ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಉಳಿಯದೆ ಸಂವಿಧಾನ ಉಳಿಯದು
ಕಳೆದ ತಿಂಗಳು ಮೇ 25-26ರಂದು ಕೊಪ್ಪಳದಲ್ಲಿ ನಡೆದ ಸಂವಿಧಾನ ಭಾರತ-ಧರ್ಮ ರಾಜಕಾರಣದ ಸುತ್ತ ನಡೆದ 10ನೇ ಸಾಹಿತ್ಯ ಸಮ್ಮೇಳನದಲ್ಲಿ ಹಲವು ಗಂಭೀರವಾದ ವಿಷಯಗಳು ಸಂವಿಧಾನದ ನೆಲೆಯಲ್ಲಿ ಚರ್ಚೆಗೆ ಒಳಗಾದವು. ವಿಷಯ ತಜ್ಞರು ಮತ್ತು ಸಾಮಾನ್ಯ ಜನರು ಒಂದು ಜನಪರ-ಜೀವಪರ ವೇದಿಕೆಯಲ್ಲಿ ಕಲೆತು, ಭಾರತದ ಇಂದಿನ ರಾಜಕಾರಣ ಸಾಗುತ್ತಿರುವ ಮತ್ತು ಸಾಗಬೇಕಾದ ದಾರಿಯ ಬಗ್ಗೆ ಮುಕ್ತ ಮನಸ್ಸಿನ ಚರ್ಚೆ ನಡೆಸಿದ್ದು ಈ ಸಮ್ಮೇಳನದ ವಿಶಿಷ್ಟತೆ. ಈ ಬಗೆಯ ಸಮ್ಮೇಳನಗಳು ಮಾತ್ರ ನಿಜ ಅರ್ಥದಲ್ಲಿ ಸಾಮಾನ್ಯ ಜನರನ್ನು ತಲುಪುವ ಮತ್ತು ಪರ್ಯಾಯ ರಾಜಕಾರಣದ ಹೊಸ ಕಥನ ಕಟ್ಟಿಕೊಡಲು ಸಾಧ್ಯ. ನಾನು ಈ ಬರಹದಲ್ಲಿ ಸಂವಿಧಾನವನ್ನು ಉಳಿಸಿ ಪೂರ್ಣವಾಗಿ ಜಾರಿಗೊಳಿಸುವ ಮೂಲಕ ಸದೃಢ ಭಾರತವನ್ನು ಕಟ್ಟಿಕೊಳ್ಳುವಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮಹತ್ವ ಹಾಗೂ ಅನಿವಾರ್ಯತೆಯ ಬಗ್ಗೆ ಕೆಲವು ಅಂಶಗಳನ್ನು ಹಂಚಿಕೊಳ್ಳುವುದಾಗಿದೆ.
ವೈವಿಧ್ಯತೆ, ಬಹುತ್ವ, ಬಹುಭಾಷೆ, ಬಹು ಧರ್ಮ ಮತ್ತು ಬಹು ಸಂಸ್ಕೃತಿ ರಾಷ್ಟ್ರವಾದ ಭಾರತಕ್ಕೆ, ಭಾರತ ಹೇಗಿರಬೇಕು ಹಾಗೂ ಎತ್ತ ಸಾಗಬೇಕೆಂಬ ಮೌಲಿಕ ತತ್ವಗಳನ್ನು ಪ್ರತಿಷ್ಠಾಪಿಸುವ ದೂರದೃಷ್ಟಿಯ ದಾರಿ ದೀಪವೇ ನಮ್ಮ ಸಂವಿಧಾನ. ಈ ಮೌಲ್ಯಗಳೇ ದೇಶದ ಶಿಕ್ಷಣ ವ್ಯವಸ್ಥೆಗೆ ಅಡಿಪಾಯ. ಈ ಕಾರಣದಿಂದಲೇ 1966ರ ಶಿಕ್ಷಣ ಆಯೋಗವು ‘ದೇಶದ ಭವಿಷ್ಯ ಆಕೆಯ ತರಗತಿಗಳಲ್ಲಿ ರೂಪಿತ ವಾಗುತ್ತದೆ’ ಎಂದು ಹೇಳುವ ಮೂಲಕ ಶಿಕ್ಷಣ ಸಂವಿಧಾನದ ಆಶಯಗಳ ಸಾಕಾರಕ್ಕೆ ಭದ್ರ ಬುನಾದಿಯಾಗುತ್ತದೆ ಎಂಬುದನ್ನು ಖಚಿತವಾಗಿ ಹೇಳಿತು.
1950ರಲ್ಲಿ ಜಾರಿಯಾದ ನಮ್ಮ ಸಂವಿಧಾನವು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಪ್ರಭುತ್ವ ಗಣರಾಜ್ಯವನ್ನಾಗಿಸುವ ಆಶಯ ಹೊಂದಿದೆ. ಈ ಮೂಲ ಆಶಯ ಮತ್ತು ನಮ್ಮ ಸಂವಿಧಾನ ಪ್ರತಿಪಾದಿಸುವ ರಾಷ್ಟ್ರೀಯತೆಗೆ ಹೊರತಾದ ಧರ್ಮ ರಾಜಕಾರಣ ಹಾಗೂ ಜನಾಂಗೀಯ ಹಿಂದುತ್ವದ ನೆಲೆಯಲ್ಲಿ ಹಿಂದೂ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಮೂಲಕ ಕೋಮುವಾದಿ ಪಕ್ಷವೊಂದು ಸಂವಿಧಾನವನ್ನು ಬುಡಮೇಲು ಮಾಡಲು ಮುಂದಾಗಿದೆ.
ಧರ್ಮ ರಾಜಕಾರಣದ ಮೂಲಕ ಹಿಂದೂ ರಾಷ್ಟ್ರದ ಪ್ರತಿಷ್ಠಾಪನೆಗೆ ಸಂಘ ಪರಿವಾರವು ಹಿಂದಿನಿಂದಲೂ ಶಿಕ್ಷಣವನ್ನು ಒಂದು ಸಾಧನವನ್ನಾಗಿ ಬಳಸುತ್ತಿದೆ. ತನ್ನ ರಾಜಕೀಯ ಮುಖವಾದ ಭಾಜಪ ಅಧಿಕಾರಕ್ಕೆ ಬಂದಾಗ ಮುಕ್ತವಾಗಿ ಮತ್ತು ಹೆಚ್ಚು ಆಕ್ರಮಣಕಾರಿಯಾಗಿ ಮತ್ತು ಅಧಿಕಾರದಿಂದ ಹೊರಗಿದ್ದಾಗ ಚಾಣಾಕ್ಷತನದಿಂದ ರಹಸ್ಯವಾಗಿ ತನ್ನ ಎಲ್ಲ ಕೋಮುವಾದಿ ಮುಮ್ಮುಖ ಸಂಘಟನೆಗಳ ಮೂಲಕ ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತದೆ.
ಮೊದಲ ಬಾರಿಗೆ 1999ರಲ್ಲಿ ಬಿಜೆಪಿಯ ವಿಜಯದ ನಂತರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ರಚನೆಯಾಗಿ, ಭಾಜಪ ನೇತೃತ್ವದ ಒಕ್ಕೂಟ ಸರಕಾರವು ಶಾಲಾ ಶಿಕ್ಷಣ ನೀತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಲು ಪ್ರಾರಂಭಿಸಿತು. ಅಂದಿನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಚಿವರಾಗಿದ್ದ ಮುರಳಿ ಮನೋಹರ್ ಜೋಶಿಯವರು ಹಲವು ಮೂಲಭೂತ ಬದಲಾವಣೆಗಳನ್ನು ತಂದರು. ಈ ಎಲ್ಲಾ ಬದಲಾವಣೆಗಳು ತಾನು ಚುನಾವಣೆಯ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದ ವಿಷಯಗಳಿಂದ ವಿಮುಖವಾಗಿದ್ದವು ಎಂಬುದು ಗಮನಾರ್ಹ ಸಂಗತಿ. ಜಾತಿ-ಧರ್ಮದ ಹೆಸರಿನ ರಾಜಕಾರಣ ಸದಾ ಹೇಳುವುದೊಂದು ಮಾಡುವುದೊಂದು ಎಂಬುದಕ್ಕೆ ಇದು ಉದಾಹರಣೆ.
ಮುರಳಿ ಮನೋಹರ ಜೋಶಿಯವರು ಶಾಲಾ ಶಿಕ್ಷಣವನ್ನು ಭಾರತೀಕರಣ ಮತ್ತು ಆಧ್ಯಾತ್ಮೀಕರಣ ಗೊಳಿಸಲು ಪ್ರಯತ್ನಿಸಿದರು. ಉದಾಹರಣೆಗೆ, ಹಿಂದೂ ಪವಿತ್ರ ಧಾರ್ಮಿಕ ಗ್ರಂಥಗಳಾದ ವೇದ ಮತ್ತು ಉಪನಿಷತ್ತುಗಳನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು, ನಾಲ್ಕನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಸಂಸ್ಕೃತವನ್ನು ಕಡ್ಡಾಯವಾಗಿ ಪರಿಚಯಿಸಲು ಮತ್ತು ವಿದ್ಯಾಭಾರತಿ ಶಾಲೆಗಳನ್ನು ವ್ಯಾಪಕವಾಗಿ ವಿಸ್ತರಿಸಲು ಅನುಕೂಲವಾಗುವಂತಹ ಹಲವು ತೀರ್ಮಾನಗಳನ್ನು ಅವರು ಕೈಗೊಂಡರು. ಶಿಕ್ಷಣದ ಕೇಸರೀಕರಣದ ವೇಗ ಎಷ್ಟಿತ್ತೆಂದರೆ 1999ರಲ್ಲಿ 13,000 ಇದ್ದ ವಿದ್ಯಾಭಾರತಿ ಶಾಲೆಗಳ ಸಂಖ್ಯೆ 2002ರಲ್ಲಿ 19,741ಕ್ಕೆ ಏರಿತು.
ಮುಖ್ಯವಾದ ವಿಷಯವೆಂದರೆ, ವಿದ್ಯಾ ಭಾರತಿ ಶಾಲೆಗಳ ಹಿಂದುತ್ವ ಆಧಾರಿತ ಪಠ್ಯಕ್ರಮ, ಪಠ್ಯವಸ್ತು ಮತ್ತು ವಿಧಾನಗಳನ್ನು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರವಾಗಿ ಅಳವಡಿಸುವ ಮಹತ್ವಾಕಾಂಕ್ಷೆಯನ್ನು ಅವರು ಹೊಂದಿದ್ದರು. ಅವರ ಈ ಪ್ರಸ್ತಾವಗಳಿಗೆ ಪ್ರಗತಿಪರ ಸಂಘಟನೆಗಳಿಂದ ದೊಡ್ಡ ಮಟ್ಟದ ವಿರೋಧ ವ್ಯಕ್ತವಾದ ಕಾರಣ, ಜೋಶಿಯವರು ಶಿಕ್ಷಣದ ಕೇಸರೀಕರಣ ಹಾಗೂ ಕೋಮುವಾದೀಕರಣವನ್ನು ನಿಧಾನಗತಿಗೆ ಇಳಿಸಬೇಕಾಯಿತು. ತಾತ್ಕಾಲಿಕವಾಗಿ ಇದನ್ನು ಕೈಬಿಟ್ಟ ಜೋಶಿಯವರು ಮತ್ತೊಂದು ಬಗೆಯ ಕೇಸರೀಕರಣಕ್ಕೆ ಮತ್ತು ದೀರ್ಘಕಾಲ ಹಾಗೂ ಶಾಶ್ವತವಾಗಿ ಮುಂದುವರಿಸಲು ಅನುವಾಗುವ ಕೆಲಸವನ್ನು ಪ್ರಾರಂಭಿಸಿದರು. ಅವುಗಳಲ್ಲಿ ಮುಖ್ಯವಾದುದೆಂದರೆ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ(ಎನ್‌ಸಿಇಆರ್‌ಟಿ) ಮರು ಸಂಘಟಿಸುವ ಮೂಲಕ 1986ರ ಶಿಕ್ಷಣ ನೀತಿಯ ಅನ್ವಯ 1988ರಲ್ಲಿ ರಚನೆಯಾಗಿದ್ದ ಪಠ್ಯಕ್ರಮ ಚೌಕಟ್ಟನ್ನು ಬದಲಾಯಿಸಲು ಮುಂದಾದರು. ಇದು ಒಂದು ಬಗೆಯಲ್ಲಿ ಶಿಕ್ಷಣ ಒದಗಿಸಲು ಕಟ್ಟಿಕೊಂಡಿರುವ ಶೈಕ್ಷಣಿಕ ಪ್ರಾಧಿಕಾರಗಳನ್ನು ವಶಪಡಿಸಿಕೊಂಡು ಅಲ್ಲಿ ಬಲಪಂಥೀಯ ಅದರಲ್ಲೂ ಆರೆಸ್ಸೆಸ್ ಸಿದ್ಧಾಂತದ ಪ್ರಬಲ ಕಟ್ಟಾಳುಗಳನ್ನು ನೇಮಿಸುವುದಕ್ಕೆ ಸಹಾಯವಾಯಿತು. ಮೊದಲ ಬಾರಿಗೆ ಆರೆಸ್ಸೆಸ್‌ನ ಪ್ರಬಲ ಕಟ್ಟಾಳು ಜೆ.ಎಸ್. ರಜಪೂತ್ ನಾಯಕತ್ವದಲ್ಲಿ ಎನ್‌ಸಿಇಆರ್‌ಟಿಯನ್ನು ತಮ್ಮ ಕೈವಶಕ್ಕೆ ಪಡೆದರು. ಆರೆಸ್ಸೆಸ್ ಸಿದ್ಧಾಂತದ ಈ ಹೊಸ ನಾಯಕತ್ವವು ಹೊಸ ನಿಯತಕಾಲಿಕ; ದಿ ಜರ್ನಲ್ ಆಫ್ ವ್ಯಾಲ್ಯೂ ಎಜುಕೇಶನ್ ಮೂಲಕ ಶಿಕ್ಷಣದ ಕೇಸರೀಕರಣವನ್ನು ಪ್ರಾರಂಭಿಸಿತು. ಸದಾ ಇತಿಹಾಸದ ವಿಷಯದ ಮೇಲೆ ಕೇಂದ್ರೀಕರಿಸುವ ಭಾಜಪ, ಇದನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಅನ್ನು ಮರುರೂಪಿಸಿತು.
ಈ ಪಠ್ಯಕ್ರಮ ಚೌಕಟ್ಟಿನಲ್ಲಿ, ಶಿಕ್ಷಣ ವ್ಯವಸ್ಥೆಯು ಪಾಶ್ಚಿಮಾತ್ಯ ಜಾತ್ಯತೀತತೆಯ ಕಡೆಗೆ ಹೆಚ್ಚು ಪಕ್ಷಪಾತದಿಂದ ಕೂಡಿದೆ, ಇದು ಭಾರತೀಯ ಸಂಪ್ರದಾಯಕ್ಕೆ ಹೊಂದಿಕೆಯಾಗುವುದಿಲ್ಲವೆಂಬ ತನ್ನ ಹಳೆಯ ವಾದವನ್ನು ಮುಂದಿಟ್ಟಿತು. ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆ ಬ್ರಿಟಿಷ್ ವಸಾಹತುಶಾಹಿಗಳಿಂದ ಭಾರತದ ಮೇಲೆ ಹೇರಲ್ಪಟ್ಟ ಮತ್ತು ಹೆಚ್ಚು ಎಡಪಂಥೀಯ ಚಿಂತಕರು ಮತ್ತು ಇತಿಹಾಸಕಾರರಿಂದ ಜಾರಿಗೊಳಿಸಲ್ಪಟ್ಟ ವ್ಯವಸ್ಥೆ ಎಂದು ವಾದಿಸಿತು. ಈ ಪಾಶ್ಚಿಮಾತ್ಯ ಶಿಕ್ಷಣ ವ್ಯವಸ್ಥೆಯು, ಮುಂದುವರಿದ ಹಾಗೂ ಧಾರ್ಮಿಕ ಮತ್ತು ಜಾತಿ ತಾರತಮ್ಯದಿಂದ ಮುಕ್ತವಾಗಿದ್ದ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸಿದ್ದು, ಭಾರತೀಯ ಸಂಸ್ಕೃತಿ ಮತ್ತು ಮೌಲ್ಯ ವ್ಯವಸ್ಥೆಯೊಂದಿಗೆ ಬಲವಾದ ಸಂಬಂಧಗಳನ್ನು ಹೊಂದಿರುವ ಆಳವಾದ ಆಧ್ಯಾತ್ಮಿಕ ಜ್ಞಾನವನ್ನು ಒಳಗೊಂಡಿರುವ ಭಾರತೀಯ ಜ್ಞಾನ ಸಂಪ್ರದಾಯಗಳನ್ನು ದೂರವಿಟ್ಟಿದೆ ಎಂದು ಪ್ರತಿಪಾದಿಸಿತು. ಈ ಕಾರಣಗಳಿಂದ, ಸ್ಥಳೀಯ ಹಾಗೂ ಸದೃಢ ಶಿಕ್ಷಣ ವ್ಯವಸ್ಥೆ ಹಿನ್ನಡೆ ಅನುಭವಿಸಿತು ಮತ್ತು ಹೊಸ ವ್ಯವಸ್ಥೆಯು ಭಾರತೀಯ ಶಿಕ್ಷಣವನ್ನು ತಮ್ಮ ಸಂಪ್ರದಾಯದಿಂದ ಬೇರುಸಹಿತ ಕಿತ್ತುಹಾಕಿ ಜನರ ಬುದ್ಧಿವಂತಿಕೆ, ನಂಬಿಕೆ ಮತ್ತು ಮೌಲ್ಯ ವ್ಯವಸ್ಥೆಗಳಿಂದ ದೂರವಿರಿಸಿತು ಎಂಬ ಅಂಶಗಳನ್ನು ಪಠ್ಯಕ್ರಮದಲ್ಲಿ ಉಲ್ಲೇಖಿಸಿತು (ಎನ್‌ಸಿಎಫ್, 2000).
ಪಠ್ಯಕ್ರಮ ಚೌಕಟ್ಟಿನ ನೇತೃತ್ವ ವಹಿಸಿದ್ದ ರಜಪೂತ್‌ರ ಪ್ರಕಾರ ಪಠ್ಯಕ್ರಮ ಹೇಗಿರಬೇಕೆಂದರೆ, ‘‘ಪಠ್ಯಕ್ರಮ ಭಾರತೀಯನೆಂಬ ಹೆಮ್ಮೆಯ ಭಾವನೆಯನ್ನು, ಭಾರತೀಯ ನಾಗರಿಕತೆಯ ಬೆಳವಣಿಗೆಯ ಬಗ್ಗೆ ಸಂಪೂರ್ಣ ತಿಳುವಳಿಕೆ, ಆಲೋಚನೆ, ಕ್ರಿಯೆ ಮತ್ತು ಕಾರ್ಯಗಳಲ್ಲಿ ವಿಶ್ವ ನಾಗರಿಕತೆಗೆ ಭಾರತದ ಕೊಡುಗೆಗಳನ್ನು ಪರಿಚಯಿಸಬೇಕು ಮತ್ತು ಕಾಪಾಡಿಕೊಳ್ಳಬೇಕು. ಸ್ವಾತಂತ್ರ್ಯ ಪೂರ್ವದ ಪರಕೀಯ ಪರಂಪರೆಯ ಅವಶೇಷಗಳನ್ನು ಸಂಪೂರ್ಣ ವಾಗಿ ಪರಿಶೀಲಿಸಬೇಕಾಗಿದೆ. ಇದು ಸಂಪೂರ್ಣವಾಗಿ ದೇಶೀಯ ಪಠ್ಯಕ್ರಮವಾಗಿರಬೇಕು’’.
ಒಟ್ಟಾರೆ, ಈ ಮೊದಲ ಅವಧಿಯಲ್ಲಿ (1999-2004) ಶೈಕ್ಷಣಿಕ ಸುಧಾರಣೆಗಳ ಮುಖ್ಯ ಗುರಿ ಹಿಂದೂ ಪರಂಪರೆಯ ಶ್ರೇಷ್ಠತೆಯನ್ನು ಪುನಃಸ್ಥಾಪಿಸುವುದಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು, ಎನ್‌ಸಿಇಆರ್‌ಟಿ 2002 ರಲ್ಲಿ ಹೊಸ ಇತಿಹಾಸ ಪಠ್ಯಪುಸ್ತಕಗಳನ್ನು ಪ್ರಕಟಿಸಿತು. ಈ ಅವಧಿಯಲ್ಲಿ ಬಿಜೆಪಿಗೆ ಪೂರ್ಣ ಬಹುಮತವಿಲ್ಲದ ಕಾರಣ, ಸಮಗ್ರ ಬದಲಾವಣೆ ಸಾಧ್ಯವಾಗಲಿಲ್ಲ.
2014ರಲ್ಲಿ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ತನ್ನ ಮೂಲ ಉದ್ದೇಶಕ್ಕೆ ಚಾಲನೆ ನೀಡಿತು. ಈ ಅವಧಿಯಲ್ಲಿ (2014-2019) ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿ ಜಾರಿಗೊಳಿಸುವ ಕಾರ್ಯವನ್ನು ಪ್ರಾರಂಭಿಸಿತು. ಹಿಂದುತ್ವದ ಆಧಾರದಲ್ಲಿ ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಶಿಕ್ಷಣವನ್ನು ಸಾಧನವನ್ನಾಗಿ ಬಳಸುವ ಎಲ್ಲಾ ಪ್ರಯತ್ನಗಳನ್ನು ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೇರಿಸುವ ಕೇಲಸವನ್ನು ಬಿಜೆಪಿ ಅಚ್ಚುಕಟ್ಟಾಗಿ ನಿರ್ವಹಿಸತು. ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿದರೆ, ಅತ್ಯುನ್ನತ ಭಾರತೀಯ ಜ್ಞಾನ ಮತ್ತು ಶ್ರೀಮಂತ ಪ್ರಾಚೀನ ಪರಂಪರೆಯನ್ನು ನೀತಿಯ ದಾರಿದೀಪವನ್ನಾಗಿಸುವ ಮೂಲಕ ಸಂವಿಧಾನದ ಮೌಲ್ಯಗಳಿಗೆ ಬದಲಾಗಿ ಸನಾತನ ಮೌಲ್ಯಗಳನ್ನು ಬಿತ್ತಿ ಬೆಳೆಸುವ ಮೂಲಕ ಹಿಂದುತ್ವವನ್ನು ಮಕ್ಕಳಿಗೆ ಉಣಿಸಿ ಹಿಂದೂ ರಾಷ್ಟ್ರ ಸ್ಥಾಪನೆಗೆ ಬೌದ್ಧಿಕವಾಗಿ ಮಕ್ಕಳನ್ನು ಅಣಿಗೊಳಿಸುವ ಕಾರ್ಯಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಂದು ಟೂಲ್‌ಕಿಟ್ ಆಗಿ ಬಳಸುವ ಕಾರ್ಯದಲ್ಲಿ ಬಿಜೆಪಿ ಯಶಸ್ವಿಯಾಯಿತು.
ರಾಜಕೀಯ ವಿಜ್ಞಾನಿ-ಬರಹಗಾರ ಪ್ರೊಫೆಸರ್ ಕ್ರಿಸ್ಟೋಫ್ ಜಾಫ್ರಲೊಟ್ ಪ್ರಕಾರ, ಹಿಂದುತ್ವವನ್ನು ರೂಪಿಸುವ ಮೂರು ಪ್ರಮುಖ ಮಾನದಂಡಗಳೆಂದರೆ: ಭೌಗೋಳಿಕ ಏಕೀಕರಣ, ಜನಾಂಗೀಯ ಲಕ್ಷಣ ಮತ್ತು ಸಾಮಾನ್ಯ ಸಂಸ್ಕೃತಿ. ಭೌಗೋಳಿಕ ಲಕ್ಷಣಕ್ಕೆ ಸಂಬಂಧಿಸಿದಂತೆ, ಸಂವಿಧಾನದ ಹಿಂದೂ ಧಾರ್ಮಿಕ ಗ್ರಂಥಗಳು ವಿವರಿಸುವಂತೆ ಪವಿತ್ರ ಪ್ರದೇಶ ಆರ್ಯವರ್ತ ಎಂದು ವ್ಯಾಖ್ಯಾನಿಸಲಾಗಿದೆ. ಆದ್ದರಿಂದ, ಹಿಂದೂ ಎಂದರೆ ಮೂಲತಃ ಸಿಂಧೂ ನದಿಯ ಆಚೆ, ಹಿಂದೂ ಮಹಾಸಾಗರ ಮತ್ತು ಹಿಮಾಲಯದ ನಡುವೆ ವಾಸಿಸುವವನು. ಹಿಂದೂ ರಾಷ್ಟ್ರೀಯತವಾದಿ ಸಾವರ್ಕರ್ ಹೇಳುವಂತೆ ನಮ್ಮ ಭೂಮಿ ತುಂಬಾ ವಿಶಾಲವಾಗಿದೆ, ಚೆನ್ನಾಗಿ ಬೆಸೆದುಕೊಂಡಿದೆ, ಇತರರಿಂದ ಚೆನ್ನಾಗಿ ಗುರುತಿಸಲ್ಪಟ್ಟಿದೆ ಮತ್ತು ಬಲವಾಗಿ ಬೇರೂರಿದೆ. ವಿಶ್ವದ ಯಾವುದೇ ದೇಶದ ಭೌಗೋಳಿಕ ಘಟಕವು ಪ್ರಕೃತಿಯ ಬೆರಳುಗಳಿಂದ ಇಷ್ಟು ನಿಕಟವಾಗಿ ಗುರುತಿಸಲ್ಪಟ್ಟಿಲ್ಲ. ಹಿಂದೂ ರಾಷ್ಟ್ರೀಯತಾವಾದಿ ಸಿದ್ಧಾಂತವು, ಅವಿಭಜಿತ ಭಾರತ ಅಥವಾ ಅಖಂಡ ಭಾರತ ಪುನಃಸ್ಥಾಪಿಸುವುದನ್ನು ಸಮರ್ಥಿಸುತ್ತದೆ.
ಅವರ ಪ್ರಕಾರ ಜನಾಂಗೀಯ ಲಕ್ಷಣಗಳು ವೈದಿಕ ಪಿತೃಗಳ ಆರ್ಯರ ಪರಂಪರೆಯಾಗಿದೆ. ಇವರು ಹಿಂದೂಗಳ ವಂಶಸ್ಥರು. ಜನಾಂಗೀಯ ಮತ್ತು ಭೌಗೋಳಿಕ ಏಕತೆಯನ್ನು ಬೇರ್ಪಡಿಸಲಾಗದು ಎಂದು ಸಾವರ್ಕರ್ ಹೇಳುತ್ತಾರೆ. ಹಿಂದುತ್ವದ ಮೂರನೇ ಆಧಾರಸ್ತಂಭವೆಂದರೆ ಸಾಮಾನ್ಯ ಸಂಸ್ಕೃತಿ. ಇದು ಹಿಂದೂ ಆಚರಣೆಗಳು, ಸಾಮಾಜಿಕ ನಿಯಮಗಳು ಮತ್ತು ಭಾಷೆಯ ಮಹತ್ವವನ್ನು ಒತ್ತಿ ಹೇಳುತ್ತದೆ. ಅವುಗಳಲ್ಲಿ ಪ್ರಮುಖವಾದುದು ಎಲ್ಲಾ ಭಾರತೀಯ ಭಾಷೆಗಳ ತಾಯಿ ಸಂಸ್ಕೃತ ಮತ್ತು ಸಂಸ್ಕೃತದ ಆಧುನಿಕ ಸಂತತಿ ಹಿಂದಿ ಎನ್ನುತ್ತದೆ.
ಗಮನಿಸಬೇಕಾದ ಸಂಗತಿಯೆಂದರೆ, ಇಂದು ನ್ಯಾಯಾಲಯಗಳು ಕೂಡ ಜಾತ್ಯತೀತತೆಯನ್ನು ದುರ್ಬಲಗೊಳಿಸಿ ಹಿಂದತ್ವವಾದಿಗಳಿಗೆ ಅನುಕೂಲ ಮಾಡಿಕೊಡಲು ಪ್ರಾರಂಭಿಸಿವೆ. ಉದಾಹರಣೆಗೆ, 1995ರಲ್ಲಿ ಸರ್ವೋಚ್ಚ ನ್ಯಾಯಾಲಯವು ಹಿಂದುತ್ವವನ್ನು ಧಾರ್ಮಿಕ ಪರಿಕಲ್ಪನೆಯ ಬದಲು ಜೀವನ ವಿಧಾನ ಎಂದು ನಿರೂಪಿಸಬೇಕೆಂದು ತೀರ್ಪು ನೀಡಿತು. ಇದು ರಾಷ್ಟ್ರೀಯ ಅಸ್ಮಿತೆಯನ್ನು ವ್ಯಾಖ್ಯಾನಿಸುವಲ್ಲಿ ಹಿಂದುತ್ವದ ಕಲ್ಪನೆಯನ್ನು ಬಳಸಲು ಸಾಧ್ಯವಾಯಿತು, ಸಂವಿಧಾನದ ಜಾತ್ಯತೀತ ಸ್ವರೂಪವನ್ನು ದುರ್ಬಲಗೊಳಿಸಿತು ಎನ್ನುತ್ತಾರೆ ಜಾಫ್ರಲೊಟ್‌ರವರು.
ಈ ಎಲ್ಲಾ ಅಂಶಗಳನ್ನು ಮಕ್ಕಳಿಗೆ ವ್ಯವಸ್ಥಿತವಾಗಿ ತಿಳಿಸಿಕೊಡುವುದರ ಮೂಲಕ ಮಕ್ಕಳನ್ನು ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಅಣಿಗೊಳಿಸುವುದೇ ಶಿಕ್ಷಣ. ಆದ್ದರಿಂದಲೇ, ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಈ ಸಿದ್ಧಾಂತ ದಾರಿದೀಪವಾಗಿದೆ. ಈ ಎಲ್ಲಾ ಅಂಶಗಳು ಶಿಕ್ಷಣದಲ್ಲಿ ಅಳವಡಿಸುವ ಮೂಲಕ, ಹಿಂದುತ್ವ ಸಿದ್ಧಾಂತವು ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ ಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ.
ಸಾಂವಿಧಾನಿಕ ಚೌಕಟ್ಟಿನ, ಸಂಸದೀಯ ವ್ಯವಸ್ಥೆಯ ಮೂಲಕ ನಿರ್ಮಿಸಬೇಕಾದ ಜನರ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದ ಹಿಂದೂ ರಾಷ್ಟ್ರ ಅಥವಾ ಹೊಸ ಬಗೆಯ ಜನಾಂಗೀಯ ಪ್ರಜಾಪ್ರಭುತ್ವವನ್ನು ನಿರ್ಮಿಸುವ ನಿಟ್ಟಿನಲ್ಲಿ, ಧರ್ಮ ರಾಜಕಾರಣ ಶಿಕ್ಷಣವನ್ನು ಟೂಲ್‌ಕಿಟ್ ಆಗಿ ಬಳಸುತ್ತದೆ. ಅದರ, ಕೆಲವು ಅಂಶಗಳನ್ನು ನಾನು ಇಲ್ಲಿ ಪ್ರಸ್ತಾಪಿಸುತ್ತೇನೆ.
► ಮೊದಲನೆಯದಾಗಿ, ಧರ್ಮ ರಾಜಕಾರಣವು ಶಿಕ್ಷಣವನ್ನು ತನ್ನ ಸೈದ್ಧಾಂತಿಕ ನಿಲುವನ್ನು ಮುಂದಕ್ಕೆ ಕೊಂಡೊಯ್ಯಲು ಸಾಧನವನ್ನಾಗಿ ಬಳಸುತ್ತದೆ. ಆ ಮೂಲಕ ಶಿಕ್ಷಣದ ಕೇಸರೀಕರಣ-ಕೋಮುವಾದೀಕರಣಕ್ಕೆ ಮುಂದಾಗುತ್ತದೆ.
► ಇದರ ಭಾಗವಾಗಿ, ಇತಿಹಾಸವನ್ನು ಪುನರ‌್ರಚಿಸುವ ಮೂಲಕ ವೈಚಾರಿಕತೆ-ವೈಜ್ಞಾನಿಕತೆಯನ್ನು ಅಳಿಸುವ ಮೂಲಕ ಜನಾಂಗೀಯ ರಾಷ್ಟ್ರದ ನಿರ್ಮಾಣಕ್ಕಾಗಿ ಶಿಕ್ಷಣವನ್ನು ಬಳಸುತ್ತದೆ. ಉದಾಹರಣೆಗೆ, ಪಠ್ಯಪುಸ್ತಕಗಳನ್ನು ಬದಲಾಯಿಸುವ ಮೂಲಕ, ಇತಿಹಾಸವನ್ನು ಹಿಂದುತ್ವದ ನೆಲೆಯಲ್ಲಿ ಪುನರ್ ವ್ಯಾಖ್ಯಾನಿಸುವ ಮೂಲಕ ಅದು ಹಿಂದುತ್ವ ನಿರೂಪಣೆಯನ್ನು ವೈಭವೀಕರಿಸಲು ಮತ್ತು ಸಾಮಾನ್ಯ ಸಂಸ್ಕೃತಿಯನ್ನು ಪ್ರತಿಪಾದಿಸಲು ಶಿಕ್ಷಣ ಸ್ಪಷ್ಟವಾದ ಮಾರ್ಗವಾಗಿದೆ. ಜೊತೆಗೆ, ವೈಜ್ಞಾನಿಕ ಮನೋಭಾವ ಕಟ್ಟಿಕೊಡುವ ಮಾನವನ ವಿಕಾಸವಾದ, ಮೆಂಡಲೀವನ ಪಿರಿಯಾಡಿಕ್ ಕೋಷ್ಠಕ ಹಾಗೂ ಮತ್ತಿತರ ವೈಜ್ಞಾನಿಕ ಪಾಠಗಳನ್ನು ತೆಗೆದು ಭಾರತೀಯ ಪುರಾಣ ಪುಣ್ಯಕಥೆಗಳ ಹುಸಿ ವಿಜ್ಞಾನದ ಕಟ್ಟುಕಥೆಗಳನ್ನು ವಿಜ್ಞಾನವೆಂದು ಪ್ರತಿಬಿಂಬಿಸುತ್ತದೆ.
► ಶಿಕ್ಷಣದ ಉದ್ದೇಶ ಸಂವಿಧಾನದ ಆಶಯದಂತೆ ರಾಷ್ಟ್ರವನ್ನು ಕಟ್ಟುವ ಬದಲು ಹಿಂದುತ್ವ ಆಧಾರಿತ ಜನಾಂಗೀಯ ರಾಷ್ಟ್ರಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದಾಗಿರುತ್ತದೆ. ಮಾತೃಭೂಮಿ, ದೇಶಪ್ರೇಮದ ಹೆಸರಿನಲ್ಲಿ, ಇತರ ಜನಾಂಗದ ಬಗ್ಗೆ ಧರ್ಮ, ಸಂಸ್ಕೃತಿ, ಭಾಷೆ, ಆಹಾರ, ಉಡುಗೆ-ತೊಡುಗೆ ವಿಷಯಗಳ ಮೂಲಕ ದ್ವೇಷದ ವಿಷಬೀಜ ಬಿತ್ತಲು ಮತ್ತು ಮಕ್ಕಳಿಗೆ ಕೋಮುವಾದದ ವಿಷ ಉಣಿಸಲು ಶಿಕ್ಷಣವನ್ನು ಬಳಸುತ್ತದೆ.
► ಇತಿಹಾಸ ಭೂಗೋಳ ವಿಷಯದ ಮೂಲಕ, ಹಿಂದೆ ತನ್ನ ಅಧೀನದಲ್ಲಿದ್ದ ಯಾವುದೇ ಭೂಪ್ರದೇಶದ ಪುನಃಸ್ಥಾಪನೆಯನ್ನು ಪ್ರತಿಪಾದಿಸುವ ಮೂಲಕ ಮಕ್ಕಳಲ್ಲಿ ಪ್ರಚೋದನೆ ನೀಡಿ ಹಿಂದೂ ರಾಷ್ಟ್ರೀಯತಾವಾದಿ ಸಿದ್ಧಾಂತಕ್ಕೆ ಅನುಗುಣವಾಗಿ ಪಠ್ಯ ರಚನೆ ಮಾಡುತ್ತದೆ.
ಮೊದಲ ಹಂತದಲ್ಲಿ, 1999ರಿಂದ 2002ರ ವರೆಗೆ ಯಾವುದೇ ಪ್ರಮುಖ ಕೇಂದ್ರ ಮಟ್ಟದ ಸುಧಾರಣೆಗಳು ನಡೆದಿಲ್ಲವಾದರೂ, ಮೋದಿ ಆಡಳಿತವು (2014-2024) ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಜಾರಿಗೆ ತಂದಿತು. ಉದಾಹರಣೆಗೆ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದ ಸರಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕಗಳನ್ನು ಪರಿಚಯಿಸಲಾಯಿತು. ರಾಜ್ಯಮಟ್ಟದಲ್ಲಿ ಪರಿಚಯಿಸಲಾದ ಈ ಪಠ್ಯಪುಸ್ತಕಗಳು 2002ರ ಪಠ್ಯಪುಸ್ತಕಗಳನ್ನು ಹೋಲುತ್ತವೆ. ರಾಜಸ್ಥಾನದಲ್ಲಿ, ಸ್ವಾತಂತ್ರ್ಯ ಚಳವಳಿಯನ್ನು ಹಿಂದೂ ಕ್ರಾಂತಿಕಾರಿಗಳ ನೇತೃತ್ವದ ಯುದ್ಧವೆಂದು ಚಿತ್ರಿಸಲಾಯಿತು. ಮೊಗಲ್ ಸಾಮ್ರಾಜ್ಯವು ಇತಿಹಾಸದಲ್ಲಿ ಅತ್ಯಂತ ಪ್ರಕ್ಷುಬ್ಧ ಅವಧಿಯೆಂದು ಬಿಂಬಿಸಲಾಯಿತು. ಅದರ ನಾಯಕರನ್ನು ತೀವ್ರವಾಗಿ ಟೀಕಿಸಲಾಯಿತು.ಆರಂಭಿಕ ಹಿಂದೂ ಯುಗದಲ್ಲಿ ಮಹಿಳೆಯ ಪರಿಸ್ಥಿತಿ ಅತ್ಯಂತ ಪ್ರಗತಿಪರ ಮತ್ತು ಅಂದಿನ ಆಡಳಿತವು ಪ್ರಜಾಪ್ರಭುತ್ವದ ತತ್ವಗಳನ್ನು ಅನ್ವಯಿಸಿದ ಸುವರ್ಣ ಯುಗವೆಂದು ಚಿತ್ರಿಸಲಾಯಿತು. ಈ ಎಲ್ಲಾ ಪುಸ್ತಕಗಳು ಜಾತಿ ವ್ಯವಸ್ಥೆಯ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಮೌನವಾಗಿದ್ದವು.
2014ರಲ್ಲಿ ಗುಜರಾತ್‌ನ 42,000 ಪ್ರಾಥಮಿಕ ಶಾಲೆಗಳಲ್ಲಿ 9 ಹೊಸ ಪಠ್ಯಪುಸ್ತಕಗಳನ್ನು ಪರಿಚಯಿಸಲಾಗಿತ್ತು. ಅವುಗಳಲ್ಲಿ ಎಂಟು ಪತ್ರಗಳನ್ನು ಆರೆಸ್ಸೆಸ್ ಶಿಕ್ಷಣ ವಿಭಾಗದ ಮುಖ್ಯಸ್ಥ ಮತ್ತು ‘ಶಿಕ್ಷಾ ಬಚಾವೋ ಆಂದೋಲನ್ ಸಮಿತಿ’ ಸಂಸ್ಥಾಪಕ ದೀನಾನಾಥ್ ಬಾತ್ರಾ ಬರೆದಿದ್ದಾರೆ. ಬಾತ್ರಾ ಆರೆಸ್ಸೆಸ್ ಸೈದ್ಧಾಂತಿಕ ಕಟ್ಟಾವಾದಿಯಾಗಿದ್ದು, ಅವರು ತೆಗೆದುಹಾಕಲು ಬಯಸುವ ಪಠ್ಯಪುಸ್ತಕಗಳಿಂದ ಆಯ್ದ ಭಾಗಗಳೊಂದಿಗೆ ಎನ್‌ಎಸ್‌ಇಆರ್ ಟಿಗೆ ದೀರ್ಘ ಶಿಫಾರಸುಗಳನ್ನು ಕಳುಹಿಸಿದ್ದರು. ಈ ಶಿಫಾರಸಿನಲ್ಲಿ ಇಂಗ್ಲಿಷ್, ಉರ್ದು ಮತ್ತು ಅರೇಬಿಕ್ ಪದಗಳನ್ನು ತೆಗೆದುಹಾಕಬೇಕು, ಜೊತೆಗೆ ಮೊಗಲರ ಸಕಾರಾತ್ಮಕ ಉಲ್ಲೇಖಗಳು ಮತ್ತು 2002ರ ಗುಜರಾತ್ ಗಲಭೆಗಳಲ್ಲಿ ಮುಸ್ಲಿಮ್ ಸಾವಿನ ಸಂಖ್ಯೆಯ ಪ್ರಸ್ತಾಪಗಳನ್ನು ಕೈಬಿಡಬೇಕು ಎಂಬುದಾಗಿತ್ತು.
ಹಿಂದಿನ ಬಿಜೆಪಿ ಆಡಳಿತದಂತೆಯೇ, ಮೋದಿ ಆಡಳಿತವು ಪ್ರಸಿದ್ಧ ಹಿಂದೂ ರಾಷ್ಟ್ರೀಯವಾದಿಗಳನ್ನು ಸಾಂಸ್ಥಿಕ ಸ್ಥಾನಗಳಲ್ಲಿ ಪ್ರಮುಖ ಸ್ಥಾನಗಳಿಗೆ ನೇಮಿಸಿತ್ತು. ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ (ಐಸಿಎಚ್‌ಆರ್) ನಿರ್ದೇಶಕರಾಗಿ ಯಲ್ಲಪ್ರಗಡ ಸುದರ್ಶನ್ ರಾವ್ ಅವರನ್ನು ನೇಮಿಸಿದ್ದು ಇದಕ್ಕೆ ಒಂದು ಉದಾಹರಣೆಯಾಗಿದೆ. ರಾವ್ ಅವರು ಆರೆಸ್ಸೆಸ್‌ನೊಂದಿಗೆ ದೀರ್ಘಕಾಲ ಸಂಪರ್ಕ ಹೊಂದಿದ್ದರು.
ಇದಲ್ಲದೆ, ಹೈದರಾಬಾದ್ ವಿಶ್ವವಿದ್ಯಾನಿಲಯ, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ, ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಮೌಲಾನಾ ಆಝಾದ್ ಉರ್ದು ರಾಷ್ಟ್ರೀಯ ವಿಶ್ವವಿದ್ಯಾನಿಲಯದಲ್ಲಿ ಮೋದಿ ಬೆಂಬಲಿತ ವ್ಯಕ್ತಿಗಳಿಗೆ ಪ್ರಭಾವದ ಸ್ಥಾನಗಳನ್ನು ನೀಡಲಾಗಿದೆ.
ಒಟ್ಟಾರೆ, ಧರ್ಮ ರಾಜಕಾರಣ ಭಾರತದಲ್ಲಿ ನಾವು ಕಳೆದ 60 ವರ್ಷಗಳಲ್ಲಿ ಕಟ್ಟಿಕೊಂಡಿದ್ದ ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ಶಿಥಿಲಗೊಳಿಸಿ ತಿರುಚಿ ವಿಕೃತ ಗೊಳಿಸಿ ನಾಶಮಾಡಿದೆ. ಜೊತೆಗೆ, ಶಿಕ್ಷಣದ ಕೇಂದ್ರೀಕರಣ, ಕೇಸರೀಕರಣ, ಕೋಮುವಾದೀಕರಣ, ವ್ಯಾಪಾರೀಕರಣ, ಖಾಸಗೀಕರಣ ಮತ್ತು ಕಾರ್ಪೊರೇಟೀಕರಣದ ಮೂಲಕ ಸಂವಿಧಾನಕ್ಕೆ ದೊಡ್ಡ ಅಪಾಯವನ್ನು ತಂದಿದೆ.
ಈಗ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಎಲ್ಲಾ ರೀತಿಯಿಂದಲೂ ಧರ್ಮ ರಾಜಕಾರಣ ಮತ್ತು ಸಂವಿಧಾನವನ್ನು ಗೌಣಗೊಳಿಸುವ ಕಾರ್ಯ ಮುಂದುವರಿಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹಿಂದಿನಷ್ಟು ಬಲವಿಲ್ಲದಿದ್ದರೂ, ಗೌಪ್ಯವಾಗಿ ಮತ್ತು ಚಾಣಾಕ್ಷತನದಿಂದ ತನ್ನ ಹಿಂದುತ್ವದ ಅಜೆಂಡಾವನ್ನು ಮುಂದುವರಿಸುವ ಸಾಧ್ಯತೆಗಳಿವೆ.
ಈ ಎಲ್ಲಾ ಕಾರಣಗಳಿಂದ, ನಾವು ಸಂವಿಧಾನವನ್ನು ಉಳಿಸಿ ಹಿಂದುತ್ವವಾದಿ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸಬೇಕಾದರೆ, ನಮ್ಮ ಮಕ್ಕಳಿಗೆ ಸಂವಿಧಾನದ ಮೌಲ್ಯಗಳಿಗೆ ಅನುಗುಣವಾದ ಮತ್ತು ಸಂವಿಧಾನವನ್ನು ಎತ್ತಿ ಹಿಡಿಯುವ ಒಂದು ಬಲಿಷ್ಠ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ಸಾಧ್ಯ. 2024ರ ಚುನಾವಣೆಯಲ್ಲಿ ನಾವು ತಾತ್ಕಾಲಿಕ ಯಶಸ್ಸು ಕಂಡಿದ್ದರೂ ಪೂರ್ಣವಾಗಿ ಮಣಿಸಲು ಸಾಧ್ಯವಾಗಿಲ್ಲ. ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸುವುದು ಒಂದು ಸೈದ್ಧಾಂತಿಕ ಹೋರಾಟವಾಗಿದ್ದು, ವಿದ್ಯಾರ್ಥಿ ಯುವಜನರನ್ನು ಅಣಿಗೊಳಿಸಬೇಕಿದೆ. ಇದು ಸಾಧ್ಯವಾಗಬೇಕಾದರೆ, ನಾವು ಸಂವಿಧಾನದ ಆಶಯಗಳೊಂದಿಗೆ ನಮ್ಮ ಶಾಲಾ, ಕಾಲೇಜು, ವಿಶ್ವ ವಿದ್ಯಾನಿಲಯಗಳಲ್ಲಿ ಸಂವಿಧಾನ ಆಶಯದ ಪಾಠಗಳನ್ನು ಪ್ರಾರಂಭಿಸಬೇಕಿದೆ. ವಿದ್ಯಾರ್ಥಿ ಯುವಜನರ ಮೂಲಕ ಮನೆ ಮನೆಗೂ ಸಂವಿಧಾನದ ಆಶಯವನ್ನು ಮುಟ್ಟಿಸುವ ಕೆಲಸ ಆರಂಭವಾಗಬೇಕಿದೆ.