ಸಿದ್ದಾಪುರ: ನಿರ್ವಹಣೆ ಇಲ್ಲದೆ ಶಿಥಿಲಗೊಂಡ ಹಳೇ ಕಟ್ಟಡ; ಕೂಡಲೇ ತೆರವು ಮಾಡಲು ಸಾರ್ವಜನಿಕರ ಒತ್ತಾಯ
ಮಡಿಕೇರಿ: ಸಿದ್ದಾಪುರ ಪಟ್ಟಣದಲ್ಲಿ ಈ ಹಿಂದೆ ಪೊಲೀಸ್ ಠಾಣೆಯಾಗಿ ಕಾರ್ಯನಿರ್ವಹಿಸಿದ್ದ ಬ್ರಿಟಿಷರ ಕಾಲದ ಕಟ್ಟಡ ಇದೀಗ ಗಿಡಗಂಟಿ ಬೆಳೆದು ಶಿಥಿಲಗೊಂಡಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕಟ್ಟಡ ತೆರವಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಭಾರೀ ಅನಾಹುತ ಸಂಭವಿಸುವುದು ಗ್ಯಾರಂಟಿ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಪಟ್ಟಣದ ಹೃದಯ ಭಾಗದಲ್ಲಿರುವ ಈ ಕಟ್ಟಡವು ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಅಂಚೆ ಇಲಾಖೆಗೆ ಸೇರಿದೆ. ಇಲ್ಲಿರುವ ಕಟ್ಟಡವು ಬ್ರಿಟಿಷರ ಕಾಲದ್ದಾಗಿದ್ದು ಪತ್ರ ವ್ಯವಹಾರ ಟಪಾಲುಗಳು ಇಲ್ಲಿಂದಲೇ ನಡೆಯುತ್ತಿತ್ತು ಎನ್ನಲಾಗಿದೆ.
ತದನಂತರ ಕಟ್ಟಡದ ಒಂದು ಭಾಗವನ್ನು ಪೊಲೀಸ್ ಠಾಣೆಯಾಗಿ ಮಾರ್ಪಡಿಸಿ ಮತ್ತೊಂದು ಭಾಗದಲ್ಲಿ ಅಂಚೆ ಕಚೇರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಯವರ ಕಚೇರಿ ಕಾರ್ಯ ನಿರ್ವಹಿಸುತ್ತಿತ್ತು. ೨೦೦೮ರಲ್ಲಿ ಪೊಲೀಸ್ ಠಾಣೆಗೆ ನೂತನ ಕಟ್ಟಡ ನಿರ್ಮಾಣ ಗೊಂಡು ಸ್ಥಳಾಂತರ ಮಾಡಲಾಗಿದ್ದು, ಹಳೆ ಕಟ್ಟಡ ನಿರ್ವಹಣೆ ಇಲ್ಲದೆ ಪಾಳು ಬಿಡಲಾಗಿದೆ. ಇದೀಗ ಗೋಡೆಗಳಲ್ಲಿ ಗಿಡಗಳು ಬೆಳೆದು ಹೆಮ್ಮರವಾಗಿದ್ದು ಮರ ತೆರವಿಗೆ ಅರಣ್ಯ ಇಲಾಖೆಯಿಂದ ಅನುಮತಿಗೆ ಕಾಯ ಬೇಕಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಇದಕ್ಕೆ ಹೊಂದಿಕೊಂಡಿರುವ ಅಂಚೆ ಕಚೇರಿಯನ್ನು ಐದು ವರ್ಷಗಳ ಹಿಂದೆ ಕಬ್ಬಿಣದ ಸರಳುಗಳ ಸಹಾಯದಿಂದ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ಆದರೂ ಹೊಂದಿಕೊಂಡು ಇರುವ ಗೋಡೆಯು ಶಿಥಿಲಗೊಳ್ಳುತ್ತಿರುವುದರಿಂದ ಯಾವ ಸಂದರ್ಭದಲ್ಲಿ ಬೇಕಾದರೂ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಅಲ್ಲದೆ ಗೋಡೆಯಲ್ಲಿ ಬೆಳೆದ ಹದಿನೈದು ಅಡಿ ಎತ್ತರದ ಮರತೆರವು ಸಂದರ್ಭದಲ್ಲಿ ಹಾನಿ ಉಂಟಾಗಲಿದೆ.
ಭಾರೀ ಅನಾಹುತ ಸಂಭವಿಸುವ ಸಾಧ್ಯತೆ
ಕಟ್ಟಡಕ್ಕೆ ಹೊಂದಿಕೊಂಡು ಆಟೊರಿಕ್ಷಾ ನಿಲ್ದಾಣ ಹಾಗೂ ಗ್ರಾಮ ಪಂಚಾಯತ್ ಕಚೇರಿ, ಕರಡಿಗೋಡು ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಇದ್ದು ಗೋಡೆ ಕುಸಿದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ.
ಕಂದಾಯ, ಪೊಲೀಸ್, ಅಂಚೆ ಇಲಾಖೆಗೆ ಸೇರಿದ ಕಟ್ಟಡ ಇದಾಗಿದ್ದು, ಹಿಂದೆ ಇದೇ ಕಟ್ಟಡದಲ್ಲಿ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಹೊಂದಿದ್ದರು. ಈಗಾಗಲೇ ಅಂಚೆ ಇಲಾಖೆಗೆ ಸೇರಿದ ಭಾಗಗಳಿಗೆ ಕಬ್ಬಿಣ ಸರಳುಗಳು ಅಳವಡಿಸಿ, ಶೀಟ್ ಹಾಕಲಾಗಿದೆ. ಪೊಲೀಸ್ ಠಾಣೆ ಹೊಸ ಕಟ್ಟಡಕ್ಕೆ ವರ್ಗಾವಣೆ ಆದನಂತರ ಪಾಳು ಬಿಟ್ಟಿದ್ದು ಬೀಳುವ ಹಂತ ತಲುಪಿದೆ.
-ಕೆ.ಕೆ.ಚಂದ್ರಕುಮಾರ್, ಮಾಜಿ ಪ್ರಧಾನರು ಮಂಡಲ ಪಂಚಾಯತ್
ಸಿದ್ದಾಪುರ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣವಾಗಿದ್ದು, ವಾಹನ ದಟ್ಟಣೆಯು ಹೆಚ್ಚುತ್ತಿದೆ. ಹೃದಯ ಭಾಗದಲ್ಲಿ ಈ ಪಾಳು ಬಿದ್ದಿರುವ ಕಟ್ಟಡವನ್ನು ನೆಲಸಮ ಮಾಡಿದಲ್ಲಿ ಪಾರ್ಕಿಂಗ್ ಸಮಸ್ಯೆ ಇತ್ಯರ್ಥವಾಗಲಿದೆ. ಪಕ್ಕದಲ್ಲೆ ಆಟೊರಿಕ್ಷಾ ನಿಲ್ದಾಣವಿರುವುದರಿಂದ ಭಾರೀ ಅನಾಹುತ ಸಂಭವಿಸುವ ಮುನ್ನ ಎಚ್ಚರಿಕೆ ವಹಿಸುವ ಅಗತ್ಯವಿದೆ.
-ಕೆ.ಬಿ.ಸುರೇಶ್,ಆಟೊ ಚಾಲಕ
ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಸಂಬಂಧಪಟ್ಟ ಕಟ್ಟಡ ಮಾಲಕರಿಗೆ ನೋಟೀಸ್ ನೀಡುವಂತೆ ಗ್ರಾಮ ಪಂಚಾಯತ್ಗೆ ಸೂಚಿಸಲಾಗಿದೆ. ಸಿದ್ದಾಪುರ ಪಟ್ಟಣದಲ್ಲಿ ಕಂದಾಯ ಇಲಾಖೆಗೆ ಸೇರಿದ ಕಟ್ಟಡವು ಸುಸ್ಥಿತಿಯಲ್ಲಿದೆಯೇ ಎಂಬ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
-ಎಚ್.ಎನ್.ರಾಮಚಂದ್ರ, ತಹಶೀಲ್ದಾರ್ ವೀರಾಜಪೇಟೆ