ಖಾಸಗಿ ವಲಯದಲ್ಲಿಯೂ ಮೀಸಲಾತಿ ಬೇಕು
ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ವಿಚಾರ ಹೊಸದೇನಲ್ಲ. ವಾಸ್ತವವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವು 1964ರಲ್ಲಿಯೇ ತನ್ನ ವರದಿಯಲ್ಲಿ ಖಾಸಗಿ ವಲಯದಲ್ಲಿಯೂ ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿದೆ. ಮತ್ತೊಮ್ಮೆ 1971ರಲ್ಲಿಯೂ ವರದಿ ಮಾಡಿದೆ.
ಮಂಡಲ್ ಆಯೋಗ ಕೂಡ ಖಾಸಗಿ ವಲಯದಲ್ಲಿ ಮೀಸಲಾತಿಗಾಗಿ ಇದೇ ರೀತಿಯ ಶಿಫಾರಸನ್ನು 1980ರಲ್ಲಿ ತನ್ನ ವರದಿ ಮುಖಾಂತರವೇ ಸರಕಾರಕ್ಕೆ ಸಲ್ಲಿಸಿದೆ.
ಗೌರವಾನ್ವಿತ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಜೂನ್ 7,2004 ರಂದು ಸಂಸತ್ತಿನ ಜಂಟಿ ಅಧಿವೇಶನದಲ್ಲಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ‘‘ಖಾಸಗಿ ವಲಯದಲ್ಲಿ ಮೀಸಲಾತಿ ಸೇರಿದಂತೆ ಸಕಾರಾತ್ಮಕ ಕ್ರಮದ ವಿಷಯದ ಬಗ್ಗೆ ಸರಕಾರಕ್ಕೆ ಸಂವೇದನೆ ಇದೆ’’ ಎಂದು ಹೇಳಿದ್ದಲ್ಲದೆ ‘‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಕಾಂಕ್ಷಿಗಳಿಗೆ ಖಾಸಗಿ ವಲಯದಲ್ಲಿ ಅವಕಾಶ ಕಲ್ಪಿಸುವ ಕುರಿತು ಸರಕಾರವು ರಾಜಕೀಯ ಪಕ್ಷ, ಉದ್ಯಮ ಮತ್ತು ಇತರ ಸಂಸ್ಥೆಗಳೊಂದಿಗೆ ಸಂವಾದ ಪ್ರಾರಂಭಿಸುವುದು’’ ಎಂಬುದಾಗಿ ಹೇಳಿದ್ದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯಗಳ ಕುರಿತು ಇತ್ತೀಚೆಗೆ ಪ್ರಕಟವಾದ ವರದಿಗಳಲ್ಲಿ ಖಾಸಗಿ ವಲಯದಲ್ಲಿ ಮೀಸಲಾತಿಯ ಅಳವಡಿಕೆ ಬಗ್ಗೆ ಬಲವಾಗಿ ಪ್ರತಿಪಾದಿಸಿದೆ.
ಖಾಸಗಿ ವಲಯದಲ್ಲಿ
ಮೀಸಲಾತಿ ಏಕೆ ಬೇಕು?
ವಿಶಾಲವಾದ ಖಾಸಗಿ ವಲಯದಲ್ಲಿ ಮೀಸಲಾತಿಯನ್ನು ಇದುವರೆಗೆ ಎಂದಿಗೂ ಸಮರ್ಥಿಸಲಾಗಿಲ್ಲ. ಆದರೂ ಇದು ಪರಿಶೀಲನಾ ದೃಷ್ಟಿಯಿಂದ ಎರಡು ಮೂರು ದಶಕಗಳ ಹಿಂದೆಯೇ ಚರ್ಚೆಗೆ ಬಂದಿದೆ. ಮೀಸಲಾತಿಗೆ ಸಂಬಂಧಿಸಿದ ಸಾಂವಿಧಾನಿಕ ಅವಕಾಶಗಳು ಸ್ವಾತಂತ್ರ್ಯಗಳಿಸಿದ ಪ್ರಾರಂಭದಿಂದಲೂ ಸರಕಾರಿ ಮತ್ತು ಸಾರ್ವಜನಿಕ ವಲಯದ ಉದ್ಯಮಗಳು ಪ್ರತ್ಯೇಕವಾಗಿ ಒಳಗೊಂಡಿವೆ.
ಸ್ವತಂತ್ರ ಭಾರತವು ಐದು ವರ್ಷಗಳ ಯೋಜನಾ ತಂತ್ರವನ್ನು ಅಳವಡಿಸಿಕೊಳ್ಳುವುದರೊಂದಿಗೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಪ್ರಾರಂಭಿಸಿತು. ನೇರ ಉದ್ಯೋಗದ ಮೂಲಕ ಮಾನವ ಶಕ್ತಿಯ ಬೃಹತ್ ಪ್ರವೇಶಾವಕಾಶ, ಸ್ವಾತಂತ್ರ್ಯಾನಂತರ ಸರಕಾರದ ಆಡಳಿತದಲ್ಲಿ ಮತ್ತು ಹೊಸದಾಗಿ ರೂಪುಗೊಂಡ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ವಿವಿಧ ಹಂತಗಳಲ್ಲಿ ನೆಲೆ ಕಂಡುಕೊಂಡಿದೆ. ಪ್ರಾಥಮಿಕ ಶಿಕ್ಷಣ, ಆರೋಗ್ಯ ಇತ್ಯಾದಿ ಗಳಂತಹ ಆದ್ಯತೆಯ ಕ್ಷೇತ್ರಗಳ ಮೇಲೆ, ರಾಷ್ಟ್ರದ ಒತ್ತಡದ ಕಾರಣ, ಈ ಉದ್ಯೋಗಗಳ ಬೇಡಿಕೆಗೆ ದೊಡ್ಡ ಕೊಡುಗೆ ನೀಡಿದೆ. ಸಾರ್ವಜನಿಕ ವಲಯದ ಮೂಲಕ ಬೃಹತ್ ಹೂಡಿಕೆಯೊಂದಿಗೆ ಸಾರ್ವಜನಿಕ ಉಪಯುಕ್ತತೆ ಮತ್ತು ಸೇವೆಗಳನ್ನು ಉತ್ತೇಜಿಸಲು ಮತ್ತು ನಿರ್ವಹಿಸಲು ಸರಕಾರವು ನೇರ ಕ್ರಮ ತೆಗೆದುಕೊಂಡಿದೆ.
ಸರಕಾರಿ ಮತ್ತು ಸಾರ್ವಜನಿಕ ವಲಯದಲ್ಲಿ ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆ ಇರುವ ಕಾರಣ ಖಾಸಗಿ ವಲಯದಲ್ಲಿ ಉದ್ಯೋಗಕ್ಕಾಗಿ ಮೀಸಲಾತಿಯ ಅವಶ್ಯಕತೆ ಬಗ್ಗೆ ಚರ್ಚೆಗಳು ಹುಟ್ಟಿಕೊಂಡವು. ಬಹಳ ಹಿಂದೆ ಸಹಜವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಕಾರ್ಮಿಕರ ಬೃಹತ್ ಭಾಗವು ಖಾಸಗಿಯಾಗಿ ಕೆಲಸ ಮಾಡುತ್ತಿದ್ದವು. ವಿಶೇಷವಾಗಿ ಸಂಘಟಿತ ನೇಕಾರಿಕೆ ಮತ್ತು ಸಕ್ಕರೆ ಕಾರ್ಖಾನೆ ಮುಂತಾದವುಗಳು ಹೆಚ್ಚು ಉತ್ಪಾದನೆಗಳಿಸಿ ಲಾಭ ಪಡೆಯುತ್ತಿದ್ದುದರಿಂದ ಆಕರ್ಷಕ ಉದ್ಯೋಗಗಳನ್ನು ನೀಡಿ ಮತ್ತು ಉತ್ತಮ ಸಂಭಾವನೆಯನ್ನು ಸ್ವಾಭಾವಿಕವಾಗಿ ನೀಡಲಾಗುತ್ತಿತ್ತು.
70ರ ನಂತರದ ದಿನಗಳಲ್ಲಿ ಆರ್ಥಿಕ ಯೋಜನೆ ಬಹುತೇಕ ನೆಲೆಗೊಳ್ಳುತ್ತಿತ್ತು. ದೇಶದಲ್ಲಿ ಶೈಕ್ಷಣಿಕ ಮಟ್ಟವು ಪರಿಣಾಮಾತ್ಮಕ ಮತ್ತು ಗುಣಾತ್ಮಕವಾಗಿ ಏರಿತು. ಖಾಸಗಿ ವಲಯವೂ ವೃದ್ಧಿಯಾಗತೊಡಗಿತು. ಇದು ಖಾಸಗಿ ವಲಯದ ಏರಿಕೆಯ ಆರಂಭದ ಅವಧಿಯಾಗಿತ್ತು ಕೂಡ. ಭಾರತೀಯ ಜವಳಿ ಉದ್ಯಮವು ಉತ್ತುಂಗ ಸ್ಥಿತಿಯಲ್ಲಿತ್ತು. ದೇಶವು ಸಾಂಪ್ರದಾಯಿಕವಲ್ಲದ ಕ್ಷೇತ್ರಗಳಾದ ಪ್ಯಾರಮಾಸಿಟಿಕಲ್ಸ್, ಇಂಜಿನಿಯರಿಂಗ್, ಆಟೋಮೊಬೈಲ್ಸ್ ಮುಂತಾದವುಗಳಲ್ಲಿ ವಿಶ್ವಾದ್ಯಂತ ಹೆಸರನ್ನು ದಾಖಲಿಸಿದೆ. ಜಾಗತಿಕ ರಫ್ತುಗಳಲ್ಲಿ ನಮ್ಮ ಪಾಲು, ಪರಿಮಾಣ ಮತ್ತು ಅನುಪಾತದ ಪ್ರಕಾರವು ಏರಿತು. ಇದೆಲ್ಲವೂ ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವನ್ನು ಹೆಚ್ಚಿಸಿವೆ. ಆದಾಗ್ಯೂ, ಸರಕಾರಿ ವಲಯವು ಇನ್ನೂ ಪ್ರಮುಖ ಉದ್ಯೋಗದಾತನಾಗಿ ಉಳಿದಿದೆ. 70ರ ದಶಕದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ, ಸಾಮಾನ್ಯ ವಿಮೆ ಇತ್ಯಾದಿಗಳು ಮೀಸಲು ವರ್ಗದ ಜನರಿಗೆ ಸಂಪೂರ್ಣವಾಗಿ ಹೊಸ ಉದ್ಯೋಗ ಮಾರ್ಗವನ್ನು ತೆರೆದವು. ಹೊಸದಾಗಿ ರಾಷ್ಟ್ರೀಕೃತ ಹಣಕಾಸು ಸಂಸ್ಥೆಗಳು ತಮ್ಮ ಕ್ರಿಯಾತ್ಮಕ ಪರಿಧಿಯನ್ನು ಅನೇಕ ವಿಧದಲ್ಲಿ ಮಾತ್ರವಲ್ಲದೆ ತಮ್ಮ ಶಾಖೆಯ ಜಾಲವನ್ನೂ ವಿಸ್ತರಿಸಿದವು. ಇವೆೆಲ್ಲವೂ ಈ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಹೆಚ್ಚು ಉದ್ಯೋಗವನ್ನು ಸೃಷ್ಟಿಸಿತು.
90ರ ದಶಕವು ಪ್ರಮುಖ ಖಾಸಗೀಕರಣದ ಹಂತವಾಗಿತ್ತು. ಈ ಹಂತದಲ್ಲಿ ಖಾಸಗಿ ವಲಯದ ಹೆಚ್ಚು ಸಂಸ್ಥೆಗಳು ಹೊರ ಬರಲಾರಭಿಸಿದವು. ಇದು ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಸಿಂಹ ಪಾಲು ದಾಖಲಾಗಲು ಕಾರಣವಾಯಿತು. ಇದು ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಖಾಸಗಿ ವಲಯದ ವಿಸ್ತರಣೆಗೆ ಮತ್ತಷ್ಟು ಪುಷ್ಟಿ ನೀಡಿತು ಮತ್ತು ಸರಕಾರೇತರ ವಲಯ ಅಂದರೆ ಖಾಸಗಿ ಒಡೆತನದ ಕಾರ್ಪೊರೇಟ್ ಗಳು ಶೀಘ್ರವಾಗಿ ವಿಸ್ತರಿಸುತ್ತಿರುವುದು ಕಂಡುಬಂದಿದೆ. ಸಂಘಟಿತ ಖಾಸಗಿ ವಲಯದಲ್ಲಿ ಉದ್ಯೋಗಿಗಳ ಸಂಖ್ಯೆ ಬಹಳ ಉತ್ಪ್ರೇಕ್ಷಿತವಾಗಿದೆ. ಇದು 1991/92ರಲ್ಲಿ ಹೊಸ ಆರ್ಥಿಕ ಸುಧಾರಣೆಯ ಪ್ರಾರಂಭದ ಆದಿಯಲ್ಲಿ 76.75 ಲಕ್ಷ ಕೊರತೆ 1999/2000ರಷ್ಟರಲ್ಲಿ 86.45 ಲಕ್ಷಗಳಿಗೆ ಏರಿಕೆಯಾಗಿದೆ.
ಮತ್ತೊಂದೆಡೆ ಸರಕಾರಿ/ಸಾರ್ವಜನಿಕ ವಲಯದ ಉದ್ಯೋಗ ಸೃಷ್ಟಿಯ ಸ್ಥಿತಿ ಬಹುತೇಕ ತಟಸ್ಥ ಮಟ್ಟಕ್ಕೆ ಬಂದಿತು. ಹಲವಾರು ಆರ್ಥಿಕ ಚಟುವಟಿಕೆಗಳಲ್ಲಿ ಸರಕಾರದ ಆಯ್ದ ಹಿಂಪಡೆಯುವಿಕೆ, ಹೆಚ್ಚಿದ ಗಣಕೀಕರಣ ಮತ್ತು ಹೂಡಿಕೆ ನೀತಿ ಇತ್ಯಾದಿಗಳಿಂದಾಗಿ, ಈ ಎಲ್ಲಾ ವರ್ಷಗಳಲ್ಲಿ ಪ್ರಮುಖವಾಗಿ ಉದ್ಯೋಗ ಒದಗಿಸುವ ಸರಕಾರವು ತನ್ನ ಚಟುವಟಿಕೆಗಳ ಸಂಪೂರ್ಣ ವ್ಯಾಪ್ತಿಯಿಂದ ಹಿಂದೆ ಸರಿಯಲು ಪ್ರಾರಂಭಿಸಿತು.
ಹೀಗಾಗಿ, ಸಾರ್ವಜನಿಕ ವಲಯವನ್ನು ಕ್ರಮೇಣ ಮುಕ್ತಾಯ ಮಾಡುವುದು ಮತ್ತು ರಾಜ್ಯದ ಆಯ್ದ ವಲಯವನ್ನು ಹಿಂದೆಗೆದುಕೊಳ್ಳುವ ಕಾರ್ಯದೊಂದಿಗೆ ಸರಕಾರ ಮತ್ತು ಸಾರ್ವಜನಿಕ ವಲಯದಲ್ಲಿನ ಉದ್ಯೋಗಗಳು ಕುಗ್ಗುತ್ತಿವೆ. ಮತ್ತು ಇದಕ್ಕೆ ವಿರುದ್ಧವಾಗಿ ಉದ್ಯೋಗ ಮಾರ್ಪಾಡಿನ ಪ್ರಕ್ರಿಯೆಯಲ್ಲಿ ಮಾದರಿ ಬದಲಾವಣೆಯಾಗಿದೆ. ಇದು ಹೊಸ ಉದ್ಯೋಗ ಸಂಭಾವ್ಯ ಮಾರ್ಗಗಳನ್ನು ನೋಡುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಹೊಸ ಆರ್ಥಿಕ ಸುಧಾರಣೆಗಳ ಅಡಿಯಲ್ಲಿ ಖಾಸಗಿ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ.
ಎಲ್ಲಕ್ಕಿಂತ ಮೇಲಾಗಿ ಸಂವಿಧಾನವು, ಸಮಾಜದಿಂದ ಹೊರಗಿಡಲ್ಪಟ್ಟ ಮತ್ತು ತಾರತಮ್ಯಕ್ಕೆ ಒಳಗಾದ ವರ್ಗಕ್ಕೆ ಸಾಕಷ್ಟು ಅವಕಾಶಗಳನ್ನು ಒದಗಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಇದನ್ನು ಶತಮಾನಗಳಿಂದ ನಿರಾಕರಿಸಲಾಗಿತ್ತು. ಸಂವಿಧಾನದಲ್ಲಿ ವಿಧಿ 16(4)ರ ಅಡಿಯಲ್ಲಿ ಒದಗಿಸಲಾದ ಮೀಸಲಾತಿಯನ್ನು ಇಲ್ಲಿಯವರೆಗೆ ಸರಕಾರ ಮತ್ತು ಸಾರ್ವಜನಿಕ ವಲಯಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.
ಸಂವಿಧಾನ ಜಾರಿಗೆ ಬಂದಂದಿನಿಂದಲೂ ಯಾವುದೇ ಪಕ್ಷಗಳ ಸರಕಾರಕ್ಕಾಗಲಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಬೇಕೆಂಬ ಇಚ್ಛೆಯಂತೂ ಇಲ್ಲವೇ ಇಲ್ಲ. ಹಿಂದಿನ ಜನಾಂಗೀಯ ತಾರತಮ್ಯವನ್ನು ಪರಿಗಣನೆಗೆ ತೆಗೆದುಕೊಳ್ಳುವುದಕ್ಕಾಗಿ ವಿಶೇಷ ಉಪಬಂಧಗಳನ್ನು ಅಧಿಕೃತಗೊಳಿಸುವ ಸ್ಪಷ್ಟ ಉಪ ಬಂಧವಿಲ್ಲದಿದ್ದರೂ ಖಾಸಗಿ ವಲಯದಲ್ಲೂ ಕಾರ್ಯಕ್ರಮಗಳಿಗೆ ಹೆಚ್ಚಿನ ಬೆಂಬಲವನ್ನು ಅಮೆರಿಕದ ಸರ್ವೋಚ್ಚ ನ್ಯಾಯಾಲಯವು ನೀಡಿದೆ. ಆದರೆ ಭಾರತದಲ್ಲಿ ಸಂವಿಧಾನದ ವಿಧಿ 15(4)ಮತ್ತು ವಿಧಿ 46ರ ಅಡಿಯಲ್ಲಿನ ಅಂತಹ ಉಪಬಂಧ ಇದ್ದರೂ ಖಾಸಗಿ ವಲಯದಲ್ಲಿ ಸಾಮಾಜಿಕ ನ್ಯಾಯದ ಉಪಬಂಧಗಳ ತತ್ವಗಳನ್ನು ವಿಸ್ತರಿಸುವುದಕ್ಕೆ ಯಾವುದೇ ಪಕ್ಷದ ಸರಕಾರವು ಯಾವುದೇ ರೀತಿಯ ಪ್ರಯತ್ನವನ್ನು ಮಾಡಿಲ್ಲ. ಹಿಂದುಳಿದ ವರ್ಗಗಳ ಪರವಾದ ನ್ಯಾಯಿಕ ಸಿದ್ಧಾಂತದ ಒಂದೇ ಒಂದು ನಿದರ್ಶನವೂ ಇಲ್ಲ.
ರಾಷ್ಟ್ರೀಯ ಸನ್ನಿವೇಶದಲ್ಲಿ ಸಾಮಾಜಿಕ ಸೇವೆಗಳನ್ನು ಮುಖ್ಯವಾಗಿ ಸಾರ್ವಜನಿಕ ವಲಯವು ನಿರ್ವಹಿಸುತ್ತಿದೆ. ಆದರೆ ಲಾಭದಾಯಕ ಉತ್ಪಾದನಾ ವಲಯವು ಸಂಪೂರ್ಣವಾಗಿ ಖಾಸಗಿ ವಲಯದ ಕೈಯಲ್ಲಿದೆ. ಆರ್ಥಿಕ ಸುಧಾರಣೆಗಳಿಗಿಂತ ಮೊದಲು ಸಂಘಟಿತ ಸಾರ್ವಜನಿಕ ವಲಯದಲ್ಲಿನ ಉದ್ಯೋಗ ಸೃಜನೆಯು, ಸಂಘಟಿತ ಖಾಸಗಿ ವಲಯಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿತ್ತು. ಆದರೆ ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸಿದ ನಂತರ, ಅನುಪಾತವು ತೀವ್ರತರವಾಗಿ ತಿರುಗು-ಮುರುಗಾಯಿತು. 1992 ಮತ್ತು 1999ರ ನಡುವೆ ಖಾಸಗಿ ವಲಯದ ಉದ್ಯೋಗ ಸೃಜನೆಯು ಸಾರ್ವಜನಿಕ ವಲಯಕ್ಕಿಂತ ಏಳು ಪಟ್ಟು ಹೆಚ್ಚಾಗಿತ್ತು. ನಿರುದ್ಯೋಗಿಗಳು ಈಗ ಸಾರ್ವಜನಿಕ ವಲಯದ ಕಡೆ ನೋಡುವುದು ನಿಲ್ಲಿಸಬೇಕಾಗಿದೆ. ಭವಿಷ್ಯವು ಖಾಸಗಿ ವಲಯದ್ದಾಗಿದೆ ಮತ್ತು ಸಾಮಾನ್ಯವಾಗಿ ನಿರುದ್ಯೋಗಿಗಳು ಮತ್ತು ನಿರ್ದಿಷ್ಟವಾಗಿ ಹಿಂದುಳಿದ ವರ್ಗಗಳು ಯಾವುದೇ ಸಹಾಯಕ್ಕಾಗಿ ಈ ವಲಯದ ಕಡೆ ಮಾತ್ರ ನೋಡಬಹುದಾಗಿದೆ.(ಪ್ರೊ. ರವಿವರ್ಮ ಕುಮಾರ್ ವರದಿ)
ಸರಕಾರಿ ವಲಯ ಕೂಡ ಸಂದರ್ಭಾನುಸಾರ ನೇಮಕಾತಿ ಮಾಡುತ್ತಿಲ್ಲ. ಹೀಗಾಗಿ ಕೇಂದ್ರ ಸರಕಾರದಲ್ಲಿ ಸುಮಾರು 9 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಇವುಗಳನ್ನು ತುಂಬಿದ್ದರೆ ಅದರ ಅರ್ಧದಷ್ಟಾದರೂ ಪರಿಶಿಷ್ಟರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳಿಗೆ ಅವಕಾಶ ಲಭಿಸುತ್ತಿತ್ತು. ಅದೇ ರೀತಿ ಕರ್ನಾಟಕ ಸರಕಾರದಲ್ಲೂ ಹಲವು ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ಇಲ್ಲಿಯೂ ಯಥಾಸ್ಥಿತಿಯೇ ಮುಂದುವರಿದಿದೆ, ಅಂದರೆ ಸಾರ್ವಜನಿಕ ವಲಯದಲ್ಲೂ ಉದ್ಯೋಗಾಂಕ್ಷಿಗಳು ಉದ್ಯೋಗ ವಂಚಿತರಾಗಿದ್ದಾರೆ, ಅಷ್ಟೇ ಅಲ್ಲ ತಳ ಸಮುದಾಯಗಳಿಗೆ ಘೋರ ವಂಚನೆಯಾಗಿದೆ. ಬದಲಾಗಿ, ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತಿರುವುದೂ ಮತ್ತೊಂದು ವಿಧದ ಮಹಾಮೋಸ. ಸದ್ಯ ಇತ್ತೀಚೆಗೆ ಸರಕಾರ, ಗುತ್ತಿಗೆ ಆಧಾರದ ಮೇಲಿನ ನೇಮಕಕ್ಕೆ ಮೀಸಲಾತಿ ಅನ್ವಯಿಸುವುದನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಿರುವುದೂ ಕಾರ್ಮೋಡದ ತುದಿಯಲ್ಲಿ ಬೆಳ್ಳಿಗೆರೆಯೊಂದನ್ನು ಕಂಡಂತಾಗಿದೆ.
ಕೇಂದ್ರ ಸರಕಾರವಂತೂ ಸಾರ್ವಜನಿಕ ಉದ್ದಿಮೆಗಳನ್ನು ಮನಸೋ ಇಚ್ಛೆ ಖಾಸಗೀಕರಣ ಗೊಳಿಸುತ್ತಿರುವುದನ್ನು ನೋಡಿದರೆ, ಕೇಂದ್ರ ಸರಕಾರವು ಮೀಸಲಾತಿಯನ್ನು ನಿರ್ಮೂಲ ಮಾಡಲು ಸಮರ ಸಾರಿರುವ ಹಾಗೆ ಕಾಣಿಸುತ್ತದೆ. 1991-92ರಿಂದ 2017-18ರ ಆರ್ಥಿಕ ವರ್ಷದಲ್ಲಿ ಭಾರತ ಸರಕಾರವು 3,47,439 ಕೋಟಿ ರೂಪಾಯಿಗಳ ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡಿದೆ. ಹೊಸದಾಗಿ ಕಳೆದ ಹತ್ತು ವರ್ಷಗಳಲ್ಲಿ ಯಾವುದೇ ಸಾರ್ವಜನಿಕ ಸಂಸ್ಥೆಯನ್ನೂ ಹುಟ್ಟು ಹಾಕದೆ 23 ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿದೆ. ಈ ಮಟ್ಟದ ಹೀನಾಯ ಪರಿಸ್ಥಿತಿಯಲ್ಲಿರುವ ಸನ್ನಿವೇಶದಲ್ಲಿ ಸರಕಾರಗಳಿಂದ ಖಾಸಗಿ ವಲಯದಲ್ಲಿ ಮೀಸಲಾತಿಯನ್ನು ನಿರೀಕ್ಷೆ ಮಾಡಲಾದೀತೇ?