ಅಮೆರಿಕಕ್ಕೆ ಸಮುದ್ರ ಸಿಗಡಿ ರಫ್ತು ಪುನರಾರಂಭ?
►ಮೀನುಗಾರಿಕಾ ಟ್ರಾಲರ್‌ಗಳಲ್ಲಿ ಟೆಡ್ ಬಳಕೆಗೆ ಕ್ರಮ ►2019 ರಿಂದ ಭಾರತದ ಸಿಗಡಿಗೆ ಅಮೆರಿಕದಲ್ಲಿ ನಿಷೇಧ
ಮಂಗಳೂರು: ಸಮುದ್ರದಲ್ಲಿ ಹೇರಳವಾಗಿ ಸಿಗುವ ಮೀನುಗಳಲ್ಲಿ ವೈಲ್ಡ್ ಕ್ಯಾಚ್ ಶ್ರಿಂಪ್ (ಸಮುದ್ರ ಸಿಗಡಿ)ಗೆ ಭಾರೀ ಬೇಡಿಕೆ ಇದೆ. ಆದರೆ ಅಮೆರಿಕದಲ್ಲಿ ಮಾತ್ರ ಭಾರತದ ಸಮುದ್ರ ಸಿಗಡಿಗೆ 2019ರಿಂದ ನಿಷೇಧವಿದ್ದು, ಕಳೆದ ಸುಮಾರು ನಾಲ್ಕು ವರ್ಷಗಳಿಂದೀಚೆಗೆ ಸಮುದ್ರ ಸಿಗಡಿ ಅಮೆರಿಕಕ್ಕೆ ರಫ್ತಾಗುತ್ತಿಲ್ಲ.
ಭಾರತೀಯ ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು ಈ ನಿಷೇಧ ತೆರವಿನ ನಿಟ್ಟಿನಲ್ಲಿ ಮೀನುಗಾರಿಕಾ ದೋಣಿಗಳಲ್ಲಿ ಬಳಸಲಾಗುವ ಟರ್ಟಲ್ ಎಕ್ಸ್‌ಕ್ಲೂಸರ್ ಡಿವೈಸ್ (ಟಿಇಡಿ) ಅಭಿವೃದ್ಧಿಪಡಿಸಿದ್ದು, ಅಮೆರಿಕದ ತಜ್ಞರಿಂದಲೂ ಈ ಹೊಸ ತಂತ್ರಜ್ಞಾನಕ್ಕೆ ಗ್ರೀನ್ ಸಿಗ್ನಲ್ ದೊರಕಿದೆ. ಕರ್ನಾಟಕ ಕರಾವಳಿಯ ಮೀನುಗಾರರು ಕೂಡಾ ಸಮುದ್ರ ಸಿಗಡಿ ಅಪಾರ ಪ್ರಮಾಣದಲ್ಲಿ ಸಂಗ್ರಹಿಸುತ್ತಿದ್ದು, ಇದೀಗ ಈ ಟಿಇಡಿ ಬಳಕೆಯ ಬಗ್ಗೆ ಕರ್ನಾಟಕದ ಕರಾವಳಿ ಮೀನುಗಾರರಿಗೂ ಮಾಹಿತಿ ಲಭ್ಯವಾಗಲಿದೆ.
ವೈವಿಧ್ಯಮಯ ಹಾಗೂ ರುಚಿಕರ ಸಮುದ್ರ ಸಿಗಡಿಗೆ ಅಮೆರಿಕದಲ್ಲಿ ಭಾರೀ ಬೇಡಿಕೆ ಇದೆ. 2018ರವರೆಗೂ ಭಾರತದ ಸಮುದ್ರದಿಂದ ಸಂಗ್ರಹಿಸಲಾದ ಈ ಸಿಗಡಿ ಅಮೆರಿಕಕ್ಕೆ ರಫ್ತಾಗುತ್ತಿತ್ತು. ಆದರೆ ಭಾರತದ ಯಾಂತ್ರೀಕೃತ ಟ್ರೋಲರ್ ಬೋಟ್‌ಗಳಲ್ಲಿ ಬಳಸಲಾಗುವ ಬಲೆಗಳು ಅಳಿವಿನಂಚಿ ನಲ್ಲಿರುವ ‘ಆಮೆ’ಗಳ ಸಂರಕ್ಷಣೆಗೆ ಪೂರಕ ವಾಗಿಲ್ಲ ಎಂಬ ಕಾರಣಕ್ಕೆ ಅಮೆರಿಕವು 2019ರಿಂದ ಭಾರತದ ಸಿಗಡಿ ರಫ್ತಿನ ಮೇಲೆ ನಿಷೇಧ ಹೇರಿದೆ. ಈ ನಿಷೇಧದ ತೆರವಿಗಾಗಿ ಪ್ರಯತ್ನಿಸುತ್ತಿರುವ ಸಾಗರ ಉತ್ಪನ್ನ ಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಂಪೆಡಾ)ವು ಭಾರತದ ತಂತ್ರಜ್ಞರಿಂದ ಅಭಿವೃದ್ಧಿಪಡಿಸಲಾದ ಟರ್ಟಲ್ ಎಕ್ಸ್‌ಕ್ಲೂಸರ್ ಡಿವೈಸ್ (ಟಿಇಡಿ) ಬಗ್ಗೆ ಅಮೆರಿಕದ ತಜ್ಞ ತಂಡಕ್ಕೆ ಮನವರಿಕೆ ಮಾಡಿಕೊಟ್ಟಿದ್ದು, ಈ ತಂತ್ರಜ್ಞಾನ ಬಳಕೆಗೆ ಹಸಿರು ನಿಶಾನೆ ದೊರಕಿದೆ.
ಭಾರತದಿಂದ ಹೊರ ದೇಶಗಳಿಗೆ ಸಿಗಡಿ ರಫ್ತಿನಲ್ಲಿ ಅಮೆರಿಕದ ಪಾಲು ಶೇ. 20ರಷ್ಟು. ವಾರ್ಷಿಕ ಬರೋಬರ್ರಿ 4,500 ಕೋಟಿ ರೂ.ಗಳ ವ್ಯವಹಾರ. ಆದರೆ ಭಾರತದಲ್ಲಿ ಆಳ ಸಮುದ್ರ ಮೀನುಗಾರಿಕೆಯ ಟ್ರಾಲರ್‌ಗಳು ಅಮೆರಿಕದ ನ್ಯಾಷನಲ್ ಓಶಿಯಾನಿಕ್ ಅಟ್ಮೋಸ್ಪೆರಿಕ್ ಅಡ್ಮಿನಿಸ್ಟ್ರೇಶನ್ (ಎನ್‌ಒಎಎ)ಯ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುದಾಗಿ ಅಮೆರಿಕದ ತಜ್ಞರು ತಗಾದೆ ಎತ್ತಿದ ಪರಿಣಾಮ 2019ರಿಂದ ಭಾರತದ ಸಮುದ್ರ ಸಿಗಡಿಗೆ ನಿಷೇಧ ಹೇರಲಾಗಿತ್ತು.
ಆಮೆ ಸಂತತಿ ನಾಶದ ಬಗ್ಗೆ ಆಕ್ಷೇಪ: ಭಾರತದ ಕರಾವಳಿಯ ಟ್ರಾಲರ್‌ಗಳು ಬಳಸುವ ಮೀನು ಹಿಡಿಯುವ ಬಲೆಗಳಲ್ಲಿ ಅತ್ಯಂತ ಸೂಕ್ಷ್ಮ ಹಾಗೂ ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳು ವಲ್ಲಿ ಬಹುಮುಖ್ಯ ಎನಿಸಿರುವ ಆಮೆಗಳು ಸಿಲುಕಿ ಪ್ರಾಣಕಳೆದು ಕೊಳ್ಳುತ್ತವೆ ಎಂಬ ಆಕ್ಷೇಪ ಅಮೆರಿಕದ ಎನ್‌ಒಎಎಯ ತಜ್ಞರದ್ದಾಗಿತ್ತು.
ನಿಷೇಧದಿಂದ ಬೆಲೆ ಕುಸಿತ: ಅಮೆರಿಕವು ಭಾರತದ ಸಮುದ್ರ ಸಿಗಡಿ ರಫ್ತಿನ ಮೇಲೆ ನಿಷೇಧ ಹೇರಿದ ಪರಿಣಾಮವಾಗಿ ಇತರ ದೇಶಗಳಿಗೆ ರಫ್ತಾಗುತ್ತಿದ್ದ ಸಿಗಡಿ ದರದಲ್ಲೂ ಇಳಿಕೆಗೆ ಕಾರಣವಾಯಿತು. ಬೆಲೆ ಇಳಿಕೆ, ರಫ್ತು ಕುಸಿತವು ಭಾರತದ ಮೀನುಗಾರರು ಹಾಗೂ ಅದಕ್ಕೆ ಪೂರಕವಾದ ಉದ್ದಿಮೆಗಳ ಮೇಲೂ ಪರಿಣಾಮ ಬೀರಲಾರಂಭಿಸಿತ್ತು. ಬ್ಲ್ಯಾಕ್ ಟೈಗರ್, ವೈಟ್ ಶ್ರಿಂಪ್, ಫ್ಲವರ್ ಶ್ರಿಂಪ್, ಕರ್ಕಡಿ, ಪೂವಲನ್ ಶ್ರಿಂಪ್ ಮೊದಲಾದ ಸಿಗಡಿ ದರ ಕೆಜಿಗೆ 100ರಿಂದ 200 ರೂನಷ್ಟು ಇಳಿಯಾಗಿತ್ತು ಎನ್ನುತ್ತದೆ ಎಂಪೆಡಾ ಅಂಕಿ ಅಂಶ.
ಏನಿದು ಹೊಸ ತಂತ್ರ?: ಅಮೆರಿಕವು ನಿಷೇಧಕ್ಕೆ ನೀಡಿರುವ ಕಾರಣಗಳ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಬಗೆಹರಿಸುವ ಹೊಣೆಯನ್ನು ಎಂಪೆಡಾವು ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಫಿಶರೀಸ್ ಟೆಕ್ನಾಲಜಿ (ಐಸಿಎಆರ್- ಸಿಐಎಫ್‌ಟಿ) ಸಂಸ್ಥೆಗೆ ವಹಿಸಿತ್ತು. ಮೀನುಗಾರಿಕಾ ಬಲೆಗಳಿಗೆ ಆಮೆ ಸಿಲುಕದಂತೆ ಬಳಸುವ ಸಾಧನ ಟರ್ಟಲ್ ಎಕ್ಸ್‌ಕ್ಲೂಡರ್ ಡಿವೈಸ್ (ಟಿಇಡಿ)ನ್ನು ಎನ್‌ಒಎಎಯ ಮಾರ್ಗಸೂಚಿಯಂತೆ ಐಸಿಎಆರ್ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಎಂಪೆಡಾ ಅಧಿಕಾರಿಗಳು ಎನ್‌ಒಎಎ ತಜ್ಞರಿಂದ ಈ ಟಿಇಡಿ ಸಾಧನಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವುದು ಎಂಪೆಡಾ ಪ್ರಕಟನೆ ತಿಳಿಸಿದೆ.
ಅದರಂತೆ ಈಗಾಗಲೇ ಎಂಪೆಡಾ ಕಳೆದ ಡಿಸೆಂಬರ್ ಹಾಗೂ ಈ ವರ್ಷದ ಜನವರಿ ತಿಂಗಳಲ್ಲಿ ವೆರವಲ್, ಮುಂಬೈ ಮತ್ತು ವಿಶಾಖಪಟ್ಟಣ ಬಂದರುಗಳಲ್ಲಿ ಕಾರ್ಯಾಗಾರಗಳ ಮೂಲಕ ಮೀನುಗಾರಿಕಾ ಅಧಿಕಾರಿಗಳಿಗೆ ಸಮುದ್ರದಲ್ಲಿ ಟಿಇಡಿ ಕಾರ್ಯನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಇದಾದ ಬಳಿಕ ಎನ್‌ಒಎಎಯ ಅಮೆರಿಕದ ಮೀನುಗಾರಿಕಾ ತಜ್ಞರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಿ ಕೊಚ್ಚಿಯಲ್ಲಿ ಇತ್ತೀಚೆಗೆ ಮೀನುಗಾರಿಕಾ ಅಧಿಕಾರಿಗಳಿಗೆ ಟಿಇಡಿ ರಚನೆ ಮತ್ತು ಅದರ ಪ್ರಾತ್ಯಕ್ಷಿಕೆ ಕುರಿತು ನಡೆದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಇದೀಗ ಎಲ್ಲಾ ಭಾರತೀಯ ಸಿಗಡಿ ಟ್ರಾಲರ್‌ಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಎಂಪೆಡಾವು ಮೀನುಗಾರಿಕಾ ಇಲಾಖೆಗಳ ಮೂಲಕ ಜಾಗೃತಿ ಮೂಡಿಸಲಿದೆ. ಈ ಟಿಇಡಿ ತಂತ್ರಜ್ಞಾನವನ್ನು ಬಳಸಿಕೊಂಡು ಸಿಗಡಿ ಹಿಡಿಯುವುದರಿಂದ ಸಮುದ್ರ ಸಿಗಡಿ ಅಮೆರಿಕಕ್ಕೆ ರಫ್ತು ಪುನರಾರಂಭಕ್ಕೆ ನೆರವಾಗಲಿದೆ ಹಾಗೂ ಇದರಿಂದ ಮೀನುಗಾರರ ಜೀವನೋಪಾಯವನ್ನು ಸುಧಾರಿಸಲಿದೆ ಎಂಬುದು ಎಂಪೆಡಾ ಆಶಯವಾಗಿದೆ.
ಫೆ.19ರಿಂದ 25ರವರೆಗೆ ಕೊಚ್ಚಿಯಲ್ಲಿ ಭಾರತದ ಕರಾವಳಿ ರಾಜ್ಯಗಳ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ (ಕರ್ನಾಟಕದಿಂದ ಮಲ್ಪೆಯ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಎಂಪೆಡಾ ಮಂಗಳೂರು ವಿಭಾಗದ ಹಿರಿಯ ಅಧಿಕಾರಿ) ಈ ಟಿಇಡಿ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಅಧಿಕಾರಿಗಳು ಮುಂದೆ ಸ್ಥಳೀಯವಾಗಿ ಮೀನುಗಾರರಿಗೆ, ಅದರಲ್ಲೂ ಮುಖ್ಯವಾಗಿ ಸಿಗಡಿ ಮೀನುಗಾರಿಕೆಯ ಬೋಟ್‌ಗಳವರಿಗೆ ಈ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಲಿದ್ದಾರೆ. ಆಮೆಗಳ ಸ್ನೇಹಿ ಮೀನುಗಾರಿಕಾ ಪದ್ಧತಿಯನ್ನು ಆಳ ಸಮುದ್ರದಲ್ಲಿ ಅಳವಡಿಸಿಕೊಳ್ಳುವ ಮೂಲಕ ಆಮೆಗಳ ಸಂತತಿ ರಕ್ಷಣೆ ಈ ಹೊಸ ತಂತ್ರಜ್ಞಾನ (ಟಿಇಡಿ) ಬಳಕೆಯ ಉದ್ದೇಶವಾಗಿದೆ.
- ರಾಜ್‌ಕುಮಾರ್ ನಾಯ್ಕ್, ಉಪ ನಿರ್ದೇಶಕರು, ಎಂಪೆಡಾ, ಮಂಗಳೂರು
ಸಿಗಡಿಗಳಲ್ಲೂ ಹಲವು ವಿಧ
ಆಳ ಸಮುದ್ರ ಮೀನುಗಾರಿಕೆ ಯಲ್ಲಿ ಬಹುವಿಧದ ಸಿಗಡಿಗಳಿವೆ. ಅದರಲ್ಲೂ ಮುಖ್ಯವಾಗಿ ಕರ್ನಾಟಕ ಕರಾವಳಿಯಲ್ಲಿ ಸ್ಥಳೀಯ ವಾಗಿ ಕರೆಯಲ್ಪಡುವ ತೇಂಬೆಲ್, ಕರ್ಕಡಿ (ಇವು ಗಾತ್ರದಲ್ಲಿ ಕಿರಿದು), ಮಂಡೆಟ್ಟಿ (ಬ್ರೌನ್ ಪ್ರಾನ್ಸ್), ಬೊಳ್ಳೆಟ್ಟಿ (ವೈಟ್ ಪ್ರಾನ್ಸ್), ಟೈಗರ್ ಪ್ರಾನ್ಸ್, ಲಾಬ್‌ಸ್ಟರ್, ರೆಡ್ ರಿಂಗ್ ಮೊದಲಾದ ಸಿಗಡಿ ವಿಧಗಳನ್ನು ಮೀನುಗಾರರು ಸಂಗ್ರಹಿಸುತ್ತಾರೆ. ಅದರಲ್ಲೂ ಬೊಳ್ಳೆಟ್ಟಿ, ಮಂಡೆಟ್ಟಿ ಹಾಗೂ ಟೈಗರ್ ಪ್ರಾನ್ಸ್ ಹೆಚ್ಚು ಬೇಡಿಕೆಯ ಸಿಗಡಿಗಳಾಗಿವೆ.