ಆ ಹತ್ಯೆ ಹಂತಕರ ಯೋಜನೆಯಷ್ಟೆ ಅಲ್ಲ; ಗೌರಿಯವರ ಆಯ್ಕೆಯೂ ಹೌದು!
ಎಂದಿನಂತೆ ಕಾರ್ ಬಂದು ಪೋರ್ಟಿಕೊದಲ್ಲಿ ನಿಂತಿತು. ಬೆಳಗಿನ ಸುಮಾರು ಹತ್ತರ ಸಮಯ. ಪೋರ್ಟಿಕೊದ ಎದುರಿಗಿರುವ ತಳ ಮಹಡಿಯ ಚೇಂಬರ್ ನನ್ನದು. ಕಾರ್ ಬಂದದ್ದು ಮತ್ತು ಅದು ಗೌರಿ ಮೇಡಂ ಕಾರು ಅನ್ನೋದು ಗೊತ್ತಾಯಿತು. ಆದರೂ ನನ್ನ ಪಾಡಿಗೆ ನಾನು ಕಂಪ್ಯೂಟರ್‌ನಲ್ಲಿ ಮುಳುಗಿದ್ದೆ. ಅದು ಹೊಸ ಸಂಗತಿಯಲ್ಲ. ತಾನು ಬಂದದ್ದನ್ನು ಗುರುತಿಸಿ ನೌಕರರು ವಿಶೇಷ ಗೌರವ ತೋರಬೇಕು; ಗುಡ್ ಮಾರ್ನಿಂಗ್ ಹೇಳಬೇಕು; ತಮ್ಮ ಲಗೇಜುಗಳನ್ನು ಎತ್ತೊಯ್ದು ಅವರ ರೂಮು ತಲುಪಿಸಬೇಕು; ಕಡೇಪಕ್ಷ ಒಂದು ನಗು ಚೆಲ್ಲಿ ಕಣ್ಣಲ್ಲೇ ವಿನಯ ಪ್ರದರ್ಶಿಸಬೇಕು ಇಂಥಾ ಯಾವ ನಿರೀಕ್ಷೆಗಳೂ ಅವರಿಗಿರಲಿಲ್ಲ. ಆ ಸಂಸ್ಥೆಯ ಯಜಮಾನಿಯಾಗಿದ್ದರೂ, ಎಲ್ಲರ ಜೊತೆ ತಾನೂ ಒಬ್ಬ ನೌಕರಳಾಗಿ ಇದ್ದುಬಿಡುತ್ತಿದ್ದರು. ಸೀದಾ ತನ್ನ ಚೇಂಬರು ಹೊಕ್ಕು ಕೆಲಸದಲ್ಲಿ ತಲ್ಲೀನರಾದರೆ, ಅಗತ್ಯವಿದ್ದಾಗಷ್ಟೆ ನಮ್ಮನ್ನು ಕರೆದು ಮಾತಾಡಿಸುತ್ತಿದ್ದುದು. ಇಲ್ಲವೆಂದರೆ ಮಧ್ಯಾಹ್ನದ ಊಟದ ಸಮಯದಲ್ಲಿ ಮಾತ್ರ ಅವರ ಜೊತೆ ಒಂದಷ್ಟು ಹರಟೆಗೆ ಅವಕಾಶ. ಹಾಗಾಗಿ, 2015 ಆಗಸ್ಟ್ 30ರ ಆ ದಿನ ಗೌರಿ ಮೇಡಂ ಕಾರ್ ಬಂದಿದ್ದನ್ನು ನಾನು ನಿರ್ಲಕ್ಷಿಸಿ ಕೆಲಸದಲ್ಲಿ ತಲ್ಲೀನನಾಗಿದ್ದೆ.
ಕಾರಿನ ಡೋರ್ ಮುಚ್ಚಿದ ಸದ್ದು ಯಾಕೋ ಸಹಜ ಅನ್ನಿಸಲಿಲ್ಲ. ಯಾಕೆಂದರೆ, ಪಾದರಸದಂತೆ ತುಸು ಲವಲವಿಕೆಯ ಗುಣದವರಾ ದರೂ ಗೌರಿ ಮೇಡಂ ಯಾವತ್ತೂ, ಯಾವ ವಸ್ತುವನ್ನೂ ರಫ್ ಆಗಿ ಹ್ಯಾಂಡಲ್ ಮಾಡಿದ್ದನ್ನು ನಾನು ನೋಡಿಲ್ಲ. ಆದರೆ ಅವತ್ತು, ಕಾರಿನ ಬಾಗಿಲನ್ನು ಸ್ವಲ್ಪ ಬಿರುಸಾಗಿಯೇ ತಳ್ಳಿದ್ದರು. ದಢ್ ಎಂದ ಆ ಸದ್ದು ನನಗೆ ಅಸಹಜವೆನಿಸಿತು. ಕತ್ತು ಹೊರಳಿಸಿ ನೋಡಬೇಕೆನ್ನುವಷ್ಟರಲ್ಲಿ, ಎಂದಿನಂತೆ ಮೆಟ್ಟಿಲುಗಳನ್ನೇರಿ ಮೊದಲ ಮಹಡಿಗೆ ಹೋಗುವ ಬದಲು ಸೀದಾ ನನ್ನ ಚೇಂಬರಿನೊಳಕ್ಕೆ ಧಾವಿಸಿ ಬರುತ್ತಿದ್ದರು. ಅವರ ನಡಿಗೆಯಲ್ಲಿ ಅಸಹಜತೆ ಇತ್ತು. ದೇಹ ಕಂಪಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಕಾಲುಗಳು ಹೆಜ್ಜೆ ತಪ್ಪುತ್ತಿದ್ದವು. ಮುಖದ ತುಂಬಾ ಗಾಬರಿ-ಗೊಂದಲ. ಕೈಯಲ್ಲಿದ್ದ ತಮ್ಮ ಬ್ಯಾಗನ್ನು ನನ್ನ ಟೇಬಲ್‌ನ ಮೇಲೆ ದೊಪ್ಪನೆ ಎಸೆದವರೆ, ಎದುರಿಗಿದ್ದ ಪ್ಲಾಸ್ಟಿಕ್ ಚೇರಿನ ಮೇಲೆ ಕುಸಿದು ಕೂತರು.
‘‘ಹೊಡ್ದುಬಿಟ್ರು. ರಾಕ್ಷಸರು! ಕೊಂದ್ ಬಿಟ್ರು. ಹಣೆ.. ಹಣೆ..ಹಣೆಗೆ ಹೊಡ್ದಿದಾರೆ’’ ಕೂರುವ ಸಮಯದಲ್ಲಿ ಅವರ ಬಾಯಿಂದ ಹೊರಬಿದ್ದ ಮಾತುಗಳು ಅಸ್ಖಲಿತವಾಗಿದ್ದವು. ನಾನೀಗ ಅವರಿಗಿಂತ ದುಪ್ಪಟ್ಟು ಗಾಬರಿಗೀಡಾದೆ. ವಿಷಯ ಏನು ಅಂತ ತಿಳಿದು ಗಾಬರಿಯಾಗುವುದಕ್ಕೂ, ವಿಷಯ ಏನು ಅನ್ನೋದು ತಿಳಿಯದೇ ಬರೀ ಸನ್ನಿವೇಶ ನೋಡಿ ಗಾಬರಿಯಾಗುವುದಕ್ಕೂ ಬಹಳ ವ್ಯತ್ಯಾಸವಿರುತ್ತೆ. ಏನೇನೋ ಕಲ್ಪನೆಗಳು. ನನ್ನ ಅಂಗೈ ಮತ್ತು ಪಾದಗಳು ಅಕ್ಷರಶಃ ತಣ್ಣಗಾಗಿ ಹೋದವು. ನಾನು ಯಾವತ್ತೂ ಗೌರಿ ಮೇಡಂ ಅವರನ್ನು ಆ ರೀತಿ ನೋಡಿದವನಲ್ಲ. ಮುಂದೆ, ದಾವಣಗೆರೆಯಲ್ಲಿ ನಾವು ಲಂಕೇಶ್ ಕಾರ್ಯಕ್ರಮ ಆಯೋಜಿಸಿದಾಗ, ಬರಹಗಾರ ಯೋಗೇಶ್ ಮಾಸ್ಟರ್ ಮೇಲೆ ಕೆಲವು ಕೋಮುವಾದಿಗಳು ಮಸಿ ಎರಚಿದ ಸಂದರ್ಭದಲ್ಲಿ ಗೌರಿ ಮೇಡಂ ಇಷ್ಟೇ ಪ್ರಕ್ಷುಬ್ಧಗೊಂಡದ್ದನ್ನು ಇನ್ನೊಮ್ಮೆ ನೋಡಿದೆ. ಆದರೆ ಅವತ್ತು ನಾನು ಅವರನ್ನು ಆ ರೀತಿ ನೋಡುತ್ತಿದ್ದುದು ಅದೇ ಮೊದಲು. ಗಾಬರಿಯಾದೆ.
ಏನು ಮಾಡುವುದೆಂದು ತೋಚಲಿಲ್ಲ. ನನ್ನ ಕೈಗಳು ನನ್ನ ಆಣತಿಗೂ ಕಾಯದೆ, ಪಕ್ಕದಲ್ಲಿದ್ದ ನೀರಿನ ಬಾಟಲಿಯನ್ನು ಎತ್ತಿ ಗೌರಿ ಮೇಡಂರತ್ತ ಚಾಚಿದವು. ‘‘ಮೇಡಂ ನೀರು ಕುಡೀರಿ ಸ್ವಲ್ಪ ಸಮಾಧಾನ ಮಾಡ್ಕೊಳಿ.. ಏನಾಯ್ತು ಅಂತ ಹೇಳಿ ಮೇಡಂ’’ ನನ್ನೊಳಗೆ ಉಳಿದಿದ್ದ ಅಷ್ಟೂ ಧೈರ್ಯ ಒಟ್ಟುಗೂಡಿಸಿದ ತರುವಾಯ ನನಗೆ ಪ್ರತಿಕ್ರಿಯಿಸಲು ಸಾಧ್ಯವಾದದ್ದು ಇಷ್ಟೆ.
ಕುಡಿಯುವ ಪ್ರಯತ್ನ ಮಾಡಿದರಾದರೂ, ನೀರು ಗಂಟಲೊಳಗೆ ಇಳಿಯಲಿಲ್ಲ ಅನ್ನಿಸುತ್ತೆ. ವಾಪಸ್ ಟೇಬಲ್ ಮೇಲಿಟ್ಟು, ತಮ್ಮನ್ನು ತಾವು ನಿಯಂತ್ರಣಕ್ಕೆ ತಂದುಕೊಳ್ಳುವ ಕಸರತ್ತು ಮುಂದುವರಿ ಸಿದರು. ಕೂತ ಚೇರಿನಲ್ಲೆ ಅವರು ಕಂಪಿಸುತ್ತಿದ್ದರು. ಅದು ಭಯದ ಕಂಪನವಲ್ಲ; ಸಿಟ್ಟಿನ ಕಂಪನ ಅನ್ನೋದು ಅರ್ಥವಾಯ್ತು.
ತುಸು ಸಾವರಿಸಿಕೊಂಡು, ‘‘ಎಂ.ಎಂ. ಕಲಬುರ್ಗಿಯವರನ್ನು ಕಿರಾತಕರು ಕೊಂದು ಹಾಕ್ಬಿಟ್ಟಿದಾರೆ ಗಿರೀಶ್. ಹಾಡಹಗಲೇ! ಅವರ ಮನೆಯ ಬಳಿಯೇ! ತೋರಿಸಿಬಿಟ್ರು ತಮ್ಮ ನೀಚತನನ!!’’ ಎಂದು ಹೇಳುವಾಗಲು ಅವರ ದನಿ ಕಂಪಿಸುತ್ತಲೇ ಇತ್ತು. ಮೇಡಂ ಗಾಬರಿಯನ್ನು ಕಂಡು ಮೊದಲೇ ಕಂಗಾಲಾಗಿದ್ದ ನಾನು, ಈಗ ಈ ವಿಷಯ ತಿಳಿದು ಇನ್ನಷ್ಟು ಆಘಾತಕ್ಕೀಡಾದೆ. ಆ ಆಘಾತದ ಸುದ್ದಿಯನ್ನು ಅರಗಿಸಿಕೊಳ್ಳಲು ನನಗೆ ಸ್ವಲ್ಪ ಸಮಯ ಬೇಕಾಯಿತು. ಅದರಾಚೆಗೆ ಮಾತಾಡುವ ಸ್ಥೈರ್ಯ ನನ್ನಲ್ಲಿರಲಿಲ್ಲ. ಒಂದೆರಡು ನಿಮಿಷ ನಮ್ಮಿಬ್ಬರ ನಡುವೆ ಮಾತಿಲ್ಲ. ಕೂರುವಷ್ಟು ತಾಳ್ಮೆಯೂ ಇಲ್ಲದೆ, ಚಡಪಡಿಸುತ್ತಿದ್ದರು.
ಸಟ್ಟನೆ ಮೇಲೆದ್ದವರು, ‘‘ಕೆಟ್ಟ ಘಳಿಗೆಗೆ ನಾವೀಗ ತಯಾರಾಗ್ಲೇ ಬೇಕು! ಉತ್ರ ಕೊಡೋಣ ರಿಲ್ಯಾಕ್ಸ್ ಮಾಡ್ಕೊಳಿ. ಆಮೇಲೆ ಚೇಂಬರಿಗೆ ಬನ್ನಿ’’ ಎಂದು ಹೇಳಿ, ಬಂದಷ್ಟೇ ವೇಗವಾಗಿ ನಿರ್ಗಮಿಸಿದರು. ಹೆಚ್ಚೆಂದರೆ ನಾಲ್ಕೈದು ನಿಮಿಷಗಳ ಅಂತರದಲ್ಲಿ ನಡೆದ ಇಷ್ಟೂ ಘಟನೆಗೆ ನಾನು ಹೆಪ್ಪುಗಟ್ಟಿಹೋಗಿದ್ದೆ. ರಿಲ್ಯಾಕ್ಸ್ ಮಾಡಿಕೊಳ್ಳುವುದು ಎಲ್ಲಿಂದ?
ಮೇಲೆ ಹೋದ ಸ್ವಲ್ಪ ಹೊತ್ತಿನಲ್ಲೆ ಕೆಳಗೆ ಇಳಿದುಬಂದ ಗೌರಿ ಮೇಡಂ, ಕಾರನ್ನೇರಿ ಹೊರಟುಹೋದರು. ಅಷ್ಟರಲ್ಲಾಗಲೇ, ಕಲಬುರ್ಗಿಯವರ ಹತ್ಯೆ ಖಂಡಿಸಿ ಒಂದು ಪ್ರತಿಭಟನೆಯನ್ನು ಯೋಜಿಸಿ, ಅದರ ಮುಂದಾಳತ್ವ ವಹಿಸಲು ಟೌನ್‌ಹಾಲ್‌ನತ್ತ ಸಾಗಿದ್ದರು.
ಕಲಬುರ್ಗಿಯವರ ಹತ್ಯೆಯ ಆ ದಿನದ ಘಟನೆಯನ್ನು ಇಲ್ಲಿ ನೆನಪು ಮಾಡಿಕೊಳ್ಳಲು ಒಂದು ಕಾರಣವಿದೆ. ಗೌರಿ ಮೇಡಂ ಅವರನ್ನು ಕಳೆದುಕೊಂಡು ಇವತ್ತಿಗೆ ಏಳು ವರ್ಷ. ಅವರದು ಕೇವಲ ಒಂದು ಸಾವಲ್ಲ. ಮೇಲ್ನೋಟಕ್ಕೆ ಕಾಣುವ ಹತ್ಯೆಯೂ ಅಲ್ಲ. ಅದು ಬಲಿದಾನ! ಸುಳ್ಳು ಮತ್ತು ಸತ್ಯದ ನಡುವಿನ ನಿರಂತರ ಸಂಘರ್ಷದಲ್ಲಿ ಸತ್ಯದ ಪರವಾಗಿ ನಿಂತ ಕಾರಣಕ್ಕೆ ಕೊಲ್ಲಲ್ಪಡುವ ಪ್ರತಿಯೊಬ್ಬರದು ಬಲಿದಾನವೇ ಸರಿ. ಯಾಕೆಂದರೆ, ತಿಳಿದೂ ತಿಳಿದೂ ಅದನ್ನವರು ತಮ್ಮ ಆಯ್ಕೆಯಾಗಿ ಆರಿಸಿಕೊಂಡಿರುತ್ತಾರೆ. ಆದರೆ ಗೌರಿ ಮೇಡಂ ಅವರ ಬಲಿದಾನವನ್ನು ಒಂದು ಕ್ಷುಲ್ಲಕ ಹತ್ಯೆಗೆ ಸಂಕುಚಿತಗೊಳಿಸಿ, ಆ ಹತ್ಯೆಯಿಂದ ಗೌರಿ ತನ್ನನ್ನು ತಾನು ಹೇಗೆಲ್ಲ ಬಚಾವು ಮಾಡಿಕೊಳ್ಳಬಹುದಿತ್ತು ಎಂದು ಕೆಲವರು ಮಾತನಾಡುವಾಗ ಬೇಸರವೆನಿಸುತ್ತದೆ. ತಾನು ಪ್ರಕಟಿಸುತ್ತಿದ್ದ ಸುದ್ದಿಗಳ ಆಯ್ಕೆ ಮತ್ತು ನಿರೂಪಣೆಯ ಶೈಲಿಯಲ್ಲಿ ಇನ್ನಷ್ಟು ಜಾಣತನ ತೋರಿದ್ದರೆ; ತನ್ನ ಆ್ಯಕ್ಟಿವಿಸಮ್‌ನಲ್ಲಿ ಒಂದಷ್ಟು ನಾಜೂಕುತನ ಪ್ರದರ್ಶಿಸಿದ್ದರೆ; ಮಾತುಗಳ ತೀಕ್ಷ್ಣತೆಯನ್ನು ಕೊಂಚ ತಗ್ಗಿಸಿಕೊಂಡಿದ್ದರೆ; ಸ್ವಲ್ಪ ಎಚ್ಚರ ವಹಿಸಿದ್ದಿದ್ದರೆ; ಹೀಗಿದ್ದಿದ್ದರೆ, ಹಾಗಿದ್ದಿದ್ದರೆ ಗೌರಿ ಇನ್ನಷ್ಟು ದಿನ ಬದುಕಬಹುದಿತ್ತು ಎಂಬ ಸಲಹೆಗಳು ಕೇಳಿಬರುತ್ತಿವೆ. ಈ ಸಲಹೆಗಳನ್ನು ಕೇಳಿದಾಗ, ಗೌರಿ ಮೇಡಂ ತಮ್ಮ ಸೈದ್ಧಾಂತಿಕ ಬದ್ಧತೆಯಲ್ಲಿ ಅತಿಯೆನಿಸುವಷ್ಟು ಹುಂಬತನಕ್ಕೆ ಜಾರಿದ್ದರೇ? ಎಂಬ ಪ್ರಶ್ನೆ ಕಾಡುತ್ತದೆ.
ಹೌದು ಆ ಸಲಹೆಗಳನ್ನು ಪಾಲಿಸಿದ್ದಿದ್ದರೆ ಗೌರಿ ಇನ್ನಷ್ಟು ದಿನ ಬದುಕಬಹುದಿತ್ತು. ಅದು ಗೌರಿ ಮೇಡಂಗೂ ಗೊತ್ತಿತ್ತು. ಆದರೆ ಹಾಗೆ ಬದುಕಿ ಪ್ರಯೋಜನವೇನು? ಎಂಬ ಗೌರಿ ಮೇಡಂ ಪ್ರಶ್ನೆಗೆ ನಮ್ಮ ಬಳಿ ಉತ್ತರವಿದೆಯೇ? ಬದುಕುವ ಆಸೆ ಹೊತ್ತವರನ್ನು ನಾವು ಎಚ್ಚರಿಸಬಹುದು, ಇನ್ನಷ್ಟು ದಿನ ಅವರಿಂದ ಉಸಿರಾಡಿಸಬಹುದು. ಆದರೆ ಬದುಕುವುದಕ್ಕಿಂತ ನನ್ನ ಬಲಿದಾನವೇ ನಾ ನಂಬಿದ ತತ್ವ ಸಿದ್ಧಾಂತಕ್ಕೆ ನಾನು ಕೊಡುವ ಅತಿದೊಡ್ಡ ಕೊಡುಗೆ ಎಂದು ಸಿದ್ಧವಾದವರನ್ನು ಎಚ್ಚರಿಸಲು ಸಾಧ್ಯವೇ? ಬಸವಣ್ಣ, ಗಾಂಧಿಗೂ ಈ ಎಚ್ಚರದ ಕೊರತೆಯಿತ್ತೆ?
ಹತ್ಯೆಯಿಂದ ತನ್ನನ್ನು ತಾನು ಬಚಾವು ಮಾಡಿಕೊಂಡು ಬದುಕಲಾಗದ ಗೌರಿ ಮೇಡಂರದ್ದು ಹುಂಬತನ ಎನ್ನುವವರು ಬಸವಣ್ಣ, ಗಾಂಧಿ, ಕಲಬುರ್ಗಿಯವರಿಗೂ ಇದೇ ಮಾತು ಹೇಳುವರೇ? ನಾನಿಲ್ಲಿ ಯಾವ ವ್ಯಕ್ತಿಯನ್ನೂ, ಮತ್ತ್ಯಾವ ವ್ಯಕ್ತಿಯೊಂದಿಗೂ ಹೋಲಿಸುತ್ತಿಲ್ಲ. ಸತ್ಯ ಮತ್ತು ಸುಳ್ಳುಗಳ ನಡುವೆ ಕಾಲಕಾಲಕ್ಕೆ ನಡೆಯುತ್ತಲೇ ಬಂದ ಸಂಘರ್ಷದ ಪುಟದಿಂದ ಒಂದೆರಡು ಸಾಮ್ಯತೆಗಳನ್ನು ಹೆಕ್ಕಿ ತೆಗೆದು ಪ್ರಶ್ನಿಸುತ್ತಿದ್ದೇನಷ್ಟೆ.
ಎಚ್ಚರದ ಕೊರತೆಯ ಕಾರಣಕ್ಕೆ ಗೌರಿ ಹತ್ಯೆಯಾದರು ಎನ್ನುವವರು, ಗೌರಿ ಎಚ್ಚರಗೊಳ್ಳಲು ಕಲಬುರ್ಗಿಯವರ ಹತ್ಯೆಗಿಂತ ಪಾಠ ಬೇಕಾಗಿತ್ತೆ? ಎಂಬ ಪ್ರಶ್ನೆ ಕೇಳಿಕೊಳ್ಳಬೇಕು. ಇನ್ನಷ್ಟು ದಿನ ಬದುಕುವ ಆಸೆ ಗೌರಿ ಮೇಡಂಗೆ ಇದ್ದಿದ್ದರೆ ಕಲಬುರ್ಗಿಯವರ ಹತ್ಯೆಯೇ ಅವರನ್ನು ಎಚ್ಚರಿಸಬೇಕಿತ್ತು. ಬದಲಿಗೆ, ಆ ಹತ್ಯೆ ಅವರ ಹಾದಿಯನ್ನು ಇನ್ನಷ್ಟು ಸ್ಪಷ್ಟವಾಗಿಸಿತು. ಉರಿವ ದೀಪಕ್ಕೆ ಬತ್ತಿಯಾಗುವ ಸಲುವಾಗಿ ತನ್ನನ್ನೇ ತಾನು ಹೊಸೆದುಕೊಳ್ಳಲು ಅವರನ್ನು ಅಣಿಯಾಗಿಸಿತ್ತು. ನಾವು ಏನೆಲ್ಲ ಎಚ್ಚರಗಳನ್ನು ಉಲ್ಲೇಖಿಸಿ, ಹೀಗೆ ಮಾಡಿದ್ದರೆ ಗೌರಿ ಬದುಕಬಹುದಿತ್ತು ಎನ್ನುತೇವೆಯೋ, ಅವುಗಳನ್ನು ರೂಢಿಸಿಕೊಳ್ಳಲು ಗೌರಿ ಮೇಡಂಗೆ ಕಷ್ಟವಿರಲಿಲ್ಲ. ಅಥವಾ ಅವುಗಳನ್ನು ತಿಳಿಯದಷ್ಟು ಅವರು ದಡ್ಡಿಯಾಗಿರಲಿಲ್ಲ. ಆದರೆ ಹಾಗೆ ಬದುಕಿ, ನಾನು ಸಾಧಿಸುವುದೇನು? ಒಂದುವೇಳೆ ಬದುಕಿದರೂ, ಇನ್ನೆಷ್ಟು ಕಾಲ ಬದುಕಬಲ್ಲೆ? ರಾಜಿಯಾಗಿ ಬದುಕಬಲ್ಲ, ಆ ಅವಧಿಯಲ್ಲಿ ಎಂಥಾ ಸಂತೃಪ್ತಿ ಹೊಂದಬಲ್ಲೆ? ಈ ಪ್ರಶ್ನೆಗಳನ್ನು ಅವರು ತಮ್ಮ ಮುಂದಿರಿಸಿಕೊಂಡಿದ್ದರು. ಹಾಗಾಗಿ ನಮ್ಮಂತಹ ಬುದ್ಧಿವಂತರ ಕಣ್ಣಿಗೆ ‘ಹುಂಬತನ’ದಂತೆ ಕಾಣುವ ತ್ಯಾಗದ ಹಾದಿಗೆ ಅವರು ಸಿದ್ಧವಾಗಿದ್ದರು.
ಬದುಕುವ ಆಸೆ ಅವರಿಗಿದ್ದಿದ್ದರೆ, ಸರಕಾರದಿಂದ ಪೊಲೀಸ್ ರಕ್ಷಣೆ ಪಡೆಯಬಹುದಿತ್ತು. ಅವರು ಕೇಳಿದ್ದರೆ, ಸರಕಾರ ಇಲ್ಲ ಅನ್ನುತ್ತಿರಲಿಲ್ಲ. ಇವತ್ತಿನ ಸಿದ್ದರಾಮಯ್ಯನವರೇ ಅಂದು ಸಹ ಮುಖ್ಯಮಂತ್ರಿಗಳಾಗಿದ್ದರು ಮಾತ್ರವಲ್ಲ, ಗೌರಿ ಮೇಡಂ ಬಗ್ಗೆ ಪ್ರೀತಿ, ಕಾಳಜಿ ಇರುವ ಆಪ್ತರು ಸರಕಾರದ ಪ್ರಭಾವಿ ಹುದ್ದೆಗಳಲ್ಲಿ ಇದ್ದರು. ಮೇಡಂ ಮನವಿಯನ್ನು ಅವರ್ಯಾರೂ ನಿರ್ಲಕ್ಷಿಸದೆ ಸೂಕ್ತ ವ್ಯವಸ್ಥೆ ಮಾಡುತ್ತಿದ್ದರು. ಆದರೆ ಅಂತಹ ಮನವಿಗಳು ಅವರ ಆಯ್ಕೆಯಾಗಲಿಲ್ಲ. ಬದುಕಿನ ಆಸೆ ಅಷ್ಟೊಂದಿದ್ದರೆ ಕಾಡಿನಂತಹ ಆ ಒಂಟಿ ಮನೆಯಲ್ಲಿ ಸಿಸಿ ಕ್ಯಾಮೆರಾವೇ ಇಲ್ಲದೆ ಅವರು ಬದುಕುತ್ತಿರಲಿಲ್ಲ. ಅವರ ಹತ್ಯೆಗೆ ಕೆಲ ದಿನಗಳ ಹಿಂದಷ್ಟೇ ನಮ್ಮ ಮ್ಯಾನೇಜರ್ ರಾಜು ಅವರು ಹಠ ಹಿಡಿದು, ಕೆಟ್ಟುಹೋಗಿದ್ದ ಸಿಸಿ ಕ್ಯಾಮರಾ ರಿಪೇರಿ ಮಾಡಿಸೀ ಹೋಗಿದ್ದರೆ ಹಂತಕರ ಪತ್ತೆಯೂ ಕಷ್ಟವಾಗುತ್ತಿತ್ತೇನೊ. ನಮ್ಮ ಕಚೇರಿಗಂತೂ ಸಿಸಿ ಕ್ಯಾಮೆರಾವೇ ಇರಲಿಲ್ಲ.
ಹಾಗಂತ, ಹಂತಕರು ಬಂದು ನನ್ನನ್ನು ಕೊಂದುಹಾಕಲಿ ಎಂದು ಅವರು ಕಾದು ಕುಳಿತಿದ್ದರು ಅಂತ ನಾನು ಹೇಳುತ್ತಿಲ್ಲ. ಆದರೆ ಹಂತಕರ ಭಯ ಕೂಡಾ, ನಾನು ಮಾಡಬೇಕಾದ ಕೆಲಸದಿಂದ ನನ್ನನ್ನು ವಿಮುಖವಾಗಿಸಲು ಸಾಧ್ಯವಿಲ್ಲ ಎಂದು ಅವರು ತೀರ್ಮಾನಿಸಿದ್ದರು. ಆ ತೀರ್ಮಾನೀ ಅವರಲ್ಲಿ ನಿರ್ಭೀತಿ ತಂದಿತ್ತು. ಆ ನಿರ್ಭೀತಿಯನ್ನು ನಾವು ಎಚ್ಚರದ ಕೊರತೆ ಎಂದು ಕರೆದು ಅವರ ಬಲಿದಾನವನ್ನು ಅವಮಾನಿಸಬಹುದೇ?