ಎಸೆಸೆಲ್ಸಿ ಪರೀಕ್ಷೆ ಒಂದಿಷ್ಟು ಸಲಹೆಗಳು

ಭಾಗ-1
ಶೈಕ್ಷಣಿಕ ಬದುಕಿಗೆ ಭದ್ರ ಬುನಾದಿ ಹಾಕಿ, ಭವಿಷ್ಯದ ಬದುಕಿಗೆ ದಿಕ್ಸೂಚಿಯಾಗುವ ಎಸೆಸೆಲ್ಸಿ ಪರೀಕ್ಷೆ ಬಂದೇ ಬಿಟ್ಟಿದೆ. ಲಕ್ಷಾಂತರ ಮಕ್ಕಳು ಬೋರ್ಡ್ ಪರೀಕ್ಷೆ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಲವರು ಸಂತಸದಿಂದ ಇದ್ದರೆ, ಇನ್ನು ಕೆಲವರು ಆತಂಕ, ಸಂದಿಗ್ಧತೆಯಲ್ಲೇ ಇದ್ದಾರೆ. ವರ್ಷ ಪೂರ್ತಿ ಅಭ್ಯಾಸ ಮಾಡಿದ್ದು ಮೂರೇ ಮೂರು ಗಂಟೆಯಲ್ಲಿ ಬರವಣಿಗೆ ಮೂಲಕ ಅಭಿವ್ಯಕ್ತಪಡಿಸಿ ಸಾಮರ್ಥ್ಯ ಒರೆಗೆ ಹಚ್ಚಬೇಕಾದ ಕಾಲ ಸನ್ನಿಹಿತವಾಗಿದೆ.
ಶಾಲಾ ಆರಂಭದಲ್ಲೇ ಅಧ್ಯಯನದಲ್ಲಿ ನಿರತರಾದ ಮಕ್ಕಳಿಗೆ ದೊಡ್ಡ ಆತಂಕ ಇರಲಾರದು. ಆದರೂ ಮನದಲ್ಲಿ ಏನಾಗುವುದೋ ಎಂಬ ಅಳುಕು ಇದ್ದೇ ಇರುತ್ತದೆ. ಆತ್ಮವಿಶ್ವಾಸದಿಂದಲೇ ಪರೀಕ್ಷೆ ಬರೆಯಬೇಕು. ಇನ್ನು ಕೊನೆಯವರೆಗೂ ಸಾಕಷ್ಟು ಓದದೆ, ಅಭ್ಯಾಸ ಮಾಡದೆ ಇರುವ ಮಕ್ಕಳ ಮನದಲ್ಲಿ ಒಂದಷ್ಟು ಗೊಂದಲ, ಅಳುಕು ಭಯ ಮೂಡಿರಬಹುದು. ಮಕ್ಕಳು ಹೆದರುವ ಅಗತ್ಯವಿಲ್ಲ. ಅಂತಿಮ ಹಂತದ ಸಿದ್ಧತೆ, ಅಧ್ಯಯನ ಹಾಗೂ ಶಿಕ್ಷಕರ ಮಾರ್ಗದರ್ಶನ ಮೂಲಕ ಪರೀಕ್ಷೆ ಬರೆಯಲು ಸನ್ನದ್ಧರಾಗಿರಿ. ಶಾಲೆಯಲ್ಲಿ ಬರೆಯುವ ಪರೀಕ್ಷೆಯಂತೆಯೇ ಸಹಜವಾಗಿ ಬೋರ್ಡ್ ಪರೀಕ್ಷೆ ಎದುರಿಸಿರಿ. ಹೆದರಬೇಕಾದ ಅಗತ್ಯವಿಲ್ಲ.
ರಾಜ್ಯಹಂತದಲ್ಲಿ ಏಕಕಾಲದಲ್ಲಿ ಪರೀಕ್ಷೆ ನಡೆಯುತ್ತಿರುವ ಕಾರಣ ಸರಕಾರ ಇಲಾಖಾ ಹಂತದಲ್ಲಿ ಇಂದಷ್ಟು ಬಿಗಿ ಕ್ರಮಗಳು ಕೈಗೊಳ್ಳುತ್ತದೆ. ಒಂದಿಷ್ಟು ಮುನ್ನೆಚ್ಚರಿಕೆಯ ಅಗತ್ಯ ಕ್ರಮ ಅನುಸರಿಸಲಾಗಿರುತ್ತದೆ. ನಿಮ್ಮ ಸಾಮರ್ಥ್ಯದ ಅನುಸಾರ ಯಶಸ್ಸು ಖಂಡಿತಾ ನಿಮ್ಮದಾಗುವುದು.
ಅಂತಿಮ ಗುರಿ ತಲುಪಿ ಕನಸು ನನಸಾಗುವ ಕಾಲದಲ್ಲಿ, ಆತಂಕ, ದುಗುಡ, ಭಯ ಬೇಡ. ಇರುವ ಒಂದೆರಡು ದಿನಗಳಲ್ಲಿ ಸಮಯಾವಕಾಶವನ್ನು ಅತ್ಯುತ್ತಮವಾಗಿ ಸದುಪಯೋಗ ಪಡಿಸಿಕೊಳ್ಳಿರಿ. ಈ ಮೂಲಕ ಪರೀಕ್ಷೆಯಲ್ಲಿ ಉತ್ತಮಸಾಧನೆ ಮಾಡಲು ಪ್ರಯತ್ನಿಸಿ.
ಪರೀಕ್ಷೆ ಮುನ್ನಾ ದಿನ
ಪರೀಕ್ಷೆ ಆರಂಭವಾಗುವ ಮುನ್ನಾದಿನ ಒಂದಿಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಇದರಿಂದ ಯಾವುದೇ ಗೊಂದಲ, ಆತಂಕ ಉಂಟಾಗುವುದಿಲ್ಲ. ಪರೀಕ್ಷೆ ಸುಲಭವಾಗಿ ಎದುರಿಸಲು ಸಹಕಾರಿಯಾಗುವುದು.
ಪರೀಕ್ಷೆ ಆರಂಭವಾಗುವ ಹಿಂದಿನ ದಿನ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳು ಏನು ಮಾಡಬೇಕು ಎನ್ನುವ ಕೆಲವು ಮುಖ್ಯ ಟಿಪ್ಸ್ ಇಲ್ಲಿ ನೀಡಲಾಗಿದೆ. ಇವು ನಿಮಗೆ ಸಹಾಯಕ್ಕೆ ಬರಬಹುದು.
* ಎರಡು ಪೆನ್ನು, ಪೆನ್ಸಿಲ್, ಉದ್ದದ ಸ್ಕೇಲ್, ಜಾಮಿಟ್ರಿ ಬಾಕ್ಸ್, ಸಿದ್ಧಪಡಿಸಿಕೊಳ್ಳಿರಿ.
* ಪರೀಕ್ಷಾ ಕೇಂದ್ರ ನಿಮ್ಮ ಮನೆಯಿಂದ ಎಷ್ಟು ದೂರ ಇದೆ ಮತ್ತು ತಲುಪಲು ಎಷ್ಟು ಸಮಯ ಬೇಕು ಎಂಬುದು ಖಚಿತಪಡಿಸಿಕೊಳ್ಳಿ.
*ಪ್ರವೇಶ ಪತ್ರ ಸೂಕ್ತ ಸ್ಥಳದಲ್ಲಿ ಇಟ್ಟುಕೊಳ್ಳಿ ಅಥವಾ ಎಕ್ಸಾಂ ಪ್ಯಾಡ್‌ಗೆ ಅಂಟಿಸಿಕೊಳ್ಳಿರಿ.
*ಉತ್ತಮವಾದ ಕ್ಲಿಪ್ ಬೋರ್ಡ್ ಆಯ್ಕೆ ಮಾಡಿಕೊಳ್ಳಿರಿ.
*ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಿ.
* ಅತಿ ದೂರದ ಸ್ಥಳಗಳಿಗೆ ಪ್ರಯಾಣ ಮಾಡಬೇಡಿ.
* ರಾತ್ರಿ ಅಗತ್ಯಕ್ಕೆ ತಕ್ಕಷ್ಟು ಸಾಕಷ್ಟು ನಿದ್ದೆ ಮಾಡಿ.
*ಸಾಮಾನ್ಯವಾದ ಕೈಗಡಿಯಾರವೊಂದನ್ನು ಇಟ್ಟುಕೊಳ್ಳಿ.
* ಪ್ರಶ್ನೆಪತ್ರಿಕೆ ಸೋರಿಕೆ, ಗಾಸಿಪ್‌ಗಳಿಗೆ ತಲೆ ಕೆಡಿಸಿಕೊಳ್ಳಬೇಡಿ.
* ಯಾರೊಂದಿಗೂ ಮನಸ್ತಾಪ, ಜಗಳ ಕಾಯಬೇಡಿ.
* ರಿಲ್ಯಾಕ್ಸ್ ಮೂಡ್‌ನಲ್ಲೇ ಇರಿ. ಒತ್ತಡ ಮಾಡಿಕೊಳ್ಳಬೇಡಿ.
* ನಕಾರಾತ್ಮಕ ಧೋರಣೆ, ಯಾರೋ ಸಹಾಯ ಸಹಕಾರ ಮಾಡುತ್ತಾರೆ ಎಂದು ನಂಬಬೇಡಿ.
* ಪರೀಕ್ಷಾ ಸ್ಥಳದಲ್ಲಿ ಸಿಸಿ ಟಿವಿ ಲೈವ್ ಬಗ್ಗೆ ನೀವು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ನಿಮ್ಮ ಪಾಡಿಗೆ ನೀವು ಪರೀಕ್ಷೆಗೆ ಸಿದ್ಧರಾಗಿರಿ.
*ಆತ್ಮವಿಶ್ವಾಸ ವಿರಲಿ. ಅತಿ ವಿಶ್ವಾಸ ಬೇಡ. ಜೊತೆಗೆ ಒಂದಿಷ್ಟು ಜಾಗೃತಿ ಇರಲಿ.
*ಪ್ರಶ್ನೆ ಪತ್ರಿಕೆ ವಿನ್ಯಾಸ, ಮಾದರಿ ಪಶ್ನೆ ಒಮ್ಮೆ ಕಣ್ಣಾಡಿಸಿರಿ.
* ಶಿಕ್ಷಕರಿಂದ ಅಂತಿಮ ಮಾರ್ಗದರ್ಶನ, ಸಲಹೆ-ಸೂಚನೆ ಪಡೆಯಿರಿ.
*ಬೋರ್ಡ್ ಪರೀಕ್ಷೆಯಾಗಿರುವುದರಿಂದ ತನ್ನದೇ ಆದ ನೀತಿ ನಿಯಮಗಳು ಇವೆ. ಇವುಗಳನ್ನು ಸರಿಯಾಗಿ ತಿಳಿದುಕೊಳ್ಳಿರಿ. ತೀರಾ ಗೊಂದಲ ಉಂಟಾದರೆ ಪರಿಹಾರಕ್ಕಾಗಿ ಬೋರ್ಡ್‌ನ ಸಹಾಯವಾಣಿ ಸಂಪರ್ಕಿಸಿ.