ರಮಝಾನ್: ಚಿತ್ತವನ್ನು ಮಣಿಸುವ ಮಹಾ ಸವಾಲು
ಪ್ರವಾದಿ ಮುಹಮ್ಮದ್ (ಸ) ಅವರು ಹುಟ್ಟಿ ಬೆಳೆದ ಸಮಾಜದಲ್ಲಿ, ಅವರು ಇಸ್ಲಾಮ್ ಧರ್ಮವನ್ನು ಪರಿಚಯಿಸುವ ಮುನ್ನವೇ ರಮಝಾನ್ ತಿಂಗಳು ಪರಿಚಿತವಾಗಿತ್ತು. ಅರೇಬಿಯಾದ ಹೆಚ್ಚಿನವರು ವರ್ಷದ ಒಂಭತ್ತನೇ ತಿಂಗಳನ್ನು ರಮಝಾನ್ ಎಂದೇ ಗುರುತಿಸುತ್ತಿದ್ದರು. ಪ್ರವಾದಿವರ್ಯರು, ಅರಬ್ ಸಮಾಜದಲ್ಲಿ ಪರಿಚಿತವಾಗಿದ್ದ 12 ತಿಂಗಳುಗಳ ಪೈಕಿ ಯಾವುದೇ ತಿಂಗಳ ಹೆಸರನ್ನು ಬದಲಾಯಿಸಲಿಲ್ಲ. ಅವರು ಪರಂಪರಾಗತವಾಗಿ ಜನಪ್ರಿಯವಾಗಿದ್ದ ಹೆಸರುಗಳಿಗೆ ಮಾನ್ಯತೆ ನೀಡಿ ಅವುಗಳನ್ನೇ ಯಥಾವತ್ತಾಗಿ ಮುಂದುವರಿಸಿದರು. ಉಪವಾಸವೂ ಅಷ್ಟೇ, ಆ ಸಮಾಜದಲ್ಲಿ ಸಾಕಷ್ಟು ಪರಿಚಿತವಾಗಿತ್ತು. ಉಪವಾಸವನ್ನು ಜನರು ಒಂದು ಗೌರವಾನ್ವಿತ ಧಾರ್ಮಿಕ ಕ್ರಿಯೆಯಾಗಿ ಕಾಣುತ್ತಿದ್ದರು. ಕ್ರೈಸ್ತರು ಮತ್ತು ಯಹೂದಿಗಳು ಅದನ್ನು ತಮ್ಮ ಧರ್ಮದ ಭಾಗವಾಗಿ ಕಾಣುತ್ತಿದ್ದರು. ವಿಗ್ರಹಾರಾಧಕರು ಅದನ್ನು ತಮ್ಮ ಪೂರ್ವಜರ ಸಂಪ್ರದಾಯವಾಗಿ ಸ್ವೀಕರಿಸಿದ್ದರು. ಆದರೆ ಉಪವಾಸದ ಕುರಿತಂತೆ ಆ ಸಮಾಜದಲ್ಲಿ ಯಾವುದೇ ನಿರ್ದಿಷ್ಟ ಸಂಹಿತೆಯೇನೂ ಜಾರಿಯಲ್ಲಿರಲಿಲ್ಲ. ಆ ಸಮಾಜದಲ್ಲಿ ಯಹೂದಿಗಳು ಮತ್ತು ಧಾರ್ಮಿಕ ಅಭಿರುಚಿ ಇದ್ದ ಹೆಚ್ಚಿನ ಜನಸಾಮಾನ್ಯರು ವರ್ಷದ ಪ್ರಥಮ ತಿಂಗಳಾದ ‘ಮುಹರ‌್ರಮ್’ ನಲ್ಲಿ ಹತ್ತನೇ ದಿನ ಉಪವಾಸ ಆಚರಿಸುತ್ತಿದ್ದರು. ಇನ್ನೂ ಹೆಚ್ಚು ಧಾರ್ಮಿಕರಾಗಿದ್ದವರು ವರ್ಷದ ಎಲ್ಲ ತಿಂಗಳಲ್ಲೂ ಕನಿಷ್ಠ ಮೂರು ದಿನ ಉಪವಾಸ ಆಚರಿಸುತ್ತಿದ್ದರು. ಆದ್ದರಿಂದಲೇ, ಕುರ್‌ಆನ್ ನಲ್ಲಿ, ‘‘ವಿಶ್ವಾಸಿಗಳೇ, ನೀವು ಧರ್ಮನಿಷ್ಠರಾಗಬೇಕೆಂದು, ನಿಮಗಿಂತ ಹಿಂದಿನವರಿಗೆ ಕಡ್ಡಾಯಗೊಳಿಸಿದಂತೆ ನಿಮಗೂ ಉಪವಾಸಗಳನ್ನು ಕಡ್ಡಾಯಗೊಳಿಸಲಾಗಿದೆ’’ (ಕುರ್‌ಆನ್ - 2:183) ಎಂಬ ಆದೇಶವು ಅನಾವರಣಗೊಂಡಾಗ ಜನರೇನೂ ಬೆಚ್ಚಿ ಬೀಳಲಿಲ್ಲ. ಅವರು ಅದನ್ನು ಧರ್ಮದ ಸಹಜ ಭಾಗವಾಗಿ ಕಂಡರು. ಪ್ರವಾದಿ ಮುಹಮ್ಮದ್ (ಸ) ಅವರ ಕಾಲದಲ್ಲಿ ಸಾಮಾನ್ಯವಾಗಿ ಕುರ್‌ಆನ್ ಮೂಲಕ ಯಾವುದೇ ಹೊಸ ಆದೇಶವು ಬಂದಾಗ ಮತ್ತು ಪ್ರವಾದಿವರ್ಯರು ಅದನ್ನು ಸಮಾಜಕ್ಕೆ ಪರಿಚಯಿಸಿದಾಗ ಮೊದಲ ಹಂತದಲ್ಲಿ ಅದರ ವಿರುದ್ಧ ಭಾರೀ ಪ್ರತಿರೋಧ ಪ್ರಕಟವಾಗುತ್ತಿತ್ತು. ಹಲವು ಹಂತದ ವಿರೋಧದ ಬಳಿಕ ಕ್ರಮೇಣ ಅದಕ್ಕೆ ಮಾನ್ಯತೆ ಸಿಗುತ್ತಿತ್ತು. ಆದರೆ ಉಪವಾಸದ ವಿಷಯದಲ್ಲಿ ಅಂತಹ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ.
ಉಪವಾಸ ಎಂಬ ಆಚರಣೆ ಎಲ್ಲ ಕಾಲಘಟ್ಟಗಳಲ್ಲಿ ಮತ್ತು ಜಗತ್ತಿನ ಎಲ್ಲ ಭಾಗಗಳಲ್ಲಿ, ಹೆಚ್ಚಿನೆಲ್ಲಾ ಧಾರ್ಮಿಕ ವಲಯಗಳಲ್ಲಿ ಪರಿಚಿತವಾಗಿತ್ತು ಎಂಬುದನ್ನು ಬಹುತೇಕ ಎಲ್ಲರೂ ಒಪ್ಪುತ್ತಾರೆ. ಆದರೆ ಅದರ ಸ್ವರೂಪ ಮತ್ತು ನಿಯಮಗಳು ಎಲ್ಲಾ ಕಡೆ ಒಂದೇ ರೀತಿಯದ್ದಾಗಿದ್ದವು ಎನ್ನುವಂತಿಲ್ಲ. ಧರ್ಮ, ಅಧ್ಯಾತ್ಮ ಇತ್ಯಾದಿಗಳನ್ನೆಲ್ಲ ಒತ್ತಟ್ಟಿಗಿಟ್ಟು ನೋಡಿದರೂ, ಜಗತ್ತಿನ ಎಲ್ಲಾ ಸಮಾಜಗಳಲ್ಲಿ ಕೇವಲ ಶಾರೀರಿಕ ಸ್ವಾಸ್ಥ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ಉಪವಾಸವನ್ನು ವೈಭವೀಕರಿಸಿರುವುದು ಕಂಡು ಬರುತ್ತದೆ. ಎಷ್ಟೋ ಕಡೆ ಮನಃಶಾಂತಿಯ ಉಪಾಧಿಯಾಗಿ ಉಪವಾಸವನ್ನು ಸೂಚಿಸಲಾಗಿದೆ. ಈ ನಮ್ಮ ಆಧುನಿಕ ಯುಗದಲ್ಲೂ ವೈದ್ಯಕೀಯ ಕ್ಷೇತ್ರದ ಎಲ್ಲ ಪ್ರಕಾರಗಳಲ್ಲಿ, ಆರೋಗ್ಯಕ್ಕಾಗಿ ವಿವಿಧ ಸ್ವರೂಪದ ಉಪವಾಸಗಳನ್ನು ಶಿಫಾರಸು ಮಾಡಲಾಗುತ್ತದೆ. ಎಷ್ಟೋ ಬಗೆಯ ಶಾರೀರಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಪರಿಹಾರದ ರೂಪದಲ್ಲಿ ತಜ್ಞರು ಉಪವಾಸ ಆಚರಿಸಲು ಸೂಚಿಸುತ್ತಾರೆ. ಜಗಳಪ್ರಿಯರು, ಧರ್ಮಗಳ ನಡುವೆ ಅಂತರ ಹುಡುಕಿ, ವಿಂಗಡಿಸುವ ಅಸ್ತ್ರಗಳಾಗಿ ಅವುಗಳನ್ನು ಬಳಸುತ್ತಿರುವ ಸಮಾಜದಲ್ಲಿ, ಏಕತೆಯನ್ನು ಬಯಸುವವರು ಮನಸ್ಸು ಮಾಡಿದರೆ, ಕೇವಲ ಉಪವಾಸ ಎಂಬ ಒಂದು ಆಚರಣೆಯು ಎಲ್ಲೆಲ್ಲಿ ಯಾವೆಲ್ಲ ಸ್ವರೂಪದಲ್ಲಿ ಕಂಡುಬರುತ್ತದೆಂಬುದನ್ನು ಗುರುತಿಸಿ ಅದನ್ನೇ ವಿವಿಧ ಪಂಗಡಗಳ ನಡುವೆ ಆತ್ಮೀಯತೆ ಮತ್ತು ಭಾವೈಕ್ಯ ಬೆಳೆಸುವ ಸಾಧನವಾಗಿ ಬಳಸಬಹುದು.
‘‘ರಮಝಾನ್ ತಿಂಗಳಲ್ಲೇ ಕುರ್‌ಆನ್ ಅನ್ನು ಇಳಿಸಿಕೊಡಲಾಯಿತು. ಅದು ಮಾನವರಿಗೆಲ್ಲ ಮಾರ್ಗದರ್ಶಿಯಾಗಿದೆ. (ಅದರಲ್ಲಿ) ಸನ್ಮಾರ್ಗದ ಸ್ಪಷ್ಟ ವಿವರಗಳಿವೆ ಮತ್ತು ಅದು (ಸತ್ಯ-ಮಿಥ್ಯಗಳನ್ನು ಪ್ರತ್ಯೇಕಿಸುವ) ಒರೆಗಲ್ಲಾಗಿದೆ. ನಿಮ್ಮಲ್ಲಿ ಈ ತಿಂಗಳನ್ನು ಕಂಡವನು ಉಪವಾಸ ಆಚರಿಸಬೇಕು. (ಈ ತಿಂಗಳಲ್ಲಿ) ರೋಗಿಯಾಗಿದ್ದವನು ಅಥವಾ ಪ್ರಯಾಣದಲ್ಲಿದ್ದವನು ಇತರ ದಿನಗಳಲ್ಲಿ ಎಣಿಕೆ ಪೂರ್ತಿಗೊಳಿಸಬೇಕು. ಅಲ್ಲಾಹನು ನಿಮಗಾಗಿ (ಧರ್ಮವನ್ನು) ಸರಳಗೊಳಿಸಬಯಸುತ್ತಾನೆ. ಅವನು ನಿಮ್ಮನ್ನು ಇಕ್ಕಟ್ಟಿಗೆ ಗುರಿಪಡಿಸಬಯಸುವುದಿಲ್ಲ. ನೀವು (ಉಪವಾಸಗಳ) ಸಂಖ್ಯೆಯನ್ನು ಪೂರ್ತಿಗೊಳಿಸಿ, ಅಲ್ಲಾಹನು ನಿಮಗೆ ಒದಗಿಸಿದ ಮಾರ್ಗದರ್ಶನಕ್ಕಾಗಿ ಅವನ ಮಹಿಮೆಯನ್ನು ಕೊಂಡಾಡಬೇಕು ಮತ್ತು ನೀವು ಅವನಿಗೆ ಕೃತಜ್ಞತೆ ಸಲ್ಲಿಸಬೇಕೆಂದು (ಇದನ್ನು ವಿಧಿಸಲಾಗಿದೆ).’’ ಕುರ್‌ಆನ್ - 2:185
ಪ್ರಸ್ತುತ ಕುರ್‌ಆನ್ ವಚನದಲ್ಲಿ ಹಲವು ಮಹತ್ವದ ಮಾಹಿತಿಗಳಿವೆ. ಮುಖ್ಯವಾಗಿ, 1. ರಮಝಾನ್ ತಿಂಗಳಲ್ಲಿ ಕುರ್‌ಆನ್ ಅನಾವರಣಗೊಂಡಿತು. 2. ಕುರ್‌ಆನ್ ಎಲ್ಲ ಮಾನವರ ಪಾಲಿಗೆ ಮಾರ್ಗದರ್ಶಿಯಾಗಿದೆ. 3. ಸನ್ಮಾರ್ಗದ ಸ್ಪಷ್ಟ ವಿವರಗಳು ಕುರ್‌ಆನ್‌ನಲ್ಲಿವೆ. 4. ಕುರ್‌ಆನ್, ಯಾವುದು ಸತ್ಯ ಮತ್ತು ಯಾವುದು ಮಿಥ್ಯ ಎಂಬುದನ್ನು ಪ್ರತ್ಯೇಕಿಸಿ ತಿಳಿಸುವ ಒರೆಗಲ್ಲಾಗಿದೆ. 5. ಈ ತಿಂಗಳನ್ನು ಕಂಡವನು ಉಪವಾಸ ಆಚರಿಸಬೇಕು. ರೋಗಿಗಳು ಮತ್ತು ಪ್ರಯಾಣಿಕರಿಗೆ ಇದರಿಂದ ವಿನಾಯಿತಿ ಇದೆ. 6. ಅಲ್ಲಾಹನು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಯಸುವುದಿಲ್ಲ. ಸತ್ಯ ಧರ್ಮವನ್ನು ಸರಳ ಸ್ವರೂಪದಲ್ಲಿ ಪರಿಚಯಿಸುವ ಮೂಲಕ ಅವನು ಶೋಷಕರ ಕೈಯಿಂದ ನಿಮ್ಮನ್ನು ರಕ್ಷಿಸಿದ್ದಾನೆ ಮತ್ತು ಸುಲಭವಾಗಿ ಗ್ರಹಿಸಲು ಮತ್ತು ಆಚರಿಸಲು ನಿಮಗೆ ಸಾಧ್ಯವಿರುವ ಧರ್ಮವೊಂದನ್ನು ನಿಮಗೆ ನೀಡುವ ಮೂಲಕ ಹಲವು ಸಂಕಟ, ಇಕ್ಕಟ್ಟು ಮತ್ತು ಸಂಕೀರ್ಣತೆಗಳಿಂದ ನಿಮ್ಮನ್ನು ರಕ್ಷಿಸಿ ನಿಮಗೆ ಮಹದುಪಕಾರವನ್ನು ಮಾಡಿದ್ದಾನೆ. 7. ಉಪವಾಸವು, ಕುರ್‌ಆನ್ ಅನ್ನು ಕಲಿಸಿಕೊಡುವ ಮೂಲಕ ಅಲ್ಲಾಹನು ತಮಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ಅಲ್ಲಾಹನ ಮಹಿಮೆಯನ್ನು ಕೊಂಡಾಡುವ ಹಾಗೂ ಅವನಿಗೆ ಕೃತಜ್ಞತೆ ಸಲ್ಲಿಸುವ ಒಂದು ವಿಧಾನವಾಗಿದೆ.... ಇತ್ಯಾದಿ.
ಕುರ್‌ಆನ್ ಬಂದ ತಿಂಗಳನ್ನೇ, ಕಡ್ಡಾಯವಾಗಿ ಉಪವಾಸ ಆಚರಿಸಬೇಕಾದ ತಿಂಗಳೆಂದು ಸಾರಿರುವುದು ಆಕಸ್ಮಿಕವಿರಬಹುದೆಂದು ಹಲವರು ತರ್ಕಿಸುವುದುಂಟು. ನಿಜವಾಗಿ ಅದು ಖಂಡಿತ ಆಕಸ್ಮಿಕವಲ್ಲ. ಕುರ್‌ಆನ್‌ನ ಆಗಮನ ಮತ್ತು ಉಪವಾಸ ವ್ರತದ ಆಚರಣೆ - ಇವೆರಡರ ನಡುವೆ ಬಹಳ ಆಳವಾದ ಸಂಬಂಧವಿದೆ. ಕುರ್‌ಆನ್ ಕೇವಲ ಕೆಲವು ಉಪದೇಶಗಳನ್ನು, ಶಿಷ್ಟಾಚಾರಗಳನ್ನು ಮತ್ತು ಪ್ರಾರ್ಥನೆ, ಮಂತ್ರಾದಿಗಳನ್ನು ಕಲಿಸುವುದಕ್ಕೆ ಬಂದಿರುವ ಗ್ರಂಥವಲ್ಲ.
ಅದು ಬದುಕಿಗೆ ಮಾರ್ಗದರ್ಶಿಯಾಗಿ, ಬದುಕಿನ ಸಂಹಿತೆಯಾಗಿ, ಬದುಕಿನ ನಿಯಮವಾಗಿ ಬಂದಿರುವ ಗ್ರಂಥ. ಅದು ಬಹಳ ಮೂಲಭೂತ ಸ್ವರೂಪದ ಕೆಲವು ಸತ್ಯಗಳನ್ನು ಮುಂದಿಟ್ಟು ಅವುಗಳಲ್ಲಿ ನಂಬಿಕೆಯನ್ನು ಘೋಷಿಸಬೇಕೆಂದು ಆದೇಶಿಸುತ್ತದೆ. ಕೆಲವು ಚಟುವಟಿಕೆಗಳನ್ನು ಕಡ್ಡಾಯಗೊಳಿಸುತ್ತದೆ. ಹಲವಾರು ಕ್ರಿಯೆಗಳನ್ನು ಪ್ರೋತ್ಸಾಹಿಸುತ್ತದೆ. ಕೆಲವು ಕೃತ್ಯಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಅನೇಕ ಚಟುವಟಿಕೆಗಳನ್ನು ನಿರುತ್ತೇಜಿಸುತ್ತದೆ. ಉದಾ: ಪೂಜೆ, ಆರಾಧನೆ, ಪ್ರಾರ್ಥನೆಗಳೆಲ್ಲಾ ಸೃಷ್ಟಿಕರ್ತನೊಬ್ಬನಿಗೆ ಮಾತ್ರ ಮೀಸಲಾಗಿರಬೇಕು. ಎಂತಹ ಸನ್ನಿವೇಶದಲ್ಲೂ ಅವನೊಬ್ಬನ ಹೊರತು ಬೇರಾರ ಮುಂದೆಯೂ ತಲೆ ಬಾಗಬಾರದು. ಅವನ ಹೊರತು ಬೇರಾರಿಗೂ ಅಂಜಬಾರದು. ಅವನ ಹೊರತು ಬೇರಾರಿಂದಲೂ ಏನನ್ನೂ ನಿರೀಕ್ಷಿಸಬಾರದು. ಬೇರೆ ಯಾರಿಂದಲೂ ನೆರವು ಯಾಚಿಸಬಾರದು. ತೀರಾ ಪ್ರತಿಕೂಲ ಸ್ಥಿತಿಯಲ್ಲೂ ಸತ್ಯವನ್ನೇ ಹೇಳಬೇಕು, ಸತ್ಯದ ಮಾರ್ಗದಲ್ಲೇ ನಡೆಯಬೇಕು. ಸದಾ ನ್ಯಾಯವನ್ನು ಪಾಲಿಸಬೇಕು. ಮಿತ್ರರಿರಲಿ ಶತ್ರುಗಳಿರಲಿ ಎಲ್ಲರ ಜೊತೆ ನ್ಯಾಯೋಚಿತವಾಗಿಯೇ ವ್ಯವಹರಿಸಬೇಕು. ಎಲ್ಲ ಮಾನವರನ್ನು ಬಂಧುಗಳಾಗಿ ಹಾಗೂ ಸರಿಸಮಾನರಾಗಿ ಕಾಣಬೇಕು. ಹೆತ್ತವರಿಗೆ ವಿಧೇಯರಾಗಿರಬೇಕು. ಎಲ್ಲ ಜೀವಿಗಳ ಜೊತೆ ಪ್ರೀತಿ, ಕರುಣೆ ಮತ್ತು ವಾತ್ಸಲ್ಯದೊಂದಿಗೆ ವರ್ತಿಸಬೇಕು. ಎಲ್ಲ ಜೀವಿಗಳಿಗೆ ನೆರವಾಗಬೇಕು. ಮನಸ್ಸಿನಲ್ಲಿ ಸದಾ ಪ್ರೇಮ, ಕಾರುಣ್ಯ ಮತ್ತು ಸಹತಾಪ ತುಂಬಿರಬೇಕು. ಬದುಕು ಒಂದು ಪರೀಕ್ಷಾವಧಿ. ಈ ಬದುಕಿನಲ್ಲಿ ಮನುಷ್ಯನು ತಾನು ಎಸಗುವ ಪ್ರತಿಯೊಂದು ಕೃತ್ಯದ ಬಗ್ಗೆ ಪ್ರಶ್ನಾರ್ಹನಾಗಿದ್ದಾನೆ ಮತ್ತು ತನ್ನ ಪ್ರತಿಯೊಂದು ಕೃತ್ಯದ ಫಲಿತಾಂಶವನ್ನು ಅವನು ಎದುರಿಸಬೇಕಾಗುತ್ತದೆ. ಆದ್ದರಿಂದ ತನ್ನ ಎಲ್ಲ ಇಂದ್ರಿಯಗಳನ್ನು ಮತ್ತು ಎಲ್ಲ ಅವಯವಗಳನ್ನು ಸದಾ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು .... ಹೀಗೆ ಬೆಳೆಯುತ್ತದೆ, ಕುರ್‌ಆನ್ ಮಾನವನ ಮುಂದಿಡುವ ಸಂಹಿತೆಯಲ್ಲಿನ ಆದೇಶಗಳ ಪಟ್ಟಿ.
ನಮ್ಮಲ್ಲಿ ಹೆಚ್ಚಿನವರ ಬದುಕು ಹೇಗಿರುತ್ತದೆಂದರೆ, ಅವರು ನಿತ್ಯ ಒಂದಷ್ಟು ಸತ್ಕಾರ್ಯಗಳನ್ನು ಮಾಡುವುದುಂಟು. ಕೆಲವು ನಿಯಮಗಳನ್ನು ಪಾಲಿಸುವುದುಂಟು. ಹಲವು ದುರಾಚಾರಗಳಿಂದ ದೂರ ನಿಲ್ಲುವುದೂ ಉಂಟು. ಆದರೆ ಅದನ್ನೆಲ್ಲ ಮಾಡುವಾಗ ಅವರು ಪರಿಗಣಿಸುವುದು ಅವುಗಳ ತಕ್ಷಣದ ಲಾಭ ನಷ್ಟಗಳನ್ನು, ತುರ್ತು ಪರಿಣಾಮಗಳನ್ನು ಮತ್ತು ಕೆಲವೊಮ್ಮೆ, ಹೊರಗಿನಿಂದ ತಮ್ಮ ಮೇಲೆ ಹೇರಲಾಗಿರುವ ನಿರ್ಬಂಧಗಳನ್ನು ಮಾತ್ರ. ಜನರ ಮಧ್ಯೆ ಸಜ್ಜನನೆನಿಸಿಕೊಳ್ಳಬೇಕೆಂಬ ಅಥವಾ ದಾನಿ ಎಂದು ಕರೆಸಿಕೊಳ್ಳಬೇಕೆಂಬ ಆಶೆಯಿಂದ ಹಲವರು ದಾನ ಧರ್ಮಗಳನ್ನು ಮಾಡುತ್ತಾರೆ. ಕಾನೂನು ಉಲ್ಲಂಘಿಸಿ ಸಿಕ್ಕಿ ಬಿದ್ದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬ ಭಯದಿಂದ ಅವರು ಕೆಲವು ನಿಯಮಗಳನ್ನು ಪಾಲಿಸುತ್ತಾರೆ. ಕಾನೂನಿನಲ್ಲಿ ಅಪರಾಧವೆಂದು ಗುರುತಿಸಲಾಗಿರುವ ಕೃತ್ಯಗಳಿಂದ ದೂರ ಉಳಿಯುತ್ತಾರೆ. ಜನರ ಮಧ್ಯೆ ಅಪಹಾಸ್ಯಕ್ಕೆ ಒಳಪಡಬೇಕಾಗುತ್ತದೆ ಅಥವಾ ಜನರು ತಾತ್ಸಾರದಿಂದ ಕಾಣುತ್ತಾರೆ ಎಂಬ ಭಯದಿಂದ, ಸಮಾಜದಲ್ಲಿ ಮಾನ್ಯತೆ ಇಲ್ಲದ ಕೆಲವು ಚಟುವಟಿಕೆಗಳಿಂದ ಅವರು ದೂರ ಉಳಿಯುತ್ತಾರೆ. ಆದರೆ ಸತ್ಕಾರ್ಯಗಳ ಬಗ್ಗೆ ಇವರ ಪ್ರೀತಿ ಮತ್ತು ದುರಾಚಾರಗಳ ಕುರಿತು ಇವರ ಜಿಗುಪ್ಸೆ ಎಷ್ಟು ದುರ್ಬಲವೆಂದರೆ, ಯಾರೂ ತಮ್ಮ ಸತ್ಕರ್ಮಗಳನ್ನು ಗಮನಿಸುತ್ತಿಲ್ಲವೆಂದಾದರೆ ಇವರಿಗೆ ಅಂತಹ ಸತ್ಕಾರ್ಯದಲ್ಲಿ ಯಾವುದೇ ವಿಶೇಷ ಆಸಕ್ತಿ ಇರುವುದಿಲ್ಲ. ಅನೈತಿಕ ಅಥವಾ ಅಪರಾಧ ಕೃತ್ಯವನ್ನು ಮಾಡಿ ಯಾರ ಕೈಯಲ್ಲೂ ಸಿಕ್ಕಿ ಬೀಳದೆ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂಬ ಖಾತರಿ ಇದ್ದರೆ ಅವರು ಉತ್ಸಾಹದಿಂದ ಅಂತಹ ಕೃತ್ಯಗಳನ್ನು ಮಾಡಿಬಿಡುತ್ತಾರೆ. ನಿಜವಾಗಿ ಇವೆಲ್ಲಾ ಚಿತ್ತದ ಗುಲಾಮರ ಲಕ್ಷಣಗಳು. ಅರಿತೋ, ಅರಿಯದೆಯೋ ಈ ಮಂದಿ ತಮ್ಮ ಚಿತ್ತವನ್ನೇ ತಮ್ಮ ಮಿತ್ರ, ಗುರು ಮತ್ತು ಮಾರ್ಗದರ್ಶಿಯಾಗಿಸಿಕೊಂಡಿರುತ್ತಾರೆ. ಇವರೇ ಚಿತ್ತದ ಅನುಯಾಯಿಗಳು, ದಾಸರು ಮತ್ತು ಗುಲಾಮರು. ಈ ಚಿತ್ತದ ಬಂಡಾಯ ಪ್ರವೃತ್ತಿಯನ್ನು ಹತ್ತಿಕ್ಕಿ ಅದನ್ನು ವಿಧೇಯಗೊಳಿಸುವುದೇ ರಮಝಾನ್ ತಿಂಗಳ ಉಪವಾಸಗಳ ಗುರಿ.
ಉಂಡಾಡಿ ಬದುಕಿಗೆ ಯಾವುದೇ ಪೂರ್ವ ಸಿದ್ಧತೆ ಅಥವಾ ಯಾವುದೇ ತರಬೇತಿಯ ಅಗತ್ಯವಿರುವುದಿಲ್ಲ. ಆದರೆ ಕುರ್‌ಆನ್‌ನಂತಹ ಒಂದು ಸವಿಸ್ತಾರ ಸಂಹಿತೆಗೆ ಅಥವಾ ಶಾಸನಕ್ಕೆ ಬದ್ಧವಾಗಿ, ಅದರಲ್ಲಿರುವ ವಿಧಿ-ನಿಷೇಧಗಳನ್ನೆಲ್ಲಾ ವಿಧೇಯವಾಗಿ, ನಿಷ್ಠೆಯಿಂದ ಪಾಲಿಸುತ್ತಾ ಬದುಕ ಬಯಸುವವರಿಗೆ ಬಹಳಷ್ಟು ಸಿದ್ಧತೆ, ಅಭ್ಯಾಸ ಮತ್ತು ತರಬೇತಿಯ ಅಗತ್ಯವಿರುತ್ತದೆ. ಅಭ್ಯಾಸ ಕಠಿಣವಾದಷ್ಟು ನಿಯಮಪಾಲನೆ ಸುಲಭವಾಗುತ್ತದೆ. ಒಂದು ಸವಿಸ್ತಾರ ನಿಯಮ ಹಾಗೂ ಸಂಹಿತೆಯ ರೂಪದಲ್ಲಿ ಮಾನವ ಸಮಾಜದ ಮುಂದೆ ಬಂದ ಕುರ್‌ಆನ್, ಪ್ರಸ್ತುತ ಸಂಹಿತೆಗೆ ವಿಧೇಯವಾಗಿ ಬದುಕುವುದಕ್ಕೆ ಬೇಕಾದ ಅರ್ಹತೆಯನ್ನು ಬೆಳೆಸಿಕೊಳ್ಳುವುದು ಹೇಗೆಂಬ ಶಿಕ್ಷಣವನ್ನೂ ನೀಡುತ್ತದೆ. ರಮಝಾನ್ ತಿಂಗಳಲ್ಲಿ ಕಡ್ಡಾಯಗೊಳಿಸಲಾಗಿರುವ ಉಪವಾಸ ವ್ರತವು ಆ ಶಿಕ್ಷಣದ ಒಂದು ನಿರ್ಣಾಯಕ ಭಾಗವಾಗಿದೆ. ಈ ತಿಂಗಳಲ್ಲಿ ಉಪವಾಸದ ಮೂಲಕ ಸಾಧಿಸಲಾಗುವ ಅತಿದೊಡ್ಡ ಗುರಿ - ಚಿತ್ತದ ನಿಯಂತ್ರಣ.
ಚಿತ್ತ ಯಾರಿಗೂ ಅಪರಿಚಿತವಲ್ಲ. ಅದು ಎಲ್ಲರಲ್ಲೂ ಇದೆ. ಆದರೆ ಯಾರಿಗೂ ಚಿತ್ತದ ದಾಸ್ಯ ಅನಿವಾರ್ಯವಲ್ಲ. ಮನುಷ್ಯನು ಇಚ್ಛಿಸಿದರೆ ಚಿತ್ತವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ತಾನು ಆರಿಸಿಕೊಂಡ ಒಂದು ನಿಯಮಕ್ಕೆ ತನ್ನ ಚಿತ್ತವನ್ನು ಅಧೀನಗೊಳಿಸಬಹುದು. ಆದರೆ ಚಿತ್ತವನ್ನು ಶಿಸ್ತಿಗೊಳಪಡಿಸುವ ಪ್ರಕ್ರಿಯೆ ಸುಲಭದ್ದಲ್ಲ. ಅದು ದೀರ್ಘ ಸಿದ್ಧತೆ ಮತ್ತು ಕಠಿಣ ಪರಿಶ್ರಮ ಬಯಸುವ ಒಂದು ಸಂಕೀರ್ಣ ಪ್ರಕ್ರಿಯೆ. ಬೆಟ್ಟದ ತುದಿಯಿಂದ ನೆಲವನ್ನು ತಲುಪುವುದಕ್ಕೆ ಸುಲಭದ ದಾರಿ ಇದೆ. ಕೆಳಕ್ಕೆ ಹಾರಿ ಬಿಟ್ಟರಾಯಿತು. ಬೇರೆ ಪರಿಣಾಮಗಳೇನೇ ಇರಲಿ, ನೆಲವನ್ನು ತಲುಪುವ ಕೆಲಸ ಮಾತ್ರ ಕ್ಷಣಮಾತ್ರದಲ್ಲಿ ನಡೆದು ಬಿಡುತ್ತದೆ. ಅದೇವೇಳೆ ನೆಲಮಟ್ಟದಿಂದ ಬೆಟ್ಟದ ತುದಿಗೇರುವ ಕೆಲಸ ಸರಳವಲ್ಲ. ಕಷ್ಟಪಟ್ಟು, ಬಹಳ ಎಚ್ಚರ ವಹಿಸುತ್ತಾ ಒಂದೊಂದೇ ಹೆಜ್ಜೆ ಮುಂದಿಡುತ್ತಾ ಮುನ್ನಡೆಯಬೇಕಾಗುತ್ತದೆ. ಆರೋಹಣದ ಎಲ್ಲ ಹಂತಗಳಲ್ಲೂ ಅಪಾರ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ತನ್ನ ಬದುಕನ್ನು ಚಿತ್ತದ ನಿಯಂತ್ರಣಕ್ಕೆ ಬಿಟ್ಟುಕೊಟ್ಟವನು ವಿನಾಶವನ್ನು ಕಾಣುವುದು ಖಚಿತ. ಬದುಕಿನಲ್ಲಿ ಯಶಸ್ಸು ಬೇಕಾದವನು, ತನ್ನ ಚಿತ್ತವನ್ನು ತನ್ನ ಬುದ್ಧಿ, ವಿವೇಕಗಳಿಗೆ ಮತ್ತು ಸನ್ಮಾರ್ಗದ ಕುರಿತಾದ ತನ್ನ ಖಚಿತ ಜ್ಞಾನಕ್ಕೆ ಅಧೀನವಾಗಿಡಬೇಕು. ನಾನು ದೊಡ್ಡವನು ಮತ್ತು ಶ್ರೇಷ್ಠನೆಂಬ ಅಹಂಭಾವ, ಸ್ವಪ್ರಶಂಸೆ, ತೋರಿಕೆ, ಬೊಗಳೆ, ಬೂಟಾಟಿಕೆ, ದುರಾಶೆ, ಲೋಭ, ಸ್ವಾರ್ಥ, ಜಿಪುಣತೆ, ಇನ್ನೊಬ್ಬರ ಬಗ್ಗೆ ದ್ವೇಷ, ಅಸೂಯೆ, ತಾತ್ಸಾರ, ನಿಂದನೆ, ಅಸಹನೆ, ಕರ್ತವ್ಯಗಳ ಬಗ್ಗೆ ನಿರ್ಲಕ್ಷ್ಯ, ಅಪವ್ಯಯ, ಅಸಮತೋಲನ ಇವೆಲ್ಲಾ ಚಿತ್ತದ ಮೂಲಕ ಪ್ರಕಟವಾಗುವ ಸುಪ್ತರೋಗಗಳು. ಈ ಎಲ್ಲ ರೋಗಗಳೂ ಮೂಲತಃ ತೀರಾ ಕ್ಷೀಣ ಸ್ವರೂಪದಲ್ಲಿದ್ದು ಮುಂದೆ ಬಹಳ ಕ್ಷಿಪ್ರವಾಗಿ ಬೆಳೆದು ದೈತ್ಯಾಕಾರ ತಾಳುತ್ತವೆ. ಉಪವಾಸದಿಂದ ಅಪೇಕ್ಷಿತ ಫಲ ಸಿಗಬೇಕಿದ್ದರೆ ಚಿತ್ತದೊಳಗಿನ ಈ ಎಲ್ಲ ರೋಗಗಳ ಮೇಲೆ ಅನುಕ್ಷಣವೂ ಸೂಕ್ಷ್ಮವಾಗಿ ಕಣ್ಣಿಟ್ಟಿರುವುದು ಮತ್ತು ಅವುಗಳ ನಿವಾರಣೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತಿರಬೇಕಾದುದು ಅನಿವಾರ್ಯವಾಗಿದೆ. ಆದ್ದರಿಂದಲೇ ಪ್ರವಾದಿವರ್ಯರು ‘ಆತ್ಮಾವಲೋಕನ’ವನ್ನು ಉಪವಾಸದ ಅವಿಭಾಜ್ಯ ಭಾಗವಾಗಿ ಪರಿಚಯಿಸಿದ್ದರು.
ಕುರ್‌ಆನ್‌ನಲ್ಲಿ ಕೇಳಲಾಗಿರುವ ಒಂದು ಪ್ರಶ್ನೆ ಬಹಳ ಸ್ವಾರಸ್ಯಕರವಾಗಿದೆ:
ತನ್ನ ಚಿತ್ತವನ್ನೇ ತನ್ನ ದೇವರಾಗಿಸಿಕೊಂಡವನನ್ನು ನೀವು ಕಂಡಿರಾ? ನೀವೇನು ಅಂಥವನ ರಕ್ಷಕರಾಗುವಿರಾ? 25:43
ವಿಗ್ರಹಗಳನ್ನು ಪೂಜಿಸುವಂತೆ ಯಾರೂ ಚಿತ್ತವನ್ನು ಪೂಜಿಸುವುದಿಲ್ಲ. ಇಲ್ಲಿ ನಿಜವಾಗಿ, ಪ್ರಶ್ನಾತೀತವಾಗಿ ಚಿತ್ತದ ಅಪೇಕ್ಷೆಗಳನ್ನು ಈಡೇರಿಸುತ್ತಾ, ಚಿತ್ತದ ಆದೇಶಗಳನ್ನು ಪಾಲಿಸುತ್ತಾ ಬದುಕುವ ವ್ಯಕ್ತಿಯನ್ನು ಚಿತ್ತದ ದಾಸ ಹಾಗೂ ಚಿತ್ತದ ಆರಾಧಕನೆಂದು ವರ್ಣಿಸಲಾಗಿದೆ. ಸತ್ಯ, ನ್ಯಾಯ, ನೈತಿಕತೆ ಇತ್ಯಾದಿಗಳನ್ನು ಪಾಲಿಸಬೇಕಾದವನು ಚಿತ್ತದ ಗುಲಾಮನಾದಾಗ ಅಸತ್ಯ, ಅನ್ಯಾಯ ಅಥವಾ ಅನೈತಿಕತೆಗೆ ಶರಣಾಗಿ ಬಿಡುತ್ತಾನೆ. ರಮಝಾನ್ ತಿಂಗಳಲ್ಲಿ ಉಪವಾಸದ ಅವಧಿಯುದ್ದಕ್ಕೂ ಚಿತ್ತಕ್ಕೆ ಪ್ರತಿಕೂಲವಾದ ನಿಲುವು ತಾಳುವ ತರಬೇತಿಯನ್ನು ಒದಗಿಸಲಾಗುತ್ತದೆ. ಉಣ್ಣುವ ಸಮಯದಲ್ಲಿ ಚಿತ್ತವು ಉಣ್ಣು ಎನ್ನುತ್ತದೆ. ಆದರೆ ಉಪವಾಸಿಗನು ಚಿತ್ತದ ಆದೇಶವನ್ನು ಉಲ್ಲಂಘಿಸುತ್ತಾನೆ. ಉಣ್ಣಲು ನಿರಾಕರಿಸುತ್ತಾನೆ. ದೇಹ ಹಸಿದಿದ್ದರೂ, ದಾಹ ಕಾಡುತ್ತಿದ್ದರೂ, ನಿದ್ದೆ ಆವರಿಸುತ್ತಿದ್ದರೂ ಚಿತ್ತದ ಆದೇಶವನ್ನು ಸತತವಾಗಿ ತಿರಸ್ಕರಿಸುತ್ತಾ ಹೋಗುತ್ತಾನೆ. ಉಪವಾಸ ವ್ರತ ಆಚರಿಸುವವರ ದಿನಚರಿ ಅಸಾಮಾನ್ಯವಾಗಿರುತ್ತದೆ. ಎಲ್ಲರೂ ಉಣ್ಣುವ ಸಮಯವು ಉಪವಾಸಿಗನು ಹಸಿದಿರುವ ಸಮಯವಾಗಿರುತ್ತದೆ. ಎಲ್ಲರೂ ಮಲಗಿರುವ ಸಮಯವು ಉಪವಾಸಿಗನು ಎಚ್ಚರವಿರುವ ಅಥವಾ ಅನ್ನ, ಪಾನೀಯ ಸೇವಿಸುವ ಸಮಯವಾಗಿರುತ್ತದೆ. ಶರೀರವು ಅತ್ಯಧಿಕವಾಗಿ ನಿದ್ದೆಯನ್ನು ಅಪೇಕ್ಷಿಸುವ ಸಮಯವು ಉಪವಾಸಿಗನ ಕಲಾಪ ಪಟ್ಟಿಯಲ್ಲಿ ಆರಾಧನೆಯ ಸಮಯವಾಗಿರುತ್ತದೆ. ಹೀಗೆ ರಮಝಾನ್ ತಿಂಗಳು, ಧರ್ಮದ ಆದೇಶಗಳೆದುರು ಚಿತ್ತದ ಆದೇಶಗಳನ್ನು ಕಡೆಗಣಿಸುವ, ಮಾತ್ರವಲ್ಲ, ನಿಷ್ಠುರವಾಗಿ ಅವುಗಳನ್ನು ಮೀರಿ ನಡೆಯುವ ತಿಂಗಳಾಗಿರುತ್ತದೆ. ಪ್ರಜ್ಞಾಪೂರ್ವಕ ಉಪವಾಸ ಆಚರಿಸಿದವರು, ಚಿತ್ತದ ಅಪೇಕ್ಷೆ, ಆದೇಶಗಳನ್ನು ಒಂದೊಂದಾಗಿ ಸತತ ತಿರಸ್ಕರಿಸುತ್ತಾ, ಕ್ರಮೇಣ ಚಿತ್ತವನ್ನು ದಣಿಸಿ, ಮಣಿಸಿಬಿಡುವಲ್ಲಿ ಯಶಸ್ವಿಯಾಗುತ್ತಾರೆ. ಕೇವಲ ಆಜ್ಞೆಗಳನ್ನು ನೀಡುವುದಕ್ಕೆ ಒಗ್ಗಿಹೋಗಿದ್ದ ಚಿತ್ತವು ಕ್ರಮೇಣ ಆಜ್ಞೆಗಳನ್ನು ಸ್ವೀಕರಿಸಿ ಪಾಲಿಸಲು ಕಲಿಯುತ್ತದೆ. ಇದುವೇ ಚಿತ್ತವನ್ನು ಪಳಗಿಸುವ ಪ್ರಕ್ರಿಯೆ. ಈ ಪ್ರಕ್ರಿಯೆ ಪರಿಣಾಮಕಾರಿಯಾಗಿ ನಡೆದರೆ ಚಿತ್ತದ ದಾಸ್ಯದಿಂದ ಮುಕ್ತವಾದ ಶುದ್ಧ ಬದುಕು ಲಭ್ಯವಾಗುತ್ತದೆ.
ಕುರ್‌ಆನ್‌ನಲ್ಲಿ ಒಂದೆಡೆ ಹೀಗಿದೆ:
‘‘(ಯೂಸುಫ್ ಹೇಳಿದರು:) ನನ್ನ ಚಿತ್ತವು ಪಾವನವೆಂದು ನಾನೇನೂ ಹೇಳಿಕೊಳ್ಳುವುದಿಲ್ಲ. ಚಿತ್ತವು ಖಂಡಿತವಾಗಿಯೂ ಕೆಡುಕಿನ ಪ್ರೇರಣೆ ನೀಡುತ್ತದೆ - ನನ್ನ ಒಡೆಯನ ಕರುಣೆಗೆ ಪಾತ್ರರಾದವರ ಹೊರತು. ನನ್ನ ಒಡೆಯನು ಖಂಡಿತ ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ. 12:53
ಪ್ರಸ್ತುತ ಕುರ್‌ಆನ್ ವಚನದಿಂದ ಸ್ಪಷ್ಟವಾಗುವಂತೆ, ಪ್ರವಾದಿಗಳು ಕೂಡಾ - ನನ್ನ ಚಿತ್ತವು ನನ್ನ ಹತೋಟಿಯಲ್ಲಿದೆ ಎಂದು ಘೋಷಿಸಿ ನಿಶ್ಚಿಂತರಾಗುವ ಸ್ಥಿತಿಯಲ್ಲಿರುವುದಿಲ್ಲ. ಹೀಗಿರುವಾಗ, ಜನಸಾಮಾನ್ಯರು ತಮ್ಮ ಚಿತ್ತವನ್ನು ಪಳಗಿಸುವ ಕಾಯಕವನ್ನು ಹಗುರವಾಗಿ ಪರಿಗಣಿಸುವುದಕ್ಕೆ ಆಸ್ಪದವೇ ಎಲ್ಲಿದೆ? ಈ ಹಿನ್ನೆಲೆಯಲ್ಲಿ ಉಪವಾಸ ಆಚರಿಸುವ ಪ್ರತಿಯೊಬ್ಬರೂ, ಚಿತ್ತವನ್ನು ಮಣಿಸುವ ಪ್ರಕ್ರಿಯೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿ, ಆ ನಿಟ್ಟಿನಲ್ಲಿ ಕಠಿಣಶ್ರಮ ಪಡುವ ಅಗತ್ಯವಿದೆ.
ಉಪವಾಸದ ವೇಳೆ ಚಿತ್ತವನ್ನು ದಣಿಸುವ, ಮುನಿಸುವ ಮತ್ತು ಮಣಿಸುವ ಪ್ರಕ್ರಿಯೆ ಕೇವಲ ಒಂದು ಔಪಚಾರಿಕ ಕ್ರಿಯೆಯಲ್ಲ. ರಮಝಾನ್‌ನಲ್ಲಿ ಮತ್ತು ಉಪವಾಸದ ವೇಳೆ ಪದೇಪದೇ ಚಿತ್ತವನ್ನು ಅನುಸರಿಸಲು ನಿರಾಕರಿಸುವ ಮೂಲಕ ಅದನ್ನು ಪ್ರಭುತ್ವದ ಸ್ಥಾನದಿಂದ ಪದಚ್ಯುತಗೊಳಿಸಿ, ವಿಧೇಯ ಸ್ಥಾನದಲ್ಲಿ ಕೂರಿಸಲು ಸಾಧ್ಯವಾಗುತ್ತದೆ. ಈ ರೀತಿ ರಮಝಾನ್ ತಿಂಗಳಲ್ಲಿ ಮಾತ್ರವಲ್ಲ ವರ್ಷದುದ್ದಕ್ಕೂ, ಉಪವಾಸ ವ್ರತ ಇಲ್ಲದ ದಿನಗಳಲ್ಲೂ ಚಿತ್ತವನ್ನು ವಿಧೇಯ ಸ್ಥಾನದಲ್ಲಿ ಕುಳ್ಳಿರಿಸಲು ಸಾಧ್ಯವಾದರೆ ಮತ್ತು ಚಿತ್ತವು ಪ್ರಭುತ್ವದ ಸ್ಥಾನಕ್ಕಾಗಿ ಆಶೆ ಪಡುವುದನ್ನೇ ನಿಲ್ಲಿಸಿ ಬಿಡಲು ಸಾಧ್ಯವಾದರೆ ಮಾತ್ರ ಉಪವಾಸ ಎಂಬ ತರಬೇತಿ ಸಾರ್ಥಕವಾಯಿತು ಎಂದರ್ಥ.
ಅನ್ನ, ನೀರನ್ನು ತ್ಯಜಿಸುವುದು ಉಪವಾಸದ ಕೇವಲ ಒಂದು ಪ್ರಾಥಮಿಕ ಭಾಗ ಮಾತ್ರ. ಚಿತ್ತದ ಮೇಲೆ ನಿಯಂತ್ರಣ ಸಾಧಿಸುವುದು ಉಪವಾಸದ ನೈಜ ಗುರಿ. ಈ ಗುರಿಯ ಬಗ್ಗೆ ಪ್ರಜ್ಞೆ ಇಲ್ಲದವರು ಎಷ್ಟೇ ಹಸಿವು, ದಾಹಗಳನ್ನು ಸಹಿಸಿಕೊಂಡರೂ ಎಷ್ಟು ಆರಾಧನಾ ಕರ್ಮಗಳನ್ನು ಮಾಡಿದರೂ ಅವರಿಗೆ ಗುರಿಸಾಧಿಸಲಿಕ್ಕಾಗುವುದಿಲ್ಲ. ಮೂಲತಃ ಯಾವ ಸತ್ಯದರ್ಶನ ಮತ್ತು ಮಾರ್ಗದರ್ಶನ ಪ್ರಾಪ್ತವಾದುದಕ್ಕೆ ಕೃತಜ್ಞತೆ ಸಲ್ಲಿಸಲು ಉಪವಾಸ ಆಚರಿಸಲಾಗುತ್ತದೆಯೋ ಆ ಮಾರ್ಗದರ್ಶನವನ್ನೇ ಮರೆತು ಆಚರಿಸುವ ಉಪವಾಸದಿಂದ ಪ್ರಯೋಜನವಾಗುವುದಾದರೂ ಹೇಗೆ? ಹಾಗೆಯೇ, ಆ ಮಾರ್ಗದರ್ಶನದ ಅಧ್ಯಯನ, ಆ ಕುರಿತು ಚಿಂತನೆ, ಅದರ ಅನುಸರಣೆ, ಅದನ್ನು ಸಮಾಜಕ್ಕೆ ಪರಿಚಯಿಸುವ ಕರ್ತವ್ಯ ಮತ್ತು ಸಮಾಜದಲ್ಲಿ ಅದನ್ನು ಅನುಷ್ಠಾನಿಸುವ ಹೊಣೆಗಾರಿಕೆ - ಇವೆಲ್ಲವನ್ನೂ ಮರೆತು ಆಚರಿಸುವ ಉಪವಾಸದಿಂದ, ದೇಹದ ಭಾರ ಕುಗ್ಗಿಸುವುದು ಬಿಟ್ಟರೆ ಬೇರಾವುದೇ ಲಾಭವಾಗುವ ಸಾಧ್ಯತೆ ಇಲ್ಲ.
ಪ್ರವಾದಿ ವಚನಗಳಲ್ಲಿ ರಮಝಾನ್ ತಿಂಗಳನ್ನು ಕುರ್‌ಆನ್‌ನ ತಿಂಗಳು, ಸಹನೆಯ ತಿಂಗಳು, ಸಂಯಮದ ತಿಂಗಳು, ದಾನದ ತಿಂಗಳು, ಆತ್ಮಾವಲೋಕನದ ತಿಂಗಳು, ಕ್ಷಮಿಸುವ ತಿಂಗಳು, ಎಲ್ಲ ಪಾಪಕೃತ್ಯಗಳಿಂದ ಮಾತ್ರವಲ್ಲ ಎಲ್ಲ ಅನಗತ್ಯ ಚಟುವಟಿಕೆಗಳಿಂದ ದೂರ ನಿಲ್ಲುವ ತಿಂಗಳು, ಗತಕಾಲದ ಪಾಪಗಳನ್ನು ಒಂದೊಂದಾಗಿ ಸ್ಮರಿಸಿ ಪಶ್ಚಾತ್ತಾಪ ಪಟ್ಟು ಕ್ಷಮೆಯಾಚಿಸುವ ತಿಂಗಳು, ಗರಿಷ್ಠ ಆರಾಧನಾಕರ್ಮಗಳಲ್ಲಿ ನಿರತರಾಗಿರಬೇಕಾದ ತಿಂಗಳು, ಪ್ರಾರ್ಥನೆಯ ತಿಂಗಳು ಎಂಬಿತ್ಯಾದಿಯಾಗಿ ವರ್ಣಿಸಲಾಗಿದೆ.
ಪವಿತ್ರ ಕುರ್‌ಆನ್‌ನಲ್ಲಿ ಸೂಚಿಸಲಾಗಿರುವಂತೆ, ಪ್ರವಾದಿಪೂರ್ವ ಕಾಲದಲ್ಲಿ ಅನ್ನ, ನೀರನ್ನು ಮಾತ್ರವಲ್ಲ ಮಾತುಕತೆಯನ್ನು ವರ್ಜಿಸುವುದು ಕೂಡಾ ಉಪವಾಸದ ಅವಿಭಾಜ್ಯ ಭಾಗವಾಗಿತ್ತು. ಪ್ರವಾದಿ (ಸ) ಪರಿಚಯಿಸಿದ ಸಂಹಿತೆಯಲ್ಲಿ ಮೌನವು ಉಪವಾಸದ ಅವಿಭಾಜ್ಯ ಅಂಗವೇನಲ್ಲ. ಆದರೆ ಒಬ್ಬ ಉಪವಾಸಿಗನು ಲಗಾಮಿಲ್ಲದೆ ಮಾತನಾಡುತ್ತಿದ್ದಾನೆ ಎಂದಾದರೆ ಅವನ ಉಪವಾಸದಿಂದ ಅವನಿಗೇನೂ ಪ್ರಯೋಜನವಾಗುತ್ತಿಲ್ಲ ಎಂದೇ ಅರ್ಥ. ಉಪವಾಸದ ವೇಳೆ ನಾಲಿಗೆಯ ಮೇಲೆ ಹತೋಟಿ ಇಟ್ಟುಕೊಳ್ಳುವುದಕ್ಕೆ, ಪ್ರವಾದಿ (ಸ) ಅಷ್ಟೊಂದು ಮಹತ್ವ ನೀಡಿದ್ದರು. ಹಾಗೆಯೇ ಇತರ ಇಂದ್ರಿಯಗಳನ್ನು, ಆಶೆ, ಅಪೇಕ್ಷೆಗಳನ್ನು, ಭಾವೋದ್ವೇಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕೆ ತುಂಬಾ ಒತ್ತು ಕೊಟ್ಟಿದ್ದರು.
ಒಮ್ಮೆ ಪ್ರವಾದಿ (ಸ) ಹೇಳಿದರು:
‘‘ಜನರನ್ನು ಸೋಲಿಸುವವನು ಶಕ್ತಿಶಾಲಿಯಲ್ಲ. ಸ್ವತಃ ತನ್ನ ಚಿತ್ತವನ್ನು ಸೋಲಿಸುವವನೇ ಶಕ್ತಿಶಾಲಿ.’’ (ಸಹೀಹ್ ಇಬ್ನ್ ಹಿಬ್ಬಾನ್ - 717, ವರದಿ: ಹಝ್ರತ್ ಅಬೂ ಹುರೈರ(ರ).
ಪ್ರವಾದಿ ಮುಹಮ್ಮದ್ (ಸ) ಅವರ ಅತ್ಯಂತ ಆಪ್ತ ಸಂಗಾತಿಗಳಲ್ಲೊಬ್ಬರಾಗಿದ್ದ ವೀರ ಯೋಧ ಹಝ್ರತ್ ಅಲೀ(ರ) ಹೇಳುತ್ತಾರೆ:
‘‘ಚಿತ್ತ ಎಂಬುದು ಕಾಡುಕುದುರೆಯ ಹಾಗೆ. ಅದರ ಮೇಲೆ ಸವಾರಿ ನಡೆಸುವವನು ಅನುಕ್ಷಣವೂ ಪರಮ ಎಚ್ಚರದ ಸ್ಥಿತಿಯಲ್ಲಿರಬೇಕು. ಕ್ಷಣಮಾತ್ರಕ್ಕಾದರೂ ಅವನು ನಿರ್ಲಕ್ಷ್ಯ ತೋರಿದರೆ ಕುದುರೆಯು ಅವನನ್ನು ನೆಲಕ್ಕೆ ಅಪ್ಪಳಿಸಿ ಬಿಟ್ಟಿರುತ್ತದೆ.’’
ಚಿತ್ತವು ಕಣ್ಣಿಗೆ ಕಾಣಿಸುವುದಿಲ್ಲ. ಸ್ಪರ್ಶಿಸಲು ಸಿಗುವುದಿಲ್ಲ. ಅದು ಅಡಗಿ ನಿಂತು ಆದೇಶಗಳನ್ನು ನೀಡುತ್ತಿರುತ್ತದೆ. ದೇವದತ್ತ ಸಂಹಿತೆಯ ಆಧಾರದಲ್ಲಿ ಚಿತ್ತದ ಆದೇಶಗಳನ್ನು ಪರಾಮರ್ಶಿಸಿ ನೋಡಿ ಚಿತ್ತದ ಎಲ್ಲ ದುಷ್ಟ ಪ್ರೇರಣೆಗಳನ್ನು ಧಿಕ್ಕರಿಸಿ, ದೇವರು ದಯಪಾಲಿಸಿರುವ ಎಲ್ಲ ಇಂದ್ರಿಯಗಳು ದೇವೇಚ್ಛೆಯನ್ನು ಮತ್ತು ದೇವಾದೇಶಗಳನ್ನು ಮಾತ್ರ ಅನುಸರಿಸುವಂತೆ ನೋಡಿಕೊಳ್ಳಬೇಕಾದುದು ಉಪವಾಸಿಗನ ಕರ್ತವ್ಯವಾಗಿದೆ.