ಶಾಲಾ ಮಕ್ಕಳ ಸುರಕ್ಷತೆಗೆ ಬೇಕು ಯುದ್ಧೋಪಾದಿಯ ಕ್ರಮಗಳು...
Photo: PTI
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ/ದುರ್ಬಳಕೆಯ ದಾಖಲಾಗುತ್ತಿರುವ ಸಂಖ್ಯೆಯೇ ಮಿತಿ ಮೀರಿ ಹೋಗುತ್ತಿದೆ! ಇನ್ನು ದಾಖಲಾಗದವುಗಳ ಪ್ರಮಾಣ ಅದಿನ್ನೆಷ್ಟಿರಬಹುದೆಂದು ಆತಂಕವಾಗುತ್ತಿದೆ. ಕರ್ನಾಟಕದ ಇತ್ತೀಚೆಗಿನ ಪೊಕ್ಸೊ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ದಾಖಲಾದ ಅಂಕಿಅಂಶಗಳನ್ನೇ ನೋಡುವುದಾದರೆ-2021ರಲ್ಲಿ 2,880, 2022ರಲ್ಲಿ 3,189, 2023ರಲ್ಲಿ 3,791 ಪ್ರಕರಣಗಳು ದಾಖಲಾಗಿವೆ. ಅಂದರೆ ಪ್ರತೀ ದಿನ ರಾಜ್ಯದಲ್ಲಿ ಸರಾಸರಿ 8-10 ಮಕ್ಕಳು ಲೈಂಗಿಕ ದೌರ್ಜನ್ಯದಡಿ ಸಿಲುಕಿ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿದ್ದಾರೆ! ಇದು ಕೇವಲ ಮಕ್ಕಳ ವೈಯಕ್ತಿಕ ಅಚಾತುರ್ಯ, ದುಡುಕಿನ ವಿಷಯವೆಂದು ತಳ್ಳಿಹಾಕುವಂತಿಲ್ಲ. ಮಕ್ಕಳು ಮುಗ್ಧರು, ಅಮಾಯಕರು, ಅಸಹಾಯಕರೆಂದು ಭಾವಿಸಿಯೇ ಅವರ ರಕ್ಷಣೆಗೆಂದೇ ದೊಡ್ಡ ಪ್ರಮಾಣದ ಸರಕಾರಿ ವ್ಯವಸ್ಥೆಯನ್ನು ರೂಪಿಸಲಾಗಿದೆಯೆಂಬುದು ಗಮನಾರ್ಹ. ಹೀಗೆಂದೇ ಈ ಏರುತ್ತಿರುವ ಪ್ರಕರಣಗಳು ಆತಂಕಕಾರಿಯಷ್ಟೇ ಅಲ್ಲ. ಮಕ್ಕಳಿಗೆ ಸುರಕ್ಷಿತ ವಾತಾವರಣವನ್ನೂ, ಭವಿಷ್ಯವನ್ನೂ ಖಾತ್ರಿಗೊಳಿಸಲಾಗದ ಸರಕಾರಿ ವ್ಯವಸ್ಥೆಯ ಗುರುತರ ಲೋಪವೂ ಹೌದು.
ಈ ಎಲ್ಲದರ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಇದೇ ಜನವರಿ ತಿಂಗಳ 8ನೆಯ ತಾರೀಕು, ಮಕ್ಕಳ ಸುರಕ್ಷತೆ ಸಂಬಂಧಿತ ಮತ್ತೊಂದು ಸರಕಾರಿ ಆದೇಶವನ್ನು ಹೊರಡಿಸಿದೆ. ಅದರಂತೆ ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ ಮಕ್ಕಳಿಗೆ ಪೊಕ್ಸೊ ಕಾಯ್ದೆ-2012ರ ಬಗ್ಗೆ ಜಾಗೃತಿ ಮೂಡಿಸಬೇಕು. ಇದಕ್ಕೆ ತೆರೆದ ಮನೆ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016ರ ನೀತಿ ನಿಯಮಗಳನ್ನು ಪರಿಗಣಿಸಲು ಆದೇಶಿಸಲಾಗಿದೆ. 2013ರಿಂದಲೇ ತೆರೆದ ಮನೆ ಕಾರ್ಯಕ್ರಮ ಜಾರಿಯಲ್ಲಿದೆ. ತೆರೆದ ಮನೆ ಎಂದರೆ ಪ್ರತೀ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ, ಶಾಲಾ ಮಕ್ಕಳನ್ನು ಸರತಿಯಂತೆ ಪ್ರತೀ ಗುರುವಾರ ಠಾಣೆಗೆ ಕರೆತಂದು, ಮಕ್ಕಳಿಗಿರುವ ಕಾನೂನುಗಳ ಬಗ್ಗೆ ವಿವರವಾದ ಮಾಹಿತಿ ನೀಡುವುದು ಅಥವಾ ಪೊಲೀಸ್ ಅಧಿಕಾರಿಗಳೇ ನಿಯಮಿತವಾಗಿ ಶಾಲೆ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಬೇಕು. ಆ ಮೂಲಕ ಮಕ್ಕಳಿಗೆ ಸುತ್ತಮುತ್ತಲ ಅಪರಾಧಿಕ ಜಗತ್ತು ಮತ್ತು ಅದಕ್ಕಿರುವ ಶಿಕ್ಷೆಯ ಅರಿವು ಮೂಡಿಸಲು ಸಾಧ್ಯವಾಗುತ್ತದೆ. ಮಕ್ಕಳಿಗೇನಾದರೂ ಸಮಸ್ಯೆ ಉಂಟಾದರೆ ಪೊಲೀಸರನ್ನು ಯಾವುದೇ ಭೀತಿ ಇಲ್ಲದೇ ಸಂಪರ್ಕಿಸಲು ಸಾಧ್ಯವಾಗುತ್ತದೆ.
ಇದರ ಜೊತೆಗೆ ಈಗಾಗಲೇ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016ನ್ನು ಜಾರಿ ಮಾಡಬೇಕೆಂದು ಶಿಕ್ಷಣ ಇಲಾಖೆಗೆ ಸರಕಾರಿ ಆದೇಶ ನೀಡಲಾಗಿದೆ. 18 ವರ್ಷದೊಳಗಿನ ಎಲ್ಲರನ್ನೂ ನಮ್ಮ ಕಾನೂನು ಮಕ್ಕಳು ಎಂದೇ ಭಾವಿಸುತ್ತದೆ. ದಿನದಿಂದ ದಿನಕ್ಕೆ ಬಾಲ್ಯವಿವಾಹಗಳು ಹೆಚ್ಚುತ್ತಿವೆ. ಅಂತೆಯೇ ಕಳೆದ ಮೂರು ವರ್ಷಗಳಲ್ಲಿ 45,557 ಬಾಲಕಿಯರು ಬಾಲತಾಯಂದಿರಾಗಿದ್ದಾರೆಂದು ದಾಖಲೆಗಳು ಹೇಳುತ್ತಿವೆ. ಮಕ್ಕಳು ಯಾವುದ್ಯಾವುದೋ ಕಾರಣದಿಂದ ಮನೆ ಬಿಟ್ಟು ಹೋಗುವುದು, ದುಷ್ಟರ ಕೈಗೆ ಸಿಕ್ಕಿ ಹಾಕಿಕೊಂಡು ಭೀಕರ ಪರಿಣಾಮಗಳನ್ನು ಎದುರಿಸುವುದು, ಲೈಂಗಿಕ ದೌರ್ಜನ್ಯ, ಕಿರುಕುಳ, ಅತ್ಯಾಚಾರದಂತಹ ದುರ್ಘಟನೆಗೆ ತುತ್ತಾಗುವುದು ಹೆಚ್ಚಾಗುತ್ತಿದೆ. ಇಂತಹ ಘಟನೆಗಳು ಜರುಗಿದ ನಂತರ, ಅದರ ಬಗ್ಗೆ ಕಾನೂನು, ಪರಿಹಾರ, ಪುನರ್ವಸತಿ ಎಂದು ಸರಕಾರದ ವಿವಿಧ ಇಲಾಖೆಗಳಿಂದ ಬಹಳಷ್ಟು ಬೆಂಬಲ ದೊರೆಯುವ ಸಾಧ್ಯತೆ ಇದೆ. ಆದರೆ ಶಿಕ್ಷಣ ಇಲಾಖೆಯಲ್ಲಿ ಮಾತ್ರ ಮಕ್ಕಳು ನೇರವಾಗಿ, ದುರ್ಘಟನೆ ನಡೆಯುವ ಮೊದಲಿಗೇ ಸುರಕ್ಷಿತಗೊಳಿಸಲು, ಜಾಗೃತಿ ಮೂಡಿಸಲು ಸಿಕ್ಕುತ್ತಾರಷ್ಟೇ. ಒಮ್ಮೆ ಮಕ್ಕಳು ತೊಂದರೆಗೆ ಸಿಕ್ಕಿಹಾಕಿಕೊಂಡ ನಂತರ, ಮೊದಲಿನಂತೆ ಶಿಕ್ಷಣದಲ್ಲಿ ತೊಡಗಲು, ಸಂತೋಷದಿಂದಿರಲು, ಭವಿಷ್ಯದಲ್ಲಿ ಏನನ್ನಾದರೂ ಸಾಧಿಸಲು ಮುನ್ನುಗ್ಗುವ ನಿರಾಳತೆ ಸಾಧ್ಯವಾಗದಿರಬಹುದು.
ಹೀಗಾಗಿ ಇಂತಹ ದುರ್ಘಟನೆಗಳು ನಡೆಯದಂತೆ ಮಕ್ಕಳನ್ನು ಸುರಕ್ಷಿತವಾಗಿಡಬೇಕೆಂದೇ ಬಹಳಷ್ಟು ಕಾರ್ಯಕ್ರಮ, ಯೋಜನೆ, ನೀತಿ ನಿಯಮಗಳನ್ನು ಮಕ್ಕಳ ಮೇಲಿನ ಕಾಳಜಿಯಿಂದ ಸರಕಾರ ಕಾಲಕಾಲಕ್ಕೆ ರೂಪಿಸುತ್ತಾ ಬಂದಿದೆ. ಆದರೆ ಅದರ ಅನುಷ್ಠಾನವು ವಿಕೇಂದ್ರೀಕೃತ ನೆಲೆಗಳಲ್ಲಿ ಪರಿಣಾಮಕಾರಿಯಾಗಿ ಆಗದೇ ಇರುವುದರಿಂದ ನಿರೀಕ್ಷಿತ ಪರಿಣಾಮವನ್ನು ಕಾಣಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮೊದಲ ಹಂತದಲ್ಲಿ ಈ ಎಲ್ಲ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಸರಕಾರಿ ಆದೇಶಗಳ ಕುರಿತಂತೆ ಸಂಬಂಧಿಸಿದ ಎಲ್ಲ ಇಲಾಖೆಗಳ ಪ್ರತಿಯೊಂದು ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪುನಶ್ಚೇತನ ತರಬೇತಿ, ಜಾಗೃತಿ ಕಾರ್ಯಾಗಾರಗಳನ್ನು ಎಲ್ಲ ಹಂತಗಳಲ್ಲಿಯೂ, ವಿಕೇಂದ್ರೀಕೃತ ನೆಲೆಗಳಲ್ಲಿ ಆಗು ಮಾಡಬೇಕಿದೆ.
ಎರಡನೆಯ ಹಂತದಲ್ಲಿ 18 ವರ್ಷದೊಳಗಿನ ಮಕ್ಕಳು- ಅವರು ಯಾವುದೇ ಇಲಾಖೆಯ ಶಾಲೆ, ಕಾಲೇಜು, ವಸತಿ ಶಾಲೆ, ವಸತಿ ನಿಲಯ, ಪುನರ್ವಸತಿ ಕೇಂದ್ರ, ರಕ್ಷಣಾಗೃಹ... ಎಲ್ಲೇ ಇದ್ದರೂ ಅವರು ಎಲ್ಲೆಲ್ಲಾ ಹೇಗೆಲ್ಲಾ ದೌರ್ಜನ್ಯಕ್ಕೆ, ಸಂಕಷ್ಟಕ್ಕೆ, ದುರ್ಬಳಕೆಗೆ ಈಡಾಗುತ್ತಾರೆ ಎಂಬ ಸಾಧ್ಯತೆಯ ಕುರಿತು ಅಂಕಿಅಂಶಗಳು, ಜ್ವಲಂತ ಉದಾಹರಣೆಗಳ ಮೂಲಕ ನಿರಂತರವಾಗಿ ಮಕ್ಕಳಿಗೆ ಜಾಗೃತಿ ಮೂಡಿಸುತ್ತಾ ಹೋಗಬೇಕಿದೆ. ಅದನ್ನು ಶಾಲೆಯ ಪ್ರಾರ್ಥನೆಯ ಸಂದರ್ಭದಲ್ಲಿ, ಬಿಡುವಿನ ಸಮಯದಲ್ಲಿ, ರಾಷ್ಟ್ರೀಯ, ರಾಜ್ಯ ಮಟ್ಟದ ಹಬ್ಬಗಳ ಆಚರಣೆಯ ಸಂದರ್ಭಗಳಲ್ಲಿ, ನೈತಿಕ ಶಿಕ್ಷಣ ಬೋಧನೆಯ ಸಂದರ್ಭದಲ್ಲಿ, ಪಾಠಗಳ ಮಧ್ಯದಲ್ಲಿಯೂ ಸಾಧ್ಯವಾದಷ್ಟೂ ತಿಳಿ ಹೇಳುತ್ತಾ ಹೋಗಬೇಕು. ಈ ಕುರಿತು ಸರಕಾರವು ಸಮರ್ಪಕ ಬೋಧನಾ ಪಠ್ಯವನ್ನು ತಜ್ಞರ ಸಮಿತಿಯ ಮೂಲಕ ರೂಪಿಸುವುದು ಒಳ್ಳೆಯದು.
ಮೂರನೆಯ ಹಂತದಲ್ಲಿ ಪ್ರತೀ ಶಾಲೆಯಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ಯಾವ ಯಾವ ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಲು ಸರಕಾರದಿಂದ ಆದೇಶವಾಗಿದೆಯೋ ಅದನ್ನು ಅನುಷ್ಠಾನಗೊಳಿಸಲು ತಕ್ಷಣವೇ ಗಮನಹರಿಸಬೇಕು. ಉದಾಹರಣೆಗೆ- ಸಿಸಿ ಟಿವಿ ಅಳವಡಿಕೆ, ರಕ್ಷಣಾ ಸಿಬ್ಬಂದಿಯ ಆಯ್ಕೆಯಲ್ಲಿ ಕಠಿಣ ಪರೀಕ್ಷಾ ವಿಧಾನಗಳು, ಮಕ್ಕಳನ್ನು ಶಾಲೆಗೆ ಕೊಂಡೊಯ್ಯುವ ಯಾವುದೇ ವಾಹನಗಳ ಚಾಲಕರ ಸನ್ನಡತೆ ಬಗ್ಗೆ ಪೊಲೀಸ್ ಇಲಾಖೆಯಿಂದ ಪ್ರಮಾಣ ಪತ್ರ ಪಡೆಯುವುದಲ್ಲದೆ, ಅವರ ಬಗ್ಗೆ ನಿರಂತರ ಜಾಗರೂಕತೆ ವಹಿಸುವಂತಹ, ಯಾವುದೇ ಸಂಶಯಾಸ್ಪದ ವ್ಯಕ್ತಿಗಳನ್ನು ಕೆಲಸಕ್ಕೆ ನೇಮಿಸದಂತಹ ಜಾಗೃತ ವ್ಯವಸ್ಥೆ ಜಾರಿಯಾಗಬೇಕು.
ಅನೇಕ ಸಂದರ್ಭದಲ್ಲಿ ವಿವಿಧ ಕಾರಣಗಳಿಂದಾಗಿ, ಮಕ್ಕಳಿಗೆ ಮನೆಯಲ್ಲಿ ಪೋಷಕರಿಂದ ನಿರೀಕ್ಷಿತ ಗುಣಾತ್ಮಕ ಸಮಯವಾಗಲಿ, ಅಕ್ಕರೆ, ಪ್ರೀತಿ, ಕಾಳಜಿಯಾಗಲೀ ದೊರಕದೆ ಹೋಗಬಹುದು. ಆದರೆ ಶಾಲೆಗಳಲ್ಲಿ ಅದರ ಕೊರತೆಯಾಗದಂತೆ ನೋಡಿಕೊಳ್ಳು ವಂತಹ ವಾತಾವರಣವಿರುವುದು ಕಡ್ಡಾಯವಾಗಬೇಕು. ಶಿಕ್ಷೆಯು ಎಲ್ಲ ರೀತಿಯಲ್ಲೂ ನಿಷೇಧಗೊಂಡು, ಶಿಕ್ಷಕರು ಪ್ರತೀ ಮಗುವಿನೊಂದಿಗೂ ಪ್ರೀತಿಯಿಂದ ವ್ಯವಹರಿಸುವಂತಾದರೆ ಮಕ್ಕಳು ತಮ್ಮ ಸಂಕಷ್ಟಗಳನ್ನು ಮುಕ್ತವಾಗಿ ಅವರೊಂದಿಗೆ ಹಂಚಿಕೊಳ್ಳುತ್ತಾರೆ. ಶಿಕ್ಷಕರು ಅದನ್ನು ತಕ್ಷಣವೇ ಪರಿಹರಿಸಲು ಸಾಧ್ಯವಾಗಿ, ಮುಂದೆ ಮಕ್ಕಳು ಅನಿರೀಕ್ಷಿತ ದೊಡ್ಡ ಮಟ್ಟದ ಗಂಡಾಂತರಗಳಿಗೆ ಸಿಲುಕುವುದನ್ನು ಈ ಮೂಲಕ ತಪ್ಪಿಸಬಹುದಾಗಿರುತ್ತದೆ. ಈ ನಿಟ್ಟಿನಲ್ಲಿ ವಿಕೇಂದ್ರೀಕೃತ ನೆಲೆಯಲ್ಲಿ ಕೆಳಗಿನ ಹಂತದವರೆಗೆ ಮಕ್ಕಳ ಸುರಕ್ಷತೆ ಬಗ್ಗೆ ಎಲ್ಲ ಅಧಿಕಾರಿಗಳು, ಸಿಬ್ಬಂದಿಗೆ ವಾರಕ್ಕೊಮ್ಮೆ ಸಭೆ ನಡೆಸಿ ಎಚ್ಚರಿಕೆಯನ್ನು, ಜಾಗೃತಿಯನ್ನು ಕಡ್ಡಾಯವಾಗಿ ಕೊಡುವಂತಾಗಬೇಕು.
ಪ್ರತೀ ಶಿಕ್ಷಣ ಸಂಸ್ಥೆಯಲ್ಲಿ ಕಡ್ಡಾಯವಾಗಿ ಮಕ್ಕಳ ರಕ್ಷಣಾ ಸಮಿತಿಯನ್ನು ರಚಿಸಬೇಕೆಂದು ರಾಜ್ಯ ಮಕ್ಕಳ ರಕ್ಷಣಾ ನೀತಿ-2016ರಲ್ಲೇ ಘೋಷಣೆಯಾಗಿದ್ದು, ಈ ಕುರಿತು ಸರಕಾರಿ ಆದೇಶ ಜಾರಿಯಾಗಿದೆ. ಆದರೆ ಇದರ ಪರಿಣಾಮಕಾರಿ ಅನುಷ್ಠಾನವಾಗದಿರುವುದು ಅಕ್ಷಮ್ಯ. ಈ ಮಕ್ಕಳ ರಕ್ಷಣಾ ಸಮಿತಿಯಲ್ಲಿ ಆಯಾ ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಸಂಸ್ಥೆಯ ಮುಖ್ಯಸ್ಥರು ಅಧ್ಯಕ್ಷರಾಗಿರುತ್ತಾರೆ. ಒಬ್ಬ ಶಿಕ್ಷಕರನ್ನು ರಕ್ಷಣಾಧಿಕಾರಿಯಾಗಿ ನೇಮಿಸಿಕೊಳ್ಳಬೇಕಿರುತ್ತದೆ. ಶಾಲೆಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇಬ್ಬರು ಅಥವಾ ಮೂವರು ಪೋಷಕರು ಸಮಿತಿಯ ಸದಸ್ಯರಾಗಿರಬೇಕು. ಅದರಲ್ಲಿ ಕಡ್ಡಾಯವಾಗಿ ಒಬ್ಬ ಮಹಿಳಾ ಪೋಷಕರು ಇರಬೇಕು. ಶಾಲಾ ಆಡಳಿತ ಮಂಡಳಿ, ಪೋಷಕರ ಸಂಘ, ಶಿಕ್ಷಕರ ಸಂಘಗಳಿದ್ದರೆ ಅದರಿಂದ ಒಬ್ಬರನ್ನು ಸಮಿತಿಯ ಸದಸ್ಯರಾಗಿ ನೇಮಿಸಬೇಕು. 8ನೇ ತರಗತಿಗಿಂತ ಉನ್ನತ ಮಟ್ಟದಲ್ಲಿರುವ ಎರಡು ಅಥವಾ ಹೆಚ್ಚಿನ ಗಂಡು ಮತ್ತು ಹೆಣ್ಣು ವಿದ್ಯಾರ್ಥಿಗಳನ್ನು ಸಮಾನ ಸಂಖ್ಯೆಯಲ್ಲಿ ಹೊಂದಿರುವ ಹಾಗೆ ಸಮಿತಿಯ ಸದಸ್ಯರನ್ನಾಗಿ ತೆಗೆದುಕೊಳ್ಳಬೇಕು. ಭದ್ರತಾ ಸಿಬ್ಬಂದಿ ಇದ್ದರೆ, ಅವರನ್ನೂ ಸದಸ್ಯರನ್ನಾಗಿ ನೇಮಿಸಬೇಕು.
ಈ ಮಕ್ಕಳ ರಕ್ಷಣಾ ಸಮಿತಿ ಮೂರು ತಿಂಗಳಿಗೆ ಒಂದು ಬಾರಿ ಅಥವಾ ಯಾವುದೇ ಮಗುವಿನ ಸುರಕ್ಷತೆ ಉಲ್ಲಂಘನೆ ಆದ ಸಂದರ್ಭದಲ್ಲಿ ಸಭೆ ಸೇರಿ ಕೂಲಂಕಷ ವಿಚಾರಣೆ ನಡೆಸಬೇಕು. ಅದರಲ್ಲಿ ಮಕ್ಕಳಿಗೆ ಯಾವುದೇ ಬೆದರಿಕೆ, ಅಪಾಯ ಇದ್ದರೆ ಆ ಕುರಿತು ಮುಕ್ತವಾಗಿ ಚರ್ಚಿಸಬೇಕು. ಸುರಕ್ಷಾ ಕ್ರಮಗಳನ್ನು ಬಲಪಡಿಸಲೆಂದು ಹೆಚ್ಚುವರಿ ಕ್ರಮ ಕೈಗೊಳ್ಳಬೇಕು. ಮಕ್ಕಳ ಸಂಬಂಧಿತವಾದ ಯಾವುದೇ ಕುಂದುಕೊರತೆ, ದೂರು, ಶಿಫಾರಸುಗಳ ಬಗ್ಗೆ ಆದ್ಯತೆಯಾಗಿ ಪರಿಗಣಿಸಬೇಕು. ಅವನ್ನು ತಕ್ಷಣವೇ ಅನುಷ್ಠಾನಕ್ಕೆ ತರಬೇಕು ಎಂದು ಸರಕಾರಿ ಆದೇಶವು ಹೇಳುತ್ತದೆ.
ಮುಂದುವರಿದು ಮಕ್ಕಳ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ಸಂಭವಿಸಿದ್ದು ಖಾತ್ರಿಯಾದ ತಕ್ಷಣ ಆಯಾ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಗೆ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಅಥವಾ ಮಕ್ಕಳ ವಿಶೇಷ ಪೊಲೀಸ್ ಘಟಕಕ್ಕೆ ವರದಿ ನೀಡಿ ಮುಂದಿನ ಕ್ರಮಕ್ಕೆ ಅನುವು ಮಾಡಿಕೊಡಬೇಕು. ವಿಚಾರಣೆಯ ಸಂದರ್ಭದಲ್ಲಿ ಈ ಸಂಬಂಧಿತವಾಗಿ ಯಾವುದೇ ಬಾಹ್ಯ ತಜ್ಞರ ಸಹಕಾರವನ್ನು ಪಡೆಯಬಹುದಾಗಿರುತ್ತದೆ. ಇಂತಹ ಸಮಯ ದಲ್ಲಿ ಮಕ್ಕಳ ಮನಸ್ಸಿಗೆ ಘಾಸಿಯಾಗದಂತೆ ಸೂಕ್ಷ್ಮವಾಗಿ ವ್ಯವಹರಿಸಬೇಕಾದದ್ದೂ ಕಡ್ಡಾಯವಾಗಿರುತ್ತದೆ.
ಜೊತೆಗೆ, ಪ್ರತೀ ಶಿಕ್ಷಣ ಸಂಸ್ಥೆಯಲ್ಲಿ ದೂರು ಅಥವಾ ಸಲಹಾ ಪೆಟ್ಟಿಗೆಯನ್ನು ಕಡ್ಡಾಯವಾಗಿ ಇಟ್ಟಿರಬೇಕು. ಮಕ್ಕಳು ಇದರಲ್ಲಿ ಮುಕ್ತವಾಗಿ ಯಾವುದೇ ಸಮಸ್ಯೆಯನ್ನು ಬರೆದು ಹಾಕಬಹುದು. ಅದನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಖಾತ್ರಿಗೊಳಿಸಬೇಕು. ದೂರು ಪೆಟ್ಟಿಗೆಯನ್ನು ಬಳಸುವಂತಹ ತಿಳಿವನ್ನು ಮಕ್ಕಳಿಗೆ ನೀಡಬೇಕು. ಮಕ್ಕಳ ರಕ್ಷಣಾ ಸಮಿತಿಯ ಅಧ್ಯಕ್ಷರು ವಾರಕ್ಕೊಮ್ಮೆ ಪೆಟ್ಟಿಗೆಯನ್ನು ತೆಗೆದು ನೋಡಿ, ಪರಿಶೀಲಿಸಿ ತಕ್ಷಣ ದೂರಿಗೆ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಸಂಸ್ಥೆಯಲ್ಲಿ ಆಪ್ತಸಮಾಲೋಚಕರನ್ನು ನೇಮಿಸಿಕೊಳ್ಳುವುದೂ ಇಂದಿನ ದಿನಗಳಲ್ಲಿ ಅತ್ಯಂತ ಅವಶ್ಯಕವಾಗಿದೆ. ಪ್ರತೀ ಶಿಕ್ಷಣ ಸಂಸ್ಥೆಯಲ್ಲಿ ಇದು ಸಾಧ್ಯವಾಗದಿದ್ದರೆ, ನಿಗದಿತ ವಲಯದ ಶಾಲೆಗಳ ಸಮುಚ್ಚಯ ಅಥವಾ ವಿಭಾಗೀಯ ಮಟ್ಟದಲ್ಲಿ ಒಬ್ಬ ಆಪ್ತ ಸಮಾಲೋಚಕರನ್ನಾದರೂ ನೇಮಿಸಿಕೊಳ್ಳಲು ಸರಕಾರ ಕಡ್ಡಾಯಗೊಳಿಸಬೇಕು. ಮೊದಲಿಗೆ ಇದು ಸರಕಾರಿ ಶಾಲಾ ವ್ಯವಸ್ಥೆಯಲ್ಲಿ ಜಾರಿಯಾಗಲು ಕ್ರಮ ಕೈಗೊಳ್ಳಬೇಕು.
ಮುಖ್ಯವಾಗಿ ಶಾಲೆಯಿಂದ ಹೊರಗಿರುವ ಪ್ರತೀ ಮಗುವನ್ನು ಕಡ್ಡಾಯವಾಗಿ ಒಳ ತರಲು ಸಶಕ್ತ ಕ್ರಮಗಳನ್ನು ರೂಪಿಸುವ ತುರ್ತು ಇದೆ. ಶಾಲೆಯಿಂದ ಹೊರಗಿರುವ ಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗೆ, ದೌರ್ಜನ್ಯಕ್ಕೆ ತುತ್ತಾಗುವುದು ದಾಖಲೆಗಳಿಂದ ಸಾಬೀತಾಗುತ್ತಾ ಬಂದಿದೆ. ಹೀಗಾಗಿ ಶತಾಯಗತಾಯ ಶಾಲೆಯಿಂದ ಹೊರಗಿರುವ ಮಕ್ಕಳನ್ನು ಒಳತರುವುದು ಶಿಕ್ಷಣ ಇಲಾಖೆಯ ಜೊತೆಗೆ ಸೇರಿ ಇನ್ನಿತರ ಸಂಬಂಧಿತ ಇಲಾಖೆಗಳ ಪ್ರಮುಖ ಆದ್ಯತೆಯಾಗಬೇಕಿದೆ. ಇಂತಹ ಮಕ್ಕಳಿರುವ ಪ್ರತೀ ಕುಟುಂಬವನ್ನೂ ಸಂಪರ್ಕಿಸಿ ಮನ ಒಲಿಸಿ ಮಕ್ಕಳನ್ನು ಶಾಲೆಗೆ ಕರೆತರಬೇಕು. ಯಾವುದೇ ಮಗು ಶಾಲೆಯನ್ನು ಅರ್ಧಕ್ಕೇ ತೊರೆದು ಹೋಗದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಕ್ಕಳನ್ನು ಶಾಲೆಗೆ ಸೇರಿಸಲು, ಅವರ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸಲು ತೊಂದರೆ ಇರುವ ಕುಟುಂಬಗಳಿಗೆ, ದಾನಿಗಳ ನೆರವಿನಿಂದ ಮಗುವಿನ ವಿದ್ಯಾಭ್ಯಾಸದ ಖರ್ಚನ್ನು ಭರಿಸುವ, ದೀರ್ಘ ಕಾಲದವರೆಗೆ ಮಗುವಿನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಇಡುಗಂಟು ಇಡುವ ಯೋಜನೆಗಳನ್ನು ರೂಪಿಸಬಹುದು. ಮಗು ಎಸೆಸೆಲ್ಸಿ ಮುಗಿಸಿದ ನಂತರ ಹಣ ಅದರ ಖಾತೆಗೆ ವರ್ಗಾವಣೆ ಮಾಡಬಹುದು.
ಪ್ರತೀ ಶಾಲೆಯಲ್ಲಿ ಕಡ್ಡಾಯವಾಗಿ ಮಕ್ಕಳ ರಕ್ಷಣಾ ಸಮಿತಿಗಳನ್ನು ರೂಪಿಸಲು ಹಾಗೂ ಅವು ನಿಯಮಿತವಾಗಿ ಸಭೆ ಸೇರಿ ಮಕ್ಕಳ ಸಮಸ್ಯೆಗಳ ಕುರಿತು ಚರ್ಚಿಸುತ್ತಿವೆಯೇ ಎಂಬುದನ್ನು ಕಾಲಕಾಲಕ್ಕೆ ಮೇಲ್ವಿಚಾರಣೆ ನಡೆಸಿ ಪರಿಶೀಲಿಸಲು ಶಿಕ್ಷಣ ಇಲಾಖೆಯ ವಿಕೇಂದ್ರಿಕೃತ ವ್ಯವಸ್ಥೆಯನ್ನು ಸಶಕ್ತವಾಗಿ ಸಜ್ಜುಗೊಳಿಸಬೇಕಿದೆ. ಇತರ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುವ ವಸತಿ ಶಾಲೆ/ವಸತಿ ನಿಲಯಗಳಲ್ಲೂ ಈ ಶಿಸ್ತು ಪಾಲನೆಯಾಗಬೇಕು. ಮಕ್ಕಳ ರಕ್ಷಣಾ ಘಟಕವು ಇದರ ಕ್ರೋಡೀಕೃತ ವಿಚಾರಣಾ ಸಭೆಯನ್ನು ನಿಯಮಿತವಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಏರ್ಪಡಿಸುತ್ತಿರಬೇಕು.
ಮಕ್ಕಳ ಸಹಾಯವಾಣಿ 1,098, ಪೊಲೀಸ್ ಸಹಾಯವಾಣಿ 112 ಮತ್ತು ಆಯಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ಪ್ರತೀ ಶಾಲೆಯ ನೊಟೀಸ್ ಬೋರ್ಡ್ಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಅದರ ಉಪಯೋಗ ಮತ್ತು ಅನಿವಾರ್ಯತೆಯ ಕುರಿತು ಮಕ್ಕಳಿಗೆ ನಿರಂತರವಾಗಿ ಜಾಗೃತಿ ಮೂಡಿಸಬೇಕು. ಇದರೊಂದಿಗೆ, ಯಾವುದೇ ದೌರ್ಜನ್ಯಕ್ಕೀಡಾದ ಮಗುವಿನ ಗುರುತು ಹಾಗೂ ವೈಯಕ್ತಿಕ ವಿವರಗಳನ್ನು ಯಾವುದೇ ಪತ್ರಿಕಾ ಅಥವಾ ದೃಶ್ಯ, ಶ್ರವ್ಯ ಮಾಧ್ಯಮಗಳಲ್ಲಿ ಬಿತ್ತರಿಸುವುದು ಕಾನೂನಿನ ರೀತಿಯಲ್ಲಿ ಅಪರಾಧವಾಗಿದ್ದು, ಇಂತಹ ಅಪರಾಧಗಳು ಕಂಡು ಬಂದಲ್ಲಿ ತಕ್ಷಣವೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಅಂತಹ ಮಾಧ್ಯಮದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಪೊಲೀಸ್ ಮಕ್ಕಳ ರಕ್ಷಣಾ ಘಟಕ... ಇನ್ನಿತರ ಮಕ್ಕಳಿಗೆ ಸಂಬಂಧಿಸಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಂದು ಘಟಕವೂ ತಮ್ಮಷ್ಟಕ್ಕೆ ತಾವು ತಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿವೆ. ಆದರೆ ಈ ಎಲ್ಲಾ ಇಲಾಖೆ, ಸಮಿತಿ, ಘಟಕಗಳೂ ಒಗ್ಗೂಡಿ ಸಮನ್ವಯದಿಂದ ಕಾರ್ಯನಿರ್ವಹಿಸಲು ಸಾಧ್ಯವಾದರೆ ಮಕ್ಕಳ ಮೇಲಿನ ದೌರ್ಜನ್ಯವನ್ನು ಸಶಕ್ತವಾಗಿ ನಿಯಂತ್ರಿಸಲು ಖಂಡಿತವಾಗಿ ಸಾಧ್ಯವಾಗುತ್ತದೆ. ಹೀಗಾಗಿ ಈ ಎಲ್ಲಾ ಮಕ್ಕಳ ಸಂಬಂಧಿತ ಘಟಕಗಳನ್ನೂ ಒಳಗೊಂಡು ಪ್ರತೀ ತಿಂಗಳೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಮೇಲ್ವಿಚಾರಣಾ ಸಭೆಗಳು ನಡೆದು, ಮಕ್ಕಳ ಸುರಕ್ಷತೆ ಹಾಗೂ ಸಮಸ್ಯೆಗಳ ಇತ್ಯರ್ಥಕ್ಕೆ ಆಗುತ್ತಿರುವ ಕ್ರಮಗಳ ಕುರಿತು ಸುದೀರ್ಘವಾಗಿ ಚರ್ಚಿಸಲು ಹಾಗೂ ಇಲಾಖೆಗಳ ಮಧ್ಯೆ ಸಮನ್ವಯವನ್ನು ಸಾಧಿಸಲು ಪ್ರಯತ್ನಿಸಿದರೆ ಒಳ್ಳೆಯದು. ಈ ಎಲ್ಲ ಕ್ರಮಗಳೂ ಸಮರ್ಪಕವಾಗಿ ಅನುಷ್ಠಾನಗೊಂಡರೆ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಶೇ. 50 ಸಮಸ್ಯೆಗಳು ಖಂಡಿತ ಬಗೆಹರಿದಂತೆಯೇ! ಆ ನಿಟ್ಟಿನಲ್ಲಿ ಪ್ರಯತ್ನಗಳು ಯುದ್ಧೋಪಾದಿಯಲ್ಲಿ ಆಗುವ ತುರ್ತು ಇಂದು ನಮ್ಮೆದುರಿಗಿದೆ.