ಪ್ರಧಾನಿ ಮೋದಿ ದೇಶದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ಮನೆಗೆ ನೀಡಿರುವ ಭೇಟಿ | ನ್ಯಾಯಾಂಗದ ಪಾವಿತ್ರ್ಯ ಉಳಿಸುವ ಹೆಜ್ಜೆಯೇ?
ಪ್ರಧಾನಿ ನರೇಂದ್ರ ಮೋದಿ ದೇಶದ ಮುಖ್ಯ ನ್ಯಾಯಮೂರ್ತಿಗಳ ಮನೆಗೆ ಗಣಪತಿ ಪೂಜೆಗಾಗಿ ಭೇಟಿ ನೀಡಿದ್ದು ದೇಶದಲ್ಲೀಗ ಭಾರೀ ಚರ್ಚೆಯ ವಿಷಯವಾಗಿದೆ.
ಈ ಭೇಟಿಯ 29 ಸೆಕೆಂಡ್‌ಗಳ ವೀಡಿಯೊ ಮಾತ್ರ ಇದೆ.
ಸಿಜೆಐ ಮನೆಗೆ ಭೇಟಿ ನೀಡಿದ ಫೋಟೊವನ್ನು ಸ್ವತಃ ಪ್ರಧಾನಿಯೇ ಎಕ್ಸ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಪ್ರಧಾನಿ ವೆಬ್‌ಸೈಟ್‌ನಲ್ಲೂ 10 ಫೋಟೊಗಳಿವೆ. ಅವರ ಯೂಟ್ಯೂಬ್ ಚಾನೆಲ್‌ನಲ್ಲೂ 29 ಸೆಕೆಂಡ್‌ಗಳ ಈ ವೀಡಿಯೊ ಸಿಗುತ್ತದೆ.
ಮುಖ್ಯ ನ್ಯಾಯಮೂರ್ತಿ ಕೂಡ ಸಮಾಜದಲ್ಲಿ ಅವರಿವರನ್ನು ಭೇಟಿಯಾಗುವುದು ಸಹಜ. ಆದರೆ ಇಲ್ಲಿ ಮೋದಿ ಮುಖ್ಯ ನ್ಯಾಯಮೂರ್ತಿಗಳ ಮನೆಗೆ ಬಂದದ್ದು ಇಷ್ಟೇ ಸಹಜವಾದದ್ದೇ ಅಥವಾ ಇನ್ನೇನಾದರೂ ಇದೆಯೇ?
ಈ ವೀಡಿಯೊ ನೋಡುತ್ತಿದ್ದರೆ ಬೇರೆ ಏನೋ ಅನ್ನಿಸುತ್ತಿದ್ದರೂ ಹೇಳಲಿಕ್ಕಾಗದ ಸ್ಥಿತಿ. ಇದನ್ನು ದೇಶದ ರಾಜಕೀಯ ಸಂದರ್ಭದ ಹಿನ್ನೆಲೆಯಲ್ಲಿ ನೋಡಬೇಕೆ? ಹಾಗೆ ನೋಡುವುದು ಸರಿಯೆ?
‘‘ರಾಜಕೀಯ ನಾಯಕರು ಚುನಾವಣೆಯಲ್ಲಿ ಗೆದ್ದಾಗ ನ್ಯಾಯಾಧೀಶರು ಹೂಗುಚ್ಛ ಕಳಿಸಿದರೆ, ಅಭಿನಂದಿಸಿ ಪತ್ರ ಬರೆದರೆ, ನ್ಯಾಯಾಂಗದ ಮೇಲಿನ ಜನರ ವಿಶ್ವಾಸವೇ ಕುಸಿದುಹೋಗುತ್ತದೆ’’ ಎಂದು 2018ರಲ್ಲಿ ನ್ಯಾ. ವಿ.ಡಿ. ತುಲಜಾಪುರ್ಕರ್ ಹೇಳಿದ್ದರು.
ಅವರ ಈ ಮಾತು ಇಂದಿರಾ ಗಾಂಧಿಗೆ ನ್ಯಾ. ಪಿ.ಎನ್. ಭಗವತಿ ಬರೆದ ಪತ್ರಕ್ಕೆ ಸಂಬಂಧಿಸಿದ್ದಾಗಿತ್ತು.
1980ರ ಜನವರಿ 15ರಂದು ನ್ಯಾ. ಪಿ.ಎನ್. ಭಗವತಿ ಅವರು ಇಂದಿರಾ ಗಾಂಧಿಗೆ ಲೋಕಸಭೆ ಚುನಾವಣೆ ಗೆದ್ದಾಗ ಅಭಿನಂದಿಸಿ ಪತ್ರ ಬರೆದಿದ್ದರು. ಅವರು ಹಾಗೆ ಇಂದಿರಾ ಗಾಂಧಿಗೆ ಪತ್ರ ಬರೆದಿದ್ದುದಕ್ಕೆ ತೀವ್ರ ಟೀಕೆಯೂ ನ್ಯಾಯಾಂಗದ ವಲಯದಲ್ಲೇ ವ್ಯಕ್ತವಾಗಿತ್ತು. ಆನಂತರ ನ್ಯಾ.ಪಿ.ಎನ್. ಭಗವತಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯೂ ಆದರು.
ಈ ಪ್ರಸಂಗವನ್ನು ಅಭಿನವ್ ಚಂದ್ರಚೂಡ್ ತಮ್ಮ ಪುಸ್ತಕ ‘ಸುಪ್ರೀಂ ವಿಸ್ಪರ್ಸ್’ನಲ್ಲಿ ಪ್ರಸ್ತಾಪಿಸಿದ್ದಾರೆ.
ಈ ಪ್ರಸಂಗ ಭಾರತದ ನ್ಯಾಯಾಂಗ ಇತಿಹಾಸದಲ್ಲಿಯೇ ಒಂದು ದೊಡ್ಡ ನಾಚಿಕೆಗೇಡಾಗಿತ್ತು.
ನ್ಯಾ. ವಿ.ಡಿ. ತುಲಜಾಪುರ್ಕರ್ ಅವರ ಆಕ್ರೋಶಕ್ಕೆ ಕಾರಣವಾದ ಹಾಲಿ ನ್ಯಾಯಾಧೀಶರೊಬ್ಬರು ರಾಜಕಾರಣಿಗೆ ಪತ್ರ ಬರೆದಿದ್ದ ವಿಚಾರವನ್ನು ಪುಸ್ತಕದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಟಿಪ್ಪಣಿಯ ಬಗ್ಗೆ ಹೇಳುವಾಗ ಪ್ರಸ್ತಾಪಿಸಲಾಗಿದೆ.
ಮೇಘಾಲಯ ಹೈಕೋರ್ಟ್‌ನ ನ್ಯಾ. ಎಸ್.ಆರ್. ಸೇನ್ ತಮ್ಮ ತೀರ್ಪಿನಲ್ಲಿ ಮೋದಿಯನ್ನು ಹಾಡಿಹೊಗಳಿದ್ದರು.
‘‘ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಮಾತ್ರವೇ ಭಾರತ ಇಸ್ಲಾಮಿಕ್ ರಾಷ್ಟ್ರವಾಗುವುದನ್ನು ತಡೆಯುವುದು ಸಾಧ್ಯ’’ ಎಂದು ಅವರು ತಮ್ಮ ತೀರ್ಪಿನ ಟಿಪ್ಪಣಿಯಲ್ಲಿ ಹೇಳಿದ್ದರು.
ಸುಪ್ರೀಂ ಕೋರ್ಟ್ ಜಡ್ಜ್ ನ್ಯಾ. ಎಂ.ಆರ್. ಶಾ ಒಮ್ಮೆ, ‘‘ಮೋದಿ ನನ್ನ ಹೀರೋ’’ ಎಂದು ಹೇಳಿದ್ದರು.
ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಚ್.ಎಸ್. ಕಪಾಡಿಯಾ ‘‘ನ್ಯಾಯಾಧೀಶರಾದವರು ಸಂತರ ಹಾಗೆ ಇರಬೇಕು. ಅವರು ರಾಜಕೀಯ ನಾಯಕರಿಂದ ದೂರವೇ ಇರಬೇಕು’’ ಎಂದಿದ್ದರು. ಆದರೆ ಅವರ ಈ ಮಾತನ್ನು ಕೇಳುವವರು ಯಾರೂ ಇರಲಿಲ್ಲ.
ಸುಪ್ರೀಂ ಕೋರ್ಟ್ ಕಲಾಪ ವರದಿಗಾರಿಕೆಯಲ್ಲಿ ಅನುಭವವಿರುವ ಪತ್ರಕರ್ತ ಸೌರಭ್ ದಾಸ್, ಹೇಗೆ ರಾಜಕೀಯವಾಗಿ ಸೂಕ್ಷ್ಮವಾಗಿರುವ ಪ್ರಕರಣಗಳು ನಿರ್ದಿಷ್ಟ ನ್ಯಾಯಾಧೀಶರ ಪೀಠದ ಮುಂದೆ ಹೋಗುತ್ತವೆ ಎಂಬುದನ್ನು ಗಮನಿಸಿರುವುದಿದೆ.
ಹೀಗೆ ಕೇಸ್‌ಗಳು ಯಾವ ಪೀಠದ ಮುಂದೆ ಹೋಗಬೇಕು ಎಂದು ಲಿಸ್ಟಿಂಗ್ ಆಗುವುದನ್ನು ರೋಸ್ಟರ್ ಎನ್ನಲಾಗುತ್ತದೆ.
ಇದೆಲ್ಲದರ ಮೇಲೆ ಹಿಡಿತವಿರುವ ಮುಖ್ಯ ನ್ಯಾಯಮೂರ್ತಿಯನ್ನು ಮಾಸ್ಟರ್ ಆಫ್ ರೋಸ್ಟರ್ ಎನ್ನಲಾಗುತ್ತದೆ.
2022ರ ನವೆಂಬರ್‌ನಲ್ಲಿ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲ ದಿನಗಳ ಬಳಿಕ ಚಂದ್ರಚೂಡ್ ಅವರು ಪ್ರಕರಣಗಳ ಲೀಸ್ಟಿಂಗ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿದ್ದರು. ಅವರು ಬದಲಾವಣೆ ತರಬೇಕು ಎಂದು ಅಂದುಕೊಂಡಿದ್ದೇನೊ ಇರಬಹುದು. ಆದರೆ ಬದಲಾವಣೆ ಆಯಿತೇ?
ಈ ವೀಡಿಯೊ ನೋಡಿ ಸೌರಭ್ ದಾಸ್ ಅದನ್ನೊಂದು ಪತನ ಎಂದಿದ್ದಾರೆ. ‘‘ನ್ಯಾಯಾಂಗದ ಪಾವಿತ್ರ್ಯದ ಬಗ್ಗೆ ಭರವಸೆ ಹೊಂದಿದ್ದವರ ಪಾಲಿಗೆ ಇದೊಂದು ಅಶುಭ ಸಂಕೇತದಂತೆ ಕಾಣಿಸುತ್ತದೆ’’ ಎಂದಿದ್ದಾರೆ.
ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಇರಬೇಕಾದ ಅಂತರ ಇಲ್ಲವಾಗಿರುವುದರ ಅಪಾಯವನ್ನೂ, ಅವೆರಡರ ನಡುವಿನ ತೆಳುಗೆರೆ ಬಹಿರಂಗವಾಗಿಯೇ ಅಸ್ಪಷ್ಟವಾಗಿರುವುದನ್ನೂ ಅವರು ತಮ್ಮ ಟ್ವೀಟ್‌ನಲ್ಲಿ ಗಮನಿಸಿದ್ದಾರೆ.
ಭಾರತದ ಭವಿಷ್ಯದ ಮುಖ್ಯ ನ್ಯಾಯಮೂರ್ತಿಗಳಿಗೆ ಮಾತ್ರವಲ್ಲದೆ, ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು ಮತ್ತು ರಾಷ್ಟ್ರದಾದ್ಯಂತದ ಜಿಲ್ಲಾ ನ್ಯಾಯಾಲಯಗಳಲ್ಲಿನ ಪ್ರತಿಯೊಬ್ಬ ನ್ಯಾಯಾಧೀಶರಿಗೂ ಇದು ನೀಡಿರುವ ಅಪಾಯಕಾರಿ ಸಂದೇಶ ತೀರಾ ಆತಂಕಕಾರಿಯಾಗಿದೆ.
‘‘ನ್ಯಾಯಾಂಗದ ಸಮಗ್ರತೆಯೇ ರಾಜಿಯಾದಂತಾಗಿದೆ. ನ್ಯಾಯಾಂಗದ ಮುಖ್ಯಸ್ಥರಾಗಿ, ಚಂದ್ರಚೂಡ್ ಅವರು ಅದರ ಸ್ವಾತಂತ್ರ್ಯವನ್ನು ಕಾಪಾಡಬೇಕಾಗಿತ್ತು. ಆದರೆ ಈ ಸನ್ನಿವೇಶ ಅದಕ್ಕೆ ವಿರುದ್ಧವಾದ ಚಿತ್ರವನ್ನು ಕೊಡುತ್ತಿದೆ’’ ಎಂದು ಸೌರಭ್ ದಾಸ್ ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳ ಮನೆಗೆ ಪ್ರಧಾನಿ ಮೋದಿ ಹೋಗಿ, ಗಣಪತಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
ಭಕ್ತಿಯ ನೆಪದಲ್ಲಿನ ರಾಜಕೀಯವೆ ಇದು?
ಇದರ ಬಗ್ಗೆ ಮಾತಾಡಿದರೆ ಗಣಪತಿಯ ಹೆಸರಿನಲ್ಲಿ ರಾಜಕೀಯ ಶುರು ಮಾಡಿದ್ದಾರೆ ಎನ್ನಲಾಗುತ್ತದೆ ಎಂದೇ ಎಲ್ಲರೂ ಮೌನ ವಹಿಸಿದ್ದಾರೆಯೆ?
2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸುಪ್ರೀಂ ಕೋರ್ಟ್‌ನ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಸ್ವಾತಿ ಚತುರ್ವೇದಿ ವರದಿ ಮಾಡಿದ್ದರು.
ಅವರು ಬರೆದಂತೆ, ಕಾರ್ಯಕ್ರಮಕ್ಕೆ ಹೋದಾಗ ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಬಳಿ ಮೋದಿ ಕೋರ್ಟ್ ನಂ.1 ನೋಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರು.
ಅದು ಮುಖ್ಯ ನ್ಯಾಯಮೂರ್ತಿಗಳ ಪೀಠವಾಗಿರುತ್ತದೆ.ವರದಿ ಪ್ರಕಾರ, ದೇಶದ ಯಾವ ಪ್ರಧಾನಿಯೂ ಹಾಗೆ ಮಾಡಿದ್ದಿರಲಿಲ್ಲ.
ಆ ಅವಧಿಯಲ್ಲಿ ರಫೇಲ್ ವಿಚಾರ ಸೇರಿದಂತೆ ಭಾರತ ಸರಕಾರದ ವಿರುದ್ಧದ ಹಲವು ಪ್ರಕರಣಗಳು ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ನಡೆಯುತ್ತಿದ್ದವು.
ಈಚೆಗೆ ಸುಪ್ರಿಂ ಕೋರ್ಟ್‌ಗೆ 75 ತುಂಬಿದ ಹೊತ್ತಿನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯಿದ್ದರು, ಮುಖ್ಯ ನ್ಯಾಯಮೂರ್ತಿಗಳೂ ಇದ್ದರು. ಯಾರಿಗೂ ಇದೇನಾಗುತ್ತಿದೆ ಎಂದು ಅನ್ನಿಸಲೇ ಇಲ್ಲ.
ಈಗ ಮುಖ್ಯ ನ್ಯಾಯಮೂರ್ತಿಗಳ ಮನೆಯಲ್ಲಿನ ಗಣಪತಿ ಪೂಜೆಯಲ್ಲಿ ಪ್ರಧಾನಿ ಭಾಗವಹಿಸಿದ್ದ ಬಗ್ಗೆ ‘ಟ್ರೈಬಲ್ ಆರ್ಮಿ’ ಎಂಬ, 3 ಲಕ್ಷ ಮಂದಿ ಫಾಲೋವರ್‌ಗಳಿರುವ ಟ್ವಿಟರ್ ಹ್ಯಾಂಡಲ್, ‘‘ಇದು ಧರ್ಮನಿರಪೇಕ್ಷತೆ ಮತ್ತು ನ್ಯಾಯ ನಿಷ್ಪಕ್ಷಪಾತದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ. ಸರಕಾರದ ಪ್ರಮುಖ ವ್ಯಕ್ತಿಯ ಜೊತೆ ಧಾರ್ಮಿಕ ಕಾರ್ಯಕ್ರಮದಲ್ಲಿ ಇರುವುದು ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ವಿಶ್ವಸನೀಯತೆಯನ್ನು ದುರ್ಬಲಗೊಳಿಸುತ್ತದೆ’’ ಎಂದು ಹೇಳಿದೆ.
‘ಇಂಡಿಯನ್ ಎಕ್ಸ್‌ಪ್ರೆಸ್’ ಪ್ರಕಟಿಸಿದ್ದ ವರದಿಯೊಂದು ಹೇಳುವಂತೆ, ವಿಎಚ್‌ಪಿ ಆಯೋಜಿಸಿದ್ದ ನ್ಯಾಯಾಧೀಶರುಗಳ ಸಮ್ಮೇಳನದಲ್ಲಿ 30ಕ್ಕೂ ಹೆಚ್ಚು ನಿವೃತ್ತ ನ್ಯಾಯಾಧೀಶರು ಪಾಲ್ಗೊಂಡಿದ್ದರು. ಕಾನೂನು ಮಂತ್ರಿಯೂ ಹೋಗಿದ್ದರು.ಸಮಾವೇಶದಲ್ಲಿ ವಕ್ಫ್ ಮಸೂದೆ, ವಾರಣಾಸಿ ಮತ್ತು ಮಥುರಾ ಕುರಿತು ಚರ್ಚೆಯಾಗಿತ್ತು. ಆದರೆ ಪಾಲ್ಗೊಂಡಿದ್ದ ನಿವೃತ್ತ ನ್ಯಾಯಾಧೀಶರುಗಳ ಹೆಸರು ಪ್ರಕಟಿಸಿರಲಿಲ್ಲ.
ಕಡೆಗೆ ಅವರು ಯಾರೆಂಬುದನ್ನು ಪತ್ತೆ ಮಾಡಿದ್ದ ‘ದಿ ಕ್ವಿಂಟ್’, ವಿಎಚ್‌ಪಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರಣವೇನಿತ್ತು ಎಂಬ ಪ್ರಶ್ನೆಯನ್ನು ಇಟ್ಟಿತ್ತು.
ಹೆಚ್ಚಿನವರು ಅದಕ್ಕೆ ಉತ್ತರಿಸಿರಲಿಲ್ಲ.
ಆದರೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಹೇಮಂತ್ ಗುಪ್ತಾ, ವಿಎಚ್‌ಪಿ ಸಮಾವೇಶದಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತಾಡಿದ್ದಾಗಿ ಹೇಳಿದ್ದನ್ನು ಕ್ವಿಂಟ್ ಉಲ್ಲೇಖಿಸಿತ್ತು.
ಅದೇ ಹೇಮಂತ್ ಗುಪ್ತಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದ ವೇಳೆ ಹಿಜಾಬ್ ನಿಷೇಧ ಕುರಿತ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿದಿದ್ದರು. ನಿವೃತ್ತರಾದ ಎರಡು ತಿಂಗಳ ಬಳಿಕ ಅವರು ನ್ಯೂದಿಲ್ಲಿ ಇಂಟರ್‌ನ್ಯಾಷನಲ್ ಆರ್ಬಿಟ್ರೇಷನ್ ಸೆಂಟರ್‌ನ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ವಿಎಚ್‌ಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾನೂನು ಮಂತ್ರಿ ಅರ್ಜುನ್ ರಾಮ್ ಮೇಘ್ವಾಲ್ ಕಾರ್ಯಕ್ರಮದ ಫೋಟೊ ಹಂಚಿಕೊಂಡಿದ್ದರು. ಬಚ್ಚಿಡುವಂಥದ್ದು ಏನೂ ಇಲ್ಲವಾದರೂ, ಇದರಲ್ಲಿ ಹೇಳಿಕೊಳ್ಳುವಂಥದ್ದು ಏನಿದೆ ಎನ್ನುವುದೇ ಪ್ರಶ್ನೆ.
ಕಲ್ಕತ್ತಾ ಹೈಕೋರ್ಟ್ ಜಡ್ಜ್ ಆಗಿದ್ದ ಅಭಿಜಿತ್ ಗಂಗೋಪಾಧ್ಯಾಯ್ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದೂ ಆಯಿತು, ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದೂ ಆಯಿತು.
ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಗೆರೆ ಇಲ್ಲವಾಗುತ್ತಿರುವುದನ್ನು ಸೂಚಿಸುವ ಇಂಥ ಸಂಗತಿಗಳು ಈಗಿನ ಈ ವೀಡಿಯೊಗಿಂತ ಮೊದಲೂ ಇದ್ದವು ಮತ್ತು ವ್ಯಾಪಕವಾಗಿಯೇ ಇದ್ದವು.
ನ್ಯಾಯಾಂಗದ ವಿಚಾರ ಮಾತ್ರವಲ್ಲ, ಚುನಾವಣಾ ಆಯೋಗದ ವಿಚಾರವೂ ಇಲ್ಲಿ ಬರುತ್ತದೆ.
ಈ ವಿಚಾರವನ್ನು ರಾಹುಲ್ ಗಾಂಧಿ ಮತ್ತೆ ಮತ್ತೆ ಎತ್ತಿದ್ದಾರೆ. ದೇಶದ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ ಮತ್ತು ಆರೆಸ್ಸೆಸ್ ತಮ್ಮ ವಶ ಮಾಡಿಕೊಳ್ಳುತ್ತಿವೆ ಎಂದು ರಾಹುಲ್ ಹೇಳುತ್ತಲೇ ಬಂದಿದ್ದಾರೆ. ಈಗ ಅಮೆರಿಕದಲ್ಲಿ ಕೂಡ ಅವರು ಈ ವಿಚಾರವಾಗಿ ಮಾತನಾಡಿದ್ದಾರೆ.
ದ್ವೇಷ ರಾಜಕಾರಣದಿಂದ ಈಗ ಅಂದಾಜಿಗೂ ಸಿಗದ ಹಾಗೆ ಸ್ವಾಯತ್ತ ಸಂಸ್ಥೆಗಳ ಪತನ ನಡೆಯುತ್ತಿದೆ. ನೋಡುವುದಕ್ಕೆ ಸುಂದರವಾಗಿಯೇ ಕಾಣಿಸಿಬಿಡುವ ಪತನ, ಹಾಗೆ ಅದನ್ನು ರೋಚಕವಾಗಿಸುವ ತಂತ್ರಗಾರಿಕೆ ತೀರಾ ಅಪಾಯ ತರಲಿವೆ ಎಂಬುದು ಮಾತ್ರ ಸತ್ಯ.
ಬಡವರ ಮನೆಯನ್ನು ಬುಲ್ಡೋಜರ್ ಬಳಸಿ ಕೆಡವಲಾ ಗುತ್ತದೆ. ಅತಿಕ್ರಮಿಸಲಾಗಿತ್ತು ಎಂದು ಬಿಂಬಿಸಿ ಒಂದು ಸಮುದಾಯದ ನೆಲೆಯನ್ನೇ ನೆಲಸಮವಾಗಿಸಲಾಗುತ್ತದೆ.
ಗುಂಪು ಹಿಂಸಾಚಾರದ ಬಗ್ಗೆ ಸುಪ್ರೀಂ ಕೋರ್ಟ್ ವಿಸ್ತೃತ ನಿರ್ದೇಶನವನ್ನು ನೀಡಿದೆ. ಆದರೆ ಗುಂಪು ಹಿಂಸೆ ನಿಂತಿತೆ?
ಈಗ ಮುಖ್ಯ ನ್ಯಾಯಮೂರ್ತಿಗಳ ಮನೆಯ ಗಣಪತಿ ಪೂಜೆಯಲ್ಲಿ ಮೋದಿ ಪಾಲ್ಗೊಂಡದ್ದರ ಬಗ್ಗೆ ಏಕೆ ನಾಯಕರು ಮೌನವಾಗಿದ್ದಾರೆ?
ಸೌರಭ್ ದಾಸ್ ಈ ಪ್ರಶ್ನೆಯೆತ್ತಿದ್ದಾರೆ.
‘‘ಕೆಲವು ಗೌರವಾನ್ವಿತರನ್ನು ಹೊರತುಪಡಿಸಿದರೆ, ಯಾವ ಸಂಸದರೂ ಇದನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ವಿಪಕ್ಷ ನಾಯಕ ರಾಹುಲ್ ಅವರಾದರೂ ಇದರ ಬಗ್ಗೆ ಆತ್ಮಸಾಕ್ಷಿಯ ಹೇಳಿಕೆ ನೀಡಬಾರದೇ?’’ ಎಂದು ಕೇಳಿರುವ ಅವರು, ರಾಹುಲ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಸಂಸದರು ಇದನ್ನು ಖಂಡಿಸಬೇಕಲ್ಲವೇ? ನ್ಯಾಯಾಂಗದ ಸ್ವಾತಂತ್ರ್ಯದ ಮಹತ್ವವನ್ನು ಅವರೆಲ್ಲ ಸ್ಪಷ್ಟವಾಗಿ ಪ್ರತಿಪಾದಿಸಬೇಕಲ್ಲವೆ? ಎಂದು ಕೇಳಿದ್ದಾರೆ.
ಈ ಹಿಂದೆ ಸೇನಾ ಮುಖ್ಯಸ್ಥರು ರಾಜಕೀಯ ಹೇಳಿಕೆಗಳನ್ನು ನೀಡುವಾಗ ಅದನ್ನು ಸಂಸದರೆಲ್ಲ ಪ್ರಶ್ನಿಸಿದ್ದರು. ಆದರೆ ಇಲ್ಲಿ ಯಾವುದು ಅವರನ್ನೆಲ್ಲ ಪ್ರತಿಕ್ರಿಯೆ ನೀಡದಂತೆ ತಡೆಯುತ್ತಿದೆ ಎಂಬ ಪ್ರಶ್ನೆಯನ್ನು ದಾಸ್ ಹಾಕಿದ್ದಾರೆ.
ಮೋದಿ ಸರಕಾರದ ಇಂಥದೇ ಇತರ ಯಾವುದೇ ಕ್ರಮದಂತೆ ಇದು ಕೂಡ ಸಂವಿಧಾನಕ್ಕೆ ಅಪಾಯಕಾರಿ ಎಂದು ಅವರು ಹೇಳಿದ್ದಾರೆ.
‘‘ವೀಡಿಯೊ ನೋಡಿದರೆ, ಅದನ್ನು ಎಡಿಟ್ ಮಾಡಿ, ಅಷ್ಟೇ ಬೇಗ ಟ್ವಿಟರ್‌ನಲ್ಲಿ ಹಂಚಿಕೊಂಡದ್ದು ನೋಡಿದರೆ, ಈ ಯಾವುದೂ ಆಕಸ್ಮಿಕವಾಗಿ ನಡೆದದ್ದಲ್ಲ, ಎಲ್ಲವೂ ಯೋಜಿತ ಎಂಬುದು ತಿಳಿಯುತ್ತದೆ’’ ಎನ್ನುತ್ತಾರೆ ಪತ್ರಕರ್ತ ರವೀಶ್ ಕುಮಾರ್.
ಸಿಜೆಐ ಚಂದ್ರಚೂಡ್ ಅವರು ಮೋದಿ ಅವರನ್ನು ಖಾಸಗಿಯಾಗಿ ತಮ್ಮ ನಿವಾಸಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಟ್ಟದ್ದು ಆಘಾತಕಾರಿ. ಕಾರ್ಯಾಂಗದಿಂದ ನಾಗರಿಕರ ಮೂಲಭೂತ ಹಕ್ಕನ್ನು ರಕ್ಷಿಸುವ ಜವಾಬ್ದಾರಿ ಹೊಂದಿರುವ ಮತ್ತು ಆ ಮೂಲಕ, ಸರಕಾರ ಸಂವಿಧಾನದ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸುವ ನ್ಯಾಯಾಂಗದ ವಿಚಾರವಾಗಿ ಇದು ಕೆಟ್ಟ ಸಂದೇಶವನ್ನು ನೀಡುತ್ತದೆ. ಇದಕ್ಕಾಗಿಯೇ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಕೈಯಳತೆಯ ಅಂತರ ಇರಬೇಕು ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ವೇಷಭೂಷಣಗಳ ಮೂಲಕವೇ ರಾಜಕೀಯ ಆಟವಾಡುವ ಮೋದಿ, ತಮಿಳುನಾಡಿಗೆ ಹೋದರೆ ಲುಂಗಿಯಲ್ಲಿ, ಪೂರ್ವ ರಾಜ್ಯಗಳಿಗೆ ಹೋದರೆ ಅಲ್ಲಿನ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈಗ ಮೋದಿ ಮುಖ್ಯ ನ್ಯಾಯಮೂರ್ತಿಗಳ ಮನೆಗೆ ಮಹಾರಾಷ್ಟ್ರದ ಸಾಂಪ್ರದಾಯಿಕ ಉಡುಪು ಧರಿಸಿ ಬಂದಿದ್ದರು.
ಇದನ್ನು ನೋಡಿದ ಮೇಲೆ ನಿಮಗೂ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅನುಮಾನ ಬರತೊಡಗಿದರೆ, ಈವರೆಗೂ ಏನೇನಾಗಿದೆ ಎಂಬುದನ್ನು ಒಮ್ಮೆ ನೆನಪು ಮಾಡಿಕೊಳ್ಳಬೇಕು.
ದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಯಾರನ್ನೋ ಜೈಲಿಗೆ ತಳ್ಳುವುದು, ಜಾಮೀನು ಕೊಡದೇ ಇರುವುದು ಇವೆಲ್ಲವೂ ಅನಾಯಾಸವಾಗಿ ನಡೆಯುತ್ತಿವೆ. ಬಂಧಿತರ ಕುಟುಂಬಸ್ಥರು ಅವರ ಬಿಡುಗಡೆಗಾಗಿ ತಿಂಗಳುಗಟ್ಟಲೆ, ವರ್ಷಗಟ್ಟಲೆ ಅಲೆದಾಡುವಂತೆ ಮಾಡಲಾಗುತ್ತದೆ.
ದೇಶದಲ್ಲಿ ಯಾರದೇ ಬದುಕನ್ನು ಹಾಳುಗೆಡಹುವುದು ಅತ್ಯಂತ ಸುಲಭವಾಗುತ್ತಿದೆ ಮತ್ತು ಹೀಗಾಗಲು, ಹೀಗೆ ಮಾಡಲು ಅಧಿಕಾರಸ್ಥರ ಇಷಾರೆ ಇದ್ದೇ ಇದೆ ಎಂಬುದು ಕೂಡ ರಹಸ್ಯವೇನಲ್ಲ.