ರಾಜಕೀಯ ಸುಳಿಯಲ್ಲಿ ಸಿಲುಕಿರುವ ಮೀಸಲಾತಿ

ಸ್ವಾತಂತ್ರ್ಯಾನಂತರ ರಾಷ್ಟ್ರವು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಗೆ ಬದ್ಧವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲಿ ದೇಶದ ಜನರು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಇವು ಪ್ರಜಾಪ್ರಭುತ್ವದ ಪಿಟಮಿಡ್ ರಚನೆಯಂಥ ಮೂರು ಕ್ರಿಯಾತ್ಮಕ ಅಂಗಗಳಾಗಿವೆ. ಪ್ರಜಾಪ್ರಭುತ್ವದಲ್ಲಿ ಜನರು ಆಡಳಿತದ ಸೂತ್ರವನ್ನು ಯಾರಿಗೆ ಕೊಡಬೇಕೆಂಬುದನ್ನು ಮತದಾನದ ಮೂಲಕ ಕರುಣಿಸುತ್ತಾರೆ. ಅಂತಹ ಚುನಾಯಿತ ಪ್ರತಿನಿಧಿಗಳು ತಮ್ಮ ಚುನಾವಣಾ ಅವಧಿ ಮುಗಿದ ನಂತರ ಅಥವಾ ಯಾವುದೇ ಇತರ ಸಂದರ್ಭಗಳಲ್ಲಿ ಮುಂದಿನ ಅವಧಿಯ ಹೊಸ ಜನಾದೇಶವನ್ನು ಪಡೆಯಲು ಜನರ ಬಳಿಗೆ ಮರಳುತ್ತಾರೆ. ಮೀಸಲಾತಿ ನೀತಿಯ ಪ್ರಶ್ನೆಗೆ ಸಂಬಂಧಿಸಿದಂತೆ ಶಾಸಕಾಂಗಗಳ ಆದ್ಯತೆ ಮತ್ತು ಸೂಕ್ಷ್ಮತೆಗಳು, ಮೀಸಲಾತಿಯ ಪಾಲನೆ ಹಾಗೂ ಅನುಷ್ಠಾನದ ಮೇಲೆ ಪರಿಣಾಮ ಬೀರುತ್ತವೆ. ಇದು ಮತ್ತೆ ಜನರಿಂದ ಚುನಾಯಿತವಾದ ಆಡಳಿತ ಮಂಡಳಿಯ ಆಧಿಪತ್ಯದ ಪುನರಾವರ್ತನೆಯಾಗುತ್ತದೆ.
ಈ ರೀತಿ, ಮೀಸಲಾತಿ ಮತ್ತು ಅದರ ಪರಿಣಾಮಕಾರಿ ಅನುಷ್ಠಾನ, ಮೇಲ್ವಿಚಾರಣೆ ಮತ್ತು ಕುಂದು-ಕೊರತೆ ಪರಿಹಾರ ಕುರಿತು ಅರ್ಥಪೂರ್ಣ ನಿಬಂಧನೆಗಳನ್ನು ಜಾರಿಗೆ ತರುವಲ್ಲಿ ರಾಜಕೀಯ ಮೇಲಧಿಕಾರಿಗಳ ಪಾತ್ರ ಬಹಳ ಮುಖ್ಯವಾಗುತ್ತದೆ. ಇವೆಲ್ಲವೂ ಸಾಂವಿಧಾನಿಕ ಬೆಂಬಲದ ಮೂಲಕ ಸಮಾನತೆಯ ಸಮಾಜವನ್ನು ಸ್ಥಾಪಿಸಲು ಆಳುವ ರಾಜಕಾರಣಿಗಳ ಬಲವಾದ ರಾಜಕೀಯ ಇಚ್ಛಾಶಕ್ತಿ ಮತ್ತು ದೃಢ ನಿರ್ಣಯವನ್ನು ಅವಲಂಬಿಸುತ್ತವೆ. ಇದಕ್ಕೆ ಮತ್ತೊಮ್ಮೆ ಈ ಜನಪ್ರತಿನಿಧಿಗಳಿಗೆ, ಚಾಲ್ತಿಯಲ್ಲಿರುವ ಸಾಮಾಜಿಕ ಪರಿಸ್ಥಿತಿ, ಪ್ರಸಕ್ತ ಸಾಮಾಜಿಕ ಸನ್ನಿವೇಶದಲ್ಲಿ ಮೀಸಲಾತಿಯ ಅವಶ್ಯಕತೆ, ಪ್ರತಿಭಟನೆ ಮತ್ತು ಪ್ರತಿಕೂಲಗಳನ್ನು ಎದುರಿಸಲು, ಸಕಾರಾತ್ಮಕ ಮನಸ್ಸು ಮತ್ತು ಹೆಚ್ಚಿನ ಅರಿವು ಅಗತ್ಯವಿದೆ. 50ರ ದಶಕದಲ್ಲಿ ಅಂದರೆ ದೇಶದಲ್ಲಿ ಮೀಸಲಾತಿ ನೀತಿಯನ್ನು ಜಾರಿಗೆ ತಂದ ಸಮಯದಲ್ಲಿ ರಾಜಕೀಯ ನಾಯಕತ್ವವು ಈ ಸನ್ನಿವೇಶದ ಬಗ್ಗೆ ಸಂಪೂರ್ಣವಾಗಿ ತಿಳಿದಿತ್ತು. ಸ್ವತಃ ದೇಶಭಕ್ತರು ನಿಸ್ವಾರ್ಥಿಗಳು ಆಗಿದ್ದ ಅಂದಿನ ರಾಜಕೀಯ ಪೀಳಿಗೆಯು, ಗುಲಾಮಗಿರಿಯ ದಿನಗಳ ದುಸ್ಥಿತಿಯನ್ನು ಅರಿತುಕೊಂಡಿತ್ತು. ಅವರು ಕಷ್ಟಪಟ್ಟು ಸಂಪಾದಿಸಿದ ಸ್ವಾತಂತ್ರ್ಯದ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದರು. ಸಾಮಾಜಿಕ ಸಮಾನತೆ ಮತ್ತು ದೀನದಲಿತರ ಪ್ರಗತಿಯ ಅಗತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಾತ್ರ ಅದನ್ನು ಬಲಪಡಿಸಬಹುದು, ಇಲ್ಲದಿದ್ದರೆ ಕೇವಲ ರಾಜಕೀಯ ಸ್ವಾತಂತ್ರ್ಯಕ್ಕೆ ಯಾವುದೇ ಮೌಲ್ಯವಿರುವುದಿಲ್ಲ. ಜನರು ಸಹ ಈ ಉದ್ದೇಶಕ್ಕೆ ಸಹಾನುಭೂತಿ ಮತ್ತು ಸಹಿಷ್ಣುತೆಯ ಭಾವನೆಯಿಂದ ದೇಶದಲ್ಲಿನ ಸಾಮಾಜಿಕ ಮತ್ತು ಆ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ಸ್ಥಾಪಿಸಲು ಸಹಕರಿಸಿದರು.
ಸಾಮಾಜಿಕ - ರಾಜಕೀಯ ಸ್ಥಾನ
ರಾಜಕೀಯ ಚತುರರ ಸಕಾರಾತ್ಮಕ ಪರಿಶ್ರಮಗಳು ಮತ್ತು ಜನರಿಂದ ಸಂಪೂರ್ಣ ಸಹಕಾರದ ಸಕ್ರಿಯ ಪರಿಣಾಮಗಳೊಂದಿಗೆ 70ರ ದಶಕದವರೆಗೆ ಇದೆಲ್ಲವೂ ಚೆನ್ನಾಗಿಯೇ ನಡೆಯಿತು. ಅದರ ನಂತರ ಎರಡನೇ ತಲೆಮಾರಿನ ರಾಜಕಾರಣಿಗಳ ಹೊಸಯುಗ ಪ್ರಾರಂಭವಾಯಿತು. ಕಾಲ ಕಳೆದಂತೆ ಮೌಲ್ಯಾಧಾರಿತ ಗಾಂಧಿವಾದಿ ರಾಜಕೀಯ ಪೀಳಿಗೆಯು ಭಾರತೀಯ ಸಾರ್ವಜನಿಕ ಜೀವನದಿಂದ ಕಣ್ಮರೆಯಾಗಲು ಪ್ರಾರಂಭಿಸಿತು. ಬಡತನ ನಿರ್ಮೂಲನೆ ಮುಂತಾದ ರಾಜಕೀಯ ಅಧಿಕಾರಗಳಿಸುವ ಪರಿಕಲ್ಪನೆಗಳು ಅನಗತ್ಯವಾದವು.
90ರ ದಶಕವು ಭಾರತೀಯ ಪ್ರಜಾಪ್ರಭುತ್ವ ಮತ್ತು ರಾಜಕೀಯದಲ್ಲಿ ಮತ್ತಷ್ಟು ಅಗಾಧ ಬದಲಾವಣೆಯನ್ನು ತಂದಿತು. 1977-80ರ ಅವಧಿಯಲ್ಲಿ ಸುಮಾರು 30 ತಿಂಗಳುಗಳ ಒಂದು ಸಣ್ಣ ಅವಧಿಯನ್ನು ಹೊರತುಪಡಿಸಿ ಅಧಿಕಾರವು ಮುಖ್ಯವಾಗಿ ಒಂದೇ ರಾಜಕೀಯ ಪಕ್ಷದ ಆಡಳಿತದ ಪ್ರಾಬಲ್ಯ ಹೊಂದಿತ್ತು. ಆದರೆ ಈಗ ಕೇಂದ್ರದಲ್ಲಿ ಬಹುಪಕ್ಷಗಳ ಮೈತ್ರಿ ಮತ್ತು ರಾಜ್ಯಗಳು ಪ್ರಾದೇಶಿಕ ಪಕ್ಷಗಳ ಆಳ್ವಿಕೆಗೂ ಒಳಪಟ್ಟಿವೆ. ಇವೆಲ್ಲವೂ ಭಾರತೀಯ ರಾಜಕೀಯ ವಾತಾವರಣದಲ್ಲಿ ಹೊಸ ಅಧಿಕಾರ ಸಮೀಕರಣಕ್ಕೆ ಕಾರಣವಾಯಿತು.
ಹೊರಹೊಮ್ಮುತ್ತಿರುವ ಹಿಂದುಳಿದ ವರ್ಗದ ರಾಜಕೀಯ
ಮತದಾನದ ಮೂಲಕ ಸಂಸದೀಯ ಪ್ರಜಾಪ್ರಭುತ್ವವು ರಾಜಕೀಯದಲ್ಲಿ ಹಿಂದುಳಿದ ಜಾತಿಗಳ ಸ್ಥಾನಮಾನವನ್ನು ಬದಲಾಯಿಸಿದೆ. ಹಿಂದುಳಿದ ವರ್ಗಗಳು ತಮ್ಮ ಸಂಖ್ಯಾತ್ಮಕ ಬಲದಿಂದಾಗಿ ರಾಜಕೀಯ ಶಕ್ತಿಯ ಕೇಂದ್ರ ಬಿಂದುವಾಗಿ ಹೊರಹೊಮ್ಮುತ್ತಿವೆ. ಅವು ತಮ್ಮ ಮತಗಳ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದವು. ಈ ಸಮುದಾಯಗಳ ಗುಂಪುಗಳ ರಾಜಕೀಯ ಆಕಾಂಕ್ಷಿಗಳು ಅಂತಿಮ ರಾಜಕೀಯ ಶಕ್ತಿಗೆ ಕಾರಣವನ್ನು ಸಹ ಕಂಡುಕೊಂಡರು. ಚುನಾವಣಾ ರಾಜಕೀಯದಲ್ಲಿ ಸಾಮೂಹಿಕ ಕ್ರಿಯೆಯು ವ್ಯಕ್ತಿಗತವಾಗಿ ಮೇಲುಗೈ ಸಾಧಿಸುತ್ತದೆ.
ದೇಶದ ಬಡವರು ಮತ್ತು ಹಿಂದುಳಿದ ಜಾತಿಗಳ ಕಲ್ಯಾಣಕ್ಕಾಗಿ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳು ಅಗತ್ಯ ಇರುವ ಕಡೆಗಳಲ್ಲಿ ಹಲವಾರು ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಸಂಬಂಧಿತ ಕಾನೂನುಗಳನ್ನು ಜಾರಿಗೆ ತಂದಿವೆ ಮತ್ತು ಮಾರ್ಪಡಿಸಿವೆ. ಈ ಎಲ್ಲಾ ಕಾನೂನುಗಳು ಸಾಮಾಜಿಕ ನ್ಯಾಯವನ್ನು ಗುರಿಯಾಗಿಸಿಕೊಂಡಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ದೇಶದಲ್ಲಿ ಸಾಮಾಜಿಕ ನ್ಯಾಯವನ್ನು ಗುರಿಯಾಗಿಟ್ಟುಕೊಂಡು ನಮ್ಮಲ್ಲಿ ಸಾಕಷ್ಟು ಕಾನೂನುಗಳಿವೆ. ಈಗ ಬೇಕಾಗಿರುವುದು ಈ ಕಾನೂನುಗಳ ಕಟ್ಟುನಿಟ್ಟಿನ, ನಿಷ್ಪಕ್ಷ ಮತ್ತು ಪ್ರಾಮಾಣಿಕತೆಯಿಂದ ಕೂಡಿದ ಅನುಷ್ಠಾನವಷ್ಟೇ.
ಮೀಸಲಾತಿ ಕೇಂದ್ರಿತ ರಾಜಕೀಯ
ಜಾತಿ ರಾಜಕೀಯಕ್ಕೆ ಮೀಸಲಾತಿ ಪರ್ಯಾಯವಾಗಿದೆ ಮತ್ತು ರಾಜಕೀಯ ಪಕ್ಷಗಳು ಅದನ್ನು ಕೌಶಲ್ಯದಿಂದ ಬಳಸುತ್ತಿವೆ. ಸಂವಿಧಾನವು ಜಾತಿ ಆಧಾರಿತ ಸಂಪರ್ಕವನ್ನು ಸ್ಪಷ್ಟವಾಗಿ ನಿಷೇಧಿಸಿರುವುದರಿಂದ ಜಾತಿಗಳ ಮೇಲೆ ಮಾಧ್ಯಮಗಳ ಮೂಲಕ ಪ್ರಭಾವ ಬೀರಲು ಮೀಸಲಾತಿಗಳು ಮಾರ್ಪಟ್ಟಿವೆ. ಸಾಮಾಜಿಕ ನ್ಯಾಯದ ಮೀಸಲಾತಿಯ ವಂಶಾವಳಿಯು ಈ ಸಂಪರ್ಕಕ್ಕೆ ಪ್ರಗತಿಪರ ಹೊದಿಕೆಯನ್ನು ನೀಡುತ್ತದೆ.
ರಾಷ್ಟ್ರೀಯ ರಾಜಕೀಯ ಪಕ್ಷಗಳ ಪ್ರಾಬಲ್ಯದ ಕುಸಿತ, ಪ್ರಾದೇಶಿಕ ಪಕ್ಷಗಳ ಹೊರಹೊಮ್ಮುವಿಕೆ ಮತ್ತು ಸಮ್ಮಿಶ್ರ ಪಕ್ಷಗಳ ರಾಜಕೀಯ ಉದಯದೊಂದಿಗೆ ಮತದಾರರ ಗುಂಪುಗಳ ಮೇಲೆ ಜಾತಿ ಗುರುತುಗಳ ಪ್ರಭಾವ ತೀವ್ರಗೊಂಡಿದೆ. ಮೀಸಲಾತಿ ಕೇಂದ್ರಿತ ರಾಜಕೀಯವು ಮೂರು ಆಯಾಮಗಳನ್ನು ಹೊಂದಿವೆ. ಒಂದು; ಕೆಲವು ಸಾಮಾಜಿಕ ಗುಂಪುಗಳಿಗೆ ಮೀಸಲಾತಿ ಬೇಡಿಕೆ, ಉದಾಹರಣೆ: ದಲಿತ ಕ್ರಿಶ್ಚಿಯನ್ನರು, ಹಿಂದುಳಿದ ಮುಸ್ಲಿಮರು ಇತ್ಯಾದಿ, ಎರಡು; ಮೀಸಲು ವರ್ಗಗಳ ಪಟ್ಟಿಯಲ್ಲಿ ಸೇರಿಸಲು ಕೆಲವು ಜಾತಿಗಳ ಬೇಡಿಕೆಗಳನ್ನು ಬೆಂಬಲಿಸುವುದು ಮತ್ತು ಮೂರನೆಯದು; ಆಂಧ್ರಪ್ರದೇಶದಲ್ಲಿ ಮಾದಿಗರು ಮುಂತಾದ ಕೆಲವು ಉಪಜಾತಿಗಳಿಂದ ಕೋಟಾ ವಿಭಜನೆಗೆ(ಒಳ ಮೀಸಲಾತಿ) ಬೇಡಿಕೆಗಳನ್ನು ಮುಂದಿಡುವುದು. ಇವೆಲ್ಲವೂ ನಿರಂತರವಾಗಿ ಅಂತರ್ಜಾತಿ ಸಂಘರ್ಷಗಳನ್ನು ಸೃಷ್ಟಿಸುತ್ತವೆ, ಇವುಗಳನ್ನು ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತವೆ. ರಾಜಸ್ಥಾನದಲ್ಲಿ ಇತ್ತೀಚೆಗೆ ಭುಗಿಲೆದ್ದ ಗುರ್ಜರ ಜಾತಿಯ ಆಂದೋಲನಗಳಿಂದ ಈ ರಾಜಕೀಯದ ಪ್ರಚಲಿತತೆಯನ್ನು ಕಾಣಬಹುದು. ಇದೇನು ಕೇವಲ ಒಂದೆರಡು ರಾಜ್ಯಗಳಿಗಷ್ಟೇ ಸೀಮಿತವಾದದ್ದಲ್ಲ. ಮರಾಠರನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ನಡೆದ ಬೃಹತ್ ಚಳವಳಿ, ಅದರಿಂದ ಉಂಟಾದ ನ್ಯಾಯಾಲಯದ ಪರಿಣಾಮಗಳು, ಹಾಗೆಯೇ ‘ಕಾಪು’ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಆಂಧ್ರದಲ್ಲಿ ನಡೆದ ಆಂದೋಲನ ಹಾಗೂ ಚಿನ್ನಪ್ಪ ರೆಡ್ಡಿ ವರದಿ ಆಧರಿತ ಕರ್ನಾಟಕದಲ್ಲಿ ಮೀಸಲಾತಿ ಜಾರಿಗೊಳಿಸುವಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳನ್ನು ವರದಿಯಿಂದ ಕೈ ಬಿಟ್ಟಿರುವ ಬಗ್ಗೆ ಎರಡೂ ಸಮುದಾಯಗಳು ಹಾಕಿದ ಭಾರೀ ಒತ್ತಡ, ಅದನ್ನು ಅನುಸರಿಸಿ ಸರಕಾರ ಅವುಗಳನ್ನು ಮೀಸಲಾತಿ ಪಟ್ಟಿಗೆ ಸೇರಿಸಿದುದು... ಹೀಗೆ ಒಂದಲ್ಲಾ ಒಂದು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಅರ್ಹತೆಗೂ ಮೀರಿ ನಿರಂತರ ಒತ್ತಡ ಹೇರಿ ಪಟ್ಟಿಯಲ್ಲಿ ಜಾತಿಗಳು ಸೇರ್ಪಡೆ ಆಗಿರುವ ಉದಾಹರಣೆಗಳುಂಟು.
ಹೀಗೆ, ರಾಜಕೀಯ ಲಾಭದ ಅಸ್ತ್ರವಾಗಿ ಮೀಸಲಾತಿಯನ್ನು ಬಳಸಲಾಗುತ್ತಿದೆ.
ಮೀಸಲಾತಿ ನೀತಿಯ ಜಾರಿಯಲ್ಲಿ ರಾಜಕೀಯ ಪಾತ್ರ
ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ವಿಶೇಷವಾಗಿ ಮೀಸಲಾತಿ ಸಂಬಂಧಿತ ಕಾನೂನುಗಳು ಮತ್ತು ನಿಯಮಗಳನ್ನು ಅನುಷ್ಠಾನಗೊಳಿಸುವ ಮತ್ತು ಮೇಲ್ವಿಚಾರಣೆ ಮಾಡುವಲ್ಲಿ ಜವಾಬ್ದಾರಿಯುತ ಮತ್ತು ವಿವೇಕಶೀಲ ರಾಜಕೀಯ ಪಾರಂಗತರ ಪಾತ್ರ ಬಹಳ ಮುಖ್ಯವಾಗಿದೆ. ರಾಜಕೀಯ ಸನ್ನಿವೇಶ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ವಿಷಯಗಳಲ್ಲಿ ಪ್ರಾಮಾಣಿಕತೆಯ ಕೊರತೆ ಮತ್ತು ಸಂಪೂರ್ಣ ಉದಾಸೀನತೆಯಿಂದ ಕೂಡಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಒಬಿಸಿ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆಯ ವಿಷಯಗಳು ಜಾತಿ ತಾರತಮ್ಯ ಮತ್ತು ದೌರ್ಜನ್ಯಗಳು ಪ್ರಮುಖ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಗಮನಾರ್ಹವಾಗಿ ಕಾಣಿಸಿಕೊಂಡಿಲ್ಲ ಹಾಗೂ ಯಾವುದೇ ಸ್ಪಷ್ಟತೆ, ಗಮನ, ಒತ್ತುಗಳ ಕ್ರಿಯೆಯ ಕೇಂದ್ರೀಕರಣವಿಲ್ಲ.
ಚುನಾವಣಾ ಜಾತಿವಾದ
ಜಾತಿ ಪರಿಗಣನೆಯು ಚುನಾವಣಾ ನಿರ್ಧಾರಗಳಿಗೆ ಮಾತ್ರ ಸೀಮಿತವಾಗಿಲ್ಲ. ರಾಜಕೀಯ ಸಂಸ್ಥೆಗಳು ಸಾಮಾನ್ಯವಾಗಿ ಜಾತಿ ಸಮೀಕರಣಗಳು, ಸಂಯೋಜನೆಗಳು ಮತ್ತು ಪ್ರಾತಿನಿಧ್ಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತವೆ. ರಾಜಕೀಯ ಸಂಘಟನೆಯ ಶ್ರೇಣಿಯಲ್ಲಿ, ಜಾತಿಯು ಮೇಲಿನಿಂದ ಕೆಳಕ್ಕೆ ಪ್ರಾಬಲ್ಯ ಹೊಂದಿದೆ. ಆಶ್ಚರ್ಯಕರವಾಗಿ ಎಲ್ಲಾ ಸಾಧ್ಯತೆಗಳಿಂದಲೂ ಉನ್ನತ ಸ್ಥಾನವು ಯಾವಾಗಲೂ ಅತ್ಯಧಿಕ ಸಂಖ್ಯಾತ್ಮಕ ಬಲವನ್ನು ಹೊಂದಿರುವ ಜಾತಿಗೆ ಹೋಗುವುದು. ಇದು ಇಲ್ಲಿಗೆ ನಿಲ್ಲುವುದಿಲ್ಲ. ಮೊದಲನೆಯದನ್ನು ಅನುಸರಿಸಿ ಮುಂದಿನದನ್ನು, ಮತ್ತೊಂದು ಪ್ರಾಬಲ್ಯದ ಜಾತಿ ಅಥವಾ ಉಪಜಾತಿ ಸಂಖ್ಯೆಗೆ ಅನುಗುಣವಾಗಿ ಪ್ರಾಶಸ್ತ್ಯ ಪಡೆಯುತ್ತದೆ. ಅದೇ ರೀತಿ ಇತರ ಎಲ್ಲಾ ಸ್ಥಾನಗಳನ್ನೂ, ಬಹುಮತ/ಅಲ್ಪಸಂಖ್ಯಾತ, ಪ್ರಾದೇಶಿಕ ಕಾರಣದಿಂದ, ಉತ್ತರ ಅಥವಾ ದಕ್ಷಿಣ ಇತ್ಯಾದಿಗಳ ಆಧಾರದ ಮೇಲೆ ಹಂಚಿಕೊಳ್ಳಬೇಕು. ಇನ್ನೂ ಮುಂದೆ ಹೋಗಿ, ರಾಜಕೀಯ ಪಕ್ಷಗಳು ಈಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ, ಅಲ್ಪಸಂಖ್ಯಾತ, ಭಾಷಾಧಾರಿತ ಮುಂತಾದವುಗಳ ಮೇಲೆ ಪ್ರತ್ಯೇಕ ಕೋಶಗಳನ್ನು ರಚಿಸಿಕೊಂಡಿವೆ. ಕೆಲವು ರಾಜಕೀಯ ಸಂಘಟನೆಗಳು, ನಿರ್ದಿಷ್ಟ ಜಾತಿವಾರು ಕೋಶಗಳ ರಚನೆಯೊಂದಿಗೆ ಇನ್ನೂ ಮುಂದೆ ಹೋಗಿವೆ. ವಿವಿಧ ಸಾಂಸ್ಥಿಕ ಸ್ಥಾನ ಹಂಚಿಕೆಗಾಗಿ ತಿಂಗಳುಗಟ್ಟಲೇ ಬೇಕಾಗುತ್ತದೆ.
ಒಬಿಸಿ ಮೀಸಲಾತಿಯ ರಾಜಕೀಯ
ಭಾರತ ಸರಕಾರ 1953ರಲ್ಲಿ ಪ್ರಥಮ ಹಿಂದುಳಿದ ವರ್ಗಗಳ ಆಯೋಗವನ್ನು ನೇಮಕ ಮಾಡಿತು. ಆಯೋಗವು 1955ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ವರದಿಯಲ್ಲಿ 2,399 ಜಾತಿಗಳನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವು ಎಂದು ಗುರುತಿಸಿತ್ತು. ಸರಕಾರ ಜಾತಿಗಳನ್ನು ಗುರುತಿಸಲು ಆಯೋಗ ವಸ್ತುನಿಷ್ಠ ಮಾನದಂಡಗಳನ್ನು ಅಳವಡಿಸಿಲ್ಲ ಎಂದು ವರದಿಯನ್ನು ತಿರಸ್ಕರಿಸಿತು. ಆದರೆ 1960ಕ್ಕೂ ಮುನ್ನ, ಆಡಳಿತ ಪಕ್ಷವಾದ ಕಾಂಗ್ರೆಸ್ ಪಕ್ಷಕ್ಕೆ ಉತ್ತರ ಮತ್ತು ದಕ್ಷಿಣ ಭಾರತದ ಹಿಂದುಳಿದ ಜಾತಿಗಳ ಪ್ರಭಾವವನ್ನು ಕಡೆಗಣಿಸಲು ಕಷ್ಟವಾಯಿತು. ಹಿಂದಿ ಮಾತನಾಡುವ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಒಬಿಸಿಗಳನ್ನು ಸನ್ನದ್ಧಗೊಳಿಸಿತು. 1967ರಲ್ಲಿ ಸ್ವಾತಂತ್ರ್ಯದ ನಂತರ ದೇಶವನ್ನು ನಿರಂತರವಾಗಿ ಆಳುತ್ತಿದ್ದ ಕಾಂಗ್ರೆಸ್‌ನ ಏಕ ಸ್ವಾಮ್ಯವನ್ನು ಪ್ರಶ್ನಿಸಲಾಯಿತು ಮತ್ತು ಪಕ್ಷವು ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಅಧಿಕಾರವನ್ನು ಕಳೆದುಕೊಂಡಿತು. ನಕ್ಸಲ್ ಚಳವಳಿ ಉತ್ತುಂಗದಲ್ಲಿದ್ದಾಗ ಮತ್ತು ಭೂಕಬಳಿಕೆ ಚಳವಳಿಯು ಶೋಷಣೆಯ ವಿರುದ್ಧ ಹಿಂದುಳಿದ ಜಾತಿಗಳನ್ನು ಸಜ್ಜುಗೊಳಿಸಿದ್ದ ಸಮಯವೂ ಇದಾಗಿತ್ತು.
ಕಾಂಗ್ರೆಸ್ ಪಕ್ಷವು 1969ರಲ್ಲಿ ಇಬ್ಭಾಗವಾಯಿತು. ಇಂದಿರಾ ಗಾಂಧಿ ಕಾಂಗ್ರೆಸ್(ಐ) ಭಾಗದ ಮುಂದಾಳತ್ವ ವಹಿಸಿಕೊಂಡು, ತೀವ್ರಗಾಮಿ ಎನಿಸಿಕೊಂಡರು. 1971ರ ಚುನಾವಣೆಯ ಪ್ರಣಾಳಿಕೆಯಲ್ಲಿ ದುರ್ಬಲ ವರ್ಗಗಳಿಗೆ ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದಾಗಿ ಘೋಷಿಸಿತು. ಅದೇ ಸಮಯದಲ್ಲಿ ಕೆಲವು ರಾಜ್ಯಗಳು ಹಿಂದುಳಿದ ವರ್ಗಗಳ ಆಯೋಗಗಳನ್ನು ರಚಿಸಿದವು. ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿ, ಇಂದಿರಾ ಗಾಂಧಿಯವರು 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡರು. ಹೊಸದಾಗಿ ಜನತಾ ಪಕ್ಷದ ಸರಕಾರ ಅಧಿಕಾರಕ್ಕೆ ಬಂದು, ಮೊರಾರ್ಜಿ ದೇಸಾಯಿ ಅವರು ಪ್ರಧಾನಮಂತ್ರಿಯಾದರು. ಬಿ.ಪಿ. ಮಂಡಲ್ ಅವರ ನೇತೃತ್ವದಲ್ಲಿ 1978ರಲ್ಲಿ ಎರಡನೇ ಹಿಂದುಳಿದ ವರ್ಗಗಳ ಆಯೋಗ ರಚಿಸಲಾಯಿತು. 1980ರಲ್ಲಿ ಬಿ.ಪಿ. ಮಂಡಲ್ ಅವರು ವರದಿಯನ್ನು ಸರಕಾರಕ್ಕೆ ಸಲ್ಲಿಸಿದರೂ, ಅದು ಜಾರಿಗೆ ಬಂದದ್ದು ಮಾತ್ರ 1990ರಲ್ಲಿ ರಾಷ್ಟ್ರೀಯರಂಗದ ಪ್ರಧಾನಿ ವಿ.ಪಿ. ಸಿಂಗ್ ಅವಧಿಯಲ್ಲಿ. ಒಬಿಸಿ ಮೀಸಲಾತಿ, ಒಂದಲ್ಲಾ ಒಂದು ರೀತಿಯಿಂದ ನಿರಂತರವಾಗಿ ವಿವಾದಕ್ಕೆ ಕಾರಣವಾದದ್ದು ದೌರ್ಭಾಗ್ಯ. ಕಡೆಗೆ 1992ರಲ್ಲಿ ಸರ್ವೋಚ್ಚ ನ್ಯಾಯಾಲಯ ಮಂಡಲ್ ವರದಿ ಆಧಾರಿತ ಮೀಸಲಾತಿಯನ್ನು ಎತ್ತಿ ಹಿಡಿಯಿತು. 2006ರಲ್ಲಿ ಉನ್ನತ ಶಿಕ್ಷಣದ ವ್ಯಾಪ್ತಿಗೆ ಸಂಬಂಧಿಸಿದಂತೆ ಸಂವಿಧಾನ ತಿದ್ದುಪಡಿ ಮಾಡಲಾಯಿತು.
ತಮಿಳುನಾಡು ಮೀಸಲಾತಿ ರಾಜಕೀಯ
ನಮ್ಮ ದೇಶದಲ್ಲಿ ಮೀಸಲಾತಿಯ ರಾಜಕೀಯವನ್ನು ಅರ್ಥ ಮಾಡಿಕೊಳ್ಳಲು ತಮಿಳುನಾಡು ಒಂದು ವಿಶಿಷ್ಟ ಉದಾಹರಣೆಯಾಗಿದೆ.
ತಮಿಳುನಾಡು ಪ್ರಸಕ್ತ ಶೇ. 69ರಷ್ಟು ಕೋಟಾವನ್ನು ಅಧಿಕೃತವಾಗಿ ಹೊಂದಿರುವ ಏಕೈಕ ರಾಜ್ಯ ಮತ್ತು ಸರ್ವೋಚ್ಚ ನ್ಯಾಯಾಲಯ ಆಜ್ಞಾಪಿಸಿದ ಮಿತಿಗಿಂತ ಹೆಚ್ಚು ಕೋಟಾವನ್ನು ನಿಗದಿಪಡಿಸಿರುವ ರಾಜ್ಯ ಎಂದು ಪರಿಗಣಿಸಲಾಗಿದೆ. ರಾಜ್ಯ ಮೀಸಲಾತಿ ನೀತಿಯಲ್ಲಿ ಅತ್ಯಧಿಕ ಮಾರ್ಪಾಡುಗಳು /ಪರಿಷ್ಕರಣೆಗಳು ಇತ್ಯಾದಿಗಳೊಂದಿಗೆ ಮೀಸಲಾತಿ ನಿಬಂಧನೆಯಲ್ಲಿ ಇದು ವಿಶಿಷ್ಟ ರಾಜ್ಯವಾಗಿದೆ.
ಕೊನೆಯದಾಗಿ ನಿರ್ಣಯಕ್ಕೆ ಬರುವುದಾದರೆ, ವಿದ್ಯಾವಂತರು ಇದರ ಪರವಾಗಿ ಹೇಳಲು ಆರಂಭಿಸಿದರೆ, ರಾಜಕಾರಣಿಗಳಲ್ಲಿ ಜನಪ್ರಿಯವಾಗಿಲ್ಲ ದಿದ್ದರೂ, ಆದ್ಯತಾ ಉಪಚಾರ(ಮೀಸಲಾತಿ) ಸ್ಥಿರವಾದುದಾಗಿದೆ ಎಂದು ಸಾಬೀತಾಗಿದೆ. ಸಹಜವಾಗಿ ಫಲಾನುಭವಿ ಗುಂಪಿನ ಸದಸ್ಯರು ಸಾಮಾನ್ಯವಾಗಿ ಅನುಕೂಲಕರವಾಗಿಯೇ ಇದ್ದಾರೆ. ವಾಸ್ತವವಾಗಿ, ಮೀಸಲಾತಿ ಪಟ್ಟಿಗಳನ್ನು (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದವರ್ಗ) ಪರಿಶೀಲಿಸಲು ರಚಿಸಲಾದ ಪ್ರತಿಯೊಂದು ಆಯೋಗವೂ ಕೆಲವನ್ನು ಪಟ್ಟಿಯಿಂದ ಹೊರಹಾಕಲು ಶಿಫಾರಸು ಮಾಡಿದ್ದರೂ, ಸಂಸತ್ತು /ವಿಧಾನಸಭೆಗಳು ಅವನ್ನು ರದ್ದುಗೊಳಿಸುವ ಬದಲು ಮತ್ತಷ್ಟನ್ನು ಸೇರಿಸುವುದನ್ನೇ ಪರಿಪಾಠವನ್ನಾಗಿ ಮಾಡಿಕೊಂಡಿವೆ. ಮೀಸಲಾತಿ ವ್ಯವಸ್ಥೆಯು ಕೈ ತಪ್ಪಿ ಹೋಗಬಹುದೆಂಬ ಭಯ ಒಂದು ಐತಿಹಾಸಿಕ ನೆನಪಾಗಿ ಉಳಿದುಕೊಂಡಿದೆ.