ಸಮುದಾಯಕ್ಕೆ ಶಿಕ್ಷಣದ ಮಹತ್ವ ಸಾರಿದ ಸೇವಾಲಾಲ್
ಇಂದು ಸಂತ ಸೇವಾಲಾಲ್ ಜಯಂತಿ

ಬಂಜಾರರ ಮೂಲ ಪುರುಷರಾದ ದಾದಮೋಲ ಮತ್ತು ರಾಧಿ ದಾದಿಯರು 3 ಭಿನ್ನ ಪ್ರದೇಶಗಳಿಂದ 3 ಜನರನ್ನು ದತ್ತು ಪಡೆದ ಮಕ್ಕಳಲ್ಲಿ ಬಂಜಾರರ ರಾಥೋಡರು, ಪೊಮ್ಮಾರ್, ಚವ್ಹಾಣ್ ಆಗಿದ್ದಾರೆ. ಮುಂದೆ ಇವರಿಂದ ಮೂರು ಪ್ರತ್ಯೇಕ ಬಂಜಾರ ಗೋತ್ರಗಳು ಹುಟ್ಟಿಕೊಂಡವು ಎಂಬ ಪ್ರತೀತಿ ಇದೆ. ಈ ಪರಂಪರೆಯಿಂದ ಹುಟ್ಟಿಬಂದ ಸೇವಾಲಾಲ್ ಒಬ್ಬ ಮಹಾತ್ಮರಾಗಿ, ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಪುರುಷರಾಗಿದ್ದಾರೆ. ಜೊತೆಗೆ ಆಶುಕವಿ, ಬಂಜಾರರ ದ್ರಾವಿಡ ಮೂಲದ ಕುಲಗುರು, ವೀರಸೇನಾನಿ, ನಾಟಿ ವೈದ್ಯ, ಭಾಯಾ (ಅಣ್ಣ) ಸಮುದಾಯದ ಮೊದಲ ದಾರಿದೀಪ ಆಗಿದ್ದವರು. ಬಂಜಾರರಲ್ಲಿ 64ಕ್ಕೂ ಹೆಚ್ಚಿನ ವೀರ ಪುರುಷರು ಇದ್ದು ಇವರಲ್ಲಿ ಸೇವಾಲಾಲ್ ಪ್ರಮುಖರಾಗಿದ್ದಾರೆ.
ಸಂತ ಸೇವಾಲಾಲರ ಜಯಂತಿಯನ್ನು ಸರಕಾರದಿಂದ ಪ್ರತಿವರ್ಷ ಫೆಬ್ರವರಿ 15ರಂದು ಆಚರಿಸಲಾಗುತ್ತಿದೆ.
ಸೇವಾಲಾಲರು ಕ್ರಿ.ಶ. 1739 ಫೆಬ್ರವರಿ 15ರಂದು ದಾವಣಗೆರೆಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿಯ ಸೂರಗೊಂಡನ ಕೊಪ್ಪ (ಭಾಯ ಘಡ)ದಲ್ಲಿ ಜನಿಸಿದರು ಎನ್ನಲಾಗುತ್ತದೆ.
ಸೇವಾಲಾಲರ ತಂದೆ ಭೀಮಾನಾಯ್ಕ ಬಹುದೊಡ್ಡ ವ್ಯಾಪಾರಿಯಾಗಿದ್ದರು. ರಸ್ತೆ ಇಲ್ಲದ ಕಾಲದಲ್ಲಿ ಸರಕುಗಳು, ಆಹಾರ ಸಾಮಗ್ರಿಗಳನ್ನು ನೂರಾರು ಎತ್ತುಗಳ ಮೇಲೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಾಡಿನ ಮಾರ್ಗಗಳಲ್ಲಿ ಸಾಗಿಸುವ ವೃತ್ತಿಯವರಾಗಿದ್ದರು.
ಸೇವಾಲಾಲರು ಸಾವಿರಾರು ಹಸುಗಳ ಒಡೆಯರಾಗಿದ್ದರು, ತಾಂಡದ ಜನರ ಅಚ್ಚುಮೆಚ್ಚಿನವರು. ಇವರ ವಿವಿಧ ಸೇವಾ ಮನೋಭಾವದ ಬಗ್ಗೆ ಸಮುದಾಯ ಜನರು ಬಯಲಾಟಗಳಲ್ಲಿ, ಲಾವಣಿಯ ಮೂಲಕ, ಕಥೆಕಟ್ಟಿ ರಾತ್ರಿ ಇಡೀ ಹಾಡುತ್ತಾರೆ. ಸೇವಾಲಾಲರ ಬಗ್ಗೆ ಇರುವ ಲಾವಣಿ ಹಾಡುಗಳಲ್ಲಿ ನೋಡುವುದಾದರೆ,
‘‘ಹಾತೇಮ ಕಾಟಿರೆ ಝಲನರೆ
ಗೋರೂರ ತಾಂಡೆನ ಜಾರೋ ಫೆವನರ
ತಾಂಡೋ ತಾಂಡೆಮ ಸೀಕವಾಡಿ ದೇವರ’’
ಅಂದರೆ, ‘‘ಕೈಯಲ್ಲಿ ಝಂಡ ಹಿಡಿದು, ಬಂಜಾರರ ತಾಂಡಕ್ಕೆ ಹೋಗುವ ತಾಂಡ ತಾಂಡಗಳಲ್ಲಿ ಶಾಲೆ ನೀಡಲು’’ ಎಂಬ ಹಾಡು ಸೇವಾಲಾಲರು ಶಿಕ್ಷಣಕ್ಕೆ ನೀಡಿದ ಮಹತ್ವವನ್ನು ಸಾರುತ್ತದೆ.
‘‘ಸೀಖ್ ಸೀಖೋ ಸೀಖನ್ ಸೀಖಾ ವೋ ಸೀಖೋಜಕೋ ಸೇನಿ ಭಲಾನ್ ಆಂಗ್ ಚಾಲಚ್’’ ಅಂದರೆ, ‘‘ಶಿಕ್ಷಣ ಕಲಿಯಿರಿ ಕಲಿತು ಕಲಿಸಿರಿ. ಕಲಿತವನು ಸರ್ವರನ್ನು ಒಗ್ಗೂಡಿಸಿ ಮುಂದೆ ಸಾಗುತ್ತಾನೆ’’ ಎನ್ನುವ ಸೇವಾಲಾಲರ ಈ ಮಾತುಗಳು ಈಗಲೂ ಬಡ ಸಮುದಾಯವಾಗಿ ಗುರುತಿಸಿಕೊಂಡ ಎಲ್ಲಾ ಸಮುದಾಯಗಳು ಅಕ್ಷರಶಃ ಪಾಲಿಸಬೇಕಾಗಿದೆ.
ಸೇವಾಲಾಲರು ಸಮುದಾಯದಲ್ಲಿ ಒಂದು ಶಾಸನ, ಪದ್ಧತಿ, ಕರ್ತವ್ಯ, ಹಕ್ಕು, ನ್ಯಾಯಶೀಲತೆ, (ಪಂಚಾಯತ್), ಕಲ್ಪ, ಸತ್ಕಾರ‌್ಯ, ಕ್ರಿಯೆ, ಗುಣ, ದೈವ, ಧರ್ಮ ಸೂತ್ರವನ್ನು ಸಮುದಾಯಕ್ಕೆ ಬೊದಿಸಿದ್ದಾರೆ.
ಸೇವಾಲಾಲರ ಸಮಾಜ ಸೇವೆ
ಸೇವಾಲಾಲ ಬಂಜಾರ ಸಮುದಾಯಕ್ಕೆ ಮಾತ್ರವಲ್ಲದೆ ಇತರ ಹಿಂದುಳಿದ ಸಮುದಾಯಕ್ಕೂ ಮಾರ್ಗರ್ದಕರಾಗಿದ್ದರು. ಅವರು ಅಪ್ಪಟ ನಾಟಿ ವೈದ್ಯರಾಗಿ ಅನೇಕರ ಪ್ರಾಣ ರಕ್ಷಣೆ ಮಾಡಿದ್ದಾರೆ.
ಅಲೆಮಾರಿ ಬಂಜಾರರ ಬದುಕಿನಿಂದ ರೋಸಿ ಹೋಗಿದ್ದ ಸೇವಾಲಾಲರು ಮೊದಲಿಗೆ ಒಂದೆಡೆ ನೆಲೆ ನಿಲ್ಲುವಂತೆ, ವ್ಯವಸಾಯ, ಪಶುಪಾಲನೆ ಮಾಡಲು ತಿಳುವಳಿಕೆ ಹಂಚಿದವರು.
ಅವರು ಸ್ತ್ರೀಯರಿಗೆ ಪುರುಷ ಸಮಾನವಾದ ಸ್ಥಾನಕ್ಕೆ ಆಗ್ರಹಿಸಿದ್ದರು. ಸೇವಾಲಾಲರು ಪರಿಸರ ಧರ್ಮವು, ಕಲಿಕೆಗೆ ಪೂಜಿಸುವ ಧರ್ಮವಾಗಿದೆ. ಇದರಿಂದ ಆರ್ಥಿಕ ಸಮಾನತೆ ಇರುತ್ತದೆ ಎಂದು ನಂಬಿದ್ದರು. ಹಾಗೆಯೇ ‘‘ಒಂದು ಬಟ್ಟಲು ನೀರು ಕೊಟ್ಟವರಿಗೆ ಊಟ ನೀಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು’’ ಎಂದವರು ಅವರು.
ಸೇವಾಲಾಲ್ ಆಪತ್ತಿನಿಂದ ಪಾರಾಗುವ ಯುದ್ಧ ತಂತ್ರ, ವಿಭಿನ್ನ ಜ್ಞಾನ ಹೇಳಿಕೊಟ್ಟಿದ್ದಾರೆ. ಸೇವಾಲಾಲರ ಹುಟ್ಟು, ಪವಾಡ ಕುರಿತ ಓಲೈಕೆಯ ನೂರಾರು ಲಾವಣಿ, ಹಾಡು, ಬಯಲಾಟಗಳಿವೆ.
ಸಂತ ಸೇವಾಲಾಲರ 286ನೇ ಜಯಂತಿಯ ಈ ಸಂದರ್ಭದಲ್ಲೂ ಬಂಜಾರ ಸಮುದಾಯ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದೆ. ಜೀವನಕ್ಕಾಗಿ ವಲಸೆ ಹೋಗುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ವಲಸೆ ಸಂದರ್ಭದಲ್ಲಿ ಕಬ್ಬು ಕಟಾವು, ಕಾಫಿ ಎಸ್ಟೇಟ್ ಹಾಗೂ ರಸ್ತೆ-ಕಟ್ಟಡಗಳ ಕೆಲಸದಲ್ಲಿ ತೊಡಗುವುದರಿಂದ ನಿರಂತರವಾಗಿ ಹಾವು ಕಚ್ಚಿ ಸಾಯುವ ಜೊತೆಗೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ದೇಶದ ಅನೇಕ ರಾಜ್ಯಗಳಲ್ಲಿ ಇಂದಿಗೂ ಮಕ್ಕಳನ್ನು ಮಾರಿ ಬದುಕುವ ಸ್ಥಿತಿ ಇದೆ. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಪ್ರದೇಶಗಳಿಗೆ ಬಂಜಾರರು ವಾರ್ಷಿಕವಾಗಿ 3,000ಕ್ಕೂ ಹೆಚ್ಚು ಜನ ವಲಸೆ ಹೋಗುತ್ತಾರೆ. ಇವರಲ್ಲಿ ಕನಿಷ್ಠ 100 ಮಕ್ಕಳು ಶಾಲಾ ವಂಚಿತರಾಗಿರುತ್ತಾರೆ. ನಗರ ಪಟ್ಟಣಗಳಿಗೆ ವಲಸೆ ಬರುವ ಸಾವಿರಾರು ಜನ ಲೆಕ್ಕಕ್ಕೆ ಸಿಗುತ್ತಿಲ್ಲ. ಬಂಜಾರ ಭಾಷೆಗೆ ಸಾಂವಿಧಾನಿಕ ಸ್ಥಾನಮಾನ ಅಗತ್ಯ ಸಹ ಇದೆ.
ಸೇವಾಲಾಲರ ಜಯಂತಿಯ ಈ ಸಂದರ್ಭದಲ್ಲಿ ಬೇಡಿಕೆ ಸಾಕಷ್ಟು ಇವೆ.
-ಬಂಜಾರ ಭಾಷೆಗೆ ಸಂವಿಧಾನಾತ್ಮಕ ಸ್ಥಾನಮಾನ ಸಿಗಬೇಕಾಗಿದೆ.
-3,300ಕ್ಕೂ ಹೆಚ್ಚಿನ ಲಂಬಾಣಿ ತಾಂಡಗಳು ಇಂದಿಗೂ ಸಂಪೂರ್ಣ ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡಿರುವುದಿಲ್ಲ. ಹೀಗಾಗಿ ಸರಕಾರದ ಬಹುತೇಕ ಸವಲತ್ತಿನಿಂದ ಸಮುದಾಯ ವಂಚಿತವಾಗಿದೆ. ಈ ಬಗ್ಗೆ ಜಾಗೃತಿ, ಅರಿವು ಇಲ್ಲ. ಶೇ. 100ರಷ್ಟು ಬಂಜಾರ ತಾಂಡಗಳು ಕಂದಾಯ ಗ್ರಾಮಗಳಾಗಬೇಕು.
-ತಾಂಡಗಳಿಗೆ ಶಾಲೆ, ನೀರು, ವಿದ್ಯುತ್, ಬ್ಯಾಂಕ್ ಸೇವೆ, ಹಾಲಿನ ಡೈರಿ, ಸೈಬರ್ ಸೆಂಟರ್, ಗ್ರಂಥಾಲಯ, ವೈದ್ಯಕೀಯ ಸೇವೆ, ಕಸೂತಿ ಕೇಂದ್ರ, ಕಲಾಕೇಂದ್ರ, ಅತ್ಯಾಚಾರ ಮುಕ್ತತೆ ಬರುವ ಜೊತೆಗೆ ಶೋಷಣೆ ಕೊನೆಗೊಳ್ಳಬೇಕಿದೆ.
-ಸಮುದಾಯದ ಸಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕವಾದಂತಹ ಅನೇಕ ಅಂಶಗಳನ್ನು ಸರಕಾರ ಪರಿಗಣಿಸಿ ಪ್ರೋತ್ಸಾಹ ನೀಡಬೇಕಾಗಿದೆ.
-ಸರಕಾರದ ಅನೇಕ ಜನಪರವಾದ ಉತ್ತಮ ಯೋಜನೆಗಳು ಈ ಸಮುದಾಯಕ್ಕೆ ಸಮರ್ಪಕವಾಗಿ ತಲುಪುತ್ತಿಲ್ಲ. ವಾಸಿಸುವನೇ ಒಡೆಯ ಕಾನೂನು ಜಾರಿಗೊಳ್ಳದೆ ಇವರ ಅಕ್ರಮ ಆಸ್ತಿಗಳು ಸಕ್ರಮವಾಗಿರುವುದಿಲ್ಲ.
-ಸಮುದಾಯದಲ್ಲಿ ಅನಾರೋಗ್ಯ ಅಪೌಷ್ಟಿಕತೆಯ ಸಮಸ್ಯೆ ಹೆಚ್ಚು ಇದೆ. ವಿಶೇಷವಾಗಿ ಮಕ್ಕಳು, ಗರ್ಭಿಣಿಯರು ಸಾಯುತ್ತಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೇಳುವ ಅಂಕಿ ಅಂಶಗಳ ಪ್ರಕಾರ ವಾರ್ಷಿಕವಾಗಿ ಬೆಂಗಳೂರು ನಗರದಲ್ಲೇ ಕನಿಷ್ಠ ವಾರ್ಷಿಕ 2,000 ಮಕ್ಕಳು ಕಾಣೆಯಾಗಿರುತ್ತಾರೆ. ಆ ಮಕ್ಕಳಲ್ಲಿ ಹೆಚ್ಚು ಬಂಜಾರ ಮಕ್ಕಳು, ಅಲೆಮಾರಿ, ಆದಿವಾಸಿ, ದಲಿತ ಮಕ್ಕಳಿದ್ದಾರೆ. ಇವರನ್ನು ವೇಶ್ಯಾವಾಟಿಕೆಗೆ, ಅಂಗಾಂಗ ಕೃಷಿಗೆ, ಸರ್ಕಸ್‌ಗಳಿಗೆ, ಸಂಶೋಧನೆಗಳಿಗೆ ಬಳಸಿಕೊಳ್ಳುತ್ತಿರುವ ಅನುಮಾನ ಇದೆ.
ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಂಜಾರರಲ್ಲಿ ಇರುವ ಬಡತನ, ಮೂಢನಂಬಿಕೆ ತೊಲಗಿಲ್ಲ.
ಇಂದಿಗೂ ಈ ಸಮುದಾಯ ಅಸ್ಪಶ್ಯತೆಯಿಂದ ಹೊರತಾಗಿಲ್ಲ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿರುವ ಬಂಜಾರ(ಲಂಬಾಣಿ) ಸಮುದಾಯಕ್ಕೆ ಒಳ ಮೀಸಲಾತಿಯಲ್ಲಿ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾದ, ವಾಸ್ತವವಾದ ಶಿಫಾರಸು ಸರಕಾರದಿಂದ ಅಗತ್ಯವಾಗಿದೆ.
ತಬ್ಬಲಿ ಸಮುದಾಯಗಳಾದ ಅನೇಕ ಅಲೆಮಾರಿ ಬುಡಕಟ್ಟುಗಳು, ಆದಿವಾಸಿಗರು ತಮ್ಮನ್ನು ತಾವು ಎಲ್ಲಾ ರೀತಿಯಲ್ಲಿಯೂ ಪ್ರಕಟಪಡಿಸಲು, ತಮ್ಮ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಸರಕಾರದ ಸಹಕಾರ ಬಯಸುತ್ತಿವೆ. ಹೀಗಾಗಿ ಅಲೆಮಾರಿ - ಬುಡಕಟ್ಟುಗಳ ಮ್ಯೂಸಿಯಂ ಅಗತ್ಯ ಇದೆ.
ಸೇವಾಲಾಲ್ ಅವರನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡಮಿಯ ಬೇಡಿಕೆಯ ಮೇರೆಗೆ ಪ್ರಸಕ್ತ ಸಾಲಿನಲ್ಲಿ ಸರಕಾರವು ಶ್ರೀ ಸಂತ ಸೇವಾಲಾಲ್ ಹೆಸರಿನಲ್ಲಿ ರೂಪಾಯಿ 1.00 ಲಕ್ಷ ಮೊತ್ತದ ಪ್ರಶಸ್ತಿಯನ್ನು ಸ್ಥಾಪಿಸಿದೆ. ಈ ಪ್ರಶಸ್ತಿಯನ್ನು ಬಂಜಾರರ ಹಿರಿಯ ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕಿ ಡಾ. ಬಿ.ಟಿ. ಲಲಿತನಾಯಕ್ ಅವರಿಗೆ ಬಂಜಾರ ಅಕಾಡಮಿ ವತಿಯಿಂದ ನೀಡಿರುವುದು ವಿಶೇಷವಾಗಿದೆ.