ರತನ್ ಟಾಟಾ: ಭಾರತವನ್ನು ಭರವಸೆಯ ತಾಣವನ್ನಾಗಿ ಮಾಡಿದವರು
ಶ್ರೀ ರತನ್ ಟಾಟಾ ಅವರು ನಮ್ಮನ್ನು ಅಗಲಿ ಒಂದು ತಿಂಗಳು ಕಳೆದಿದೆ. ಜನನಿಬಿಡ ನಗರಗಳು ಮತ್ತು ಪಟ್ಟಣಗಳಿಂದ ಹಳ್ಳಿಗಳವರೆಗೆ, ಸಮಾಜದ ಪ್ರತಿಯೊಂದು ವರ್ಗದಲ್ಲೂ ಅವರ ಅನುಪಸ್ಥಿತಿಯು ಎದ್ದು ಕಾಣುತ್ತಿದೆ. ಅವರ ಅಗಲಿಕೆಯಿಂದ ಅನುಭವಿ ಕೈಗಾರಿಕೋದ್ಯಮಿಗಳು, ಉದಯೋನ್ಮುಖ ಉದ್ಯಮಿಗಳು ಮತ್ತು ಶ್ರಮಜೀವಿಗಳು ದುಃಖಿತರಾಗಿದ್ದಾರೆ. ಪರಿಸರ ಮತ್ತು ಪರೋಪಕಾರಕ್ಕೆ ಸಮರ್ಪಿತರಾದ ಜನರು ಸಹ ಅಷ್ಟೇ ನೋವಿನಲ್ಲಿದ್ದಾರೆ. ಅವರ ಅನುಪಸ್ಥಿತಿಯು ಇಡೀ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಗೋಚರಿಸುತ್ತಿದೆ.
ಶ್ರೀ ರತನ್ ಟಾಟಾ ಅವರು ಯುವಜನತೆಗೆ ಸ್ಫೂರ್ತಿಯಾಗಿದ್ದರು, ಕನಸುಗಳು ಕಾಣಲು ಯೋಗ್ಯವಾದುವು ಮತ್ತು ಸಹಾನುಭೂತಿ ಮತ್ತು ವಿನಮ್ರತೆಯಿಂದ ಯಶಸ್ಸನ್ನು ಸಾಧಿಸಬಹುದು ಎಂದು ಅವರು ತೋರಿಸಿಕೊಟ್ಟರು. ಅವರು ಭಾರತೀಯ ಉದ್ಯಮದ ಅತ್ಯುತ್ತಮ ಪರಂಪರೆ ಮತ್ತು ಸಮಗ್ರತೆ, ಶ್ರೇಷ್ಠತೆ ಮತ್ತು ಸೇವೆಯ ಮೌಲ್ಯಗಳಿಗೆ ದೃಢವಾದ ಬದ್ಧತೆಯ ಪ್ರತಿನಿಧಿಯಾಗಿದ್ದರು. ಅವರ ನಾಯಕತ್ವದಲ್ಲಿ, ಟಾಟಾ ಗ್ರೂಪ್ ಪ್ರಪಂಚದಾದ್ಯಂತ ಗೌರವ, ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಯನ್ನು ಸಾಕಾರಗೊಳಿಸುವ ಮೂಲಕ ಹೊಸ ಉತ್ತುಂಗಕ್ಕೆ ಏರಿತು. ಇದರ ಹೊರತಾಗಿಯೂ, ಅವರು ವಿನಮ್ರತೆ ಮತ್ತು ದಯಾಪರತೆಯಿಂದ ತಮ್ಮ ಸಾಧನೆಗಳನ್ನು ಲಘುವಾಗಿ ಪರಿಗಣಿಸಿದರು.
ಇತರರ ಕನಸುಗಳಿಗೆ ಶ್ರೀ ರತನ್ ಟಾಟಾ ನೀಡುತ್ತಿದ್ದ ಅಚಲವಾದ ಬೆಂಬಲವು ಅವರ ಶ್ರೇಷ್ಠ ಗುಣಗಳಲ್ಲಿ ಒಂದಾಗಿತ್ತು. ಇತ್ತೀಚಿನ ವರ್ಷಗಳಲ್ಲಿ, ಅವರು ಭಾರತದ ಸ್ಟಾರ್ಟ್‌ಅಪ್ ಪೂರಕ ವ್ಯವಸ್ಥೆಗೆ ಮಾರ್ಗದರ್ಶನ ನೀಡಿದ್ದರು ಮತ್ತು ಅನೇಕ ಭರವಸೆಯ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದರು. ಅವರು ಯುವ ಉದ್ಯಮಿಗಳ ಭರವಸೆ ಮತ್ತು ಆಕಾಂಕ್ಷೆಗಳನ್ನು ಅರ್ಥಮಾಡಿಕೊಂಡರು ಮತ್ತು ಭಾರತದ ಭವಿಷ್ಯವನ್ನು ರೂಪಿಸುವ ಅವರ ಸಾಮರ್ಥ್ಯವನ್ನು ಗುರುತಿಸಿದರು. ಯುವಜನತೆಯ ಪ್ರಯತ್ನಗಳನ್ನು ಬೆಂಬಲಿಸುವ ಮೂಲಕ, ಅಪಾಯಗಳನ್ನು ಎದುರಿಸಲು ಮತ್ತು ಗಡಿಗಳನ್ನು ಮೀರಲು ಕನಸುಗಾರರ ಪೀಳಿಗೆಯನ್ನು ಉತ್ತೇಜಿಸಿದರು. ಇದು ನಾವೀನ್ಯತೆ ಮತ್ತು ಉದ್ಯಮಶೀಲತೆಯ ಸಂಸ್ಕೃತಿಯನ್ನು ನಿರ್ಮಿಸುವಲ್ಲಿ ಬಹಳ ದೂರ ಸಾಗಿದೆ, ಇದು ಮುಂದಿನ ದಶಕಗಳಲ್ಲಿ ಭಾರತದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನನಗೆ ವಿಶ್ವಾಸವಿದೆ.
ಅವರು ಯಾವಾಗಲೂ ಶ್ರೇಷ್ಠತೆಯನ್ನು ಪ್ರತಿಪಾದಿಸಿದರು ಮತ್ತು ಜಾಗತಿಕ ಮಾನದಂಡಗಳನ್ನು ಸ್ಥಾಪಿಸಲು ಭಾರತೀಯ ಉದ್ಯಮಗಳನ್ನು ಒತ್ತಾಯಿಸಿದರು. ಈ ದೃಷ್ಟಿಯು ಭಾರತವನ್ನು ವಿಶ್ವ ದರ್ಜೆಯ ಗುಣಮಟ್ಟಕ್ಕೆ ಸಮಾನಾರ್ಥಕವಾಗಿಸಲು ನಮ್ಮ ಭವಿಷ್ಯದ ನಾಯಕರಿಗೆ ಸ್ಫೂರ್ತಿಯಾಗುತ್ತದೆ ಎಂದು ನಾನು ಭಾವಿಸುತ್ತೇನೆ.
ಅವರ ಹಿರಿಮೆಯು ಬೋರ್ಡ್ ರೂಮಿಗೆ ಅಥವಾ ಇತರ ವ್ಯಕ್ತಿಗಳಿಗೆ ಸಹಾಯ ಮಾಡಲು ಮಾತ್ರ ಸೀಮಿತವಾಗಿರಲಿಲ್ಲ. ಅವರ ಕರುಣೆ ಸಕಲ ಜೀವರಾಶಿಗಳಿಗೂ ವ್ಯಾಪಿಸಿತ್ತು. ಪ್ರಾಣಿಗಳ ಮೇಲಿನ ಅವರ ಆಳವಾದ ಪ್ರೀತಿಯು ಸುಪ್ರಸಿದ್ಧವಾಗಿತ್ತು ಮತ್ತು ಪ್ರಾಣಿ ಕಲ್ಯಾಣವನ್ನು ಕುರಿತ ಪ್ರತಿಯೊಂದು ಪ್ರಯತ್ನವನ್ನು ಅವರು ಬೆಂಬಲಿಸಿದರು. ಅವರು ಆಗಾಗ ತಮ್ಮ ಶ್ವಾನಗಳ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದರು, ಅವುಗಳು ಇತರ ವ್ಯವಹಾರ ಉದ್ಯಮದಂತೆ ಅವರಿಗೆ ಜೀವನದ ಭಾಗವಾಗಿದ್ದವು. ನಿಜವಾದ ನಾಯಕತ್ವವನ್ನು ಒಬ್ಬರ ಸಾಧನೆಗಳಿಂದ ಮಾತ್ರ ಅಳೆಯಲಾಗುವುದಿಲ್ಲ, ಅತ್ಯಂತ ದುರ್ಬಲರ ಬಗ್ಗೆ ಅವರು ತೋರುವ ಕಾಳಜಿಯಿಂದ ಅಳೆಯಲಾಗುತ್ತದೆ ಎಂಬುದಕ್ಕೆ ಅವರ ಜೀವನವು ನಮಗೆಲ್ಲರಿಗೂ ಒಂದು ಮಾದರಿ.
ಶ್ರೀ ರತನ್ ಟಾಟಾ ಅವರ ದೇಶಭಕ್ತಿ ಕೋಟ್ಯಂತರ ಭಾರತೀಯರಿಗೆ ಬಿಕ್ಕಟ್ಟಿನ ಸಮಯದಲ್ಲಿ ಉಜ್ವಲವಾದ ಬೆಳಕಾಯಿತು. ೨೬/೧೧ ಭಯೋತ್ಪಾದಕ ದಾಳಿಯ ನಂತರ ಮುಂಬೈನಲ್ಲಿ ಪ್ರಸಿದ್ಧ ತಾಜ್ ಹೋಟೆಲ್ ಅನ್ನು ಶೀಘ್ರವಾಗಿ ಪುನರಾರಂಭಿಸುವ ಮೂಲಕ ಭಾರತವು ಒಗ್ಗಟ್ಟಾಗಿದೆ, ಭಯೋತ್ಪಾದನೆಗೆ ಮಣಿಯುವುದಿಲ್ಲ ಎಂದು ರಾಷ್ಟ್ರಕ್ಕೆ ಕರೆ ನೀಡಿದರು.
ವೈಯಕ್ತಿಕವಾಗಿ, ನಾನು ಅವರನ್ನು ಅನೇಕ ವರ್ಷಗಳಿಂದ ಬಹಳ ಹತ್ತಿರದಿಂದ ತಿಳಿದುಕೊಳ್ಳುವ ಅವಕಾಶ ಪಡೆದಿದ್ದೆ. ನಾವು ಗುಜರಾತಿನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ, ಅಲ್ಲಿ ಅವರು ಬಹಳ ಆಸಕ್ತಿ ಹೊಂದಿದ್ದ ಹಲವಾರು ಯೋಜನೆಗಳಲ್ಲಿ ವ್ಯಾಪಕವಾಗಿ ಹೂಡಿಕೆ ಮಾಡಿದ್ದರು. ಕೆಲವೇ ವಾರಗಳ ಹಿಂದೆ, ನಾನು ಸ್ಪೇನ್ ಅಧ್ಯಕ್ಷ ಶ್ರೀ ಪೆಡ್ರೊ ಸ್ಯಾಂಚೆಜ್ ಅವರೊಂದಿಗೆ ವಡೋದರಾದಲ್ಲಿದ್ದೆ. ನಾವು ಜಂಟಿಯಾಗಿ ಭಾರತದಲ್ಲಿ ಸಿ-೨೯೫ ವಿಮಾನಗಳನ್ನು ತಯಾರಿಸುವ ವಿಮಾನ ಸಂಕೀರ್ಣವನ್ನು ಉದ್ಘಾಟಿಸಿದೆವು. ಇದರ ಕೆಲಸವನ್ನು ಪ್ರಾರಂಭಿಸಿದವರು ಶ್ರೀ ರತನ್ ಟಾಟಾ. ಆ ಸಂದರ್ಭದಲ್ಲಿ ಶ್ರೀ ರತನ್ ಟಾಟಾ ಅವರ ಅನುಪಸ್ಥಿತಿಯು ಬಹಳವಾಗಿ ಕಾಡಿತು.
ಶ್ರೀ ರತನ್ ಟಾಟಾ ಅವರು ಒಬ್ಬ ಪತ್ರಗಳ ವ್ಯಕ್ತಿಯಾಗಿ ನನಗೆ ನೆನಪಾಗುತ್ತಾರೆ - ಅವರು ಆಡಳಿತದ ವಿಷಯವಾಗಿರಲಿ, ಸರಕಾರದ ಸಹಾಯಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸುವ ಅಥವಾ ಚುನಾವಣಾ ವಿಜಯದ ನಂತರ ಅಭಿನಂದನಾ ಸಂದೇಶಗಳನ್ನು ಕಳುಹಿಸುವುದಾಗಲಿ, ವಿವಿಧ ವಿಷಯಗಳ ಬಗ್ಗೆ ನನಗೆ ಆಗಾಗ ಪತ್ರ ಬರೆಯುತ್ತಿದ್ದರು.
ನಾನು ಕೇಂದ್ರಕ್ಕೆ ತೆರಳಿದಾಗ, ನಮ್ಮ ನಿಕಟ ಸಂವಹನಗಳು ಮುಂದುವರಿದವು ಮತ್ತು ಅವರು ನಮ್ಮ ರಾಷ್ಟ್ರ ನಿರ್ಮಾಣ ಪ್ರಯತ್ನಗಳಲ್ಲಿ ಬದ್ಧತೆಯ ಪಾಲುದಾರರಾಗಿ ಉಳಿದರು. ‘ಸ್ವಚ್ಛ ಭಾರತ’ ಅಭಿಯಾನಕ್ಕೆ ಶ್ರೀ ರತನ್ ಟಾಟಾ ಅವರು ನೀಡಿದ ಬೆಂಬಲ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿತ್ತು. ಅವರು ಈ ಜನಾಂದೋಲನದ ಬೆಂಬಲಿಗರಾಗಿದ್ದರು, ಭಾರತದ ಪ್ರಗತಿಗೆ ಸ್ವಚ್ಛತೆ ಮತ್ತು ನೈರ್ಮಲ್ಯವು ಬಹಳ ಮುಖ್ಯ ಎಂದು ಅವರು ಅರ್ಥಮಾಡಿಕೊಂಡಿದ್ದರು. ಅಕ್ಟೋಬರ್ ಆರಂಭದಲ್ಲಿ ‘ಸ್ವಚ್ಛ ಭಾರತ’ ಅಭಿಯಾನದ ಹತ್ತನೇ ವಾರ್ಷಿಕೋತ್ಸವಕ್ಕಾಗಿ ಅವರು ನೀಡಿದ ಹೃತ್ಪೂರ್ವಕ ವೀಡಿಯೊ ಸಂದೇಶವನ್ನು ನಾನು ಇನ್ನೂ ನೆನಪಿಸಿಕೊಳ್ಳುತ್ತೇನೆ. ಇದು ಅವರು ಕೊನೆಯ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು.
ಅವರ ಹೃದಯಕ್ಕೆ ಹತ್ತಿರವಾದ ಮತ್ತೊಂದು ವಿಷಯವೆಂದರೆ ಆರೋಗ್ಯ ರಕ್ಷಣೆ ಮತ್ತು ವಿಶೇಷವಾಗಿ ಕ್ಯಾನ್ಸರ್ ವಿರುದ್ಧದ ಹೋರಾಟ. ಎರಡು ವರ್ಷಗಳ ಹಿಂದೆ ಅಸ್ಸಾಮಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ನನಗೆ ನೆನಪಿದೆ. ಅಲ್ಲಿ ನಾವು ಒಟ್ಟಾಗಿ ರಾಜ್ಯದ ವಿವಿಧ ಕ್ಯಾನ್ಸರ್ ಆಸ್ಪತ್ರೆಗಳನ್ನು ಉದ್ಘಾಟಿಸಿದೆವು. ಆ ಸಮಯದಲ್ಲಿ ಅವರು ತಮ್ಮ ಭಾಷಣದಲ್ಲಿ, ತಮ್ಮ ಕೊನೆಯ ವರ್ಷಗಳನ್ನು ಆರೋಗ್ಯಕ್ಕಾಗಿ ಮೀಸಲಿಡಲು ಬಯಸುವುದಾಗಿ ಸ್ಪಷ್ಟವಾಗಿ ಹೇಳಿದ್ದರು. ಆರೋಗ್ಯ ಮತ್ತು ಕ್ಯಾನ್ಸರ್ ಆರೈಕೆಯನ್ನು ಪ್ರವೇಶಿಸಲು ಮತ್ತು ಕೈಗೆಟುಕುವಂತೆ ಮಾಡುವ ಅವರ ಪ್ರಯತ್ನವು ಕಾಯಿಲೆಗಳ ವಿರುದ್ಧ ಹೋರಾಡುವವರ ಬಗೆಗಿನ ಆಳವಾದ ಸಹಾನುಭೂತಿಯಲ್ಲಿ ಬೇರೂರಿತ್ತು. ನ್ಯಾಯಯುತ ಸಮಾಜವು ಅದರ ಅತ್ಯಂತ ದುರ್ಬಲರೊಂದಿಗೆ ನಿಲ್ಲುತ್ತದೆ ಎಂದು ಅವರು ನಂಬಿದ್ದರು.
ನಾವು ಇಂದು ಅವರನ್ನು ಸ್ಮರಿಸುವಾಗ, ಅವರು ಕಲ್ಪಿಸಿಕೊಂಡ ಸಮಾಜವನ್ನು ನೆನಪಿಸಿಕೊಳ್ಳುತ್ತೇವೆ. ಅಲ್ಲಿ ವ್ಯಾಪಾರವು ಒಳ್ಳೆಯದಕ್ಕಾಗಿ ಒಂದು ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಸಾಮರ್ಥ್ಯಕ್ಕೂ ಮೌಲ್ಯವಿರುತ್ತದೆ ಮತ್ತು ಪ್ರಗತಿಯನ್ನು ಎಲ್ಲರ ಯೋಗಕ್ಷೇಮ ಮತ್ತು ಸಂತೋಷದಿಂದ ಅಳೆಯಲಾಗುತ್ತದೆ. ಅವರು ಬದಲಾವಣೆ ತಂದ ಜನರ ಜೀವನದಲ್ಲಿ ಮತ್ತು ಅವರು ಬೆಳೆಸಿದ ಕನಸುಗಳಲ್ಲಿ ಬದುಕುತ್ತಾರೆ. ಭಾರತವನ್ನು ಉತ್ತಮ, ದಯಾಪರ ಮತ್ತು ಹೆಚ್ಚು ಭರವಸೆಯ ತಾಣವನ್ನಾಗಿ ಮಾಡಿದ್ದಕ್ಕಾಗಿ ಹಲವು ತಲೆಮಾರುಗಳು ಅವರಿಗೆ ಕೃತಜ್ಞರಾಗಿರುತ್ತವೆ.