ರಾಜ್ಯ ಬಜೆಟ್: ಕೊಡಗಿಗೆ ಸಿಗಲಿದೆಯೇ ವಿಶೇಷ ಯೋಜನೆ?
ಜಿಲ್ಲೆಗೆ ಭರಪೂರ ಕೊಡುಗೆಯ ನಿರೀಕ್ಷೆ

ಮಡಿಕೇರಿ, ಮಾ.2: ಮಾರ್ಚ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನದಲ್ಲಿ 16ನೇ ಬಾರಿ ರಾಜ್ಯ ಬಜೆಟ್ ಮಂಡನೆ ಮಾಡಿ ಇತಿಹಾಸ ಸೃಷ್ಟಿ ಮಾಡಲಿದ್ದಾರೆ.
ಈ ಬಾರಿಯ ಆಯವ್ಯಯದಲ್ಲಿ ಕೊಡಗಿಗೆ ಹಲವು ಯೋಜನೆಗಳು ಘೋಷಣೆಯಾಗುವ ನಿರೀಕ್ಷೆಯಲ್ಲಿ ಕೊಡಗಿನ ಜನತೆ ಇದ್ದಾರೆ. ಬಜೆಟ್‌ನಲ್ಲಿ ಕೊಡಗು ಜಿಲ್ಲೆಗೆ ವಿಶೇಷ ಯೋಜನೆಗಳು ಘೋಷಣೆಯಾಗುವ ಸಾಧ್ಯತೆಗಳಿವೆ.
2023ರ ರಾಜ್ಯ ಬಜೆಟ್‌ನಲ್ಲಿ ಕೊಡಗು ಜಿಲ್ಲೆಗೆ ನಿರಾಸೆಯುಂಟು ಮಾಡಿತ್ತು. ಆದರೆ 2024ರ ಆಯವ್ಯಯದಲ್ಲಿ ಕೊಡಗು ಜಿಲ್ಲೆಗೆ ವಿಶೇಷ ಯೋಜನೆಗಳೊಂದಿಗೆ ಆರೋಗ್ಯ ಕ್ಷೇತ್ರಕ್ಕೆ ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು.
ಕೊಡಗು ಜಿಲ್ಲೆಯಲ್ಲಿ ಎರಡು ದಶಕಗಳ ಬಳಿಕ ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ್ದಾರೆ.ಸರಕಾರದ ಮಟ್ಟದಲ್ಲಿ ಪ್ರಭಾವ ಬೀರಿ ಜಿಲ್ಲೆಗೆ ಹಲವು ಯೋಜನೆಗಳನ್ನು ತರುವ ಸಾಮರ್ಥ್ಯವನ್ನು ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಹೊಂದಿದ್ದಾರೆ. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಶಾಸಕದ್ವಯರ ಮುತುವರ್ಜಿಯಿಂದ ನಡೆಯುತ್ತಿದೆ. ಹೀಗಾಗಿ ಈ ಬಾರಿಯ ಆಯವ್ಯಯದಲ್ಲಿ ಕೊಡಗು ಜಿಲ್ಲೆಗೆ ಭರಪೂರ ಕೊಡುಗೆ ಸಿಗುವ ನಿರೀಕ್ಷೆಯಲ್ಲಿ ಜನತೆ ಇದ್ದಾರೆ.
ಕ್ರೀಡಾ ಜಿಲ್ಲೆಯಲ್ಲಿ ಕ್ರೀಡೆಗೆ ವ್ಯವಸ್ಥೆಗಳೇ ಇಲ್ಲ!
ಕೊಡಗು ಜಿಲ್ಲೆ ರಾಜ್ಯ ಮತ್ತು ರಾಷ್ಟ್ರ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಅಪ್ರತಿಮ ಕ್ರೀಡಾಪಟುಗಳನ್ನು ಪರಿಚಯಿಸಿದೆ. ವಾಸ್ತವವಾಗಿ ಕೊಡಗು ನಾಮಕಾವಸ್ಥೆಗೆ ಮಾತ್ರ ಕ್ರೀಡಾ ಜಿಲ್ಲೆ. ಜಿಲ್ಲೆಯಲ್ಲಿ ಕ್ರೀಡೆಗೆ ಬೇಕಾದ ಮೂಲಭೂತ ಸೌಕರ್ಯಗಳು ಇಲ್ಲ.
ಮಡಿಕೇರಿ ನಗರದಲ್ಲಿರುವ ಏಕೈಕ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ಬೇಕಾದ ಸೌಕರ್ಯಗಳೇ ಇಲ್ಲ. ಕೆ.ಎಸ್. ಜನರಲ್ ತಿಮ್ಮಯ್ಯ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಯಾವ ಸರಕಾರವೂ ಅನುದಾನ ಘೋಷಣೆ ಮಾಡದೆ ನಿರ್ಲಕ್ಷ್ಯವಹಿಸಿದೆ ಎಂದು ಕ್ರೀಡಾಸಕ್ತರು ಆರೋಪಿಸುತ್ತಿದ್ದಾರೆ.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಆಟದ ಮೈದಾನವೇ ಇಲ್ಲದ ಪರಿಸ್ಥಿತಿ ಇದೆ. ಕ್ರೀಡಾಪಟುಗಳು ಪಾಳುಬಿದ್ದ ಗದ್ದೆಗಳನ್ನು ಆಟದ ಮೈದಾನವನ್ನಾಗಿ ಉಪಯೋಗಿಸುತ್ತಿದ್ದಾರೆ. ಕೊಡಗು ಜಿಲ್ಲೆಗೆ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂಬ ಕೂಗು ಕಳೆದ ಹಲವು ದಶಕಗಳಿಂದ ಕೇಳಿಬರುತ್ತಿದೆ. ಆದರೆ ಜಿಲ್ಲೆಗೆ ಕ್ರೀಡಾ ವಿವಿ ಕನಸಾಗಿ ಮಾತ್ರ ಉಳಿದಿದೆ. ರಾಜ್ಯ ಸರಕಾರದ ಈ ಬಾರಿಯ ಬಜೆಟ್‌ನಲ್ಲಿ ಕೊಡಗಿನ ಕ್ರೀಡೆಯ ಅಭಿವೃದ್ಧಿಗೆ ವಿಶೇಷ ಅನುದಾನ ಸಿಗುವ ನಿರೀಕ್ಷೆಯಲ್ಲಿ ಜನತೆ ಇದ್ದಾರೆ.
ಕಾಫಿ ಬೆಳೆಗಾರರ ಸಮಸ್ಯೆಗಳಗೆ ಸಿಗುತ್ತಾ ಪರಿಹಾರ
ಕೊಡಗು ಜಿಲ್ಲೆಯ ಮುಖ್ಯ ವಾಣಿಜ್ಯ ಬೆಳೆ ಕಾಫಿ ಮತ್ತು ಕರಿಮೆಣಸು. ಕಳೆದ ಹಲವು ದಶಕಗಳಿಂದ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಕುಸಿತ,ಅತಿವೃಷ್ಟಿ,ಅಕಾಲಿಕ ಮಳೆ,ಪ್ರಕೃತಿ ವಿಕೋಪದಂತಹ ವಿವಿಧ ಸಮಸ್ಯೆಗಳಿಗೆ ಸಿಲುಕಿ ಕಾಫಿ ಬೆಳೆಗಾರರು ನರಳುತ್ತಿದ್ದಾರೆ.
ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ದಶಕಗಳ ಬೇಡಿಕೆಯಾದ ಕಾಫಿ ತೋಟಗಳಿಗೆ ಹತ್ತು ಎಚ್‌ಪಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಪೂರೈಕೆ ಕೇವಲ ಬೇಡಿಕೆಯಾಗಿ ಉಳಿದಿದೆ. ಸರಕಾರ ಬದಲಾಗುತ್ತಾ ಬಂದರೂ ಕಾಫಿ ಬೆಳೆಗಾರರ ಬೇಡಿಕೆಗೆ ಯಾರೂ ಇದುವರೆಗೆ ಸ್ಪಂದಿಸಿಲ್ಲ ಎಂದು ಬೆಳೆಗಾರರು ಆರೋಪಿಸುತ್ತಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಾದರೂ ಹತ್ತು ಎಚ್‌ಪಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಪೂರೈಕೆ ಘೋಷಣೆಯಾಗಬಹುದೆಂಬ ನಿರೀಕ್ಷೆ ಯಲ್ಲಿ ಜಿಲ್ಲೆಯ ಕಾಫಿ ಬೆಳೆಗಾರರು ಇದ್ದಾರೆ. ಅದಲ್ಲದೆ ಕೊಡಗು ಜಿಲ್ಲೆಯ ಪ್ರವಾಸೋದ್ಯಮ, ಮಾನವ- ವನ್ಯಜೀವಿಗಳ ಸಂಘರ್ಷಕ್ಕೆ ಶಾಶ್ವತ ಯೋಜನೆ,ಕಾವೇರಿ ನದಿ ಸಂರಕ್ಷಣೆಗೆ ವಿಶೇಷ ಯೋಜನೆ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಸೇರಿದಂತೆ ಹಲವು ಯೋಜನೆಗಳ ಘೋಷಣೆಯ ನಿರೀಕ್ಷೆಯಲ್ಲಿ ಕೊಡಗಿನ ಜನತೆ ಇದ್ದಾರೆ.