ಹೆಚ್ಚುತ್ತಿರುವ ತಾಪಮಾನ: ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಹಿನ್ನಡೆ
ಮಡಿಕೇರಿ, ಎ.15 : ಕಾವೇರಿ ತವರಲ್ಲಿ ನೀರಿಲ್ಲದೇ ಜನರು, ವನ್ಯಜೀವಿಗಳು ಬರದಿಂದ ಪರದಾಡುವ ಸ್ಥಿತಿ ಉಂಟಾಗಿದೆ. ಬಿಸಿಲಿನ ಬೇಗೆಯಿಂದ ಪ್ರವಾಸಿಗರು ಜಿಲ್ಲೆಯತ್ತ ಬರಲು ಹಿಂದೇಟು ಹಾಕುತ್ತಿದ್ದು ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ.
ಬಿಸಿಲ ಬೇಗೆಯಿಂದ ಕಳೆದ ಒಂದೆರಡು ತಿಂಗಳಿನಿಂದ ಗಣನೀಯ ಪ್ರಮಾಣದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಕೆ ಕಂಡಿರುವುದರಿಂದ ‘ಟೂರಿಸಂ’ ಕ್ಷೇತ್ರ ಹಿನ್ನಡೆ ಅನುಭವಿಸುತ್ತಿದೆ. ಸುಡು ಬಿಸಿಲಿನೊಂದಿಗೆ ಚುನಾವಣೆ, ವಿದ್ಯಾರ್ಥಿಗಳ ಪರೀಕ್ಷೆಯ ಕಾರಣದಿಂದಲೂ ಪ್ರವಾಸಿಗರ ಸಂಖ್ಯೆ ಕುಸಿಯಲು ಕಾರಣವಾಗುತ್ತಿದೆ.
ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಪ್ರಮುಖ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿವೆ. ಮಡಿಕೇರಿಯ ರಾಜಾಸೀಟ್, ಹೊರವಲಯದ ಅಬ್ಬಿ ಜಲಪಾತ, ಮಾಂದಲಪಟ್ಟಿ, ಕೋಟೆ ಅಬ್ಬಿ, ಸೋಮವಾರಪೇಟೆಯ ಮಲ್ಲಳ್ಳಿ, ದಕ್ಷಿಣ ಕೊಡಗಿನ ಇರ್ಪು, ಕುಶಾಲನಗರದ ನಿಸರ್ಗ ಧಾಮ, ದುಬಾರೆ ಆನೆಶಿಬಿರ, ಹಾರಂಗಿ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ ಕಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಿಸಿಲಿನ ಶಾಖ ತಾಳಲಾರದೆ ಟ್ರೆಕ್ಕಿಂಗ್ ಪಾಯಿಂಟ್‌ಗಳತ್ತ ಮುಖಮಾಡಲು ಚಾರಣಿಗರು ಹಿಂದೇಟು ಹಾಕುತ್ತಿದ್ದಾರೆ.
ಕಳೆದ ವರ್ಷ ಕೊಡಗು ಜಿಲ್ಲೆಗೆ ಸುಮಾರು 47 ಲಕ್ಷದಷ್ಟು ಪ್ರವಾಸಿಗರು ಭೇಟಿ ನೀಡಿದ್ದರು. ಆದರೆ ಈ ಬಾರಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದ್ದು, ಶೇಕಡ 25 ರಷ್ಟು ಪ್ರವಾಸಿಗರು ಕಡಿಮೆಯಾಗಿದ್ದಾರೆ.
ಅವಲಂಬಿತರಿಗೆ ಸಂಕಷ್ಟ :
ಕೊಡಗು ಜಿಲ್ಲೆಯಲ್ಲಿ ಸಾವಿರಾರು ಮಂದಿ ಪ್ರವಾಸೋದ್ಯಮವನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಟೂರಿಸಂ ವಿವಿಧ ಸ್ತರದ ಜನರ ಬದುಕಿಗೆ ಪೂರಕವಾಗಿದೆ. ಹೋಂ ಸ್ಟೇ, ಲಾಡ್ಜ್, ರೆಸಾರ್ಟ್, ಹೊಟೇಲ್ ಉದ್ಯಮಿಗಳಿಗೆ ಅಲ್ಲದೆ ಟ್ಯಾಕ್ಸಿ, ಆಟೊ ಚಾಲಕರು, ಬೀದಿಬದಿ ವ್ಯಾಪಾರಿಗಳು, ಸ್ಪೈಸಸ್ ಅಂಗಡಿ, ಕರಕುಶಲ ವಸ್ತು ಮಾರಾಟಗಾರರು, ಸಣ್ಣ ವ್ಯಾಪಾರಿಗಳು ಹೀಗೆ ಅನೇಕರಿಗೆ ಪ್ರವಾಸೋದ್ಯಮ ವರದಾನವಾಗಿದೆ. ಆದರೆ, ಕಳೆದ 1-2 ತಿಂಗಳಿನಿಂದ ಪ್ರವಾಸಿಗರಿಲ್ಲದೆ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಈ ಅವಧಿಯಲ್ಲಿ ಹಿಂದಿನ ವರ್ಷಗಳಲ್ಲಿ ಪ್ರವಾಸಿಗರ ಸಂಖ್ಯೆ ಒಂದು ಮಟ್ಟದಲ್ಲಿ ಹೆಚ್ಚೇ ಇತ್ತು. ಆದರೆ, ಈ ವರ್ಷ ಸುಡು ಬಿಸಿಲಿನಿಂದ ಪ್ರವಾಸಕ್ಕೆ ತೆರಳಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ.
ಪ್ರವಾಸಿಗರ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ. ಮೊದಲು ಮಳೆಗಾಲದಲ್ಲಿಯೂ ‘ಮಾನ್ಸೂನ್ ಟೂರಿಸಂ’ ಪ್ರವಾಸಿಗರ ಆಕರ್ಷಣೆಯಾಗಿತ್ತು. ಮಳೆಯ ನಡುವೆ ವಾತಾವರಣ ಸವಿಯಲೆಂದೇ ಕೆಲವರು ಜಿಲ್ಲೆಗೆ ಆಗಮಿಸುತ್ತಿದ್ದರು. ಆದರೆ, ಕಳೆದ ಕೆಲ ವರ್ಷಗಳಿಂದ ಉಂಟಾದ ಪ್ರಾಕೃತಿಕ ವಿಕೋಪ ‘ಮಾನ್ಸೂನ್ ಟೂರಿಸಂ’ ಮೇಲೆ ಕರಿನೆರಳು ಬೀರಿದೆ. ಇದರಿಂದ ಪ್ರವಾಸಿಗರು ಜಿಲ್ಲೆಗೆ ಬರಲು ಕೊಂಚ ಭಯ ಪಡುತ್ತಾರೆ.