ಬಿರುಗಾಳಿ ಎಬ್ಬಿಸಿದ ‘ಸಂಗೀತ ಕಲಾನಿಧಿ’
ಮೈಸೂರಿನಲ್ಲಿ ಅದೊಂದು ಅಪರೂಪದ ಸಮಾವೇಶ. ಹಿಂದೂಸ್ತಾನಿ, ಕರ್ನಾಟಕ ಎನ್ನುವ ಭೇದವನ್ನು ಅಳಿಸಿ ಹಾಕುವಂತೆ ಸಂಗೀತ ಪ್ರೇಮಿಗಳೆಲ್ಲ ಉಮೇದಿನಲ್ಲಿ ನೆರೆದಿದ್ದರು. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ತಮ್ಮ ಪ್ರತಿಭೆ, ಪ್ರಯೋಗಶೀಲತೆ, ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ವಿಚಾರಗಳಿಗಾಗಿ ಹೊಸ ಎತ್ತರದಲ್ಲಿ ನಿಂತಿರುವ ಟಿ.ಎಂ. ಕೃಷ್ಣ ಹಾಡುವವರಿದ್ದರು.
ಟಿ.ಎಂ. ಕೃಷ್ಣ ಹಾಡುವುದು ಮೈಸೂರಿನ ಕಲಾ ರಸಿಕರಿಗೆ ಹೊಸದೇನೂ ಅಲ್ಲ. ಕೃಷ್ಣ ಈ ನಗರದಲ್ಲಿ ಹಲವು ಕಛೇರಿಗಳನ್ನು ನೀಡಿದ್ದಾರೆ. ಪ್ರತೀ ಬಾರಿಯೂ ಜನ ಮುಗಿಬಿದ್ದು ಕಛೇರಿಗೆ ಬರುತ್ತಾರೆ. ಆದರೆ ಈ ಬಾರಿಯ ಕೃಷ್ಣ ಹಾಡುಗಾರಿಕೆಗೆ ಒಂದು ಹೊಸತನವಿತ್ತು; ಪ್ರಯೋಗಶೀಲತೆ ಇತ್ತು. ಅವರು ಹನ್ನೆರಡನೇ ಶತಮಾನದ ಕ್ರಾಂತಿಕಾರರಾದ ವಚನಕಾರರ ಆಯ್ದ ವಚನಗಳನ್ನು ಹಾಡುವವರಿದ್ದರು. ಎಲ್ಲರಿಗೂ ಕುತೂಹಲ. ಕನ್ನಡ ಬಾರದ, ವಚನಗಳನ್ನು ಅರಿಯದ, ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿ ಪಡೆದಿರುವ ಕೃಷ್ಣ ಅದು ಹೇಗೆ ತಮ್ಮ ಕಂಠವನ್ನು ವಚನಗಳ ವಿನ್ಯಾಸಕ್ಕೆ ಸಜ್ಜುಗೊಳಿಸುತ್ತಾರೆ ಎಂಬುದು ಕಿಕ್ಕಿರಿದು ನೆರೆದ ಸಂಗೀತ ರಸಿಕರ ಕುತೂಹಲಕ್ಕೆ ಕಾರಣವಾಗಿತ್ತು.
ವಚನ ಎಂದರೆ ಮಾತು; ವಚನ ಎಂದರೆ ಭಾಷೆ. ಭಾಷೆ ಕೊಡುವುದು ಎಂದರೆ ವಚನ ನೀಡುವುದು. ವಚನ ಕೊಟ್ಟರೆ ಮುಗಿಯಿತು. ಅದು ಸುಳ್ಳಾಗುವುದಿಲ್ಲ. ನಂಬಿಕೆಯನ್ನು ಅದು ತಲೆ ಕೆಳಗೆ ಮಾಡುವುದಿಲ್ಲ. ವಚನಕಾರರು, ‘ವಚನ’ದ ಈ ಎಲ್ಲ ಅರ್ಥ, ಆಯಾಮಗಳನ್ನು ಬಲ್ಲವರಂತೆ ತಮ್ಮ ಮಾತನ್ನು ‘ವಚನ’ ಮಾಡಿದರು. ವಚನಕಾರರ ಮಾತನ್ನು ಜನರ ನಂಬಿಕೆಯನ್ನಾಗಿ ಮಾಡಿದರು; ಕಾವ್ಯದ ಎಲ್ಲ ಕಟ್ಟುಪಾಡುಗಳನ್ನು ಮುರಿದು, ವಚನವನ್ನು ಜನರ ಭಾಷೆಯಾಗಿ, ಮಾತಾಗಿ ಮಾಡಿದರು. ಹಾಗೆಯೇ ಅರ್ಥವಿಲ್ಲದ ಜಾತಿಯ ಗೋಡೆಗಳನ್ನು ಕೆಡವಲು, ಮನುಷ್ಯರನ್ನು ಮನುಷ್ಯರಾಗಿ ನೋಡಲು ವಚನವನ್ನು ಬಳಸಿಕೊಂಡರು. ವಚನ ಸಮಾನತೆಯನ್ನು ತರುವ ಸಾಧನವಾಯಿತು. ವಚನ ಅತ್ಯುನ್ನತ ಮೌಲ್ಯಗಳನ್ನು ಸಾರಲು, ತಾತ್ವಿಕತೆಯ ದರ್ಶನ ಮಾಡಿಸಲು ಹತಾರವಾಯಿತು. ವಚನ ಮೌಢ್ಯಗಳ ವಿರುದ್ಧ ಸಮರ ಸಾರುವ ಹತಾರವಾಯಿತು. ಕಾವ್ಯದ ಗಡಿರೇಖೆಗಳನ್ನು ಅಳಿಸಿದರೂ ವಚನದಲ್ಲಿ ನಾದ ಮಾಧುರ್ಯ, ಲಯ ವಿನ್ಯಾಸ, ಮಾತಿನ ಗತಿಯ ಏರಿಳಿವು ಎಲ್ಲವೂ ತುಂಬಿವೆ. ಜನ ಸಾಮಾನ್ಯರ ಮಟ್ಟಕ್ಕೆ ಇಳಿದು, ಅವರ ಅರಿವಿನ ವಿಸ್ತಾರಕ್ಕೆ ಕೈಚಾಚುವ ಸಾಮರ್ಥ್ಯವೂ ವಚನಕ್ಕಿದೆ.
ಇಂಥ ವಚನಗಳನ್ನು ಹಾಡುವುದು ಸುಲಭದ ಕೆಲಸವಲ್ಲ. ಹಿಂದೂಸ್ತಾನೀ ಗಾಯಕರೇ ಈ ಸಾಹಸಕ್ಕೆ ಕೈ ಹಾಕಿರಲಿಲ್ಲ. ಪಂಡಿತ ಮಲ್ಲಿಕಾರ್ಜುನ ಮನ್ಸೂರ್ ಮತ್ತು ಪಂ.ಬಸವರಾಜ ರಾಜಗುರು ಮೊದಲಾದ ಗಾಯಕರು ವಚನವನ್ನು ಹಾಡಲು ಪ್ರಯತ್ನಿಸಿ ಯಶಸ್ವಿಯಾದರು. ಮುಂದೆ ವಚನ ಹಾಡುವುದು ಒಂದು ಪದ್ಧತಿಯಾಗಿ ಬೆಳೆಯಿತು. ಇವತ್ತು ಹಿಂದೂಸ್ತಾನೀ ಗಾಯಕರು ವಚನಗಳನ್ನು ತಮ್ಮ ಕಛೇರಿಯ ಒಂದು ಭಾಗವಾಗಿ ಮಾಡಿಕೊಂಡಿದ್ದಾರೆ. ಆದರೆ ಕರ್ನಾಟಕ ಸಂಗೀತದಲ್ಲಿ ವಚನವನ್ನು ಮುಟ್ಟುವ ಪ್ರಯತ್ನವೇ ನಡೆದಿರಲಿಲ್ಲ.
ಕೃಷ್ಣ ವಚನಗಳನ್ನು ಹಾಡುತ್ತಾರೆ ಎಂದಾಗ ಸಹಜವಾಗಿಯೇ ಜನರ ಕುತೂಹಲ ಕೆರಳಿತ್ತು. ಕೃಷ್ಣ ಹಾಡಿದರು. ಕನ್ನಡದ ಗೆಳೆಯರು ಆಯ್ದುಕೊಟ್ಟ, ಬರೆದುಕೊಟ್ಟ ವಚನಗಳನ್ನು ಕರ್ನಾಟಕ ಶೈಲಿಗೆ ಅಳವಡಿಸಿ, ಅಭ್ಯಾಸಮಾಡಿಕೊಂಡು ಬಂದಿದ್ದ ಕೃಷ್ಣ ಹಾಡಿದರು. ಅದ್ಭುತವಾಗಿ ಹಾಡಿದರು. ಅವರ ಕಂಠದಿಂದ ವಚನಗಳು ಅಡೆತಡೆ ಇಲ್ಲದೆ ಸರಾಗವಾಗಿ ಹರಿದು ಸಂಗೀತ ರಸಿಕರ ಎದೆಯಾಳಕ್ಕೆ ಇಳಿದವು. ವಚನಗಳ ಸಾಮಾಜಿಕ ಬದ್ಧತೆ, ಸಾಂಸ್ಕೃತಿಕ ವಿಸ್ತಾರ, ಬಂಡಾಯದ ನಿಲುವು, ಸ್ವಯಂ ಪ್ರಕಾಶ ಎಲ್ಲವೂ ಕೃಷ್ಣರ ಹಾಡಿನಲ್ಲಿ ಮುಖ ಪಡೆದವು.
ಕೃಷ್ಣ ಮುಖ್ಯರಾಗುವುದು, ವಿಶಿಷ್ಟ ಪ್ರತಿಭೆಯ ಹಾಡುಗಾರರಾಗುವುದು ಇಂಥ ಕಾರಣಕ್ಕಾಗಿಯೇ. ಇಂಥ ಹಲವು ವಿಭಿನ್ನ ಪ್ರಯೋಗಗಳನ್ನು ಕೃಷ್ಣ ಮಾಡಿದ್ದಾರೆ. ಕೇವಲ ವೇದಿಕೆಯ ಮೇಲಲ್ಲ. ತಮ್ಮ ಬದುಕಿನಲ್ಲಿಯೂ ಕೃಷ್ಣ ಇಂಥ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಸಮಾನತೆ ಎನ್ನುವುದನ್ನು ಒಂದು ಮೌಲ್ಯವಾಗಿ ಒಪ್ಪಿಕೊಂಡು ಅದರಂತೆ ನಡೆಯಲು ನೋಡಿದ್ದಾರೆ. ನಡೆ-ನುಡಿ ಬೇರೆ ಬೇರೆಯಲ್ಲ ಎಂಬುದನ್ನು ಅವರು ಮಾಡಿ ತೋರಿಸಿದ್ದಾರೆ. ಅವಕಾಶ ಸಿಕ್ಕಲ್ಲೆಲ್ಲ ತಮ್ಮ ವಿಚಾರಗಳನ್ನು ಹಂಚಲು ಅವರು ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇದ್ದಾರೆ. ತಮಿಳುನಾಡಿನವರಾದ ಕೃಷ್ಣ ಅವರು ಈ ನೆಲೆಯಿಂದ ನೋಡಿದರೆ ಪೆರಿಯಾರ್‌ಅವರಿಗೆ ಹತ್ತಿರವಿರುವಂತೆ ಕಾಣಿಸುತ್ತದೆ. ನಮ್ಮ ವಚನಕಾರರ ವಿಚಾರಧಾರೆಗೂ ಅವರು ಹತ್ತಿರವೇ. ಮಾನವೀಯ ನೆಲೆಯಲ್ಲಿ ನಿಂತು, ಎಲ್ಲ ಮನುಷ್ಯರನ್ನೂ ಸಮಾನವಾಗಿ ಕಾಣುವುದು, ಜಾತಿಮತಗಳ ಚೌಕಟ್ಟನ್ನು ಮೀರಿ ಮನುಷ್ಯರ ಒಟ್ಟಾರೆ ವಿಕಾಸಕ್ಕೆ ನೆರವಾಗುವುದೇ ಕೃಷ್ಣ ಅವರ ಬದುಕಿನ ಧ್ಯೇಯ. ತಮ್ಮ ಓದು, ಬರಹ, ಚಿಂತನೆ, ಸಂಗೀತ ಎಲ್ಲವನ್ನೂ ಒಂದರೊಳಗೊಂದು ಬೆರಸಿ ಕ್ರಿಯಾಶೀಲರಾಗಿರುವ ಕೃಷ್ಣ ಒಬ್ಬ ಸಾಮಾಜಿಕ ಕಾರ್ಯಕರ್ತರೂ ಹೌದು; ಬಂಡಾಯಗಾರರೂ ಹೌದು; ಹೋರಾಟಗಾರರೂ ಹೌದು.
‘ಚನ್ನೈ ಪೊರೊಂಬೋಕು ಪಾಡಾಲ್’ ಕೃಷ್ಣ ಅವರದು ಇಂಥದೇ ಪ್ರಯೋಗ. ಯಾರಿಗೂ ಸೇರದ, ತೆರಿಗೆ ಕಟ್ಟದ ಭೂಮಿ ಎಲ್ಲರಿಗೂ ಸೇರಿದ್ದು. ಇದನ್ನು ದುರುಪಯೋಗ ಮಾಡಿಕೊಳ್ಳುವುದು, ಇಂಥ ಭೂಮಿಯನ್ನು ಬಳಸಿಕೊಂಡು ಪರಿಸರ ನಾಶದಂಥ ವಿಕೃತಿಗಳಿಗೆ ಮುಂದಾಗುವ ಮೂಲಕ ಮನುಷ್ಯರು ಪ್ರಕೃತಿಗೆ ದ್ರೋಹ ಬಗೆಯುವ ರೀತಿಯನ್ನು, ಇಂಥ ಪರಿಸರದಲ್ಲಿಯೇ ಕುಳಿತು ಹಾಡುವುದರ ಮೂಲಕ ಕೃಷ್ಣ ನೀಡಿರುವ ಸಂದೇಶ ಬಹಳ ದೊಡ್ಡದು. ಪರಿಸರವಾದಿಗಳ ಸಂಘಟನೆಯ ಜೊತೆ ಸೇರಿ ಕೃಷ್ಣ ಅವರು ಮಾಡಿರುವ ಈ ವೀಡಿಯೊ ಯುಟ್ಯೂಬ್‌ನಲ್ಲಿ ಅಸಂಖ್ಯ ಜನರ ಕಣ್ಣನ್ನು ತೆರೆಸಿತು. ಇದು ಕೇವಲ ಕೃಷ್ಣರ ಹಾಡಾಗಿರಲಿಲ್ಲ.
ಕೃಷ್ಣ ಮತ್ತೊಂದು ಅದ್ಭುತ ಪ್ರಯೋಗವನ್ನೂ ಮಾಡಿದರು. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿ ಹೆಚ್ಚಾಗಿರುವ ಜೋಗಪ್ಪಗಳ (ಮಂಗಳಮುಖಿಯರು) ಜೊತೆ ಕಛೇರಿ ನಡೆಸುವ ಈ ಪ್ರಯೋಗ ಅನೇಕ ಕಾರಣಗಳಿಗಾಗಿ ಬಹಳ ಮುಖ್ಯವಾದದ್ದು. ಮಂಗಳಮುಖಿಯರನ್ನು ತಮ್ಮ ಎಡಬಲಕ್ಕೆ ಕೂರಿಸಿಕೊಂಡು ಕರ್ನಾಟಕ ಸಂಗೀತದ ಮೃದಂಗ, ಘಟ, ಪಿಟೀಲುಗಳ ಸಾಥಿದಾರರನ್ನೂ ಜೊತೆಯಲ್ಲೇ ಇಟ್ಟುಕೊಂಡು ಕೃಷ್ಣ ಹಾಡಿದರು. ಜೊತೆಗೆ ಈ ಜೋಗಪ್ಪಗಳು ತಮ್ಮ ವಾದ್ಯಗಳನ್ನು ಬಾರಿಸುತ್ತ ರೇಣುಕಾ ಎಲ್ಲಮ್ಮನ ಕಥೆಯನ್ನು ಹಾಡಿದರು. ಇಲ್ಲಿಯವರೆಗೆ ಜೋಗಪ್ಪಗಳನ್ನು ನಮ್ಮ ಶಿಷ್ಟ ಸಂಪ್ರದಾಯದ ಗಾಯಕರು ದೂರವಿಟ್ಟುಕೊಂಡೇ ಬಂದಿದ್ದಾರೆ. ತಾವು ಹಾಡುವ ಸಂಗೀತವೇ ಶ್ರೇಷ್ಠ, ಜೋಗಪ್ಪಗಳ ಹಾಡು ಸಂಗೀತವೇ ಅಲ್ಲ, ಅದೊಂದು ಜಾನಪದ ಗೀತೆ ಎಂದು ಕಡೆಗಣಿಸಿದ ಸನ್ನಿವೇಶದಲ್ಲಿ ಕೃಷ್ಣ ಜೋಗಪ್ಪಗಳನ್ನು ಗೌರವಿಸಿದರು. ಅವರ ಜೊತೆಯಲ್ಲಿ ಕುಳಿತು ತಾವೂ ಹಾಡಿದರು. ಅವರ ಹಾಡನ್ನು ಕರ್ನಾಟಕ ಸಂಗೀತಕ್ಕೆ ಜೋಡಿಸಿ ಕಸಿ ಮಾಡಿದರು. ಈ ಕಛೇರಿಗೆ ಮುನ್ನ ಕೃಷ್ಣ ಒಂದೆರಡು ಮಾತುಗಳನ್ನೂ ಆಡಿದರು. ಜೋಗಪ್ಪಗಳ ಸಂಗೀತದ ಮುಂದೆ ತನ್ನ ಸಂಗೀತದ ಮಿತಿಗಳನ್ನು ಅರಿಯುವುದೂ ಈ ಕಛೇರಿಯ ಉದ್ದೇಶ ಎಂದರು. ಈ ಕಛೇರಿಯನ್ನು ಗಮನವಿಟ್ಟು ಕೇಳಿದರೆ, ಮಂಗಳಮುಖಿಯರ ಸಂಗೀತ ಎಷ್ಟು ಆಳ, ವಿಸ್ತಾರದ ಸಂಗೀತ ಎಂಬುದು ತಿಳಿಯುತ್ತದೆ; ಅತ್ಯಂತ ಸಹಜವಾಗಿ, ನಿರಾಯಾಸವಾಗಿ ಮಂಗಳಮುಖಿಯರು ಹೇಗೆ ಈ ಸಂಗೀತವನ್ನು ಜನರಿಗೆ ಮುಟ್ಟಿಸುತ್ತಾರೆ ಎಂಬುದು ಮತ್ತು ಅವರ ವಾದ್ಯಗಳಿಗಿರುವ ಶಕ್ತಿ ಎಂಥ ಪ್ರಚಂಡವಾದದ್ದು ಎಂಬುದೂ ತಿಳಿಯುತ್ತದೆ. ಸಮಾಜದ ಮುಖ್ಯವಾಹಿನಿಯಿಂದ ಅನೇಕ ಕಾರಣಗಳಿಗಾಗಿ ದೂರವೇ ಉಳಿದ ಅಂಚಿನ ಸಮುದಾಯಗಳಲ್ಲಿರುವ ಕಲೆ, ಸಂಗೀತ, ಸಾಹಿತ್ಯ ಎಷ್ಟು ಮುಖ್ಯವಾದದ್ದು, ಅದನ್ನು ಮುಖ್ಯವಾಹಿನಿಗೆ ತರಬೇಕಾಗಿರುವುದು ಎಂಥ ಮಹತ್ವದ ಕೆಲಸ ಎಂಬ ಅಂಶಗಳನ್ನೂ ಕೃಷ್ಣ ಈ ಪ್ರಯೋಗದ ಮೂಲಕ ತೋರಿಸಿಕೊಟ್ಟರು.
ಮುಖ್ಯವಾಹಿನಿಯ ಪೊಳ್ಳು ನಂಬಿಕೆಗಳನ್ನು ಹುಸಿ ಮಾಡುವುದು ಕೃಷ್ಣರ ಬದುಕಿನ ಮುಖ್ಯ ನಿಲುವು. ಹಾಗೆಯೇ ಮೇಲ್ವರ್ಗ ಮತ್ತು ಜಾತಿಗಳ ಪೊಳ್ಳು ಅಹಂಕಾರಗಳ ಬೆಲೂನುಗಳನ್ನು ಒಡೆದು ನಿಜದ ದರ್ಶನ ಮಾಡಿಸುವುದು, ಆ ಮೂಲಕ ಅಂಚಿನಲ್ಲಿ ಬದುಕುತ್ತಿರುವ ಸಮುದಾಯಗಳ ಶಕ್ತಿ ಸಾಮರ್ಥ್ಯಗಳನ್ನು ತೋರಿಸಿಕೊಡುವುದು. ಇಂಥ ಅನೇಕ ಪ್ರಯೋಗಗಳನ್ನು ಮಾಡುತ್ತ, ಮೂಲಭೂತವಾದಕ್ಕೆ ಎದುರಾಗಿ ನಿಂತು ಹೋರಾಡುತ್ತ, ನಿರಂತರ ವಾಗ್ವಾದಗಳಿಗೆ ಸಿಕ್ಕು ತಮ್ಮನ್ನು ತಾವು ಪ್ರತಿಪಾದಿಸಿಕೊಳ್ಳುತ್ತ ಸಾಗುವ ಕೃಷ್ಣ ಹಲವರ ಜೊತೆಯಲ್ಲಿ, ಹಲವು ಸಂಘಟನೆಗಳ ಜೊತೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಾಗಿಯೂ ಅವರು ಹೊಸ ಹೊಸ ಶೋಧಗಳಿಗೆ ತಮ್ಮನ್ನು ತೊಡಗಿಸಿಕೊಂಡವರು. ಅವರ ಗಂಟಲ ತ್ರಾಣ, ಬಾಗು-ಬಳುಕುಗಳ ಮನೋಹರ ಶೈಲಿ, ಹೊಸದಕ್ಕೆ ಹಾತೊರೆಯುವ ಪ್ರಯೋಗಶೀಲತೆ ಕೃಷ್ಣ ಅವರ ಸಂಗೀತಕ್ಕೆ ಹೆಚ್ಚಿನ ಮೆರುಗು, ಆಳ-ಅಗಲಗಳನ್ನು ಕೊಟ್ಟು ಅವರ ಪ್ರಾಮುಖ್ಯತೆಯನ್ನು ಹೆಚ್ಚಿಸಿವೆ. ಹಾಗೆಯೇ ಅವರ ವಿರೋಧಿಗಳ ಬಾಯಿ ಮುಚ್ಚಿಸಿವೆ.
ಮದ್ರಾಸ್ ಮ್ಯೂಸಿಕ್ ಅಕಾಡಮಿ ಮೇಲ್ಜಾತಿಯ ಹಿಡಿತದಲ್ಲೇ ಇದೆ, ಅಲ್ಲಿ ಕೆಳಜಾತಿ ಮತ್ತು ಅಂಚಿನ ಸಮುದಾಯಗಳಿಗೆ ಸಿಕ್ಕಬೇಕಾದಷ್ಟು ಅವಕಾಶಗಳು ಸಿಗುತ್ತಿಲ್ಲ ಎಂಬ ದಿಟ್ಟ ಟೀಕೆಯನ್ನು ಮಾಡಿ, ಅಕಾಡಮಿಯಿಂದ ಕಳೆದ ಕೆಲವಾರು ವರ್ಷಗಳಿಂದ ದೂರವೇ ಉಳಿದಿದ್ದ ಕೃಷ್ಣ ಅವರನ್ನು ಅಕಾಡಮಿ ಗೌರವಿಸಿ, ತಾನು ನೀಡುವ ಪ್ರತಿಷ್ಠಿತ-ಸಂಗೀತ ಕಲಾನಿಧಿ-ಪ್ರಶಸ್ತಿಯನ್ನು ಈ ಬಾರಿ ಘೋಷಿಸಿದೆ. ಈ ಪ್ರಶಸ್ತಿಯನ್ನು ಪ್ರದಾನ ಮಾಡಬೇಕಾಗಿರುವುದು ಡಿಸೆಂಬರ್ ತಿಂಗಳಲ್ಲಿ ನಡೆಯುವ ಸಂಗೀತ ಹಬ್ಬದಲ್ಲಿ.
ಈ ಘೋಷಣೆ, ತಮಿಳುನಾಡಿನಲ್ಲಿ, ಕರ್ನಾಟಕ ಶೈಲಿಯ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಕೃಷ್ಣ ಅವರಿಗೆ ಈ ಪ್ರಶಸ್ತಿಯನ್ನು ಕೊಡುವುದಾದರೆ ತಾವು ಅಕಾಡಮಿಯ ಸಂಗೀತೋತ್ಸವದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಕೆಲವರು, ತಮಗೆ ನೀಡಿರುವ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಅಕಾಡಮಿಗೆ ಹಿಂದಿರುಗಿಸುವುದಾಗಿ ಕೆಲವರು ಹೇಳಿ ತಮ್ಮ ಅಸಹನೆಯನ್ನು, ವಿರೋಧವನ್ನು ತೋರಿಸಿದ್ದಾರೆ. ಅಕಾಡಮಿ ಇದಕ್ಕೆಲ್ಲ ಸೊಪ್ಪು ಹಾಕದೆ, ಕೃಷ್ಣ ಅವರ ಸಂಗೀತವನ್ನು, ಅದರ ಸಾಮರ್ಥ್ಯವನ್ನು, ಕೃಷ್ಣರ ಒಟ್ಟು ಕೊಡುಗೆಯನ್ನು ಮೆಚ್ಚಿ, ಕೃಷ್ಣ ಅವರ ಪರವಾಗಿ ನಿಂತಿದೆ.
ಕೃಷ್ಣ ಅವರ ಕಾರ್ಯ, ರಾಷ್ಟ್ರದ ಸಮಗ್ರತೆಗೆ ಪೂರಕವಾಗಿದೆ ಎಂದು 2017ರಲ್ಲಿ ಇಂದಿರಾ ಗಾಂಧಿ ಪ್ರಶಸ್ತಿ, ಸಾಮಾನ್ಯ ಜನತೆಯ ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಬೆಸೆಯುವ ಕೆಲಸವನ್ನು ಮಾಡುತ್ತಿದ್ದಾರೆಂಬ ಕಾರಣಕ್ಕೆ ಕೃಷ್ಣ ಅವರಿಗೆ ಪ್ರೊ. ಅರವಿಂದಾಕ್ಷನ್ ಸ್ಮಾರಕ ಪ್ರಶಸ್ತಿ (2017), ಜಾತಿ, ವರ್ಗ, ಸಾಮಾಜಿಕ ಕಂದಕಗಳ ವಿರುದ್ಧ ಹೋರಾಡುತ್ತಿರುವ ಕೃಷ್ಣ ಕೇವಲ ಸಂಗೀತಗಾರರಲ್ಲ, ಸಾಮಾಜಿಕ ಹೋರಾಟಗಾರರೂ ಹೌದು. ಅವರ ಚಿಂತನೆ, ಕ್ರಿಯಾಶೀಲತೆ ಇತ್ಯಾದಿ ಎಲ್ಲ ಕೆಲಸಗಳೂ ಅವರ ಒಟ್ಟು ಉದ್ದೇಶಕ್ಕೆ ಪೂರಕವಾಗಿವೆ ಎಂದು ಮ್ಯಾಗ್ಸೆಸೆ ಪ್ರಶಸ್ತಿ (2016)- ಹೀಗೆ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಕೃಷ್ಣ ಅವರಿಗೆ ಈಗ ಸಂಗೀತ ಕಲಾನಿಧಿ ಪ್ರಶಸ್ತಿ ದೊರೆತಿರುವುದು ಸಂಗೀತ ಕ್ಷೇತ್ರದ ಸಂಭ್ರಮವನ್ನು ಹೆಚ್ಚಿಸಬೇಕಾಗಿತ್ತು. ಆದರೆ ಇದು ಕೆಲವರ ಕೋಪ ತಾಪಗಳಿಗೆ ಕಾರಣವಾಗಿದೆ.
ಕೃಷ್ಣ ಅವರ ಲೇಖನಗಳು, ಪುಸ್ತಕಗಳು, ರಾಜಕೀಯ ಮತ್ತು ಸಾಂಸ್ಕೃತಿಕ ನಿಲುವುಗಳು, ಅವರ ಕೆಚ್ಚು ಮತ್ತು ಹೋರಾಟದ ಮನೋಭಾವ ಹಲವು ಮಡಿವಂತರನ್ನು ಕೆಣಕಿವೆ ಎಂಬುದನ್ನು ಈಗ ಎದ್ದಿರುವ ಬಿರುಗಾಳಿ ಹೊರಕ್ಕೆ ಹಾಕಿದೆ.
ಕೃಷ್ಣ ಮೇಲ್ಜಾತಿ ಮತ್ತು ಮೇಲ್‌ವರ್ಗಗಳ ಕಟು ಟೀಕಾಕಾರರು. ತಮಿಳು ಬ್ರಾಹ್ಮಣ ಸಮುದಾಯ ತಮ್ಮ ಪಕ್ಕವಾದ್ಯ ಕಲಾವಿದರನ್ನು ಸಮಾನವಾಗಿ ಕಾಣುತ್ತಿಲ್ಲ, ಅವರ ಕಲೆ ಮಹತ್ವದ ಕಲೆಯಾದರೂ ಅದನ್ನು ಗೌರವಿಸುತ್ತಿಲ್ಲ ಎಂದು ಹೇಳುವ ಕೃಷ್ಣ 2018ರಲ್ಲಿ ರಚಿಸಿದ ಕೃತಿ-‘ಸೆಬಾಸ್ಟಿಯನ್‌ಆ್ಯಂಡ್ ಸನ್ಸ್’. ಮೃದಂಗವನ್ನು ತಯಾರಿಸುವ ದಲಿತ ಕ್ರಿಶ್ಚಿಯನ್‌ಸಮುದಾಯಗಳು ಇತಿಹಾಸದ ಉದ್ದಕ್ಕೂ ಮೇಲ್ಜಾತಿಗಳ ದಬ್ಬಾಳಿಕೆಯಿಂದ ಅನುಭವಿಸಿದ ನೋವು, ಅಪಮಾನ, ಸಂಕಟ ಎಷ್ಟು ಘೋರವಾದದ್ದು ಎಂಬುದನ್ನು ಈ ಕೃತಿ ದಾಖಲಿಸಿದೆ. ಜೊತೆಗೆ ಮೇಲ್ಜಾತಿಗೆ ಸೇರಿದ ಕಲಾವಿದರು ಹೇಗೆ ಈ ಮೃದಂಗ ತಯಾರಕರನ್ನು ದೂರವಿಟ್ಟುಕೊಂಡೇ ಬಂದಿದ್ದಾರೆ ಎಂಬುದನ್ನೂ ಈ ಕೃತಿ ಕಟ್ಟಿಕೊಡುತ್ತದೆ. ಮೃದಂಗ ಚೆನ್ನಾಗಿ ನುಡಿದರೆ ಅದು ಮೃದಂಗ ಕಲಾವಿದರಿಗೆ ಹೆಸರು ತರುತ್ತದೆ. ಆದರೆ ಮೃದಂಗ ತಯಾರಕರನ್ನು ಈ ಕಲಾವಿದರು ಹೇಗೆ ಉಪೇಕ್ಷಿಸುತ್ತಾರೆ, ಜಾತಿ ಇಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಿಖರವಾಗಿ, ದಿಟ್ಟವಾಗಿ ಹೇಳಿದ ಕೃಷ್ಣ ಸಹಜವಾಗಿಯೇ ಮೇಲ್ಜಾತಿ ಕಲಾವಿದರ ಕೋಪಕ್ಕೆ ಗುರಿಯಾಗಿದ್ದಾರೆ. ಆದರೆ ಅಂಚಿನಲ್ಲಿರುವ ಸಮುದಾಯಗಳು ಕೃಷ್ಣರನ್ನು ಆರಾಧಿಸುತ್ತಿವೆ.
ಕೃಷ್ಣ ಜಾಗತಿಕ ಮಟ್ಟದಲ್ಲಿ ಹೆಸರು, ಪ್ರಶಸ್ತಿ ಪಡೆದವರು. ಅನೇಕ ಜಾಗತಿಕ ವೇದಿಕೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ತಮ್ಮ ನಿಲುವನ್ನು ಪ್ರಕಟಿಸಿ ಮಾತನಾಡಿದವರು. ಪತ್ರಿಕೆಗಳಲ್ಲಿ ಅಂಕಣ ಬರೆದವರು. ಸಂಗೀತ ಕಛೇರಿಗಳಲ್ಲೂ ಮಾತನಾಡಿದವರು. ರಾಜಕೀಯವಾಗಿಯೂ ಅವರ ನಿಲುವು ಸ್ಪಷ್ಟ. ಜನರನ್ನು ಧರ್ಮದ ಆಧಾರದ ಒಡೆಯುತ್ತಾರೆ, ಹುಸಿ ಹಿಂದುತ್ವವನ್ನು ವೈಭವೀಕರಿಸುತ್ತಾರೆ ಎಂಬ ಕಾರಣ ನೀಡಿ ಕೃಷ್ಣ ಬಿಜೆಪಿಯನ್ನು ವಿರೋಧಿಸುತ್ತಾರೆ. ಪೆರಿಯಾರ್ ಅವರನ್ನು ಮೆಚ್ಚುತ್ತಾರೆ. ಮೌಢ್ಯ, ಮೂಲಭೂತವಾದ ಎಲ್ಲಿಯೇ ಇರಲಿ ಅದಕ್ಕೆ ನನ್ನ ವಿರೋಧವಿದೆ ಎನ್ನುವ ಕೃಷ್ಣ ಇಸ್ರೇಲ್ ಮತ್ತು ಫೆಲೆಸ್ತೀನಿಯನ್‌ಸಂಘರ್ಷದಲ್ಲಿ ಫೆಲೆಸ್ತೀನ್‌ನ ಪರವಾಗಿ ನಿಲ್ಲುತ್ತಾರೆ. ಅವರದು ಬಹುದೊಡ್ಡ ಹೋರಾಟ; ನಿಖರ ನಿಲುವು.. ಅವರ ಸಮಗ್ರ ಬದುಕಿನಲ್ಲಿ ಸಂಗೀತವೂ ಸೇರಿದೆ.