ಆಶಾ ಕಾರ್ಯಕರ್ತೆಯರ ಕೂಗಿಗೆ ಸ್ಪಂದಿಸಿ
ಮಾನ್ಯರೇ,
ಕರ್ನಾಟಕದ ಆರೋಗ್ಯ ಇಲಾಖೆ ಅಡಿಯಲ್ಲಿ ಸುಮಾರು 42,000ರಷ್ಟು ಆಶಾ ಕಾರ್ಯಕರ್ತೆಯರು ಕಳೆದ ಹಲವಾರು ವರ್ಷಗಳಿಂದ ನಿರಂತರ ಕಾರ್ಯನಿರ್ವಹಿಸುತ್ತಿದ್ದಾರೆ. ಕನಿಷ್ಠ ವೇತನಕ್ಕಾಗಿ ಪ್ರತೀ ವರ್ಷವೂ ಹೋರಾಟ ಮಾಡುತ್ತಲೇ ಇಲಾಖೆಯ ಯಾವುದೇ ಕೆಲಸಗಳನ್ನು ಮಳೆ, ಚಳಿ ಲೆಕ್ಕಿಸದೆ, ಕಠಿಣ ಪರಿಸ್ಥಿತಿಯಲ್ಲೂ, ತಮಗೆ ರೋಗರುಜಿನ ಹರಡಿದಾಗಲೂ ಪ್ರಾಮಾಣಿಕವಾಗಿ ಅತ್ಯಂತ ಕಾಳಜಿ, ಶ್ರದ್ಧೆಯಿಂದ ಮಾಡುತ್ತಾ ಬಂದಿದ್ದಾರೆ. ಕೋವಿಡ್-19ರ ಸಂದರ್ಭದಲ್ಲಿ ಜಗತ್ತಿನೆಲ್ಲೆಡೆ ವಿಷಮ ಪರಿಸ್ಥಿತಿ ಆವರಿಸಿತ್ತು. ಅಂತಹ ದಿನಗಳಲ್ಲೂ ಜೀವದ ಹಂಗು ತೊರೆದು, ಸರಕಾರದ ಪರವಾಗಿ ಕೆಲಸ ಮಾಡಿದವರು ಆಶಾ ಮಹಾತಾಯಂದಿರು...! ಇವರ ಕೆಲಸ ಪರಿಗಣಿಸಿ ಇವರನ್ನು ‘ಕೋವಿಡ್ ವಾರಿಯರ್’ ಎಂದು ಸರಕಾರವೇ ಘೋಷಿಸಿತು. ಜನತೆ, ಎಲ್ಲ ಮಾಧ್ಯಮಗಳು, ಸಂಘ ಸಂಸ್ಥೆಗಳು ಇವರನ್ನು ಮನದುಂಬಿ ಹರಸಿದವು. ಆದರೆ ಹೊಗಳಿಕೆಯಿಂದಲೇ ಅವರ ಹೊಟ್ಟೆತುಂಬಲು ಸಾಧ್ಯವೇ? ಇಂತಹ ಶ್ರಮಜೀವಿ ಆಶಾ ಕಾರ್ಯಕರ್ತೆಯರು ತಮ್ಮ ಬದುಕಿನ ಬಂಡಿ ಸಾಗಿಸಲು ಕನಿಷ್ಠ ವೇತನಕ್ಕಾಗಿ ಆಗಾಗ ಹೋರಾಡುತ್ತಲೇ ಬರುತ್ತಿದ್ದಾರೆ. ಇಂದಿನ ತುಟ್ಟಿ ದಿನಗಳಲ್ಲಿ ಬದುಕು ಸಾಗಿಸುವಷ್ಟಾದರೂ ನೀಡಬೇಕಾದ ಗೌರವ ಧನದ ಬಗೆಗಿನ ಇವರ ಕೂಗಿಗೆ ಸರಕಾರಗಳು ಸ್ಪಂದಿಸುತ್ತಲೇ ಇಲ್ಲ. ಮಹಿಳೆಯರ ಕಷ್ಟಗಳಿಗೆ ಸ್ಪಂದಿಸಿ, ತಮ್ಮ ಸರಕಾರ ನುಡಿದಂತೆ ನಡೆದಿದೆ ಎಂದು ಹೇಳುವ ಮಾನ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ಆಶಾ ಕಾರ್ಯಕರ್ತೆಯರ ವಿಷಯದಲ್ಲೂ ತಮ್ಮ ಮಾತಿನಂತೆ ನಡೆಯುವರೇ?.