ಕೇಂದ್ರೀಯ ಶಿಕ್ಷಣ ಸಂಸ್ಥೆಗಳ ಹುದ್ದೆಗಳಲ್ಲಿ ಖಾಲಿ ಬಿದ್ದಿರುವ ಮೀಸಲು ಹುದ್ದೆಗಳು
ಕೇಂದ್ರ ಸರಕಾರದ ಅಧೀನಕ್ಕೊಳಪಟ್ಟ ಐಐಟಿ ಮತ್ತು ಐಐಎಂ ಸಂಸ್ಥೆಗಳ ಮೀಸಲಾತಿ ಕೋಟಾದ ಅಧ್ಯಾಪಕ ಹುದ್ದೆಗಳು ಭರ್ತಿಯಾಗದೆ ಖಾಲಿ ಬಿದ್ದಿರುವ ಸಂಗತಿಯನ್ನು ‘ವಾರ್ತಾ ಭಾರತಿ’ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟಗೊಂಡ ಡಾ.ಅಮ್ಮಸಂದ್ರ ಸುರೇಶ್ ಅವರ ಐಐಟಿ ಮತ್ತು ಐಐಎಂಗಳಲ್ಲಿ ಸಾಮಾಜಿಕ ನ್ಯಾಯದ ನಿರ್ಲಕ್ಷ್ಯ ಎಂಬ ಲೇಖನ ಓದಿ ಅತೀವ ಖೇದ ಉಂಟಾಯಿತು. ಅಂಕಿ ಅಂಶಗಳ ಪ್ರಕಾರ 1,557 ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ ಹಿಂದುಳಿದ ವರ್ಗದ 415, ಪರಿಶಿಷ್ಟ ಜಾತಿ ವರ್ಗದ 234 ಹಾಗೂ ಪರಿಶಿಷ್ಟ ಪಂಗಡದ 129 ಹುದ್ದೆಗಳು. ಹೀಗೆ ಮೀಸಲಾತಿಗೊಳಪಡುವ ಒಟ್ಟು 778 ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದವು. ಸಂಸ್ಥೆಗಳ ಇಚ್ಛಾಶಕ್ತಿ ಕೊರತೆಯಿಂದ ಹುದ್ದೆಗಳನ್ನು ತುಂಬುತ್ತಿಲ್ಲ ಎಂಬುದು ಲೇಖಕರ ಅನಿಸಿಕೆ. ಸಾಮಾನ್ಯವರ್ಗವೂ ಸೇರಿದಂತೆ ಎಲ್ಲ ಮೀಸಲಾತಿ ಹುದ್ದೆಗಳನ್ನೂ ಭರ್ತಿ ಮಾಡಿದಲ್ಲಿ, ಮೀಸಲಾತಿಯ ನಿಮಿತ್ತ 778 ಹುದ್ದೆಗಳನ್ನೂ ನೇಮಕ ಮಾಡುವ ಅನಿವಾರ್ಯ ಸ್ಥಿತಿ ಸಂಸ್ಥೆಗಳು ಮತ್ತು ಕೇಂದ್ರ ಸರಕಾರ ಎರಡಕ್ಕೂ ಉಂಟಾಗುವುದು. ಆದುದರಿಂದ, ಹೇಗಾದರೂ ಮಾಡಿ ಮೀಸಲಾತಿಗೆ ಒಳಪಡುವ ಹುದ್ದೆಗಳನ್ನು ತುಂಬ ಬಾರದು ಎಂಬ ಹೀನ ಹುನ್ನಾರವೇ ಖಾಲಿ ಬಿದ್ದಿರುವ ಹುದ್ದೆಗಳನ್ನು ತುಂಬದಿರುವ ಒಳಸಂಚು.
ಖಾಲಿ ಬಿದ್ದಿರುವ ಹುದ್ದೆಗಳನ್ನು ತುಂಬುವಲ್ಲಿ ಈ ಸಂಸ್ಥೆಗಳ ಮೇಲೆ ಬಿಗಿ ಹಿಡಿತವನ್ನು ಹೊಂದಿರುವ ಕೇಂದ್ರ ಸರಕಾರದ ದುರುದ್ದೇಶವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದರ ಹಿಂದಿರುವ ಕಾರಣವನ್ನು ತಿಳಿಯಲು ಅತಿ ಪ್ರಯಾಸ ಪಡುವ ಅಗತ್ಯವೂ ಇಲ್ಲ. ಏಕೆಂದರೆ, ಭಾಜಪ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಂದಿನಿಂದಲೂ ಮೀಸಲಾತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಬಗೆಗೆ ಕಿಂಚಿತ್ತೂ ಮಮಕಾರವಿಲ್ಲದ ಮತ್ಸರದಿಂದ ನಖ ಶಿಖಾಂತ ಮೀಸಲಾತಿಯನ್ನು ವಿರೋಧಿಸುವ ಇವರ ಹುನ್ನಾರಗಳು ಎಲ್ಲಾ ವಿಚಾರ ಪ್ರಿಯರಿಗೂ ತಿಳಿದಿರುವ ವಿಷಯವೇ ಆಗಿದೆ.
ಮಂಡಲ್ ವರದಿ ಆಧರಿಸಿ, 1990ರಲ್ಲಿ ಅಂದಿನ ಪ್ರಧಾನ ಮಂತ್ರಿ ವಿ.ಪಿ.ಸಿಂಗ್ ಅವರು ಕೇಂದ್ರ ಸರಕಾರದ ಹುದ್ದೆಗಳು ಮತ್ತು ಶಿಕ್ಷಣದಲ್ಲಿ ಕೆಳಹಂತದ ಶ್ರೇಣಿಗಳಿಗೆ ಮಾತ್ರ ಅನ್ವಯಿಸುವ ಹಾಗೆ ಮೀಸಲಾತಿ ಆದೇಶ ಹೊರಡಿಸಿದರು. ಆದೇಶ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ, ಸರ್ವೋಚ್ಚ ನ್ಯಾಯಾಲಯವು 9 ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠದಲ್ಲಿ ಎತ್ತಿ ಹಿಡಿದ ಪ್ರಯುಕ್ತ, ವಾಸ್ತವವಾಗಿ 1990ರಲ್ಲಿ ಹೊರಡಿಸಿದ ಆದೇಶ 1993ರಲ್ಲಿ ಜಾರಿಗೆ ಬಂತು. ಈ ಅವಧಿಯಲ್ಲಿ ಮನುವಾದಿ ಮೇಲ್ಜಾತಿ-ವರ್ಗದವರು ನಡೆಸಿದ ಉಪಟಳ ಮತ್ತು ಅದರ ಪರಿಣಾಮದಿಂದ 200ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಆತ್ಮಾಹುತಿ ಮತ್ತು ಇನ್ನಿತರ ಕಾರಣಗಳಿಂದ ಪ್ರಾಣ ಕಳೆದುಕೊಂಡ ಪ್ರಯುಕ್ತ ಸಾಮಾಜಿಕ ಕ್ಷೋಭೆ ಉಂಟಾದುದು ಅಲ್ಲಗಳೆಯಲಾಗದ ಸತ್ಯ.
ಆದರೆ ಕೇಂದ್ರ ಸರಕಾರದ ಅಂಕೆಯಲ್ಲಿ ಬರುವ ಮೇಲ್ಮಟ್ಟದ ಶ್ರೇಣಿಯ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಂ ಮತ್ತು ಐಐಸಿಗಳಲ್ಲಿ ಮೀಸಲಾತಿ ಇರಲಿಲ್ಲ. ಅವುಗಳಿಗೆ ಅನ್ವಯಿಸುವಂತೆ ಮೀಸಲಾತಿಯನ್ನು ಜಾರಿಗೆ ಕೊಡಲು, ಸಶಕ್ತ ಕಾಲ ಕೂಡಿ ಬಂದ ನಂತರವೇ ಸಂವಿಧಾನವನ್ನು ತಿದ್ದುಪಡಿ ಮಾಡಬೇಕಾಯಿತು. ಅದುವೇ ಸಂವಿಧಾನದ 93ನೇ ತಿದ್ದುಪಡಿ. (2005ನೇ ಇಸವಿಯ ಅಧಿನಿಯಮದ ಎರಡನೆಯ ಪ್ರಕರಣದ ಮೂಲಕ 20.1.2006ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ).
ಸಂವಿಧಾನ ತಿದ್ದುಪಡಿ ಆದ ನಂತರ ವಿಧಿ 15 (5) ಸೇರ್ಪಡೆಯಾಗಿ ಕಾಯ್ದೆ 2006 ಅನುಷ್ಠಾನಕ್ಕೆ ಬಂತು.
ವಿಧಿ 15ಕ್ಕೆ ಉಪವಿಧಿ 5 ಅನ್ನು ಸೇರಿಸುವುದಕ್ಕೆ ನ್ಯಾಯಾಲಯದ ಸರಣಿ ಘೋಷಣೆಗಳೇ ಕಾರಣ (ಟಿ.ಎಂ.ಎ. ಪೈ ಫೌಂಡೇಶನ್ v/s ಕರ್ನಾಟಕ). ಅದು ಸಂವಿಧಾನದ ವಿಷಯಗಳಿಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಆಡಳಿತ ಮತ್ತು ಪ್ರವೇಶಕ್ಕೆ ಅನ್ವಯಿಸುವ ಮೀಸಲಾತಿ ನೀತಿಯನ್ನು ನಿರ್ಬಂಧಿಸುವ ನ್ಯಾಯಾಲಯದ ಪ್ರತಿಜ್ಞಾ ಘೋಷಣೆಯಾಗಿರುತ್ತದೆ. ಕೊನೆಯದಾಗಿ ಪಿ.ಎ. ಇನಾಮ್‌ದಾರ್ v/s ಮಹಾರಾಷ್ಟ್ರ ಪ್ರಕರಣದಲ್ಲಿ ಆದೇಶಿಸಿರುವಂತೆ ಅನುದಾನ ರಹಿತ ಮತ್ತು ವೃತ್ತಿಪರ ಕಾಲೇಜುಗಳಿಗೆ ರಾಜ್ಯ ತನ್ನ ಮೀಸಲಾತಿ ನೀತಿಯನ್ನು ಅಳವಡಿಸಿಕೊಳ್ಳಲು ಅವುಗಳಿಗೆ ಒತ್ತಾಯ ಪಡಿಸುವ ಹಾಗಿಲ್ಲ.
ಹಿನ್ನೆಲೆ:
ಈ ತಿದ್ದುಪಡಿಯ ಹಿನ್ನೆಲೆಯಲ್ಲಿ ಪ್ರಮುಖವಾಗಿ ನಿಂತವರು ಅಂದಿನ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಿ ಅರ್ಜುನ್ ಸಿಂಗ್. ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಕೊಡುವ ರೀತಿಯಲ್ಲಿ ಶೇ. 27ರಷ್ಟನ್ನು ಹಿಂದುಳಿದ ವರ್ಗಗಳಿಗೂ ಒದಗಿಸಲು ಪ್ರಸ್ತಾವಿಸಿದ್ದರು. ಈ ವರ್ಗಗಳಿಗೆ ಅನ್ವಯಿಸುವಂತೆ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವುದು ಅಕಾಡಮಿಶಿಯನ್ನರು ಮತ್ತು ಕೆಲವು ವಿದ್ಯಾರ್ಥಿಗಳಿಂದ ಖಂಡನೆಗೆ ಗುರಿಯಾಯಿತು. ಅಂದು ಅಕಾಡಮಿಯ ಪ್ರಮುಖ ಸದಸ್ಯರುಗಳಾಗಿದ್ದ ಪ್ರತಾಪ್ ಭಾನು ಮೆಹ್ತಾ ಮತ್ತು ಆಂಡ್ರೆ ಬೆಟ್ಟಿಲ್ಲೆ ಅವರು ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿರುವುದನ್ನು ವಿರೋಧಿಸಿ ರಾಷ್ಟ್ರೀಯ ಜ್ಞಾನ ಆಯೋಗದಂತಹ ಸಂಸ್ಥೆಗಳಿಗೆ ರಾಜೀನಾಮೆ ನೀಡುತ್ತಾರೆ. ಇವರ ವಿರೋಧದ ನಡುವೆಯೂ ರಾಜಕೀಯ ಇಚ್ಛಾಶಕ್ತಿ ಮತ್ತು ಬಲದಿಂದ ಶಾಸನವಾಗಿ ಅದು ರೂಪುಗೊಳ್ಳುತ್ತದೆ.
ಇಷ್ಟಾದರೂ ಸಂವಿಧಾನಕ್ಕೆ ತಂದ ತಿದ್ದುಪಡಿಯ ಸಾಧಕ - ಬಾಧಕಗಳನ್ನು ಚರ್ಚಿಸಲು ಎರಡು ಉಪ ಸಮಿತಿಗಳನ್ನು ಕೇಂದ್ರ ಸರಕಾರ ರಚಿಸುತ್ತದೆ. ಮೊದಲನೆಯದಾಗಿ ಪ್ರಣಬ್ ಮುಖರ್ಜಿಯವರ ಅಧ್ಯಕ್ಷತೆಯಲ್ಲಿ ಒಂದು ಕಾರ್ಯಕಾರಿ ತಂಡವನ್ನು ರಚಿಸುತ್ತದೆ. ‘ಪ್ರಣಬ್ ಸೂತ್ರ’ ಎಂಬುದು ಸಮಿತಿಯಿಂದ ಹೊರ ಬರುವುದು. ಸೂತ್ರದ ಪ್ರಕಾರ ಹಿಂದುಳಿದ ವರ್ಗಗಳಿಗೆ ಶೇ. 27ರಷ್ಟು ಮೀಸಲಾತಿಯನ್ನು ಹಂತ ಹಂತವಾಗಿ ನೀಡುವುದೇ ಆಗಿತ್ತು.
ಆನಂತರ ಮೇ 2006ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣ ಸಮಿತಿಯನ್ನು ನೇಮಿಸಲಾಗುತ್ತದೆ. ಸಮಿತಿಯ ಕಾರ್ಯವೆಂದರೆ ಹಿಂದುಳಿದ ವರ್ಗಗಳ ಶೇ. 27ರಷ್ಟು ಮೀಸಲಾತಿಯನ್ನು ಅನುಷ್ಠಾನ ಮತ್ತು ಸಾಮಾನ್ಯ ವರ್ಗಗಳಿಗೆ ಸಿಗಬೇಕಾದ ಸ್ಥಾನಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಮೌಲ್ಯಮಾಪನವನ್ನು ಮಾಡುವುದಾಗಿತ್ತು. ಇಂತಿರುವಲ್ಲಿ, ಸದಸ್ಯರೊಬ್ಬರಿಂದ ಭಿನ್ನಾಭಿಪ್ರಾಯ ವ್ಯಕ್ತವಾಯಿತು. ಇಷ್ಟಾದರೂ ಮೀಸಲಾತಿ ಜಾರಿಗೆ ಬರುವ ಹಾಗೆ ಶಿಫಾರಸನ್ನು ಒಳಗೊಂಡ ಅಂತಿಮ ವರದಿಯನ್ನು ಸಲ್ಲಿಸಲಾಯಿತು. ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವ ಕುರಿತು ಸಮಿತಿ ನೀಡಿರುವ ವರದಿ ಒಂದು ಸಮಗ್ರ ದಾಖಲೆಯಾಯಿತು.
ಕೇಂದ್ರೀಯ ಶಿಕ್ಷಣ ಸಂಸ್ಥೆಗಳ (ಪ್ರವೇಶಕ್ಕಾಗಿ ಮೀಸಲಾತಿ) ಮಸೂದೆ 2006 ಅನ್ನು ಅಂತಿಮವಾಗಿ ಲೋಕಸಭೆಯಲ್ಲಿ ಮಂಡಿಸಿ ಕೆನೆ ಪದರವನ್ನು ಹೊರಗಿಟ್ಟು ಮಸೂದೆಯನ್ನು ಸ್ವೀಕರಿಸಲಾಯಿತು. ರಾಜ್ಯಸಭೆಯಲ್ಲೂ ಅದು ಅಂಗೀಕಾರವಾಗಿ ಜನವರಿ 3, 2007ರಂದು ರಾಷ್ಟ್ರಪತಿಗಳಿಂದ ಅನುಮೋದನೆ ಪಡೆಯಿತು. ಅದೇ ವಿಧಿ 15 (5). ಇದೊಂದು ಚಿಕ್ಕ ಕಾಯ್ದೆ. ಕೇವಲ ಏಳು ಸೆಕ್ಷನ್‌ಗಳನ್ನು ಮಾತ್ರ ಹೊಂದಿದೆ. 2012ರಲ್ಲಿ ತಿದ್ದುಪಡಿ ಮಾಡಿ ಕೆಲವು ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳಿಗೆ ಹಾಗೂ ಹಿಂದುಳಿದ ವರ್ಗಗಳಿಗೆ ನೇರವಾಗಿ ಮೀಸಲಾತಿ ಒದಗಿಸಲಾಯಿತು. ಅದರನ್ವಯ ಪರಿಶಿಷ್ಟ ಜಾತಿಗೆ ಶೇ. 15 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 7.5 ಹಾಗೂ ಹಿಂದುಳಿದ ವರ್ಗಗಳಿಗೆ ಶೇ. 27ರಷ್ಟನ್ನು ಮೀಸಲಾತಿಗೆ ಒಳಪಡಿಸಲಾಯಿತು.
ಈ ಕಾಯ್ದೆಯೂ ಸಹ ನ್ಯಾಯಾಲಯದಿಂದ ಪ್ರಶ್ನಾತೀತವಾಗಿ ವಿಚಾರಣೆಯಿಂದ ಹೊರಗುಳಿಯಲಿಲ್ಲ. ಮೀಸಲಾತಿಯನ್ನು ವಿರೋಧಿಸುವ, ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಶ್ರೇಷ್ಠತೆಯ ವ್ಯಸನ ಹೊಂದಿರುವ ಕೈಗಳಿಗೇನೂ ಬರವಿಲ್ಲ. ಅಂತೆಯೇ ಸಂವಿಧಾನದ ತಿದ್ದುಪಡಿಯನ್ನು ವಿರೋಧಿಸಿ ಸಾಕಷ್ಟು ಮನವಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾದವು. ಆದರೆ ಇಲ್ಲೊಂದು ವಿಷಯವೆಂದರೆ, ಮನವಿದಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗೊಡವೆಗೆ ಹೋಗಲಿಲ್ಲ. ಅವರು ಪ್ರಶ್ನೆ ಮಾಡಿದ್ದು ಮಾತ್ರ ಹಿಂದುಳಿದ ವರ್ಗದ ಮೀಸಲಾತಿಯನ್ನು. ಪ್ರಾರಂಭದಲ್ಲಿ ದ್ವಿಸದಸ್ಯ ಪೀಠದಲ್ಲಿ ವಿಚಾರಣೆಗೆ ಒಳಪಟ್ಟು, ನಂತರದಲ್ಲಿ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಯಿತು. ಅಂತಿಮ ವಿಚಾರಣೆ ಆಗುವವರೆಗೆ ತಡೆಯಾಜ್ಞೆಯನ್ನೂ ಜಾರಿಗೊಳಿಸಲಾಯಿತು. ಅಂತಿಮವಾಗಿ ಎಪ್ರಿಲ್ 10, 2008ರಂದು ತೀರ್ಪು ಹೊರ ಬಿದ್ದಿತು. ತಿದ್ದುಪಡಿಯನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿಯಿತು.(ಅಶೋಕ್ ಠಾಕೂರ್ v/s ಭಾರತ ಒಕ್ಕೂಟ).
ವಿಧಿಬದ್ಧವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರಕಿದ್ದು, ಅದಕ್ಕೆ ಸರ್ವೋಚ್ಚ ನ್ಯಾಯಾಲಯದಿಂದ ಹಸಿರು ನಿಶಾನೆ ಸಿಕ್ಕಿದ್ದರೂ ಮೀಸಲಾತಿ ವಿರೋಧಿಗಳ ಒಳ ಮನಸ್ಸುಗಳು ಯಾವುದಾವುದೋ ರೀತಿಯಲ್ಲಿ, ಹಿಂದುಳಿದ ವರ್ಗಗಳ ವಿರುದ್ಧ ದುಷ್ಟ ಮನೋಭಾವವನ್ನು ವ್ಯಕ್ತಪಡಿಸುತ್ತಲೇ ಇವೆ. ಮೀಸಲಾತಿಗೆ ಒಳಪಡುವ ಜಾತಿಗಳ ಅಧ್ಯಾಪಕರು ಆಯ್ಕೆಯಾಗಿ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನಗಳನ್ನು ಪಡೆಯುತ್ತಾರೆ ಎಂಬ ಹೀನಾತಿಹೀನ ದೃಷ್ಟಿಯಿಂದ ಮಸಲತ್ತುಗಳನ್ನು ಹೆಣೆಯುತ್ತಲೇ ಬಂದಿದ್ದಾರೆ. ನನ್ನದು ಒಂದು ಕಣ್ಣು ಹೋದರೂ ಹೋಗಲಿ, ಅವರದು ಎರಡೂ ಕಣ್ಣು ಹೋಗಬೇಕು ಎಂಬ ಚಿತ್ತವೃತ್ತಿ ಅವರದು. ಈ ವರ್ಗಗಳಿಗೆ ಸೇರಿರುವ ಸಂಸದರು ಮಾತ್ರ ತಮಗೇನು ತಿಳಿಯದು ಎಂಬ ಮೌನವ್ರತಕ್ಕೆ ಶರಣಾಗಿ ಬಿಟ್ಟಿದ್ದಾರೆ. ಇಂತಹ ಸಂದಿಗ್ಧತೆಯಲ್ಲಿ ಈ ವರ್ಗಗಳನ್ನು ಕಾಪಾಡುವರು ಯಾರು?