ಅತಂತ್ರದಲ್ಲಿ ಶ್ರೀಮಂಟೇಸ್ವಾಮಿ ಅಧ್ಯಯನ ಪೀಠ
►ನೀಲಗಾರರ ಪರಂಪರೆ ಅಧ್ಯಯನ, ಸಂಶೋಧನೆಗಾಗಿ ಸ್ಥಾಪನೆ
ಚಾಮರಾಜನಗರ, ಫೆ.11: ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುವ ನೀಲಗಾರರ ಪರಂಪರೆಯನ್ನು ಕುರಿತು ಅಧ್ಯಯನ, ಸಂಶೋಧನೆ ನಡೆಸುವ ಉದ್ದೇಶದಿಂದ ಸ್ಥಾಪಿಸಲಾಗಿದ್ದ ಶ್ರೀಮಂಟೇಸ್ವಾಮಿ ಅಧ್ಯಯನ ಪೀಠವು ಅತಂತ್ರವಾಗಿದೆ.
ಈ ಭಾಗದ ನೀಲಗಾರರು, ಸಾಹಿತಿಗಳು, ಸಿಂಡಿಕೇಟ್ ಸದಸ್ಯರು ಹಾಗೂ ಅನೇಕ ಹೋರಾಟಗಾರರ ಪ್ರಯತ್ನವಾಗಿ ಮೈಸೂರು ವಿಶ್ವವಿದ್ಯಾನಿಲಯ ಶ್ರೀಮಂಟೇಸ್ವಾಮಿ ಅಧ್ಯಯನ ಪೀಠವನ್ನು 2021ರಲ್ಲಿ ಸ್ಥಾಪನೆ ಮಾಡಿತ್ತು. ಸರಕಾರ ಆರಂಭದಲ್ಲೇ ಶ್ರೀಮಂಟೇಸ್ವಾಮಿ ಅಧ್ಯಯನ ಪೀಠಕ್ಕೆ 30 ಲಕ್ಷ ರೂ. ಅನುದಾನವನ್ನು ನೀಡಿತ್ತು. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯದ ಮನವಿಯಂತೆ 1 ಕೋಟಿ ರೂ. ಅನುದಾನವನ್ನು ಸರಕಾರ ಬಿಡುಗಡೆ ಮಾಡಿದ ಬಳಿಕ ಶ್ರೀಮಂಟೇಸ್ವಾಮಿ ಅಧ್ಯಯನ ಪೀಠವನ್ನು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾರಂಭ ಮಾಡಲಾಯಿತು.
ಈ ವೇಳೆಯಲ್ಲಿ ಸಿಂಡಿಕೇಟ್ ಸದಸ್ಯರಾಗಿದ್ದ ಪ್ರದೀಪ್‌ಕುಮಾರ್ ದಿಕ್ಷೀತ್ ಅವರ ಶ್ರಮದ ಫಲವಾಗಿ ಶ್ರೀಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಅಧ್ಯಯನ ಪೀಠದಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿತ್ತು. ಅಲ್ಲದೇ ತಂಬೂರಿ ಪದಗಳನ್ನು ಹಾಡುವ ಆಯ್ದ ನೀಲಗಾರರ ಜೀವನ ಸಾರವನ್ನು ಒಳಗೊಂಡ ‘ನಾವು ಕೂಗುವ ಕೂಗು’ ಪುಸ್ತಕವನ್ನು ಪೀಠದ ವತಿಯಿಂದ ಹೊರತರಲಾಗಿತ್ತು.
ಮೈಸೂರು ವಿಶ್ವವಿದ್ಯಾನಿಲಯದಿಂದ ಬೇರ್ಪಟ್ಟು ಚಾಮರಾಜನಗರ ವಿಶ್ವವಿದ್ಯಾನಿಲಯ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂದರ್ಭದಲ್ಲಿ ಶ್ರೀ ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಅಧ್ಯಯನ ಪೀಠದ ದಾಖಲಾತಿ ಮತ್ತು ಮಾಹಿತಿಯನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ವರ್ಗಾಯಿಸುವಂತೆ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರು ಚಾಮರಾಜನಗರ ವಿಶ್ವವಿದ್ಯಾನಿಲಯಕ್ಕೆ ಪತ್ರಬರೆದಿದ್ದಾರೆ. ಆದರೆ ಈ ಭಾಗದ ಸಾಹಿತಿಗಳು, ಹಿರಿಯ ಹೋರಾಟಗಾರರು, ನೀಲಗಾರ ಪರಂಪರೆಯವರು ಶ್ರೀ ಮಂಟೇಸ್ವಾಮಿ ಅಧ್ಯಯನ ಪೀಠವನ್ನು ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
2021ರಲ್ಲಿ ಪ್ರಾರಂಭವಾದ ಪೀಠ: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸುಮಾರು 20 ಕ್ಕಿಂತಲೂ ಹೆಚ್ಚು ಅಧ್ಯಯನ ಪೀಠಗಳನ್ನು ಸ್ಥಾಪನೆ ಮಾಡಲಾಗಿದೆ. ಶ್ರೀಮಂಟೇಸ್ವಾಮಿ ಸೇರಿದಂತೆ ಇತರ ಜಾನಪದ ಪವಾಡ ಪುರುಷರ ಬಗ್ಗೆ, ಅವರ ಕಾವ್ಯಗಳ ಬಗ್ಗೆ ಹೊರಗಿನವರಿಗೆ ಇಂದಿಗೂ ಸಾಕಷ್ಟು ಕುತೂಹಲವಿದೆ. ಈ ಕಾರಣಕ್ಕೆ ಅವರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡುವ ಉದ್ದೇಶದಿಂದ ಮೈಸೂರು ವಿಶ್ವವಿದ್ಯಾನಿಲಯದ ಅಂದಿನ ಕುಲಪತಿಯಾಗಿದ್ದ ಪ್ರೊ.ಜಿ.ಹೇಮಂತ್‌ಕುಮಾರ್ ಅವರ ನೇತೃತ್ವದಲ್ಲಿ ಸಿಂಡಿಕೇಟ್ ಸದಸ್ಯ ಪ್ರದೀಪ್ ಕುಮಾರ್ ದಿಕ್ಷೀತ್ ಅವರ ಶ್ರಮದಿಂದ 2021ರಲ್ಲಿ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಶ್ರೀ ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಅಧ್ಯಯನ ಪೀಠವನ್ನು ಸ್ಥಾಪನೆ ಮಾಡಲಾಯಿತು. ಅದರಂತೆ ಹಲವು ಕಾರ್ಯಕ್ರಮಗಳನ್ನು ಅಧ್ಯಯನ ಪೀಠದಿಂದ ನಡೆಸಿಕೊಂಡು ಬರಲಾಗಿದೆ.
ಪೀಠ ವರ್ಗಾಯಿಸಲು ಒತ್ತಡ: ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಮಂಟೇಸ್ವಾಮಿ ಅಧ್ಯಯನ ಪೀಠವನ್ನು ವರ್ಗಾಯಿಸವಂತೆ ಮೈಸೂರು ವಿಶ್ವವಿದ್ಯಾನಿಲಯದಿಂದ ಒತ್ತಡ ಬರುತ್ತಿದೆ. ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರು ಜ.6 ರಂದು ಚಾಮರಾಜನಗರ ವಿಶ್ವವಿದ್ಯಾನಿಲಯಕ್ಕೆ ಮಂಟೇಸ್ವಾಮಿ ಅಧ್ಯಯನ ಪೀಠದ ದಾಖಲಾತಿ ವರ್ಗಾಯಿಸುವಂತೆ ಪತ್ರ ಬರೆದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶ್ರೀಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಅಧ್ಯಯನ ಪೀಠವನ್ನು ಮುಂದುವರಿಸಿಕೊಂಡು ಹೋಗಲಾಗುವುದು. ಈ ನಿಟ್ಟಿನಲ್ಲಿಪೀಠದ ದಾಖಲಾತಿ ಹಾಗೂ ಮಾಹಿತಿಯನ್ನು ಕಚೇರಿಗೆ ವರ್ಗಾಯಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ.
ಚಾಮರಾಜನಗರ ವಿವಿಯಲ್ಲಿ ಉಳಿಸಿಕೊಳ್ಳುವ ಪ್ರಯತ್ನ: ಈ ಭಾಗದ ಬಹುದೊಡ್ಡ ಜಾನಪದ ಪರಂಪರೆಯ ಮೂಲ ಪುರುಷರಾಗಿರುವ ಮಂಟೇಸ್ವಾಮಿ ಅಧ್ಯಯನ ಪೀಠವನ್ನು ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಶಂಕನಪುರ ಮಹಾದೇವ ಹಾಗೂ ಇನ್ನಿತರರು ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲೇ ಶ್ರೀ ಮಂಟೇಸ್ವಾಮಿ ಅಧ್ಯಯನ ಪೀಠ ಉಳಿಸಿಕೊಳ್ಳುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಮುಂದುವರಿದು ಶ್ರೀಮಂಟೇಸ್ವಾಮಿ ಐಕ್ಯವಾಗಿರುವ ಬೊಪ್ಪೇಗೌಡನಪುರ, ರಾಚಪ್ಪಾಜಿ ಚೆನ್ನಾಜಮ್ಮ ಐಕ್ಯವಾಗಿರುವ ಕಪ್ಪಡಿ, ಚಿಕ್ಕಲ್ಲೂರು, ಕುರುಬನಕಟ್ಟೆ ಕ್ಷೇತ್ರಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು. ಶ್ರೀಮಂಟೇಸ್ವಾಮಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಬೇಕು ಎಂದು ಮನವಿ ಮಾಡಿದ್ದಾರೆ. ಪೀಠವನ್ನು ಇಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ರೂಪಿಸಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯಕ್ಕೆ ಶ್ರೀಮಂಟೇಸ್ವಾಮಿ ಪೀಠದ ದಾಖಲಾತಿಯನ್ನು ವರ್ಗಾಯಿಸುವಂತೆ ಪತ್ರ ಬರೆದಿದ್ದಾರೆ. ಇಲ್ಲಿ ಇರುವುದೆಲ್ಲಾ ಚಾಮರಾಜನಗರ ವಿಶ್ವವಿದ್ಯಾನಿಲಯಕ್ಕೆ ಎಂದ ಮೇಲೆ ಪೀಠವನ್ನು ಹೇಗೆ ವರ್ಗಾಯಿಸಲಾಗುತ್ತದೆ. ಶ್ರೀಮಂಟೇಸ್ವಾಮಿ ಅಧ್ಯಯನ ಪೀಠವನ್ನು ಇಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರಕ್ಕೆ ಪತ್ರ ಬರೆಯಲಾಗುತ್ತದೆ.
-ಪ್ರೊ.ಎಂ.ಆರ್.ಗಂಗಾಧರ್, ಕುಲಪತಿ, ಚಾಮರಾಜನಗರ ವಿಶ್ವವಿದ್ಯಾನಿಲಯ
ಮಂಟೇಸ್ವಾಮಿ ಅಧ್ಯಯನ ಪೀಠ ಚಾಮರಾಜನಗರ ಜಿಲ್ಲೆಯಲ್ಲಿ ಇರುವುದು ಅತ್ಯಂತ ಸೂಕ್ತವಾಗಿದೆ. ಅಧ್ಯಯನಕ್ಕೆ ಪೂರಕವಾದ ವಾತಾವರಣ ಇಲ್ಲಿದೆ. ಅದನ್ನು ಇಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ. ಸಾಧ್ಯವಾದರೆ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ.
-ಶಂಕನಪುರ ಮಹಾದೇವ, ಸಂಸ್ಕೃತಿ ಚಿಂತಕರು, ಕೊಳ್ಳೇಗಾಲ