ಸಾವರ್ಕರ್ ‘ವೀರತ್ವ’ ಭಂಗ ಮಾಡಿದ ಎ.ಜಿ. ನೂರಾನಿ
ಯಾವುದಾದರೂ ಒಂದು ಲೇಖನ ದಶಕಗಳ ಕಾಲ ‘ಬಿಲ್ಡ್ ಅಪ್’ ಮಾಡಿದ್ದ ವ್ಯಕ್ತಿತ್ವವನ್ನು ಕೆಡವಿದ ಉದಾಹರಣೆಗಳು ಕಡಿಮೆ. ‘ಫ್ರಂಟ್ ಲೈನ್’ ಪಾಕ್ಷಿಕದ 2005ರ ಎಪ್ರಿಲ್ 8 ಸಂಚಿಕೆಯಲ್ಲಿ ಪ್ರಕಟವಾದ ‘ಸಾವರ್ಕರ್ ಅವರ ತಪ್ಪೊಪ್ಪಿಗೆ ಪತ್ರ’ ಎಂಬ ಎ.ಜಿ.ನೂರಾನಿ ಅವರ ಲೇಖನ, ಸಾವರ್ಕರ್ ‘ವೀರತ್ವ’ ವನ್ನು ಭಂಗ ಮಾಡಿದ್ದು ಅಂತಹದೊಂದು ಉದಾಹರಣೆ. ಈ ಲೇಖನದಲ್ಲಿ ತಮ್ಮ ವಿಶಿಷ್ಟ ಶೈಲಿಯಲ್ಲಿ ಎಲ್ಲ ಸಾಕ್ಷ್ಯಾಧಾರಗಳೊಂದಿಗೆ ಅತ್ಯಂತ ತರ್ಕಬದ್ಧವಾಗಿ, ಸ್ವಾತಂತ್ರ್ಯ ಚಳವಳಿಯ ಸ್ವಲ್ಪ ಹತ್ತಿರವಾದರೂ ಸುಳಿದಿದ್ದ ತನ್ನ ಏಕಮಾತ್ರ ನಾಯಕ ಸಾವರ್ಕರ್ ಅವರ ‘ವೀರತ್ವ’ ಮತ್ತು ‘ಸ್ವಾತಂತ್ಯ ಚಳವಳಿಗೆ ಕನೆಕ್ಷನ್’ಗಳ ಸಂಘ ಪರಿವಾರದ ‘ಬಿಲ್ಡ್ ಅಪ್’ನ ಹಿಂದಿನ ಪೊಳ್ಳುತನವನ್ನೂ ನೂರಾನಿ ಬಯಲು ಮಾಡಿದರು. ಅವರು ಸಾವರ್ಕರ್ ಮತ್ತು ಸಂಘ ಪರಿವಾರದ ಅಪಾಯದ ಕುರಿತ (RSS: A Menace to India, The RSS and the BJP: A Division of Labour, Savarkar and Hindutva: The Godse Connection) ಹಲವು ಅತ್ಯಂತ ಮಹತ್ವದ ವಿದ್ವತ್ ಪೂರ್ಣ ಪುಸ್ತಕಗಳನ್ನು ಬರೆದರು.
ಪ್ರಸಿದ್ಧ ಸುಪ್ರೀಂ ಕೋರ್ಟ್ ನ್ಯಾಯವಾದಿ, ಸಂವಿಧಾನದ ಪರಿಣತ, ಮಹತ್ವದ ವಿದ್ವತ್ಪೂರ್ಣ ರಾಜಕೀಯ ಪುಸ್ತಕಗಳ ಲೇಖಕ, ರಾಜಕೀಯ ವೀಕ್ಷಕ-ವಿಶ್ಲೇಷಕ, ಅಂಕಣಕಾರ ಅಬ್ದುಲ್ ಗಫೂರ್ ಮಜೀದ್ ನೂರಾನಿ (1930-2024) ಮೊನ್ನೆ (ಆಗಸ್ಟ್ 29) ನಿಧನರಾಗಿದ್ದಾರೆ, ಅವರು ಮುಂಬೈಯ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದರು. ಹಲವು ಪ್ರಸಿದ್ಧ ಮೊಕದ್ದಮೆಗಳಲ್ಲಿ, ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳ ಪರ ವಾದ ಮಂಡಿಸಿದ್ದರು. ಆಗಿನ ಕೇಂದ್ರ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ಶೇಕ್ ಅಬ್ದುಲ್ಲಾ ಮತ್ತು ಕರುಣಾನಿಧಿ ಅವರ ಪರವಾಗಿ ವಕಾಲತ್ತು ವಹಿಸಿದ್ದರು. ಅವರು ಪ್ರಸಿದ್ಧ ನ್ಯಾಯವಾದಿಯಾಗಿದ್ದರೂ ಯಾವುದೇ ‘ಅಧಿಕೃತ’ ಹುದ್ದೆ’ (ಸಾಲಿಸಿಟರ್ ಜನರಲ್ ಇತ್ಯಾದಿ) ಹೊಂದಿರದಿದ್ದರೂ ಸಂವಿಧಾನದ ವ್ಯಾಖ್ಯಾನದ ಯಾವುದೇ ವಿವಾದದ ಕುರಿತು ಅವರ ಅಭಿಪ್ರಾಯಕ್ಕೆ ವ್ಯಾಪಕ ಮನ್ನಣೆಯಿತ್ತು.
ಆದರೆ ಅವರು ಪ್ರಸಿದ್ಧರಾಗಿದ್ದು ಅವರ ಹಲವು ಆಳವಾದ ರಾಜಕೀಯ ವಿಶ್ಲೇಷಣೆಗಳ ಅತ್ಯಂತ ಗಂಭೀರ ವಿದ್ವತ್ ಪೂರ್ಣ ಪುಸ್ತಕಗಳ ಲೇಖಕರಾಗಿ. ‘ಬಾಬರಿ ಮಸೀದಿ ಪ್ರಶ್ನೆ’ ಯನ್ನು 1528-2003ರ ಅವಧಿಯ ದಾಖಲೆಗಳ ಮೂಲಕ ವಿಶ್ಲೇಷಿಸುವ ಅವರ ಎರಡು ಸಂಪುಟಗಳ ಪುಸ್ತಕ ಪ್ರಸಿದ್ಧವಾಗಿದೆ. ‘ಕಾಶ್ಮೀರ ವಿವಾದ’ದ ಬಗೆಗಿನ ಎರಡು ಸಂಫುಟಗಳು ಮತ್ತು ‘ಕಲಂ 370 ಅವರ ಪುಸ್ತಕ ಈ ವಿಷಯದ ಮೇಲಿನ ಮೇರುಕೃತಿಗಳು. ‘ಭಾರತದ ಸಾಂವಿಧಾನಿಕ ಪ್ರಶ್ನೆಗಳು’, ‘ನಾಗರಿಕ ಹಕ್ಕುಗಳು, ನ್ಯಾಯವಾದಿಗಳು ಮತ್ತು ಪ್ರಭುತ್ವ’ ಈ ವಿಷಯಗಳ ಕುರಿತ ಮಹತ್ವದ ಪುಸ್ತಕಗಳು. ಅವರ ಬರವಣಿಗೆ ವಿದ್ವತ್ತು ಭಾರತಕ್ಕೆ ಸೀಮಿತವಾಗಿರಲಿಲ್ಲ. ‘ಇಸ್ಲಾಂ, ದಕ್ಷಿಣ ಏಶ್ಯ ಮತ್ತು ಶೀತಸಮರ’, ‘ಇಂಡಿಯಾ-ಚೀನಾ ಗಡಿ ವಿವಾದ 1846-1947, ಇಸ್ಲಾಂ ಮತ್ತು ಜಿಹಾದ್’ -ಅಂತರ್‌ರಾಷ್ಟ್ರೀಯ ವಿಷಯಗಳ ಕುರಿತು ಅವರ ಪುಸ್ತಕಗಳು. ‘ಭಗತ್ ಸಿಂಗ್ ವಿಚಾರಣೆಯ ರಾಜಕಾರಣ’ ಮತ್ತು ‘ಭಾರತದ ರಾಜಕೀಯ ಮೊಕದ್ದಮೆಗಳು 1775-1947’ ಬ್ರಿಟಿಷ್ ವಸಾಹತುಶಾಹಿಯ ರಾಜಕಾರಣ ಬಯಲು ಮಾಡುವ ಅತ್ಯಂತ ಅಪರೂಪದ ಪುಸ್ತಕಗಳು. ಬದ್ರುದ್ದೀನ್ ತಯ್ಯಬ್ಜಿ, ಡಾ. ಝಾಕೀರ್ ಹುಸೇನ್‌ರಂತಹ ನಾಯಕರ ಜೀವನ ಚರಿತ್ರೆಯನ್ನು ಸಹ ಬರೆದಿದ್ದರು.
‘‘ಮುಂಬೈ ಹೈ ಕೋರ್ಟ್‌ನ ಬಾರ್ ಕೌನ್ಸಿಲ್ ಲೈಬ್ರರಿಯಲ್ಲಿ ತಮ್ಮ ಇಳಿವಯಸ್ಸಿನಲ್ಲಿ ಸಹ ಪುಸ್ತಕಗಳಲ್ಲಿ ಮುಳುಗಿದ್ದರೂ ಯಾರೂ ಕೇಳದ, ಉತ್ತರಿಸದ ಪ್ರಶ್ನೆಗಳನ್ನು ಕೇಳಿ ಉತ್ತರಿಸಿದ ನೂರಾನಿಯ ಜತೆ ಚರ್ಚಿಸುವುದು ಮರೆಯಲಾಗದ ಅನುಭವ’’ ಎನ್ನುವ ಪ್ರಸಿದ್ಧ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ‘‘ಜಮ್ಮು-ಕಾಶ್ಮೀರ, ಕೋಮುವಾದದ ಪ್ರಶ್ನೆಗಳನ್ನು ಎದುರಿಸುವಲ್ಲಿ ಭಾರತೀಯ ಪ್ರಭುತ್ವದ ನಡೆಗಳು ಮತ್ತು ವೈಫಲ್ಯಗಳ ಅವರ ವಿಶ್ಲೇಷಣೆಗಳು, ಆರೆಸ್ಸೆಸ್ ಮತ್ತು ಹಿಂದುತ್ವ ಸಿದ್ಧಾಂತಿ ಸಾವರ್ಕರ್ ಕುರಿತ ಅವರ ವಿಶ್ಲೇಷಣೆಗಳು, ಪ್ರೊಟೊ-ಫ್ಯಾಶಿಸ್ಟ್ ಶಕ್ತಿಯೊಂದು ಪ್ರಜಾಪ್ರಭುತ್ವವನ್ನು ಇಂಚು ಇಂಚಾಗಿ ವಶಪಡಿಸಿಕೊಂಡ ಪ್ರಯತ್ನಗಳು ಮತ್ತು ಅದರ ಪರಿಣಾಮಗಳನ್ನು ಜಾಗರೂಕತೆಯಿಂದ ಚಾರಿತ್ರೀಕರಿಸುವ ಉತ್ಕೃಷ್ಟ ಉದಾಹರಣೆ’’ ಎನ್ನುತ್ತಾ ಅವರ ಪುಸ್ತಕಗಳ ಮಹತ್ವವನ್ನು ಸಾರುತ್ತಾರೆ.
ಪ್ರಸಿದ್ಧ ಇತಿಹಾಸಕಾರರಾದ ರೊಮಿಲಾ ಥಾಪರ್ ಅವರನ್ನು ‘ಉತ್ಕೃಷ್ಟ ಸಾರ್ವಜನಿಕ ಬುದ್ಧಿಜೀವಿ’ ಎಂದು ಕರೆಯುತ್ತಾರೆ. ‘‘ಅವರು ತಮ್ಮ 80-90ರ ವಯಸ್ಸಿನಲ್ಲಿ ಸಹ ಒಂದಾದ ನಂತರ ಇನ್ನೊಂದು ಮಹತ್ವದ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದು ನೋಡಿದರೆ ನಾನು ದಂಗಾಗುತ್ತೇನೆ. ಅವರು ಎಲ್ಲ ವಿಷಯಗಳ ಬಗ್ಗೆ ಬರೆದ ಪುಸ್ತಕಗಳು ವಿಸ್ತಾರವಾದ ಚಾರಿತ್ರಿಕ ಅವಧಿಯನ್ನು ವಿಶ್ಲೇಷಿಸುತ್ತವೆ ಮತ್ತು ಅಪ್ರತಿಮ ಸಂಕೀರ್ಣತೆ, ದೋಷರಹಿತ ಸಾಕ್ಷ್ಯಾಧಾರಗಳನ್ನು ಹೊಂದಿರುತ್ತವೆ, ತಾರ್ಕಿಕವಾಗಿ ಪ್ರಶ್ನಾತೀತವಾದವು ಆಗಿರುತ್ತವೆ. ಅವರು ಎಂದೂ ತಾನು ತಟಸ್ಥ, ನಿಷ್ಪಕ್ಷದ ಸೋಗು ಹಾಕುವುದಿಲ್ಲ. ಅವರು ಯಾವಾಗಲೂ ಸಾಂವಿಧಾನಿಕ ಮೌಲ್ಯಗಳಾದ ಜಾತ್ಯತೀತತೆ, ಪ್ರಜಾಪ್ರಭುತ್ವ, ನಾಗರಿಕ ಸ್ವಾತಂತ್ರ್ಯಗಳ ಪಕ್ಷಪಾತಿಯಾಗಿರುತ್ತಾರೆ’’ ಎನ್ನುತ್ತಾರೆ ಪ್ರಸಿದ್ಧ ಪತ್ರಕರ್ತಪಿ. ಸಾಯಿನಾಥ್.
ನೂರಾನಿ ಅವರು ‘‘ಸಂಶೋಧನೆಯಲ್ಲಿ ಅವಿರತವಾಗಿ ಸಮಗ್ರವಾಗಿರುವುದು, ಸತ್ಯದ ಅನ್ವೇಷಣೆಯಲ್ಲಿ ಭಯರಹಿತ ವಾಗಿರುವುದು ಮತ್ತು ಅಂತಿಮ ತೀರ್ಮಾನಗಳಲ್ಲಿ ಮೊನಚಾಗಿರುವುದು ಅಂದರೆ ಏನು ಎಂಬುದನ್ನು ತಮ್ಮ ಬರಹಗಳ ಮೂಲಕ ನಮಗೆ ಕಲಿಸುತ್ತಾರೆ’’ ಎಂದಿದ್ದಾರೆ ಪ್ರಸಿದ್ಧ ಲೇಖಕಿ ಗೀತಾ ಹರಿಹರನ್. ‘‘ನೂರಾನಿ ಜಾತ್ಯತೀತವಾದ, ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ಸಂರಕ್ಷಿಸಿದ ಅದಮ್ಯ ವಿಕ್ರಮವುಳ್ಳ ಚಾಂಪಿಯನ್’’ ಎನ್ನುತ್ತಾರೆ ಸಿಪಿಐ(ಎಂ) ನಾಯಕ ಪ್ರಕಾಶ್ ಕಾರಟ್.
ಈ ಎಲ್ಲ ಹೇಳಿಕೆಗಳು ನೂರಾನಿ ಅವರ 90ನೇ ಜನ್ಮದಿನದಂದು ನಡೆದ ಸಭೆಯೊಂದರಲ್ಲಿ ಹೇಳಿದ ಮಾತುಗಳು. ನೂರಾನಿ ಅವರು ಇನ್ನಿಲ್ಲವಾದರೂ ಅವರ ಪುಸ್ತಕಗಳು ಮಾತನಾಡುತ್ತಲೇ ಇರುತ್ತವೆ. ಹಿಂದೆಂದಿಗಿಂತಲೂ ಅವು ಇಂದು ಪ್ರಸ್ತುತವಾಗಿವೆ. ಅವರ ಪುಸ್ತಕಗಳು ಕನ್ನಡ ಸೇರಿದಂತೆ ಎಲ್ಲ ಭಾಷೆಗಳಲ್ಲಿ ಬಂದು ಅವು ಭಾರತದ ಭವಿಷ್ಯತ್ತನ್ನು ರೂಪಿಸಲಿ.