ತಪ್ಪು ಸಂದೇಶ ರವಾನಿಸುತ್ತಿರುವ ನ್ಯಾಯಾಧೀಶರ ನಡೆ-ನುಡಿಗಳು
ಕೆಲವು ದಿನಗಳ ಹಿಂದೆ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಆಡಳಿತ ಪಕ್ಷದ ಶಾಸಕರೊಬ್ಬರ ಕ್ರಿಯಾಶೀಲತೆಯನ್ನು ಹೊಗಳುತ್ತ ಅವರಿಗೆ ಸಚಿವ ಸ್ಥಾನ ದೊರೆಯಲೆಂದು ದೇವರಿಗೆ ಹರಕೆ ಹೊರುತ್ತೇನೆ ಎಂಬ ಹೇಳಿಕೆಯನ್ನು ನೀಡಿದರು. ಮಂಡ್ಯದ ಮಳವಳ್ಳಿಯಲ್ಲಿ ವಕೀಲರ ಸಂಘ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಅಲ್ಲಿನ ಶಾಸಕರು ಸ್ಥಳೀಯ ಕೋರ್ಟ್ ಕಟ್ಟಡ ನಿರ್ಮಾಣದಲ್ಲಿ ತೋರಿದ ಮುತುವರ್ಜಿಗೆ ಮೆಚ್ಚುಗೆ ಸೂಚಿಸುವ ಹಂತದಲ್ಲಿ ವ್ಯಕ್ತವಾದಂತಹ ಮಾತಿದು. ಶಾಸಕರಿಗೆ ಉತ್ತಮ ಭವಿಷ್ಯ ಹಾರೈಸುವುದೇನೋ ಸರಿ. ಆದರೆ ಮಾನ್ಯ ನ್ಯಾಯಾಧೀಶರು ಶಾಸಕರ ಮೇಲಿನ ಅಭಿಮಾನದಿಂದ ನೇರವಾಗಿ ಸಚಿವ ಸ್ಥಾನ ಸಿಗಲಿ ಎಂಬ ಭಾವನಾತ್ಮಕ ಹೇಳಿಕೆ ನೀಡುವಂತಹ ಅಗತ್ಯವಿತ್ತೇ? ಇಂದಿನ ರಾಜಕಾರಣದಲ್ಲಿ ಸ್ಥಾನಮಾನಗಳಿಗೆ ಯೋಗ್ಯತೆಗಿಂತ ಹೆಚ್ಚಾಗಿ ಶಿಫಾರಸು, ಪ್ರಭಾವ, ವಶೀಲಿಬಾಜಿ ಇತ್ಯಾದಿಗಳೇ ಮುಖ್ಯವಾಗಿರುವಾಗ ಇಂತಹ ಹೇಳಿಕೆಗಳು ತಪ್ಪು ಸಂದೇಶ ನೀಡಲಾರದೇ?
ಇತ್ತೀಚೆಗೆ ನ್ಯಾಯಾಧೀಶರು ನ್ಯಾಯಾಲಯದಲ್ಲಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆಡುವ ಮಾತುಗಳು ವಿವಾದಗಳನ್ನೆಬ್ಬಿಸುತ್ತಿವೆ. ದೇಶದ ಅನೇಕ ಕಡೆ ಇಂತಹ ಪ್ರಕರಣಗಳು ಆಗಾಗ ಸುದ್ದಿ ಮಾಡುತ್ತಿವೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ. ಕಳೆದ ತಿಂಗಳು ಅಲಹಾಬಾದ್ ಹೈಕೋರ್ಟ್‌ನ ನಾಯಾಧೀಶರೊಬ್ಬರು ಸಾರ್ವಜನಿಕ ಸಮಾರಂಭದಲ್ಲಿ ಭಾರತವು ಬಹುಸಂಖ್ಯಾತರ ಆಶಯದಂತೆ ಮುನ್ನಡೆಯುತ್ತದೆ ಎಂಬ ವಿವಾದಾಸ್ಪದ ಮಾತನ್ನು ಆಡಿದ್ದು ದೇಶದಾದ್ಯಂತ ಸುದ್ದಿಯಾಯಿತು. ಅವರು ಹಿಂದೂ-ಮುಸ್ಲಿಮ್ ವಿಚಾರದ ಹಿನ್ನೆಲೆಯಲ್ಲಿ ಆಡಿದಂತಹ ಈ ಮಾತನ್ನು ಸರ್ವೋಚ್ಚ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿ ಹೈಕೋರ್ಟಿಗೆ ಸಂಪೂರ್ಣ ವಿವರ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
ಕೆಲವು ತಿಂಗಳುಗಳ ಹಿಂದೆ ರಾಜ್ಯದ ಹೈಕೋರ್ಟ್‌ನ್ಯಾಯಾಧೀಶರೊಬ್ಬರು ವಿಚಾರಣೆಯ ಸಂದರ್ಭದಲ್ಲಿ ಬೆಂಗಳೂರಿನ ಪ್ರದೇಶವೊಂದು ಪಾಕಿಸ್ತಾನದಲ್ಲಿ ಇರುವಂತಿದೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು. ಈ ಕುರಿತು ಸರ್ವೋಚ್ಚ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಅವರು ವಿಷಾದವನ್ನು ವ್ಯಕ್ತ ಪಡಿಸುವಂತಾಯಿತು. ಸಮಾಜದಲ್ಲಿ ಅತ್ಯುನ್ನತ ಘನತೆ, ಗೌರವದ ಸ್ಥಾನಮಾನ ಹೊಂದಿರುವ ನ್ಯಾಯಾಂಗ ವ್ಯಾಪ್ತಿಯೊಳಗಡೆ ಹೀಗೆಲ್ಲ ಯಾಕಾಗುತ್ತಿದೆ?
ಡಿ. ವೈ. ಚಂದ್ರಚೂಡ್‌ಅವರು ದೇಶದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದಾಗ ಅವರ ಮನೆಯಲ್ಲಿ ನಡೆದಿದ್ದ ಗಣೇಶೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡಿದ್ದನ್ನೂ ಇಲ್ಲಿ ನೆನಪಿಸಿ ಕೊಳ್ಳ ಬಹುದು. ದೇಶದ ಶಾಸಕಾಂಗ ಮತ್ತು ನ್ಯಾಯಾಂಗದ ಮುಖ್ಯಸ್ಥರು ಪ್ರಮುಖ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಪಾಲ್ಗೊಳ್ಳುವುದು ಹೊಸತಲ್ಲ. ಆದರೆ ಖಾಸಗಿಯಾದ ಆಚರಣೆಯೊಂದರಲ್ಲಿ ಈ ಇಬ್ಬರಿಗೆ ಮಾತ್ರ ಸೀಮಿತವಾದ ಪಾಲ್ಗೊಳ್ಳುವಿಕೆ ಬಹುಶಃ ಇದೇ ಮೊದಲು ಇರಬಹುದೇನೋ? ಇದು ಸಣ್ಣ ಮಟ್ಟದ ವಿವಾದವಾಗಿ ಅಲ್ಲಿಗೆ ತಣ್ಣಗಾಯಿತು. ರಾಜಕೀಯದಲ್ಲಿ ನೈತಿಕತೆ, ಮೌಲ್ಯ, ಆದರ್ಶಗಳು ಮಣ್ಣುಗೂಡಿದಂತಹ ಇಂದಿನ ಕಾಲಘಟ್ಟದಲ್ಲಿ ಈ ರೀತಿಯ ಬೆಳವಣಿಗೆಗಳು ವಿವಾದವಾದದ್ದರಲ್ಲಿ ವಿಶೇಷವೇನಿಲ್ಲ.
ಕೆಲವು ದಶಕಗಳ ಹಿಂದಿನ ನ್ಯಾಯಾಂಗ ವ್ಯವಸ್ಥೆಯನ್ನೊಮ್ಮೆ ನೆನಪಿಸಿ ಕೊಳ್ಳೋಣ. ಆಗ ನ್ಯಾಯಾಧೀಶರು ನ್ಯಾಯಾಲಯದಲ್ಲಿ ಕಾನೂನಿನ ವ್ಯಾಪ್ತಿಯೊಳಗಡೆ ಮಾತನಾಡುತ್ತಿದ್ದರೇ ಹೊರತು ಯಾವುದೇ ಅನಗತ್ಯ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರಲಿಲ್ಲ. ಸಾರ್ವಜನಿಕ ಸಮಾರಂಭಗಳು, ಕಾರ್ಯಕ್ರಮಗಳಲ್ಲಿಯೂ ನ್ಯಾಯಾಧೀಶರ ಪಾಲ್ಗೊಳ್ಳುವಿಕೆ ಅತ್ಯಂತ ವಿರಳ ಹಾಗೂ ಸೀಮಿತವಾಗಿರುತ್ತಿತ್ತು. ಅವರು ಸಮಾಜದಲ್ಲಿ ಹೆಚ್ಚು ಕಡಿಮೆ ಅಜ್ಞಾತವಾಸಿಗಳೇ ಆಗಿದ್ದರು! ಹೀಗಾಗಿ ನ್ಯಾಯಾಧೀಶರ ನಡವಳಿಕೆ, ಮಾತುಗಳು ಯಾವುದೇ ವಿವಾದವೆಬ್ಬಿಸುತ್ತಿರಲಿಲ್ಲ. ಇದರಿಂದ ಜನರು ನ್ಯಾಯಾಧೀಶರ ನ್ಯಾಯ ನಿಷ್ಠುರತೆ ಮತ್ತು ನಿಷ್ಪಕ್ಷಪಾತತನದ ಕುರಿತು ಯಾವುದೇ ಸಂದೇಹ ತಾಳಲು ಆಸ್ಪದವಿರಲಿಲ್ಲ. ಇಂದು ಸಾಮಾಜಿಕ ನಡವಳಿಕೆಯ ಪರಿಭಾಷೆ ಬದಲಾಗುತ್ತ ಸಾಗಿದಂತೆ ಅದರ ಪ್ರಭಾವ ನ್ಯಾಯಾಂಗ ವ್ಯವಸ್ಥೆಯನ್ನು ಆವರಿಸಿಕೊಂಡಂತೆ ಕಾಣುತ್ತಿದೆ. ಜೊತೆಗೆ ನ್ಯಾಯಾಂಗ ವ್ಯವಸ್ಥೆಯೂ ಉಳಿದ ಕ್ಷೇತ್ರಗಳಂತೆ ಪ್ರಭಾವ, ಭ್ರಷ್ಟಾಚಾರ ಮುಂತಾದ ಆರೋಪಗಳಿಗೆ ಸಿಲುಕಿದೆ. ಹೀಗಾಗಿ ಜನರಿಗೆ ಮೊದಲಿನ ನಂಬಿಕೆ, ವಿಶ್ವಾಸ ಕಡಿಮೆಯಾಗುತ್ತಾ ಸಾಗಿದೆ.
ನಾಯಾಂಗ ವ್ಯವಸ್ಥೆಯೆಂಬುದು ಸಮಾಜದ ಆತ್ಮಸಾಕ್ಷಿಯ ಪ್ರತೀಕ. ಈ ಆತ್ಮಸಾಕ್ಷಿಯನ್ನು ಯಾವುದೇ ಬಾಹ್ಯ ಪ್ರಭಾವ, ಪ್ರಲೋಭನೆ, ಪ್ರಚೋದನೆ ಬಾಧಿಸದಂತೆ ಕಾಪಾಡುವುದು ಮುಖ್ಯ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರ ನಡೆ, ನುಡಿಗಳಿಗೆ ಇರುವಂತಹ ಪ್ರಾಮಖ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.
‘ಸೀಸರನ ಹೆಂಡತಿ ಸಂಶಯಾತೀತಳಾಗಿರ ಬೇಕು’ ಎಂಬ ಇಂಗ್ಲಿಷ್ ನುಡಿಕಟ್ಟು ನ್ಯಾಯಾಧೀಶರ ನಡವಳಿಕೆಗೆ ನೇರವಾಗಿ ಅನ್ವಯಿಸುವಂತಹದ್ದು. ಹಿಂದೆ ನ್ಯಾಯ ವ್ಯವಸ್ಥೆಯೊಳಗಡೆ ಅಂತಹ ವಾತಾವರಣವಿದ್ದುದರಿಂದಲೇ ಜನರ ನಂಬಿಕೆ, ವಿಶ್ವಾಸಗಳು ಅಬಾಧಿತವಾಗಿದ್ದವು ಎನ್ನುವುದು ಸತ್ಯ. ಯಾಕೆಂದರೆ ನ್ಯಾಯಾಧೀಶರ ಒಂದು ಆದೇಶ ಅಥವಾ ತೀರ್ಪಿಗೆ ಮಹತ್ವದ ಸ್ಥಾನವಿದೆ. ಅದು ವ್ಯಕ್ತಿಯೊಬ್ಬನ ಅಥವಾ ಸಮುದಾಯವೊಂದರ ಭವಿಷ್ಯವನ್ನು ಬದಲಾಯಿಸಬಲ್ಲುದು. ಈ ಬದಲಾವಣೆ ಸಮಾಜದ ಚಲನೆಯ ದಿಕ್ಕನ್ನೂ ನಿರ್ಧರಿಸುವಷ್ಟು ಪರಿಣಾಮಕಾರಿ.
ಪ್ರಸ್ತುತ ರಾಜಕಾರಣವು ಅಧಿಕಾರ ದಾಹ, ಅವ್ಯವಹಾರ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮುಂತಾದುವುಗಳು ಅತ್ಯಂತ ಕಳವಳಕಾರಿಯಾದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಜೊತೆಗೆ ಕೋಮುವಾದವೆನ್ನುವುದು ಜಾತ್ಯತೀತ ತತ್ವಕ್ಕೆ ಗಂಭೀರ ಸವಾಲನ್ನು ಒಡ್ಡುತ್ತಿದೆ. ರಾಜಕೀಯ ನಾಯಕರ ತಂತ್ರಗಾರಿಕೆಯನ್ನು ಸುಲಭದಲ್ಲಿ ಯಾರಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಯಾಧೀಶರ ಹೊಣೆಗಾರಿಕೆಯೂ ಸಹಜವಾಗಿ ಹೆಚ್ಚಾಗಿದೆ. ಅವರ ನ್ಯಾಯ ನಿಷ್ಠುರತೆ ಎಂಬುದು ತೀರ್ಪುಗಳಲ್ಲಿ ವ್ಯಕ್ತವಾಗುವುದು ಎಷ್ಟು ಮುಖ್ಯವೋ ಅದೇ ನಿಲುವು ಅವರ ನಡೆ, ನುಡಿಗಳಿಗೆ ಹೊಂದಾಣಿಕೆಯಾಗುವುದು ಅಷ್ಟೇ ಅವಶ್ಯವಾಗಿದೆ.
ನ್ಯಾಯಾಧೀಶರಿಗೂ ಅವರದೇ ಆದ ವೈಯಕ್ತಿಕ ನಂಬಿಕೆ, ಒಲವು- ನಿಲುವುಗಳು ಇರುವುದು ಸಹಜ. ಆದರೆ ಇಂಥವುಗಳು ಕಾನೂನು, ನಿಯಮಗಳೊಂದಿಗೆ ಹೊಂದಿಕೊಳ್ಳದಿದ್ದ ಪಕ್ಷದಲ್ಲಿ ಅವುಗಳನ್ನು ಸಾರ್ವಜನಿಕವಾಗಿ ಪ್ರಕಟಗೊಳಿಸದಿರುವುದು ಒಳ್ಳೆಯದು. ಅವರು ಸೇವೆಯಲ್ಲಿರುವ ತನಕ ಇಂತಹ ಮನೋಭಾವ ಅಗತ್ಯ. ಇದು ನ್ಯಾಯಾಂಗದ ವಿಶ್ವಾಸಾರ್ಹತೆಯ ದೃಷ್ಟಿಯಿಂದಲೂ ಅಗತ್ಯ. ಹಾಗೆಯೇ ಅವರು ವೈಯಕ್ತಿಕ ಸಂಬಂಧಗಳನ್ನು ನಿರ್ವಹಿಸುವಾಗ ವಹಿಸಬೇಕಾದ ಎಚ್ಚರವು ಮುಖ್ಯವಾಗುತ್ತದೆ. ಅವರು ತಮ್ಮ ಹುದ್ದೆಯ ಕಾರಣಕ್ಕಾಗಿ ಆಡಳಿತ ಪ್ರಮುಖರ ಜೊತೆಗಿರುವ ವೈಯಕ್ತಿಕ ಸಂಬಂಧಗಳನ್ನು ಕಡಿದು ಕೊಳ್ಳಬೇಕೇ ಅಥವಾ ಅದನ್ನು ಅಮಾನತಿನಲ್ಲಿ ಇಟ್ಟು ಕೊಳ್ಳಬೇಕೇ? ಇಂತಹ ಪ್ರಶ್ನೆಗಳು ಸ್ವಾಭಾವಿಕ. ಖಂಡಿತವಾಗಿಯೂ ಇಂತಹ ಕ್ರಮಗಳನ್ನು ಯಾರೂ ಬಯಸಲಾರರು. ವೈಯಕ್ತಿಕ ಸಂಬಂಧಗಳು ಪ್ರತಿಯೊಬ್ಬರಿಗೂ ಮುಖ್ಯ. ಆದರೆ ನ್ಯಾಯದಾನದ ವ್ಯವಸ್ಥೆಯೊಳಗಡೆಯಿರುವವರು ಎಲ್ಲೆಲ್ಲಿ ಈ ಸಂಬಂಧಗಳಿಗೆ ಸೀಮಾ ರೇಖೆ ಅಥವಾ ಲಕ್ಷ್ಮಣ ರೇಖೆಯ ಅಗತ್ಯವಿದೆಯೋ ಅಲ್ಲಲ್ಲಿ ಅದನ್ನು ಎಳೆದು ಕೊಂಡು ಮುಂದುವರಿದರೆ ಯಾವುದೇ ಸಮಸ್ಯೆ ಯಾಗದು. ಇಂದಿನ ದಿನಗಳಲ್ಲಿ ರಾಜಕೀಯ ನಾಯಕರ ಜೊತೆ ಅಂತರ ಕಾಯ್ದು ಗೊಳ್ಳುವುದು ಅತ್ಯಂತ ಅಗತ್ಯ. ಇದು ನ್ಯಾಯಾಧೀಶರಿಗೆ ಗೊತ್ತಿಲ್ಲದ ವಿಚಾರವಲ್ಲ. ಆದರೆ ಪರಿಸರದ ಪ್ರಭಾವ ಮತ್ತು ಪೂರ್ವಗ್ರಹಗಳು ಎಂಥವರನ್ನೂ ಸ್ಥಿತಪ್ರಜ್ಞತೆಯಿಂದ ಒಂದೊಂದು ಬಾರಿ ವಿಮುಖರನ್ನಾಗಿಸುವುದಿದೆ. ಇವುಗಳನ್ನೆಲ್ಲ ದೃಢವಾಗಿ ಎದುರಿಸಿ ನಿಂತು ಕರ್ತವ್ಯ ನಿರ್ವಹಿಸುವುದು ನ್ಯಾಯಾಧೀಶರಿಗೆ ಹೇಗೆ ಸವಾಲೊ ಅದೇ ರೀತಿ ಈ ಸವಾಲನ್ನು ಯಶಸ್ವಿಯಾಗಿ ಅವರು ನಿಭಾಯಿಸುವುದರಲ್ಲಿ ಸಮಾಜದ ಸ್ವಾಸ್ಥ್ಯ, ಹಿತರಕ್ಷಣೆಯೂ ಅಡಗಿದೆ ಎಂಬುದು ಸತ್ಯ.