ಏರುತ್ತಿರುವ ತಾಪಮಾನ: ಬಾಡುತ್ತಿರುವ ವೀಳ್ಯದೆಲೆ ಕೃಷಿ
ಹವಾಮಾನ ಬದಲಾವಣೆ ವೀಳ್ಯದೆಲೆಯ ಗುಣಮಟ್ಟದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಭಾರತದಾದ್ಯಂತ ರೈತರು ದೂರುತ್ತಿದ್ದಾರೆ. ದಕ್ಷಿಣ ಏಶ್ಯದಲ್ಲಿ ಲಕ್ಷಾಂತರ ಜನರಿಗೆ ಅತ್ಯಂತ ಪ್ರಿಯವಾಗಿರುವ ವೀಳ್ಯದೆಲೆ ಅನಿಯಮಿತ ಮಳೆ ಮತ್ತು ಅಸಾಧಾರಣ ತಾಪಮಾನ ಏರಿಳಿತಗಳ ನಡುವೆ ಬಾಡುತ್ತಿದೆ.
ದೇಶದಲ್ಲಿ ಅಸ್ಸಾಂ, ಆಂಧ್ರಪ್ರದೇಶ, ಬಿಹಾರ, ಗುಜರಾತ್, ಒಡಿಶಾ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಲ್ಲಿ ಅಂದಾಜು 50,000 ಹೆಕ್ಟೇರ್‌ಗಳಲ್ಲಿ ಹಲವಾರು ಸಣ್ಣ ಹಿಡುವಳಿದಾರರು ವೀಳ್ಯದೆಲೆ ಬೆಳೆಯುತ್ತಾರೆ. ಈ ಪ್ರದೇಶಗಳಲ್ಲಿ ಮಣ್ಣಿನಲ್ಲಿ ಕಂಡುಬರುವ ತೇವಾಂಶವು ವೀಳ್ಯದೆಲೆ ಕೃಷಿಗೆ ಅನುಕೂಲಕರ. ಇತ್ತೀಚಿನ ದಶಕಗಳಲ್ಲಿ ಹೆಚ್ಚು ಗಮನ ಸೆಳೆದ ವ್ಯವಸಾಯ ಇದು.
ಇಂಟರ್‌ನ್ಯಾಷನಲ್ ರಿಸರ್ಚ್ ಜರ್ನಲ್ ಆಫ್ ಎಜುಕೇಶನ್ ಆ್ಯಂಡ್ ಟೆಕ್ನಾಲಜಿ ಪ್ರಕಟಿಸಿದ 2022ರ ಪ್ರಬಂಧದಲ್ಲಿ, ಭಾರತದಲ್ಲಿ ವೀಳ್ಯದೆಲೆಯಿಂದ ವಾರ್ಷಿಕ ವಹಿವಾಟು ಸುಮಾರು 10 ಶತಕೋಟಿ ರೂ. ಎಂದು ಅಂದಾಜಿಸಲಾಗಿದೆ. 2021-22ರ ಆರ್ಥಿಕ ವರ್ಷದಲ್ಲಿ ಭಾರತ 3.1 ಮಿಲಿಯನ್ ಡಾಲರ್ ಮೌಲ್ಯದ ವೀಳ್ಯದೆಲೆಗಳನ್ನು ರಫ್ತು ಮಾಡಿದೆ. ವೀಳ್ಯದೆಲೆಯ ಕೃಷಿ ಮತ್ತು ಮಾರಾಟ ನೇರವಾಗಿ ಅಥವಾ ಪರೋಕ್ಷವಾಗಿ ಭಾರತದಲ್ಲಿ ಸುಮಾರು 20 ದಶಲಕ್ಷ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.
ವೀಳ್ಯದೆಲೆ ಬೆಳೆಗೆ ನೀರು ಮತ್ತು ನಿರ್ದಿಷ್ಟ ಹವಾಮಾನ ಪರಿಸ್ಥಿತಿಗಳ ಅಗತ್ಯವಿರುತ್ತದೆ. ಹೆಚ್ಚಿನ ಗಮನವೂ ಅಗತ್ಯ. ಸೌಮ್ಯವಾದ ತಾಪಮಾನ ಬೇಕಾಗುತ್ತದೆ. ಆದರೆ ಈಗಿನ ತಾಪಮಾನ ಪರಿಸ್ಥಿತಿಯ ಏರಿಳಿತ ವೀಳ್ಯದೆಲೆಗಳ ಇಳುವರಿ ಮತ್ತು ಗುಣಮಟ್ಟಕ್ಕೆ ತೀವ್ರ ಧಕ್ಕೆಯನ್ನುಂಟು ಮಾಡುತ್ತಿದೆ.
ವೀಳ್ಯದೆಲೆ ಮಾರುಕಟ್ಟೆಯು ಅನೇಕ ರೀತಿಯಲ್ಲಿ ಅನಿಶ್ಚಿತತೆಯನ್ನು ಎದುರಿಸುತ್ತಿದೆ. ವೀಳ್ಯದೆಲೆ ಕೃಷಿಯು ಭಾರತದಲ್ಲಿ ಗಮನಾರ್ಹ ಕುಸಿತ ಕಂಡಿರುವುದಕ್ಕೆ ಹವಾಮಾನ ವೈಪರೀತ್ಯಗಳು ಕಾರಣವೆಂದು ಲಕ್ನೊದ ರಾಷ್ಟ್ರೀಯ ಸಸ್ಯಶಾಸ್ತ್ರೀಯ ಸಂಶೋಧನಾ ಸಂಸ್ಥೆಯ ಮಾಜಿ ವಿಜ್ಞಾನಿ ರಾಮಸೇವಕ್ ಚೌರಾಸಿಯಾ ಹೇಳುತ್ತಾರೆ.
2000ದ ಆರಂಭದವರೆಗೆ ಲಕ್ನೊದ ಮಹೋಬಾದಲ್ಲಿ ಸುಮಾರು 550ರಿಂದ 600 ರೈತರು 200 ಎಕರೆ ಭೂಮಿಯಲ್ಲಿ ವೀಳ್ಯದೆಲೆ ಬೆಳೆಯುತ್ತಿದ್ದರು. ಈ ಸಾಗುವಳಿ ಪ್ರದೇಶವು ಈಗ 20 ಎಕರೆಗೆ ಇಳಿದಿದೆ. ಕೇವಲ 150 ರೈತರು ವೀಳ್ಯದೆಲೆಯನ್ನು ಬೆಳೆಸುತ್ತಿದ್ದಾರೆ ಎಂದು ಚೌರಾಸಿಯಾ ಹೇಳುತ್ತಾರೆ. ರೈತರು ತಮ್ಮ ಆದಾಯವನ್ನು ಉಳಿಸಿಕೊಳ್ಳಲು ನಿಧಾನವಾಗಿ ಬೇರೆ ಬೆಳೆಗಳತ್ತ ಮುಖ ಮಾಡಿರುವುದಾಗಿ ಅವರು ಹೇಳುತ್ತಾರೆ.
ದಕ್ಷಿಣ ಏಶ್ಯದಲ್ಲಿ ಊಹಿಸಲು ಸಾಧ್ಯವಾಗದ ರೀತಿಯ ಹವಾಮಾನ ವೈಪರೀತ್ಯದ ಪರಿಣಾಮ ವೀಳ್ಯದೆಲೆ ಕೃಷಿಯ ಮೇಲೂ ಉಂಟಾಗುತ್ತಿದೆ.
122 ವರ್ಷಗಳ ಹಿಂದೆ ದಾಖಲೆಗಳು ಪ್ರಾರಂಭವಾದಾಗಿನಿಂದ ಮಾರ್ಚ್ 2022 ಭಾರತದಲ್ಲಿ ಅತ್ಯಂತ ತಾಪಮಾನದ ಮಾರ್ಚ್ ಆಗಿತ್ತು. ಈ ವರ್ಷ ಹಲವಾರು ಭಾರತೀಯ ನಗರಗಳು 44 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸಿವೆ.
ಪಶ್ಚಿಮ ಬಂಗಾಳ ರಾಜ್ಯದ ಶಾಂತಿನಿಕೇತನ ಪಟ್ಟಣದ ವಿಶ್ವಭಾರತಿ ವಿಶ್ವವಿದ್ಯಾನಿಲಯದ ವಿದ್ವಾಂಸರಾದ ಸಮೀರನ್ ದಾಸ್ ಅವರು ವೀಳ್ಯದೆಲೆ ಕೃಷಿಯ ಮೇಲೆ ಬದಲಾಗುತ್ತಿರುವ ಹವಾಮಾನದ ಪರಿಣಾಮವನ್ನು ಅಧ್ಯಯನ ಮಾಡಿದ್ದಾರೆ. ವೀಳ್ಯದೆಲೆ ಸಸ್ಯದ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ಪ್ರಾಯೋಗಿಕ, ಪ್ರಾದೇಶಿಕ ಮಾಹಿತಿಯ ಕೊರತೆಯನ್ನು ನೀಗಿಸಲು ಅವರು ಸಾಗರ ದ್ವೀಪಗಳಲ್ಲಿನ 16 ಹಳ್ಳಿಗಳಲ್ಲಿ 80 ವೀಳ್ಯದೆಲೆ ರೈತರನ್ನು ಮಾತನಾಡಿಸಿದ್ದಾರೆ. ಕರಾವಳಿಯ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನೆಲೆಗೊಂಡಿರುವ ಈ ದ್ವೀಪಗಳು ಭಾರತದಲ್ಲೇ ಅತಿ ಹೆಚ್ಚು ವೀಳ್ಯದೆಲೆ ಉತ್ಪಾದಿಸುವ ಪ್ರದೇಶಗಳಾಗಿವೆ.
ಎಪ್ರಿಲ್ 2023ರಲ್ಲಿ ಪ್ರಕಟವಾದ ದಾಸ್ ಅವರ ಸಂಶೋಧನೆಯು ಇತ್ತೀಚಿನ ವರ್ಷಗಳಲ್ಲಿ ಕಪ್ಪು ಕಲೆಗಳು ಮತ್ತು ಕ್ಲೋರೋಸಿಸ್ (ಕ್ಲೋರೊಫಿಲ್ ನಷ್ಟ) ಹೆಚ್ಚಿನ ಹಾನಿಗೆ ಕಾರಣವೆಂಬುದನ್ನು ಬಹಿರಂಗಪಡಿಸುತ್ತದೆ. ಹಠಾತ್ ಪ್ರಾದೇಶಿಕ ತಾಪಮಾನ ಏರಿಳಿತಗಳು ಈ ಕ್ಷೀಣಿಸುವಿಕೆಯ ಹಿಂದೆ ಇದೆ ಎಂದು ಅದು ಹೇಳುತ್ತದೆ. ಹವಾಮಾನ ಬದಲಾವಣೆಯು ವಿಭಿನ್ನ ತಾಪಮಾನ ಏರಿಕೆಯ ಮೂಲಕ ಪ್ರಕಟವಾಗುವುದಿಲ್ಲ, ಬದಲಿಗೆ ಇದು ಏರಿಳಿತದ ರೂಪದಲ್ಲಿದೆ, ಇದು ವೀಳ್ಯದೆಲೆಗಳ ಉತ್ಪಾದಕತೆ ಮತ್ತು ಗುಣಮಟ್ಟಕ್ಕೆ ಹೆಚ್ಚು ಹಾನಿ ತಂದಿದೆ ಎಂದು ಅವರು ಉಲ್ಲೇಖಿಸುತ್ತಾರೆ.
ದಾಸ್ ಅಭಿಪ್ರಾಯವನ್ನು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್‌ನ ಪ್ರಧಾನ ವಿಜ್ಞಾನಿ ಕೆ ಹಿಮಬಿಂದು ಒಪ್ಪುತ್ತಾರೆ. ತಾಪ ಮಾನ ಮತ್ತು ತೇವಾಂಶವನ್ನು ನಿಯಂತ್ರಿಸುವುದು ಪರಿಣಾಮಕಾರಿ ವೀಳ್ಯದೆಲೆ ಕೃಷಿಗೆ ಎರಡು ಪ್ರಮುಖ ಅಂಶಗಳಾಗಿವೆ. ತಾಪಮಾನವು ತುಂಬಾ ಹೆಚ್ಚಿದ್ದರೆ ಮತ್ತು ನೀರು ಸೀಮಿತವಾಗಿದ್ದರೆ ಅದು ಖಂಡಿತವಾಗಿಯೂ ವೀಳ್ಯದೆಲೆ ಕೃಷಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳುತ್ತಾರೆ.
ತಾಪಮಾನದ ಏರಿಳಿತಗಳ ಹೊರತಾಗಿ, ಆಗಾಗ ಚಂಡಮಾರುತಗಳು ಕೂಡ ಈ ಬೆಳೆಹಾನಿಗೆ ಕಾರಣ ಎಂಬುದು ದಾಸ್ ಅಭಿಪ್ರಾಯ. ಇದರ ಕಾರಣದಿಂದಲೂ ಅನೇಕ ರೈತರು ವೀಳ್ಯದೆಲೆ ಕೃಷಿಯನ್ನು ಬಿಟ್ಟುಬಿಡುತ್ತಿದ್ದಾರೆ. ಐಲಾ ಚಂಡಮಾರುತ (2009) ಮತ್ತು ಇತ್ತೀಚಿನ ಯಾಸ್ ಚಂಡಮಾರುತ (2021) ಸಮಯದಲ್ಲಿ ಬಹಳಷ್ಟು ಏಕಬೆಳೆ ರೈತರು ತಮ್ಮ ವೀಳ್ಯದೆಲೆ ಬೆಳೆಯನ್ನು ಕಳೆದುಕೊಂಡರು. ಕಡೆಗೆ ಅವರು ಜೀವನೋಪಾಯಕ್ಕೆ ಕೂಲಿ ಕೆಲಸಕ್ಕೆ ಹೋಗಬೇಕಾದ ಸ್ಥಿತಿ ತಲೆದೋರಿತು.
ದಕ್ಷಿಣ 24 ಪರಗಣ ಭಾರತದ ಅತಿ ಹೆಚ್ಚು ಚಂಡಮಾರುತ ಪೀಡಿತ ಜಿಲ್ಲೆಯಾಗಿದೆ. ಅಧ್ಯಯನದ ಪ್ರಕಾರ, ದೇಶದ ಕರಾವಳಿ ರಾಜ್ಯಗಳನ್ನು ಕಂಗೆಡಿಸುವ ಅತಿ ತೀವ್ರತೆಯ ಚಂಡಮಾರುತಗಳ ಸಂಖ್ಯೆ ಹೆಚ್ಚುತ್ತಿದೆ. ಅವುಗಳಲ್ಲಿ ಹೆಚ್ಚಿನವು ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಸಂಕಷ್ಟ ತಂದಿಡುತ್ತವೆ. 2006 ಮತ್ತು 2020ರ ನಡುವೆ 14 ಚಂಡಮಾರುತಗಳು ಪಶ್ಚಿಮ ಬಂಗಾಳವನ್ನು ಹಾದುಹೋದವು. ದಕ್ಷಿಣ 24 ಪರಗಣಗಳು ಮತ್ತು ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರದಂಥ ವೀಳ್ಯದೆಲೆ ಬೆಳೆಯುವ ಜಿಲ್ಲೆಗಳ ಮೇಲೆ ತೀವ್ರ ಪರಿಣಾಮ ಬೀರಿದವು.
ವಿಶಿಷ್ಟ ತಳಿಗಳ ವೀಳ್ಯದೆಲೆ ರೈತರು ಗುಣಮಟ್ಟ ಕುಸಿತದ ಬಗ್ಗೆ ದೂರುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಉತ್ತರ ಪ್ರದೇಶದ ಮಹೋಬಾದಲ್ಲಿ 30 ವರ್ಷಗಳಿಂದ ವೀಳ್ಯದೆಲೆ ಕೃಷಿ ಮಾಡುತ್ತಿರುವವರಿಗೂ ಈಗ ಅದು ಬೇಡವಾಗಿದೆ. ಆ ಪ್ರದೇಶದಲ್ಲಿ ಕೆಲವೇ ರೈತರು ಈಗ ವೀಳ್ಯದೆಲೆ ಕೃಷಿಯನ್ನು ನೆಚ್ಚಿಕೊಂಡಿದ್ದಾರೆ. ಮಹೋಬದ ವೀಳ್ಯದೆಲೆ ಕೃಷಿಯ ಉಚ್ಛ್ರಾಯದ ದಿನಗಳನ್ನು ನೆನಪಿಸಿಕೊಳ್ಳುವವರು, ನಾರಿಲ್ಲದ ಮತ್ತು ಗರಿಗರಿಯಾದ, ರುಚಿಕರ ವೀಳ್ಯದೆಲೆಯ ಬಗ್ಗೆ ಪ್ರಸ್ತಾಪಿಸುತ್ತಾರೆ.
ಭಾರತೀಯ ಹವಾಮಾನ ಇಲಾಖೆ (ಐಎಮ್‌ಡಿ) ವರದಿ ಪ್ರಕಾರ, ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿದೆ. ಆದರೆ ಜನವರಿಯಲ್ಲಿ ಅಲ್ಲಿ ಅಸಾಮಾನ್ಯ ಮಟ್ಟದ ಕಡಿಮೆ ತಾಪಮಾನ ದಾಖಲಾಗಿತ್ತು. ಅದು 2 ಡಿಗ್ರಿ ಸೆಂಟಿಗ್ರೇಡ್‌ಗೆ ಇಳಿದಿತ್ತು. ವೀಳ್ಯದೆಲೆಗಳು 6 ಡಿಗ್ರಿ ಸೆಂಟಿಗ್ರೇಡ್‌ವರೆಗೆ ಮಾತ್ರ ಸಹಿಸಿಕೊಳ್ಳಬಲ್ಲವು. ಪರಿಣಾಮವಾಗಿ ವೀಳ್ಯದೆಲೆ ಬೆಳೆ ದೊಡ್ಡ ಪ್ರಮಾಣದಲ್ಲಿ ನಷ್ಟಕ್ಕೀಡಾಯಿತು. ಅಲ್ಲಿನ ವೀಳ್ಯದೆಲೆ ತಳಿ ಮುಂದಿನ ನಾಲ್ಕೈದು ವರ್ಷಗಳಲ್ಲಿ ಅಳಿದುಹೋಗುವ ಸ್ಥಿತಿಯಿದೆ ಎನ್ನುತ್ತಾರೆ ವಿಜ್ಞಾನಿ ರಾಮಸೇವಕ್ ಚೌರಾಸಿಯಾ.
ವೀಳ್ಯದೆಲೆ ಬೆಳೆಗಳ ಮೇಲೆ ತಾಪಮಾನದ ಏರಿಳಿತದ ಪರಿಣಾಮಗಳನ್ನು ಪ್ರಸ್ತುತ ಹೊಂದಾಣಿಕೆಯ ತಂತ್ರಗಳಿಂದ ಕಡಿಮೆಗೊಳಿಸಲಾಗುತ್ತಿದೆ. ಉದಾಹರಣೆಗೆ ರಸಗೊಬ್ಬರಗಳ ಬಳಕೆ, ಮಣ್ಣು ಚಿಕಿತ್ಸೆ ಮತ್ತು ತಾಪಮಾನವನ್ನು ಉತ್ತಮವಾಗಿ ನಿಯಂತ್ರಿಸಲು ಬೇರೆ ಕೆಲವು ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸಲಾಗುತ್ತದೆ. ಆದರೆ ಇದು ದೀರ್ಘಾವಧಿಯಲ್ಲಿ ಕಾರ್ಯಸಾಧ್ಯವಾದ ಪರಿಹಾರವಲ್ಲ ಎಂಬ ಅಭಿಪ್ರಾಯಗಳೂ ಇವೆ. ಇದೇ ಹವಾಮಾನ ಪರಿಸ್ಥಿತಿಗಳು ಮುಂದುವರಿದರೆ ಮುಂಬರುವ ವರ್ಷಗಳಲ್ಲಿ ವೀಳ್ಯದೆಲೆ ಕೃಷಿಯು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಇನ್ನಷ್ಟು ಎದುರಿಸಬೇಕಾಗುತ್ತದೆ ಎಂಬ ಆತಂಕವಿದೆ.
(ಕೃಪೆ:thethirdpole.net)