ಬಟ್ಟೆಯ ಮೇಲೆ ಸಂಪೂರ್ಣ ಕುರ್‌ಆನ್ ಕಸೂತಿ ಮಾಡಿದ ಸಹೋದರಿಯರು
ಬೆಂಗಳೂರು: ಪವಿತ್ರ ಕುರ್‌ಆನ್ ಅನ್ನು ಸಂಪೂರ್ಣವಾಗಿ ವೆಲ್ವೆಟ್ ಬಟ್ಟೆಯ ಮೇಲೆ ಕಸೂತಿ ಮಾಡುವ ಮೂಲಕ ಬೆಂಗಳೂರಿನ ಶಿವಾಜಿನಗರದಲ್ಲಿರುವ ಸಹೋದರಿಯರಾದ ಸುರೈಯ್ಯಾ ಖುರೇಶಿ ಹಾಗೂ ಬೀಬಿ ತಬಸ್ಸುಮ್ ಗಮನ ಸೆಳೆದಿದ್ದಾರೆ.
ಆಲಿಮ್-ಎ-ದೀನ್(ಧಾರ್ಮಿಕ ವಿದ್ವಾಂಸ) ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾಗಿರುವ 604 ಪುಟಗಳ ಬಟ್ಟೆಯ ಪವಿತ್ರ ಕುರ್‌ಆನ್, ಈ ಇಬ್ಬರು ಸಹೋದರಿಯರ ಅತ್ಯುತ್ತಮ ಕರಕುಶಲತೆಯ ಪ್ರತೀಕವಾಗಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಈ ಇಬ್ಬರು ಸಹೋದರಿಯರ ಪೈಕಿ ಕಿರಿಯವರಾದ ಬೀಬಿ ತಬಸ್ಸುಮ್ ಅವರಿಗೆ ಚಿಕ್ಕಂದಿನಿಂದಲೂ ಕಸೂತಿ ಕಲೆಯ ಬಗ್ಗೆ ಹೆಚ್ಚು ಆಕರ್ಷಣೆಯಿತ್ತು. ಆರಂಭದಲ್ಲಿ ಆಕೆ ಕುರ್‌ಆನ್‌ನ ಸಣ್ಣ ಸಣ್ಣ ಆಯತ್‌ಗಳನ್ನು ಮಾತ್ರ ಕಸೂತಿ ಮಾಡುತ್ತಿದ್ದರು. ಆದರೆ, ಒಂದು ದಿನ ಸಂಪೂರ್ಣ ಕುರ್‌ಆನ್ ಅನ್ನು ಕಸೂತಿ ಮಾಡುವ ಸಂಕಲ್ಪ ಅವರಲ್ಲಿ ಮೂಡಿತು.
ಅದರಂತೆ, ತನ್ನ ಹಿರಿಯ ಸಹೋದರಿ ಸುರೈಯ್ಯಾ ಖುರೇಶಿ ಅವರ ಜೊತೆ ಚರ್ಚೆ ಮಾಡಿ ಅತ್ಯಂತ ಶ್ರದ್ಧೆಯಿಂದ 2019ರಲ್ಲಿ ಕುರ್‌ಆನ್ ಅನ್ನು ಕಸೂತಿ ಮಾಡುವ ಕೆಲಸವನ್ನು ಈ ಇಬ್ಬರೂ ಸಹೋದರಿಯರು ಆರಂಭಿಸಿದರು. ಮೊದಲು ಬಟ್ಟೆಯ ಮೇಲೆ ಪೆನ್ಸಿಲ್ ಬಳಸಿ ಕುರ್‌ಆನ್‌ನ ಆಯತ್‌ಗಳನ್ನು ತಬಸ್ಸುಮ್ ಬರೆಯುತ್ತಿದ್ದರು.
ನಂತರ, ಇಬ್ಬರೂ ಸಹೋದರಿಯರು ಸೇರಿ ಕಸೂತಿ ಮಾಡುತ್ತಿದ್ದರು. ಒಂದು ದಿನದಲ್ಲಿ ಕನಿಷ್ಠ 10 ಗಂಟೆಗಳನ್ನು ಈ ಕೆಲಸಕ್ಕಾಗಿ ವಿನಿಯೋಗಿಸುತ್ತಿದ್ದರು. 2019ರಲ್ಲಿ ಆರಂಭವಾದ ಕಸೂತಿ ಕೆಲಸವು ಪ್ರಸಕ್ತ ಸಾಲಿನ ಮಾರ್ಚ್ ತಿಂಗಳಲ್ಲಿ ಸಂಪೂರ್ಣ ಪೂರ್ಣಗೊಂಡಿತು. ಸತತ ಐದು ವರ್ಷಗಳ ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ. ಇಡೀ ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಕಸೂತಿ ಮೂಲಕ ಸಂಪೂರ್ಣ ಕುರ್‌ಆನ್ ನೇಯ್ಗೆ ಮಾಡಿದ ಹೆಗ್ಗಳಿಕೆಗೆ ಸುರೈಯ್ಯಾ ಖುರೇಶಿ ಹಾಗೂ ಬೀಬಿ ತಬಸ್ಸುಮ್ ಪಾತ್ರರಾಗಿದ್ದಾರೆ. ಕುರ್‌ಆನ್‌ನ ತಲಾ ಆರು ಅಧ್ಯಾಯಗಳಂತೆ ಒಟ್ಟು 30 ಅಧ್ಯಾಯಗಳನ್ನು ಐದು ಸಂಪುಟಗಳಲ್ಲಿ ನೇಯ್ಗೆ ಮಾಡಿದ್ದಾರೆ. ಅಲ್ಲದೆ, ನುರಿತ ಕರಕುಶಲಕರ್ಮಿಗಳಿಂದ ಇಡೀ ಕುರ್‌ಆನ್ ಅನ್ನು ನಿಖರವಾಗಿ ಕಸೂತಿ ಮಾಡಲಾಗಿದೆ.
ನಮ್ಮ ಹೆಣ್ಣು ಮಕ್ಕಳು ಇಷ್ಟೊಂದು ಮಹತ್ವದ ಸಾಧನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಭಕ್ತಿ ಹಾಗೂ ಕಲಾತ್ಮಕತೆಯ ಸುಂದರ ಮಿಶ್ರಣಕ್ಕೆ ಸಾಕ್ಷಿಯಾಗಿ ಈ ಕುರ್‌ಆನ್‌ನ ಐದು ಸಂಪುಟಗಳು ನಮ್ಮ ಮುಂದಿವೆ. ಇವರ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಅಲ್ಲಾಹನ ಹೊರತು ಬೇರೆ ಯಾರಿಂದಲೂ ನೀಡಲು ಸಾಧ್ಯವಿಲ್ಲ ಎಂದು ಅವರ ಪೋಷಕರು ಅಭಿಪ್ರಾಯಪಟ್ಟಿದ್ದಾರೆ.
ಕಸೂತಿ ಕೆಲಸದ ನಿಖರತೆಯನ್ನು ಖಚಿತಪಡಿಸಿಕೊಳ್ಳಲು, ಪ್ರತಿಯೊಂದು ಪುಟದ ಕೆಲಸ ಪೂರ್ಣಗೊಂಡ ಬಳಿಕ ಧಾರ್ಮಿಕ ವಿದ್ವಾಂಸರಿಗೆ ತೋರಿಸಿ ಪರಿಶೀಲನೆಗೊಳಪಡಿಸಿದ್ದೇವೆ. ನಮ್ಮ ದೈನಂದಿನ ಜೀವನದ ಜೊತೆಗೆ ಅತ್ಯಂತ ಶ್ರದ್ಧೆಯಿಂದ ಈ ಕೆಲಸವನ್ನು ನಾವು ಮಾಡಿದ್ದೇವೆ. ಅಲ್ಲಾಹನ ಅನುಗ್ರಹ, ಕುಟುಂಬ ಸದಸ್ಯರ ಬೆಂಬಲದಿಂದಾಗಿ ಈ ಪವಿತ್ರ ಕಾರ್ಯವನ್ನು ನೆರವೇರಿಸಲು ಸಾಧ್ಯವಾಯಿತು ಎಂದು ಸುರೈಯ್ಯಾ ಖುರೇಶಿ ತಿಳಿಸಿದ್ದಾರೆ.
ಕಸೂತಿ ಮೂಲಕ ಸಂಪೂರ್ಣ ಕುರ್‌ಆನ್ ಸಿದ್ಧಪಡಿಸುವ ಅವಕಾಶವನ್ನು ನೀಡಿದ್ದಕ್ಕಾಗಿ ಸರ್ವಶಕ್ತನಾದ ಅಲ್ಲಾಹನಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಈ ಕಸೂತಿ ಮಾಡಿರುವ ಪವಿತ್ರ ಕುರ್‌ಆನ್ ಅನ್ನು ಪ್ರವಾದಿ ಮುಹಮ್ಮದ್(ಸ)ರವರ ನೆಚ್ಚಿನ ಮದೀನಾ ನಗರದಲ್ಲಿರುವ ಗ್ರಂಥಾಲಯಕ್ಕೆ ಉಡುಗೊರೆಯಾಗಿ ನೀಡಲು ಬಯಸುತ್ತೇನೆ ಎಂದು ಬೀಬಿ ತಬಸ್ಸುಮ್ ತಿಳಿಸಿದ್ದಾರೆ.