ಹಣಕಾಸು ವಿಕೇಂದ್ರೀಕರಣಕ್ಕೆ ಮಾನ್ಯತೆ ನೀಡದ ರಾಜ್ಯ ಆಯವ್ಯಯ

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ 9ನೇ ಬಾರಿಗೆ ರಾಜ್ಯದ ಆಯವ್ಯಯವನ್ನು ಮಂಡಿಸಿದ್ದಾರೆ. 2025-26ನೇ ಸಾಲಿನ ಆಯವ್ಯಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಒಟ್ಟು 4.09 ಲಕ್ಷ ಕೋಟಿ ರೂ. ಗಾತ್ರದ ಆಯವ್ಯಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 26,735 ಕೋಟಿ ರೂ.ಗಳನ್ನು ಘೋಷಿಸಲಾಗಿದೆ. ಇದರಲ್ಲಿ ಶೇ. 60ಕ್ಕೂ ಹೆಚ್ಚು ಮೊತ್ತ ಸಿಬ್ಬಂದಿಯ ವೇತನ ಮತ್ತು ಆಡಳಿತಾತ್ಮಕ ವೆಚ್ಚಗಳಿಗೆ ಬಳಕೆಯಾಗುತ್ತದೆ. ನೇರವಾಗಿ ಅಭಿವೃದ್ಧಿಗೆ ಸಿಗುವ ಅನುದಾನ ಶೇ. 40ಕ್ಕಿಂತಲೂ ಕಡಿಮೆ.
ಈ ಕೆಳಗಿನ ನಿರೀಕ್ಷೆಗಳು ಹುಸಿಯಾಗಿವೆ:
1. 3 ಸ್ಥರಗಳ ಪಂಚಾಯತ್ ರಾಜ್ ಸಂಸ್ಥೆಗಳ ಶಾಸನಬದ್ಧ ಅನುದಾನದಲ್ಲಿ ಏರಿಕೆ ಇಲ್ಲ.
2. ತಾ.ಪಂ. ಮತ್ತು ಗ್ರಾ.ಪಂ.ಗಳ ಚುನಾಯಿತ ಪ್ರತಿನಿಧಿಗಳ ಸಭಾ ಭತ್ತೆ, ಅಧ್ಯಕ್ಷರು, ಉಪಾಧ್ಯಕ್ಷರು ಮತ್ತ್ತು ಸದಸ್ಯರ ಮಾಸಿಕ ಗೌರವ ಧನವನ್ನು ಏರಿಸಬೇಕು ಎನ್ನುವ ಒತ್ತಾಯಕ್ಕೆ ಮನ್ನಣೆ ಸಿಕ್ಕಿಲ್ಲ.
3. ಗ್ರಾಮೀಣಾಭಿವೃದ್ಧಿಯಲ್ಲಿ ಪ್ರಮುಖ ಕಾಯ್ದೆ ಬದ್ಧ ವ್ಯವಸ್ಥೆಗಳಿಗಿರುವ ತಾಲೂಕು ಮತ್ತು ಜಿಲ್ಲಾ ಯೋಜನಾ ಸಮಿತಿಗಳನ್ನು ಕ್ರಿಯಾಶೀಲಗೊಳಿಸಲು ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ.
4. ಗ್ರಾಮ ಪಂಚಾಯತ್‌ಗಳ ಬೃಹತ್ ಪ್ರಮಾಣದ ವಿದ್ಯುತ್ ಬಿಲ್ ಬಾಕಿಯನ್ನು ಮಾಡಲು ಪಾವತಿಸಲು ಪೂರಕವಾದ ಘೋಷಣೆ ಇಲ್ಲ.
ಆಯವ್ಯಯದ ಮುಖ್ಯಾಂಶಗಳು:
* 20024-25ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದ್ದ ಪ್ರಗತಿ ಪಥ ಹೆಸರಿನ ಗ್ರಾಮೀಣ ರಸ್ತೆಗಳ ಯೋಜನೆಗೆ ರೂ. 5,200 ಕೋಟಿ ಕಾದಿರಿಸಿದ್ದು, ಈ ಸಾಲಿನಲ್ಲಿ ಯೋಜನೆಯನ್ನು ಮುಂದುವರಿಸುವ ಭರವಸೆ.
* ಗ್ರಾಮೀಣ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದ ಜಲ ಜೀವನ್ ಮಿಷನ್ ಯೋಜನೆಗೆ 6,050 ಕೋಟಿ ರೂ. ಮೀಸಲು.
* ಕಲ್ಯಾಣ ಕರ್ನಾಟಕದ 38 ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಯ ಉದ್ದೇಶದ ಕಲ್ಯಾಣ ಪಥ ಯೋಜನೆಗೆ 1,000 ಕೋಟಿ ರೂ.
ಮೇಲಿನ ಯೋಜನೆಗಳ ಅನುಷ್ಠಾನದಲ್ಲಿ ಗುತ್ತಿಗೆದಾರರು, ಶಾಸಕರು ಮತ್ತು ಅಧಿಕಾರಶಾಹಿಗಳ ಪಾತ್ರವೇ ಪ್ರಮುಖವಾಗಿದೆ. ಪಂಚಾಯತ್ ರಾಜ್ ಸಂಸ್ಥೆಗಳ ಜವಾಬ್ದಾರಿ ನಿರ್ವಹಣೆಗೆ ಸೀಮಿತವಾಗಿದೆ.
*ವಿದ್ಯುತ್ ಕೊರತೆಯನ್ನು ನೀಗಿಸಲು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಉದ್ಧೇಶಿಸಿರುವ ಸೋಲಾರ್ ಮೈಕ್ರೋ ಗ್ರಿಡ್‌ಗೆ ಸಂಬಂಧಿಸಿ ಅನುದಾನ ಘೋಷಿಸಿಲ್ಲ.
* ಬಯಲು ಸೀಮೆ, ಮಲೆನಾಡು ಮತ್ತು ಕರಾವಳಿ ಪ್ರದೇಶಾಭಿವೃದ್ಧಿ ನಿಗಮಗಳಿಗೆ ಮೀಸಲಿಟ್ಟಿರುವ 83 ಕೋಟಿ ರೂ. ಗಳು ಪಂಚಾಯತ್ ರಾಜ್ ಸಂಸ್ಥೆಗಳ ಕ್ರಿಯಾಯೋಜನೆಗೆ ಸೇರ್ಪಡೆ ಆಗುವ ಸಾಧ್ಯತೆಗಳು ಇಲ್ಲ.
* ಅರಿವು ಕೇಂದ್ರಗಳ ಮೂಲಕ ಜಾರಿ ಆಗಬೇಕಿರುವ ಚಿಗುರು ಕಾರ್ಯಕ್ರಮ, ಸಂವಿಧಾನ ಸಾಕ್ಷರತೆ, ಆರ್ಥಿಕ ಸಾಕ್ಷರತೆ, ಮಹಿಳಾ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ-ಸಾಕಾರ ತರಬೇತಿ, ಇ - ಸೊತ್ತು ಅಭಿಯಾನ, ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳಿಗೆ ಪಂಚತಂತ್ರ ತಂತ್ರಾಂಶದ ವಿಸ್ತರಣೆ ಮುಂತಾದ ಕಾರ್ಯಕ್ರಮಗಳಿಗೆ ಯಾವುದೇ ಹಣಕಾಸು ಒದಗಿಸಿಲ್ಲ.
ಕೊನೆ ಮಾತು: ಅಧಿಕಾರ ವಿಕೇಂದ್ರೀಕರಣದ ಮೂಲತತ್ವಗಳಲ್ಲಿ ಒಂದಾದ ‘ಹಣಕಾಸು ವಿಕೇಂದ್ರೀಕರಣ’ಕ್ಕೆ ರಾಜ್ಯದ ಆಯವ್ಯಯದಲ್ಲಿ ಮನ್ನಣೆ ನೀಡಿಲ್ಲ. ಆದರೂ ಕರ್ನಾಟಕ ಪಂಚಾಯತ್ ರಾಜ್ ಸಬಲೀಕರಣದಲ್ಲಿ ದೇಶಕ್ಕೆ ಮೊದಲ ಸ್ಥಾನ ಪಡೆದಿದೆ..!