ತೆಲಂಗಾಣ: ಹಿಂದುಳಿದ ವರ್ಗಗಳಿಗೆ ಕೋಟಾ ಭರವಸೆ!
ಕಳೆದ 9 ತಿಂಗಳಿಂದ ತೆಲಂಗಾಣ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಪ್ರತಿಶತ 42 ರಷ್ಟು ಮೀಸಲಾತಿ ನೀಡುವ ಭರವಸೆಯನ್ನು ಉಳಿಸಿಕೊಳ್ಳುವ ಸವಾಲನ್ನು ಎದುರಿಸುವ ಸಂಕಷ್ಟಕ್ಕೆ ಗುರಿಯಾಗಿದೆ.
ಫೆಬ್ರವರಿ 2ರಿಂದ ತೆಲಂಗಾಣ ರಾಜ್ಯದ ಹೆಚ್ಚು-ಕಡಿಮೆ 12,700 ಗ್ರಾಮ ಪಂಚಾಯತ್‌ನ ಸರಪಂಚರ ಅಧಿಕಾರಾವಧಿ ಮುಗಿದ ನಂತರ ವಿಶೇಷ ಅಧಿಕಾರಿಗಳು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಪರಿಷತ್‌ನ ಪ್ರಾದೇಶಿಕ ಮಂಡಳಿ ಮತ್ತು ಮಂಡಲ ಪರಿಷತ್‌ನ ಪ್ರಾದೇಶಿಕ ಮಂಡಳಿಯ ಸದಸ್ಯರ ಅಧಿಕಾರ ಅವಧಿಯು ಜುಲೈನಲ್ಲಿ ಕೊನೆಗೊಂಡಿತು. ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಸ್ವಯಂ ಸೇವಾ ಆಡಳಿತ ಇಲ್ಲದಂತಾಗಿದೆ.
ಚುನಾಯಿತ ಪ್ರತಿನಿಧಿಗಳ ಗೈರು ಹಾಜರಿಯಿಂದ ಗ್ರಾಮ ಮಂಡಲಗಳಿಗೆ ಕೇಂದ್ರ ಸರಕಾರದ ಅನುದಾನಕ್ಕೆ ಸಂಚಕಾರ ಉಂಟಾಗಿದೆ. ಈ ಗ್ರಾಮಗಳು ಮತ್ತು ಮಂಡಲಗಳು ಪಂಚಾಯತ್ ರಾಜ್ ಸಂಸ್ಥೆಗಳು 15ನೇ ಹಣಕಾಸು ಆಯೋಗದ ಶಿಫಾರಸಿನ ಅನರ್ಹತೆಗೆ ಒಳಪಟ್ಟಿವೆ. ಕೇಂದ್ರ ಸರಕಾರದಿಂದ ಸುಮಾರು ರೂ. 2,000 ಕೋಟಿ ಬಾಕಿ ಇದೆ.
130 ಗುಂಪುಗಳನ್ನು ಒಳಗೊಂಡ ಹಿಂದುಳಿದ ವರ್ಗಗಳಿಗೆ ಪ್ರತಿಶತ 42ರಷ್ಟು ಮೀಸಲಾತಿ ಕಲ್ಪಿಸುವ ‘ಕಾಮರೆಡ್ಡಿ ಘೋಷಣೆ’ ಎಂಬ ಚುನಾವಣಾ ಭರವಸೆಯನ್ನು ಈಡೇರಿಸಬೇಕಿರುವ ರೇವಂತ್ ರೆಡ್ಡಿ ಸರಕಾರಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಸುಲಭವಲ್ಲ. 130 ಹಿಂದುಳಿದ ವರ್ಗಗಳ ಗುಂಪುಗಳಲ್ಲಿ ನೂರಕ್ಕೂ ಹೆಚ್ಚು ಗುಂಪುಗಳು ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದಿವೆ.
ಪ್ರತಿಶತ 42ರಷ್ಟು ಮೀಸಲಾತಿಯನ್ನು ಒದಗಿಸಲು ಸರಕಾರವು ’ತ್ರಿವಳಿ ಪರೀಕ್ಷೆ’(triple test) ಮಾಡುವ ಸವಾಲನ್ನು ಎದುರಿಸಬೇಕಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಸಮುದಾಯದ ಹಿಂದುಳಿದಿರುವಿಕೆಯ ಸ್ವರೂಪ ಮತ್ತು ಪರಿಣಾಮಗಳನ್ನು ಪರಿಶೀಲಿಸಲು ಮೀಸಲಾದ ಆಯೋಗವನ್ನು ರಚಿಸುವುದು, ಪ್ರಾಯೋಗಿಕ ದತ್ತಾಂಶದ ಆಧಾರದ ಮೇಲೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಪಾಲನ್ನು ನಿರ್ದಿಷ್ಟ ಪಡಿಸುವುದು ಮತ್ತು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪ್ರಮಾಣವನ್ನು ಖಚಿತಪಡಿಸಿಕೊಳ್ಳುವುದನ್ನು ಇದು ಒಳಗೊಂಡಿದೆ ಹಾಗೂ ಪ್ರತಿಶತ 50ರಷ್ಟು ಕೋಟಾ ಮೀರದಂತೆಯೂ ನೋಡಿಕೊಳ್ಳಬೇಕಾಗಿದೆ. ಸದ್ಯಕ್ಕೆ ಇದು ಅಸಾಧ್ಯವೆಂದು ತೋರುತ್ತದೆ.
ಸಮರ್ಪಿತ ಆಯೋಗವನ್ನು ರಚಿಸುವಂತೆ ಸರ್ವೋಚ್ಚ ನ್ಯಾಯಾಲಯ ರಾಜ್ಯ ಸರಕಾರಕ್ಕೆ ಸೂಚಿಸಿದೆ. ಪ್ರಾಯೋಗಿಕ ಮಾಹಿತಿಯ ಅಲಭ್ಯತೆಯಿಂದ ನ್ಯಾಯಾಲಯವು ಸರಕಾರದ ಬೇಡಿಕೆಯನ್ನು ಪರಿಗಣಿಸುವುದಿಲ್ಲ. ಅಲ್ಲದೆ ಆಯೋಗವೇ ಇನ್ನೂ ರಚನೆಗೊಂಡಿಲ್ಲ.
ಪ್ರಾಯೋಗಿಕ ದತ್ತಾಂಶವನ್ನು ಸಂಗ್ರಹಿಸಲು ಬಿಹಾರ ಸರಕಾರವು ಜಾತಿ ಸಮೀಕ್ಷೆಯನ್ನು ನಡೆಸಿತು, ಆದರೆ ಅದು ಕೂಡ ಸಮರ್ಪಿತ ಆಯೋಗವನ್ನು ರಚಿಸಲಿಲ್ಲ. ಒಂದು ತಿಂಗಳ ಹಿಂದೆ ಹಿಂದುಳಿದ ವರ್ಗಗಳಿಗೆ ಸರಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಕೋಟಾವನ್ನು ಪ್ರತಿಶತ 50ರಿಂದ ಪ್ರತಿಶತ 65ಕ್ಕೆ ಹೆಚ್ಚಿಸುವ ಬಿಹಾರ ಸರಕಾರದ ಅಧಿಸೂಚನೆಗಳನ್ನು ರದ್ದುಗೊಳಿಸಿದ ಪಾಟ್ನಾ ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿತು.
ಕೃಷ್ಣಮೋಹನ್ ರಾವ್ ನೇತೃತ್ವದ ತೆಲಂಗಾಣ ಹಿಂದುಳಿದ ವರ್ಗಗಳ ಆಯೋಗವು ಜಾತಿ ದತ್ತಾಂಶಗಳನ್ನು ತಲುಪಲು ಸರಕಾರವು ಪ್ರಸಕ್ತ ಮತದಾರರ ಪಟ್ಟಿಯನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದೆ. ರಾಜ್ಯ ಚುನಾವಣಾ ಆಯೋಗವು ಕೆಲವು ಸರಕಾರಿ ಇಲಾಖೆಗಳ ಸಹಾಯದಿಂದ ಇದನ್ನು ಸುಲಭವಾಗಿ ನಿಭಾಯಿಸುತ್ತದೆ. ಜಾತಿ ಅಂಕಿ ಅಂಶಗಳು ಮತ್ತು ಸಮುದಾಯಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಅಂತಿಮ ವರದಿಗಾಗಿ ಆಯೋಗವು ಸಮಗ್ರ ಪ್ರಶ್ನಾವಳಿಗಳನ್ನು ರೂಪಿಸಿ, ಸಾಮಾಜಿಕ, ಆರ್ಥಿಕ ಮತ್ತು ಇತರ ವಿಷಯಗಳಲ್ಲಿ ಹಿಂದುಳಿದಿರುವಂತಹ ನಿರ್ದಿಷ್ಟ ವಿಧಾನಗಳನ್ನು ಅಳವಡಿಸಿಕೊಂಡಿದೆ, ಅದರ ಕರಡು ಪ್ರಸಕ್ತ ಸರಕಾರದ ಬಳಿ ಇದೆ.
ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ ಮತ್ತು ಉದ್ಯೋಗ ಮೀಸಲಾತಿಗಿಂತ ಭಿನ್ನವಾಗಿ ಐದು ವಿಭಾಗಗಳಾಗಿ ವರ್ಗೀಕರಿಸಲಾಗಿದೆ, ‘ಕಾಮರೆಡ್ಡಿ ಘೋಷಣೆ’ಯ ಪ್ರಕಾರ ಎಲ್ಲಾ 130 ಜಾತಿ ಗುಂಪುಗಳು ಮತ್ತು ಮಹಿಳೆಯರಿಗೆ ರಕ್ಷಣೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ರಾಜಕೀಯ ಮೀಸಲಾತಿಗಳು ಹೆಚ್ಚು ಧಾರಾಳವಾಗಿರಬೇಕು. ಇದು ಸಮಯಕ್ಕೆ ಆಸ್ಪದ ಕೊಡುತ್ತದೆ. ಹೀಗಾಗಿ ಸರಕಾರವು ಚುನಾವಣೆಗಾಗಿ ಹೆಚ್ಚು ಸಮಯ ಕಾಯಲು ಸಾಧ್ಯವಿಲ್ಲ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಸಾಮಾನ್ಯ ಸ್ಥಾನಗಳಿಂದ ಕಣಕ್ಕೆ ಇಳಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿಶತ 42ರಷ್ಟು ಮೀಸಲಾತಿ ನೀಡುವ ಭರವಸೆಯನ್ನು ಈಡೇರಿಸುವ ಮೂಲಕ ನ್ಯಾಯಾಲಯದ ‘ತ್ರಿವಳಿ ಪರೀಕ್ಷೆ’ ಜಯಿಸಲು ಆಯೋಗ ಸರಕಾರಕ್ಕೆ ಸೂಚನೆ ನೀಡಿದೆ ಎನ್ನಲಾಗಿದೆ.
ಒಂದೆಡೆ ಹಿಂದುಳಿದ ವರ್ಗಗಳ ಗುಂಪುಗಳಿಂದ ರಾಜಕೀಯ ಒತ್ತಡ ಹೆಚ್ಚುತ್ತಿದೆ, ಮತ್ತೊಂದೆಡೆ ಆಯೋಗದ ಅವಧಿಯು ಕೆಲವು ದಿನಗಳ ಹಿಂದೆ ಮುಗಿದಿದೆ. ಇದರ ಪರಿಣಾಮ ವೈಜ್ಞಾನಿಕವಾಗಿ ಜಾತಿಗಳನ್ನು ಎಣಿಸುವ ಪ್ರಕ್ರಿಯೆಯನ್ನು ಇನ್ನಷ್ಟೂ ವಿಳಂಬಗೊಳಿಸುವ ಸಾಧ್ಯತೆ ಇದೆ.
ಈ ಮಧ್ಯೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಅನುಪಸ್ಥಿತಿ ಯಲ್ಲಿ ಆಡಳಿತಕ್ಕೆ ಹೊಡೆತ ಬಿದ್ದಿದೆ. ಸರಪಂಚರಿಲ್ಲದಿದ್ದರೆ ಆಡಳಿತಾತ್ಮಕ ಕರ್ತವ್ಯಗಳು ಪರಿಣಾಮ ಬೀರುತ್ತವೆ. ಅವರ ಜಾಗದಲ್ಲಿ ನೇಮಕಗೊಂಡಿರುವ ವಿಶೇಷ ಅಧಿಕಾರಿಗಳಿಗೆ ಗ್ರಾಮಗಳ ಹಾಗೂ ಅವರ ಅಗತ್ಯಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲ. ಸರಪಂಚರು ಅಥವಾ ವಾರ್ಡ್ ಸದಸ್ಯರಂತೆ ಅವರು ಒಂದೇ ಬಾರಿಗೆ ಎರಡರಿಂದ ನಾಲ್ಕು ಗ್ರಾಮಗಳನ್ನು ನಿರ್ವಹಿಸಬೇಕಾಗಿರುವುದರಿಂದ ಅವರು ಹಳ್ಳಿಗಳಲ್ಲಿ ಉಳಿಯುವುದಿಲ್ಲ. ಇದು ಹೀಗೆ ಮುಂದುವರಿದರೆ ಹಳ್ಳಿಗಳಲ್ಲಿ ಭ್ರಮನಿರಸನ ಮತ್ತು ಆಕ್ರೋಶಕ್ಕೆ ಕಾರಣವಾಗಬಹುದು.
ಈ ರಾಜಕೀಯ, ಸಾಮಾಜಿಕ ಮತ್ತು ಆಡಳಿತದ ಸವಾಲುಗಳನ್ನು ಜಯಿಸಲು ರೇವಂತ್ ರೆಡ್ಡಿ ಸರಕಾರಕ್ಕೆ ಕಷ್ಟಕರವಾಗಿದೆ. 2025ರ ಜನವರಿಯಲ್ಲಿ ಪುರಸಭೆಗಳ ಅವಧಿ ಮುಗಿಯುವವರೆಗೆ ಕಾಯುವ ಬದಲು ಶೀಘ್ರವೇ ಚುನಾವಣೆಗಳನ್ನು ನಡೆಸುವಂತೆ ಸರಕಾರ ಖಚಿತಪಡಿಸಿಕೊಳ್ಳುವುದು ಒಳ್ಳೆಯದು. ವಿಳಂಬವು ವಿರೋಧ ಪಕ್ಷಗಳು ಮೇಲುಗೈ ಪಡೆಯಲು ಸಹಾಯ ಮಾಡುತ್ತದೆ.
ಕೃಪೆ: ದಿ ಹಿಂದೂ