ಸಮಸ್ಯೆಗಳಿಗೆ ಸ್ಪಂದಿಸಿ
ನಮ್ಮ ಭಾರತವನ್ನು ಬಲಿಷ್ಠ ರಾಷ್ಟ್ರ ಎನ್ನಲಾಗುತ್ತದೆ. ಏಕೆಂದರೆ ಭಾರತದಲ್ಲಿ ಯುವಜನರ ಸಂಖ್ಯೆ ಬೇರೆ ಎಲ್ಲ ರಾಷ್ಟ್ರಗಳಿಗಿಂತಲೂ ಹೆಚ್ಚಾಗಿವೆ. ನಮ್ಮ ರಾಜ್ಯ ಕರ್ನಾಟಕದಲ್ಲಿ ಜನಸಂಖ್ಯೆಯ ಸುಮಾರು ಶೇ. 29 ಯುವಜನರಿದ್ದಾರೆ. ಆದರೆ ನಮ್ಮ ಸಮಾಜಕ್ಕಾಗಲಿ ಸರಕಾರಕ್ಕಾಗಲಿ ಯುವಜನರ ನೆನಪಾಗುವುದು ಜನವರಿ 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನ ಯುವಜನರ ದಿನವನ್ನಾಗಿ ಆಚರಿಸುವಾಗ ಮಾತ್ರ. ಯುವಜನರ ದಿನದಂದು ವೇದಿಕೆ ಹತ್ತಿ ಯುವಕರನ್ನು ಉದ್ದೇಶಿಸಿ ಮಾತನಾಡುವವರು ಕೂಡ ‘ಕುದಿಯುವ ರಕ್ತ’, ‘ದೇಶದ ಶಕ್ತಿ’, ‘ಕಲ್ಲು ನುಂಗಿದರೂ ಕರಗಿಸುವಂತಹ ಜೀವ’, ‘ಮರ್ಕಟ ಮನಸ್ಸು-ಹಾದಿ ತಪ್ಪುವ ವಯಸ್ಸು’ ಹೀಗೆ ಭಿನ್ನ-ಭಿನ್ನ ಮಾತುಗಳನ್ನು ಹಲವಾರು ವರ್ಷಗಳಿಂದ ನಾವು ಕೇಳುತ್ತಾ ಬಂದಿದ್ದೇವೆ. ಇದರ ಬದಸು ಯುವಜನರು ಅಭಿವೃದ್ಧಿಯನ್ನು ಹೊಂದಲು ಅವಕಾಶವನ್ನು ಕಲ್ಪಿಸಿಕೊಡುವಂತಹ ಪ್ರೋತ್ಸಾಹ ಭರಿತ ಮಾತುಗಳು ನಮಗೆ ಕೇಳಲು ಸಿಗುವುದು ತುಂಬಾ ಕಡಿಮೆ.
ಇಂದು ಯುವಜನರು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳು ಒಬ್ಬರಿಂದ ಇನ್ನೊಬ್ಬರಿಗೆ ಬಹಳ ಭಿನ್ನವಾಗಿದೆ. ಹಳ್ಳಿ ಮತ್ತು ನಗರದ ನಡುವೆ ಭಿನ್ನವಾಗಿದೆ. ಮೇಲ್ವರ್ಗ ಹಾಗೂ ಸಾಮಾಜಿಕವಾಗಿ ಹಿಂದುಳಿದ ಮತ್ತು ಕೆಳಸ್ತರದಲ್ಲಿರುವ ವರ್ಗದ ಯುವಜನರ ನಡುವೆ ಭಿನ್ನವಾಗಿದೆ, ಯುವತಿಯರಿಗೆ ಇನ್ನೂ ಹಲವು ಬೇರೆ ರೀತಿಯಾದಂತಹ ಸಮಸ್ಯೆಗಳಿರುತ್ತವೆ. ಲಿಂಗತ್ವ ಅಲ್ಪಸಂಖ್ಯಾತರಿಗೂ ಭಿನ್ನ ಸಮಸ್ಯೆಗಳಿರುತ್ತವೆ. ಇವತ್ತು ಮಕ್ಕಳ ಹಕ್ಕುಗಳಿವೆ, ಮಹಿಳಾ ಹಕ್ಕುಗಳಿವೆ, ಮಾನವ ಹಕ್ಕುಗಳಿವೆ. ಆದರೆ ಈ ದೇಶದ ಬಲಿಷ್ಠತೆ ಅಥವಾ ಶಕ್ತಿ ಎಂದು ನಾವು ಯಾರನ್ನು ಕರೆಯುತ್ತೇವೋ ಅವರಿಗೆ ಹಕ್ಕುಗಳನ್ನು ಒದಗಿಸಿಲ್ಲ.
ದೇಶದ ಅಭಿವೃದ್ಧಿಗೆ ಯುವ ಜನರ ಆರೋಗ್ಯವೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇವತ್ತು ಯುವಜನರಲ್ಲಿ ಪೌಷ್ಟಿಕತೆಯ ಕೊರತೆ ಇರುತ್ತದೆ. ಯುವಜನರ ಮಾನಸಿಕ ಆರೋಗ್ಯದ ಮೇಲೆ ಬೇರೆ ಬೇರೆ ವಿಷಯಗಳಿಂದ ಬಹಳಷ್ಟು ಪರಿಣಾಮಗಳಿವೆ. ಇದರ ಬಗ್ಗೆ ಮಾತನಾಡುವುದು ತೀರ ಕಡಿಮೆಯಾಗಿದೆ ಏಕೆಂದರೆ ಇದು ಒಂದು ಅಗತ್ಯ ಎಂದು ಇಲ್ಲಿಯವರೆಗೆ ಪರಿಗಣಿಸಲಾಗಿಲ್ಲ.
ದೇಶದಲ್ಲಿ ಯುವಜನತೆಯ ಅಭಿವೃದ್ಧಿಯಾಗದಿದ್ದರೆ ದೇಶ ಅಭಿವೃದ್ಧಿ ಹೊಂದಲು ಹೇಗೆ ಸಾಧ್ಯ? ಈ ದೇಶದ ಅಭಿವೃದ್ಧಿ ಬಗ್ಗೆ ಪ್ರತಿಯೊಬ್ಬ ಯುವಕ-ಯುವತಿಗೂ ತಮ್ಮದೇ ಆದ ಕರ್ತವ್ಯಗಳಿವೆ. ಆ ಕರ್ತವ್ಯಗಳನ್ನು ನಿರ್ವಹಿಸಲು ಯುವಜನತೆಗೆ ಯುವ ಜನರ ಹಕ್ಕುಗಳು ಬೇಕಾಗಿದೆ. ಹಕ್ಕುಗಳಿದ್ದರೆ ಮಾತ್ರ ನಮಗಾಗುವ ಅನ್ಯಾಯಗಳನ್ನು ನಾವು ಪ್ರಶ್ನಿಸಲು ಸಾಧ್ಯ.
ಯುವಜನರ ಹಕ್ಕುಗಳಿಗಾಗಿ ಯುವಜನ ಆಯೋಗ ಸ್ಥಾಪನೆಯಾಗಬೇಕು. ಅಲ್ಲದೆ ಯುವನೀತಿಯೂ ಕೂಡಲೇ ಜಾರಿಯಾಗಬೇಕು. ಯುವಜನರ ಅಭಿವೃದ್ಧಿ ಆದರೆ ಮಾತ್ರ ದೇಶದ ಅಭಿವೃದ್ಧಿಯಾಗಲು ಸಾಧ್ಯ.