ಪ್ರತಿಭಾವಂತ ಜಾನ್ ರಸ್ಕಿನ್ ನೆನಪು
ಆಟದ ಸಾಮಾನುಗಳಿಲ್ಲದೆ, ಸ್ನೇಹಿತರ ಒಡನಾಟವಿಲ್ಲದೆ ಆ ಹುಡುಗ ತನ್ನ ತಾಯಿ ತಂದೆಗೆ ಅಂಟಿಕೊಂಡು ಕಾಲ ಕಳೆದ. ತಂದೆಗೆ ಸಾಹಿತ್ಯ, ಚಿತ್ರಕಲೆಗಳಲ್ಲಿ ಆಸಕ್ತಿ. ತಾಯಿಗೆ ಧರ್ಮದಲ್ಲಿ ಆಸಕ್ತಿ. ತನ್ನ ಮಗ ಪ್ರತಿದಿನವೂ ತಪ್ಪದೇ ಬೈಬಲ್ ಓದಬೇಕೆಂದು ತಾಯಿ ಕಟ್ಟಳೆ ವಿಧಿಸುತ್ತಾಳೆ. ಹೀಗೆ ಕಲೆ, ಸಾಹಿತ್ಯ, ಧರ್ಮ ಇವುಗಳ ಪ್ರಭಾವದಲ್ಲಿ ಬೆಳೆದ ಬಾಲಕ ದೊಡ್ಡವನಾದ ಮೇಲೆ ವಿಶ್ವವಿಖ್ಯಾತನಾದ. ಅವನೇ ಇಂಗ್ಲೆಂಡ್‌ನ ಲೇಖಕ, ಕಲಾವಿದ, ತತ್ವಜ್ಞಾನಿ, ಕವಿ ಹಾಗೂ ಸಮಾಜ ಸುಧಾರಕ ಜಾನ್ ರಸ್ಕಿನ್.
ಜಾನ್ ರಸ್ಕಿನ್ 1819ನೆಯ ಫೆಬ್ರವರಿ 8ರಂದು ಲಂಡನಿನಲ್ಲಿ ಹುಟ್ಟಿದ. ಶ್ರೀಮಂತನಾಗಿದ್ದ ಮಾರ್ಗರೆಟ್ ರಸ್ಕಿನ್ ದ್ರಾಕ್ಷಾರಸ ಮದ್ಯದ ವ್ಯಾಪಾರಿಯಾಗಿದ್ದ. ಈತನ ಒಬ್ಬನೇ ಮಗ ಜಾನ್ ರಸ್ಕಿನ್. ಆತನ ವಿದ್ಯಾಭ್ಯಾಸ ಮನೆಯಲ್ಲಿಯೇ ನಡೆಯಿತು. 18ನೇ ವಯಸ್ಸಿಗೆ ಆಕ್ಸ್‌ಫರ್ಡ್‌ನಲ್ಲಿ ಅಭ್ಯಾಸವನ್ನು ಮುಂದುವರಿಸಲು ಬಂದ. ಆಗ ಅವನ ತಾಯಿಯು ಅವನೊಂದಿಗೆ ಬಂದಿದ್ದಳು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಪ್ರೇಮ ಪ್ರಸಂಗದಲ್ಲಿ ಹತಾಶನಾದರೂ ಓದಿನಲ್ಲಿ ರಸ್ಕಿನ್ ಹಿಂದೆ ಬೀಳಲಿಲ್ಲ. ಕಾವ್ಯ ರಚನೆಯಲ್ಲೂ ತನ್ನ ಕೃಷಿಯನ್ನು ಮುಂದುವರಿಸಿದ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕವಿಗಳಲ್ಲಿ ಅತ್ಯುತ್ತಮ ರಚನೆ ಮಾಡಿದವರಿಗೆ ಕೊಡುವ ನ್ಯೂಡಿ ಗೇಟ್ ಬಹುಮಾನವನ್ನು ಪಡೆದ. ನಾಲ್ಕು ವರ್ಷಗಳ ನಂತರ ರಸ್ಕಿನ್ ವಿವಾಹ ಮಾಡಿಕೊಂಡ. ಆದರೆ ಅದು 1854ರಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತು.
ರಸ್ಕಿನ್ ಚಿಕ್ಕ ವಯಸ್ಸಿನವನಿದ್ದಾಗಲೇ ಅವನ ತಂದೆ ತನ್ನ ಪ್ರವಾಸ ಕಾಲದಲ್ಲಿ ಮಗನನ್ನು ಜೊತೆಯಲ್ಲೇ ಕರೆದುಕೊಂಡು ಹೋಗುತ್ತಿದ್ದ. ಇದರಿಂದ ರಸ್ಕಿನ್‌ಗೆ ಪ್ರಸಿದ್ಧ ಕಲಾವಿದರ ಕೃತಿಗಳನ್ನು ನೋಡುವ, ಪ್ರಕೃತಿ ಸೌಂದರ್ಯವನ್ನು ಕಂಡು ಆನಂದಪಡುವ ಅವಕಾಶ ಸಿಕ್ಕಿತು. ಅವನ ಕಲಾಪ್ರಜ್ಞೆ ಬೆಳೆಯಿತು. ಆಂಗ್ಲ ಚಿತ್ರ ಕಲಾವಿದ ಜೋಸೆಫ್ ಟರ್ನರ್ ರಸ್ಕಿನ್‌ನ ಮೆಚ್ಚುಗೆಯ ಚಿತ್ರಕಾರನಾದ. ರಸ್ಕಿನ್ ದೊಡ್ಡವನಾದ ಮೇಲೆ ಚಿತ್ರಕಲೆಯ ಬಗೆಗೆ ಆಳವಾಗಿ ಅಧ್ಯಯನ ಮಾಡಿ ಪುಸ್ತಕಗಳನ್ನು ಬರೆದ. 1869ರಲ್ಲಿ ಆಕ್ಸಫರ್ಡ್‌ನಲ್ಲಿ ಲಲಿತ ಕಲೆಯ ಪ್ರಾಧ್ಯಾಪಕನಾಗಿ ನಿಯಮಿತನಾದ. ಆದರೆ ಮರು ವರ್ಷವೇ ತೀವ್ರ ಕಾಯಿಲೆಗೆ ಒಳಗಾದ. ರಸ್ಕಿನ್ ತನ್ನ ಜೀವನವಿಡೀ ಆಗಾಗ ಮಾನಸಿಕ ವ್ಯಾಧಿಯಿಂದ ಬಳಲುವಂತಾಯಿತು. ಆರೋಗ್ಯ ಚೆನ್ನಾಗಿದ್ದಾಗ ಅವನು ಬರೆಯುತ್ತಿದ್ದ. 1872 ರಲ್ಲಿ ಕಾನಿಸ್ಟನ್ ಸರೋವರದ ಬಳಿ ಬ್ರಾಂಟ್ ವುಡ್ ಮನೆಗೆ ವಾಸಕ್ಕೆ ಬಂದ. ಇಲ್ಲಿ ಅವಕಾಶವಾದಾಗಲೆಲ್ಲ ಸ್ವಲ್ಪ ಸ್ವಲ್ಪವಾಗಿ ಆತ್ಮಕಥೆಯನ್ನು ಬರೆದ.
ಪದವೀಧರನಾಗುವ ವೇಳೆಗೆ ರಸ್ಕಿನ್‌ನ ಹಲವಾರು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಜೋಸೆಫ್ ಟರ್ನರ್ ಸಮಸ್ಟಿ ಪರಿಣಾಮ ಪದ್ಧತಿಯಲ್ಲಿ ರಚಿಸಿದ ಚಿತ್ರಗಳು ವಿಮರ್ಶಕರ ಕಟುಟೀಕೆಗಳಿಗೆ ಒಳಗಾದವು. ಟರ್ನರ್ ಅಭಿಮಾನಿಯಾಗಿದ್ದ ರಸ್ಕಿನ್ ಕೋಪೋದ್ರಿಕ್ತನಾಗಿ ಟರ್ನರ್‌ನ ಪಕ್ಷ ವಹಿಸಿ ಲೇಖನಗಳನ್ನು ಬರೆದ. ಟರ್ನರ್ ಕಲೆಯನ್ನು ಪ್ರಶಂಸಿಸಿ ಬರೆದ ಲೇಖನಗಳನ್ನು ಒಳಗೊಂಡ ‘ಮಾಡರ್ನ್ ಪೇಂಟರ್ಸ್’ ಪುಸ್ತಕದ ಮೊದಲ ಭಾಗವನ್ನು 1843ರಲ್ಲಿ ಪ್ರಕಟಿಸಿದ. ಇದು ರಸ್ಕಿನ್‌ಗೆ ಕೀರ್ತಿಯನ್ನು ತಂದಿತು. ಈ ಗ್ರಂಥದ ಉಳಿದ ನಾಲ್ಕು ಭಾಗಗಳು ಪ್ರಕಟವಾದ ಮೇಲೆ ಅವನ ಕೀರ್ತಿ ಇನ್ನೂ ಹೆಚ್ಚಿತು. ಸಮಕಾಲೀನ ಕಲಾವಿಮರ್ಶಕರಲ್ಲಿ ಅವನಿಗೆ ಅತ್ಯಂತ ಪ್ರಮುಖ ಸ್ಥಾನ ದೊರೆಯಿತು.
1846 ರಿಂದ 1854ರ ಅವಧಿಯಲ್ಲಿ ರಸ್ಕಿನ್ ವೇನಿಸ್‌ಗೆ ಹೋಗಿ ಮಧ್ಯಯುಗದ ವಾಸ್ತುಶಿಲ್ಪ ನಿರ್ಮಾಣಗಳನ್ನು ಅಭ್ಯಾಸ ಮಾಡಿದ. 1849ರಲ್ಲಿ ವೇನಿಸ್‌ನಲ್ಲಿಯೇ ‘ಸೆವೆನ್ ಲ್ಯಾಂಪ್ಸ್ ಆಫ್ ಆರ್ಕಿಟೆಕ್ಚರ್’ ಎಂಬ ಗ್ರಂಥವನ್ನು ಆನಂತರ ‘ದಿ ಸ್ಟೋನ್ಸ್ ಆಫ್ ವೇನಿಸ್ ಎಂಬ ಪುಸ್ತಕವನ್ನು ಬರೆದ. ಇವುಗಳಲ್ಲಿ ಆತ ಒಂದು ದೇಶದ ಜನತೆಯ ನೈಜ ಗುಣವನ್ನು ಅಲ್ಲಿನ ವಾಸ್ತುಶಿಲ್ಪದ ಸ್ವರೂಪದಿಂದ ಕಂಡು ಹಿಡಿಯಬಹುದೆಂಬ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ. ಕ್ರಮೇಣವಾಗಿ ರಸ್ಕಿನ್‌ನ ಆಸಕ್ತಿ ಬದಲಾಗುತ್ತಾ ಬಂತು. ಉತ್ತಮ ಸಾಹಿತ್ಯವನ್ನು ಕುರಿತು ‘ಸೆಸೇಮ್ ಆ್ಯಂಡ್ ಲಿಲೀಸ್’ ಎಂಬ ಪುಸ್ತಕವನ್ನು ಬರೆದ. ಕಲಾ ಕೃತಿಗಳ ನಿರ್ಮಾಣಕ್ಕೆ ನೆರವಾಗುವಂತೆ ಸಾಮಾಜಿಕ ಸ್ಥಿತಿಗತಿಗಳ ಬಗೆಗೆ ಅಧ್ಯಯನ ಮಾಡ ತೊಡಗಿದ. ‘ಆನ್ ಟು ದಿ ಲಾಸ್ಟ್’ ಪುಸ್ತಕ ರಸ್ಕಿನ್‌ನ ಮೆಚ್ಚುಗೆಯ ಗ್ರಂಥ. ಗಾಂಧೀಜಿಯ ಸರ್ವೋದಯ ಕಲ್ಪನೆಗೆ ಪ್ರೇರಣೆ ನೀಡಿದ ಕೃತಿ ಇದು. 1900 ಜನವರಿ 20ರಂದು ರಸ್ಕಿನ್ ತನ್ನ 80ನೇ ವಯಸ್ಸಿಗೆ ಮರಣ ಹೊಂದಿದ. ರಸ್ಕಿನ್ ತನ್ನ ಆಸ್ತಿಯ ಬಹುಭಾಗವನ್ನು ಜನೋಪಕಾರಿ ಸಂಸ್ಥೆಗಳಿಗೆ ದಾನ ಮಾಡಿದ. 2024 ಫೆಬ್ರವರಿ 8ಕ್ಕೆ 205ನೇ ಜನ್ಮದಿನ ಹೀಗಾಗಿ ಜಾನ್ ರಸ್ಕಿನ್ ಪರಿಚಯಿಸುವ ಪುಟ್ಟ ಕೆಲಸ ಇದಾಗಿದೆ.