ಪರಿಶಿಷ್ಟ ಜಾತಿ: ಉಪ ವರ್ಗೀಕರಣ ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯ
ನ್ಯಾ.ವಿಕ್ರಮ್ ನಾಥ್, ನ್ಯಾ.ಗವಾಯಿ, ಪಂಕಜ್ ಮಿತ್ತಲ್ ಮತ್ತು ಸತೀಶ್ ಚಂದ್ರ ಶರ್ಮಾ
ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯದ ಏಳು ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠ ಪರಿಶಿಷ್ಟ ಜಾತಿಯ ಉಪ ವರ್ಗೀಕರಣ ಕುರಿತು ಬಹುಮತದ ಸಕಾರಾತ್ಮಕ ತೀರ್ಪು ನೀಡಿದೆ(6:1). ಕೇಂದ್ರ ಸರಕಾರವಾಗಲಿ ಅಥವಾ ರಾಜ್ಯ ಸರಕಾರಗಳೇ ಆಗಲಿ ಪರಿಶಿಷ್ಟ ಜಾತಿ ಸಮೂಹವನ್ನು ಉಪ ವರ್ಗೀಕರಣ ಮಾಡಲು ಸಂವಿಧಾನದ ಯಾವುದೇ ಅನುಚ್ಛೇದಗಳು ಅಡ್ಡಿ ಬರುವುದಿಲ್ಲ ಎಂದು ತೀರ್ಪಿನಲ್ಲಿ ಹೇಳಿದೆ. ಅಂತೂ ನ್ಯಾಯಾಲಯ ಆಕಾಂಕ್ಷಿಗಳಿಗೆ ಬಂಪರ್ ಕೊಡುಗೆಯನ್ನೇ ಕೊಟ್ಟಿದೆ! ಈ ಪ್ರಕರಣ ನಿನ್ನೆ ಮೊನ್ನೆಯದಲ್ಲ ಅದಕ್ಕೆ ದಶಕಗಳ ಇತಿಹಾಸವೇ ಇದೆ.
ಆ ಇತಿಹಾಸವನ್ನೊಮ್ಮೆ ಅವಲೋಕಿಸಿದಾಗ ಅದರ ಏಳು ಬೀಳುಗಳ ಘಟನಾವಳಿಗಳನ್ನು ಮನವರಿಕೆಗಾಗಿ ಗಮನಿಸಬಹುದು. 1975ರಲ್ಲಿ ಪಂಜಾಬ್ ಹಾಗೂ 1994ರಲ್ಲಿ ಹರ್ಯಾಣ ರಾಜ್ಯಗಳು ಪರಿಶಿಷ್ಟ ಜಾತಿಯನ್ನು ಉಪ ವರ್ಗೀಕರಿಸಲು ಇನ್ನಿಲ್ಲದ ಕಸರತ್ತು ಕೈಗೊಂಡು ವಿಫಲವಾದವು. ಆನಂತರವಷ್ಟೇ ಆಂಧ್ರಪ್ರದೇಶದಲ್ಲಿ (ಅವಿಭಜಿತ) ಮಂದ ಕೃಷ್ಣ ಎಂಬ ಹೋರಾಟಗಾರರ ಮುಂದಾಳತ್ವದಲ್ಲಿ ಪರಿಶಿಷ್ಟ ಜಾತಿಗಳನ್ನು ಉಪ ವರ್ಗೀಕರಣಕ್ಕೆ ಒಳಪಡಿಸಿ ಪ್ರತ್ಯೇಕವಾಗಿ ಮೀಸಲಾತಿ ಕೋಟಾ ನೀಡಬೇಕೆಂದು ಹಮ್ಮಿಕೊಂಡ ಪ್ರಬಲ ಹೋರಾಟದ ನಿಮಿತ್ತ ಅಂದು ಅಧಿಕಾರದಲ್ಲಿದ್ದ ಚಂದ್ರಬಾಬು ನಾಯ್ಡು ಸರಕಾರ ನ್ಯಾ. ರಾಮಚಂದ್ರ ರಾಜು ಆಯೋಗವನ್ನು 1996ರಲ್ಲಿ ನೇಮಿಸುತ್ತದೆ. ಪರಿಶಿಷ್ಟ ಜಾತಿಗಳನ್ನು ಆಯೋಗ 4 ವಿಭಾಗಗಳಾಗಿ ವಿಂಗಡಿಸಿ ಕ್ರಮವಾಗಿ ಶೇ. 7,6,1 ಮತ್ತು 1ರಷ್ಟು ಮೀಸಲಾತಿ ಕೋಟಾ ನಿಗದಿ ಮಾಡಿ ವರದಿಯನ್ನು ಸರಕಾರಕ್ಕೆ 1997ರಲ್ಲಿ ಸಲ್ಲಿಸುತ್ತದೆ.
ಸರಕಾರ ಕೂಡ ವರದಿ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಅದನ್ನು ಅನುಷ್ಠಾನಗೊಳಿಸುತ್ತದೆ. ಆದರೆ ಉಚ್ಚ ನ್ಯಾಯಾಲಯ, ಉಪ ವರ್ಗೀಕರಿಸುವ ಮುನ್ನ ರಾಷ್ಟ್ರೀಯ ಪರಿಶಿಷ್ಟ ಜಾತಿಯ ಆಯೋಗದೊಡನೆ ಸಮಾಲೋಚನೆ ಮಾಡಿಲ್ಲ ಎಂದು ಸರಕಾರದ ಆದೇಶವನ್ನು ರದ್ದುಗೊಳಿಸುತ್ತದೆ. ಆಂಧ್ರ ಸರಕಾರ ಮುಂದುವರಿದ ಭಾಗವಾಗಿ ಒಂದು ಕಾಯ್ದೆಯನ್ನು ಹೊರಡಿಸುತ್ತದೆ(2000). ‘ಮಾಲಾ ಮಹಾನಾಡು’ ಎಂಬ ಸಂಸ್ಥೆ ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತದೆ. ಆಂಧ್ರ ನ್ಯಾಯಾಲಯದ ಪೀಠ ಪ್ರಶ್ನಿತ ಮನವಿಯನ್ನು ತಳ್ಳಿಹಾಕುತ್ತದೆ.
ಉಚ್ಚ ನ್ಯಾಯಾಲಯದ ಆದೇಶವನ್ನು ಮೀಸಲಾತಿ ವಿರೋಧಿ ಬಣ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸುತ್ತದೆ. ಮೇಲ್ಮನೆ 2004ರಲ್ಲಿ ವಿಚಾರಣೆಗೆ ಬರುತ್ತದೆ. ವಿಚಾರಣೆಯನ್ನು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ನೇತೃತ್ವದ ಪಂಚ ನ್ಯಾಯಾಧೀಶರ ಸಾಂವಿಧಾನಿಕ ಪೀಠ ಆಂಧ್ರ ಸರಕಾರ ಪರಿಶಿಷ್ಟ ಜಾತಿಗಳನ್ನು ಉಪವರ್ಗೀಕರಿಸಿ ನೀಡಿರುವ ಮೀಸಲಾತಿ ಅಸಿಂಧು ಎಂದು ಘೋಷಿಸಿ ವಿಶೇಷ ಮೇಲ್ಮನವಿಯನ್ನು ಪುರಸ್ಕರಿಸುತ್ತದೆ. ಪೀಠ ತನ್ನ ತೀರ್ಪಿನಲ್ಲಿ- ‘‘ಪರಿಶಿಷ್ಟ ಜಾತಿಗಳು ಏಕರೂಪ(homogeneous)ಜಾತಿಗಳ ಸಮೂಹದಿಂದ ರೂಪುಗೊಂಡಿವೆ. ಆದುದರಿಂದ ಅವುಗಳನ್ನು ಯಾವುದೇ ರೀತಿಯಲ್ಲಿ ಉಪ ವರ್ಗೀಕರಣಕ್ಕೆ ಒಳಪಡಿಸಿದಲ್ಲಿ ಅದು ಸಂವಿಧಾನದ ವಿಧಿ14ರ ಉಲ್ಲಂಘನೆ’’ ಎಂದು ಹೇಳಿದೆ.1992ರಲ್ಲಿ ಸರ್ವೋಚ್ಚ ನ್ಯಾಯಾಲಯದ 9 ಮಂದಿ ನ್ಯಾಯಮೂರ್ತಿಗಳ ಪೀಠ ಇಂದ್ರಾ ಸಹಾನಿ ಪ್ರಕರಣದ ತೀರ್ಪಿನಲ್ಲಿ ಹೇಳಿರುವ ಅಂಶಗಳನ್ನು ಪರಿಗಣಿಸಿ, ಪರಿಶಿಷ್ಟ ಜಾತಿಗಳನ್ನು ಉಪ ವರ್ಗೀಕರಿಸಿ ಪ್ರತ್ಯೇಕ ಮೀಸಲಾತಿ ನೀಡಲು ಅವಕಾಶ ಇಲ್ಲ ಎಂದು ಹೇಳಿರುವುದು ಈ ತೀರ್ಪಿನಲ್ಲಿ ಮೇಲುಗೈ ಪಡೆಯುತ್ತದೆ.
ವಿಷಯ ಹೀಗಿರಲು, ಅಂಬರದಂಚಿನಲ್ಲಿ ಮಿಂಚೊಂದನ್ನು ಕಂಡು, ಉಪ ವರ್ಗೀಕರಣದ ಪರ ಇರುವವರ ಮೊಗದಲ್ಲಿ ಮುಗುಳುನಗೆಯೊಂದು ಹೊರ ಸೂಸುತ್ತದೆ. ಈ ಮುಗುಳುನಗೆಯ ಹಿಂದಿನ ಕಾರಣ ಪಂಜಾಬ್ v/s ದೇವಿಂದರ್ ಪ್ರಕರಣದಲ್ಲಿ, ಪಂಜಾಬ್ ಸರಕಾರ ಕಾಯ್ದೆಯೊಂದನ್ನು ಜಾರಿಗೊಳಿಸಿ ಪರಿಶಿಷ್ಟ ಜಾತಿಗಳಾದ ಬಾಲ್ಮೀಕಿ ಮತ್ತು ಮಜಭಿ ಸಿಖ್ಖರಿಗೆ ಪ್ರತ್ಯೇಕ ಮೀಸಲಾತಿ ನೀಡುತ್ತದೆ. ಉಚ್ಚ ನ್ಯಾಯಾಲಯ ಕಾಯ್ದೆಯ ಕಲಂ 4(5)ಅನ್ನು ಸಂವಿಧಾನ ವಿರೋಧಿ ಎಂದು ಘೋಷಿಸುತ್ತದೆ. ಪಂಜಾಬ್ ಸರಕಾರ ಸರ್ವೋಚ್ಚ ನ್ಯಾಯಾಲಯದ ಮುಂದೆ ವಿಶೇಷ ಮೇಲ್ಮನವಿ ಸಲ್ಲಿಸುತ್ತದೆ. ಸರ್ವೋಚ್ಚ ನ್ಯಾಯಾಲಯ ನ್ಯಾ. ಮಿಶ್ರಾ ಅವರ ನೇತೃತ್ವದ ಪಂಚ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ರಾಜ್ಯಗಳಿಗೆ ಪರಿಶಿಷ್ಟ ಜಾತಿಗಳನ್ನು ಉಪ ವರ್ಗೀಕರಿಸಿ ಮೀಸಲಾತಿ ನೀಡುವ ಅಧಿಕಾರದ ಬಗ್ಗೆ ಆಗಸ್ಟ್, 2020ರ ತನ್ನ ತೀರ್ಪಿನಲ್ಲಿ ಇ.ವಿ. ಚಿನ್ನಯ್ಯ ಪ್ರಕರಣದ ತೀರ್ಪಿನ ಪುನರ್ ಪರಿಶೀಲನೆ ಸಪ್ತ ನ್ಯಾಯಾಧೀಶರ ಸಾಂವಿಧಾನಿಕ ಪೀಠದಲ್ಲಿ ಮುನ್ನಡೆಯಬೇಕು ಮತ್ತು ಇಂದ್ರಾ ಸಹಾನಿ ಪ್ರಕರಣದ ತೀರ್ಪಿನ ಕೆಲವು ಅಂಶಗಳನ್ನು ಪುನರ್ ಪರಿಶೀಲನೆಯಲ್ಲಿ ಪರಿಗಣಿಸಬೇಕೆಂದು ಹೇಳಿತು. ಪಂಚ ನ್ಯಾಯಮೂರ್ತಿಗಳ ಪೀಠದ ಆಶಯದಂತೆ, ಏಳು ಮಂದಿ ನ್ಯಾಯಾಧೀಶರ ಪೀಠದ ಮುಂದೆ ವಿಚಾರಣೆಗೆ ಬರುವುದು. ಕಳೆದ ಫೆಬ್ರವರಿ 8ನೇ ದಿನಾಂಕದಂದು ವಿಚಾರಣೆಯನ್ನು ಪೀಠ ಮುಗಿಸಿ ತೀರ್ಪಿಗಾಗಿ ಕಾಯ್ದಿರಿಸಿತ್ತು. ಅಗಸ್ಟ್ 1ರಂದು ಪರಿಶಿಷ್ಟ ಜಾತಿಯ ಉಪ ವರ್ಗೀಕರಣಕ್ಕೆ ಯಾವುದೇ ಸಂವಿಧಾನದ ವಿಧಿಗಳ ಬಾಧಕವಿಲ್ಲ ಎಂದು ತೀರ್ಪು ನೀಡಿರುವುದು ನ್ಯಾಯಾಲಯದ ಇತಿಹಾಸದಲ್ಲೊಂದು ಮೈಲಿಗಲ್ಲು.
ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ, ವಿಕ್ರಮ್ ನಾಥ್, ಬೇಲಾ ತ್ರಿವೇದಿ, ಪಂಕಜ್ ಮಿತ್ತಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಶರ್ಮ ಇವರಲ್ಲಿ ನ್ಯಾ. ಬೇಲಾ ತ್ರಿವೇದಿ ಒಬ್ಬರನ್ನು ಹೊರತುಪಡಿಸಿ ಇನ್ನುಳಿದ ಆರು ಮಂದಿ ನ್ಯಾಯಾಧೀಶರು, ಪರಿಶಿಷ್ಟ ಜಾತಿಯ ಉಪ ವರ್ಗೀಕರಣ ಸಂವಿಧಾನದ ವಿಧಿ 14 ಮತ್ತು ವಿಧಿ 341ಅನ್ನು ಉಲ್ಲಂಘಿಸುವುದಿಲ್ಲ ಎಂದು ತೀರ್ಪಿತ್ತಿರುವರು. ವಿಶೇಷವಾಗಿ ಸಂವಿಧಾನದ ವಿಧಿಗಳನ್ನು ಉದ್ಧರಿಸಿರುವವರು ಮುಖ್ಯ ನ್ಯಾಯಮೂರ್ತಿಗಳು.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಈ ಬಗ್ಗೆ 6 ತೀರ್ಪುಗಳಿದ್ದು ಎಲ್ಲವೂ ಒಪ್ಪಿಗೆಯಾಗಿವೆ ಎಂದಿದ್ದು, 2004ರ ಇ.ವಿ. ಚಿನ್ನಯ್ಯ ಪ್ರಕರಣದ ತೀರ್ಪು ಉಪವರ್ಗೀಕರಣ ಮಾಡಲು ಅನುಮತಿಸದೆ ಇರುವುದನ್ನು ಬಹುಮತದಿಂದ ತಳ್ಳಿ ಹಾಕಿದ್ದಾರೆೆ. ನ್ಯಾ. ಬೇಲಾ ತ್ರಿವೇದಿ ಮಾತ್ರ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
ಏಳು ಮಂದಿ ನ್ಯಾಯಾಧೀಶರ ಸಂವಿಧಾನ ಪೀಠವು ಮೂಲಭೂತವಾಗಿ ಎರಡು ಅಂಶಗಳನ್ನು ಪರಿಗಣಿಸುತ್ತದೆ: (1) ಮೀಸಲು ಜಾತಿಗಳೊಂದಿಗೆ ಉಪ ವರ್ಗೀಕರಣವನ್ನು ಅನುಮತಿಸಬೇಕೆ ಮತ್ತು (2) ಇ.ವಿ ಚಿನ್ನಯ್ಯ v/s ಆಂಧ್ರಪ್ರದೇಶ ರಾಜ್ಯ (2005)1 ಎಸ್ಸಿಸಿ 394, ‘ಪರಿಶಿಷ್ಟ ಜಾತಿಗಳು’ ಏಕರೂಪ (homogeneous) ಸಮೂಹ ವಾಗಿರುವುದರಿಂದ ಅವನ್ನು ಉಪ- ವರ್ಗೀಕರಿಸಲಾಗುವುದಿಲ್ಲ ಎಂದು ಅದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಅವರೇ ಬರೆದ ತೀರ್ಪಿನಲ್ಲಿ ಮತ್ತು ನ್ಯಾ. ಮಿಶ್ರಾ ಅವರೊಡಗೂಡಿ ಐತಿಹಾಸಿಕ ಘಟನೆಗಳನ್ನು ಉಲ್ಲೇಖಿಸಿದ್ದಾರೆ. ಇದು, ಪರಿಶಿಷ್ಟ ಜಾತಿಯು ‘ಏಕರೂಪದ ವರ್ಗ’ವಲ್ಲ ಎಂದು ಸೂಚಿಸುತ್ತದೆ. ಸಂವಿಧಾನದ 14ನೇ ವಿಧಿಯ ಅಡಿಯಲ್ಲಿ ಪ್ರತಿಪಾದಿಸಲಾದ ಸಮಾನತೆಯ ತತ್ವವನ್ನು ಉಲ್ಲೇಖಿಸುವುದಿಲ್ಲ. 15 ಮತ್ತು 16ನೇ ವಿಧಿಗಳಲ್ಲಿ ರಾಜ್ಯವು ಜಾತಿಯನ್ನು ಉಪ-ವರ್ಗೀಕರಿಸುವುದನ್ನು ತಡೆಯುವುದು ಯಾವುದೂ ಇಲ್ಲ.
ನ್ಯಾ. ಬಿ.ಆರ್. ಗವಾಯಿ ಅವರು ತಮ್ಮ ಸಹಮತದ ತೀರ್ಪಿನಲ್ಲಿ ಹೆಚ್ಚು ಹಿಂದುಳಿದ ಸಮುದಾಯಗಳಿಗೆ ಆದ್ಯತಾ ಉಪಚಾರ ತತ್ವದ ಅಡಿಯಲ್ಲಿ ಕೆಲವು ಜನರಿಗೆ ಮೀಸಲು ಸೌಲಭ್ಯ ನೀಡುವುದು ರಾಜ್ಯದ ಕರ್ತವ್ಯ ಎಂದು ಹೇಳಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವರ್ಗದ ಕೆಲವೇ ಜನರು ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ. ನೆಲದ ವಾಸ್ತವಗಳನ್ನು ಅಲ್ಲಗಳೆಯಲಾಗುವುದಿಲ್ಲ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಲ್ಲಿ ಶತಮಾನಗಳಿಂದ ಹೆಚ್ಚು ದಬ್ಬಾಳಿಕೆಯನ್ನು ಎದುರಿಸುತ್ತಿರುವ ವರ್ಗಗಳಿವೆ. ಉಪ-ವರ್ಗೀಕರಣಕ್ಕೆ ಆಧಾರ ವೆಂದರೆ ಯಾವುದೇ ಒಂದು ಗುಂಪು ಮತ್ತೊಂದು ದೊಡ್ಡ ಗುಂಪಿನಿಂದ ಹೆಚ್ಚು ತಾರತಮ್ಯ ಎದುರಿಸುತ್ತಿರುವುದು.
ಉಪ-ವರ್ಗೀಕರಣವನ್ನು ಅನುಮತಿಸುವಾಗ ರಾಜ್ಯವು ಪ್ರತಿಶತ 100ರಷ್ಟು ಮೀಸಲಾತಿಯನ್ನು ಮೀಸಲಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ ಉಪ- ವರ್ಗದ ಪ್ರಾತಿನಿಧ್ಯದ ಅಸಮರ್ಪಕತೆಯ ಬಗ್ಗೆ ಪ್ರಾಯೋಗಿಕ ದತ್ತಾಂಶದ ಆಧಾರದ ಮೇಲೆ ರಾಜ್ಯವು ಉಪ -ವರ್ಗೀಕರಣವನ್ನು ಸಮರ್ಥಿಸಿ ಕೊಳ್ಳಬೇಕಾಗುತ್ತದೆ.
ಕೆನೆಪದರವನ್ನು ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಅನ್ವಯಿಸಬೇಕು: ನ್ಯಾ.ಗವಾಯಿ
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳವರಲ್ಲಿ ಕೆನೆಪದರವನ್ನು ಗುರುತಿಸಲು ಮತ್ತು ಅವರನ್ನು ಸಮರ್ಥನೀಯ ಕ್ರಮದಿಂದ ಹೊರ ತರಲು ರಾಜ್ಯವು ಕ್ರಮಬದ್ಧ ನೀತಿಯನ್ನು ರೂಪಿಸಬೇಕು ಎಂದು ನ್ಯಾ. ಗವಾಯಿ ಅಭಿಪ್ರಾಯಪಟ್ಟಿದ್ದಾರೆ. ನಿಜವಾದ ಸಮಾನತೆ ಪಡೆಯಲು ಇದೊಂದೇ ದಾರಿ ಎಂದೂ ಹೇಳಿದ್ದಾರೆ.
ನ್ಯಾ.ಗವಾಯಿಯವರ ಈ ಅಭಿಪ್ರಾಯಕ್ಕೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಪಂಕಜ್ ಮಿತ್ತಲ್ ಮತ್ತು ಸತೀಶ್ ಚಂದ್ರ ಶರ್ಮಾ ಅವರು ಧ್ವನಿಗೂಡಿಸಿದ್ದಾರೆ.
ಅರ್ಜಿದಾರರ ವಾದಗಳು:
ಇ.ವಿ. ಚಿನ್ನಯ್ಯ ಪ್ರಕರಣದ ಪೀಠವು ಇಂದ್ರಾ ಸಹಾನಿ ಪ್ರಕರಣದ ತೀರ್ಪಿನ ಅಂಶಗಳನ್ನು ತಪ್ಪಾಗಿ ಅರ್ಥೈಸಿದ್ದಾರೆ -ಅರ್ಜಿದಾರರು ಚಿನ್ನಯ್ಯ ಪ್ರಕರಣದಲ್ಲಿ ಇಂದ್ರಾ ಸಹಾನಿ ತೀರ್ಪಿನ ಮೇಲೆ ಅವಲಂಬಿತವಾಗಿರುವ ಆಂಧ್ರಪ್ರದೇಶದ ನಿಲುವನ್ನು ತಿರಸ್ಕರಿಸಿದರು. ಏಕೆಂದರೆ ಇಂದ್ರಾ ಸಹಾನಿ ಇತರ ಹಿಂದುಳಿದ ವರ್ಗಗಳ ಮಟ್ಟಿಗೆ ಮಾತ್ರ ಉಪ ವರ್ಗೀಕರಣಕ್ಕೆ ಅನುಮತಿ ನೀಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಲ್ಲ ಎಂದು ಚಿನ್ನಯ್ಯ ಪ್ರಕರಣದ ಪೀಠವು ಗಮನಿಸಿದೆ.
ಅರ್ಜಿದಾರರು ಇ.ವಿ.ಚಿನ್ನಯ್ಯ ಪ್ರಕರಣದಲ್ಲಿನ ಈ ತಾರ್ಕಿಕತೆಯ ವಾದವನ್ನು ನ್ಯಾಯಾಲಯದ ಮುಂದಿಟ್ಟರು. ಉಪ ವರ್ಗೀಕರಣದ ಸಮಸ್ಯೆಯನ್ನು ಚರ್ಚಿಸುವಾಗ ಇಂದ್ರಾ ಸಹಾನಿ ತೀರ್ಪಿನಲ್ಲಿ ಪರಿಶಿಷ್ಟ ಜಾತಿಯನ್ನು ಸ್ಪಷ್ಟವಾಗಿ ಹೊರಗಿಡದ ಕಾರಣ, ಚಿನ್ನಯ್ಯ ಪ್ರಕರಣದ ತೀರ್ಪು ದೋಷ ಪೂರಿತವಾಗಿದೆ. ಇಂದ್ರಾ ಸಹಾನಿ ಪ್ರಕರಣದಲ್ಲಿ ನ್ಯಾಯಾಲಯವು ‘ಕೆನೆ ಪದರ’ ನೀತಿಯನ್ನು ಮಾತ್ರ ಇತರ ಹಿಂದುಳಿದ ವರ್ಗಗಳಿಗೆ ಸೀಮಿತಗೊಳಿಸಿದೆಯೇ ವಿನಃ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಲ್ಲ.
ಅನುಸೂಚಿತ ಜಾತಿಗಳಲ್ಲಿ ಭಿನ್ನಜಾತಿ (heterogeneity)ಅಸ್ತಿತ್ವದಲ್ಲಿದೆ- ವೈವಿಧ್ಯಮಯ ಗುಂಪುಗಳ ಪ್ರಾಬಲ್ಯ ಮತ್ತು ಅವರ ವಿವಿಧ ಹೋರಾಟಗಳು ಮತ್ತು ಪರಿಶಿಷ್ಟ ಜಾತಿಗಳ ವರ್ಗದಲ್ಲಿ ತಾರತಮ್ಯದ ಸಮತಲವನ್ನು ಒತ್ತಿ ಹೇಳಲಾಯಿತು. ಔದ್ಯೋಗಿಕ ವ್ಯತ್ಯಾಸಗಳು ಹಿಂದುಳಿದ ವರ್ಗದೊಳಗೆ ಉಪವರ್ಗಗಳ ಸೃಷ್ಟಿಗೆ ಕಾರಣವಾಗಿದೆ ಎಂದು ವಾದಿಸಲಾಯಿತು.
ಸರ್ವೋಚ್ಚ ನ್ಯಾಯಾಲಯವು ಎರಡು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದೆ. ಪರಿಶಿಷ್ಟ ಜಾತಿಯಲ್ಲಿನ ‘ಕೆನೆ ಪದರ’ರನ್ನು ಹೊರಗಿಡುವಂತೆ ಮತ್ತು ಶೇ. 100ರಷ್ಟು ಮೀಸಲಾತಿಯನ್ನು ಮೀಸಲಿಡುವಂತಿಲ್ಲ ಎಂಬ ಈ ಎರಡು ಅಂಶಗಳ ಮೇಲೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀತಿ ರೂಪಿಸುವಾಗ ಮತ್ತೆ ಮತ್ತೆ ಸೂಕ್ಷ್ಮವಾಗಿ ವಿವೇಚಿಸಬೇಕಿದೆ.
ಅವರ್ಣೀಯರಾಗಿ ಊರಾಚೆಯೇ ಬದುಕು ಕಟ್ಟಿಕೊಂಡು ಅಸ್ಪಶ್ಯರಾಗಿಯೇ ಉಳಿದು ಜೀವ ಸವೆಸುತ್ತಿರುವ, ಸಾಂವಿಧಾನಿಕವಾಗಿ ಪರಿಶಿಷ್ಟ ಜಾತಿ ಎಂದು ಬಿಂಬಿಸಲ್ಪಡುವ ಈ ಸಮುದಾಯದ ಒಂದು ಸಣ್ಣ ಸಮಸ್ಯೆಯ ನಿವಾರಣೆಗೆ ಸುಮಾರು 50 ವರ್ಷಗಳು ಗತಿಸಿವೆ ಎಂದರೆ ಸಂವಿಧಾನಾತ್ಮಕ ವಾಗಿ ಸರಕಾರವನ್ನು ನಡೆಸುತ್ತಿದ್ದೇವೆ ಎಂದು ಹೇಳಿಕೊಳ್ಳುವ ಅಧಿಕಾರಸ್ಥ ಪ್ರಭುಗಳನ್ನು ಏನೆಂದು ಕರೆಯೋಣ?