಿದ್ದು ಒಂದು ಇತಿಹಾಸ.
ಅಮಾನತುಗೊಂಡ ಪ್ರಜಾಪ್ರಭುತ್ವ
‘‘ಈ ವಿಧೇಯಕದ ಮೂಲಕ ಸ್ಥಳೀಯ ಸರಕಾರಗಳಿಗೆ ಪ್ರತೀ ಐದು ವರ್ಷಕ್ಕೊಮ್ಮೆ ಚುನಾವಣೆ ಕಡ್ಡಾಯವಾಗಿ ನಡೆಯುವಂತೆ ಮಾಡಲಾಗುವುದು, ತನ್ಮೂಲಕ ಪ್ರಜಾಪ್ರಭುತ್ವದ ನಿರಂತರತೆಯನ್ನು ಕಾಪಾಡಿಕೊಳ್ಳಲಾಗುವುದು, ಅದಕ್ಕಾಗಿಯೇ ರಾಜ್ಯ ಚುನಾವಣಾ ಆಯೋಗವನ್ನು ಸ್ಥಾಪಿಸಲಾಗುವುದು’’ ಎಂದಿದ್ದಾರೆ ರಾಜೀವ್ ಗಾಂಧಿ. ಆದರೆ ರಾಜ್ಯದಲ್ಲಿ ಜಿಲ್ಲಾ ಪಂಚಾಯತ್‌ಗಳು ಮತ್ತು ತಾಲೂಕು ಪಂಚಾಯತ್‌ಗಳ ಆಡಳಿತ ಅವಧಿ ಮುಗಿದು ನಾಲ್ಕು ವರ್ಷಗಳು ಕಳೆದರೂ ಇದುವರೆಗೂ ಚುನಾವಣೆಗಳು ನಡೆದಿಲ್ಲ ಹಾಗೂ ನಡೆಸುವ ಸೂಚನೆಗಳೂ ಕಾಣುತ್ತಿಲ್ಲ. ಪಂಚಾಯತ್ ರಾಜ್ ಅಧಿನಿಯಮಕ್ಕೆ ತಿದ್ದುಪಡಿಗಳನ್ನು ತರುವ ಮೂಲಕ, ತಾಂತ್ರಿಕ ಕಾರಣ ನೀಡಿ ಚುನಾವಣೆಗಳನ್ನು ಮುಂದೂಡಲಾಗುತ್ತಿದೆ. ಸ್ವತಹ ಚುನಾವಣೆ ನಡೆಸಬೇಕದ ರಾಜ್ಯ ಚುನಾವಣಾ ಆಯೋಗವೇ ಚುನಾವಣೆ ನಡೆಸಲು ಅನುವುಮಾಡುವಂತೆ ನ್ಯಾಯಾಲಯದ ಮೋರೆ ಹೋಗುವಂತಾಗಿರುವುದು ವಿಪರ್ಯಾಸವೇ ಸರಿ.
ನಗರ ಸ್ಥಳೀಯ ಸಂಸ್ಥೆಗಳದ್ದು ಇನ್ನೊಂದು ಕಥೆ. ರಾಜ್ಯದಲ್ಲಿರುವ ಬಹುತೇಕ ನಗರ ಸ್ಥಳಿಯ ಸಂಸ್ಥೆಗಳಿಗೆ ಚುನಾವಣೆಯೇ ನಡೆದಿಲ್ಲ. ಅನೇಕ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದಿಲ್ಲ. ಕೆಲವು ಸಂಸ್ಥೆಗಳಿಗೆ ಮೊದಲ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರಿದ್ದರೂ ಅವರ ಅವಧಿ ಮುಗಿದ ನಂತರ ಮೀಸಲಾತಿ ನಿಗದಿಯಾಗದೆ ಹೊಸ ಅಧ್ಯಕ್ಷ ಉಪಾಧ್ಯಕ್ಷರಿಲ್ಲ. ಒಂದು ರೀತಿಯ ಅತಂತ್ರ ಸ್ಥಿತಿಯಲ್ಲಿವೆ. ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಗೂ ಚುನಾವಣೆ ನಡೆಯದೆ ನಾಲ್ಕು ವರ್ಷಗಳು ಕಳೆದಿವೆ. ಮೀಸಲಾತಿ ಗೋಂದಲದ ಕಾರಣ ನೀಡಿ ಚುನಾವಣೆಗಳನ್ನು ಮುಂದೂಡಲಾಗುತ್ತಿದೆ. ಗೊಂದಲಗಳನ್ನು ಪರಿಹರಿಸಿ ಚುನಾವಣೆಗಳನ್ನು ನಡೆಸುವ ಉಮೇದು ಆಳುವ ಸರಕಾರದಲ್ಲಿ ಕಾಣುತ್ತಿಲ್ಲ. ರಾಜ್ಯಮಟ್ಟದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಕೆಳಹಂತದ ಸಂವಿಧಾನಾತ್ಮಕ ಸರಕಾರಗಳೊಡನೆ ಅಧಿಕಾರ ಹಂಚಿಕೆ ಮಾಡಿಕೊಳ್ಳುವಲ್ಲಿ ಹಿಂಜರಿಕೆ ಕಾಣುತ್ತಿದೆ.
ಇದರಿಂದಾಗಿ ಸ್ಥಳೀಯ ಸ್ವಯಂ ಸರಕಾರಗಳಾದ ಜಿಲ್ಲಾ ಪಂಚಾಯತ್‌ಗಳು, ತಾಲೂಕು ಪಂಚಾಯತ್‌ಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು, ಸರಕಾರದಿಂದ ನೇಮಕವಾದ ಆಡಳಿತಾಧಿಕಾರಿಗಳ ಸರ್ವಾಧಿಕಾರಕ್ಕೆ ಸಿಲುಕಿ ನಲುಗುತ್ತಿವೆ. ಪ್ರಜಾಪ್ರಭುತ್ವ ಅಮಾನತಿನಲ್ಲಿದ್ದು ಸರ್ವಾಧಿಕಾರ ತಾಂಡವವಾಡುತ್ತಿದೆ.
ಕಾಣೆಯಾದ ಸಾಮಾಜಿಕ ನ್ಯಾಯ
‘‘ಈ ವಿಧೇಯಕವು ಲೋಕಸಭಾ ಮತ್ತು ರಾಜ್ಯ ವಿಧಾನ ಮಂಡಲಗಳಿಗಿರುವ ಸಾಂವಿಧಾನಿಕ ಸಂರಕ್ಷಣೆಯನ್ನು ಸ್ಥಳೀಯ ಸರಕಾರಗಳಿಗೆ ನೀಡುತ್ತದೆ. ತನ್ಮೂಲಕ ಸಂವಿಧಾನಾತ್ಮಕ ಪ್ರಜಾಪ್ರಭುತ್ವವನ್ನು ಬೇರುಮಟ್ಟದಲ್ಲಿ ಸ್ಥಾಪಿಸುತ್ತದೆ. ಸಂವಿಧಾನದ ಆಶಯವಾದ ಸಮಾನ ಅವಕಾಶವನ್ನು ಎಲ್ಲಾ ಪ್ರಜೆಗಳಿಗೂ ನಿಡುತ್ತದೆ. ತಮ್ಮ ಪ್ರತಿಭೆಯನ್ನು ದೇಶದ ಅಭಿವೃದ್ಧಿಗೆ ಬಳಸಲು ಅನುವು ಮಾಡಿಕೊಡುತ್ತದೆ’’ ಎನ್ನುತ್ತಾರೆ ರಾಜೀವ್ ಗಾಂಧಿ. ಮುಂದುವರಿದು ‘‘ಈ ವಿಧೇಯಕವು, ಅವಕಾಶವಂಚಿತ ಸಮುದಾಯಗಳಾದ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ ಮಹಿಳೆಯರಿಗೆ ದೇಶದ ಅಭಿವೃದ್ಧಿಯಲ್ಲಿ ಸಮಾನವಾದ ಅವಕಾಶ ಮತ್ತು ಪಾಲನ್ನು ಮೀಸಲಾತಿಯ ಮೂಲಕ ದೃಢೀಕರಿಸುತ್ತದೆ. ಈ ಸಮುದಾಯಗಳನ್ನು ಶೋಷಣೆ ಮುಕ್ತಗೊಳಿಸುತ್ತದೆ’’ ಎನ್ನುತ್ತಾರೆ. ಆದರೆ ರಾಜ್ಯದಲ್ಲಿ ಇಂದು ಸ್ಥಳಿಯ ಸಂಸ್ಥೆಗಳ ಚುನಾವಣೆಗಳನ್ನು ಕಾಲಕ್ಕೆ ಸರಿಯಾಗಿ ನಡೆಸದೆ, ಬುದ್ಧಿವಂತಿಕೆಯಿಂದ ತಾಂತ್ರಿಕ ಕಾರಣ ನೀಡಿ ಮುಂದೂಡುವ ಮೂಲಕ ಅವಕಾಶವಂಚಿತ ಸಮುದಾಯಗಳನ್ನು ಅಧಿಕಾರದಿಂದ ದೂರ ಇಡುವ ಹುನ್ನಾರ ನಡೆಯುತ್ತಿದೆ. ಅಧಿಕಾರ ಮತ್ತು ಅವಕಾಶ ಕೆಲವೇ ಜನರ ಪಾಲಾಗಿದೆ. ಸಾಮಾಜಿಕ ನ್ಯಾಯ ಕಾಣೆಯಾಗಿದೆ. ಸಂವಿಧಾನದ ಆಶಯ ಮಣ್ಣುಪಾಲಾಗಿದೆ.
ಶಾಖಾ ಕಚೇರಿಗಳಾದ ಸ್ಥಳೀಯ ಸ್ವಯಂ ಸರಕಾರಗಳು
ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಿ ಮಾತು ಪ್ರಾರಂಭಿಸಿದ ರಾಜೀವ್ ಗಾಂಧಿ ‘‘ಪ್ರಜಾಪ್ರಭುತ್ವ ಭಾರತದ ಪ್ರಜೆಗಳಿಗೆ ಸ್ವಾತಂತ್ರ್ಯ ಹೋರಾಟ ನೀಡಿದ ದೊಡ್ಡ ಕೊಡುಗೆ. ಸ್ವಾತಂತ್ರ್ಯ ದೇಶಕ್ಕೆ ಬಿಡುಗಡೆಯನ್ನು ಕಲ್ಪಿಸಿದರೆ, ಪ್ರಜಾಪ್ರಭುತ್ವ ಪ್ರಜೆಗಳನ್ನು ಸ್ವತಂತ್ರರನ್ನಾಗಿ ಮಾಡಿತು. ಸ್ವತಂತ್ರ ಪ್ರಜೆಗಳೆಂದರೆ ತಮ್ಮ ಪ್ರತಿನಿಧಿಗಳನ್ನು ತಾವೇ ಆರಿಸುವವರು, ತಮ್ಮಿಚ್ಛೆಯಂತೆ ಆಳಿಕೊಳ್ಳುವವರು ಮತ್ತು ತಮ್ಮ ಬದುಕಿನ ಮೇಲೆ ಪ್ರಭಾವ ಬೀರುವ ಎಲ್ಲಾ ನಿರ್ಧಾರಗಳಲ್ಲಿ ಭಾಗವಹಿಸುವ ಅವಕಾಶ ಇರುವವರು’’ ಎನ್ನುತ್ತಾರೆ.
‘‘ಗಾಂಧೀಜಿ ಹಳ್ಳಿಗಳಲ್ಲಿ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯ, ಸ್ಥಳೀಯ ಸ್ವಯಂ ಸರಕಾರಗಳ ಮೂಲಕ ಮಾತ್ರ ಸಾಧ್ಯ ಎಂದು ನಂಬಿದ್ದರು, ನೆಹರೂರವರು ಗ್ರಾಮೀಣ ಭಾರತದ ಮನೆಗಳ ಬಾಗಿಲಿಗೆ ಅಭಿವೃದ್ಧಿಯನ್ನು ಕೊಂಡೊಯ್ಯುವ ದೃಷ್ಟಿಯಿಂದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸ್ಥಾಪಿಸಿದರು. ಈ ಆಶಯಗಳನ್ನು ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ಈ ವಿಧೇಯಕವನ್ನು ಮಂಡಿಸಲಾಗುತ್ತಿದೆ’’ ಎಂದು ತಿಳಿಸಿದ್ದರು.
ಈ ವಿಧೇಯಕಗಳ ಮೂಲಕ ಸಂವಿಧಾನ ಭಾಗ 9 ಮತ್ತು 9(ಎ)ಗಳಲ್ಲಿ ಕ್ರಮವಾಗಿ ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳನ್ನು ಸೇರಿಸಲಾಗಿದೆ. ರಾಜ್ಯ ಸರಕಾರಗಳು ಸಂವಿಧಾನದ ಈ ಭಾಗಗಳಿಗೆ ಅನುಗುಣವಾಗಿ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹಾಗೂ ನಗರ ಸ್ಥಳೀಯ ಸಂಸ್ಥೆಗಳನ್ನು ಸ್ಥಾಪಿಸಲು ಬೇಕಾದ ಕಾನೂನು ರೂಪಿಸಬೇಕು ಮತ್ತು ರಚಿಸಿದ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು.
ಸಂವಿಧಾನದ ಆಶಯದಂತೆ ಪಂಚಾಯತ್ ರಾಜ್ ಸಂಸ್ಥೆಗಳು, ಸ್ಥಳೀಯ ಸ್ವಯಂ ಸರಕಾರಗಳಾಗಿರಬೇಕು. ಅವುಗಳು ಹಾಗೆ ಕಾರ್ಯನಿರ್ವಹಿಸಲು ಬೇಕಾದ ಅಧಿಕಾರ, ಹಣಕಾಸು ಮತ್ತು ಮಾನವ ಸಂಪನ್ಮೂಲಗಳನ್ನು ಅವುಗಳಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳಬೇಕು. ಕರ್ನಾಟಕ ಸರಕಾರ ರಾಜೀವ್ ಗಾಂಧಿಯವರ ಆಶಯಗಳಿಗೆ ಅನುಗುಣವಾದ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ನ್ನು ರಚಿಸಿದೆ. ಆದರೆ ಅದರ ಅನುಷ್ಠಾನದಲ್ಲಿ ಸಂಪೂರ್ಣ ವಿಫಲವಾಗಿದೆ.
ಸ್ಥಳೀಯ ಸ್ವಯಂ ಸರಕಾರಗಳಾಗಿ ಕಾರ್ಯನಿರ್ವಹಿಸ ಬೇಕಾಗಿದ್ದ ಪಂಚಾಯತ್ ಸಂಸ್ಥೆಗಳು ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಶಾಖಾ ಕಚೇರಿಗಳಾಗಿವೆ. ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯ ಸರಕಾರ ಮತ್ತು ಇಲಾಖೆ ತನ್ನೆಲ್ಲಾ ಆದೇಶ, ಸುತ್ತೋಲೆಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನದಲ್ಲಿರುವ ಅಥವಾ ವ್ಯಾಪಿಯಲ್ಲಿರುವ ಗ್ರಾಮ ಪಂಚಾಯತ್‌ಗಳು ಎಂದು ಬಳಸುವುದನ್ನು ಗಮನಿಸಿದಾಗ ವಿಧಾನ ಪರಿಷತ್‌ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆಯವರು ‘‘ನನ್ನ ಇಲಾಖೆಗೆ, ಸಂವಿಧಾನದ 73ನೇ ತಿದ್ದುಪಡಿ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಅರ್ಥವಾಗಿಲ್ಲ’’ ಎಂದಿರುವುದು ನೂರಕ್ಕೆ ನೂರರಷ್ಟು ಸತ್ಯವಾಗಿದೆ.
ತೆರಿಗೆ ಸಂಗ್ರಹಣೆ, ನೌಕರರ ನೇಮಕಾತಿ, ನೌಕರರ ಸಂಬಳ, ವಿದ್ಯತ್ ಬಿಲ್, ಕೂಸಿನ ಮನೆಗಳ ಸ್ಥಾಪನೆ ಮತ್ತು ನಿರ್ವಹಣೆ, ಘನತ್ಯಾಜ್ಯ ವಿಲೇವಾರಿ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ ಮುಂತಾದ ಗ್ರಾಮ ಪಂಚಾಯತ್‌ಆಡಳಿತದ ಎಲ್ಲಾ ವಿಷಯಗಳಲ್ಲೂ ರಾಜ್ಯ ಸರಕಾರ ಹಸ್ತಕ್ಷೇಪ ಮಾಡುತ್ತಿದೆ. ಗ್ರಾಮ ಪಂಚಾಯತ್‌ಗಳ ಸ್ವಂತ ಸಂಪನ್ಮೂಲದ ಬಳಕೆಯಲ್ಲೂ ರಾಜ್ಯ ಸರಕಾರ ಹಸ್ತಕ್ಷೇಪ ಮಾಡುತ್ತಿರುವುದು ವಿಪರ್ಯಾಸದ ಸಂಗತಿ. ಜನಪ್ರತಿನಿಧಿಗಳನ್ನು ಕಡೆಗಣಿಸಿ ನೇರವಾಗಿ ತನ್ನ ಶಾಖಾ ಕಚೇರಿಗಳಂತೆ ಅಧಿಕಾರಿಗಳ ಮೂಲಕ ತಾನೇ ಆಡಳಿತ ನಡೆಸುತ್ತಿದೆೆ.
ಗ್ರಾಮ ಪಂಚಾಯತ್‌ಗಳು ಸ್ಥಳೀಯ ಸ್ವಯಂ ಸರಕಾರಗಳಾಗಿ ಕಾರ್ಯನಿರ್ವಹಿಸುವ ಎಲ್ಲಾ ರೀತಿಯ ವಾತಾವರಣವನ್ನು ರೂಪಿಸಬೇಕಾದ ಪಂಚಾಯತ್ ರಾಜ್ ಇಲಾಖೆಯೇ ಗ್ರಾಮ ಪಂಚಾಯತ್‌ಗಳನ್ನು ತನ್ನ ಶಾಖಾ ಕಚೇರಿಗಳಂತೆ ನಡೆಸಿಕೊಳ್ಳುತ್ತಿರುವುದು ಮಹಾತ್ಮಾ ಗಾಂಧೀಜಿ, ಪಂಡಿತ್ ನೆಹರೂ ಹಾಗೂ ರಾಜೀವ್ ಗಾಂಧಿಯವರ ಕನಸಿನ ವಿಕೇಂದ್ರೀಕರಣದ ವಿರೋಧಿ ನಡೆಯಾಗಿದೆ. ಈ ನಡೆ ಅವರ ನೇರ ವಾರಸುದಾರರು ನಡೆಸುತ್ತಿರುವ ಸರಕಾರದಿಂದ ನಡೆಯುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ.
ಮೇಲ್ಮುಖವಾಗದ ಯೋಜನಾ ಪ್ರಕ್ರಿಯೆ
‘‘Planing should not be the unraveling of some bureaucratic fantacy about what is good for people. It is for the people themselves to decide what is good for them.’’.
ಅಂದರೆ ಯೋಜನೆ ರೂಪಿಸುವುದೆಂದರೆ, ‘‘ಜನರಿಗೆ ಒಳ್ಳೆಯದೆಂದು ಅಧಿಕಾರಿಗಳು ಕಲ್ಪಿಸಿಕೊಂಡು ರೂಪಿಸಿದ ಯೋಜನೆಯಲ್ಲ, ಜನರೇ ತಮಗೆ ಒಳಿತಾಗುವ ಯೋಜನೆಯನ್ನು ರೂಪಿಸಿಕೊಳ್ಳುವುದು’’ ಎನ್ನುತ್ತಾರೆ ರಾಜೀವ್ ಗಾಂಧಿ.
ಅವರ ಆಶಯದಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರಲ್ಲಿ ಯೋಜನಾ ತಯಾರಿಕೆಗೆ ಪ್ರಾಮುಖ್ಯತೆ ನೀಡಲಾಗಿದೆ. ಪ್ರತಿಯೊಬ್ಬ ಪ್ರಜೆಯು ಯೋಜನಾ ತಯಾರಿಕಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಹಾಗೆ ಜನವಸತಿಸಭಾ, ವಾರ್ಡ್‌ಸಭಾ, ಗ್ರಾಮಸಭಾಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಗ್ರಾಮ ಮಟ್ಟದಲ್ಲಿ ಜನರಿಂದ ರೂಪಿತವಾಗುವ ಯೋಜನೆಗಳನ್ನು ತಾಲೂಕು ಮಟ್ಟದಲ್ಲಿ ಕ್ರೋಡೀಕರಿಸಿ ತಾಲೂಕು ಮಟ್ಟದ ಯೋಜನೆ ರೂಪಿಸಲು ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಯೋಜನಾ ಮತ್ತು ಅಭಿವೃದ್ಧಿ ಸಮಿತಿಯನ್ನು ಅಧಿನಿಯಮದಲ್ಲಿ ಅಸ್ತಿತ್ವಕ್ಕೆ ತರಲಾಗಿದೆ. ತಾಲೂಕು ಮಟ್ಟದ ಯೋಜನೆಗಳನ್ನು ಕ್ರೋಡೀಕರಿಸಿ ಜಿಲ್ಲಾ ಮಟ್ಟದ ಯೋಜನೆ ರೂಪಿಸಲು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಯೋಜನಾ ಸಮಿತಿಯನ್ನು ಸಂವಿಧಾನದ ಆಶಯದಂತೆ ಅಧಿನಿಯಮದಲ್ಲಿ ಅಸ್ತಿತ್ವಕ್ಕೆ ತರಲಾಗಿದೆ ಹಾಗೂ ಜಿಲ್ಲಾ ಮಟ್ಟದ ಯೋಜನೆಗಳನ್ನು ಕ್ರೋಡೀಕರಿಸಿ ರಾಜ್ಯಮಟ್ಟದ ಯೋಜನೆಯನ್ನು ರೂಪಿಸಲು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ದೇಶದಲ್ಲೇ ಪ್ರಥಮವಾಗಿ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ತರಲಾಗಿದೆ. ನಗರ ಸ್ಥಳೀಯ ಸಮಿತಿಗಳಲ್ಲೂ ವಾರ್ಡ್ ಕಮಿಟಿಗಳನ್ನು ರಚಿಸಲು ಅವಕಾಶ ಕಲ್ಪಿಸಲಾಗಿದೆ. ತಾಲೂಕು ಮತ್ತು ಜಿಲ್ಲಾ ಯೋಜನಾ ಸಮಿತಿಗಳಲ್ಲಿ ನಗರ ಮತ್ತು ಗ್ರಾಮೀಣ ಯೋಜನೆಗಳನ್ನು ಒಗ್ಗೂಡಿಸಿ ರಾಜ್ಯಕ್ಕೆ ಕಳಿಸುವ ವ್ಯವಸ್ಥೆ ರೂಪಿಸಲಾಗಿದೆ. ಆದರೆ ಈ ವ್ಯವಸ್ಥೆ ಕೇವಲ ಪುಸ್ತಕದಲ್ಲೇ ಉಳಿದುಕೊಂಡಿದೆ.
ಸಂವಿಧಾನದ ಪರಿಶಿಷ್ಟ ಹನ್ನೊಂದರಲ್ಲಿ ರಾಜ್ಯ ಸರಕಾರಗಳು ಯಾವ ಯಾವ ವಿಷಯಗಳಿಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳಿಗೆ ವರ್ಗಾಯಿಸಬೇಕೆಂಬ ಪಟ್ಟಿಯನ್ನು ನೀಡಲಾಗಿದೆ. ಅದರ ಅನ್ವಯ ರಾಜ್ಯದ ಪಂಚಾಯತ್ ರಾಜ್ ಅಧಿನಿಯಮದಲ್ಲಿ ಪರಿಶಿಷ್ಟ ಒಂದು, ಪರಿಶಿಷ್ಟ ಎರಡು ಮತ್ತು ಪರಿಶಿಷ್ಟ ಮೂರರಲ್ಲಿ ಕ್ರಮವಾಗಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳಿಗೆ ಜವಾಬ್ದಾರಿಗಳ ಹಂಚಿಕೆ ಮಾಡಲಾಗಿದೆ. ಆದರೆ ವಹಿಸಿದ ಜವಾಬ್ದಾರಿಗಳಿಗೆ ಸಂಬಂಧಿಸಿದ ವಿವಿಧ ಇಲಾಖೆಗಳ ಚಟುವಟಿಕೆಗಳನ್ನು ಸಬ್ಸಿಡಿಯಾರಿಟಿ(ಯಾವ ಚಟುವಟಿಕೆಯನ್ನು ಯಾವ ಹಂತದಲ್ಲಿ ಪರಿಣಾಮಕಾರಿಯಾಗಿ ನಿರ್ವಹಿಸಬಹುದು) ಎಂಬ ತತ್ವದ ಮೇಲೆ, ರಾಜ್ಯ ಸರಕಾರವು ಜವಾಬ್ದಾರಿ ನಕ್ಷೆ ತಯಾರಿಸಿ ಸಂಬಂಧಿಸಿದ ಚಟುವಟಿಕೆಗಳನ್ನು, ಅವುಗಳಿಗೆ ಸಂಬಂಧಿಸಿದ ಅಧಿಕಾರ, ಹಣಕಾಸು, ಅಧಿಕಾರಿಗಳು ಹಾಗೂ ಸ್ವಾತಂತ್ರ್ಯವನ್ನು ಆಯಾ ಹಂತದ ಸರಕಾರ( ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳು)ಗಳಿಗೆ ನೀಡುವ ಮೂಲಕ ಜನರು ನೇರವಾಗಿ ಭಾಗವಹಿಸುವ ಮೂಲಕ ಯೋಜನೆಗಳನ್ನು ರೂಪಿಸಲು ಅನುವು ಮಾಡಬೇಕು.
ಆದರೆ ಇದುವರೆಗೂ ರಾಜ್ಯ ಸರಕಾರ ಜವಾಬ್ದಾರಿ ನಕ್ಷೆ ತಯಾರು ಮಾಡಿಲ್ಲ. ರಾಜೀವ್ ಗಾಂಧಿಯವರ ಆಶಯದಂತೆ ಜನಯೋಜನೆಯನ್ನು ರೂಪಿಸಲು ಬೇಕಾದ ಜವಾಬ್ದಾರಿ ನಕ್ಷೆ ತಯಾರಿಕೆಗೆ ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳು ಒಪ್ಪುತ್ತಿಲ್ಲ, ಮಂತ್ರಿಗಳು ಒಪ್ಪುತ್ತಿಲ್ಲ ಎಂಬ ಕುಂಟುನೆಪ ಹೇಳುತ್ತಾ ಕಾಲ ಕಳೆಯುತ್ತಿದೆ.
ಇದರಿಂದಾಗಿ ಜನವಸತಿ ಸಭಾದಿಂದ ಹಿಡಿದು ರಾಜ್ಯ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯವರಗೆ ಯಾವುದೇ ಯೋಜನಾ ಪ್ರಕ್ರಿಯೆಗಳು ನಡೆಯದೆ, ಯೋಜನೆ ಮೇಲ್ಮುಖವಾಗಿ ರೂಪಿತವಾಗದೆ, ಕೆಳಮುಖವಾಗಿದೆ.
ಯೋಜನಾ ಪ್ರಕ್ರಿಯೆಯನ್ನು ಮೇಲ್ಮುಖವನ್ನಾಗಿಸಲು ಕ್ರಮ ಕೈಗೊಳ್ಳಬೇಕಾದ ಪಂಚಾಯತ್ ರಾಜ್ ಇಲಾಖೆಯೇ ತನ್ನ ಜವಾಬ್ದಾರಿ ಮರೆತು ತಾನೇ ಕೂಸಿನ ಮನೆ ಮುಂತಾದ ಯೋಜನೆಗಳನ್ನು ಮೇಲಿನ ಹಂತದಲ್ಲಿ ರೂಪಿಸಿ ಇಡೀ ರಾಜ್ಯದ ಗ್ರಾಮ ಸರಕಾರಗಳಾದ ಗ್ರಾಮ ಪಂಚಾಯತ್‌ಗಳ ಮೇಲೆ ಹೇರುತ್ತಿದೆ.
‘‘ನಾವು ಪ್ರಜಾಪ್ರಭುತ್ವವನ್ನು ಗ್ರಾಮ ಮಟ್ಟಕ್ಕೆ ಕೊಂಡೊಯ್ಯು ವಲ್ಲಿ ವಿಫಲವಾಗಿದ್ದೇವೆ, ಪಂಚಾಯತ್ ರಾಜ್ ವ್ಯವಸ್ಥೆ ಅದನ್ನು ಸಾಧ್ಯವಾಗಿಸುತ್ತದೆ’’ ಆಂದಿದ್ದರು ರಾಜೀವ್ ಗಾಂಧಿ.
ಅವರ ಈ ಕನಸು ಕಾಂಗ್ರೆಸ್ ನೇತೃತ್ವದ ಸರಕಾರದಲ್ಲೂ ಇನ್ನೂ ಕನಸಾಗೇ ಉಳಿದಿರುವುದು ವಿಪರ್ಯಾಸ.