ಜೈಲಿನ ಭಾವದಲ್ಲಿ ವಿದ್ಯಾರ್ಥಿಗಳು, ಒತ್ತಡದ ಗೂಡಿನಲ್ಲಿ ಶಿಕ್ಷಕರು

ಇತ್ತೀಚೆಗಷ್ಟೇ ಪುತ್ತೂರಿನ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಿಕ್ಷಕರು ಓದಿನ ಬಗ್ಗೆ ಪೋಷಕರಿಗೆ ಕರೆ ಮಾಡಿ ಹಿಂಸಿಸುತ್ತಾರೆಂದು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಸುದ್ದಿಯಾಯಿತು. ಹಾಗೆಯೇ ಈ ಘಟನೆ ಒಮ್ಮೆ ಮಾನಸಿಕ ಆಘಾತ ಉಂಟುಮಾಡಿತು. ಖಂಡಿತಾ ಶಿಕ್ಷಕರು, ಪೋಷಕರು ಹಾಗೂ ಮೇಲಧಿಕಾರಿಗಳು ಒಮ್ಮೆ ಯೋಚಿಸುವಂತೆ ಮಾಡಿದ ಘಟನೆಯಿದು.
ಇತ್ತೀಚೆಗೆ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅತೀ ವಿಪರೀತವೆನಿಸುವಷ್ಟು ಒತ್ತಡವಾಗುತ್ತಿದೆ ಎಂಬ ಸತ್ಯ ಎಲ್ಲರೂ ಅರಿಯಲೇಬೇಕಾದ ಜರೂರತ್ತಿದೆ. ಯಾವುದೇ ಮೂಲಭೂತ ಜ್ಞಾನ ಸಂಪಾದಿಸದೆ ಇರುವ ವಿದ್ಯಾರ್ಥಿಗಳನ್ನೂ ಯಾವುದೇ ಕಾರಣ ನೀಡದೆ ಸರಕಾರಿ ಶಾಲೆಗಳಿಗೆ ಸೇರಿಸಿಕೊಳ್ಳಲೇಬೇಕು. ಅಂತಹ ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ತುಂಬಾ ಶ್ರಮ ವಹಿಸುವ ಅಗತ್ಯ ಶಿಕ್ಷಕರಿಗಿರುತ್ತದೆ. ಹೀಗಿರುವಾಗ ಅನೇಕ ಕಾರಣಗಳಿಂದಾಗಿ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮವಾದ ಮೂಲಭೂತ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಎಂಟನೇ ತರಗತಿಯವರೆಗೆ ಅನುತ್ತೀರ್ಣ ಮಾಡುವ ಹಾಗಿಲ್ಲ. ಹಾಗಾಗಿ ಮೂಲಭೂತ ಜ್ಞಾನವನ್ನೇ ಹೊಂದದೆ ಪ್ರೌಢಶಾಲೆಗೆ ಬರುವ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದ ಕಲಿತು ಬರಬೇಕಾಗಿದ್ದೆಲ್ಲವನ್ನೂ ಹೈಸ್ಕೂಲಿನ ಮೂರು ವರ್ಷಗಳಲ್ಲಿ ಕಲಿಯಬೇಕಾದ ಅನಿವಾರ್ಯತೆಯಿದೆ. ಕಲಿಸಲೇಬೇಕಾದ ಅನಿವಾರ್ಯತೆ ಶಿಕ್ಷಕರಿಗೂ ಒದಗಿದೆ.
ಇತ್ತೀಚಿನ ದಿನಗಳಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳು ಸಹಿಸಲಾಗದ ಹೊರೆ ಹೊರುವಂತಾಗಿದೆ. ಶಾಲೆಯ ದೈನಂದಿನ ತರಗತಿಗಳಲ್ಲದೆ ಬೆಳಗ್ಗಿನ ವಿಶೇಷ ತರಗತಿ, ಸಾಯಂಕಾಲದ ವಿಶೇಷ ತರಗತಿ ಇಷ್ಟರಲ್ಲೇ ಮಕ್ಕಳು ಸುಸ್ತಾಗಿರುತ್ತಾರೆ. ಇದಲ್ಲದೆ ಇಲಾಖೆಯ ಅಥವಾ ಮೇಲಧಿಕಾರಿಗಳ ಮೌಖಿಕ ಆದೇಶವೆಂದೋ ಅಥವಾ ಸ್ವಯಿಚ್ಛೆಯಿಂದಲೋ ಎಷ್ಟೋ ಶಾಲೆಗಳಲ್ಲಿ ತಮ್ಮ ಶಾಲೆಯ ಫಲಿತಾಂಶ ಇನ್ನೂ ಹೆಚ್ಚಾಗಬೇಕೆಂದೂ, ಶೇಕಡಾ ನೂರರ ಫಲಿತಾಂಶ ಪಡೆಯಬೇಕೆಂದೋ ಅಥವಾ ತಮ್ಮ ಶಾಲೆಯೇ ಪ್ರಥಮ ಎನ್ನಿಸಿಕೊಳ್ಳಲೆಂದೋ ಬೆಳಗ್ಗೆ ಆರು ಗಂಟೆಯಿಂದಲೇ ವಿಶೇಷದಲ್ಲೇ ವಿಶೇಷ ತರಗತಿ, ಅದರ ನಂತರ ವಿಶೇಷ ತರಗತಿ, ದೈನಂದಿನ ತರಗತಿ, ಸಾಯಂಕಾಲದ ವಿಶೇಷ ತರಗತಿ, ನಂತರ ಸಂಜೆ ಆರು ಅಥವಾ ಆರೂವರೆಯಿಂದ ರಾತ್ರಿ ತರಗತಿ, ಕೆಲವರು ಇನ್ನೂ ಮುಂದೆ ಹೋಗಿ ರಾತ್ರಿಯೂ ಮಕ್ಕಳು ಶಾಲೆಯಲ್ಲೇ ಉಳಿದುಕೊಂಡು ಓದಬೇಕೆನ್ನುವ ಪರಿಪಾಠ ಬೆಳೆಯುತ್ತಿದೆ. ಒಂದರಿಂದ ಒಂಭತ್ತನೇ ತರಗತಿಯವರೆಗೆ ಪರೀಕ್ಷೆಯಲ್ಲಿ ಫೇಲಾಗುವ ಭಯವಿಲ್ಲದೆ ಆರಾಮಾಗಿ ಹತ್ತನೇ ತರಗತಿಗೆ ಬರುವ ವಿದ್ಯಾರ್ಥಿಗಳಿಗೆ ಒಮ್ಮೆಲೇ ಪ್ರಾರಂಭವಾಗುವ ಪಬ್ಲಿಕ್ ಪರೀಕ್ಷೆ, ಬೆಳಗ್ಗೆ, ಸಂಜೆ ಹಾಗೂ ರಾತ್ರಿ ವಿಶೇಷ ತರಗತಿಗಳು, ಶಿಕ್ಷಕರ ಮನೆ ಭೇಟಿ, ವೇಕ್ ಅಪ್ ಕಾಲ್ ಮುಂತಾದ ಕ್ರಮಗಳು ಹೊರಲಾರದ ಭಾರವಾಗುತ್ತಿವೆ. ಹೀಗೆ ಒಮ್ಮೆಲೇ ಹೆಚ್ಚಾದ ಈ ತೀವ್ರ ಒತ್ತಡವನ್ನು ಸಹಿಸಲಾಗದ ಅನೇಕ ವಿದ್ಯಾರ್ಥಿಗಳು ಮಾನಸಿಕ ಆರೋಗ್ಯವನ್ನು ಹಾಳುಮಾಡಿಕೊಂಡು ಆತ್ಮಹತ್ಯೆಯ ಕಡೆಗೂ ಮುಖ ಮಾಡುತ್ತಿದ್ದಾರೆ ಎಂಬುದಕ್ಕೆ ಮೇಲಿನ ಘಟನೆ ಸಾಕ್ಷಿ.
ಹತ್ತನೇ ತರಗತಿಯ ಆ ಮೂರು ಗಂಟೆಗಳ ಬರವಣಿಗೆಯ ಪರೀಕ್ಷೆಯೊಂದನ್ನೇ ಜೀವನದ ಕೊನೆಯ ಪರೀಕ್ಷೆಯೇನೋ ಎಂಬಂತೆ ಬಿಂಬಿಸುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಬ್ಬರಲ್ಲೂ ತೀವ್ರ ಒತ್ತಡವಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ಸಂಪೂರ್ಣ ಸ್ವತಂತ್ರವಾಗಿ ಆಡಿಕೊಂಡು ಬರುವ ಮಕ್ಕಳಿಗೆ ಹತ್ತನೇ ತರಗತಿಯಲ್ಲಿ ಒಮ್ಮೆಲೆ ವಿಪರೀತ ಕಾರ್ಯಭಾರ ಹಚ್ಚುವಂತಾಗುತ್ತಿದೆ. ಇದು ಗಿಡದ ಬೇರಿಗೆ ಸರಿಯಾಗಿ ನೀರು, ಗೊಬ್ಬರ ನೀಡದೆ ಸೊರಗುತ್ತಿರುವ ಮರದ ರೆಂಬೆಗೆ ಕಾಯಿಗಳಿಗಾಗಿ ಜೋತುಬಿದ್ದಂತಾಗುತ್ತದೆ. ಮುಂದಿನ ಭವಿಷ್ಯಕ್ಕೆ ಮಾರ್ಗಸೂಚಿಯಾದ ಪಿಯುಸಿ ಮತ್ತು ಪದವಿ ಹಂತಗಳಲ್ಲೂ ಇಲ್ಲದ ಒತ್ತಡವನ್ನು ಕೇವಲ ಹತ್ತನೇ ತರಗತಿ ಮಕ್ಕಳ ಹಾಗೂ ಶಿಕ್ಷಕರ ಮೇಲೆ ಹೇರುವಂತಾಗಿರುವುದರಿಂದ, ಆ ಪರಿಸ್ಥಿತಿಯನ್ನು ನಿಭಾಯಿಸುವುದು ಮಕ್ಕಳಿಗೂ ಹಾಗೂ ಶಿಕ್ಷಕರಿಗೂ ಕಷ್ಟವಾಗುತ್ತಿದೆ.
ಹತ್ತನೇ ತರಗತಿ ಪರೀಕ್ಷೆಯ ನೆಪವೊಡ್ಡಿ ವಿದ್ಯಾರ್ಥಿಗಳ ನೆನಪಿನ ಬುತ್ತಿಗೆ ವರ್ಣರಂಜಿತವಾಗಿರುತ್ತಿದ್ದ ಶಾಲಾ ವಾರ್ಷಿಕೋತ್ಸವವನ್ನು ಅನೇಕ ಪ್ರೌಢಶಾಲೆಗಳು ಇಂದು ನಡೆಸುತ್ತಲೇ ಇಲ್ಲ. ವಾರ್ಷಿಕೋತ್ಸವ, ಕ್ರೀಡಾಕೂಟ, ಪ್ರತಿಭಾ ಕಾರಂಜಿಗಳಂತಹ ಚಟುವಟಿಕೆಗಳು ಪಠ್ಯದೊಂದಿಗೇ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸುವ ಅದ್ಭುತ ವೇದಿಕೆಗಳು. ಆದರೆ ಆ ವೇದಿಕೆಗಳೂ ಇಂದು ನಾಮಮಾತ್ರವಾಗುತ್ತಿವೆ.
ಮೊದಲೇ ಹೇಳಿದಂತೆ ಅನೇಕ ಕಾರಣಗಳಿಂದ ಮೂಲಭೂತ ಅಕ್ಷರಜ್ಞಾನವೂ ಇಲ್ಲದೆ ಬರುವ ಅದೆಷ್ಟೋ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಾರಂಭದಿಂದ ಕಲಿಸುವ ಜವಾಬ್ದಾರಿ ಪ್ರೌಢಶಾಲಾ ಶಿಕ್ಷಕರ ಹೆಗಲೇರಿದೆ. ಸರಕಾರಿ ಶಾಲೆಗಳ ಅದೆಷ್ಟೋ ಪೋಷಕರೂ ತಮ್ಮ ಮಕ್ಕಳ ಓದಿನ ಬಗ್ಗೆ ಹೆಚ್ಚಾಗಿ ಗಮನ ಹರಿಸದೆ ಇರುವುದರಿಂದ ವಿದ್ಯಾರ್ಥಿಗಳ ಕಲಿಕೆಯ ಅತಿ ಹೆಚ್ಚಿನ ಜವಾಬ್ದಾರಿ ಶಿಕ್ಷಕರ ಮೇಲೆಯೇ ಇದೆ. ಇದೆಲ್ಲದರ ನಡುವೆ ತಂಟೆ ಮಾಡುವ, ಕಲಿಯಲು ಆಸಕ್ತಿ ತೋರದ ಅನೇಕ ವಿದ್ಯಾರ್ಥಿಗಳಿಗೆ ಸ್ವಲ್ಪವೇ ಸ್ವಲ್ಪ ಗದರಿಸುವ ಹಕ್ಕೂ ಶಿಕ್ಷಕರಿಗೆ ಇಲ್ಲ. ಹಾಗೇನಾದರೂ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿರುವ ಬಗ್ಗೆ ಪೋಷಕರಲ್ಲಿ ತಿಳಿಸಿದರೆ ಅದಕ್ಕೂ ತಮ್ಮ ಮಕ್ಕಳಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರುವ ಘಟನೆಗಳೂ ನಡೆಯುತ್ತಿವೆ. ಪುತ್ತೂರಿನ ಮೇಲಿನ ಘಟನೆಯಲ್ಲೂ ಇದು ನಡೆದಿದೆ. ಹೀಗಾದರೆ ಶಿಕ್ಷಕರು ಸ್ವತಂತ್ರವಾಗಿ ವಿದ್ಯಾರ್ಥಿಗಳಿಗೆ ಕಲಿಸುವುದೇನು?
ಹೀಗೆ ಮೂಲ ಅಕ್ಷರಜ್ಞಾನವೇ ಇಲ್ಲದ ಅನೇಕ ವಿದ್ಯಾರ್ಥಿಗಳಿಗೆ ತಯಾರಿ ನೀಡಿ, ಹತ್ತನೇ ತರಗತಿ ಪರೀಕ್ಷೆಗೆ ಇನ್ನಿಲ್ಲದ ಪ್ರಯತ್ನಪಟ್ಟು, ಬೆಳಗ್ಗೆಯಿಂದ ರಾತ್ರಿಯವರೆಗೂ ವಿಶೇಷ ತರಗತಿಗಳನ್ನು ಮಾಡಿ, ವಿದ್ಯಾರ್ಥಿಗಳ ಮನೆ ಭೇಟಿ ನೀಡಿ, ಅನೇಕ ದಾಖಲೆಗಳನ್ನು ನಿರ್ವಹಿಸಿ, ರವಿವಾರ ಮತ್ತು ಬೇರೆ ರಜಾದಿನಗಳಂದೂ ವಿಶೇಷ ತರಗತಿ ನಡೆಸಿ, ತಮಗಿರುವ ಸಾಂದರ್ಭಿಕ ರಜೆಗಳನ್ನೂ ಬಳಸದೆ ತರಗತಿಗೆ ಹಾಜರಾಗಿ ಬೋಧಿಸುವ ಅನೇಕ ಶಿಕ್ಷಕರಿದ್ದಾರೆ. ತಮ್ಮ ಸ್ವಂತ ಜೀವನವನ್ನೂ ಕಡೆಗಣಿಸಿ, ವಿದ್ಯಾರ್ಥಿಗಳಿಗಾಗಿ ಶ್ರಮಿಸುವ ಸಾವಿರಾರು ಶಿಕ್ಷಕರಿದ್ದಾರೆ. ಆದರೂ ಪರೀಕ್ಷೆಯ ಫಲಿತಾಂಶ ಕಡಿಮೆಯಾದರೆ ಪ್ರೌಢಶಾಲಾ ಶಿಕ್ಷಕರನ್ನೇ ನೇರ ಹೊಣೆಗಾರರನ್ನಾಗಿಸಲಾಗುತ್ತಿದೆ. ಇದು ಆ ಶಿಕ್ಷಕರಿಗೆ ಇನ್ನಿಲ್ಲದ ಒತ್ತಡ ಉಂಟುಮಾಡುತ್ತಿದೆ. ಈ ಒತ್ತಡ ಸಹಿಸಲಾಗದೆ ಹೃದಯಾಘಾತಕ್ಕೊಳಗಾಗುತ್ತಿರುವ, ಅಪಘಾತಕ್ಕೊಳಗಾಗುತ್ತಿರುವ ಅನೇಕ ಶಿಕ್ಷಕರ ಉದಾಹರಣೆಗಳು ಕಣ್ಣ ಮುಂದಿವೆ.
ಹಾಗಾಗಿ ಪ್ರೌಢಶಾಲಾ ಶಿಕ್ಷಕರ ಮೇಲಾಗುತ್ತಿರುವ ಒತ್ತಡ ತಗ್ಗಿಸುವಂತ ಕ್ರಮವನ್ನು ಮೇಲಧಿಕಾರಿಗಳು ತೆಗೆದುಕೊಂಡರೆ ಉತ್ತಮ ಎಂಬುದು ಅನೇಕ ಶಿಕ್ಷಕರ ಅಂಬೋಣ. ಅಲ್ಲದೆ ಒಮ್ಮೆಲೇ ಹತ್ತನೇ ತರಗತಿಗೆ ಒತ್ತಡ ಹೇರುವ ಬದಲು ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸಮರ್ಥ ಶಿಕ್ಷಣ ದೊರೆತರೆ ವಿದ್ಯಾರ್ಥಿಗಳ ಮೇಲಾಗುವ ಒತ್ತಡವೂ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಇಲಾಖೆಯೂ ಮರುಸಿಂಚನ, ಎಫ್.ಎಲ್.ಎನ್. ಮುಂತಾದ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಈ ಎಲ್ಲಾ ಕಾರ್ಯಕ್ರಮಗಳು ಪ್ರಾಥಮಿಕ ಹಂತದಿಂದಲೇ ಪ್ರಾರಂಭವಾದರೆ ಉತ್ತಮ ಎನಿಸಿಕೊಳ್ಳುತ್ತವೆ.
ಅಲ್ಲದೆ ಪ್ರಾಥಮಿಕ ಶಾಲೆಯಲ್ಲಿಯೂ ಈಗಿರುವ ವ್ಯವಸ್ಥೆಯ ಬದಲು ಪ್ರೌಢಶಾಲೆಗಳಂತೆ ವಿಷಯಕ್ಕೊಬ್ಬ ಶಿಕ್ಷಕರನ್ನೋ ಅಥವಾ ಕಡೇ ಪಕ್ಷ ತರಗತಿಗೊಬ್ಬ ಶಿಕ್ಷಕರನ್ನೋ ನೇಮಕ ಮಾಡುವ ವ್ಯವಸ್ಥೆಯಾದರೆ ಖಂಡಿತಾ ಪ್ರಾಥಮಿಕ ಶಾಲಾ ಶಿಕ್ಷಣವೂ ಬಲಗೊಳ್ಳುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆಯೂ ಸದೃಢವಾಗುತ್ತದೆ. ಈ ನಿಟ್ಟಿನಲ್ಲಿ ಇಲಾಖೆ ಯೋಚಿಸುತ್ತದೆ ಎಂಬ ಆಶಾಭಾವನೆಯಿದೆ.