Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಿರಿಮನೆ ಜಲಪಾತಕ್ಕೆ ಪೂರ್ವ ಮುಂಗಾರು ಮಳೆ...

ಸಿರಿಮನೆ ಜಲಪಾತಕ್ಕೆ ಪೂರ್ವ ಮುಂಗಾರು ಮಳೆ ನೀಡಿದ ಕಳೆ

ಕಡುಗಪ್ಪು ಬಂಡೆ ಮೇಲೆ ಹಾಲ್ನೊರೆಯ ಚಿತ್ತಾರ ಕಾಣಲು ಪ್ರವಾಸಿಗರ ದೌಡು

-ಕೆ.ಎಲ್.ಶಿವು-ಕೆ.ಎಲ್.ಶಿವು27 May 2024 1:16 PM IST
share
ಸಿರಿಮನೆ ಜಲಪಾತಕ್ಕೆ ಪೂರ್ವ ಮುಂಗಾರು ಮಳೆ ನೀಡಿದ ಕಳೆ
ಸಿರಿಮನೆ ಜಲಪಾತ ತಲುಪಲು ಚಿಕ್ಕಮಗಳೂರು ನಗರದಿಂದ 100ಕಿಮೀ ದೂರದಲ್ಲಿರುವ ಶೃಂಗೇರಿ ಪಟ್ಟಣಕ್ಕೆ ಹೋಗಬೇಕು. ಅಲ್ಲಿಂದ 15ಕಿಮೀ ದೂರದಲ್ಲಿರುವ ಕಿಗ್ಗಾ ಗ್ರಾಮ ತಲುಪಿದರೆ ಅಲ್ಲಿಂದ 5ಕಿಮೀ ದೂರದಲ್ಲಿ ಸಿರಿಮನೆ ಫಾಲ್ಸ್ ಇದೆ. ಜಲಪಾತ ತಲುಪಲು ಶೃಂಗೇರಿ ಪಟ್ಟಣದಿಂದ ಸಾರಿಗೆ ಬಸ್, ಆಟೊ, ಟ್ಯಾಕ್ಸಿಯಂತಹ ಸಾರಿಗೆ ಸೌಕರ್ಯವೂ ಇದೆ. ಬೆಂಗಳೂರಿನಿಂದ ಈ ಜಲಪಾತ 334ಕಿಮೀ ದೂರದಲ್ಲಿದೆ. ಉಡುಪಿಯಿಂದ 76ಕಿಮೀ, ಶಿವಮೊಗ್ಗದಿಂದ 106ಕಿಮೀ ದೂರದಲ್ಲಿದೆ.

ಚಿಕ್ಕಮಗಳೂರು: ಕಳೆದ ಎರಡು ವಾರಗಳಿಂದ ಚಿಕ್ಕಮಗಳೂರು ಜಿಲ್ಲಾದ್ಯಂತ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಫಿನಾಡಿನ ಪ್ರವಾಸಿತಾಣಗಳು ಸದ್ಯ ಜೀವಕಳೆ ಪಡೆದುಕೊಂಡು ಪ್ರವಾಸಿಗರನ್ನು ಮತ್ತೆ ಸೆಳೆಯಲಾರಂಭಿಸಿವೆ.

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಪೈಕಿ ಒಂದಾಗಿರುವ, ಜಿಲ್ಲಾ ಕೇಂದ್ರದಿಂದ 100 ಕಿಮೀ ದೂರದಲ್ಲಿರುವ ಸಿರಿಮನೆ ಜಲಪಾತ ಮಳೆಯ ಕಾರಣದಿಂದ ಇದೀಗ ಮೈದುಂಬಿ ಹರಿಯಲಾರಂಭಿಸಿದ್ದು, ಜಲಪಾತದ ಮನಮೋಹಕ ದೃಶ್ಯಾವಳಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಚಿಕ್ಕಮಗಳೂರು ಕಾಫಿ, ಅಡಿಕೆಗೆ ಹೆಸರಾಗಿರುವಂತೆಯೇ ನೈಸರ್ಗಿಕ ಪ್ರವಾಸಿ ತಾಣಗಳಿಗೂ ಜನಪ್ರಿಯವಾದ ಜಿಲ್ಲೆಯಾಗಿದೆ. ಈ ಕಾರಣಕ್ಕೆ ಪ್ರತಿದಿನ ಕಾಫಿನಾಡಿನ ಪ್ರವಾಸಿತಾಣಗಳ ಸೊಬಗು ಕಾಣಲು ರಾಜ್ಯದ ಮೂಲೆಮೂಲೆಗಳಿಂದಲೂ ಪರಿಸರ ಪ್ರಿಯರು ಜಿಲ್ಲೆಯತ್ತ ದೌಡಾಯಿಸುತ್ತಿದ್ದಾರೆ. ಈ ಬಾರಿಯ ಬೇಸಿಗೆಯ ಉಷ್ಣಾಂಶದಿಂದಾಗಿ ಕಾಫಿನಾಡಿನ ನೈಸರ್ಗಿಕ ಪ್ರವಾಸಿತಾಣಗಳು ಕಳೆ ಕಳೆದುಕೊಂಡಿದ್ದವು, ಮುಗಿಲೆತ್ತರದ ಗಿರಿಶ್ರೇಣಿಗಳ ಹಸಿರ ಹೊದಿಕೆ ಬಿಸಿಲಿಗೆ ಮಾಗಿತ್ತು, ಝರಿ ಜಲಪಾತಗಳು ನೀರಿಲ್ಲದೆ ಸೊರಗಿದ್ದವು, ಜೀವನದಿಗಳು ಬರಿದಾಗಿದ್ದವು, ಕೆರೆಕಟ್ಟೆ, ಹಳ್ಳಕೊಳ್ಳಗಳ ಒಡಲು ಒಣಗಿದ್ದವು. ಆದರೆ ಕಳೆದ ಎರಡು ವಾರಗಳಿಂದ ಜಿಲ್ಲಾದ್ಯಂತ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆ ಜಿಲ್ಲೆಯ ಈ ನಿಸರ್ಗದತ್ತ ಪ್ರಕೃತಿಯ ಒಡಲಿಗೆ ಜೀವಕಳೆ ತಂದುಕೊಟ್ಟಿದ್ದು, ನದಿಗಳು, ಝರಿ ಜಲಪಾತಗಳ ಒಡಲು ಮಳೆ ನೀರಿನಿಂದಾಗಿ ಮೈದುಂಬಿ ನಳನಳಿಸುತ್ತಿವೆ.

ಅದರಲ್ಲೂ ಚಿಕ್ಕಮಗಳೂರು ನಗರದಿಂದ 100 ಕಿಮೀ ದೂರದಲ್ಲಿರುವ ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮ ಸಮೀಪದಲ್ಲಿರುವ ಸಿರಿಮನೆ ಫಾಲ್ಸ್ ಇದೀಗ ಜೀವಕಳೆ ಪಡೆದುಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಶೃಂಗೇರಿ ತಾಲೂಕಿನಾದ್ಯಂತ ಈ ಬಾರಿ ಬರದ ಛಾಯೆ ಆವರಿಸಿತ್ತು. ಈ ಕಾರಣಕ್ಕೆ ಸರಕಾರ ಶೃಂಗೇರಿ ತಾಲೂಕನ್ನು ಸಾಧಾರಣ ಬರಪೀಡಿತ ತಾಲೂಕೆಂದು ಘೋಷಣೆ ಮಾಡಿತ್ತು. ಈ ಬರದ ಪರಿಸ್ಥಿತಿ ತಾಲೂಕಿನ ಪ್ರಾಕೃತಿಕ ಸೌಂದರ್ಯಕ್ಕೆ ಕಳಶಪ್ರಾಯವಾಗಿದ್ದ ಸಿರಿಮನೆ ಜಲಪಾತದ ಒಡಲನ್ನೂ ಬರಿದಾಗಿಸಿದ್ದ ಪರಿಣಾಮ ಈ ಜಲಪಾತ ಇದುವರೆಗೆ ನೀರಿಲ್ಲದೇ ಸೊರಗಿ ಹೋಗಿತ್ತು. ಆದರೀಗ ಪೂರ್ವ ಮುಂಗಾರಿನ ಅಬ್ಬರದಿಂದಾಗಿ ಸಿರಿಮನೆ ಫಾಲ್ಸ್ ತನ್ನ ನೈಸರ್ಗಿಕ ಅಂಧವನ್ನು ಮರಳಿ ಪಡೆದಿದ್ದು, ಮೈದುಂಬಿ ಹರಿಯುತ್ತಿರುವ ಜಲಪಾತದ ಸೊಬಗು ಅಪೂರ್ವ ದೃಶ್ಯಕಾವ್ಯದಂತೆ ಭಾಸವಾಗುತ್ತಿದೆ.

ಶೃಂಗೇರಿ ಪಟ್ಟಣದಿಂದ ಕೇವಲ 15 ಕಿಮೀ ದೂರದಲ್ಲಿರುವ ಸಿರಿಮನೆ ಫಾಲ್ಸ್ ಕಾಫಿ, ಅಡಿಕೆ ತೋಟಗಳ ಮಧ್ಯೆ ಇರುವ ದಟ್ಟ ಕಾನನದಲ್ಲಿ ಧುಮ್ಮಿಕ್ಕಿ ಹರಿಯುತ್ತಿರುವ ಸುಂದರ ಜಲಪಾತವಾಗಿದೆ. ವಿಶಾಲ ಜಾಗದಲ್ಲಿ ಸುಮಾರು 40-50ಅಡಿ ಎತ್ತರದ ಧರೆಯಲ್ಲಿರುವ ಕಡುಗಪ್ಪುಬಣ್ಣದ ಬೃಹತ್ ಬಂಡೆಯ ಮೇಲೆ ಹಾಲು ಚೆಲ್ಲಿದಂತೆ ಹರಿದು ನೆಲಕ್ಕೆ ಅಪ್ಪಳಿಸುವ ನೀರಿನ ಚಿತ್ತಾರದ ದೃಶ್ಯಕಾವ್ಯ ಕಾಣಲು ಎರಡು ಕಣ್ಣು ಸಾಲದು ಎಂಬ ಭಾವ ಮೂಡಿಸುತ್ತದೆ.

ಬೇಸಿಗೆಯಲ್ಲಿ ನೀರಿನ ಹರಿವು ಕಡಿಮೆಯಾಗುವುದರಿಂದ ಜಲಪಾತದ ಸೌಂದರ್ಯ ಬಾಡಿದಂತೆ ಕಂಡು ಬಂದರೂ ಮಂದಗತಿಯಲ್ಲಿ ಬಂಡೆಯ ಮೇಲಿಂದ ಇಳಿದು ಬರುವ ನೀರಿನ ಅಲೆಗಳ ನರ್ತನ ನೋಡುಗರ ಚಿತ್ತ ಸೆಳೆಯುತ್ತದೆ. ಮಳೆಗಾಲದಲ್ಲಿ ಭಾರೀ ಮಳೆಯಿಂದಾಗಿ ಮೈದುಂಬಿ ಹರಿಯುವ ಈ ಜಲಪಾತ ಹಚ್ಚ ಹಸಿರಿನ ವನಸಿರಿಯ ಮಧ್ಯೆ, ಪ್ರಶಾಂತ ವಾತಾವರಣದಲ್ಲಿ ಭೋರ್ಗರೆಯುವ ಪರಿ ನಿಸರ್ಗದ ರೌದ್ರತೆಯ ಅಪರಾವತಾರವನ್ನು ನೆನಪಿಸುತ್ತದೆ. ಎತ್ತರದಿಂದ ಧುಮ್ಮಿಕ್ಕುವ ವೇಳೆ ಕೇಳುವ ಜಲಪಾತದ ಶಬ್ಧ, ಜಲಪಾತದ ನೀರಿನ ಹನಿಗಳ ತಂಪಿನ ವಾತಾವರಣ, ಹಿನ್ನೆಲೆಯಲ್ಲಿ ಕೇಳಿ ಬರುವ ಪಕ್ಷಿ, ಕೀಟಗಳ ಕಲರವ, ತಂಗಾಳಿಯ ಸ್ಪರ್ಶ ಮೈ, ಮನ ಹಾಗೂ ಕಿವಿಗೆ ಕಂಪು, ಇಂಪಾದ ಮುದ ನೀಡುತ್ತದೆ.

ಜಲಪಾತದ ಅಂಗಳದಲ್ಲಿ ವಿಶಾಲ ಜಾಗ ಇರುವುದರಿಂದ ಮಕ್ಕಳು, ದೊಡ್ಡವರು, ವೃದ್ಧರೂ ನೀರಿಗೆ ಇಳಿದು ಮೈಮನ ತಣಿಸಿಕೊಳ್ಳಬಹುದು. ಮೈಕೊರೆಯುವ ಚಳಿ ಹಿಡಿಸುವ ಜಲಪಾತದ ನೀರಿನಲ್ಲಿ ಮಿಂದು ಹೊರ ಬಂದಾಗ ಪ್ರಕೃತಿಯ ಮಡಿಲಿನಲ್ಲಿ ಸಿಗುವ ಉಲ್ಲಾಸದ ಭಾವವು ಜಲಪಾತ ಬಿಟ್ಟು ಬರಲು ಮನಸ್ಸಿಗೆ ನೋವಾಗುವಂತಹ ಅನುಭವ ನೀಡುತ್ತದೆ. ಇಂತಹ ಮನಮೋಹಕ ಜಲಪಾತ ಇದೀಗ ಮೈದುಂಬಿ ಹರಿಯುತ್ತಾ ಪ್ರವಾಸಿಗರನ್ನು ಅಯಸ್ಕಾಂತದಂತೆ ಸೆಳೆಯುತ್ತಿದ್ದು, ಪ್ರವಾಸಿಗರ ದಂಡು ಸಿರಿಮನೆ ಜಲಪಾತದ ನೈಸರ್ಗಿಕ ಸಿರಿ ಕಾಣಲು ಸಾಗರೋಪಾದಿಯಲ್ಲಿ ಹರಿದು ಬರುತ್ತಿದೆ.

ಸಿರಿಮನೆ ಜಲಪಾತದ ಆವರಣದಲ್ಲಿ ಸ್ಥಳೀಯ ಆಡಳಿತ, ಪ್ರವಾಸೋದ್ಯಮ ಇಲಾಖೆ ಉತ್ತಮ ಮೂಲಸೌಕರ್ಯವನ್ನೂ ಕಲ್ಪಿಸಿರುವುದರಿಂದ ಯಾವುದೇ ಅಡ್ಡಿ ಆತಂಕವಿಲ್ಲದೇ ಪಾಲ್ಸ್ ತಲುಪಬಹುದು. ಜಲಪಾತದ ಅಂಗಳಕ್ಕೆ ಹೋಗಲು ಕಾಂಕ್ರಿಟ್ ರಸ್ತೆ, ಮೆಟ್ಟಿಲುಗಳು, ಧರೆಯ ಇಳಿಜಾರಿನಲ್ಲಿರುವ ದಾರಿ ಉದ್ದಕ್ಕೂ ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಅಳವಡಿಸಿರುವುದರಿಂದ ಬೀಳುವ ಆತಂಕವಿಲ್ಲದೇ ನಡೆದು ಸಾಗಬಹುದು. ಜಲಪಾತದ ನೀರಿನಲ್ಲಿ ಮಿಂದು, ಆಡಿದ ಬಳಿಕ ಬಟ್ಟೆ ಬದಲಿಸಲೂ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ.

share
-ಕೆ.ಎಲ್.ಶಿವು
-ಕೆ.ಎಲ್.ಶಿವು
Next Story
X