ಶಾಲಾ ಪ್ರವಾಸದ ದುರಂತಗಳು | ಅವುಗಳಿಂದ ಕಲಿಯಬೇಕಾದ ಪಾಠಗಳು
ಸಾಂದರ್ಭಿಕ ಚಿತ್ರ| ಮುರುಡೇಶ್ವರ
ಶಾಲಾ ಪ್ರವಾಸಗಳು ವಿದ್ಯಾರ್ಥಿಗಳಿಗೆ ಶಿಕ್ಷಣದ ಹೊರತಾಗಿ ಹೊಸತನ್ನು ತಿಳಿಯುವ ಅವಕಾಶ ಮತ್ತು ಪ್ರಾಯೋಗಿಕ ಅನುಭವಗಳ ಒಂದು ಪ್ರಕ್ರಿಯೆಗಳಾಗಿವೆ. ಆದರೆ ದುರದೃಷ್ಟವಶಾತ್, ಕೆಲವು ಪ್ರವಾಸಗಳು ವಿದ್ಯಾರ್ಥಿ ಜೀವನಕ್ಕೆ ಅಪಾಯಕಾರಿಯಾಗಿ ತಿರುಗುತ್ತಿವೆ.
ಉತ್ತರ ಕನ್ನಡ ಜಿಲ್ಲೆ ನೈಸರ್ಗಿಕ ಸೌಂದರ್ಯಕ್ಕೆ ಹೆಸರಾಗಿದೆ. ಕಾರವಾರ, ಧಾರ್ಮಿಕ ಮತ್ತು ಪ್ರಾಕೃತಿಕ ಆರಾಧನೆಯ ಗೋಕರ್ಣ, ಅತಿ ಎತ್ತರದ ಶಿವನ ಮೂರ್ತಿಗೆ ಹೆಸರಾದ ಮುರುಡೇಶ್ವರ, ಪ್ರಕೃತಿಯ ಮಡಿಲಲ್ಲಿರುವ ಹೊನ್ನಾವರ, ಅದರ ಪಕ್ಕದಲ್ಲೇ ಇರುವ ವಿಶ್ವವಿಖ್ಯಾತ ಜೋಗಜಲಪಾತ ಹೀಗೆ ಹತ್ತು ಹಲವು ಪ್ರವಾಸಿ ತಾಣಗಳು ದೇಶವಿದೇಶದ ಜನರನ್ನು ತನ್ನೆಡೆ ಆಕರ್ಷಿಸುವಂತೆ ಮಾಡಿದ್ದು ಪ್ರತಿ ವರ್ಷ ಶಾಲಾ ಪ್ರವಾಸಕ್ಕಾಗಿ ವಿದ್ಯಾರ್ಥಿಗಳ ದಂಡು ನಮ್ಮ ಸುಂದರ ಕರಾವಳಿಯ ಸವಿಯಲು ಬರುತ್ತದೆ.
ಡಿಸೆಂಬರ್ ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ತೀರ ಹೆಚ್ಚಳವಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಡಿಸೆಂಬರ್ ತಿಂಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಉತ್ತರಕನ್ನಡ ಜಿಲ್ಲೆಗೆ ಬಂದ ಶಾಲಾ ವಿದ್ಯಾರ್ಥಿಗಳಿಗೆ ಸರಣಿ ದುರಂತಗಳು ಸಂಭವಿಸಿವೆ. ದಾಂಡೇಲಿಯಲ್ಲಿ ಚಿತ್ರದುರ್ಗಾ ಜಿಲ್ಲೆಯ ಶಾಲಾ ಬಸ್ ಉರುಳಿ ಬಿದ್ದಿದ್ದು, ಮುರುಢೇಶ್ವರದಲ್ಲಿ ಕೋಲಾರ ಜಿಲ್ಲೆಯ ನಾಲ್ಕು ವಿದ್ಯಾರ್ಥಿನಿಯರು ಸಮುದ್ರದಲೆಗೆ ಕೊಚ್ಚಿಹೋಗಿದ್ದು, ಮೂತ್ರ ವಿಸರ್ಜನೆಗೆ ಹೋಗಿದ್ದ ಬಾಲಕ ಭಟ್ಕಳದ ಪಾಳು ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದು, ಇವುಗಳ ಸಾಲಿಗೆ ಶುಕ್ರವಾರ ಹೊನ್ನಾವರ ತಾಲೂಕಿನ ಆರೋಳ್ಳಿಯಲ್ಲಿ ಕೋಲಾರ ಜಿಲ್ಲೆಯ ಶಾಲಾ ಪ್ರವಾಸದ ಬಸ್ ಉರುಳಿ ಬಿದ್ದು 34 ವಿದ್ಯಾರ್ಥಿಗಳು ಗಾಯಗೊಂಡಿದ್ದು ದುರಂತಗಳ ಸಾಲಿಗೆ ಮತ್ತೊಂದು ಘಟನೆ ಸೇರಿಕೊಂಡಂತಾಗಿದೆ.
ಕೋಲಾರ ಜಿಲ್ಲೆಯ ಮಾಸ್ತಿ ಹಳ್ಳಿಯ ಕರ್ನಾಟಕ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತರಕನ್ನಡ ಪ್ರವಾಸದ ನಂತರ ಗೋಕರ್ಣದಿಂದ ತಮ್ಮ ಊರಿಗೆ ತೆರಳುತ್ತಿದ್ದರು. ಬಸ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ 34 ವಿದ್ಯಾರ್ಥಿಗಳು ಗಾಯಗೊಂಡರು. ತಕ್ಷಣವೇ ಪೊಲೀಸರು ಹಾಗೂ ಸ್ಥಳೀಯರು ಗಾಯಾಳುಗಳನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು. ಗಂಭೀರ ಗಾಯಗೊಂಡ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.
ಇದಲ್ಲದೇ, ಇತ್ತೀಚೆಗೆ ಮುರುಡೇಶ್ವರದಲ್ಲಿ ಕೋಲಾರ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಮನಕಲಕುವಂತಿತ್ತು. ಯಲಬುರ್ಗಾದಿಂದ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ಮೂತ್ರ ವಿಸರ್ಜನೆಗೆ ತೆರಳಿದಾಗ ಭಟ್ಕಳದ ಪಾಳು ಬಿದ್ದ ಬಾವಿಯೊಳಗೆ ಬಿದ್ದು ಮೃತಪಟ್ಟನು. ಈ ಘಟನೆಗಳು ವಿದ್ಯಾರ್ಥಿಗಳ ಸುರಕ್ಷತೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು, ಶಾಲಾ ಪ್ರವಾಸದ ಕುರಿತು ಸರ್ಕಾರ ಮತ್ತು ಶಿಕ್ಷಣ ಇಲಾಖೆಯನ್ನು ಚಿಂತನೆಗೀಡು ಮಾಡಿವೆ.
► ಶಾಲಾ ಪ್ರವಾಸದ ಅವಶ್ಯಕತೆ ಮತ್ತು ನಿರ್ಲಕ್ಷ್ಯ:
ಶಾಲಾ ಪ್ರವಾಸಗಳು ವಿದ್ಯಾರ್ಥಿಗಳಲ್ಲಿ ಸಮಾಜಿಕ ಜ್ಞಾನ, ವ್ಯಕ್ತಿತ್ವ ವಿಕಾಸನ, ಮತ್ತು ಜ್ಞಾನವನ್ನು ವೃದ್ಧಿ ಮಾಡುವ ಉದ್ದೇಶ ಹೊಂದಿವೆ. ಆದರೆ, ನಿರ್ಲಕ್ಷ್ಯದಿಂದ ಇಂತಹ ಅನುಭವಗಳು ಅಪಾಯಕರವಾಗಬಹುದು ಎಂಬುದನ್ನು ಇತ್ತಿಚೆಗೆ ನಡೆದ ಸರಣಿ ದುರಂತಗಳು ನಮಗೆ ಎಚ್ಚರಿಸುತ್ತವೆ.
ಸೂಕ್ತ ಯೋಜನೆ, ನಿಯಂತ್ರಣ, ಮತ್ತು ಸುರಕ್ಷತಾ ಕ್ರಮಗಳ ಅನುಸರಣೆ ಇಲ್ಲದಿದ್ದಾಗ ಈ ರೀತಿಯ ದುರ್ಘಟನೆಗಳು ಸಂಭವಿಸುತ್ತವೆ.
► ಪ್ರಮುಖ ಸಮಸ್ಯೆಗಳು:
• ರಾತ್ರಿ ಪ್ರಯಾಣಗಳು ಅಪಾಯಕಾರಿಯಾಗಿತ್ತಿವೆ. ಚಾಲಕರ ನಿದ್ರೆ ಕೊರತೆ ಹಾಗೂ ಕತ್ತಲೆಯಲ್ಲಿ ದಾರಿಯ ಅಸ್ಪಷ್ಟತೆಯು ಅಪಘಾತಗಳಿಗೆ ಕಾರಣವಾಗುತ್ತದೆ.
• ಬಸ್ ಗಳ ನಿರ್ವಹಣೆ, ವಿದ್ಯಾರ್ಥಿಗಳಲ್ಲಿನ ಶಿಸ್ತು ಮತ್ತು ನೋಡಿಕೊಳ್ಳುವ ಶಿಕ್ಷಕರ ಜವಾಬ್ದಾರಿ ಕೊರತೆ, ಮುನ್ನೆಚ್ಚರಿಕೆ ವಹಿಸದಿರುವುದು ಅಪಘಾತಗಳನ್ನು ಆಹ್ವಾನಿಸುತ್ತಿದೆ.
• ಪ್ರವಾಸಗಳಿಗೆ ಬಳಸುವ ಖಾಸಗಿ ವಾಹನಗಳು ನಿರ್ಧಿಷ್ಟ ಗುಣಮಟ್ಟವನ್ನು ಪೂರೈಸದೆ ಒಂದು ದೊಡ್ಡ ಸಮಸ್ಯೆಯಾಗಿದೆ.
•ಈ ಘಟನೆಗಳು ಶಾಲಾ ಆಡಳಿತ, ಪೋಷಕರ ಜಾಗೃತಿ, ಮತ್ತು ಪ್ರವಾಸಕ್ಕೆ ಬಳಸುವ ಸಾರಿಗೆ ವ್ಯವಸ್ಥೆಯ ಮೇಲೆ ನಿಗಾ ವಹಿಸಲು ಒಂದು ಪಾಠವಾಗಬೇಕು.
•ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಸದ ನಿರ್ಲಕ್ಷ್ಯದ ಕುರಿತು ಸಾಮಾಜಿಕ ಚರ್ಚೆಗಳು ನಡೆಯಬೇಕು. ಪತ್ರಿಕೆಗಳು ಮತ್ತು ಟಿವಿ ವಾಹಿನಿಗಳು ವಿದ್ಯಾರ್ಥಿ ಸುರಕ್ಷತೆಯ ಕುರಿತಾದ ಮಾಹಿತಿಯನ್ನು ಜನಸಾಮಾನ್ಯರ ಗಮನಕ್ಕೆ ತರಬೇಕು.
► ಏನೆಲ್ಲ ಕ್ರಮ ಕೈಗೊಳ್ಳಲು ಸಾಧ್ಯ:
• ಶಾಲಾ ಪ್ರವಾಸಗಳಿಗೆ ತೆರಳುವ ವಾಹನಗಳು ಸರ್ಕಾರದ ಪರಿಶೀಲನೆಗೊಳಪಡಬೇಕು. ಚಾಲಕರಿಗೆ ಅನುಭವ ಹಾಗೂ ಮಾನ್ಯತೆ ಹೊಂದಿರಬೇಕು.
• ಶಾಲಾ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳಿಗೆ ಭೇಟಿ ನೀಡುವ ಸ್ಥಳಗಳ ಆಯ್ಕೆ, ಸಮಯ ಯೋಜನೆ ಮತ್ತು ವಾಹನಗಳ ಗುಣಮಟ್ಟದ ಮೇಲೆ ಸೂಕ್ತ ಗಮನ ಹರಿಸಬೇಕು.
• ಪೋಷಕರು ಮಕ್ಕಳ ಸುರಕ್ಷತೆಯ ಕುರಿತು ಸಂಘಟಿತ ರೀತಿಯಲ್ಲಿ ವಾದಿಸಿ ಶಾಲಾ ಆಡಳಿತವನ್ನು ಜವಾಬ್ದಾರಿಯತ್ತ ಒತ್ತಾಯಿಸಬೇಕು.
• ಪ್ರತಿ ಬಸ್ ಗಳನ್ನು GPS ವ್ಯವಸ್ಥೆಯಿಂದ ಸಜ್ಜುಗೊಳಿಸಿ ಪ್ರಯಾಣದ ಸ್ಥಳ ಮತ್ತು ಸಮಯವನ್ನು ಪೋಷಕರು ಮತ್ತು ಶಾಲಾ ಆಡಳಿತ ನಿಗಾ ವಹಿಸಲು ಅವಕಾಶ ಮಾಡಬೇಕು.
ಪ್ರವಾಸಗಳು ಮಕ್ಕಳಿಗೆ ಹೊಸತನವನ್ನು ಪರಿಚಯಿಸುವುದಕ್ಕೆ ಅತ್ಯುತ್ತಮ ಅವಕಾಶವಾಗಿವೆ. ಆದರೆ ಅವುಗಳ ವ್ಯವಸ್ಥಿತ ನಿರ್ವಹಣೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡದೆ ಇಂತಹ ಘಟನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ.
ಪ್ರತಿಯೊಬ್ಬ ವಿದ್ಯಾರ್ಥಿಯ ಸುರಕ್ಷತೆ ನಮ್ಮ ಸಮಾಜದ ಜವಾಬ್ದಾರಿ. ಈ ದುರಂತಗಳಿಂದ ಪಾಠ ಕಲಿಯುವ ಮೂಲಕ, ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಹೊಸ ಪರಿವರ್ತನೆ ಬರಬೇಕು. ಈ ನಿರ್ಲಕ್ಷ್ಯವು ಮರುಕಳಿಸದಂತೆ, ಶಾಲಾ ಪ್ರವಾಸಗಳ ಆಯೋಜನೆಗೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕು.