ಕನ್ನಡದ ಅಭಿವೃದ್ಧಿಗೆ ಶ್ರಮಿಸಿದ ದೇಜಗೌ ನೆನಪು
ಇಂದು ದೇಜಗೌ ಜನ್ಮದಿನ
ಆಡು ಮೇಯಿಸುವ ಕೆಲಸಕ್ಕೆ ಹಾಕಿದ್ದ ಹುಡುಗ ಆಡುಗಳನ್ನು ಅವುಗಳ ಪಾಲಿಗೆ ಬಿಟ್ಟು ಶಾಲೆಗೆ ಹೋದ, ಓದು ಕಲಿಯುವುದಕ್ಕೆ. ಇದನ್ನು ಕಂಡು ತಂದೆಗೆ ಕೋಪ ಬಂತು; ಹುಡುಗನಿಗೆ ಪೆಟ್ಟೂ ಬಿತ್ತು. ಓದಲು ಹಂಬಲಿಸುತ್ತಿದ್ದ ಹುಡುಗನ ವಿಚಾರದಲ್ಲಿ ಉಪಾಧ್ಯಾಯರಿಗೆ ಆಸಕ್ತಿ ಮೂಡಿತು. ಅವರು ಹುಡುಗನ ತಂದೆಯೊಡನೆ ಮಾತನಾಡಿದರು; ಆಡು ಕಾಯುವ ಕೆಲಸದಿಂದ ಬಿಡಿಸಿ ಶಾಲೆಗೆ ಸೇರಿಸಿಕೊಂಡರು. ಹುಡುಗ ಶ್ರದ್ಧೆಯಿಂದ ಅಭ್ಯಾಸ ಮಾಡಿ ಮುಂದೆ ಬಂದ. ಅಧ್ಯಾಪಕನಾದ; ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪದವಿಗೇರಿದ; ಕುಲಪತಿಯಾದ. ಈ ಮಹತ್ವದ ಸಾಧನೆಯನ್ನು ಕೈಗೂಡಿಸಿಕೊಂಡ ವ್ಯಕ್ತಿಯೇ ಪ್ರಾಧ್ಯಾಪಕ ದೇಜಗೌ.
ದೇವೇಗೌಡ ಜವರೇಗೌಡರು ಚನ್ನಪಟ್ಟಣ ತಾಲೂಕು ಚಕ್ಕೆರೆಗ್ರಾಮದವರು. ಅವರು ಹುಟ್ಟಿದ್ದು ಅದೇ ತಾಲೂಕಿನ ಮುದಿಗೆರೆಯಲ್ಲಿ. ತಮ್ಮ ಅಜ್ಜನ ಮನೆಯಲ್ಲಿ. 1915ನೆಯ ಜುಲೈ 6ರಂದು. ದೇಜಗೌ ಅವರು ಚಕ್ಕರೆ ಗ್ರಾಮದಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ, ಚನ್ನಪಟ್ಟಣದ ಹೈಸ್ಕೂಲಿನಲ್ಲಿ ಎಸೆಸೆಲ್ಸಿ ಮಾಡಿದರು. ವಿದ್ಯಾರ್ಥಿ ವೇತನದ ನೆರವಿನಿಂದ ವಿದ್ಯಾಭ್ಯಾಸ ಮುಂದುವರಿಯಿತು. ಬೆಂಗಳೂರಿನಲ್ಲಿ ಇಂಟರ್ ಮೀಡಿಯಟ್ ಮುಗಿಸಿ ಇಂಗ್ಲಿಷ್ ಆನರ್ಸ್ ಗೆ ಸೇರಬೇಕೆಂದು 1938ರಲ್ಲಿ ಮೈಸೂರಿಗೆ ಬಂದರು. ಕನ್ನಡ ಆನರ್ಸ್‌ಗೆ ಸೇರಿದರೆ ವೆಂಕಣ್ಣಯ್ಯನವರಂತಹ ಪ್ರಾಧ್ಯಾಪಕರಿದ್ದಾರೆ. ಕೆ.ವಿ. ಪುಟ್ಟಪ್ಪನವರ ಬಳಿ ಕಲಿಯುವ ಅವಕಾಶ ದೊರೆಯುತ್ತದೆ ಎಂದು ತಿಳಿದಾಗ ಕನ್ನಡ ಆನರ್ಸ್‌ಗೆ ಸೇರಲು ದೇಜಗೌ ನಿಶ್ಚಯಿಸಿದರು.
ಶ್ರೀರಾಮಕೃಷ್ಣ ಆಶ್ರಮ ವಿದ್ಯಾರ್ಥಿ ನಿಲಯದಲ್ಲಿ ಇದ್ದುಕೊಂಡು ಆನರ್ಸ್ ಮುಗಿಸಿದರು. ಆನಂತರ ಕೊಲ್ಲಾಪುರಕ್ಕೆ ಹೋಗಿ ನ್ಯಾಯಶಾಸ್ತ್ರ ಕಲಿಯಬೇಕೆಂಬ ಆಸೆ ನೆರವೇರದಿರಲು, ಬೆಂಗಳೂರಿಗೆ ಬಂದು ವಿದ್ಯಾ ಇಲಾಖೆಯ ಪರೀಕ್ಷಾ ವಿಭಾಗದಲ್ಲಿ ಗುಮಾಸ್ತರಾದರು. ಸ್ವಲ್ಪ ಕಾಲಾನಂತರ ಮೈಸೂರಿಗೆ ಬಂದು ಕನ್ನಡ ಎಂ.ಎ. ತರಗತಿಗೆ ಸೇರಿದರು. 1943ರಲ್ಲಿ ಎಂ.ಎ. ಪದವಿಯನ್ನು ಪಡೆದು ಮೈಸೂರು ಸರಕಾರದ ಕಾರ್ಯಸೌಧದಲ್ಲಿ ಕೆಲಸಕ್ಕೆ ಸೇರಿದರು. ಅಕೌಂಟ್ಸ್ ಪರೀಕ್ಷೆ ಮಾಡಿಕೊಂಡರು. 1945ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಾಪಕರಾದರು. ಇದರ ಜೊತೆಗೆ ಬಿಡುವಿನ ಕಾಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿನ ಶಬ್ದ ಸಂಗ್ರಹ ಕಾರ್ಯವನ್ನು ಮಾಡತೊಡಗಿದರು. ಅವರ ಕನ್ನಡ ಸೇವೆ ಆರಂಭವಾದದ್ದು ಹೀಗೆ. 1949ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿಗೆ ಅವರಿಗೆ ವರ್ಗವಾಯಿತು. ಅಲ್ಲಿ ಕೆಲಕಾಲ ಸಂಶೋಧನಾ ಶಾಖೆಯಲ್ಲಿ ಕೆಲಸ ಮಾಡಿದರು. ‘ಪ್ರಬುದ್ಧ ಕರ್ನಾಟಕ’ದ ಸಂಪಾದಕರಾದರು. ಆನಂತರ 1955ರಲ್ಲಿ ಉಪಪ್ರಾಧ್ಯಾಪಕರಾದರು. ಕೆಲ ಕಾಲ ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟಣ ಶಾಖೆಯ ಕಾರ್ಯದರ್ಶಿಯಾಗಿದ್ದರು. 1957ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಧಿಕಾರಿಯಾದರು. 1960ರಲ್ಲಿ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಪ್ರಿನ್ಸಿಪಾಲರಾದರು. 1964ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರೂ ಕನ್ನಡ ವಿಭಾಗದ ಮುಖ್ಯಸ್ಥರೂ ಆದರು. ಮಾರನೇ ವರ್ಷವೇ ಕಲಾವಿಭಾಗದ ಡೀನ್ ಆಗುವ ಗೌರವ ದೊರೆಯಿತು. ವೃತ್ತಿ ಸಂಬಂಧ ಪದಗಳ ಸಂಗ್ರಹಕ್ಕಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡರು.
1966ರಲ್ಲಿ ಆರಂಭವಾದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ದುಡಿದು ಸಂಸ್ಥೆಯ ಏಳಿಗೆಗೆ ಕಾರಣರಾದರು. ಭಾಷಾಂತರ ವಿಭಾಗ, ಜಾನಪದ ವಸ್ತು ಸಂಗ್ರಹಾಲಯಗಳನ್ನು ಪ್ರಾರಂಭಿಸುವ ದಿಟ್ಟ ಹೆಜ್ಜೆ ಇಟ್ಟರು. ಆ ಅವಧಿಯಲ್ಲಿ ವಿಶ್ವಕೋಶ ರಚನೆಯ ಹೊಣೆಯನ್ನು ರಾಜ್ಯ ಸರಕಾರ ಮೈಸೂರು ವಿಶ್ವವಿದ್ಯಾನಿಲಯದ ಮೂಲಕ ಕನ್ನಡ ಅಧ್ಯಯನ ಸಂಸ್ಥೆಗೆ ವಹಿಸಿಕೊಟ್ಟಿತು. 1969ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪಟ್ಟ ಇವರಿಗೆ ದೊರೆಯಿತು. 1970ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ದೇಜಗೌ ಹಲವಾರು ಜೀವನ ಚರಿತ್ರೆಗಳನ್ನೂ, ವಿಮರ್ಶಾ ಗ್ರಂಥಗಳನ್ನು ಬರೆದಿದ್ದಾರೆ. ಆಲ್ಬರ್ಟ್ ಐನ್ ಸ್ಟೀನ್, ತೀನಂಶ್ರೀ, ನಂಜುಂಡಕವಿ, ರಾಷ್ಟ್ರಕವಿ ಕುವೆಂಪು, ಬೆಂಗಳೂರು ಕೆಂಪೇಗೌಡ, ಕಡುಗಲಿ ಕುಮಾರರಾಮ, ಮೋತಿಲಾಲ್ ನೆಹರೂ, ಶ್ರೀ ರಾಮಾಯಣ ದರ್ಶನಂ ವಚನ ಚಂದ್ರಿಕೆ, ಷಡಕ್ಷರವದೇವ, ಸಾಹಿತಿಗಳ ಸಂಗದಲ್ಲಿ, ಮೊದಲಾದವು ಇವರ ಕೃತಿಗಳು. ಬೆರಕೆಸೊಪ್ಪು;ನೂರೆಂಟು ಪುಸ್ತಕಗಳ ಮುನ್ನುಡಿಗಳು. ಕುಲಪತಿಯ ಭಾಷಣಗಳು; ಇವರ ಉಪನ್ಯಾಸಗಳ ಸಂಗ್ರಹ. ಇವಲ್ಲದೆ ದೇಜಗೌ ಕೆಲವು ಶ್ರೇಷ್ಠ ಕೃತಿಗಳನ್ನು ಭಾಷಾಂತರಿಸಿದ್ದಾರೆ. ಇವುಗಳಲ್ಲಿ ಕೃಷ್ಣಾ ಹತೀಸಿಂಗರ ‘ನೆನಪು ಕಹಿಯಲ್ಲ’, ಲಿಯೋ ಟಾಲ್ ಸ್ಟಾಯ್‌ರ ‘ಪುನರುತ್ಥಾನ’, ಜೇನ್ ಆಸ್ಟಿನ್ ಕೃತಿ ‘ಹಮ್ಮು ಬಿಮ್ಮು’ ಗಮನಾರ್ಹವಾದವು.
ಕಬ್ಬಿಗರಕಾವ, ಜೈಮಿನಿ ಭಾರತ ಸಂಗ್ರಹ, ಶ್ರೀರಾಮಾಯಣ ದರ್ಶನಂ ಉಪನ್ಯಾಸಮಾಲೆ, ಹೊಸಗನ್ನಡ ಕಥಾಸಂಗ್ರಹ, ಮುಂತಾದವನ್ನು ದೇಜಗೌ ರವರು ಸಂಪಾದಿಸಿದ್ದಾರೆ. ಹೋರಾಟದ ಬದುಕು ಮತ್ತು ನೆನಪಿನ ಬುತ್ತಿ ಅವರ ಆತ್ಮಕಥೆ. ಇದು 1968ರಲ್ಲಿ ಪ್ರಕಟವಾಯಿತು.
ಕನ್ನಡ ನಾಡಿನ ಎಲ್ಲಾ ವ್ಯವಹಾರ ರಂಗಗಳಲ್ಲೂ ಕನ್ನಡಕ್ಕೆ ಆದ್ಯತೆ ದೊರೆಯಬೇಕು, ಕನ್ನಡಕ್ಕೆ ಗೌರವ ಸ್ಥಾನ ದೊರೆಯಬೇಕು ಎಂಬುದು ದೇಜಗೌ ಅವರ ನಿಲುವು. ಯಾವುದೇ ರೀತಿಯಲ್ಲಿ ಕನ್ನಡದ ಹಿತಕ್ಕೆ ಧಕ್ಕೆ ಬಂದರೆ ಅದನ್ನು ಅವರು ಸಹಿಸಲಾರರು. ತಮ್ಮ ಪೂರ್ಣ ಶಕ್ತಿಯನ್ನು ವಿನಿಯೋಗಿಸಿ ಅದನ್ನು ಎದುರಿಸಿ ಹೋರಾಡುತ್ತಾರೆ. ಇದರಿಂದಾಗಿ ಅವರು ಕನ್ನಡ ಜನತೆಗೆ ಪ್ರಿಯರಾಗಿದ್ದಾರೆ. ಕನ್ನಡ ಅಭಿವೃದ್ಧಿಗೆ ಅಪಾರವಾಗಿ ನಾನಾ ಮುಖವಾಗಿ ದೇಜಗೌ ಶ್ರಮಿಸಿದ್ದಾರೆ. ಈ ಸೇವೆಯನ್ನು ಗಮನಿಸಿದ ಸರಕಾರ ಇವರಿಗೆ ಪದ್ಮಶ್ರೀ, ನಾಡೋಜ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನಕ ಶ್ರೀ ಪ್ರಶಸ್ತಿ, ರಾಷ್ಟ್ರೀಯ ಬಸವ ಪುರಸ್ಕಾರ, ಮುಂತಾದ ಗೌರವ ಪುರಸ್ಕಾರಗಳನ್ನು ನೀಡಿವೆ.
ಕನ್ನಡ ಜನತೆಗೆ ಪ್ರಿಯರಾದ ದೇಜಗೌ ಅವರ ಐವತ್ತನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಅವರನ್ನು ಗೌರವಿಸಿತು. 1968ರಲ್ಲಿ ಇದೇ ಸಂದರ್ಭದಲ್ಲಿ ಅವರಿಗೆ ‘ಅಂತಃಕರಣ’ ಸಂಭಾವನ ಗ್ರಂಥವು ಅರ್ಪಿಸಲ್ಪಟ್ಟಿತು. ಈ ಶತಮಾನದ ಉತ್ತರಾರ್ಧದಲ್ಲಿ ಕನ್ನಡದ ಏಳಿಗೆಗಾಗಿ ನಿಷ್ಠೆಯಿಂದ ಶ್ರಮಿಸಿದವರ ಅಗ್ರ ಪಂಕ್ತಿಯಲ್ಲಿ ದೇಜಗೌ ಗಣ್ಯರು. ಅವರು 30 ಮೇ, 2016ರಂದು ನಿಧನರಾದರು. ಅವರು ಹುಟ್ಟಿ 106ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ಅವರ ಪರಿಚಯ ನಿಮಗಿರಲಿ.