ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕಪ್ಪು ಮರಳಿನ ʼತೀಳ್ಮಾತಿ' ಕಡಲತೀರ
ಕಾರವಾರ: ಕಡಲತೀರಗಳು ಸಾಮಾನ್ಯವಾಗಿ ಕಂದು ಮರಳಿನ ರಾಶಿಯಲ್ಲಿ ಗೋಚರಿಸುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಇಲ್ಲೊಂದು ಕಡಲತೀರವು ಇದಕ್ಕೆ ತದ್ವಿರುದ್ಧವೆಂಬಂತೆ ಇಡೀ ಕಡಲತೀರವೇ ಕಪ್ಪು ಮರಳಿನಿಂದ ಆವರಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಕಾರವಾರದಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ತೀಳ್ಮಾತಿ ಕಡಲತೀರ ಇಂತಹ ವಿಚಿತ್ರಕ್ಕೆ ಕಾರಣವಾಗಿ ಪ್ರವಾಸಿಗರ ನೆಚ್ಚಿನ ತಾಣವಾಗಿ ಗುರುತಿಸಿಕೊಳ್ಳುತ್ತಿದೆ. ಅಪ್ಪಟ ಕರಿಎಳ್ಳಿನಂತೆ ಕಾಣುವ ಇಲ್ಲಿನ ಮರಳು ಕಡಲತೀರದುದ್ದಕ್ಕೂ ಹರಡಿಕೊಂಡಿದೆ. ಎರಡು ಗುಡ್ಡಗಳ ಮಧ್ಯೆ ಪ್ರಶಾಂತವಾಗಿರುವ ಕಡಲತೀರದ ಎಡಬದಿಯಲ್ಲಿ ಮಾಜಾಳಿ ಕಡಲತೀರ ಮತ್ತು ಬಲಬದಿಯಲ್ಲಿ ಗೋವಾದ ಪೋತಿಂ ಕಡಲತೀರವಿದೆ. ಈ ಎರಡೂ ಕಡಲತೀರಗಳ ಮರಳು ಬಿಳಿ ಬಣ್ಣದಲ್ಲಿಯೇ ಇದೆ. ಆದರೆ ಇವುಗಳ ಮಧ್ಯದ ತೀಳ್ಮಾತಿ ಕಡಲತೀರದಲ್ಲಿ ಮಾತ್ರ ಏಕೆ ಕಪ್ಪು ಮರಳು ಇದೆ ಎನ್ನುವುದಕ್ಕೆ ಯಾರಲ್ಲಿಯೂ ಸ್ಪಷ್ಟ ಉತ್ತರಗಳಿಲ್ಲ.
ಅಲ್ಲದೆ ಕಡಲತೀರದ ಅಕ್ಕ ಪಕ್ಕದಲ್ಲಿ ಕಡುಗಪ್ಪು ಬಣ್ಣದ ಬಂಡೆಗಲ್ಲುಗಳ ರಾಶಿ ಚಾಚಿಕೊಂಡಿವೆ. ಈ ಕಲ್ಲುಗಳೇ ಅಲೆಗಳ ರಭಸಕ್ಕೆ ಸಿಕ್ಕಿ ಮರಳಾಗುತ್ತವೆ. ಅದು ನೀರಿನ ಸುಳಿಗೆ ಸಿಲುಕಿ ಹೊರ ಹೋಗದೇ ಇರುವುದರಿಂದ ಕಪ್ಪು ಮರಳಿನ ಕಡಲತೀರ ನಿರ್ಮಾಣವಾಗಿದೆ. ಇಂತಹ ಕಡಲತೀರವನ್ನು ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ ಎನ್ನುವ ಮಾತುಗಳು ಕಡಲ ಶಾಸ್ತ್ರಜ್ಞರಿಂದ ಕೇಳಿಬಂದಿವೆ.
ಕಡಲತೀರದಲ್ಲಿ ಸೂರ್ಯಾಸ್ತ ದೃಶ್ಯ ಮನಮೋಹಕವಾಗಿ ಕಂಡುಬರುತ್ತಿದೆ. ಕಪ್ಪು ಮರಳಿನಲ್ಲಿ ಮೂಡುವ ಸೂರ್ಯನ ಕಿರಣಗಳ ಚಿತ್ತಾರ ಹೊಸ ಅನುಭವ ನೀಡುತ್ತಿದೆ. ಆದರೆ ಕಡಲತೀರವು ಎಷ್ಟು ಸೌಂದರ್ಯವನ್ನು ನೀಡುತ್ತಿದೆಯೋ ಅಷ್ಟೇ ಅಪಾಯಕಾರಿಯೂ ಹೌದು. ಕಡಲತೀರದಲ್ಲಿನ ಕಲ್ಲುಗಳು ವಿಪರೀತವಾಗಿ ಜಾರುವುದರಿಂದ ಮತ್ತು ಸಮುದ್ರ ಆಳವಾಗಿರುವುದರಿಂದ ಪ್ರವಾಸಿಗರು ಜಾಗ್ರತೆವಹಿಸುವುದು ಅವಶ್ಯವಾಗಿದೆ.
ಕೊಂಕಣಿ ಭಾಷೆಯಲ್ಲಿ ‘ತೀಳ್’ ಎಂದರೆ ‘ಎಳ್ಳು’, ‘ಮಾತಿ’ ಎಂದರೆ ‘ಮಣ್ಣು’. ಹೀಗಾಗಿ ಸ್ಥಳೀಯ ಭಾಷೆಯಲ್ಲಿ ತೀಳ್ಮಾತಿ ಬೀಚ್ ಎಂದೇ ಹೆಸರು ಪಡೆದುಕೊಂಡಿದೆ. ಸುಮಾರು 200 ಮೀಟರ್ ವ್ಯಾಪಿಸಿರುವ ಈ ಕಪ್ಪು ಕಡಲತೀರ ನೋಡಲು ಇತ್ತೀಚಿನ ದಿನಗಳಲ್ಲಿ ಜಿಲ್ಲೆ, ರಾಜ್ಯದಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ ಹೆದ್ದಾರಿಯಿಂದ ಸಮುದ್ರದ ದಡದವರೆಗೆ ಕಾಂಕ್ರಿಟ್ ರೋಡ್ ಮಾಡಿರುವುದನ್ನು ಬಿಟ್ಟರೆ ಮತ್ತಾವುದೇ ಸೌಲಭ್ಯಗಳು ಕಂಡುಬರುತ್ತಿಲ್ಲ.
ತೀಳ್ಮಾತಿ ಬೀಚ್‌ಗೆ ಹೋಗಲು ದಾರಿ
ತೀಳ್ಮಾತಿಗೆ ಹೋಗಬೇಕೆಂದರೆ, ಮಾಜಾಳಿ ಕಡಲತೀರದಲ್ಲಿರುವ ಗುಡ್ಡದ ಕಿರಿದಾದ ದಾರಿಯಲ್ಲಿ ಒಂದು ಕಿ.ಮೀ. ಚಾರಣ ಮಾಡಬೇಕು. ನಗರದಿಂದ ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿ ಸಾಗಿದರೆ ಮಾಜಾಳಿ ಗ್ರಾಮ ಸೇರುತ್ತೇವೆ. ಅಲ್ಲಿಂದ ಎಡಕ್ಕೆ ತಿರುಗಿ ಕಿರಿದಾದ ಡಾಂಬರು ರಸ್ತೆಯಲ್ಲಿ ಸುಮಾರು ಮೂರ್ನಾಲ್ಕು ಕಿ.ಮೀ. ಕ್ರಮಿಸಿದ ಮೇಲೆ ಮಾಜಾಳಿ ಕಡಲತೀರ ಎದುರುಗೊಳ್ಳುತ್ತದೆ.