ಹೊರ ಜಗತ್ತಿನ ಸಂಪರ್ಕದಿಂದ ದೂರ ಉಳಿದ ಸೀತಾವನ ಜಲಪಾತ
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಸಾವಿರಾರು ಪ್ರವಾಸಿ ತಾಣಗಳಿದ್ದರೂ ಕೆಲವು ಪ್ರವಾಸಿತಾಣಗಳು ಇಂದಿಗೂ ಹೊರ ಜಗತ್ತಿನ ಸಂಪರ್ಕ ಪಡೆಯದ ಕಾರಣದಿಂದ ಅಭಿವೃದ್ಧಿ ಕೆಲಸವೂ ನನೆಗುದಿಗೆ ಬಿದ್ದಿದೆ. ಈ ಪೈಕಿ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪಟ್ಟಣದ ಕೂಗಳತೆ ದೂರದಲ್ಲಿರುವ ಖಾಸಗಿ ಎಸ್ಟೇಟ್‌ಗೆ ಹೊಂದಿಕೊಂಡಿರುವ ಸೀತಾವನ ಜಲಪಾತವೂ ಹೊರ ಜಗತ್ತಿನ ಸಂಪರ್ಕ ಸಾಧಿಸುವಲ್ಲಿ ವಿಫಲವಾಗಿದೆ.
ಸೀತಾವನ ಜಲಪಾತವು ಹುಲ್ಲುಗಳಿಂದ ಆವೃತವಾಗಿದ್ದು, ತೀವ್ರ ಬರಗಾಲವಿದ್ದರೂ ಹಸಿರಿನ ಹುಲ್ಲಿನ ಗಡ್ಡೆಗಳ ನಡುವೆ ಪುಟಿದೆದ್ದು ಬರುವ ತಿಳಿ ನೀರು ಎಂದಿಗೂ ಬತ್ತದ ಇತಿಹಾಸ ಹೊಂದಿದೆ. ಈ ಹುಲ್ಲಿನ ಗುಡ್ಡೆಗಳ ನಡುವೆ ಹರಿದು ಬರುವ ನೀರಿನಲ್ಲಿ ಲೋಹದ ವಸ್ತುಗಳನ್ನು ಹಾಕಿದರೆ ಎಂತಹ ಲೋಹವಾದರೂ ಕರಗುತ್ತದೆ ಎನ್ನಲಾಗುತ್ತಿದೆ.
ಈ ಹಿಂದೆ ಸ್ಥಳೀಯ ಗ್ರಾಮ ಪಂಚಾಯತ್‌ನಿಂದ ಸೀತಾವನಕ್ಕೆ ತೆರಳುವ ಮಾರ್ಗದಲ್ಲಿ ಮೆಟ್ಟಿಲುಗಳನ್ನು ಮಾಡಲಾಗಿತ್ತು. ಆದರೆ, ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಸದ್ಯ ಸೀತಾವನ ಜಲಪಾತಕ್ಕೆ ಹೋಗಲು ಪ್ರವಾಸಿಗರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಜಲಪಾತ ಇರುವ ಜಾಗದ ಅಭಿವೃದ್ಧಿ ನಿರ್ಲಕ್ಷಿಸಿರುವ ಕಾರಣದಿಂದ ಸದ್ಯ ಸೀತಾವನ ಪಾಳುಬಿದ್ದ ಕೊಂಪೆಯಂತಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಇನ್ನಾದರೂ ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು, ಸರಕಾರ ಸೀತಾವನ ಸಂಪರ್ಕಕ್ಕೆ ಉತ್ತಮ ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕೆಂಬುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಸೀತಾವನ ಸಂಪರ್ಕ ಹೇಗೆ?
ಚಿಕ್ಕಮಗಳೂರು ನಗರದಿಂದ 65 ಕಿ.ಮೀ. ಸಾಗಿದರೆ ಕೊಪ್ಪ ಪಟ್ಟಣ ಸಂಪರ್ಕ ರಸ್ತೆಯಲ್ಲಿ ಜಯಪುರ ಪಟ್ಟಣ ಸಿಗುತ್ತದೆ. ಜಯಪುರ-ಕೊಪ್ಪ ರಸ್ತೆಯ ಬದಿಯಲ್ಲಿರುವ ಗಣಪತಿ ದೇವಾಲಯದ ಪಕ್ಕದ ಮಣ್ಣಿನ ರಸ್ತೆಯಲ್ಲಿ 1 ಕಿ.ಮೀ. ಸಾಗಿದರೆ ಖಾಸಗಿ ಎಸ್ಟೇಟ್ ಸಿಗುತ್ತದೆ. ಈ ಎಸ್ಟೇಟ್‌ನ ಕಾಲುದಾರಿಯಲ್ಲಿ 10 ನಿಮಿಷ ಸಾಗಿದರೆ ಸೀತಾವನ ಜಲಪಾತ ಕಣ್ಣಮುಂದೆ ತೆರೆದುಕೊಳ್ಳುತ್ತದೆ.