ರಣವೀರ್ ಅಲಹಾಬಾದಿಯ ಪ್ರಕರಣ: ಸುಪ್ರೀಂ ಕೋರ್ಟ್ ನಡೆ ಏನನ್ನು ಹೇಳುತ್ತಿದೆ?

ಇಂಡಿಯಾಸ್ ಗಾಟ್ ಲೇಟೆಂಟ್ ಎಂಬ ಹಾಸ್ಯ ಕಾರ್ಯಕ್ರಮವೊಂದರಲ್ಲಿನ ತಮ್ಮ ಹೇಳಿಕೆಗಳ ಕುರಿತಂತೆ ಮಧ್ಯಂತರ ರಕ್ಷಣೆಗಾಗಿ ಕೋರಿದ್ದ ಯೂಟ್ಯೂಬರ್ ರಣವೀರ್ ಅಲಹಾಬಾದಿಯ ಅವರ ಅರ್ಜಿಯನ್ನು ಬುಧವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ, ಪೊಲೀಸರೊಂದಿಗೆ ಸಹಕರಿಸಬೇಕು ಮತ್ತು ಸಮನ್ಸ್ ನೀಡಿದಾಗ ತನಿಖಾ ಅಧಿಕಾರಿಗಳ ಮುಂದೆ ಹಾಜರಾಗಬೇಕು ಎಂಬ ಷರತ್ತಿನ ಮೇಲೆ ಅಲಹಾಬಾದಿಯರಿಗೆ ಬಂಧನದಿಂದ ರಕ್ಷಣೆ ನೀಡಿದೆ.
ಆದರೆ ಬಹಳಷ್ಟು ನೀತಿ ಪಾಠಗಳನ್ನು ಕೋರ್ಟ್ ಬೋಧಿಸಿದಂತಿದೆ ಎಂಬ ಮಾತುಗಳೂ ಕೇಳಿಬಂದಿವೆ.
ರಣವೀರ್ ತಮ್ಮ ಮನಸ್ಸಿನಲ್ಲಿದ್ದ ಕೊಳಕನ್ನು ಯೂಟ್ಯೂಬ್ ಶೋನಲ್ಲಿ ವಾಂತಿ ಮಾಡಿದ್ದಾರೆ ಎಂದು ಖಾರವಾಗಿಯೇ ಕೋರ್ಟ್ ಹೇಳಿದೆ.
‘‘ನೀವು ಬಳಸಿದ ಪದಗಳು ಹೆಣ್ಣುಮಕ್ಕಳು, ಅಕ್ಕತಂಗಿಯರು, ಪೋಷಕರು ಮತ್ತು ಸಮಾಜ ನಾಚಿಕೆ ಪಡುವಂತೆ ಮಾಡಿದೆ. ಇದು ವಿಕೃತ ಮನಸ್ಸನ್ನು ತೋರಿಸುತ್ತದೆ. ಇದು ಅಶ್ಲೀಲತೆಯಲ್ಲದೆ ಮತ್ತೇನು?’’ ಎಂದು ಕೋರ್ಟ್ ಪ್ರಶ್ನೆ ಮಾಡಿದೆ.
‘‘ಇಂಥ ಮಾತನಾಡಿರುವವರದ್ದು ತುಂಬಾ ಕೊಳಕು ಹಾಗೂ ಕೆಟ್ಟ ಮನಸ್ಸು. ಇದು ಹೊಣೆಗೇಡಿತನದ ಪರಮಾವಧಿ. ಇಂಥ ಹೇಳಿಕೆ ಮೂಲಕ ಜನರನ್ನು ಪೋಷಕರನ್ನು ಅವಮಾನಿಸುತ್ತಿದ್ದೀರಿ. ಅವು ವಿಕೃತ ಮನಸ್ಸಿನ ಮಾತುಗಳು’’ ಎಂದಿದೆ ಸುಪ್ರೀಂ ಕೋರ್ಟ್.
ಅಲಹಾಬಾದಿಯ ನೀಡಿದ ಹೇಳಿಕೆ ಅಶ್ಲೀಲವಲ್ಲದೆ ಹೋದರೆ ಅಶ್ಲೀಲತೆಯ ಮಾನದಂಡ ಏನು ಎಂದು ತಿಳಿಯಲು ಬಯಸುವುದಾಗಿ ಕೋರ್ಟ್ ಹೇಳಿತು.
‘‘ಅವರು ಬಳಸಿದ ಭಾಷೆಯನ್ನು ನೀವು ಸಮರ್ಥಿಸುತ್ತಿದ್ದೀರಾ?’’ ಎಂದು ನ್ಯಾ. ಸೂರ್ಯಕಾಂತ್ ಅವರು ರಣವೀರ್ ಅಲಹಾಬಾದಿಯ ಪರ ವಕೀಲ ಅಭಿನವ್ ಚಂದ್ರಚೂಡ್ ಅವರನ್ನು ಪ್ರಶ್ನಿಸಿದರು.
ಆದರೆ, ಯಾರೋ ನೀಡಿದ ಅಶ್ಲೀಲ ಹೇಳಿಕೆಗಳನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಬಹುದೇ ಎಂಬುದೇ ನಿಜವಾದ ಸಮಸ್ಯೆ ಎಂದು ವಕೀಲ ಅಭಿನವ್ ಚಂದ್ರಚೂಡ್ ಹೇಳಿದರು.
ಅವರ ಮೇಲಿನ ಅಶ್ಲೀಲತೆ ಆರೋಪಗಳು ಆಧಾರರಹಿತವಾಗಿವೆ ಎಂದು ವಕೀಲ ಚಂದ್ರಚೂಡ್ ವಾದಿಸಿದಾಗ, ಸುಪ್ರೀಂ ಕೋರ್ಟ್ ಸಾಮಾಜಿಕ ಮೌಲ್ಯಗಳ ವಿಚಾರವನ್ನೆತ್ತಿತು.
‘‘ಸಮಾಜದ ಮೌಲ್ಯಗಳು ಯಾವುವು? ಸಮಾಜ ತನ್ನದೇ ಆದ ಕೆಲ ಮೌಲ್ಯಗಳನ್ನು ಹೊಂದಿದೆ. ನೀವು ಅವುಗಳನ್ನು ಗೌರವಿಸಬೇಕು. ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಜದ ನಿಯಮಗಳಿಗೆ ವಿರುದ್ಧವಾಗಿ ಏನು ಬೇಕಾದರೂ ಮಾತನಾಡಲು ಯಾರಿಗೂ ಪರವಾನಿಗೆ ಇಲ್ಲ’’ ಎಂದು ಪೀಠ ಹೇಳಿತು.
ಆದರೆ, ರಣವೀರ್ ಅಲಹಾಬಾದಿಯ ಮತ್ತು ಅವರ ಜೊತೆಯವರು ಯೂಟ್ಯೂಬ್ ಅಥವಾ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಯಾವುದೇ ಕಾರ್ಯಕ್ರಮವನ್ನು ಮುಂದಿನ ಆದೇಶದವರೆಗೆ ಪ್ರಸಾರ ಮಾಡುವುದನ್ನು ನಿಷೇಧಿಸಿರುವುದು ಮಾತ್ರ ವಿಚಿತ್ರವಾಗಿದೆ ಎಂಬ ಟೀಕೆಗಳಿವೆ.
ಈ ನಿರ್ಬಂಧಕ್ಕೆ ಯಾವುದೇ ಸಮರ್ಥನೆಯಿಲ್ಲ ಮತ್ತು ಸಂವಿಧಾನದ ಆರ್ಟಿಕಲ್ 19(1)(ಎ) ಅಡಿಯಲ್ಲಿ ಅವರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ.
ಹಾಗೆಯೇ, ಆರ್ಟಿಕಲ್ 19(1)(ಜಿ) ಅಡಿಯಲ್ಲಿ ಯಾವುದೇ ವೃತ್ತಿ ಅಥವಾ ಉದ್ಯೋಗವನ್ನು ಮಾಡುವ ಅವರ ಮೂಲಭೂತ ಹಕ್ಕನ್ನು ಮೊಟಕುಗೊಳಿಸುತ್ತದೆ.
ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಸರಕಾರ ಈ ಮೂಲಭೂತ ಹಕ್ಕುಗಳ ಮೇಲೆ ಸೂಕ್ತ ನಿರ್ಬಂಧ ಹೇರಬಹುದಾದರೂ, ಅದಕ್ಕೆ ಸೂಕ್ತ ಸಮರ್ಥನೆಯೂ ಇರಬೇಕಾಗುತ್ತದೆ.
ಸುಪ್ರೀಂ ಕೋರ್ಟ್ ಅಲಹಾಬಾದಿಯ ಮತ್ತು ಅವರ ಸಹಚರರ ಮೇಲೆ ಈ ಷರತ್ತನ್ನು ಹೇರಿತು. ತನ್ನನ್ನು ಅದು ಎಲ್ಲಾ ವಿಷಯಗಳಲ್ಲೂ ಅಂತಿಮ ತೀರ್ಪುಗಾರ ಎಂದು ನೋಡಿದಂತೆ ಕಂಡಿತು.
ಈ ಹಿಂದೆ, 2022ರಲ್ಲಿ ಪತ್ರಕರ್ತ, ಫ್ಯಾಕ್ಟ್ ಚೆಕರ್ ಮುಹಮ್ಮದ್ ಝುಬೇರ್ ಅವರು ಟ್ವೀಟ್ ಮಾಡುವುದನ್ನು ನಿಷೇಧಿಸುವಂತೆ ನಿರ್ಬಂಧ ಹೇರಬೇಕೆಂದು ಯುಪಿ ಸರಕಾರ ಕೇಳಿದ್ದಾಗ, ಸುಪ್ರೀಂ ಕೋರ್ಟ್ ಅದನ್ನು ತಿರಸ್ಕರಿಸಿತ್ತು.
ಆಗ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎ.ಎಸ್. ಬೋಪಣ್ಣ ಅವರಿದ್ದ ಪೀಠ, ಝುಬೇರ್ ಟ್ವೀಟ್ ಮಾಡುವುದನ್ನು ನಿಷೇಧಿಸುವುದು ಸಂವಿಧಾನಬಾಹಿರವಾದ ತಮಾಷೆಯ ಆದೇಶಕ್ಕೆ ಸಮವಾಗುತ್ತದೆ ಎಂದು ತೀರ್ಪು ನೀಡಿತ್ತು.
ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸದಂತೆ ನಿರ್ದೇಶಿಸುವ ಒಂದು ಆದೇಶ ತಮಾಷೆಯ ಆದೇಶಕ್ಕೆ ಸಮಾನವಾಗಿರುತ್ತದೆ ಮತ್ತು ತಮಾಷೆಯ ಆದೇಶಗಳು ವಾಕ್ ಸ್ವಾತಂತ್ರ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಅಗ ಸುಪ್ರೀಂ ಕೋರ್ಟ್ ಹೇಳಿತ್ತು.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದನ್ನು ನಿರ್ಬಂಧಿಸುವ ಆದೇಶ ಹೊರಡಿಸುವುದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವೃತ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ಕೋರ್ಟ್ ಹೇಳಿತ್ತು.
ಆದರೆ ಈಗ, ರಣವೀರ್ ಅಲಹಾಬಾದಿಯ ವಿಷಯದಲ್ಲಿ ಅಂಥದೇ ತಮಾಷೆಯ ಆದೇಶ ನೀಡಿದಂತಾಯಿತಲ್ಲವೇ? ಎಂಬ ಪ್ರಶ್ನೆ ಏಳುತ್ತದೆ.
ಅಲ್ಲದೆ, ಯೂಟ್ಯೂಬ್‌ನಲ್ಲಿ ಅಶ್ಲೀಲ ವಿಷಯ ನಿಯಂತ್ರಿಸುವಂತೆ ಸುಪ್ರೀಂ ಕೋರ್ಟ್ ಕೇಳಿದೆ. ಯೂಟ್ಯೂಬ್‌ನಲ್ಲಿ ಅಶ್ಲೀಲ ವಿಷಯದ ಬಗ್ಗೆ ಏನಾದರೂ ಕ್ರಮ ತೆಗೆದುಕೊಳ್ಳಲು ಬಯಸುತ್ತೀರಾ? ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನು ಕೇಳಿದೆ.
‘‘ಸರಕಾರ ಈ ವಿಷಯದಲ್ಲಿ ಏನಾದರೂ ಮಾಡಬೇಕೆಂದು ನಾವು ಬಯಸುತ್ತೇವೆ. ಸರಕಾರ ಏನಾದರೂ ಮಾಡಲು ಸಿದ್ಧವಿದ್ದರೆ ಸಂತೋಷ. ಇಲ್ಲದಿದ್ದರೆ, ಯೂಟ್ಯೂಬ್ ಚಾನೆಲ್‌ಗಳು ಮತ್ತು ಯೂಟ್ಯೂಬರ್‌ಗಳು ಅದನ್ನು ದುರ್ಬಳಕೆ ಮಾಡಲು ಕೋರ್ಟ್ ಬಿಡುವುದಿಲ್ಲ. ಈ ವಿಷಯದ ಪ್ರಾಮುಖ್ಯತೆ ಮತ್ತು ಸೂಕ್ಷ್ಮತೆಯನ್ನು ನಾವು ಕಡೆಗಣಿಸಬಾರದು’’ ಎಂದು ಹೇಳಿದೆ.
ಒಟಿಟಿ ನಿಯಂತ್ರಣದ ಬಗ್ಗೆ ಏನಾದರೂ ಮಾಡಬೇಕೆಂದು ನ್ಯಾ.ಸೂರ್ಯಕಾಂತ್ ಬಯಸಿದ್ದಾರೆಂಬುದು ಹೆಚ್ಚು ಕಳವಳಕಾರಿ ಸಂಗತಿಯಾಗಿದೆ. ಈ ವಿಷಯವನ್ನು ಚರ್ಚಿಸಲು ನ್ಯಾಯಪೀಠ ಭಾರತದ ಅಟಾರ್ನಿ ಜನರಲ್ ಮತ್ತು ಭಾರತದ ಸಾಲಿಸಿಟರ್ ಜನರಲ್ ಅವರನ್ನು ಮುಂದಿನ ವಿಚಾರಣೆಗೆ ಕರೆಸಿರುವುದು ಕೂಡ ಕಳವಳ ಹೆಚ್ಚಿಸುವ ಸಂಗತಿಯಾಗಿದೆ.
ಮೊದಲೇ ಮೋದಿ ಸರಕಾರ ಅನಧಿಕೃತವಾಗಿ ಸೆನ್ಸರ್ ನೀತಿಯನ್ನು ಪಾಲಿಸುತ್ತಿದೆ.
ಸತ್ಯ ಹೇಳುವ ಮೀಡಿಯಾಗಳ ವಿರುದ್ಧ, ಚಿತ್ರ ನಿರ್ದೇಶಕರು, ನಿರ್ಮಾಪಕರ ವಿರುದ್ಧ ಬೇರೆ ಬೇರೆ ರೀತಿಗಳಲ್ಲಿ ಕಿರುಕುಳ ನೀಡುತ್ತಿದೆ. ಇನ್ನು ಸುಪ್ರೀಂ ಕೋರ್ಟ್ ಸ್ವತಃ ಅದಕ್ಕೆ ನೀವೇನಾದರೂ ಮಾಡಿ ಎಂದು ಹೇಳಿದರೆ ಪರಿಸ್ಥಿತಿ ಹೇಗಾಗಬಹುದು?
ರಣವೀರ್ ಅಲಹಾಬಾದಿಯ ಪ್ರಕರಣವನ್ನು ದುರುಪಯೋಗ ಪಡಿಸಿಕೊಂಡು ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೇ ಕುತ್ತು ತರುವ ಕೆಲಸಕ್ಕೆ ಸರಕಾರ ಕೈ ಹಾಕಬಹುದು.
ರಣವೀರ್ ಅಲಹಾಬಾದಿಯ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಿರ್ವಹಿಸಿದ ರೀತಿ ಬೇರೆ ಬೇರೆ ಕಾರಣಗಳಿಗಾಗಿ ಚಿಂತಿಸಬೇಕಾದ ವಿಷಯವಾಗಿದೆ.
ನೈತಿಕ ಆಕ್ರೋಶವನ್ನು ವ್ಯಕ್ತಪಡಿಸಿದ ಬಳಿಕ ಅವರಿಗೆ ಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆಯಾದರೂ, ಈ ಪ್ರಕರಣ ನಡೆದ ರೀತಿ ಮುಕ್ತ ವಾಕ್ ಸ್ವಾತಂತ್ರ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ವಿಚಾರಣೆಯ ಹೊತ್ತಿನ ಅತ್ಯಂತ ಗೊಂದಲದ ಅಂಶವೆಂದರೆ, ಅಲಹಾಬಾದಿಯ ಅವರಿಗಿರುವ ಕೊಲೆ ಬೆದರಿಕೆಗಳನ್ನು ಕೋರ್ಟ್ ಹೆಚ್ಚು ಕಡಿಮೆ ತಳ್ಳಿಹಾಕಿತು ಎಂಬುದು.
ಅಭಿನವ್ ಚಂದ್ರಚೂಡ್ ತಮ್ಮ ಕಕ್ಷಿದಾರರಿಗೆ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದಾಗ, ನ್ಯಾಯಮೂರ್ತಿ ಸೂರ್ಯಕಾಂತ್, ನೀವು ಈ ರೀತಿಯ ಮಾತುಗಳನ್ನು ಹೇಳುವ ಮೂಲಕ ಅಗ್ಗದ ಪ್ರಚಾರ ಪಡೆಯಲು ಪ್ರಯತ್ನಿಸಬಹುದಾದರೆ, ಬೆದರಿಕೆ ಹಾಕುವ ಮೂಲಕ ಅಗ್ಗದ ಪ್ರಚಾರವನ್ನು ಪಡೆಯಲು ಬಯಸುವ ಇತರರು ಸಹ ಇರಬಹುದು ಎಂದು ಟೀಕಿಸಿದರು.
ಒಬ್ಬ ವ್ಯಕ್ತಿಗೆ ಇರುವ ಪ್ರಾಣ ಬೆದರಿಕೆಯನ್ನೂ ಕೋರ್ಟ್ ಇಷ್ಟು ಹಗುರವಾಗಿ ನೋಡಿತೇ ಎಂಬುದು ಚಿಂತೆಗೀಡು ಮಾಡುವ ವಿಚಾರ.
ಈ ಹಿಂದೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್ ಗೊಗೊಯಿ ತಮ್ಮ ಮೇಲಿನ ಲೈಂಗಿಕ ಕಿರುಕುಳ ಆರೋಪ ಪ್ರಕರಣವನ್ನು ತಮ್ಮದೇ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದ ವಿಚಿತ್ರ ಸನ್ನಿವೇಶವಿತ್ತು. ಸಿಜೆಐ ವಿರುದ್ಧ ಮಹಿಳೆಯೊಬ್ಬರು ಮಾಡಿರುವ ಆರೋಪಗಳ ಸಂಬಂಧದ ಆ ವಿಚಾರಣೆಯಲ್ಲಿ, ಸಿಜೆಐ ಸ್ವತಃ ಇದ್ದರೆಂಬುದೇ ವಿಲಕ್ಷಣ ಸನ್ನಿವೇಶವಾಗಿತ್ತು.
ದೂರುದಾರರಿಗೆ ಮೊದಲು ನ್ಯಾಯಯುತ ಅವಕಾಶ ನೀಡುವ ಮೂಲಕ ನ್ಯಾಯಪೀಠ ನೈಸರ್ಗಿಕ ನ್ಯಾಯದ ತತ್ವಗಳನ್ನು ಅನುಸರಿಸಬೇಕಲ್ಲವೆ ಎಂಬ ಚರ್ಚೆಯೂ ಆಗ ಎದ್ದಿತ್ತು. ಸುಪ್ರೀಂ ಕೋರ್ಟ್‌ನ 6,000ಕ್ಕೂ ಹೆಚ್ಚು ವಕೀಲರ ಸಂಘವಾದ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ), ಆ ವಿಚಾರಣೆ ನೈಸರ್ಗಿಕ ನ್ಯಾಯದ ತತ್ವಗಳ ಉಲ್ಲಂಘನೆಯಾಗಿದೆ ಎಂದು ಹೇಳಿತ್ತು.
ಹೀಗೆ ಹಲವು ಸಂದರ್ಭಗಳಲ್ಲಿ ತನ್ನ ನೈತಿಕ ಹೊಣೆಗಾರಿಕೆಯನ್ನೇ ಮರೆತ ನ್ಯಾಯಾಂಗ, ಅದು ಹೇಗೆ ಅಲಹಾಬಾದಿಯ ಪ್ರಕರಣದಲ್ಲಿ ಇದ್ದಕ್ಕಿದ್ದಂತೆ ನೀತಿ ಬೋಧನೆಗೆ ನಿಂತುಬಿಟ್ಟಿತು?
ಅಲಹಾಬಾದಿಯ ಪ್ರಕರಣ ನ್ಯಾಯಾಲಯಗಳು ಕಾಯ್ದುಕೊಳ್ಳಬೇಕಾದ ಸಮತೋಲನದ ಬಗ್ಗೆ ಹೇಳುತ್ತದೆ. ನ್ಯಾಯಾಧೀಶರು ಕೂಡ ಮನುಷ್ಯರಾಗಿದ್ದು, ಅವರೂ ಬೇರೆಯವರಂತೆ ಅಸಹ್ಯ, ಕೋಪ ಮತ್ತು ನೈತಿಕ ತಿರಸ್ಕಾರ ತೋರಿಸಬಲ್ಲರು. ಆದರೆ ಅವರು ಅಂಥ ಯಾವುದೇ ಭಾವನೆಗಳನ್ನು ಮೀರಿ, ಕಾನೂನನ್ನು ಮಾತ್ರವೇ ಎತ್ತಿಹಿಡಿಯುವ ಕೆಲಸ ಮಾಡಬೇಕಿರುತ್ತದೆ.
ಇಲ್ಲಿ ಅಲಹಾಬಾದಿಯವರಿಗೆ ಮಧ್ಯಂತರ ಪರಿಹಾರ ನೀಡುವ ಮೂಲಕ, ಸುಪ್ರೀಂ ಕೋರ್ಟ್ ಅಂತಿಮವಾಗಿ ಸಾಂವಿಧಾನಿಕವಾಗಿ ಮಾಡಬೇಕಾದ ಕೆಲಸವನ್ನು ಮಾಡಿದೆ.
ಆದರೆ ಅದು ಹಾಗೆ ಮಾಡಿದ ರೀತಿ ನೇರವಾಗಿಲ್ಲ.ಅವಮಾನಿಸುವಷ್ಟೂ ಅವಮಾನಿಸಿ, ಆನಂತರ ರಕ್ಷಿಸುವ ಮತ್ತು ಹಕ್ಕುಗಳನ್ನು ಗೌರವಿಸುವ ಹಾಗೆ ಈ ಪ್ರಕರಣದಲ್ಲಿನ ನಡೆ ಕಾಣಿಸಿದೆ.
ನೈತಿಕ ಶ್ರೇಷ್ಠತೆಯನ್ನು ಹೇರಿದ ಬಳಿಕ ಸಾಂವಿಧಾನಿಕ ಕರ್ತವ್ಯ ನಿಭಾಯಿಸಿದಂತಾಗಿದೆ. ಆದರೆ, ನ್ಯಾಯಾಲಯದ ಪಾತ್ರ ಸಮಾಜದಲ್ಲಿನ ಅಸಭ್ಯತೆಯನ್ನು ನಿವಾರಿಸುವುದಲ್ಲ, ನೈತಿಕತೆಯ ಹೇರಿಕೆಯಲ್ಲ. ನ್ಯಾಯಾಂಗ ಇದನ್ನು ಮರೆಯಬಾರದಲ್ಲವೆ?
ಕಾನೂನನ್ನು ಎತ್ತಿಹಿಡಿಯುವುದೇ ಅದರ ತತ್ವವಾಗಿರಬೇಕಲ್ಲವೆ ಎಂಬ ನಿರೀಕ್ಷೆಗೆ ಸಮಾಧಾನ ಸಿಗಬೇಕಿದೆ.