ಶುಗರ್ ಕಂಟ್ರೋಲ್ ಮಾಡುವ ಕೆಂಪು ಅಕ್ಕಿಯ ಭತ್ತ!
► ನವರ ತಳಿಯ ಭತ್ತ ಬೆಳೆದ ದಾವಣಗೆರೆ ರೈತ ಮಹಿಳೆ ► 50 ದಿನಗಳಲ್ಲೇ ಫಸಲು
ದಾವಣಗೆರೆ: ಸಾಮಾನ್ಯವಾಗಿ ಯಾವುದೇ ತಳಿಯ ಭತ್ತ ಬೆಳೆದರೆ ಅದು ಕೊಯ್ಲಿಗೆ ಬರಲು 120 ದಿನಗಳು ಬೇಕು. ಆದರೆ, ದಾವಣಗೆರೆಯ ರೈತ ಮಹಿಳೆ ನವರ ಎಂಬ ವಿಶೇಷ ತಳಿಯ ಭತ್ತ ಬೆಳೆದು ಸೈ ಎನಿಸಿಕೊಂಡಿದ್ದಾರೆ.
ಸಕ್ಕರೆ ಖಾಯಿಲೆಗೆ ಹೇಳಿ ಮಾಡಿಸಿದ ಈ ನವರ ತಳಿಯ ಭತ್ತ (ಕೆಂಪು ಅಕ್ಕಿ) ನಾಟಿ ಮಾಡಿ ಕೇವಲ ಐವತ್ತರಿಂದ ಐವತ್ತೈದು ದಿನಗಳಲ್ಲೇ ಅಚ್ಚರಿಯಂತೆ ಕೊಯ್ಲಿಗೆ ಬಂದಿದೆ. ಕೆಮಿಕಲ್ ಗೊಬ್ಬರ ಬಳಸದೆ ಸಾವಯವ ಗೊಬ್ಬರ ಬಳಕೆ ಮಾಡಿದ ರೈತ ಮಹಿಳೆಗೆ ನವರ ಭತ್ತ ಕೈ ಹಿಡಿದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವೆಂಕಟೇಶ್ವರಪುರ ಗ್ರಾಮದ ಮಂಜುಳಾ ಈ ಸಾಧನೆ ಮಾಡಿದ ರೈತ ಮಹಿಳೆ. ಯಾವುದೇ ತಳಿಯ ಭತ್ತ ಬೆಳೆದರೆ ಕನಿಷ್ಠ ಅಂದರೂ ಆ ಭತ್ತ ಕಟಾವಿಗೆ ಬರಲು 120 ದಿನಗಳು ಬೇಕಾಗುತ್ತದೆ. ಮಾತ್ರವಲ್ಲ, ಭತ್ತದ ಬೆಳೆಗೆ ಸಾಕಷ್ಟು ರೈತರು ಕೆಮಿಕಲ್ ಗೊಬ್ಬರ ಬಳಸಿಯೇ ಬೆಳೆಯುತ್ತಾರೆ. ಆದರೆ ಮಂಜುಳಾ, ನವರ ಭತ್ತದ ತಳಿಯನ್ನು ಸಾವಯವ ಗೊಬ್ಬರದ ಸಹಾಯದಿಂದ ಕೇವಲ 50 ದಿನಗಳಲ್ಲಿ ಬೆಳೆದಿದ್ದಾರೆ. ಎರಡೂವರೆ ಎಕರೆಯಲ್ಲಿ ಭತ್ತ ಬೆಳೆದಿರುವ ಅವರು ಇದಕ್ಕೆ ಹೆಚ್ಚಾಗಿ ದನದ ಕೊಟ್ಟಿಗೆ ಗೊಬ್ಬರ,
ಡಿ ಕಂಪೋಸರ್, ದಶಕಶಪಣ ಗೊಬ್ಬರ ತಮ್ಮ ಮನೆಯಲ್ಲೇ ತಯಾರು ಮಾಡಿ ಬಳಕೆ ಮಾಡುತ್ತಾರೆ. ಭತ್ತದ ಮಡಿ ಮಾಡಿ 21 ದಿನಗಳಲ್ಲಿ ಸಸಿ ಬಂದ ಮೇಲೆ ನಾಟಿ ಮಾಡಲಾಗುತ್ತದೆ. ನವರ ಭತ್ತದ ಫಸಲು ಬಂದ ಬಳಿಕ ಅದನ್ನು ಮಿಷನ್‌ಗೆ ಹಾಕಿ ಕೆಂಪು ಅಕ್ಕಿಯನ್ನು ಬೆಂಗಳೂರು, ಧಾರವಾಡ, ರಾಯಚೂರು, ಹೈದರಾಬಾದ್, ತೆಲಂಗಾಣಕ್ಕೆ ರಫ್ತು ಮಾಡಲಾಗುತ್ತದೆ. ಈ ನವರ ಭತ್ತದಿಂದ ಬರುವ ಕೆಂಪು ಅಕ್ಕಿಯ ದರ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 180 ರೂಪಾಯಿ ಇದೆ. ಇದು ಸಕ್ಕರೆ ಖಾಯಿಲೆಗೆ ಹೇಳಿ ಮಾಡಿಸಿದ ಅಕ್ಕಿ ಎಂದು ರೈತ ಮಹಿಳೆ ಮಂಜುಳಾ ಮಾಹಿತಿ ಹಂಚಿಕೊಂಡಿದ್ದಾರೆ.
ಪತಿ ಅಕಾಲಿಕವಾಗಿ ಮೃತಪಟ್ಟ ಬಳಿಕ ಕೃಷಿ ಚಟುವಟಿಕೆಗಳನ್ನು ಏಕಾಂಗಿಯಾಗಿ ಮುಂದುವರಿಸಿಕೊಂಡು ಹೋಗಿದ್ದೇನೆ. ಹಿಂದೆ ವಿವಿಧ ಭತ್ತದ ತಳಿಗಳನ್ನು ಬೆಳೆದಿದ್ದೇವೆ. ಈ ಬಾರಿ ನವರ ಭತ್ತದ ತಳಿ ಹಾಕಿದ್ದೇನೆ, ಇದನ್ನು ಕಡಿಮೆ ನೀರಿನಲ್ಲಿ ಬೆಳೆಯಬಹುದಾಗಿದೆ. ಈ ಬಾರಿ ಕಡಿಮೆ ನೀರು ಇರುವುದಕ್ಕೆ ನವರ ಭತ್ತ
ಹಾಕಿದ್ದು ಅನುಕೂಲ ಆಗಿದೆ. ನಾಟಿ ಮಾಡಿ 50 ದಿನಗಳಾಗಿವೆ. ಈಗಾಗಲೇ ಫಸಲು ಕಟಾವಿಗೆ ಬಂದಿದೆ. ಈ ಅಕ್ಕಿ ಸಕ್ಕರೆ ಖಾಯಿಲೆಗೆ ಉತ್ತಮ.
-ಮಂಜುಳಾ, ರೈತ ಮಹಿಳೆ
ನಮ್ಮ ತಾಯಿ ಕಷ್ಟಪಟ್ಟು ಕೃಷಿ ಮಾಡುತ್ತಿದ್ದಾರೆ, ಜೊತೆಗೆ ನಮಗೆ ಒಳ್ಳೆಯ ವಿದ್ಯೆ ಕೊಡಿಸಿದ್ದಾರೆ. ಅಮ್ಮ ಸಾವಯವ ಕೃಷಿ ಮಾಡುತ್ತಿರುವುದರಿಂದ ನಾವು ಕೈಲಾದಷ್ಟು ಸಹಾಯ ಮಾಡುತ್ತೇವೆ, ನವರ ಭತ್ತ ಬೆಳೆಯಲು ಹಾಗೂ ಭತ್ತ ಕಟಾವ್ ಮಾಡಲು ಸಹಾಯ ಮಾಡುತ್ತೇವೆ.
-ಸುಷ್ಮಾ, ಮಗಳು.
ಕೃಷಿಯಲ್ಲಿ ತಾಯಿಗೆ ಮಕ್ಕಳ ಸಾಥ್
ಕೃಷಿ ಮಾಡಿಯೇ ಮಂಜುಳಾ ಅವರು ತಮ್ಮ ಇಬ್ಬರು ಪುತ್ರಿಯರಿಗೆ ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಮಕ್ಕಳನ್ನು ಓದಿಸಲು ಕೃಷಿಯೊಂದಿಗೆ ಟೈಲರಿಂಗ್ ಮಾಡಿ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ಆದ್ದರಿಂದ ಇಬ್ಬರು ಪುತ್ರಿಯರೂ ತಾಯಿಗೆ ಕೃಷಿಯಲ್ಲಿ ಸಾಥ್ ನೀಡುತ್ತಿದ್ದಾರೆ.